ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

1 ಬೈಬಲ್‌ನಲ್ಲಿ ಭರವಸೆ ಕಟ್ಟಿರಿ

1 ಬೈಬಲ್‌ನಲ್ಲಿ ಭರವಸೆ ಕಟ್ಟಿರಿ

1 ಬೈಬಲ್‌ನಲ್ಲಿ ಭರವಸೆ ಕಟ್ಟಿರಿ

“ಇಡೀ ಶಾಸ್ತ್ರಗ್ರಂಥವು ದೇವರಿಂದ ಪ್ರೇರಿತವಾಗಿದೆ ಮತ್ತು ಬೋಧಿಸುವುದಕ್ಕೂ ಖಂಡಿಸುವುದಕ್ಕೂ ವಿಷಯಗಳನ್ನು ಸರಿಪಡಿಸುವುದಕ್ಕೂ . . . ಉಪಯುಕ್ತವಾಗಿದೆ.”—2 ತಿಮೊಥೆಯ 3:16.

ಕೆಲವರ ಆಕ್ಷೇಪಗಳು: ಬೈಬಲ್‌ನಲ್ಲಿರುವ ವಿಷಯಗಳು ಕೇವಲ ಮಾನುಷ ಜ್ಞಾನವೇ ಹೊರತು ಬೇರೇನಲ್ಲ ಎಂದು ಅನೇಕರ ಅಭಿಮತ. ಅದು ಐತಿಹಾಸಿಕವಾಗಿಯೂ ನಿಖರವಲ್ಲ ಎಂದು ಇನ್ನು ಕೆಲವರ ನಂಬಿಕೆ. ಬೈಬಲಿನ ಸಲಹೆಗಳು ಓಬೀರಾಯನ ಕಾಲದ್ದು, ನಮಗೆ ವ್ಯಾವಹಾರಿಕವಲ್ಲ ಎಂಬುದು ಇನ್ನೂ ಕೆಲವರ ಹೇಳಿಕೆ.

ನಿವಾರಣೆ: ಬೈಬಲಿನ ಭರವಸಾರ್ಹತೆ ಮತ್ತು ಪ್ರಯೋಜನಗಳ ಬಗ್ಗೆ ಸಂದೇಹಿಸುವವರು ಹೆಚ್ಚಾಗಿ ವಿಷಯವನ್ನು ಸ್ವತಃ ಪರೀಕ್ಷಿಸಿ ನೋಡಿಲ್ಲ. ಇತರರು ಹೇಳುವುದನ್ನು ಅವರು ಕೇವಲ ಪುನರುಚ್ಚರಿಸುತ್ತಾರಷ್ಟೇ. ಬೈಬಲ್‌ ಎಚ್ಚರಿಸುವುದು: “ಮೂಢನು ಯಾವ ಮಾತನ್ನಾದರೂ ನಂಬುವನು; ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.”—ಜ್ಞಾನೋಕ್ತಿ 14:15.

ಇತರರು ಹೇಳುವುದನ್ನು ಕಣ್ಮುಚ್ಚಿ ನಂಬಿಬಿಡುವುದಕ್ಕಿಂತ ನೀವೇ ಏಕೆ ಅದನ್ನು ಪರೀಕ್ಷಿಸಿನೋಡಬಾರದು? ಪ್ರಸ್ತುತ ಉತ್ತರ ಗ್ರೀಸ್‌ನಲ್ಲಿರುವ ಬೆರೋಯ ಎಂಬ ಊರಿನಲ್ಲಿ ಕ್ರಿ.ಶ. ಒಂದನೇ ಶತಮಾನದಲ್ಲಿದ್ದ ಆದಿಕ್ರೈಸ್ತರು ಅದನ್ನೇ ಮಾಡಿದರು. ಇತರರು ಅವರಿಗೆ ಏನಂದರೋ ಅದನ್ನು ಅವರು ಬರೇ ನಂಬಿಬಿಡಲಿಲ್ಲ. ಬದಲಾಗಿ “ವಿಷಯಗಳು ಸರಿಯೋ ಎಂದು ನೋಡಲಿಕ್ಕಾಗಿ ಪ್ರತಿದಿನವೂ ಶಾಸ್ತ್ರಗ್ರಂಥವನ್ನು ಜಾಗರೂಕತೆಯಿಂದ ಪರೀಕ್ಷಿಸುತ್ತಿದ್ದರು.” (ಅ. ಕಾರ್ಯಗಳು 17:11) ಬೈಬಲ್‌ ದೇವರ ಪ್ರೇರಿತ ಗ್ರಂಥ ಎಂದು ಏಕೆ ಭರವಸೆಯಿಡಬಹುದು ಎಂಬುದಕ್ಕೆ ಎರಡು ಕಾರಣಗಳನ್ನು ನಾವೀಗ ಸಂಕ್ಷಿಪ್ತವಾಗಿ ಪರಿಗಣಿಸೋಣ.

ಬೈಬಲ್‌ ಐತಿಹಾಸಿಕವಾಗಿ ನಿಖರವಾಗಿದೆ. ಬೈಬಲಿನಲ್ಲಿರುವ ಜನರ ಮತ್ತು ಸ್ಥಳಗಳ ಹೆಸರುಗಳು ನಿಖರವಾಗಿಲ್ಲ ಎಂದು ಸಂದೇಹವಾದಿಗಳು ಬಹಳ ಸಮಯದಿಂದ ಆಕ್ಷೇಪವೆತ್ತಿದ್ದಾರೆ, ಇನ್ನೂ ಆಕ್ಷೇಪಿಸುತ್ತಿದ್ದಾರೆ ಸಹ. ಆದರೂ ಅವರ ಸಂದೇಹಗಳು ನಿರಾಧಾರವೆಂದೂ ಬೈಬಲಿನ ದಾಖಲೆಗಳು ಭರವಸಾರ್ಹವೆಂದೂ ಪುರಾವೆಗಳು ಪದೇ ಪದೇ ರುಜುಮಾಡಿವೆ.

ಉದಾಹರಣೆಗೆ, ಯೆಶಾಯ 20:1ರಲ್ಲಿ ತಿಳಿಸಿರುವ ಅಶ್ಶೂರದ ರಾಜ ಸರ್ಗೋನನು ಅಸ್ತಿತ್ವದಲ್ಲಿ ಇರಲೇ ಇಲ್ಲ ಎಂದು ಪರಿಣತರು ಒಂದು ಸಮಯದಲ್ಲಿ ವಾದಿಸಿದ್ದರು. ಆದರೆ 1840ರಲ್ಲಿ ಪ್ರಾಕ್ತನಶಾಸ್ತ್ರಜ್ಞರ ಅಗೆತ ಕೆಲಸದಲ್ಲಿ ಆ ರಾಜನ ಅರಮನೆಯು ಅವರಿಗೆ ಸಿಕ್ಕಿತು. ಈಗ ಸರ್ಗೋನನು ಅಶ್ಶೂರ ರಾಜರಲ್ಲಿ ಒಬ್ಬ ಪ್ರಖ್ಯಾತ ಅರಸನೆಂದು ಐತಿಹಾಸಿಕವಾಗಿ ರುಜುವಾಗಿದೆ.

ಯೇಸುವಿಗೆ ಮರಣ ಶಿಕ್ಷೆಯನ್ನು ವಿಧಿಸಿದ ರೋಮನ್‌ ರಾಜ್ಯಪಾಲ ಪೊಂತ್ಯ ಪಿಲಾತನ ಅಸ್ತಿತ್ವವನ್ನು ಸಹ ಟೀಕಾಕಾರರು ಸಂದೇಹಿಸಿದ್ದರು. (ಮತ್ತಾಯ 27:1, 22-24) ಆದರೆ 1961ರಲ್ಲಿ ಪಿಲಾತನ ಹೆಸರು ಮತ್ತು ಅಧಿಕಾರ ಸೂಚಿಸುವ ಶಿಲಾಕಲ್ಲು ಇಸ್ರೇಲಿನ ಕೈಸರೈಯ ಪಟ್ಟಣದ ಸಮೀಪ ಕಂಡುಹಿಡಿಯಲ್ಪಟ್ಟಿತು.

ಬೈಬಲಿನ ಐತಿಹಾಸಿಕ ನಿಖರತೆಯ ಕುರಿತು 1999, ಅಕ್ಟೋಬರ್‌ 25ರ ಯು.ಎಸ್‌.ನ್ಯೂಸ್‌ ಆ್ಯಂಡ್‌ ವರ್ಲ್ಡ್‌ ರಿಪೋರ್ಟ್‌ ಹೇಳುವುದು: “ಆಧುನಿಕ ಪ್ರಾಕ್ತನಶಾಸ್ತ್ರವು ಹಳೆ ಮತ್ತು ಹೊಸ ಒಡಂಬಡಿಕೆಗಳ ಮುಖ್ಯ ಭಾಗಗಳ ಐತಿಹಾಸಿಕ ನಿಖರತೆಯನ್ನು ಆಶ್ಚರ್ಯಕರ ರೀತಿಯಲ್ಲಿ ದೃಢೀಕರಿಸಿದೆ. ಹೀಗೆ ಇಸ್ರಾಯೇಲ್ಯ ಮೂಲಪಿತೃಗಳು, ಈಜಿಪ್ಟ್‌ನಿಂದ ಇಸ್ರಾಯೇಲ್ಯರ ಬಿಡುಗಡೆ, ರಾಜ ದಾವೀದನ ರಾಜ್ಯಾಡಳಿತ ಮತ್ತು ಯೇಸುವಿನ ಕಾಲದಲ್ಲಿದ್ದ ಜೀವನಕ್ರಮದ ಮುಖ್ಯ ಭಾಗಗಳನ್ನು ಅದು ನಿಜವೆಂದು ಸಮರ್ಥಿಸಿದೆ.” ಬೈಬಲಿನ ಮೇಲೆ ನಮ್ಮ ನಂಬಿಕೆಯು ಅಗೆತ ಶಾಸ್ತ್ರದ ಆವಿಷ್ಕಾರಗಳ ಮೇಲೆ ಹೊಂದಿಕೊಂಡಿಲ್ಲ. ಆದರೂ ದೇವರಿಂದ ಪ್ರೇರಿತವಾದ ಒಂದು ಪುಸ್ತಕದಲ್ಲಿ ಇಂಥ ಐತಿಹಾಸಿಕ ನಿಖರತೆಯನ್ನು ನಾವು ನಿರೀಕ್ಷಿಸುವುದು ಸಹಜವೇ.

ಬೈಬಲ್‌ನಲ್ಲಿರುವ ವ್ಯಾವಹಾರಿಕ ಜ್ಞಾನ ಎಲ್ಲಾ ಹಿನ್ನೆಲೆಯ ಜನರಿಗೆ ಪ್ರಯೋಜನಕರವಾಗಿದೆ. ಶುಚಿತ್ವದ ನಿಯಮಗಳ ಕುರಿತು ಪರಿಗಣಿಸಿ. ಸೂಕ್ಷಾಣುಜೀವಿಗಳು ಹಾಗೂ ರೋಗಹರಡಿಕೆಯಲ್ಲಿ ಅವುಗಳ ಪಾತ್ರವನ್ನು ಕಂಡುಹಿಡಿಯುವ ಎಷ್ಟೋ ಮೊದಲು ಶುಚಿತ್ವಕ್ಕೆ ಸಂಬಂಧಿಸಿದ ನಿಯಮಗಳನ್ನು ಬೈಬಲ್‌ ತಿಳಿಸಿತ್ತು. ಆ ನಿಯಮಗಳು ಇಂದಿಗೂ ರೂಢಿಯಲ್ಲಿವೆ. (ಯಾಜಕಕಾಂಡ 11:32-40; ಧರ್ಮೋಪದೇಶಕಾಂಡ 23:12, 13) ಒಬ್ಬರನ್ನೊಬ್ಬರು ಹೇಗೆ ಉಪಚರಿಸಬೇಕು ಎಂಬುದರ ಕುರಿತು ಬೈಬಲ್‌ ಕೊಡುವ ಸಲಹೆಯನ್ನು ಪಾಲಿಸುವ ಕುಟುಂಬವು ಹೆಚ್ಚು ಸುಖಿಯಾಗಿರುವುದು. (ಎಫೆಸ 5:28–6:4) ಬೈಬಲ್‌ ಮೂಲತತ್ತ್ವಗಳನ್ನು ಪಾಲಿಸುವ ವ್ಯಕ್ತಿಯೊಬ್ಬನು ಹೆಚ್ಚು ಪ್ರಾಮಾಣಿಕ ಕೆಲಸಗಾರ ಇಲ್ಲವೆ ಹೆಚ್ಚು ವಿವೇಚನೆಯುಳ್ಳ ಯಜಮಾನ ಆಗಬಲ್ಲನು. (ಎಫೆಸ 4:28; 6:5-9) ಬೈಬಲ್‌ ಮೂಲತತ್ತ್ವಗಳ ಅನ್ವಯಿಸುವಿಕೆಯಿಂದ ಭಾವನಾತ್ಮಕ ಸ್ವಾಸ್ಥ್ಯವೂ ಲಭಿಸುತ್ತದೆ. (ಜ್ಞಾನೋಕ್ತಿ 14:30; ಎಫೆಸ 4:31, 32; ಕೊಲೊಸ್ಸೆ 3:8-10) ನಾವು ನಮ್ಮ ನಿರ್ಮಾಣಿಕನಿಂದ ಇಂಥ ವ್ಯಾವಹಾರಿಕ ಸಲಹೆಗಳನ್ನೇ ಬಯಸುತ್ತೇವಲ್ಲಾ.

ಪ್ರಯೋಜನಗಳು: ಬೈಬಲ್‌ನಲ್ಲಿರುವ ವಿವೇಕವು ಅನನುಭವಿಯಾದ ವ್ಯಕ್ತಿಯನ್ನು ಸಹ ಜಾಣನನ್ನಾಗಿ ಮಾಡುತ್ತದೆ. (ಕೀರ್ತನೆ 19:7) ಅದಲ್ಲದೆ ಒಮ್ಮೆ ನಾವು ಬೈಬಲ್‌ನಲ್ಲಿ ಭರವಸೆಯನ್ನು ಕಟ್ಟಿದೆವೆಂದರೆ, ಇನ್ನಷ್ಟು ದೃಢ ನಂಬಿಕೆಯನ್ನು ಬೆಳೆಸಿಕೊಳ್ಳಲಿಕ್ಕಾಗಿ ನಾವು ಮುಂದಡಿಯಿಡಲು ಅದು ಸಹಾಯಮಾಡಬಲ್ಲದು. ಇಂಥ ಸಹಾಯ ಬೇರೆ ಯಾವ ಪುಸ್ತಕದಿಂದಲೂ ದೊರೆಯಲಾರದು. (w09 5/1)

ಹೆಚ್ಚಿನ ಮಾಹಿತಿಗಾಗಿ, ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? * ಪುಸ್ತಕದ “ಬೈಬಲ್‌—ದೇವರಿಂದ ಬಂದಿರುವ ಒಂದು ಗ್ರಂಥ” ಎಂಬ 2ನೇ ಅಧ್ಯಾಯ ನೋಡಿ.

[ಪಾದಟಿಪ್ಪಣಿ]

^ ಪ್ಯಾರ. 12 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.