ಯಾಜಕಕಾಂಡ 11:1-47

  • ಶುದ್ಧ, ಅಶುದ್ಧ ಪ್ರಾಣಿಗಳು (1-47)

11  ಆಮೇಲೆ ಯೆಹೋವ ಮೋಶೆ ಮತ್ತು ಆರೋನನಿಗೆ ಹೀಗಂದನು:  “ನೀವು ಇಸ್ರಾಯೇಲ್ಯರಿಗೆ ಏನು ಹೇಳಬೇಕಂದ್ರೆ ‘ಭೂಮಿ ಮೇಲೆ ವಾಸ ಮಾಡೋ ಜೀವಿಗಳಲ್ಲಿ ನೀವು ಯಾವುದನ್ನೆಲ್ಲ ತಿನ್ನಬಹುದಂದ್ರೆ:+  ಕಾಲಿನ ಗೊರಸು ಪೂರ್ತಿಯಾಗಿ ಸೀಳಿರೋ, ಮೆಲುಕು ಹಾಕೋ ಪ್ರಾಣಿಯನ್ನ ತಿನ್ನಬಹುದು.  ಮೆಲುಕು ಹಾಕಿದ್ರೂ ಕಾಲಿನ ಗೊರಸು ಸೀಳಿರದ ಪ್ರಾಣಿಯನ್ನ ಅಥವಾ ಕಾಲಿನ ಗೊರಸು ಸೀಳಿದ್ರೂ ಮೆಲುಕು ಹಾಕದೆ ಇರೋ ಪ್ರಾಣಿಯನ್ನ ತಿನ್ನಬಾರದು. ಒಂಟೆ ಮೆಲುಕು ಹಾಕುತ್ತೆ, ಆದ್ರೆ ಕಾಲಿನ ಗೊರಸು ಸೀಳಿರಲ್ಲ. ಹಾಗಾಗಿ ಅದು ನಿಮಗೆ ಅಶುದ್ಧ.+  ಬೆಟ್ಟದ ಮೊಲ+ ಮೆಲುಕು ಹಾಕುತ್ತೆ, ಆದ್ರೆ ಕಾಲಿನ ಗೊರಸು ಸೀಳಿರಲ್ಲ. ಹಾಗಾಗಿ ಅದು ನಿಮಗೆ ಅಶುದ್ಧ.  ಮೊಲ ಮೆಲುಕು ಹಾಕುತ್ತೆ, ಆದ್ರೆ ಕಾಲಿನ ಗೊರಸು ಸೀಳಿರಲ್ಲ. ಹಾಗಾಗಿ ಅದು ನಿಮಗೆ ಅಶುದ್ಧ.  ಹಂದಿಯ+ ಗೊರಸು ಪೂರ್ತಿ ಸೀಳಿದ್ರೂ ಮೆಲುಕು ಹಾಕಲ್ಲ. ಹಾಗಾಗಿ ಅದು ನಿಮಗೆ ಅಶುದ್ಧ.  ಇವುಗಳಲ್ಲಿ ಯಾವುದ್ರ ಮಾಂಸವನ್ನೂ ತಿನ್ನಬಾರದು. ಇವು ಸತ್ತಾಗ ಮುಟ್ಟಲೂಬಾರದು. ಇವು ನಿಮಗೆ ಅಶುದ್ಧ.+  ನೀರಲ್ಲಿ ವಾಸಿಸೋ ಜೀವಿಗಳಲ್ಲಿ ನೀವು ಯಾವುದನ್ನೆಲ್ಲ ತಿನ್ನಬಹುದಂದ್ರೆ: ಸಮುದ್ರ ಅಥವಾ ನದಿಯಲ್ಲಿರೋ ಯಾವ ಜೀವಿಗಳಿಗೆ ರೆಕ್ಕೆ ಮತ್ತು ಹುರುಪೆ ಇರುತ್ತೋ ಆ ಎಲ್ಲ ಜೀವಿಗಳನ್ನ ತಿನ್ನಬಹುದು.+ 10  ಸಮುದ್ರ ಹಾಗೂ ನದಿಯಲ್ಲಿರೋ ಗುಂಪುಗುಂಪಾದ ಚಿಕ್ಕಚಿಕ್ಕ ಜೀವಿಗಳಲ್ಲಿ ಮತ್ತು ಬೇರೆ ಎಲ್ಲ ಜೀವಿಗಳಲ್ಲಿ ಯಾವುದಕ್ಕೆ ರೆಕ್ಕೆ, ಹುರುಪೆ ಇರಲ್ವೋ ಅಂಥ ಜೀವಿಗಳು ನಿಮಗೆ ಅಶುದ್ಧ. 11  ಅವು ಅಶುದ್ಧ ಆಗಿರೋದ್ರಿಂದ ಅದ್ರ ಮಾಂಸ ತಿನ್ನಲೇಬಾರದು.+ ಅವು ಸತ್ತಾಗ ಮುಟ್ಟಲೂಬಾರದು. 12  ರೆಕ್ಕೆ ಮತ್ತು ಹುರುಪೆ ಇಲ್ಲದ ನೀರಲ್ಲಿರೋ ಎಲ್ಲ ಜೀವಿಗಳು ನಿಮಗೆ ಅಶುದ್ಧ. 13  ನೀವು ತಿನ್ನಬಾರದ ಮತ್ತು ಅಶುದ್ಧವಾಗಿ ನೋಡಬೇಕಾದ ಪಕ್ಷಿಗಳು ಯಾವುದಂದ್ರೆ ಹದ್ದು,+ ಕಡಲ ಗಿಡುಗ, ಕಪ್ಪು ರಣಹದ್ದು,+ 14  ಕೆಂಪು ಗಿಡುಗ, ಎಲ್ಲ ಜಾತಿಯ ಕಪ್ಪು ಗಿಡುಗಗಳು, 15  ಎಲ್ಲ ಜಾತಿಯ ಕಾಗೆಗಳು, 16  ಉಷ್ಟ್ರಪಕ್ಷಿ, ಗೂಬೆ, ಕಡಲ ಹಕ್ಕಿ, ಎಲ್ಲ ಜಾತಿಯ ಗಿಡುಗಗಳು, 17  ಚಿಕ್ಕ ಗೂಬೆ, ನೀರುಕಾಗೆ, ಉದ್ದ ಕಿವಿಯ ಗೂಬೆ, 18  ಹಂಸ, ನೇರೆಹಕ್ಕಿ,* ರಣಹದ್ದು, 19  ಕೊಕ್ಕರೆ, ಎಲ್ಲ ಜಾತಿಯ ಕ್ರೌಂಚ, ಚಂದ್ರಮುಕುಟ ಹಕ್ಕಿ ಮತ್ತು ಬಾವಲಿ. 20  ರೆಕ್ಕೆ ಇದ್ದು ನಾಲ್ಕು ಕಾಲಿಂದ ಹರಿದಾಡೋ ಗುಂಪುಗುಂಪಾಗಿರೋ ಎಲ್ಲ ಕೀಟಗಳು ನಿಮಗೆ ಅಶುದ್ಧ. 21  ರೆಕ್ಕೆ ಇರೋ ನಾಲ್ಕು ಕಾಲಿಂದ ಹರಿದಾಡೋ ಮತ್ತು ಗುಂಪುಗುಂಪಾಗಿರೋ ಕೀಟಗಳಲ್ಲಿ ಯಾವುದಕ್ಕೆ ನೆಲದ ಮೇಲೆ ಜಿಗಿಯೋಕೆ ಮುದುರಿಕೊಂಡಿರೋ ಹಿಂಗಾಲುಗಳು ಇದ್ಯೋ ಅವುಗಳನ್ನ ಮಾತ್ರ ನೀವು ತಿನ್ನಬಹುದು. 22  ನೀವು ತಿನ್ನಬಹುದಾದ ಕೀಟಗಳು: ವಲಸೆ ಹೋಗೋ ಬೇರೆ ಬೇರೆ ಜಾತಿಯ ಮಿಡತೆಗಳು, ಸಾಮಾನ್ಯ ಮಿಡತೆಗಳು,+ ಚಿಮ್ಮಂಡೆಗಳು, ಕುಪ್ಪಳಿಸೋ ಮಿಡತೆಗಳು. 23  ಆದ್ರೆ ರೆಕ್ಕೆ ಇದ್ದು ನಾಲ್ಕು ಕಾಲಿಂದ ಹರಿದಾಡೋ ಗುಂಪುಗುಂಪಾಗಿರೋ ಬೇರೆ ಎಲ್ಲ ಕೀಟಗಳು ನಿಮಗೆ ಅಶುದ್ಧ. 24  ಇವುಗಳನ್ನ ತಿಂದ್ರೆ ನೀವು ಅಶುದ್ಧ ಆಗ್ತಿರ. ಇವು ಸತ್ತಾಗ ಮುಟ್ಟಿದವನು ಸಂಜೆ ತನಕ* ಅಶುದ್ಧ.+ 25  ಆ ಕೀಟಗಳಲ್ಲಿ ಯಾವುದೇ ಸತ್ತುಬಿದ್ರೂ ಎತ್ತಿದವನು ತನ್ನ ಬಟ್ಟೆಗಳನ್ನ ಒಗೆದುಕೊಳ್ಳಬೇಕು.+ ಅವನು ಸಂಜೆ ತನಕ ಅಶುದ್ಧ. 26  ಯಾವ ಪ್ರಾಣಿಯ ಗೊರಸು ಸ್ವಲ್ಪ ಸೀಳಿದ್ರೂ ಎರಡು ಭಾಗ ಆಗಿಲ್ವೋ, ಅದು ಮೆಲುಕು ಹಾಕಲ್ವೋ ಅಂಥ ಪ್ರಾಣಿ ನಿಮಗೆ ಅಶುದ್ಧ. ಅವುಗಳನ್ನ ಮುಟ್ಟಿದವನು ಅಶುದ್ಧ.+ 27  ಪಂಜಗಳಿಂದ ನಡಿಯೋ ನಾಲ್ಕು ಕಾಲಿನ ಎಲ್ಲ ಪ್ರಾಣಿಗಳು ನಿಮಗೆ ಅಶುದ್ಧ. ಆ ಪ್ರಾಣಿಗಳಲ್ಲಿ ಸತ್ತುಹೋದದ್ದನ್ನ ಮುಟ್ಟಿದವನು ಸಂಜೆ ತನಕ ಅಶುದ್ಧ. 28  ಸತ್ತ ಆ ಪ್ರಾಣಿಯನ್ನ ಎತ್ತಿದವನು ತನ್ನ ಬಟ್ಟೆಗಳನ್ನ ಒಗೆದುಕೊಳ್ಳಬೇಕು.+ ಅವನು ಸಂಜೆ ತನಕ ಅಶುದ್ಧ.+ ಪಂಜಗಳಿಂದ ನಡಿಯೋ ಪ್ರಾಣಿಗಳು ನಿಮಗೆ ಅಶುದ್ಧ. 29  ಭೂಮಿ ಮೇಲೆ ಗುಂಪುಗುಂಪಾಗಿರೋ ಜೀವಿಗಳಲ್ಲಿ ನಿಮಗೆ ಅಶುದ್ಧವಾದ ಜೀವಿಗಳು: ಹೆಗ್ಗಣ, ಇಲಿ,+ ಎಲ್ಲ ಜಾತಿಯ ಹಲ್ಲಿಗಳು, 30  ಮನೆಹಲ್ಲಿ, ದೊಡ್ಡ ಹಲ್ಲಿ, ಉದ್ದ ಬಾಲದ ಹಲ್ಲಿ,* ಮರಳು ಹಲ್ಲಿ ಮತ್ತು ಊಸರವಳ್ಳಿ. 31  ಇವುಗಳು ನಿಮಗೆ ಅಶುದ್ಧ.+ ಇವು ಸತ್ತಾಗ ಇವುಗಳನ್ನ ಮುಟ್ಟಿದವನು ಸಂಜೆ ತನಕ ಅಶುದ್ಧ.+ 32  ಈ ಜೀವಿಗಳಲ್ಲಿ ಯಾವುದಾದ್ರೂ ಸತ್ತ ಮೇಲೆ ಬಟ್ಟೆ, ಚರ್ಮ, ಗೋಣಿ ಅಥವಾ ಬೇರೆ ಯಾವ ವಸ್ತು ಮೇಲಾಗಲಿ ಮರದ ಪಾತ್ರೆಯಲ್ಲಾಗಲಿ ಬಿದ್ರೆ ಅದು ಅಶುದ್ಧ. ಆ ಪಾತ್ರೆ ಯಾವುದೇ ಆಗಿರಲಿ ಅದನ್ನ ಯಾವುದಕ್ಕೇ ಬಳಸ್ತಿರಲಿ ನೀರಿಂದ ತೊಳಿಬೇಕು. ಅದು ಸಂಜೆ ತನಕ ಅಶುದ್ಧ. ಆಮೇಲೆ ಅದು ಶುದ್ಧ. 33  ಸತ್ತ ಆ ಜೀವಿ ಮಣ್ಣಿನ ಪಾತ್ರೆಲಿ ಬಿದ್ರೆ ಅದನ್ನ ಒಡೆದು ಬಿಡಬೇಕು. ಆ ಪಾತ್ರೆಲಿ ಏನೇ ಇದ್ರೂ ಅದು ಅಶುದ್ಧ.+ 34  ಅಂಥ ಪಾತ್ರೆಯಲ್ಲಿರೋ ನೀರು ಯಾವುದೇ ಆಹಾರದ ಮೇಲೆ ಬಿದ್ರೂ ಆ ಆಹಾರ ಅಶುದ್ಧ. ಆ ಪಾತ್ರೆಯಲ್ಲಿ ಕುಡಿಯೋದು ಏನೇ ಇದ್ರೂ ಅದು ಅಶುದ್ಧ. 35  ಸತ್ತ ಜೀವಿ ಯಾವುದ್ರ ಮೇಲೆ ಬಿದ್ರೂ ಅದು ಅಶುದ್ಧ. ಗೂಡು ಒಲೆ ಅಥವಾ ಚಿಕ್ಕ ಒಲೆ ಮೇಲೆ ಬಿದ್ರೆ ಆ ಒಲೆಯನ್ನ ಚೂರುಚೂರು ಮಾಡಬೇಕು. ಅದು ನಿಮಗೆ ಅಶುದ್ಧ. ಅದು ಅಶುದ್ಧವಾಗೇ ಇರುತ್ತೆ. 36  ಸತ್ತ ಜೀವಿ ಬುಗ್ಗೆಯಲ್ಲಾಗಲಿ ನೀರನ್ನ ಶೇಖರಿಸಿಡೋ ಗುಂಡಿಯಲ್ಲಾಗಲಿ ಬಿದ್ರೆ ಅದು ಮಾತ್ರ ಅಶುದ್ಧ. ಅದ್ರಿಂದ ಆ ಸತ್ತ ಜೀವಿಯನ್ನ ತೆಗೆದವನು ಅಶುದ್ಧ. 37  ಬಿತ್ತಬೇಕಾದ ಬೀಜಗಳ ಮೇಲೆ ಸತ್ತ ಆ ಜೀವಿ ಬಿದ್ರೆ ಆ ಬೀಜಗಳು ಅಶುದ್ಧ ಆಗಲ್ಲ. 38  ಆದ್ರೆ ಸತ್ತ ಜೀವಿ ಯಾವುದಾದ್ರೂ ಒಂದು ಭಾಗ ನೆನೆದಿರೋ ಬೀಜಗಳ ಮೇಲೆ ಬಿದ್ರೆ ಆ ಬೀಜಗಳು ನಿಮಗೆ ಅಶುದ್ಧ. 39  ನೀವು ಆಹಾರಕ್ಕಾಗಿ ಬಳಸೋ ಪ್ರಾಣಿಗಳಲ್ಲಿ ಯಾವುದಾದ್ರೂ ಸತ್ರೆ ಅದನ್ನ ಮುಟ್ಟಿದವನು ಸಂಜೆ ತನಕ ಅಶುದ್ಧ.+ 40  ಸತ್ತ ಆ ಪ್ರಾಣಿಯ ಯಾವುದೇ ಭಾಗವನ್ನ ಯಾರಾದ್ರೂ ತಿಂದ್ರೆ ಅವನು ತನ್ನ ಬಟ್ಟೆಗಳನ್ನ ಒಗೆದುಕೊಳ್ಳಬೇಕು. ಅವನು ಸಂಜೆ ತನಕ ಅಶುದ್ಧ.+ ಸತ್ತ ಆ ಪ್ರಾಣಿಯನ್ನ ಎತ್ಕೊಂಡು ಹೋದವನೂ ತನ್ನ ಬಟ್ಟೆಗಳನ್ನ ಒಗೆದುಕೊಳ್ಳಬೇಕು. ಅವನು ಸಂಜೆ ತನಕ ಅಶುದ್ಧ. 41  ಭೂಮಿ ಮೇಲೆ ಗುಂಪುಗುಂಪಾಗಿ ಜೀವಿಸೋ ಎಲ್ಲ ಅಶುದ್ಧ ಜೀವಿಗಳು ನಿಮಗೆ ಅಶುದ್ಧ.+ ಅವುಗಳನ್ನ ತಿನ್ನಲೇಬಾರದು. 42  ಹೊಟ್ಟೆಯಿಂದ ತೆವಳೋ, ನಾಲ್ಕು ಕಾಲಿಂದ ಹರಿದಾಡೋ ಯಾವುದನ್ನೂ ಮತ್ತು ತುಂಬ ಕಾಲಿರೋ ಗುಂಪುಗುಂಪು ಜೀವಿಗಳಲ್ಲಿ ಯಾವುದನ್ನೂ ತಿನ್ನಬಾರದು. ಅವು ನಿಮಗೆ ಅಶುದ್ಧ.+ 43  ಗುಂಪಾಗಿರೋ ಜೀವಿಗಳಲ್ಲಿ ಅಶುದ್ಧವಾದ ಯಾವುದನ್ನಾದ್ರೂ ತಿಂದು ನಿಮ್ಮ ಬಗ್ಗೆ ನಿಮಗೇ ಹೇಸಿಗೆ ಆಗೋ ತರ ಮಾಡ್ಕೊಬೇಡಿ, ನಿಮ್ಮನ್ನ ಮಲಿನ ಮಾಡ್ಕೊಬೇಡಿ. ಅವುಗಳಿಂದ ಅಶುದ್ಧ ಆಗಬೇಡಿ.+ 44  ಯಾಕಂದ್ರೆ ನಾನು ನಿಮ್ಮ ದೇವರಾದ ಯೆಹೋವ.+ ನಾನು ಪವಿತ್ರನಾಗಿ ಇರೋದ್ರಿಂದ+ ನೀವು ಶುದ್ಧರಾಗೇ ಪವಿತ್ರರಾಗೇ ಇರಬೇಕು.+ ಭೂಮಿ ಮೇಲೆ ಚಲಿಸೋ ಗುಂಪುಗುಂಪಾಗಿ ಇರೋ ಯಾವುದೇ ಅಶುದ್ಧ ಜೀವಿಯನ್ನ ತಿಂದು ನೀವು ಅಶುದ್ಧ ಆಗಬಾರದು. 45  ಯಾಕಂದ್ರೆ ನಾನು ಯೆಹೋವ. ನಾನು ನಿಮ್ಮ ದೇವರು ಅಂತ ತೋರಿಸ್ಕೊಡೋಕೆ ನಿಮ್ಮನ್ನ ಈಜಿಪ್ಟಿಂದ* ಬಿಡಿಸ್ಕೊಂಡು ಬರ್ತಾ ಇದ್ದೀನಿ.+ ನಾನು ಪವಿತ್ರನಾಗಿ+ ಇರೋದ್ರಿಂದ ನೀವು ಸಹ ಪವಿತ್ರರು ಆಗಿರಬೇಕು.+ 46  ಪ್ರಾಣಿಗಳು, ಪಕ್ಷಿಗಳು, ನೀರಲ್ಲಿರೋ ಎಲ್ಲ ಜೀವಿಗಳು, ಭೂಮಿ ಮೇಲೆ ಗುಂಪುಗುಂಪಾಗಿರೋ ಎಲ್ಲ ಜೀವಿಗಳ ವಿಷ್ಯದಲ್ಲಿ ನೀವು ಪಾಲಿಸಬೇಕಾದ ನಿಯಮಗಳು ಇವೇ. 47  ಯಾವ ಜೀವಿಗಳು ಶುದ್ಧ, ಯಾವುದು ಅಶುದ್ಧ, ಯಾವ ಜೀವಿಗಳನ್ನ ತಿನ್ನಬಹುದು, ಯಾವುದನ್ನ ತಿನ್ನಬಾರದು ಅಂತ ನಿಮಗೆ ಗೊತ್ತಾಗೋಕೆ ಈ ನಿಯಮಗಳಿವೆ.’”+

ಪಾದಟಿಪ್ಪಣಿ

ಅಂದ್ರೆ, ಪೆಲಿಕನ್‌.
ಅಥವಾ “ಸೂರ್ಯ ಮುಳುಗೋ ತನಕ.”
ಅಥವಾ “ನ್ಯೂಟ್‌ ಹಲ್ಲಿ.”
ಅಥವಾ “ಐಗುಪ್ತದಿಂದ.”