ಲೂಕ 5:1-39

  • ಅದ್ಭುತವಾಗಿ ಮೀನು ಸಿಕ್ತು; ಮೊದಲ ಶಿಷ್ಯರು (1-11)

  • ಕುಷ್ಠರೋಗಿಯನ್ನ ವಾಸಿಮಾಡಿದನು (12-16)

  • ಲಕ್ವ ಹೊಡಿದಿದ್ದ ವ್ಯಕ್ತಿಯನ್ನ ಯೇಸು ವಾಸಿ ಮಾಡಿದನು (17-26)

  • ಲೇವಿಯನ್ನ ಯೇಸು ಕರೆದನು (27-32)

  • ಉಪವಾಸದ ಬಗ್ಗೆ ಪ್ರಶ್ನೆ (33-39)

5  ಒಂದುಸಾರಿ ಯೇಸು ಗೆನೆಜರೇತ್‌ ಸರೋವರದ* ಹತ್ರ ದೇವರ ಸಂದೇಶದ ಬಗ್ಗೆ ಕಲಿಸ್ತಿದ್ದಾಗ ತುಂಬ ಜನ ಆತನು ಹೇಳೋದನ್ನ ಕೇಳ್ತಿದ್ರು. ಆತನ ಹತ್ರ ಬರೋಕೆ ನೂಕುನುಗ್ಗಲು ಆಗ್ತಿತ್ತು.+  ಆಗ ಯೇಸು ಸರೋವರದ ದಡದಲ್ಲಿ ಎರಡು ದೋಣಿ ನೋಡಿದನು. ಮೀನುಗಾರರು ದೋಣಿ ಇಳಿದು ಬಲೆ ತೊಳಿತಾ ಇದ್ರು.+  ಯೇಸು ಸೀಮೋನನ ದೋಣಿ ಹತ್ತಿ ದಡದಿಂದ ಸ್ವಲ್ಪ ದೂರ ತಳ್ಳು ಅಂತ ಅವನನ್ನ ಕೇಳ್ಕೊಂಡನು. ಆತನು ಆ ದೋಣಿಯಲ್ಲಿ ಕೂತು ಅಲ್ಲಿಂದಾನೇ ಕಲಿಸೋಕೆ ಶುರುಮಾಡಿದನು.  ಮಾತು ಮುಗಿಸಿದ ಮೇಲೆ ಸೀಮೋನನಿಗೆ “ಆಳ ಇರೋ ಕಡೆ ದೋಣಿ ತಗೊಂಡು ಹೋಗಿ ಬಲೆ ಬೀಸಿ” ಅಂದನು.  ಅದಕ್ಕೆ ಸೀಮೋನ “ಗುರು, ರಾತ್ರಿಯೆಲ್ಲ ಕಷ್ಟಪಟ್ರೂ ಏನೂ ಸಿಗಲಿಲ್ಲ.+ ಆದ್ರೂ ನಿನ್ನ ಮಾತು ಕೇಳಿ ಬಲೆ ಬೀಸ್ತೀವಿ” ಅಂದ.  ಬಲೆ ಬೀಸಿದಾಗ ರಾಶಿರಾಶಿ ಮೀನು ಸಿಕ್ತು. ಎಷ್ಟಂದ್ರೆ ಬಲೆ ಹರಿದು ಹೋಗ್ತಾ ಇತ್ತು.+  ಹಾಗಾಗಿ ಇನ್ನೊಂದು ದೋಣಿಯಲ್ಲಿದ್ದ ಜೊತೆಕೆಲಸಗಾರರಿಗೆ ಸನ್ನೆಮಾಡಿ ಸಹಾಯಕ್ಕೆ ಕರೆದ್ರು. ಅವರು ಆ ಎರಡು ದೋಣಿಗಳಲ್ಲಿ ಮೀನು ತುಂಬಿಸಿದಾಗ ಭಾರದಿಂದ ದೋಣಿ ಮುಳುಗೋ ತರ ಇತ್ತು.  ಇದನ್ನ ನೋಡಿ ಸೀಮೋನ ಪೇತ್ರ ಯೇಸು ಮುಂದೆ ಮಂಡಿಯೂರಿ “ಸ್ವಾಮಿ, ನಾನು ಪಾಪಿ. ನನ್ನನ್ನ ಬಿಟ್ಟುಹೋಗು” ಅಂದ.  ಯಾಕಂದ್ರೆ ಮೀನಿನ ರಾಶಿ ನೋಡಿ ಅವನು, ಜೊತೆ ಇದ್ದವರು ಬೆಚ್ಚಿಬಿದ್ರು. 10  ಸೀಮೋನನ ಜೊತೆ ಕೆಲಸ ಮಾಡ್ತಿದ್ದ ಜೆಬೆದಾಯನ ಮಕ್ಕಳಾದ+ ಯಾಕೋಬ ಮತ್ತು ಯೋಹಾನನಿಗೂ ಆಶ್ಚರ್ಯ ಆಯ್ತು. ಆದ್ರೆ ಯೇಸು ಸೀಮೋನನಿಗೆ “ಹೆದ್ರಬೇಡ. ಇವತ್ತಿಂದ ನೀನು ಮನುಷ್ಯರನ್ನ ಜೀವಂತ ಹಿಡಿಯೋ ಬೆಸ್ತನಾಗ್ತೀಯ”+ ಅಂದನು. 11  ಹಾಗಾಗಿ ಅವರು ದೋಣಿಗಳನ್ನ ದಡಕ್ಕೆ ತಂದು ಎಲ್ಲವನ್ನೂ ಬಿಟ್ಟು ಆತನನ್ನ ಹಿಂಬಾಲಿಸಿದ್ರು.+ 12  ಇನ್ನೊಂದು ಸಾರಿ ಯೇಸು ಒಂದು ಊರಲ್ಲಿ ಇದ್ದಾಗ ಮೈಯೆಲ್ಲ ಕುಷ್ಠ ಇದ್ದ ಒಬ್ಬ ವ್ಯಕ್ತಿ ಯೇಸು ಮುಂದೆ ಮಂಡಿಯೂರಿ “ಸ್ವಾಮಿ, ನಿಂಗಿಷ್ಟ ಇದ್ರೆ ನನ್ನನ್ನ ವಾಸಿಮಾಡು”+ ಅಂತ ಕೇಳ್ಕೊಂಡ. 13  ಅದಕ್ಕೆ ಯೇಸು ಅವನನ್ನ ಮುಟ್ಟಿ “ನಿನ್ನನ್ನ ವಾಸಿಮಾಡೋಕೆ ನಂಗಿಷ್ಟ” ಅಂದನು. ತಕ್ಷಣ ಕುಷ್ಠ ವಾಸಿ ಆಯ್ತು.+ 14  ಆಮೇಲೆ ಯೇಸು “ಹೋಗಿ ಪುರೋಹಿತನಿಗೆ ನಿನ್ನನ್ನ ತೋರಿಸು, ಮೋಶೆ ಹೇಳಿದ ಹಾಗೆ+ ಉಡುಗೊರೆ ಅರ್ಪಿಸು. ಇದು ಅವ್ರಿಗೆ ಸಾಕ್ಷಿಯಾಗಿರಲಿ”+ ಅಂದನು. ಆಗಿದ್ದನ್ನ ಯಾರಿಗೂ ಹೇಳಬೇಡ ಅಂತ ಆಜ್ಞೆನೂ ಕೊಟ್ಟನು. 15  ಆದ್ರೂ ಆತನ ಬಗ್ಗೆ ಸುದ್ದಿ ಎಲ್ಲ ಕಡೆ ಹಬ್ತಾ ಇತ್ತು. ಆತನ ಮಾತು ಕೇಳಿಸ್ಕೊಳ್ಳೋಕೆ, ರೋಗ ವಾಸಿಮಾಡ್ಕೊಳ್ಳೋಕೆ ತುಂಬ ಜನ ಬರ್ತಾ ಇದ್ರು.+ 16  ಆತನು ಆಗಾಗ ಕಾಡಿಗೆ ಪ್ರಾರ್ಥಿಸೋಕೆ ಹೋಗ್ತಿದ್ದನು. 17  ಒಂದಿನ ಯೇಸು ಜನ್ರಿಗೆ ಕಲಿಸ್ತಾ ಇದ್ದನು. ಆಗ ಗಲಿಲಾಯ, ಯೂದಾಯ ಮತ್ತು ಯೆರೂಸಲೇಮಿನ ಒಂದೊಂದು ಹಳ್ಳಿಯಿಂದ ಬಂದಿದ್ದ ಫರಿಸಾಯರು, ನಿಯಮ ಪುಸ್ತಕದ ಶಿಕ್ಷಕರು ಕೂತಿದ್ರು. ಜನ್ರನ್ನ ವಾಸಿಮಾಡೋಕೆ ಯೇಸುಗೆ ಯೆಹೋವನ* ಶಕ್ತಿ ಇತ್ತು.+ 18  ಆಗ ಅಲ್ಲಿಗೆ ಕೆಲವರು ಲಕ್ವ ಹೊಡಿದಿದ್ದ ಒಬ್ಬ ವ್ಯಕ್ತಿಯನ್ನ ಹಾಸಿಗೆಯಲ್ಲಿ ಎತ್ಕೊಂಡು ಬಂದ್ರು. ಅವನನ್ನ ಒಳಗೆ ತಂದು ಯೇಸು ಮುಂದೆ ಇಳಿಸಬೇಕು ಅಂದ್ಕೊಂಡ್ರು.+ 19  ಆದ್ರೆ ತುಂಬ ಜನ ಇದ್ದಿದ್ರಿಂದ ಯೇಸು ಹತ್ರ ಕರ್ಕೊಂಡು ಬರೋಕಾಗಲಿಲ್ಲ. ಹಾಗಾಗಿ ಮನೆ ಮೇಲೆ ಹತ್ತಿ ಆತನಿದ್ದ ಕಡೆ ಚಾವಣಿ ತೆಗೆದು ಲಕ್ವ ಹೊಡೆದವನನ್ನ ಯೇಸು ಮುಂದೆ ಹಾಸಿಗೆ ಸಮೇತ ಕೆಳಗೆ ಇಳಿಸಿದ್ರು. 20  ಯೇಸು ಅವ್ರ ನಂಬಿಕೆ ನೋಡಿ “ನಿನ್ನ ಪಾಪಗಳನ್ನ ಕ್ಷಮಿಸಿದ್ದೀನಿ”+ ಅಂದನು. 21  ಆಗ ಆ ಪಂಡಿತರೂ ಫರಿಸಾಯರೂ “ಇವನು ದೇವರ ವಿರುದ್ಧ ಮಾತಾಡ್ತಾ ಇದ್ದಾನೆ. ದೇವರನ್ನ ಬಿಟ್ಟು ಇನ್ಯಾರಿಗೆ ಪಾಪಗಳನ್ನ ಕ್ಷಮಿಸೋ ಅಧಿಕಾರ ಇದೆ?”+ ಅಂತ ಮಾತಾಡ್ಕೊಂಡ್ರು. 22  ಯೇಸು ಅವ್ರ ಯೋಚನೆಗಳನ್ನ ಅರ್ಥಮಾಡ್ಕೊಂಡು “ಏನಂತ ಯೋಚಿಸ್ತಿದ್ದೀರಾ? 23  ‘ನಿನ್ನ ಪಾಪಗಳನ್ನ ಕ್ಷಮಿಸಿದ್ದೀನಿ’ ಅನ್ನೋದು ಸುಲಭನಾ? ಅಥವಾ ‘ಎದ್ದು ನಡಿ’ ಅನ್ನೋದು ಸುಲಭನಾ? 24  ಆದ್ರೆ ಭೂಮಿ ಮೇಲೆ ಪಾಪಗಳನ್ನ ಕ್ಷಮಿಸೋ ಅಧಿಕಾರ ಮನುಷ್ಯಕುಮಾರನಿಗೆ ಇದೆ ಅನ್ನೋದು ನಿಮಗೆ ಗೊತ್ತಾಗಲಿ . . .” ಅಂತ ಹೇಳಿ ಲಕ್ವ ಹೊಡೆದವನಿಗೆ “ಎದ್ದು ನಿನ್ನ ಹಾಸಿಗೆ ತಗೊಂಡು ಮನೆಗೆ ಹೋಗು”+ ಅಂದನು. 25  ಅವನು ಪಟ್ಟಂತ ಎದ್ದು ಹಾಸಿಗೆ ತಗೊಂಡು ಎಲ್ರ ಮುಂದೆ ನಡ್ಕೊಂಡು ದೇವರನ್ನ ಹೊಗಳ್ತಾ ಮನೆಗೆ ಹೋದ. 26  ಅಲ್ಲಿದ್ದವ್ರೆಲ್ಲ ಆಶ್ಚರ್ಯಪಟ್ಟು ದೇವರನ್ನ ಕೊಂಡಾಡಿದ್ರು. ಅಷ್ಟೇ ಅಲ್ಲ ತುಂಬ ಭಯಪಟ್ಟು “ಈ ರೀತಿ ಆಗಿದ್ದನ್ನ ನಾವು ಯಾವತ್ತೂ ನೋಡಿಲ್ಲ!” ಅಂದ್ರು. 27  ಆಮೇಲೆ ಯೇಸು ಅಲ್ಲಿಂದ ಹೋಗ್ತಿರುವಾಗ ತೆರಿಗೆ ವಸೂಲಿ ಕಚೇರಿಯಲ್ಲಿ ಕೂತಿದ್ದ ಲೇವಿ ಅನ್ನೋ ವ್ಯಕ್ತಿನ ನೋಡಿ “ಬಾ, ನನ್ನ ಶಿಷ್ಯನಾಗು”+ ಅಂದನು. 28  ಅವನು ಎಲ್ಲ ಬಿಟ್ಟು ಆತನ ಶಿಷ್ಯನಾದ. 29  ಲೇವಿ ತನ್ನ ಮನೆಯಲ್ಲಿ ಯೇಸುಗಾಗಿ ಒಂದು ದೊಡ್ಡ ಔತಣ ಏರ್ಪಡಿಸಿದ. ತುಂಬ ಜನ ತೆರಿಗೆ ವಸೂಲಿ ಮಾಡುವವರು, ಬೇರೆಯವರು ಅವ್ರ ಜೊತೆ ಕೂತು ಊಟ ಮಾಡ್ತಿದ್ರು.+ 30  ಅದನ್ನ ನೋಡಿ ಫರಿಸಾಯರು, ಅವ್ರ ಪಂಡಿತರು ಆತನ ಶಿಷ್ಯರಿಗೆ “ನೀವು ತೆರಿಗೆ ವಸೂಲಿ ಮಾಡುವವರ ಜೊತೆ, ಪಾಪಿಗಳ ಜೊತೆ ಯಾಕೆ ಊಟಮಾಡ್ತೀರ?”+ ಅಂತ ಕೇಳಿದ್ರು. 31  ಯೇಸು ಅವ್ರ ಮಾತನ್ನ ಕೇಳಿಸ್ಕೊಂಡು “ಆರೋಗ್ಯವಾಗಿ ಇರೋರಿಗೆ ವೈದ್ಯ ಬೇಕಾಗಿಲ್ಲ, ರೋಗಿಗಳಿಗೆ ಬೇಕು.+ 32  ನಾನು ನೀತಿವಂತರನ್ನಲ್ಲ, ಪಾಪಿಗಳನ್ನ ಕರಿಯೋಕೆ ಬಂದಿದ್ದೀನಿ”+ ಅಂದನು. 33  ಅವರು ಯೇಸುಗೆ “ಯೋಹಾನನ ಶಿಷ್ಯರು ಮತ್ತು ಫರಿಸಾಯರ ಶಿಷ್ಯರು ಆಗಾಗ ಉಪವಾಸ ಮಾಡ್ತಾರೆ, ತಪ್ಪದೆ ಪ್ರಾರ್ಥನೆ ಮಾಡ್ತಾರೆ. ಆದ್ರೆ ನಿನ್ನ ಶಿಷ್ಯರು ತಿಂತಾರೆ ಕುಡಿತಾರೆ”+ ಅಂದ್ರು. 34  ಅದಕ್ಕೆ ಯೇಸು “ಮದುಮಗ ತಮ್ಮ ಜೊತೆ ಇರುವಾಗ ಅವನ ಸ್ನೇಹಿತರಿಂದ ನಿಮಗೆ ಉಪವಾಸ ಮಾಡಿಸೋಕಾಗುತ್ತಾ? ಇಲ್ಲ ತಾನೇ. 35  ಮದುಮಗನನ್ನ+ ಕರ್ಕೊಂಡು ಹೋಗೋ ಸಮಯ ಬರುತ್ತೆ. ಆಗ ಅವರು ಉಪವಾಸ ಮಾಡ್ತಾರೆ”+ ಅಂದನು. 36  ಆಮೇಲೆ ಯೇಸು ಒಂದು ಉದಾಹರಣೆನೂ ಹೇಳಿದನು “ಹರಿದಿರೋ ಹಳೇ ಬಟ್ಟೆ ಮೇಲೆ ಯಾರೂ ಹೊಸ ಬಟ್ಟೆ ತುಂಡನ್ನ ತೇಪೆ ಹಚ್ಚಲ್ಲ. ಹಾಗೆ ಹಚ್ಚಿದ್ರೆ ಹೊಸ ಬಟ್ಟೆ ತುಂಡು ಮುದುರಿಕೊಂಡು ಇನ್ನೂ ಜಾಸ್ತಿ ಹರಿಯುತ್ತೆ.+ 37  ಅದೇ ತರ ಜನ ಹೊಸ ದ್ರಾಕ್ಷಾಮದ್ಯವನ್ನ ಹಳೇ ಚರ್ಮದ ಚೀಲದಲ್ಲಿ ಹಾಕಲ್ಲ. ಹಾಕಿಟ್ರೆ ಚರ್ಮದ ಚೀಲ ಹರಿದು ದ್ರಾಕ್ಷಾಮದ್ಯ ಚೆಲ್ಲುತ್ತೆ, ಚರ್ಮದ ಚೀಲನೂ ಹಾಳಾಗುತ್ತೆ. 38  ಜನ ಹೊಸ ದ್ರಾಕ್ಷಾಮದ್ಯವನ್ನ ಹೊಸ ಚರ್ಮದ ಚೀಲದಲ್ಲಿ ಹಾಕ್ತಾರೆ. 39  ಹಳೇ ದ್ರಾಕ್ಷಾಮದ್ಯ ಕುಡಿದವರಿಗೆ ಹೊಸದು ಇಷ್ಟ ಆಗಲ್ಲ. ‘ಹಳೇದೇ ಚೆನ್ನಾಗಿದೆ’ ಅಂತಾರೆ.”

ಪಾದಟಿಪ್ಪಣಿ

ಅಂದ್ರೆ, ಗಲಿಲಾಯ ಸಮುದ್ರ.