ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಯೆಹೋವನು ತನ್ನ ಪುರಾತನ ಸೇವಕರಾಗಿದ್ದ ಇಸ್ರಾಯೇಲ್ಯರ ನಡುವೆ ಬಹು ಪತ್ನೀತ್ವವನ್ನು ಅನುಮತಿಸಿದ್ದನು, ಆದರೆ ಈಗ ಅನುಮತಿಸುವುದಿಲ್ಲ. ಆತನ ಮಟ್ಟವು ಬದಲಾಗಸಾಧ್ಯವಿದೆಯೋ?

ಬಹು ಪತ್ನೀತ್ವದ ಕುರಿತಾದ ತನ್ನ ದೃಷ್ಟಿಕೋನವನ್ನು ಯೆಹೋವನು ಬದಲಾಯಿಸಿಲ್ಲ. (ಕೀರ್ತನೆ 19:7; ಮಲಾಕಿಯ 3:6) ಆರಂಭದಿಂದಲೂ ಅದು ಮಾನವರಿಗಾಗಿರುವ ಆತನ ಏರ್ಪಾಡಿನ ಒಂದು ಭಾಗವಾಗಿರಲಿಲ್ಲ, ಮತ್ತು ಈಗಲೂ ಅದು ಆತನ ಏರ್ಪಾಡಾಗಿಲ್ಲ. ಯೆಹೋವನು ಹವ್ವಳನ್ನು ಆದಾಮನಿಗೆ ಹೆಂಡತಿಯಾಗಿ ಸೃಷ್ಟಿಸಿದಾಗ, ಒಬ್ಬ ಗಂಡನಿಗೆ ಒಬ್ಬಳೇ ಹೆಂಡತಿಯಿರುವುದು ದೈವಿಕ ಮಟ್ಟವಾಗಿದೆ ಎಂದು ಆತನು ತಿಳಿಸಿದನು. “ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು.”​—ಆದಿಕಾಂಡ 2:24.

ಯೇಸು ಕ್ರಿಸ್ತನು ಭೂಮಿಯಲ್ಲಿದ್ದಾಗ, ವಿಚ್ಛೇದ ಹಾಗೂ ಪುನರ್ವಿವಾಹದ ಕುರಿತು ಕೇಳಿದಂಥ ಜನರಿಗೆ ಕೊಟ್ಟ ಉತ್ತರದಲ್ಲಿ ಅವನು ಈ ಮಟ್ಟವನ್ನು ಪುನರಾವರ್ತಿಸಿದನು. ಅವನು ಹೇಳಿದ್ದು: “ಮನುಷ್ಯರನ್ನು ನಿರ್ಮಾಣಮಾಡಿದವನು ಆದಿಯಿಂದಲೇ ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿ ಅವರ ವಿಷಯದಲ್ಲಿ​—ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು ಎಂದು ಹೇಳಿದನೆಂಬದಾಗಿ ನೀವು ಓದಲಿಲ್ಲವೋ? ಹೀಗಿರುವಲ್ಲಿ ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ.” ಯೇಸು ಇನ್ನೂ ಕೂಡಿಸಿದ್ದು: “ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗುತ್ತಾನೆ.” (ಮತ್ತಾಯ 19:4-6, 9) ಇದರಿಂದ ಒಬ್ಬರು ಅಥವಾ ಅದಕ್ಕಿಂತಲೂ ಹೆಚ್ಚು ಹೆಂಡತಿಯರನ್ನು ವಿವಾಹವಾಗುವುದು ವ್ಯಭಿಚಾರವಾಗಿದೆ ಎಂಬುದು ಸುವ್ಯಕ್ತವಾಗುತ್ತದೆ.

ಹಾಗಾದರೆ ಪುರಾತನ ಸಮಯಗಳಲ್ಲಿ ಬಹು ಪತ್ನೀತ್ವವು ಏಕೆ ಅನುಮತಿಸಲ್ಪಟ್ಟಿತ್ತು? ಯೆಹೋವನು ಈ ರೂಢಿಯನ್ನು ಆರಂಭಿಸಲಿಲ್ಲ ಎಂಬುದನ್ನು ಮನಸ್ಸಿನಲ್ಲಿಡಿರಿ. ಒಬ್ಬರಿಗಿಂತ ಹೆಚ್ಚು ಹೆಂಡತಿಯರನ್ನು ಹೊಂದಿರುವುದಾಗಿ ಬೈಬಲಿನಲ್ಲಿ ಪ್ರಥಮ ಬಾರಿಗೆ ಉಲ್ಲೇಖಿಸಲ್ಪಟ್ಟಿರುವ ವ್ಯಕ್ತಿಯು ಲೆಮೆಕನಾಗಿದ್ದು, ಇವನು ಕಾಯಿನನ ವಂಶದವನಾಗಿದ್ದನು. (ಆದಿಕಾಂಡ 4:​19-24) ನೋಹನ ದಿನದಲ್ಲಿ ಯೆಹೋವನು ಜಲಪ್ರಳಯವನ್ನು ಬರಮಾಡಿದಾಗ, ನೋಹನಿಗೂ ಅವನ ಮೂರು ಮಂದಿ ಗಂಡುಮಕ್ಕಳಲ್ಲಿ ಪ್ರತಿಯೊಬ್ಬರಿಗೂ ಒಬ್ಬೊಬ್ಬರೇ ಹೆಂಡತಿಯರಿದ್ದರು. ಬಹು ಪತ್ನೀತ್ವವಿದ್ದವರೆಲ್ಲರೂ ಜಲಪ್ರಳಯದಲ್ಲಿ ನಾಶಮಾಡಲ್ಪಟ್ಟರು.

ಶತಮಾನಗಳ ಬಳಿಕ, ಯೆಹೋವನು ಇಸ್ರಾಯೇಲ್ಯರನ್ನು ತನ್ನ ಜನರಾಗಿ ಆದುಕೊಂಡಾಗ, ಬಹು ಪತ್ನೀತ್ವವು ಈಗಾಗಲೇ ಅವರ ನಡುವೆ ಅಸ್ತಿತ್ವದಲ್ಲಿತ್ತಾದರೂ, ಒಬ್ಬಳೇ ಹೆಂಡತಿಯನ್ನು ಹೊಂದಿರುವುದು ಹೆಚ್ಚು ಸರ್ವಸಾಮಾನ್ಯವಾಗಿತ್ತು ಎಂಬುದು ವ್ಯಕ್ತವಾಗುತ್ತದೆ. ಒಬ್ಬರಿಗಿಂತಲೂ ಹೆಚ್ಚು ಹೆಂಡತಿಯರಿದ್ದ ಕುಟುಂಬಗಳನ್ನು ಬೇರ್ಪಡಿಸುವ ಆವಶ್ಯಕತೆಯನ್ನು ದೇವರು ಅಗತ್ಯಪಡಿಸಲಿಲ್ಲ. ಅದಕ್ಕೆ ಬದಲಾಗಿ, ಈ ಪದ್ಧತಿಯನ್ನು ಆತನು ಕಟ್ಟುನಿಟ್ಟಾಗಿ ನಿಯಂತ್ರಿಸಿದನು.​—ವಿಮೋಚನಕಾಂಡ 21:10, 11; ಧರ್ಮೋಪದೇಶಕಾಂಡ 21:15-17.

ಬಹು ಪತ್ನೀತ್ವದ ತಾಳಿಕೊಳ್ಳುವಿಕೆಯು ತಾತ್ಕಾಲಿಕವಾಗಿತ್ತು ಎಂಬುದನ್ನು, ವಿವಾಹಕ್ಕಾಗಿದ್ದ ಯೆಹೋವನ ಮೂಲ ಮಟ್ಟದ ಕುರಿತು ಯೇಸು ಏನು ಹೇಳಿದನೋ ಅದರಿಂದ ಮಾತ್ರವಲ್ಲ, ದೇವರ ಪವಿತ್ರಾತ್ಮದ ಪ್ರೇರಣೆಯಿಂದ ಅಪೊಸ್ತಲ ಪೌಲನು ಏನನ್ನು ಬರೆದನೋ ಅದರಿಂದಲೂ ಮನಗಾಣಸಾಧ್ಯವಿದೆ. ಅವನು ಹೇಳಿದ್ದು: “ಪ್ರತಿಯೊಬ್ಬನಿಗೆ ಸ್ವಂತ ಹೆಂಡತಿಯು ಇರಲಿ, ಪ್ರತಿಯೊಬ್ಬಳಿಗೆ ಸ್ವಂತ ಗಂಡನು ಇರಲಿ.” (1 ಕೊರಿಂಥ 7:2) ಕ್ರೈಸ್ತ ಸಭೆಯಲ್ಲಿ ಒಬ್ಬ ಮೇಲ್ವಿಚಾರಕನಾಗಿ ಅಥವಾ ಶುಶ್ರೂಷಾ ಸೇವಕನಾಗಿ ನೇಮಿಸಲ್ಪಟ್ಟಿರುವ ಯಾವನೇ ಪುರುಷನು ‘ಏಕಪತ್ನಿಯುಳ್ಳವನು’ ಆಗಿರಬೇಕು ಎಂದು ಸಹ ಬರೆಯುವಂತೆ ಪೌಲನು ಪ್ರೇರಿಸಲ್ಪಟ್ಟನು.​—1 ತಿಮೊಥೆಯ 3:2, 12; ತೀತ 1:6.

ಹೀಗೆ, ಸುಮಾರು 2,000 ವರ್ಷಗಳ ಹಿಂದೆ ಕ್ರೈಸ್ತ ಸಭೆಯ ಸ್ಥಾಪನೆಯೊಂದಿಗೆ, ಯೆಹೋವನು ಬಹು ಪತ್ನೀತ್ವವನ್ನು ತಾಳಿಕೊಳ್ಳುವುದು ಸಂಪೂರ್ಣವಾಗಿ ಕೊನೆಗೊಂಡಿತು. ಆ ಸಮಯದಲ್ಲಿ, ಪುರುಷ ಮತ್ತು ಸ್ತ್ರೀಯನ್ನು ದೇವರು ಆರಂಭದಲ್ಲಿ ಸೃಷ್ಟಿಸಿದಾಗ ವಿವಾಹಕ್ಕಾಗಿರುವ ಮಟ್ಟವು ಯಾವುದಾಗಿತ್ತೋ ಆ ಸ್ಥಿತಿಗೆ ಅದು ಹಿಂದಿರುಗಿತು: ಒಬ್ಬ ಗಂಡ, ಒಬ್ಬಳು ಹೆಂಡತಿ. ಇಡೀ ಲೋಕದಾದ್ಯಂತ ದೇವಜನರ ನಡುವೆ ಇಂದು ಇದೇ ಮಟ್ಟವಿದೆ.​—ಮಾರ್ಕ 10:11, 12; 1 ಕೊರಿಂಥ 6:9, 10.