ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ತಿಳಿದಿತ್ತೋ?

ನಿಮಗೆ ತಿಳಿದಿತ್ತೋ?

ಬೈಬಲಿನಲ್ಲಿರುವುದನ್ನು ಭೂಅಗೆತಶಾಸ್ತ್ರ ಒಪ್ಪಿಕೊಳ್ಳುತ್ತದೋ?

ಯೆಶಾಯ 20:1ರಲ್ಲಿ ತಿಳಿಸಲಾಗಿರುವ ಅಸ್ಸೀರಿಯದ ರಾಜ ಎರಡನೇ ಸರ್ಗೋನ

ಬಿಬ್ಲಿಕಲ್‌ ಆರ್ಕಿಯಾಲಜಿ ರಿವ್ಯೂ ಎಂಬ ಪತ್ರಿಕೆಯ ಒಂದು ಲೇಖನ ಬೈಬಲಿನ ಕುರಿತ ಆಸಕ್ತಿಕರ ವಿಷಯವೊಂದನ್ನು ತಿಳಿಸಿತು. ಬೈಬಲಿನ ಹೀಬ್ರು ಶಾಸ್ತ್ರಗಳಲ್ಲಿ [ಹಳೆ ಒಡಂಬಡಿಕೆ] ದಾಖಲಾದ ಸುಮಾರು 50 ಜನರು ನಿಜವಾಗಲೂ ಬದುಕಿದ್ದರು ಎನ್ನುವುದಕ್ಕಿರುವ ಆಧಾರಗಳನ್ನು ಭೂಅಗೆತಶಾಸ್ತ್ರಜ್ಞರು ಕಂಡುಹಿಡಿದಿದ್ದಾರೆ ಎಂದು ಆ ಲೇಖನ ತಿಳಿಸಿತು. ಇದರಲ್ಲಿ ಪ್ರಸಿದ್ಧ ರಾಜರಾದ ದಾವೀದ, ಹಿಜ್ಕೀಯ ಮತ್ತು ಪ್ರಸಿದ್ಧರಲ್ಲದ ಮೆನಹೇಮ, ಪೆಕಹರಂತಹ ಯೆಹೂದ ಮತ್ತು ಇಸ್ರಾಯೇಲಿನ 14 ರಾಜರ ಆಧಾರಗಳೂ ಸೇರಿವೆ. ಸಿಕ್ಕಿರುವ ಈ ಆಧಾರಗಳ ಪಟ್ಟಿಯಲ್ಲಿ 5 ಫರೋಹರ ಮತ್ತು ಅಸ್ಸೀರಿಯ, ಬ್ಯಾಬಿಲೋನಿಯ, ಮೋವಾಬ್, ಪರ್ಷಿಯಾ ಮತ್ತು ಸಿರಿಯಾದ 19 ರಾಜರ ಮಾಹಿತಿಯೂ ಇದೆ. ಕೇವಲ ರಾಜರ ಬಗ್ಗೆ ಮಾತ್ರವೇ ಅಲ್ಲ, ಬೈಬಲಿನಲ್ಲಿ ಹೇಳಿರುವ ಮಹಾ ಯಾಜಕರ, ಶಾಸ್ತ್ರಿಗಳ ಮತ್ತು ಇತರ ಅಧಿಕಾರಿಗಳ ಮಾಹಿತಿಯೂ ನಿಖರವಾಗಿದೆ ಎನ್ನುವುದಕ್ಕೆ ಆಧಾರಗಳೂ ಸಿಕ್ಕಿವೆ.

ಮೇಲೆ ತಿಳಿಸಲಾದ ವ್ಯಕ್ತಿಗಳನ್ನು ಗುರುತಿಸಲು ಬಲವಾದ ಆಧಾರಗಳು ಸಿಕ್ಕಿವೆ ಎಂದು ತಜ್ಞರು ಒಪ್ಪಿಕೊಂಡಿದ್ದಾರೆ ಎಂದು ಆ ಲೇಖನ ತಿಳಿಸಿತು. ಗ್ರೀಕ್‌ ಶಾಸ್ತ್ರದಲ್ಲಿ [ಹೊಸ ಒಡಂಬಡಿಕೆ] ದಾಖಲಾಗಿರುವ ವ್ಯಕ್ತಿಗಳು ಸಹ ನಿಜವಾಗಿಯೂ ಇದ್ದರು ಎನ್ನುವುದಕ್ಕೆ ಆಧಾರಗಳು ಸಿಕ್ಕಿವೆ. ಅವರು ಯಾರೆಂದರೆ ಹೆರೋದ, ಪೊಂತ್ಯ ಪಿಲಾತ, ತಿಬೇರಿಯ, ಕಾಯಫ ಮತ್ತು ಸೆರ್ಗ್ಯ ಪೌಲ ಮತ್ತು ಇನ್ನಿತರರು.

ಬೈಬಲಿನಲ್ಲಿ ತಿಳಿಸಲಾಗಿರುವ ದೇಶಗಳಲ್ಲಿ ಸಿಂಹಗಳು ಅಳಿದು ಹೋದದ್ದು ಯಾವಾಗ?

ಪುರಾತನ ಬ್ಯಾಬಿಲೋನಿನ ಸಿಂಹದ ಚಿತ್ರ

ಬೈಬಲಿನಲ್ಲಿ ತಿಳಿಸಲಾಗಿರುವ ಪವಿತ್ರ ದೇಶಗಳಲ್ಲಿ ಈಗ ಸಿಂಹಗಳು ಇಲ್ಲ, ಆದರೆ ಬೈಬಲ್‍ನಲ್ಲಿ ಸುಮಾರು 150 ಬಾರಿ ಸಿಂಹಗಳ ಬಗ್ಗೆ ಪ್ರಸ್ತಾಪವಿದೆ. ಇದರಿಂದ ಆ ದೇಶಗಳಲ್ಲಿ ಸಿಂಹಗಳು ಇದ್ದವು ಮತ್ತು ಅವು ಬೈಬಲ್‌ ಲೇಖಕರಿಗೆ ಚಿರಪರಿಚಿತವಾಗಿದ್ದವು ಎಂದು ಗೊತ್ತಾಗುತ್ತದೆ. ಬೈಬಲಿನಲ್ಲಿ ಅದರ ಬಗ್ಗೆ ಹೆಚ್ಚಾಗಿ ಸಾಂಕೇತಿಕವಾಗಿ ಹೇಳಲಾಗಿದೆ. ದಾವೀದ, ಸಂಸೋನ ಮತ್ತು ಬೆನಾಯರಂತಹ ಕೆಲವರು ಅವುಗಳನ್ನು ಕೊಂದಂಥ ನಿಜ ಘಟನೆಗಳ ಬಗ್ಗೆಯೂ ಬೈಬಲಿನಲ್ಲಿ ತಿಳಿಸಲಾಗಿದೆ. (ನ್ಯಾಯಸ್ಥಾಪಕರು 14:5, 6; 1 ಸಮುವೇಲ 17:34, 35; 2 ಸಮುವೇಲ 23:20) ಇನ್ನು ಕೆಲವೊಮ್ಮೆ ಸಿಂಹವೇ ಜನರನ್ನು ಕೊಂದದ್ದರ ಬಗೆಗಿನ ಪ್ರಸ್ತಾಪವೂ ಇದೆ.—1 ಅರಸುಗಳು 13:24; 2 ಅರಸುಗಳು 17:25.

ಪುರಾತನ ಕಾಲಗಳಲ್ಲಿ ಏಷ್ಯಾ ಮೈನರ್‌, ಗ್ರೀಸ್‌, ಪ್ಯಾಲೆಸ್ಟೈನ್‌, ಸಿರಿಯಾ, ಮೆಸಪೊಟೇಮಿಯ ಮತ್ತು ಭಾರತದ ಕೆಲವು ಭಾಗಗಳಲ್ಲಿ ಸಿಂಹಗಳು (ಪ್ಯಾ೦ಥೆರ ಲಿಯೋ ಪರ್ಸಿಕಾ) ಕಂಡುಬರುತ್ತಿದ್ದವು. ಈ ಪ್ರಾಣಿಯನ್ನು ಕೆಲವೊಂದು ಚಿತ್ರಗಳಲ್ಲಿ ಭಯಾನಕವಾಗಿ, ಇನ್ನು ಕೆಲವೊಂದರಲ್ಲಿ ಭಕ್ತಿಪೂರ್ವಕವಾಗಿ ಚಿತ್ರಿಸಲಾಗುತ್ತಿತ್ತು. ಸಿಂಹದ ಮನಮೋಹಕ ಕೆತ್ತನೆಗಳನ್ನು ಬ್ಯಾಬಿಲೋನಿನ ಮೆರವಣಿಗೆಯ ಬೀದಿಯುದ್ದಕ್ಕೂ ಕಾಣಬಹುದಿತ್ತು.

ಕ್ರಿ.ಪೂ. 12ನೇ ಶತಮಾನದಷ್ಟಕ್ಕೆ ಪ್ಯಾಲೆಸ್ಟೈನ್‍ನಲ್ಲಿ ಕ್ರೂಸೇಡರ್‌ಗಳು [ಧಾರ್ಮಿಕ ಯುದ್ಧದಲ್ಲಿದ್ದ ಸೈನಿಕರು] ಸಿಂಹವನ್ನು ಹೆಚ್ಚಾಗಿ ಬೇಟೆಯಾಡಲು ಆರಂಭಿಸಿದರು. ಆದ್ದರಿಂದ 13ನೇ ಶತಮಾನದಷ್ಟಕ್ಕೆ ಸಿಂಹಗಳು ಆ ಪ್ರದೇಶದಲ್ಲಿ ಅಳಿದು ಹೋದವು. ಆದರೆ 19ನೇ ಶತಮಾನದವರೆಗೂ ಅವು ಮೆಸಪೊಟೋಮಿಯ ಮತ್ತು ಸಿರಿಯಾದಲ್ಲಿ ಇದ್ದವು ಎಂಬ ವರದಿಯಿದೆ. ಇರಾಕ್‌ ಮತ್ತು ಇರಾನ್‍ನಲ್ಲಿ 20ನೇ ಶತಮಾನದ ಆರಂಭದವರೆಗೂ ಈ ಪ್ರಾಣಿಗಳು ಇದ್ದವು ಎಂಬ ವರದಿಯಿದೆ. ▪ (w15-E 05/01)