ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ | ಅಂತ್ಯ ಹತ್ತಿರವಿದೆಯಾ?

ಯಾರು ಅಂತ್ಯವನ್ನು ಪಾರಾಗುತ್ತಾರೆ ಮತ್ತು ಹೇಗೆ?

ಯಾರು ಅಂತ್ಯವನ್ನು ಪಾರಾಗುತ್ತಾರೆ ಮತ್ತು ಹೇಗೆ?

“ಆಗ ಮಹಾ ಸಂಕಟವು ಇರುವುದು; ಲೋಕದ ಆರಂಭದಿಂದ ಇಂದಿನ ವರೆಗೆ ಅಂಥ ಸಂಕಟವು ಸಂಭವಿಸಿಲ್ಲ . . . ವಾಸ್ತವದಲ್ಲಿ, ಆ ದಿನಗಳನ್ನು ಕಡಿಮೆಮಾಡದಿದ್ದರೆ ಯಾವನೂ ಉಳಿಯನು” ಎಂದು ಬೈಬಲ್‌ ಹೇಳುತ್ತದೆ. (ಮತ್ತಾಯ 24:21, 22) ಇದರರ್ಥ, ಅಂತ್ಯದ ಸಮಯದಲ್ಲಿ ನಾಶನ ಕೂಡ ಸಂಭವಿಸುತ್ತದೆ. ಆದರೂ ಅನೇಕರು ಬದುಕಿ ಉಳಿಯುತ್ತಾರೆ. ಆದ್ದರಿಂದ ಬೈಬಲ್‌“ಲೋಕ . . . ಗತಿಸಿಹೋಗುತ್ತಿದೆ, ಆದರೆ ದೇವರ ಚಿತ್ತವನ್ನು ಮಾಡುವವನು ಎಂದೆಂದಿಗೂ ಇರುವನು” ಎಂದು ತಿಳಿಸುತ್ತದೆ.—1 ಯೋಹಾನ 2:17.

ಆ ಸಮಯದಲ್ಲಿ ನೀವು ನಾಶವಾಗದೆ ಎಂದೆಂದಿಗೂ ಬದುಕಿರಬೇಕಾ? ಹಾಗಾದರೆ ಏನು ಮಾಡಬೇಕು? ಜೀವ ಉಳಿಸಿಕೊಳ್ಳಲು ಅವಶ್ಯವಾದ ವಸ್ತುಗಳನ್ನು ಕೂಡಿಸಿಟ್ಟುಕೊಳ್ಳುವ ಅಥವಾ ಶಾರೀರಿಕವಾಗಿ ತಯಾರಾಗುವ ಅಗತ್ಯವಿಲ್ಲ. ಬದಲಿಗೆ ಬೈಬಲ್‌ ತಿಳಿಸುವ ಈ ಸಲಹೆಯನ್ನು ಪಾಲಿಸಬೇಕು: “ಇವುಗಳೆಲ್ಲವೂ ಹೀಗೆ ಲಯವಾಗಿ ಹೋಗುವುದರಿಂದ ನೀವು ಯಾವ ರೀತಿಯ ವ್ಯಕ್ತಿಗಳಾಗಿರಬೇಕು ಎಂಬುದನ್ನು ಆಲೋಚಿಸಿರಿ. ನೀವು ಪವಿತ್ರ ನಡತೆಯುಳ್ಳವರೂ ದೇವಭಕ್ತಿಯ ಕ್ರಿಯೆಗಳುಳ್ಳವರೂ ಆಗಿರಬೇಕು, ಏಕೆಂದರೆ ನೀವು ಯೆಹೋವನ ದಿನದ ಸಾನ್ನಿಧ್ಯವನ್ನು ಎದುರುನೋಡುತ್ತಾ ಮನಸ್ಸಿನಲ್ಲಿ ನಿಕಟವಾಗಿ ಇಡುತ್ತಾ ಇದ್ದೀರಲ್ಲಾ.” (2 ಪೇತ್ರ 3:10-12) ಇಲ್ಲಿ ‘ಇವುಗಳೆಲ್ಲವೂ ಲಯವಾಗಿ’ ಅಥವಾ ನಾಶವಾಗಿ ಹೋಗುತ್ತವೆ ಎಂದು ತಿಳಿಸಲಾಗಿದೆ. ಇದರರ್ಥ ಈ ಭ್ರಷ್ಟ ಲೋಕದ ರಾಜಕೀಯ ವ್ಯವಸ್ಥೆಗಳು ಮತ್ತು ಯಾರು ದೇವರ ಆಳ್ವಿಕೆಯನ್ನು ಬಿಟ್ಟು ಈ ರಾಜಕೀಯ ವ್ಯವಸ್ಥೆಗೆ ಬೆಂಬಲ ಕೊಡುತ್ತಾರೋ ಅವರೆಲ್ಲರೂ ನಾಶವಾಗುತ್ತಾರೆ. ಇದರಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ. ಅದೇನಂದರೆ, ನಾವು ವಸ್ತುಗಳನ್ನು ಕೂಡಿಸಿಟ್ಟುಕೊಳ್ಳುವುದರಿಂದ ಯಾವ ಪ್ರಯೋಜನವೂ ಇಲ್ಲ. ಯಾಕೆಂದರೆ ನಮ್ಮನ್ನು ನಾಶವಾಗದಂತೆ ಕಾಪಾಡುವ ಶಕ್ತಿ ಅವುಗಳಿಗಿಲ್ಲ.

ಯೆಹೋವನನ್ನು ಪ್ರೀತಿಸಿ, ಆತನಿಗೆ ಇಷ್ಟವಾಗುವಂಥ ರೀತಿಯಲ್ಲಿ ನಡೆದುಕೊಳ್ಳಲು ಕಲಿತುಕೊಳ್ಳಬೇಕು. ಆಗ ಮಾತ್ರ ನಾವು ಆ ನಾಶನದಿಂದ ಪಾರಾಗಲು ಸಾಧ್ಯ. (ಚೆಫನ್ಯ 2:3) ಅಂತ್ಯ ಹತ್ತಿರದಲ್ಲೇ ಇದೆ ಎಂಬ ನಿಜಾಂಶವನ್ನು ಹೆಚ್ಚಿನವರು ತಳ್ಳಿಹಾಕಿದ್ದಾರೆ. ಆದರೆ ನಾವು ಅವರಂತಿರದೆ ಯೆಹೋವನ ದಿನವನ್ನು ಎದುರುನೋಡುತ್ತಾ, ಅದನ್ನು ಮರೆಯದಿರೋಣ. ಯೆಹೋವನ ದಿನದಲ್ಲಿ ನಾಶವಾಗದೆ ಬದುಕಿ ಉಳಿಯಬೇಕೆಂದರೆ ಇನ್ನೂ ಏನು ಮಾಡಬೇಕು? ಇದನ್ನು ತಿಳಿದುಕೊಳ್ಳಲು ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿ. ಅವರು ನಿಮಗದನ್ನು ಬೈಬಲಿನಿಂದ ತಿಳಿಸುತ್ತಾರೆ. ▪ (w15-E 05/01)