ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಮುಖಪುಟ ಲೇಖನ | ಅಂತ್ಯ ಹತ್ತಿರವಿದೆಯಾ?

ಅಂತ್ಯ ಹತ್ತಿರವಿದೆಯಾ?

ಅಂತ್ಯ ಹತ್ತಿರವಿದೆಯಾ?

ಜನರ ದಬ್ಬಾಳಿಕೆ-ದೌರ್ಜನ್ಯಗಳನ್ನು ಮತ್ತು ಅವರಿಂದಾಗಿ ಇಡೀ ಮಾನವಕುಲದ ಭವಿಷ್ಯ ಅಪಾಯದಲ್ಲಿರುವುದನ್ನು ನೋಡಿ ದೇವರು ಸುಮ್ಮನಿರುತ್ತಾನಾ? ಖಂಡಿತ ಇಲ್ಲ. ನಾವು ಹಿಂದಿನ ಲೇಖನದಲ್ಲಿ ನೋಡಿದ ಹಾಗೆ, ಮಾನವರು ಅನುಭವಿಸುತ್ತಿರುವ ಕಷ್ಟ, ಅನ್ಯಾಯವನ್ನು ದೇವರು ಸಂಪೂರ್ಣವಾಗಿ ತೆಗೆದುಹಾಕುತ್ತಾನೆ. ಆ ಸಮಯವೇನು ದೂರದಲ್ಲಿಲ್ಲ, ತುಂಬ ಹತ್ತಿರದಲ್ಲಿದೆ. ಇದನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು ಅನ್ನುವುದೇ ಆತನ ಆಸೆ. ಕಾರಣ, ಆತನೇ ನಮ್ಮನ್ನೂ ಈ ಭೂಮಿಯನ್ನೂ ಸೃಷ್ಟಿ ಮಾಡಿದವನು. ಆದರೆ ಆ ಸಮಯ ಹತ್ತಿರದಲ್ಲೇ ಇದೆ ಅಂತ ಆತನು ಹೇಗೆ ತಿಳಿಸಿದ್ದಾನೆ?

ಇದನ್ನು ತಿಳಿದುಕೊಳ್ಳಲು ಒಂದು ಉದಾಹರಣೆಯನ್ನು ನೋಡೋಣ. ನಿಮಗೆ ಗೊತ್ತಿಲ್ಲದಿರೋ ಒಂದು ಸ್ಥಳಕ್ಕೆ ನೀವು ಪ್ರಯಾಣಿಸಬೇಕು ಅಂತಿದ್ದೀರಿ ಎಂದಿಟ್ಟುಕೊಳ್ಳಿ. ಆಗ ನೀವು ಯಾವ ಬಸ್ಸಲ್ಲಿ ಹೋಗಬೇಕು, ಅದು ಎಲ್ಲಿ ಸಿಗುತ್ತೆ ಅಂತ ಯಾರನ್ನಾದರೂ ಕೇಳುತ್ತೀರಿ. ನೀವು ಹೋಗುತ್ತಿರುವ ದಾರಿ ಸರಿಯಾಗಿದೆಯಾ ಅಂತ ಕಂಡುಹಿಡಿಯಲಿಕ್ಕೆ ಕೆಲವೊಂದು ಗುರುತುಗಳನ್ನು ಕೇಳಿ ತಿಳಿದುಕೊಳ್ಳುತ್ತೀರಿ. ಈ ಗುರುತುಗಳನ್ನು ದಾರಿಯಲ್ಲಿ ಒಂದೊಂದಾಗಿ ನೋಡುವಾಗ, ನೀವು ಆ ಸ್ಥಳದ ಹತ್ತಿರಕ್ಕೆ ಬಂದಿದ್ದೀರಿ ಎಂದು ತಿಳಿಯುತ್ತದೆ. ಅದೇ ರೀತಿ, ಅಂತ್ಯ ಹತ್ತಿರದಲ್ಲಿರುವಾಗ ಏನೆಲ್ಲ ಆಗುತ್ತೆ ಅಂತ ಕೆಲವು ಗುರುತುಗಳನ್ನು ದೇವರು ತನ್ನ ವಾಕ್ಯವಾದ ಬೈಬಲಿನಲ್ಲಿ ಕೊಟ್ಟಿದ್ದಾನೆ. ಆ ಗುರುತುಗಳನ್ನು ನೋಡುವಾಗ ಅಂತ್ಯ ಹತ್ತಿರದಲ್ಲೇ ಇದೆ ಎಂದು ನಾವು ತಿಳಿದುಕೊಳ್ಳಬಹುದು.

ಬೈಬಲ್‌ ಒಂದು ಪ್ರಾಮುಖ್ಯ ಸಮಯಾವಧಿಯ ಕುರಿತು ತಿಳಿಸುತ್ತಾ, ಆ ಅವಧಿಯ ಕೊನೆಯಲ್ಲಿ ‘ಅಂತ್ಯ’ ಬರುತ್ತದೆ ಎಂದು ಹೇಳುತ್ತದೆ. ಆ ಸಮಯಾವಧಿಯನ್ನು ಗುರುತಿಸಲು ಸಾಧ್ಯವಾಗುವಂತೆ ಮಾನವ ಇತಿಹಾಸದಲ್ಲಿ ಎಂದೂ ಕಂಡು-ಕೇಳಿರದಂಥ ಕೆಲವು ಘಟನೆಗಳು ಮತ್ತು ಪರಿಸ್ಥಿತಿಯ ಬಗ್ಗೆ ಬೈಬಲಿನಲ್ಲಿ ಕೊಡಲಾಗಿದೆ. ಅವುಗಳಲ್ಲಿ ಕೆಲವನ್ನು ನಾವು ಈಗ ನೋಡೋಣ.

1. ಹದಗೆಡುತ್ತಿರುವ ಪರಿಸ್ಥಿತಿ: ಅಂತ್ಯ ಇನ್ನೇನು ಹತ್ತಿರದಲ್ಲಿದೆ ಎನ್ನುವಾಗ ನಡೆಯುವ ಕೆಲವೊಂದು ಘಟನೆಗಳ ಬಗ್ಗೆ ಬೈಬಲಿನ ಮತ್ತಾಯ ಪುಸ್ತಕದ 24ನೇ ಅಧ್ಯಾಯ ತಿಳಿಸುತ್ತದೆ. (ವಚನ 3) ಅವು ಯಾವುವೆಂದರೆ, ಯುದ್ಧಗಳು, ಆಹಾರದ ಅಭಾವ, ಭೂಕಂಪಗಳು, ಅತಿಯಾದ ಅನ್ಯಾಯ, ಪ್ರೀತಿ ಇಲ್ಲದಿರುವುದು ಮತ್ತು ಧರ್ಮ ಗುರುಗಳು ಜನರನ್ನು ಮೋಸದಿಂದ ತಪ್ಪುದಾರಿಗೆ ನಡೆಸುವುದು ಮುಂತಾದವು. (ವಚನ 6-26) ಈ ಎಲ್ಲಾ ವಿಷಯಗಳು ಶತಮಾನಗಳಿಂದ ನಡೆಯುತ್ತಾ ಇದ್ದರೂ ಆಗ ಅವು ಅಪರೂಪವಾಗಿದ್ದವು. ಆದರೆ, ಇತ್ತೀಚಿಗಿನ ವರ್ಷಗಳಲ್ಲಿ ಅವು ತೀರ ಮಾಮೂಲಿಯಾಗಿ ಬಿಟ್ಟಿವೆ. ಇದರಿಂದ, ಅಂತ್ಯ ತುಂಬ ಹತ್ತಿರದಲ್ಲಿದೆ ಎಂದು ನಮಗೆ ತಿಳಿಯುತ್ತದೆ. (ವಚನ 14) ಮೇಲೆ ತಿಳಿಸಲಾದ ಘಟನೆಗಳಷ್ಟೇ ಅಲ್ಲದೆ ಮುಂದೆ ತಿಳಿಸಲಾದ ಇನ್ನೂ ಮೂರು ವಿಷಯಗಳು ಇದೇ ಸಮಯದಲ್ಲಿ ನಡೆಯುತ್ತವೆ.

2. ಕೀಳ್ಮಟ್ಟಕ್ಕೆ ಇಳಿಯುತ್ತಿರುವ ಜನರು: ಅಂತ್ಯಕ್ಕೆ ಮುಂಚೆ ಇರುವ ಸಮಯಾವಧಿಯನ್ನು ‘ಕಡೇ ದಿವಸಗಳು’ ಎಂದು ಬೈಬಲ್‌ತಿಳಿಸುತ್ತದೆ. ಆ ದಿವಸಗಳಲ್ಲಿ ಜನರು ಎಷ್ಟು ಕೀಳ್ಮಟ್ಟಕ್ಕೆ ಇಳಿಯುತ್ತಾರೆಂದು ಬೈಬಲಿನಲ್ಲಿ ಹೀಗೆ ವಿವರಿಸಲಾಗಿದೆ: “ಜನರು ಸ್ವಪ್ರೇಮಿಗಳೂ ಹಣಪ್ರೇಮಿಗಳೂ ಸ್ವಪ್ರತಿಷ್ಠೆಯುಳ್ಳವರೂ ಅಹಂಕಾರಿಗಳೂ ದೇವದೂಷಕರೂ ಹೆತ್ತವರಿಗೆ ಅವಿಧೇಯರೂ ಕೃತಜ್ಞತೆಯಿಲ್ಲದವರೂ ನಿಷ್ಠೆಯಿಲ್ಲದವರೂ ಸ್ವಾಭಾವಿಕ ಮಮತೆಯಿಲ್ಲದವರೂ ಯಾವುದೇ ಒಪ್ಪಂದಕ್ಕೆ ಸಿದ್ಧರಿಲ್ಲದವರೂ ಮಿಥ್ಯಾಪವಾದಿಗಳೂ ಸ್ವನಿಯಂತ್ರಣವಿಲ್ಲದವರೂ ಉಗ್ರರೂ ಒಳ್ಳೇತನವನ್ನು ಪ್ರೀತಿಸದವರೂ ದ್ರೋಹಿಗಳೂ ಹಟಮಾರಿಗಳೂ ಹೆಮ್ಮೆಯಿಂದ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸುವ ಬದಲು ಭೋಗವನ್ನು ಪ್ರೀತಿಸುವವರೂ” ಆಗಿರುವರು. (2 ತಿಮೊಥೆಯ 3:1-4) ಇತರರ ಕಡೆಗೆ ಗೌರವ ತೋರಿಸದೇ ಇರುವುದು ಇತ್ತೀಚೆಗೆ ನಡೆಯುತ್ತಿರುವುದೇನಲ್ಲ. ಅನೇಕ ಶತಮಾನಗಳಿಂದ ಜನರಲ್ಲಿ ಈ ಕೆಟ್ಟ ಗುಣ ಇದೆ. ಆದರೆ ‘ಕಡೇ ದಿವಸಗಳಲ್ಲಾದರೋ’ ಎಲ್ಲಿ ನೋಡಿದರೂ ಇಂಥ ಸ್ವಭಾವದವರೇ ಸಿಗುತ್ತಾರೆ. ಆದ್ದರಿಂದಲೇ ಬೈಬಲ್‌ ಈ ಸಮಯವನ್ನು “ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳು” ಎಂದು ಕರೆಯುತ್ತದೆ. ನೀವು ಸಹ ನಿಮ್ಮ ಸುತ್ತಮುತ್ತಲಿನ ಜನರಲ್ಲಿ ಇಂಥ ಸ್ವಭಾವವನ್ನೇ ನೋಡುತ್ತೀರಲ್ವಾ?

3. ಹಾಳಾಗುತ್ತಿರುವ ಭೂಮಿ: ದೇವರು ‘ಭೂಮಿಯನ್ನು ಹಾಳು ಮಾಡುತ್ತಿರುವವರನ್ನು ನಾಶ ಮಾಡುತ್ತಾನೆ’ ಎಂದು ಬೈಬಲ್‌ ಹೇಳುತ್ತದೆ. (ಪ್ರಕಟನೆ 11:18) ಜನರು ಭೂಮಿಯನ್ನು ಯಾವೆಲ್ಲಾ ವಿಧಗಳಲ್ಲಿ ಹಾಳು ಮಾಡುತ್ತಿದ್ದಾರೆ? ಇದನ್ನು ಅರ್ಥ ಮಾಡಿಕೊಳ್ಳಲು ನೋಹನ ಸಮಯದಲ್ಲಿ ಏನು ನಡೆಯಿತೆಂದು ನೋಡೋಣ. ಆ ದಿನಗಳ ಬಗ್ಗೆ ಬೈಬಲ್‌ಈ ರೀತಿ ವರ್ಣಿಸುತ್ತದೆ: “ಭೂಲೋಕದವರು ದೇವರ ದೃಷ್ಟಿಯಲ್ಲಿ ಕೆಟ್ಟುಹೋಗಿದ್ದರು; ಹಿಂಸೆಯು ಲೋಕವನ್ನು ತುಂಬಿಕೊಂಡಿತ್ತು. ದೇವರು ಭೂಮಿಯನ್ನು ನೋಡಲಾಗಿ ಅದು ಕೆಟ್ಟುಹೋದದ್ದಾಗಿತ್ತು;” ಆದ್ದರಿಂದ ಆ ಭ್ರಷ್ಟ ಸಮಾಜವನ್ನು ನೋಡುತ್ತಾ ದೇವರು, “ನಾನು ಅವರನ್ನು ಅಳಿಸಿಬಿಡುತ್ತೇನೆ” ಎಂದು ಹೇಳಿದನು. (ಆದಿಕಾಂಡ 6:11-13) ಇವತ್ತಿನ ದಿನಗಳಲ್ಲಿಯೂ ಭೂಮಿ ಹಿಂಸಾಚಾರದಲ್ಲಿ ಮುಳುಗಿ ಹೋಗಿದೆ ಅಂತ ನಿಮಗೆ ಅನಿಸುವುದಿಲ್ವಾ? ಈಗಿನ ಜನರು ಹಿಂಸೆಯಲ್ಲಿ ಎಷ್ಟು ಮುಳುಗಿ ಹೋಗಿದ್ದಾರೆಂದರೆ ಇಡೀ ಮಾನವಕುಲವನ್ನೇ ಸಂಪೂರ್ಣವಾಗಿ ಅಳಿಸಿಹಾಕಬಲ್ಲ ಬಾಂಬುಗಳನ್ನು,  ಧ್ವಂಸಕಾರಕ ಆಯುಧಗಳನ್ನು ತಯಾರಿಸಿದ್ದಾರೆ. ಹೀಗೆ ಅವರು ಭೂಮಿಯನ್ನು ಯಾವುದೇ ಕ್ಷಣದಲ್ಲಿ ನಾಶ ಮಾಡುವಂಥ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಭೂಮಿ ಇನ್ನೊಂದು ವಿಧದಲ್ಲೂ ಹಾಳಾಗಿದೆ. ಮಾನವರ ದುರ್ಬಳಕೆಯಿಂದಾಗಿ ಶುದ್ಧ ಗಾಳಿ ಇಲ್ಲ, ಪ್ರಾಣಿ ಮತ್ತು ಸಸ್ಯಗಳು ನಾಶವಾಗುತ್ತಿವೆ, ಸಾಗರಗಳು ಕಲುಷಿತವಾಗುತ್ತಿವೆ. ಹೀಗೆ ಜೀವನ ಸಾಗಿಸಲು ಅವಶ್ಯವಾದ ವಿಷಯಗಳನ್ನು ಎಷ್ಟರ ಮಟ್ಟಿಗೆ ಕಲುಷಿತ ಮಾಡಿದ್ದಾರೆಂದರೆ ಅದನ್ನು ಪುನಃ ಸರಿಮಾಡಲು ಅವರಿಗೆ ಸಾಧ್ಯನೇ ಇಲ್ಲ.

ಒಂದು ಶತಮಾನದ ಹಿಂದೆ ಇಡೀ ಮಾನವಕುಲವನ್ನೇ ನಾಶಮಾಡುವ ಸಾಮರ್ಥ್ಯ ಮನುಷ್ಯರಿಗಿತ್ತಾ? ಇರಲಿಲ್ಲ. ಆದರೆ ಈಗ ಮನುಷ್ಯರು ಹೊಸ ಹೊಸ ಶಸ್ತ್ರಾಸ್ತ್ರಗಳನ್ನು ಕಂಡುಹಿಡಿಯುವ ಮೂಲಕ ಮತ್ತು ಪರಿಸರವನ್ನು ಹಾಳು ಮಾಡುವ ಮೂಲಕ ಈ ಸಾಮರ್ಥ್ಯವನ್ನು ಪಡೆದಿದ್ದಾರೆ. ‘ನಾವು ಮಾಡುತ್ತಿರುವ ಕೆಲಸಗಳಿಂದ ಭೂಮಿ ಹಾಳಾಗುತ್ತಿರುವುದೇನೋ ನಿಜ. ಆದರೆ ಪ್ರಗತಿಯಾಗುತ್ತಿರುವ ತಂತ್ರಜ್ಞಾನದ ಸಹಾಯದಿಂದ ಭೂಮಿ ಹಾಳಾಗದಂತೆ ತಡೆಯಬಹುದು’ ಎನ್ನುವುದು ಅವರ ಅನಿಸಿಕೆ. ನಿಜ ಏನೆಂದರೆ, ಭೂಮಿಯ ಮೇಲೆ ಮನುಷ್ಯರಿಗೆ ಹಿಡಿತವೂ ಇಲ್ಲ, ಅದು ಹೇಗಿರಬೇಕೆಂದು ನಿರ್ಣಯಿಸುವ ಅಧಿಕಾರವೂ ಇಲ್ಲ. ಈ ಭೂಮಿಯಲ್ಲಿರುವ ಎಲ್ಲಾ ಜೀವಿಗಳು ನಾಶವಾಗುವ ಮೊದಲೇ ದೇವರು ಮಧ್ಯೆ ಪ್ರವೇಶಿಸಿ, ಭೂಮಿಯನ್ನು ನಾಶ ಮಾಡುವವರನ್ನು ನಾಶ ಮಾಡುತ್ತಾನೆ. ಇದು ಸ್ವತಃ ದೇವರೇ ಕೊಟ್ಟ ಮಾತು.

4. ಲೋಕದೆಲ್ಲೆಡೆ ನಡೆಯುತ್ತಿರುವ ಸಾರುವ ಕೆಲಸ: “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು” ಎಂದು ಬೈಬಲ್‌ ಹೇಳುತ್ತದೆ. (ಮತ್ತಾಯ 24:14) ಇದರರ್ಥ, ಅಂತ್ಯ ಹತ್ತಿರವಾಗಿರುವ ಸಮಯದಲ್ಲಿ ಸಾರುವ ಕೆಲಸ ಇಡೀ ಭೂಮಿಯಲ್ಲಿ ನಡೆಯುತ್ತದೆ. ಆದರೆ, ಅನೇಕ ಶತಮಾನಗಳಿಂದ ನಡೆಯುತ್ತಿರುವ ಬಲವಂತದ ಮತಾಂತರಕ್ಕೂ ಈ ಸಾರುವ ಕೆಲಸಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಅಷ್ಟಕ್ಕೂ ಯಾವ ವಿಷಯದ ಬಗ್ಗೆ ಸಾರಲಾಗುತ್ತದೆ? ದೇವರು ತರುವ ಹೊಸ ಸರಕಾರದ ಬಗ್ಗೆ ಸಾರಲಾಗುತ್ತದೆ. ಈ ವಿಷಯದ ಬಗ್ಗೆ ಯಾವುದಾದರೊಂದು ಧಾರ್ಮಿಕ ಗುಂಪು ಭೂಮಿಯಾದ್ಯಂತ ಸಾರುತ್ತಿರುವುದನ್ನು ನೀವು ನೋಡಿದ್ದೀರಾ?

ಭೂವ್ಯಾಪಕವಾಗಿ ದೇವರ ರಾಜ್ಯದ ಕುರಿತು ನೂರಾರು ಭಾಷೆಗಳಲ್ಲಿ ಸಾರಲಾಗುತ್ತಿದೆ

www.jw.org ವೆಬ್‌ಸೈಟ್‌ ಮುಖ್ಯವಾಗಿ ‘ರಾಜ್ಯದ ಸುವಾರ್ತೆಯ’ ಬಗ್ಗೆ ತಿಳಿಸುತ್ತದೆ. ಈ ವೆಬ್‌ಸೈಟ್‍ನಲ್ಲಿ ರಾಜ್ಯದ ಸುವಾರ್ತೆಯ ಬಗ್ಗೆ 700ಕ್ಕೂ ಹೆಚ್ಚಿನ ಭಾಷೆಗಳಲ್ಲಿ ಮಾಹಿತಿ ಇದೆ. ಬೇರೆ ಯಾರಾದರೂ ಇಷ್ಟೊಂದು ವ್ಯಾಪಕವಾಗಿ ರಾಜ್ಯದ ಸುವಾರ್ತೆಯ ಕುರಿತು ತಿಳಿಸುತ್ತಿದ್ದಾರಾ? ಇಂಟರ್‌ನೆಟ್‌ ಕಂಡುಹಿಡಿಯುವ ಎಷ್ಟೋ ವರ್ಷಗಳ ಮುಂಚಿನಿಂದ ದೇವರ ರಾಜ್ಯದ ಸುವಾರ್ತೆಯನ್ನು ಎಲ್ಲಾ ಕಡೆಗಳಲ್ಲಿ ಸಾರಲು ಯೆಹೋವನ ಸಾಕ್ಷಿಗಳು ಪ್ರಯಾಸ ಪಡುತ್ತಿದ್ದಾರೆ. ಇದನ್ನು ಇತರ ಜನರು ಸಹ ಗುರುತಿಸಿದ್ದಾರೆ. ಅಷ್ಟೇ ಅಲ್ಲದೆ, ಅವರು ಪ್ರಕಾಶಿಸುತ್ತಿರುವ ಈ ಕಾವಲಿನಬುರುಜು ಪತ್ರಿಕೆಯ ಮುಖ್ಯ ಉದ್ದೇಶವೇ ಯೆಹೋವನ ರಾಜ್ಯವನ್ನು ಪ್ರಕಟಿಸುವುದಾಗಿದೆ. 1939ರಿಂದ ಇದನ್ನೇ ಈ ಪತ್ರಿಕೆಯ ಮುಖಪುಟದಲ್ಲಿ ಮುದ್ರಿಸಲಾಗಿದೆ. ಧರ್ಮಗಳ ಕುರಿತು ಬರೆಯಲಾದ ಒಂದು ಪುಸ್ತಕ ಯೆಹೋವನ ಸಾಕ್ಷಿಗಳ ಬಗ್ಗೆ, ‘ಅವರಷ್ಟು ವ್ಯಾಪಕವಾಗಿ ಸಾರುವ ಕೆಲಸವನ್ನು ಬೇರೆ ಯಾರೂ ಮಾಡುತ್ತಿಲ್ಲ’ ಎಂದು ತಿಳಿಸಿತು.

ಇತಿಹಾಸದಲ್ಲೇ ಅತಿ ಪ್ರಾಮುಖ್ಯ ಘಟ್ಟ

ಮೇಲೆ ತಿಳಿಸಲಾದ ನಾಲ್ಕು ವಿಷಯಗಳು ನಿಮ್ಮ ಕಣ್ಣೆದುರೇ ನಡೆಯುತ್ತಿರುವುದನ್ನು ಗಮನಿಸಿದ್ದೀರಾ? ಅನೇಕ ವರ್ಷಗಳಿಂದ ಈ ಕಾವಲಿನಬುರುಜು ಪತ್ರಿಕೆ ಪ್ರಪಂಚದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಜನರಿಗೆ ಮಾಹಿತಿಯನ್ನು ಕೊಡುತ್ತಿದೆ. ಹೀಗೆ ಅಂತ್ಯ ಹತ್ತಿರದಲ್ಲಿದೆ  ಎಂದು ಸ್ವತಃ ಆಲೋಚಿಸಿ ನೋಡಲು, ಅರ್ಥ ಮಾಡಿಕೊಳ್ಳಲು ಜನರಿಗೆ ಸಹಾಯ ಮಾಡುತ್ತಿದೆ. ಆದರೆ ಕೆಲವು ಜನರು ಬೈಬಲ್‌ ತಿಳಿಸುವ ಅಂಶಗಳು ಮನುಷ್ಯರ ಸ್ವಂತ ವಿಷಯಗಳು ಎಂದೂ, ಆದ್ದರಿಂದ ಅವು ನಿಜವಾಗಿರಲು ಸಾಧ್ಯವಿಲ್ಲವೆಂದೂ ಹೇಳುತ್ತಾರೆ. ಅಷ್ಟೇ ಅಲ್ಲದೆ, ಈಗಿನ ಸಮಯದಲ್ಲಿ ಭೂಮಿಯ ಎಲ್ಲಾ ಕಡೆಗಳಲ್ಲಿ ನಡೆಯುತ್ತಿರುವ ವಿಷಯಗಳ ಮಾಹಿತಿ ಸಿಗುವುದರಿಂದ ಈ ಲೋಕದ ಪರಿಸ್ಥಿತಿ ಕೀಳ್ಮಟ್ಟಕ್ಕೆ ಇಳಿದಿದೆ ಅಂತ ಅನಿಸುವುದಾದರೂ ಅದು ನಿಜ ಅಲ್ಲ ಎಂದು ಹೇಳುತ್ತಾರೆ. ಅವರೇನೇ ಹೇಳಿದರೂ, ಮಾನವಕುಲದ ಇತಿಹಾಸದಲ್ಲೇ ಒಂದು ವಿಶೇಷ ಘಟ್ಟದ ಕೊನೆಯಲ್ಲಿದ್ದೇವೆ ಎನ್ನಲು ಸಾಕಷ್ಟು ಆಧಾರಗಳಿವೆ.

ಈ ಭೂಮಿಗೆ ಬಲು ಬೇಗನೇ ಕೆಲವು ಪ್ರಾಮುಖ್ಯವಾದ ಬದಲಾವಣೆಗಳು ಆಗಲಿವೆ ಎಂದು ಕೆಲವು ವಿದ್ವಾಂಸರು ಭಾವಿಸುತ್ತಾರೆ. ಉದಾಹರಣೆಗೆ, 2014ರಲ್ಲಿ ಕೆಲವು ವಿಜ್ಞಾನಿಗಳು ಮಾನವಕುಲದ ಉಳಿವಿಗೆ ಬಂದಿರುವ ಅಪಾಯದ ಕುರಿತು ಹೀಗೆ ವರದಿಸಿದರು: “ಮಾನವಕುಲಕ್ಕೆ ತಂತ್ರಜ್ಞಾನದಿಂದ ಅನಿರೀಕ್ಷಿತವಾಗಿ ಅಪಾಯ ಬರುವ ಸಾಧ್ಯತೆ ತುಂಬ ಹೆಚ್ಚಿದೆ ಎಂದು ಪರಿಶೀಲನೆಯಿಂದ ತಿಳಿದುಬಂದಿದೆ.” ನಾವು ಇತಿಹಾಸದಲ್ಲೇ ಅತಿ ಪ್ರಾಮುಖ್ಯ ಘಟ್ಟದ ಕೊನೆಯನ್ನು ತಲುಪಿದ್ದೇವೆ ಎಂದು ಇದರಿಂದ ತಿಳಿದುಬರುತ್ತದೆ. ನಾವು ಈಗ ಜೀವಿಸುತ್ತಿರುವ ಸಮಯವೇ ಕಡೇ ದಿವಸಗಳು ಮತ್ತು ಅಂತ್ಯ ಹತ್ತಿರದಲ್ಲಿದೆ ಎನ್ನುವುದರಲ್ಲಿ ಈ ಪತ್ರಿಕೆಯ ಪ್ರಕಾಶಕರಿಗೆ ಮತ್ತು ಇದರ ಅನೇಕ ಓದುಗರಿಗೆ ಯಾವುದೇ ಸಂಶಯವಿಲ್ಲ. ಆದರೆ ನೀವು ಈ ಅಂತ್ಯದ ಬಗ್ಗೆ ಭಯಪಡುವ ಅಗತ್ಯ ಇಲ್ಲ, ಅದರ ನಂತರ ಬರುವ ಪರಿಸ್ಥಿತಿಯನ್ನು ನೆನಸಿ ಸಂತೋಷಿಸಿ. ಯಾಕೆಂದರೆ ನೀವು ಸಹ ಈ ಅಂತ್ಯ ಬಂದಾಗ ಪಾರಾಗಬಲ್ಲಿರಿ. ಅದು ಹೇಗೆ ಸಾಧ್ಯ ಎಂದು ತಿಳಿಯಲು ಮುಂದೆ ಓದಿ. (w15-E 05/01)