ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದುರಂತಗಳು ಸಂಭವಿಸಿದಾಗ

ದುರಂತಗಳು ಸಂಭವಿಸಿದಾಗ

“ನಮಗೆ ಸಿಡಿಲು ಬಡಿದಂತಾಯಿತು. ದಿಕ್ಕೇ ಕಾಣಲಿಲ್ಲ. ಪ್ರವಾಹ ಮತ್ತು ಭೂಕುಸಿತದಿಂದಾಗಿ ನಮಗಿದ್ದ ಎಲ್ಲವೂ ನಾಶವಾಗಿತ್ತು.” —ಸಿಯೆರಾ ಲಿಯೋನ್‌ನಲ್ಲಿರುವ ಆ್ಯಂಡ್ರು.

“ಚಂಡಮಾರುತ ನಿಂತ ಮೇಲೆ, ನಾವು ನಮ್ಮ ಮನೆಗೆ ಹೋದೆವು. ಅಲ್ಲಿ ಏನೂ ಉಳಿದಿರಲಿಲ್ಲ. ಅದನ್ನು ನೋಡಿ ನಮಗೆ ಮಾತೇ ಹೊರಡಲಿಲ್ಲ. ನನ್ನ ಮಗಳು ನೆಲಕ್ಕೆ ಬಿದ್ದು ಜೋರಾಗಿ ಅತ್ತು ಬಿಟ್ಟಳು.”—ವರ್ಜಿನ್‌ ದ್ವೀಪಗಳಲ್ಲಿನ ಡೇವಿಡ್‌.

ನಿಮ್ಮ ಜೀವನದಲ್ಲೂ ಯಾವತ್ತಾದರೂ ಈ ರೀತಿ ವಿಪತ್ತು ಸಂಭವಿಸಿದೆಯಾ? ಹಾಗಿದ್ದರೆ, ಅದನ್ನು ಅನುಭವಿಸಿದವರಿಗೆ ಆಗುವ ಆಘಾತ, ಗಲಿಬಿಲಿ, ಚಿಂತೆ, ಅವರಿಗೆ ಬರುವ ಕೆಟ್ಟ ಕನಸುಗಳು ಮತ್ತು ಅವರ ಪರಿಸ್ಥಿತಿ ನಿಮಗೆ ಚೆನ್ನಾಗಿ ಅರ್ಥ ಆಗಿರುತ್ತದೆ. ವಿಪತ್ತನ್ನು ಅನುಭವಿಸಿದ ಅನೇಕರು ಎಷ್ಟು ನಿರುತ್ಸಾಹಗೊಂಡಿದ್ದಾರೆಂದರೆ ಜೀವಿಸುವ ಆಸೆಯನ್ನೇ ಕಳೆದುಕೊಂಡಿದ್ದಾರೆ.

ವಿಪತ್ತಿನಿಂದಾಗಿ ನೀವು ಸಹ ಎಲ್ಲವನ್ನೂ ಕಳೆದುಕೊಂಡಿದ್ದರೆ ನಿಮಗೂ ಕಷ್ಟಗಳಿಂದಾಗಿ ಸಾಕೆನಿಸಬಹುದು. ಜೀವನ ವ್ಯರ್ಥ ಎಂಬ ಭಾವನೆ ಮೂಡಬಹುದು. ಆದರೆ ನೀವು ಜೀವಿಸುವುದು ಯಾಕೆ ಸಾರ್ಥಕ ಎಂದು ಬೈಬಲ್‌ ವಿವರಿಸುತ್ತದೆ. ಮಾತ್ರವಲ್ಲ, ಮುಂದೆ ನಿಮಗೆ ಒಳ್ಳೆಯ ಭವಿಷ್ಯ ಸಿಗುತ್ತದೆಂದು ನಿರೀಕ್ಷಿಸಲು ಆಧಾರ ಕೊಡುತ್ತದೆ.

ಬೈಬಲಿನಲ್ಲಿರುವ ಸತ್ಯ ತಿಳಿಯುವುದರಿಂದ ಜೀವನ ಸಾರ್ಥಕವಾಗುತ್ತದೆ

ಪ್ರಸಂಗಿ 7:8 ಹೇಳುವುದು: “ಆದಿಗಿಂತ ಅಂತ್ಯವು ಲೇಸು;” ದುರಂತ ಸಂಭವಿಸಿದ ಆರಂಭದಲ್ಲಿ ನಿಮಗೆ ದಿಕ್ಕೇ ಕಾಣದೆ ಜೀವನ ಕಷ್ಟ ಎಂದೆನಿಸಬಹುದು. ಆದರೆ, ತಾಳ್ಮೆಯಿಂದ ನಿಮ್ಮ ಜೀವನವನ್ನು ಮತ್ತೆ ಕಟ್ಟಲು ಪ್ರಾರಂಭಿಸುವಾಗ ನಿಧಾನವಾಗಿ ಸುಧಾರಣೆಯಾಗುತ್ತಾ ಹೋಗುತ್ತದೆ.

‘ರೋದನಶಬ್ದವೂ ಪ್ರಲಾಪಧ್ವನಿಯೂ ಕೇಳಿಸದ’ ಕಾಲ ಬರುತ್ತದೆ ಎಂದು ಬೈಬಲ್‌ ತಿಳಿಸುತ್ತದೆ. (ಯೆಶಾಯ 65:19) ಇದು, ದೇವರ ರಾಜ್ಯ ಅಥವಾ ಸರಕಾರದ ಆಡಳಿತದ ಕೆಳಗೆ ಇಡೀ ಭೂಮಿ ಸುಂದರ ತೋಟವಾಗುವಾಗ ನಿಜವಾಗುತ್ತದೆ. (ಕೀರ್ತನೆ 37:11,29) ಆಗ ಯಾವುದೇ ವಿಪತ್ತು, ದುರಂತಗಳು ಸಂಭವಿಸುವುದಿಲ್ಲ. ವಿಪತ್ತುಗಳಿಂದ ನಿಮ್ಮ ಮೇಲಾದ ಕೆಟ್ಟ ಪರಿಣಾಮಗಳನ್ನು ಸರಿಪಡಿಸಲಾಗುತ್ತದೆ ಮತ್ತು ನಿಮಗಿರಬಹುದಾದ ಕಹಿನೆನಪುಗಳನ್ನೆಲ್ಲಾ ಸಂಪೂರ್ಣವಾಗಿ ಅಳಿಸಲಾಗುತ್ತದೆ. “ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು” ಎಂದು ಸರ್ವಶಕ್ತ ದೇವರೇ ಮಾತುಕೊಟ್ಟಿದ್ದಾನೆ.—ಯೆಶಾಯ 65:17.

ಸ್ವಲ್ಪ ಯೋಚಿಸಿ, ಸೃಷ್ಟಿಕರ್ತ ದೇವರು ತನ್ನ ಪರಿಪೂರ್ಣ ಆಡಳಿತದ ಕೆಳಗೆ ಶಾಂತಿ ನೆಮ್ಮದಿಯಿಂದ ಜೀವಿಸುವ ‘ಭವಿಷ್ಯವನ್ನೂ ನಿರೀಕ್ಷೆಯನ್ನೂ’ ನಿಮಗೆ ಕೊಡಲಿಕ್ಕಾಗಿ ಏರ್ಪಾಡುಗಳನ್ನು ಮಾಡಿದ್ದಾನೆ. (ಯೆರೆಮೀಯ 29:11, ಪವಿತ್ರ ಗ್ರಂಥ ಭಾಷಾಂತರ) ಈ ಸತ್ಯವನ್ನು ತಿಳಿದಿರುವುದರಿಂದ ನಿಮ್ಮ ಜೀವನ ಸಾರ್ಥಕ ಆಗುತ್ತಾ? ನಿಮಗೆ ಜೀವಿಸಲು ಒಂದು ಉದ್ದೇಶ ಕೊಡುತ್ತಾ? ಹಿಂದಿನ ಲೇಖನದಲ್ಲಿ ನೋಡಿದ ಸ್ಯಾಲಿ ಹೇಳುವುದು: “ದೇವರ ರಾಜ್ಯವು ನಮಗೋಸ್ಕರ ಮಾಡಲಿರುವ ಅದ್ಭುತಗಳ ಬಗ್ಗೆ ಯೋಚಿಸುವುದರಿಂದ, ಹಿಂದೆ ಆದ ದುರಂತಗಳನ್ನು ಮರೆತು ಜೀವನದಲ್ಲಿ ಮುಂದೆ ಸಾಗಲು ಸಹಾಯವಾಗುತ್ತದೆ.”

ದೇವರ ಸರಕಾರವು ಅತಿ ಬೇಗನೆ ಮಾನವರಿಗಾಗಿ ಇನ್ನೂ ಏನೆಲ್ಲಾ ಮಾಡುತ್ತದೆ ಎಂದು ದಯವಿಟ್ಟು ತಿಳಿಯಿರಿ. ಹೀಗೆ ಮಾಡುವುದರಿಂದ, ಈ ಹಿಂದೆ ನೀವು ದುರಂತವನ್ನು ಅನುಭವಿಸಿದ್ದರೂ ಭವಿಷ್ಯದಲ್ಲಿ ದುರಂತಗಳೇ ಇಲ್ಲದಿರುವ ಜೀವನಕ್ಕಾಗಿ ಎದುರುನೋಡಬಹುದು. ಇದು ನಿಮ್ಮ ಜೀವನವನ್ನು ಸಾರ್ಥಕವಾಗಿಸುತ್ತದೆ ಅಥವಾ ಜೀವನಕ್ಕೆ ಅರ್ಥ ನೀಡುತ್ತದೆ.