ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬದುಕು ಬದಲಾದ ವಿಧ

ಯೆಹೋವನ ಕರುಣೆ ಮತ್ತು ಕ್ಷಮೆಯನ್ನು ಅನುಭವಿಸಿ ನೋಡಿದೆ

ಯೆಹೋವನ ಕರುಣೆ ಮತ್ತು ಕ್ಷಮೆಯನ್ನು ಅನುಭವಿಸಿ ನೋಡಿದೆ
  • ಜನನ: 1954

  • ದೇಶ: ಕೆನಡ

  • ಹಿಂದೆ: ವಂಚಕ, ಜೂಜುಗಾರ

ಹಿನ್ನೆಲೆ:

ನಾನು ಹುಟ್ಟಿದ್ದು ಮಾಂಟರೆಲ್‌ ನಗರದ ಒಂದು ಪ್ರದೇಶದಲ್ಲಿ. ಅದು ಆರ್ಥಿಕವಾಗಿ ಹಿಂದುಳಿದ ಪ್ರದೇಶವಾಗಿತ್ತು. ನಮ್ಮ ಮನೆಯಲ್ಲಿ ಒಟ್ಟು ಎಂಟು ಮಕ್ಕಳು. ಅದರಲ್ಲಿ ನಾನೇ ಕೊನೆಯವನು. ನಾನು ಆರು ತಿಂಗಳ ಮಗು ಆಗಿದ್ದಾಗ ನನ್ನ ಅಪ್ಪ ತೀರಿ ಹೋದರು. ಇಡೀ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ಅಮ್ಮನ ಮೇಲೆ ಬಂತು.

ಎಲ್ಲಿ ನೋಡಿದರೂ ಹಿಂಸೆ, ಜೂಜಾಟ, ಪಾತಕಿಗಳು, ಅಮಲೌಷಧ ತೆಗೆದುಕೊಳ್ಳುವ ಜನರಿಂದ ತುಂಬಿರುವ ವಾತಾವರಣದಲ್ಲಿ ನಾನು ಬೆಳೆದೆ. ಅದರ ಗಾಳಿ ನನಗೂ ಸೋಕಿತು. ನಾನು ಹತ್ತು ವರ್ಷದವನಿರುವಾಗಲೇ ವೇಶ್ಯಾವಾಟಿಕೆ ನಡೆಸುವವರ, ಸಾಲ ವಸೂಲಿಗಾರರ ಹತ್ತಿರ ಕೆಲಸ ಮಾಡುತ್ತಿದ್ದೆ. ಸುಳ್ಳು ಹೇಳಿ, ಬೇರೆಯವರಿಗೆ ಮೋಸ ಮಾಡಿ ಖುಷಿಪಡುತ್ತಿದ್ದೆ. ಅದರಲ್ಲಿ ನನಗೆ ಒಂಥರ ಮಜಾ ಸಿಗುತ್ತಿತ್ತು.

14ನೇ ವಯಸ್ಸನಲ್ಲೇ ಮೋಸ ಮಾಡೋದರಲ್ಲಿ ನಾನು ಪ್ರವೀಣನಾಗಿ ಬಿಟ್ಟಿದ್ದೆ. ಉದಾಹರಣೆಗೆ, ಚಿನ್ನದ ನೀರಿನಲ್ಲಿ ಅದ್ದಿರುವ ವಾಚ್‌, ಕೈಕಡಗ ಮತ್ತು ಉಂಗುರಗಳನ್ನು ಜಾಸ್ತಿ ಖರೀದಿಸಿ ಅದರ ಮೇಲೆ 14 ಕ್ಯಾರಟ್‌ ಚಿನ್ನ ಅಂತ ಬರೆಯಿಸುತ್ತಿದ್ದೆ. ಆಮೇಲೆ ಅದನ್ನು ದಾರಿಯ ಬದಿಯಲ್ಲಿ, ವ್ಯಾಪಾರ ಮಳಿಗೆಗಳ ಪಾರ್ಕಿಂಗ್‌ ಜಾಗದಲ್ಲಿ ಮಾರುತ್ತಿದ್ದೆ. ಈ ರೀತಿ ಸುಲಭವಾಗಿ ಹಣ ಮಾಡುವುದು ನನಗೆ ತುಂಬಾ ಇಷ್ಟ ಆಯಿತು. ಒಂದು ಸಾರಿಯಂತೂ ಒಂದೇ ದಿನಕ್ಕೆ 10,000 ಡಾಲರ್‌ನಷ್ಟು (ಸುಮಾರು 5,16,700 ರೂ.) ಹಣ ಸಂಪಾದಿಸಿದ್ದೆ!

15ನೇ ವಯಸ್ಸಿನಲ್ಲಿ ಬಾಲ ಅಪರಾಧಿಗಳನ್ನು ತಿದ್ದಲು ಇರುವ ಸುಧಾರಣಾ ಶಾಲೆಯಿಂದ ನನ್ನನ್ನು ಹೊರಗೆ ಹಾಕಿದರು. ಆಗ ನನಗೆ ಮನೆ ಇರಲಿಲ್ಲ. ಹಾಗಾಗಿ ರಸ್ತೆ ಬದಿಯಲ್ಲಿ, ಪಾರ್ಕ್‌ಗಳಲ್ಲಿ ಕೆಲವೊಮ್ಮೆ ನನ್ನ ಗೆಳೆಯರ ಮನೆಯಲ್ಲಿ ಮಲಗಿಕೊಳ್ಳುತ್ತಿದ್ದೆ.

ಮೋಸ ಮಾಡೋದು, ನಕಲಿ ವಸ್ತುಗಳನ್ನು ಅಸಲಿ ಅಂತ ಮಾರುವುದು, ಅನುಮತಿ ಪಡೆಯದೆ ವಸ್ತುಗಳನ್ನು ಮಾರುವುದು ನನ್ನ ಅಭ್ಯಾಸ ಆಗಿಬಿಟ್ಟಿತ್ತು. ಇದಕ್ಕಾಗಿ ಅನೇಕ ಬಾರಿ ಪೊಲೀಸರಿಂದ ವಿಚಾರಣೆಗೆ ಒಳಗಾದೆ. ಸಾಕಷ್ಟು ದಂಡ ಕೂಡ ಕಟ್ಟಿದೆ. ಆದರೆ ಅವರು ನನ್ನನ್ನು ಜೈಲಿಗೆ ಹಾಕಲಿಲ್ಲ ಯಾಕೆಂದರೆ ನಾನು ಮಾರುತ್ತಿದ್ದ ವಸ್ತುಗಳು ಕದ್ದ ವಸ್ತುಗಳಾಗಿರಲಿಲ್ಲ. ಬಡ್ಡಿಗೆ ಸಾಲ ಕೊಡುವವರ ಹತ್ತಿರ ಕೆಲಸ ಮಾಡಿದೆ. ಸಾಲಗಾರರನ್ನು ಹೆದರಿಸಿ, ಬೆದರಿಸಿ ಹಣ ವಸೂಲಿ ಮಾಡಬೇಕಿತ್ತು. ಅದು ತುಂಬ ಅಪಾಯಕಾರಿ ಕೆಲಸ. ಅದಕ್ಕಾಗಿ ಕೆಲವೊಮ್ಮೆ ನಾನು ಪಿಸ್ತೂಲನ್ನು ತೆಗೆದುಕೊಂಡು ಹೋಗುತ್ತಿದ್ದೆ. ಕೆಲವೊಂದು ಸಾರಿ ದೊಡ್ಡ ದೊಡ್ಡ ಅಪರಾಧಿಗಳ ಗ್ಯಾ೦ಗ್‌ ಜೊತೆ ಕೂಡ ಕೆಲಸ ಮಾಡಿದ್ದೇನೆ.

ನನ್ನ ಬದುಕನ್ನೇ ಬದಲಾಯಿಸಿತು ಬೈಬಲ್‌:

ನನಗೆ ಬೈಬಲ್‌ ಬಗ್ಗೆ ಗೊತ್ತಾಗಿದ್ದು ನನ್ನ 17ನೇ ವಯಸ್ಸಿನಲ್ಲಿ. ಆಗ ನಾನು ನನ್ನ ಗರ್ಲ್ಫ್ರೆಂಡ್ ಜೊತೆ ವಾಸ ಮಾಡುತ್ತಿದ್ದೆ. ಅವಳು ಯೆಹೋವನ ಸಾಕ್ಷಿಗಳ ಹತ್ತಿರ ಬೈಬಲ್‌ ಕಲಿಯಲು ಶುರು  ಮಾಡಿದ್ದಳು. ಬೈಬಲ್‌ ಕಲಿಸುತ್ತಿದ್ದ ವಿಷಯಗಳ ಪ್ರಕಾರ ನಡೆಯಲು ಸಾಧ್ಯವಿಲ್ಲ ಎಂದನಿಸಿತು. ಹಾಗಾಗಿ ನಾನು ಆಕೆಯನ್ನು ಬಿಟ್ಟು ನಾನು ಇಷ್ಟಪಡುತ್ತಿದ್ದ ಇನ್ನೊಬ್ಬ ಸ್ತ್ರೀಯೊಟ್ಟಿಗೆ ಜೀವಿಸಲು ಹೋದೆ.

ಅಲ್ಲಿ ನೋಡಿದರೆ, ಅವಳು ಕೂಡ ಯೆಹೋವನ ಸಾಕ್ಷಿಗಳ ಹತ್ತಿರ ಬೈಬಲ್‌ ಕಲಿಯಲು ಶುರುಮಾಡಿದ್ದಳು! ಆದರೆ ಆಕೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡೆ. ಆಕೆ ಮುಂಚೆಗಿಂತ ಈಗ ಶಾಂತಿ, ಸಮಾಧಾನದಿಂದ ನಡೆದುಕೊಳ್ಳುತ್ತಿದ್ದಳು. ಇದು ನನ್ನ ಮೇಲೆ ತುಂಬಾ ಪ್ರಭಾವ ಬೀರಿತು. ಒಂದು ದಿನ ಯೆಹೋವನ ಸಾಕ್ಷಿಗಳ ಕೂಟಕ್ಕೆ ಹೋದೆ. ಅಲ್ಲಿದ್ದವರೆಲ್ಲಾ ತುಂಬಾ ಒಳ್ಳೆಯ ಜನರಾಗಿದ್ದರು. ನನ್ನನ್ನು ಸಂತೋಷದಿಂದ ಬರಮಾಡಿಕೊಂಡರು. ನಾನು ಎಲ್ಲೋ ಒಂದು ಹೊಸ ಲೋಕಕ್ಕೆ ಹೋಗಿದ್ದೀನಿ ಅಂತ ಅನಿಸುತ್ತಿತ್ತು. ಯಾಕೆಂದರೆ ನಾನು ಜೀವಿಸುತ್ತಿದ್ದ ಪರಿಸ್ಥಿತಿಗೂ ಇಲ್ಲಿರುವ ಪರಿಸ್ಥಿತಿಗೂ ತುಂಬ ವ್ಯತ್ಯಾಸವಿತ್ತು. ನಾನು ನನ್ನ ಕುಟುಂಬದವರಿಗೆ ಬೇಡವಾಗಿದ್ದೆ, ಪ್ರೀತಿ-ಮಮತೆ ಅಂದರೆ ಏನಂತ ನನಗೆ ಗೊತ್ತೇ ಇರಲಿಲ್ಲ. ನನಗೆ ಬೇಕಾಗಿದ್ದ ನಿಜ ಪ್ರೀತಿ ಸಾಕ್ಷಿಗಳಿಂದ ಸಿಕ್ಕಿತು. ಸಾಕ್ಷಿಗಳು ಬೈಬಲ್‌ ಅಧ್ಯಯನದ ಬಗ್ಗೆ ಪ್ರಸ್ತಾಪ ಮಾಡಿದಾಗ ಹಿಂದೆ ಮುಂದೆ ನೋಡದೆ ತಕ್ಷಣ ಒಪ್ಪಿಕೊಂಡೆ.

ಬೈಬಲಿನಿಂದ ನಾನು ಏನು ಕಲಿತೆನೋ ಅದೇ ನನ್ನ ಜೀವ ಕಾಪಾಡಿತು ಅಂತ ಹೇಳಬಹುದು. ಯಾಕೆ ಹಾಗೆ ಹೇಳುತ್ತಿದ್ದೀನೆಂದರೆ ನನ್ನ ಇಬ್ಬರು ಹಳೇ ಸ್ನೇಹಿತರು ಮತ್ತು ನಾನು, ಜೊತೆ ಸೇರಿ ಕಳ್ಳತನ ಮಾಡೋಣ ಅಂತ ಯೋಚನೆ ಮಾಡಿದ್ದೆವು. ನಾನು ಜೂಜಾಡಿ ಸುಮಾರು 50,000 ಡಾಲರ್‌ನಷ್ಟು (25,83,500 ರೂ.) ಸಾಲ ಮಾಡಿದ್ದನ್ನು ಕಳ್ಳತನ ಮಾಡಿದ ದುಡ್ಡಿನಿಂದ ತೀರಿಸಬಹುದಿತ್ತು. ಆದರೆ ಕೊನೆ ಗಳಿಗೆಯಲ್ಲಿ ನಾನು ಅದರಿಂದ ಹಿಂದೆ ಸರಿದೆ. ನಾನು ಮಾಡಿದ ಆ ನಿರ್ಧಾರ ನನ್ನ ಜೀವವನ್ನೇ ಕಾಪಾಡಿತು! ಯಾಕೆಂದರೆ ಆ ಇಬ್ಬರು ಸ್ನೇಹಿತರು ತಾವು ಯೋಚನೆ ಮಾಡಿದ ಪ್ರಕಾರ ಕಳ್ಳತನಕ್ಕೆ ಹೋಗಿ ಸಿಕ್ಕಿಬಿದ್ದರು. ಒಬ್ಬನನ್ನು ಕೊಂದು ಹಾಕಲಾಯಿತು, ಇನ್ನೊಬ್ಬ ಜೈಲು ಪಾಲಾದ.

ಹೀಗೆ ಬೈಬಲ್‌ ಕಲಿತಾ ಕಲಿತಾ ನನ್ನ ಜೀವನದಲ್ಲಿ ಎಲ್ಲೆಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಅಂತ ನನಗೆ ಗೊತ್ತಾಯಿತು. ಉದಾಹರಣೆಗೆ ಬೈಬಲ್‍ನ 1 ಕೊರಿಂಥ 6:10ರಲ್ಲಿ ಒಂದು ಸಲಹೆ ಹೀಗಿದೆ: “ಕಳ್ಳರಾಗಲಿ ಲೋಭಿಗಳಾಗಲಿ ಕುಡುಕರಾಗಲಿ ದೂಷಕರಾಗಲಿ ಸುಲಿಗೆಮಾಡುವವರಾಗಲಿ ಯಾರೂ ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ.” ಈ ವಚನ ಓದಿದಾಗ ‘ನನ್ನದೂ ಒಂದು ಜೀವನನಾ ಛೇ . . .’ ಅಂತ ಅತ್ತೆ. ನಾನು ಸಂಪೂರ್ಣವಾಗಿ ಬದಲಾಗಲೇಬೇಕು ಅಂತ ಆ ಕ್ಷಣದಲ್ಲೇ ತೀರ್ಮಾನಿಸಿದೆ. (ರೋಮನ್ನರಿಗೆ 12:2) ಯಾಕೆಂದರೆ ನನಗೆ ತುಂಬಾ ಕೋಪ ಬರುತ್ತಿತ್ತು. ಕಟುಕನಂತೆ ವರ್ತಿಸುತ್ತಿದ್ದೆ. ಮಾತೆತ್ತಿದರೆ ಸುಳ್ಳು ಹೇಳುತ್ತಿದ್ದೆ.

ಆದರೆ ಯೆಹೋವ ದೇವರು ಕರುಣೆಯುಳ್ಳವನು ಮತ್ತು ಕ್ಷಮಿಸುವ ದೇವರಾಗಿದ್ದಾನೆಂದು ಬೈಬಲಿನಿಂದ ಕಲಿತೆ. (ಯೆಶಾಯ 1:18) ಜೀವನದಲ್ಲಿ ಬದಲಾವಣೆ ಮಾಡಿಕೊಳ್ಳಲು ಸಹಾಯಕ್ಕಾಗಿ ದೇವರಲ್ಲಿ ಪಟ್ಟುಹಿಡಿದು ಪ್ರಾರ್ಥಿಸಿದೆ. ಆತನ ಸಹಾಯದಿಂದ ಒಂದು ಹೊಸ ಜೀವನವನ್ನು ಆರಂಭಿಸಿದೆ. ಅದರಲ್ಲಿ ಮೊದಲನೆಯ ಹೆಜ್ಜೆ ನಾನು ಮತ್ತು ನನ್ನ ಗರ್ಲ್ಫ್ರೆಂಡ್ ಕಾನೂನುಬದ್ಧವಾಗಿ ಮದುವೆಯಾಗಿದ್ದು.

ಬೈಬಲ್‌ ತತ್ವಗಳನ್ನು ಅನ್ವಯಿಸಿದ್ದರಿಂದಲೇ ನಾನು ಇವತ್ತು ಜೀವಂತವಾಗಿದ್ದೇನೆ

ನಾನು ಮದುವೆ ಆದಾಗ ನನ್ನ ವಯಸ್ಸು 24. ಆ ಹೊತ್ತಿಗಾಗಲೇ ನನಗೆ ಮೂರು ಮಕ್ಕಳಿದ್ದರು. ಜೀವನ ನಡೆಸಲು ನ್ಯಾಯವಾದ ಒಂದು ಕೆಲಸ ಹುಡುಕಬೇಕಾಗಿತ್ತು. ಆದರೆ ನಾನು ಜಾಸ್ತಿ ಓದಿರಲ್ಲಿಲ್ಲ. ಅಲ್ಲದೇ ಯಾರ ಶಿಫಾರಸ್ಸು ಇರಲಿಲ್ಲ. ಆಗಲೂ, ಯೆಹೋವನಿಗೆ ಪಟ್ಟುಹಿಡಿದು ಪ್ರಾರ್ಥಿಸಿ ಕೆಲಸ ಹುಡುಕಲು ಹೋದೆ. ‘ನಾನು ಬದಲಾಗಬೇಕು, ನಿಯತ್ತಿನಿಂದ ಕೆಲಸ ಮಾಡಬೇಕು ಅಂತ ನಿರ್ಧಾರ ಮಾಡಿದ್ದೇನೆ’ ಎಂದು ಹೋದ ಕಡೆಯೆಲ್ಲಾ ಹೇಳಿದೆ. ಕೆಲವರ ಹತ್ತಿರ ನಾನು ಬೈಬಲನ್ನು ಕಲಿಯುತ್ತಿದ್ದೀನಿ ಮತ್ತು ಒಬ್ಬ ಒಳ್ಳೆಯ ಪ್ರಜೆಯಾಗಬೇಕೆಂದು ಪ್ರಯತ್ನಿಸುತ್ತಿದ್ದೀನಿ ಅಂತ ಹೇಳಿದೆ. ಆದರೆ ಅನೇಕರು ನನಗೆ ಕೆಲಸ ಕೊಡಲಿಲ್ಲ. ಕೊನೆಗೆ, ಒಬ್ಬ ಮಾಲೀಕನ ಹತ್ತಿರ ನನ್ನ ಜೀವನದ ಕಥೆ ಹೇಳಿದೆ. ಆಗ, “ಯಾಕೋ ಗೊತ್ತಿಲ್ಲ, ನಿನ್ನನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು ಅಂತ ನನಗೆ ಅನಿಸುತ್ತಿದೆ” ಎಂದು ಹೇಳಿ ಆ ಮಾಲೀಕ ನನ್ನನ್ನು ಕೆಲಸಕ್ಕೆ ತೆಗೆದುಕೊಂಡ. ಇದು ನನ್ನ ಪ್ರಾರ್ಥನೆಗೆ ಸಿಕ್ಕ ಉತ್ತರ ಅಂತ ನಾನು ನೆನೆಸುತ್ತೀನಿ. ಸ್ವಲ್ಪದರಲ್ಲೇ, ನಾನು ಮತ್ತು ನನ್ನ ಹೆಂಡತಿ ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿಗಳಾದೆವು.

ಸಿಕ್ಕಿದ ಪ್ರಯೋಜನಗಳು:

ನಾನು ಇವತ್ತು ಜೀವಂತವಾಗಿ ಇದ್ದೀನಿ ಅಂದರೆ ಅದಕ್ಕೆ ಕಾರಣ ಬೈಬಲ್ ಮೂಲತತ್ವಗಳನ್ನು ಅನ್ವಯಿಸಿ ದೇವರು ಇಷ್ಟ ಪಡುವ ರೀತಿಯಲ್ಲಿ ನಡೆದುಕೊಂಡಿದ್ದೇ. ಯೆಹೋವನು ನನ್ನ ತಪ್ಪುಗಳನ್ನು ಕ್ಷಮಿಸಿದ್ದಾನೆಂಬ ಭರವಸೆ ನನಗಿರುವುದರಿಂದ ಒಂದು ಶುದ್ಧ ಮನಸಾಕ್ಷಿ ಇದೆ. ಈಗ ನನ್ನ ಕುಟುಂಬದ ಜೊತೆ ಸಂತೋಷವಾಗಿದ್ದೀನಿ.

ಕಳೆದ 14 ವರ್ಷಗಳಿಂದ ಪ್ರತಿ ತಿಂಗಳು 70 ತಾಸಿನಷ್ಟು ಸಮಯವನ್ನು ದೇವರ ಬಗ್ಗೆ ಇತರ ಜನರಿಗೆ ತಿಳಿಸುವ ಕೆಲಸದಲ್ಲಿ ಕಳೆಯುತ್ತಿದ್ದೀನಿ. ಬೈಬಲ್‍ನಲ್ಲಿರುವ ವಿಷಯಗಳನ್ನು ಇತರರು ಕಲಿಯಲು ನೆರವು ನೀಡುತ್ತಿದ್ದೀನಿ. ಇತ್ತೀಚೆಗೆ ನನ್ನ ಹೆಂಡತಿ ಕೂಡ ಈ ಕೆಲಸದಲ್ಲಿ ಭಾಗಿಯಾದಳು. ಜೊತೆಗೆ ಕಳೆದ 30 ವರ್ಷಗಳಲ್ಲಿ ನನ್ನ ಜೊತೆ ಕೆಲಸ ಮಾಡುವ ಸುಮಾರು 22 ಜನರಿಗೆ ಯೆಹೋವ ದೇವರ ಬಗ್ಗೆ ತಿಳಿಸಿದ್ದೀನಿ. ಅವರು ಕೂಡ ಯೆಹೋವನ ಸಾಕ್ಷಿಗಳಾಗಿರುವುದನ್ನು ನೋಡುವಾಗ ನನಗೆ ತುಂಬಾ ಖುಷಿ ಆಗುತ್ತೆ. ಈಗಲೂ ನಾನು ವ್ಯಾಪಾರ ಮಳಿಗೆಗಳ ಹತ್ತಿರ ಹೋಗುತ್ತೀನಿ ಆದರೆ ನಕಲಿ ವಸ್ತುಗಳನ್ನು ಮಾರೋದಕ್ಕಲ್ಲ, ವಂಚಕರೇ ಇಲ್ಲದಂಥ ಹೊಸ ಲೋಕ ಹತ್ತಿರದಲ್ಲಿದೆ ಅಂತ ತಿಳಿಸೋಕೆ!—ಕೀರ್ತನೆ 37:10, 11. ▪ (w15-E 05/01)