ಮಾಹಿತಿ ಇರುವಲ್ಲಿ ಹೋಗಲು

ಅಪರಾಧಿ ಪ್ರಜ್ಞೆ ಅನ್ನೋ ಗಾಯಕ್ಕೆ ಬೈಬಲಿನ ಮದ್ದು

ಅಪರಾಧಿ ಪ್ರಜ್ಞೆ ಅನ್ನೋ ಗಾಯಕ್ಕೆ ಬೈಬಲಿನ ಮದ್ದು

ಬೈಬಲ್‌ ಕೊಡೋ ಉತ್ತರ

 ಅಪರಾಧಿ ಪ್ರಜ್ಞೆ ಅನ್ನೋದು ಗಾಯ ಇದ್ದಂತೆ. ಆ ಗಾಯನ ವಾಸಿ ಮಾಡ್ಕೊಳ್ಳೋಕೆ ಬೈಬಲ್‌ ಸಹಾಯ ಮಾಡುತ್ತೆ. (ಕೀರ್ತನೆ 32:1-5) ಒಂದುವೇಳೆ ನಾವು ತಪ್ಪು ಮಾಡಿ ನಿಜವಾದ ಪಶ್ಚಾತ್ತಾಪ ತೋರಿಸಿದ್ರೆ ದೇವರು ಖಂಡಿತ ನಮ್ಮನ್ನ ಮನಸ್ಸಾರೆ ಕ್ಷಮಿಸ್ತಾನೆ. ಅಲ್ಲದೇ ಚುಚ್ಚೋ ಮನಸ್ಸಾಕ್ಷಿಯಿಂದ ಹೊರಬರೋಕೆ ಸಹಾಯ ಮಾಡ್ತಾನೆ. (ಕೀರ್ತನೆ 86:5) ತಪ್ಪು ಮಾಡಿದಾಗ ಅದ್ರ ಬಗ್ಗೆ ನೆನಸಿ ಕೊರಗೋದು ಒಳ್ಳೇದೇ ಅಂತ ಬೈಬಲ್‌ ಹೇಳುತ್ತೆ. ಯಾಕಂದ್ರೆ ನಮ್ಮ ಮನಸ್ಸಾಕ್ಷಿ ಚುಚ್ಚಿದಾಗ, ನಾವು ತಪ್ಪನ್ನ ಸರಿ ಮಾಡ್ಕೊಳ್ತೀವಿ ಮತ್ತು ಮುಂದೆ ಆ ತಪ್ಪನ್ನ ಮಾಡೋಕೆ ಹೋಗಲ್ಲ. (ಕೀರ್ತನೆ 51:17; ಜ್ಞಾನೋಕ್ತಿ 14:9) ಆದ್ರೆ ‘ಅಯ್ಯೋ ನಾನ್‌ ತಪ್ಪು ಮಾಡಿಬಿಟ್ಟನಲ್ಲ’ ಅಂತ ಮಿತಿಮೀರಿ ಕೊರಗೋದು ತಪ್ಪು ಅಂತ ಬೈಬಲ್‌ ಹೇಳುತ್ತೆ. ಯಾಕಂದ್ರೆ ಆ ತರ ಯೋಚನೆ ಮಾಡಿದ್ರೆ ದೇವರ ಕಣ್ಣಲ್ಲಿ ನಾವು ಯಾವುದಕ್ಕೂ ಲಾಯಕ್ಕಿಲ್ಲ ಅನ್ನೋ ಭಾವನೆ ಬಂದುಬಿಡುತ್ತೆ. ಆಗ ‘ದುಃಖದಲ್ಲಿ ಮುಳುಗಿಹೋಗ್ತೀವಿ.’—2 ಕೊರಿಂಥ 2:7.

 ಅಪರಾಧಿ ಪ್ರಜ್ಞೆ ಕಾಡೋಕೆ ಕಾರಣ ಏನು?

 ಅಪರಾಧಿ ಪ್ರಜ್ಞೆ ಕಾಡೋಕೆ ತುಂಬ ಕಾರಣಗಳಿವೆ. ನಾವು ಪ್ರೀತಿಸೋ ಯಾರಿಗಾದ್ರೂ ಬೇಜಾರು ಮಾಡಿದಾಗ ಅಥವಾ ನಾವು ಮಾಡಬೇಕು ಅಂತ ಅಂದ್ಕೊಂಡಿದ್ದನ್ನ ಮಾಡೋಕೆ ಆಗದೆ ಇರುವಾಗ ಈ ಭಾವನೆ ಬರುತ್ತೆ. ಕೆಲವೊಂದು ಸಲ ಅನಾವಶ್ಯಕವಾಗಿ ನಮ್ಮ ಮನಸ್ಸು ಚುಚ್ಚೋಕೆ ನಾವೇ ಬಿಟ್ಟುಕೊಡ್ತೀವಿ. ಉದಾಹರಣೆಗೆ, ನಮ್ಮ ಕೈಯಲ್ಲಿ ಆಗದೆ ಇರೋದನ್ನ ಮಾಡೋಕೆ ಹೋದ್ರೆ ಪ್ರತಿ ಸಲ ಸೋತು ಹೋಗ್ತೀವಿ. ಆಮೇಲೆ ‘ನನ್ನಿಂದ ಮಾಡೋಕೆ ಆಗಲಿಲ್ಲವಲ್ಲ’ ಅಂತ ಬೇಜಾರು ಮಾಡ್ಕೊಳ್ತೀವಿ. ಅದಕ್ಕೆ ಬೈಬಲ್‌, ನಿಮ್ಮ ಕೈಯಲ್ಲಿ ಆಗೋದನ್ನ ಮಾಡಿ ಆಗದೇ ಇರೋದ್ರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಅಂತ ಸಲಹೆ ಕೊಡುತ್ತೆ.—ಪ್ರಸಂಗಿ 7:16.

 ಅಪರಾಧಿ ಪ್ರಜ್ಞೆಯಿಂದ ನಾನು ಹೇಗೆ ಹೊರಗೆ ಬರಲಿ?

 ಮಾಡಿರೋ ತಪ್ಪಿನ ಬಗ್ಗೆನೇ ಕೂತು ಯೋಚನೆ ಮಾಡೋದಕ್ಕಿಂತ ಅದನ್ನ ಹೇಗೆ ಸರಿ ಮಾಡಬಹುದು ಅನ್ನೋದಕ್ಕೆ ಗಮನಕೊಡಿ. ಹಾಗಾದ್ರೆ ಅದನ್ನ ಹೇಗೆ ಮಾಡೋದು?

  •   ಮಾಡಿರೋ ತಪ್ಪನ್ನ ಒಪ್ಕೊಳ್ಳಿ. ‘ನನ್ನನ್ನ ಕ್ಷಮಿಸಿ’ ಅಂತ ಯೆಹೋವ a ದೇವರ ಹತ್ರ ಪ್ರಾರ್ಥನೆ ಮಾಡಿ. (ಕೀರ್ತನೆ 38:18; ಲೂಕ 11:4) ನಿಜವಾಗ್ಲೂ ನೀವು ಪಶ್ಚಾತ್ತಾಪ ಪಟ್ರೆ, ಮಾಡಿದ್ದ ತಪ್ಪನ್ನ ಪದೇ-ಪದೇ ಮಾಡ್ದೆ ಇರೋಕೆ ಪ್ರಯತ್ನ ಪಟ್ರೆ ಖಂಡಿತ ದೇವರು ನಿಮ್ಮ ಪ್ರಾರ್ಥನೆಯನ್ನ ಕೇಳ್ತಾನೆ. (2 ಪೂರ್ವಕಾಲವೃತ್ತಾಂತ 33:13; ಕೀರ್ತನೆ 34:18) ನಮ್ಮ ಹೃದಯದಲ್ಲಿ ಏನಿದೆ ಅಂತ ಮನುಷ್ಯರಿಗೆ ಗೊತ್ತಾಗಲ್ಲ, ಆದ್ರೆ ದೇವರಿಗೆ ಚೆನ್ನಾಗಿ ಗೊತ್ತು. ತಪ್ಪನ್ನ ಮಾಡ್ದೆ ಇರೋಕೆ ನಾವು ಹಾಕೋ ಪ್ರಯತ್ನವನ್ನ ದೇವರು ನೋಡ್ತಾನೆ. ಅಲ್ಲದೇ ‘ಆತನು ಅವುಗಳನ್ನ ಕ್ಷಮಿಸ್ತಾನೆ. ಯಾಕಂದ್ರೆ ಆತನು ನಂಬಿಗಸ್ತ, ನೀತಿವಂತ.’—1 ಯೋಹಾನ 1:9; ಜ್ಞಾನೋಕ್ತಿ 28:13.

     ನೀವು ಯಾರಿಗಾದ್ರೂ ಮನಸ್ಸು ನೋಯಿಸಿದ್ರೆ ಅವ್ರ ಹತ್ರ ಹೋಗಿ ಕ್ಷಮೆ ಕೇಳಿ. ಆ ತರ ಮಾಡೋದು ಅಷ್ಟು ಸುಲಭವಲ್ಲ. ಅದಕ್ಕೆ ಧೈರ್ಯ ಮತ್ತು ದೀನತೆ ಬೇಕು. ಆದ್ರೆ ಮನಸ್ಸಾರೆ ಕ್ಷಮೆ ಕೇಳಿದ್ರೆ ಎರಡು ಪ್ರಯೋಜನ ಇದೆ: ಒಂದು, ನಿಮ್ಮ ಮನಸ್ಸಿಗೆ ಸಮಾಧಾನ ಆಗುತ್ತೆ. ಎರಡು, ನಿಮ್ಮಿಬ್ಬರ ಮಧ್ಯ ಇರೋ ಸಂಬಂಧ ಸರಿಯಾಗುತ್ತೆ.—ಮತ್ತಾಯ 3:8; 5:23, 24.

  •   ದೇವರ ಕರುಣೆ ಬಗ್ಗೆ ಹೇಳೋ ವಚನಗಳನ್ನ ಧ್ಯಾನಿಸಿ. ಉದಾಹರಣೆಗೆ, 1 ಯೋಹಾನ 3:19, 20ನ್ನ ನೋಡಿ. ಅಲ್ಲಿ ‘ನಮ್ಮ ಹೃದಯ ನಾವು ಮಾಡಿದ್ದು ತಪ್ಪು’ ಅಂತ ಹೇಳುತ್ತೆ. ಅಂದ್ರೆ ‘ದೇವರ ಪ್ರೀತಿ ಪಡಿಯೋಕೆ ನನ್ಗೆ ಯೋಗ್ಯತೆ ಇಲ್ಲ’ ಅಂತ ಅನಿಸುತ್ತೆ. ಆದ್ರೆ ಅದೇ ವಚನ “ದೇವರು ನಮ್ಮ ಹೃದಯಕ್ಕಿಂತ ತುಂಬ ದೊಡ್ಡವನು” ಅಂತನೂ ಹೇಳುತ್ತೆ. ಅದ್ರ ಅರ್ಥವೇನು? ದೇವರಿಗೆ ನಮ್ಮ ಬಗ್ಗೆ ಎಲ್ಲನೂ ಗೊತ್ತು. ನಮ್ಮ ಭಾವನೆಗಳನ್ನ, ಬಲಹೀನತೆಗಳನ್ನ ಆತನು ಚೆನ್ನಾಗಿ ಅರ್ಥ ಮಾಡ್ಕೊಳ್ತಾನೆ. ನಾವು ಅಪರಿಪೂರ್ಣರು, ತಪ್ಪು ಮಾಡ್ತೀವಿ ಅಂತನೂ ದೇವರಿಗೆ ಗೊತ್ತು. b (ಕೀರ್ತನೆ 51:5) ಯಾರು ತಮ್ಮ ತಪ್ಪನ್ನ ಮನಸ್ಸಾರೆ ಒಪ್ಕೊಳ್ತಾರೋ ದೇವರು ಅವರನ್ನ ಖಂಡಿತ ಕ್ಷಮಿಸ್ತಾನೆ.—ಕೀರ್ತನೆ 32:5.

  •   ಮಾಡಿದ ತಪ್ಪಿನ ಬಗ್ಗೆನೇ ಯೋಚನೆ ಮಾಡಬೇಡಿ. ತಪ್ಪು ಮಾಡಿದ ನಂತ್ರ ತಿದ್ದಿಕೊಂಡು ಮುಂದೆ ಹೋದ ಅನೇಕ ಸ್ತ್ರೀ-ಪುರುಷರ ಉದಾಹರಣೆಗಳು ಬೈಬಲ್‌ನಲ್ಲಿ ಇವೆ. ಅದ್ರಲ್ಲಿ ಒಂದು ಉದಾಹರಣೆ ತಾರ್ಸದ ಸೌಲ. ನಂತ್ರ ಅವನು ಅಪೊಸ್ತಲ ಪೌಲನಾದ. ಫರಿಸಾಯನಾದ ಇವನು ಯೇಸುವಿನ ಶಿಷ್ಯರಿಗೆ ತುಂಬ ಹಿಂಸೆ ಕೊಡ್ತಿದ್ದ. (ಅಪೊಸ್ತಲರ ಕಾರ್ಯ 8:3; 9:1, 2, 11) ಆದ್ರೆ ಈ ತರ ಮಾಡಿದ್ರೆ ದೇವರನ್ನ ಮತ್ತು ಮೆಸ್ಸೀಯನನ್ನ ವಿರೋಧಿಸಿದ ಹಾಗೆ ಆಗುತ್ತೆ ಅಂತ ಅವನು ತಿಳ್ಕೊಂಡ. ಆಮೇಲೆ ತನ್ನ ತಪ್ಪನ್ನ ಒಪ್ಕೊಂಡು, ಯೋಚನೆಯನ್ನ ಬದಲಾಯಿಸಿಕೊಂಡು ಒಬ್ಬ ಒಳ್ಳೇ ಕ್ರೈಸ್ತನಾದ. ಪೌಲನಿಗೆ ತಾನು ಮಾಡಿದ ತಪ್ಪಿನ ಬಗ್ಗೆ ಬೇಜಾರು ಆಯ್ತು ನಿಜ, ಆದ್ರೆ ಮೂರು ಹೊತ್ತು ಅದ್ರ ಬಗ್ಗೆನೇ ಯೋಚನೆ ಮಾಡಲಿಲ್ಲ. ದೇವರು ನನ್ನ ಕ್ಷಮಿಸ್ತಾನೆ ಅಂತ ಅವನಿಗೆ ಗೊತ್ತಿತ್ತು, ಅದಕ್ಕೆ ಅವನು ಹಿಂದೆ ಆಗಿದ್ದನ್ನ ಮರೆತು ಶಾಶ್ವತ ಜೀವನದ ಕಡೆ ಗಮನ ಕೊಡ್ತಾ ಹುರುಪಿನಿಂದ ಸಿಹಿಸುದ್ದಿ ಸಾರಿದ.—ಫಿಲಿಪ್ಪಿ 3:13, 14.

 ಅಪರಾಧಿ ಪ್ರಜ್ಞೆ ಮತ್ತು ಕ್ಷಮೆಯ ಬಗ್ಗೆ ಇರೋ ಬೈಬಲ್‌ ವಚನಗಳು

 ಕೀರ್ತನೆ 51:17: “ದೇವರೇ, ಜಜ್ಜಿ ಹೋಗಿರೋ, ಮುರಿದು ಹೋಗಿರೋ ಹೃದಯನ ನೀನು ತಳ್ಳಿಹಾಕಲ್ಲ.”

 ಅರ್ಥ: ‘ನಾನು ಮಾಡಿದ ತಪ್ಪಿಂದ ದೇವರಿಗೆ ಬೇಜಾರು ಆಗಿದೆ’ ಅಂತ ತಿಳಿದು ಮನಸ್ಸಾರೆ ಕ್ಷಮೆ ಕೇಳಿದ್ರೆ ಆತನು ಖಂಡಿತ ನಮಗೆ ಕರುಣೆ ತೋರಿಸ್ತಾನೆ, ಕ್ಷಮಿಸ್ತಾನೆ.

 ಜ್ಞಾನೋಕ್ತಿ 28:13: “ತನ್ನ ಅಪರಾಧಗಳನ್ನ ಮುಚ್ಚಿಡುವವನಿಗೆ ಒಳ್ಳೇದಾಗಲ್ಲ, ಅದನ್ನ ಒಪ್ಕೊಂಡು ಮತ್ತೆ ಮಾಡದೆ ಇರುವವನಿಗೆ ಕರುಣೆ ಸಿಗುತ್ತೆ.”

 ಅರ್ಥ: ನಾವು ದೇವರ ಮುಂದೆ ನಮ್ಮ ತಪ್ಪನ್ನ ಒಪ್ಕೊಂಡು, ಆತನಿಗೆ ಇಷ್ಟ ಆಗೋ ತರ ನಡ್ಕೊಂಡ್ರೆ ಆತನು ನಮ್ಮನ್ನ ಖಂಡಿತ ಕ್ಷಮಿಸ್ತಾನೆ.

 ಯೆರೆಮೀಯ 31:34: “ನಾನು ಅವ್ರ ತಪ್ಪುಗಳನ್ನ ಕ್ಷಮಿಸ್ತೀನಿ. ಅವ್ರ ಪಾಪಗಳನ್ನ ಇನ್ನು ಯಾವತ್ತೂ ನೆನಪಿಸ್ಕೊಳ್ಳಲ್ಲ.”

 ಅರ್ಥ: ದೇವರು ಒಂದು ಸಲ ನಮ್ಮ ತಪ್ಪುಗಳನ್ನ ಕ್ಷಮಿಸಿದ್ರೆ ಮತ್ತೆ ಆ ತಪ್ಪುಗಳನ್ನ ನೆನಪಿಸ್ಕೊಳ್ಳಲ್ಲ. ಅಷ್ಟು ಉದಾರ ಮನಸ್ಸು ಆತನದ್ದು.

a ಯೆಹೋವ ಅನ್ನೋದು ದೇವರ ಹೆಸರು.—ವಿಮೋಚನಕಾಂಡ 6:3.

b ಹುಟ್ಟಿದಾಗಿಂದ ತಪ್ಪು ಮಾಡೋ ಮನೋಭಾವ ನಮ್ಮೆಲ್ಲರಲ್ಲಿದೆ. ಇದಕ್ಕೆ ಕಾರಣ ನಮ್ಮ ಮೊದಲ ಹೆತ್ತವರಾದ ಆದಾಮ ಹವ್ವ. ಅವರು ದೇವರ ವಿರುದ್ಧ ಪಾಪ ಮಾಡಿ ಶಾಶ್ವತ ಜೀವನನ ಕಳ್ಕೊಂಡ್ರು. ಅವರು ಮಾತ್ರ ಅಲ್ಲ ಅವ್ರ ಸಂತತಿ ಕೂಡ ಕಳ್ಕೊಳ್ಳೋ ತರ ಮಾಡಿದ್ರು.—ಆದಿಕಾಂಡ 3:17-19; ರೋಮನ್ನರಿಗೆ 5:12.