ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೈವಿಕ ಭಕ್ತಿಯನ್ನು ಆಚರಿಸುವುದರಿಂದ ಪ್ರತಿಫಲ ಸಿಕ್ಕಿತು

ದೈವಿಕ ಭಕ್ತಿಯನ್ನು ಆಚರಿಸುವುದರಿಂದ ಪ್ರತಿಫಲ ಸಿಕ್ಕಿತು

ಜೀವನ ಕಥೆ

ದೈವಿಕ ಭಕ್ತಿಯನ್ನು ಆಚರಿಸುವುದರಿಂದ ಪ್ರತಿಫಲ ಸಿಕ್ಕಿತು

ವಿಲ್ಯಮ್‌ ಅಹೀನೊರ್ಯಾ ಅವರು ಹೇಳಿದಂತೆ

ನಾನು ಮಧ್ಯ ರಾತ್ರಿ ತಂದೆಯವರ ನಿತ್ಯದ ನರಳಾಟವನ್ನು ಕೇಳಿ ಎದ್ದೆ. ಅವರು ತಮ್ಮ ಹೊಟ್ಟೆಯನ್ನು ಹಿಡಿದುಕೊಂಡು ನೆಲದ ಮೇಲೆ ಉರುಳಾಡುತ್ತಿದ್ದರು. ನಾನು, ಅಮ್ಮ ಮತ್ತು ನನ್ನ ಅಕ್ಕ ಅವರ ಸುತ್ತಲೂ ಒಟ್ಟುಗೂಡಿದೆವು. ಅವರ ನೋವು ಕಡಿಮೆಯಾಗುತ್ತಿದೆಯೆಂದು ಅವರಿಗನಿಸಿದಾಗ, ಅವರು ನೆಟ್ಟಗೆ ಕೂತುಕೊಂಡು, ನಿಟ್ಟುಸಿರುಬಿಡುತ್ತಾ ಅಂದದ್ದು: “ಈ ಲೋಕದಲ್ಲಿ ಶಾಂತಿಯಿರುವುದು ಯೆಹೋವನ ಸಾಕ್ಷಿಗಳಿಗೆ ಮಾತ್ರ.” ಅವರ ಈ ಮಾತುಗಳು ನಮ್ಮನ್ನು ತಬ್ಬಿಬ್ಬುಗೊಳಿಸಿದರೂ, ಅವು ನನ್ನ ಮನಸ್ಸಿನಲ್ಲಿ ಗಾಢವಾಗಿ ಅಚ್ಚೊತ್ತಲ್ಪಟ್ಟವು. ಯಾಕೆಂದರೆ ಈ ಮುಂಚೆ ನಾನು ಎಂದೂ ಯೆಹೋವನ ಸಾಕ್ಷಿಗಳ ಬಗ್ಗೆ ಕೇಳಿಸಿಕೊಂಡಿರಲಿಲ್ಲ. ಅವರ ಮಾತುಗಳ ಅರ್ಥವೇನೆಂಬದರ ಬಗ್ಗೆ ನಾನು ಕುತೂಹಲದಿಂದಿದ್ದೆ.

ಆಘಟನೆಯು ನಾನು ಆರು ವರ್ಷದವನಾಗಿದ್ದಾಗ, ಅಂದರೆ 1953ರಲ್ಲಿ ನಡೆಯಿತು. ನಾನು ನೈಜೀರಿಯದ ಮಧ್ಯಪಶ್ಚಿಮದಲ್ಲಿ ಒಂದು ಕೃಷಿ ಹಳ್ಳಿಯಾಗಿದ್ದ ಇವೊಸಾದಲ್ಲಿನ ಬಹುಪತ್ನಿಯರುಳ್ಳ ಒಂದು ಮನೆತನದವನಾಗಿದ್ದೆ. ನಾನು ಮಕ್ಕಳಲ್ಲಿ ಎರಡನೆಯವನು, ಆದರೆ ಕುಟುಂಬದ ಮೊದಲ ಗಂಡುಮಗನಾಗಿದ್ದೆ. ತಂದೆಯವರ ಮೂರು ಮಂದಿ ಪತ್ನಿಯರು ಮತ್ತು 13 ಮಂದಿ ಮಕ್ಕಳು ಕೂಡಿಸಲ್ಪಟ್ಟಾಗ, ಈ ಕುಟುಂಬವು ಕ್ರಮೇಣವಾಗಿ ಬೆಳೆಯಿತು. ನಾವು ಅಜ್ಜನ ಹುಲ್ಲು ಚಾವಣಿಯುಳ್ಳ, ನಾಲ್ಕು ಕೋಣೆಗಳುಳ್ಳ ಮಣ್ಣಿನ ಮನೆಯಲ್ಲಿ ವಾಸಿಸುತ್ತಿದ್ದೆವು. ಈ ಮನೆತನದಲ್ಲಿ ಅಜ್ಜಿ ಮತ್ತು ತಂದೆಯವರ ಮೂವರು ಸಹೋದರರು ಹಾಗೂ ಅವರ ಕುಟುಂಬಗಳೂ ಇದ್ದವು.

ನನ್ನ ಆರಂಭದ ಜೀವನವು ತುಂಬ ಸಂಕಟಕರವಾಗಿತ್ತು. ಇದಕ್ಕೆ ವಿಶೇಷವಾಗಿ ಒಂದು ಕಾರಣ, ತಂದೆಯವರ ಕೆಟ್ಟ ಆರೋಗ್ಯವಾಗಿತ್ತು. ಅವರಿಗೆ ತೀವ್ರವಾದ ಹೊಟ್ಟೆ ನೋವಿರುತ್ತಿತ್ತು. ಮತ್ತು ಇದು ಅನೇಕ ವರ್ಷಗಳ ನಂತರ ಅವರು ಸಾಯುವ ವರೆಗೂ ಅವರಿಗಂಟಿಕೊಂಡಿತ್ತು. ಅವರಿಗೆ ಮೂಲಿಕೆಗಳ ಚಿಕಿತ್ಸೆ ಮತ್ತು ಸಾಂಪ್ರದಾಯಿಕ ವೈದ್ಯಕೀಯ ಚಿಕಿತ್ಸೆ, ಹೀಗೆ ಆಫ್ರಿಕದ ಒಂದು ರೈತ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ವೈದ್ಯಕೀಯ ಚಿಕಿತ್ಸೆಯು ಕೊಡಲ್ಪಟ್ಟರೂ, ಅವರ ಈ ಅಜ್ಞಾತ ಬಾಧೆಯು ಸ್ವಲ್ಪವೂ ಜಗ್ಗಲಿಲ್ಲ. ನಾವು ಎಷ್ಟೋ ರಾತ್ರಿಗಳನ್ನು ಅವರ ಬಳಿ ಕುಳಿತು ಅಳುತ್ತಾ ಕಳೆದಿದ್ದೇವೆ. ಮರುದಿನ ಬೆಳಗ್ಗೆ ಕೋಳಿ ಕೂಗುವ ವರೆಗೂ ತಂದೆಯವರು ಪ್ರಾಣಸಂಕಟದಿಂದ ಇಡೀ ರಾತ್ರಿ ನೆಲದ ಮೇಲೆ ಉರುಳುತ್ತಾ ಇರುತ್ತಿದ್ದರು. ತಮ್ಮ ಕಾಯಿಲೆಗೆ ಮದ್ದನ್ನು ಹುಡುಕುತ್ತಾ, ಅವರು ಅನೇಕಸಲ ಅಮ್ಮನೊಂದಿಗೆ ಬೇರೆ ಬೇರೆ ಸ್ಥಳಗಳಿಗೆ ಪ್ರಯಾಣ ಬೆಳೆಸುತ್ತಿದ್ದರು. ಆಗ ನನ್ನನ್ನೂ ನನ್ನ ಒಡಹುಟ್ಟಿದವರನ್ನೂ ನನ್ನ ಅಜ್ಜಿಯ ಆರೈಕೆಯಲ್ಲಿ ಬಿಟ್ಟುಹೋಗುತ್ತಿದ್ದರು.

ನಮ್ಮ ಕುಟುಂಬವು, ಸುವರ್ಣಗೆಡ್ಡೆ, ಮರಗೆಣಸು ಮತ್ತು ಕೋಲ ಬೀಜಗಳನ್ನು ಬೆಳೆಸಿ ಮಾರುವ ಮೂಲಕ ಜೀವನ ನಡೆಸುತ್ತಿತ್ತು. ನಮಗೆ ಸಿಗುತ್ತಿದ್ದ ಸ್ವಲ್ಪ ಆದಾಯಕ್ಕೆ ಹೆಚ್ಚನ್ನು ಕೂಡಿಸಲು, ನಾವು ರಬ್ಬರ್‌ ರಸ ಇಳಿಸುವ ಕೆಲಸವನ್ನು ಸಹ ಮಾಡುತ್ತಿದ್ದೆವು. ನಮ್ಮ ಮುಖ್ಯ ಆಹಾರವು ಸುವರ್ಣಗೆಡ್ಡೆಯಾಗಿತ್ತು. ನಾವು ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಹೀಗೆ ಮೂರೂ ಹೊತ್ತು ಸುವರ್ಣಗೆಡ್ಡೆಯನ್ನೇ ತಿನ್ನುತ್ತಿದ್ದೆವು. ಆಗಾಗ ಕೆಲವೊಮ್ಮೆ, ನಾವು ಹುರಿಯಲ್ಪಟ್ಟ ಬಾಳೆಹಣ್ಣನ್ನು ತಿಂದಾಗ ಆಹಾರದಲ್ಲಿ ಸ್ವಲ್ಪ ವೈವಿಧ್ಯತೆಯಿರುತ್ತಿತ್ತು.

ನಮ್ಮ ಜೀವಿತದ ಒಂದು ಪ್ರಮುಖ ಭಾಗವು, ಪೂರ್ವಜರ ಆರಾಧನೆಯಾಗಿತ್ತು. ನಮ್ಮ ಕುಟುಂಬವು, ಕವಡೆಗಳು ಕಟ್ಟಲ್ಪಟ್ಟಿದ್ದ ಕೋಲುಗಳಿಗೆ ಆಹಾರವನ್ನು ಅರ್ಪಿಸುತ್ತಿತ್ತು. ತಂದೆಯವರು ದುಷ್ಟಾತ್ಮಗಳನ್ನೂ ಮಂತ್ರವಾದಿನಿಯರನ್ನೂ ದೂರವಿರಿಸಲಿಕ್ಕಾಗಿ ಒಂದು ವಿಗ್ರಹವನ್ನೂ ಆರಾಧಿಸುತ್ತಿದ್ದರು.

ನಾನು ಐದು ವರ್ಷದವನಾಗಿದ್ದಾಗ, ನಾವು ನಮ್ಮ ಹಳ್ಳಿಯಿಂದ ಸುಮಾರು 11 ಕಿಲೊಮೀಟರ್‌ ದೂರದಲ್ಲಿದ್ದ ಒಂದು ಫಾರ್ಮ್‌ ಕ್ಯಾಂಪಿಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಿದೆವು. ಅಲ್ಲಿ ತಂದೆಯವರಿಗೆ ಗಿನಿಹುಳು ರೋಗ ಅಂಟಿಕೊಂಡಿತು. ಅವರ ಹೊಟ್ಟೆಯ ವ್ಯಾಧಿಗೆ ಸೇರಿಸಿ ಇದು ಇನ್ನೊಂದು ಬಾಧೆಯಾಗಿತ್ತು. ಅವರಿಗೆ ಹಗಲಲ್ಲಿ ಕೆಲಸಮಾಡಲಾಗುತ್ತಿರಲಿಲ್ಲ ಮತ್ತು ರಾತ್ರಿ ಸಮಯದಲ್ಲಿ ಹೊಟ್ಟೆ ನೋವಿನಿಂದ ಯಾತನೆಯನ್ನು ಅನುಭವಿಸುತ್ತಿದ್ದರು. ನನಗೆ ಟೈಫಸ್‌ ಜ್ವರದ ಒಂದು ರೂಪವಾಗಿರುವ ಸುಗ್ಗಿನುಸಿ ಅಥವಾ ಸ್ಯಾಂಡ್‌ಫ್ಲೀ ರೋಗವು ಅಂಟಿಕೊಂಡಿತು. ಇದೆಲ್ಲದರ ಪರಿಣಾಮವಾಗಿ ನಮ್ಮ ಕೂಡುಕುಟುಂಬದವರು ನಮಗೆ ಕೊಡುತ್ತಿದ್ದ ಬಟ್ಟೆ, ಆಹಾರ, ಹಣದಿಂದಾಗಿ ನಾವು ದಿನ ತಳ್ಳುತ್ತಿದ್ದೆವು. ಈ ದಾರಿದ್ರ್ಯದಲ್ಲಿ ಸಾಯುವುದಕ್ಕೆ ಬದಲಾಗಿ ನಾವು ನಮ್ಮ ಸ್ವಂತ ಊರಾದ ಇವೊಸಾಗೆ ಹಿಂದಿರುಗಿದೆವು. ಮೊದಲನೆಯ ಮಗನಾದ ನಾನು ಕಷ್ಟದಿಂದ ದಿನತಳ್ಳುವ ಒಬ್ಬ ರೈತನಿಗಿಂತ ಮೇಲ್ಮಟ್ಟಕ್ಕೆ ಏರಬೇಕೆಂಬುದು ತಂದೆಯವರ ಬಯಕೆಯಾಗಿತ್ತು. ನನಗೆ ಒಳ್ಳೆಯ ಶಿಕ್ಷಣ ಸಿಕ್ಕಿದರೆ ನಾನು ಕುಟುಂಬದ ಜೀವನ ಮಟ್ಟವನ್ನು ಏರಿಸಿ, ನನ್ನ ಒಡಹುಟ್ಟಿದವರ ಪೋಷಣೆಯನ್ನು ಮಾಡಲು ಸಹಾಯವಾಗುವುದೆಂದು ಅವರೆಣಿಸಿದರು.

ವಿಭಿನ್ನ ಧರ್ಮಗಳೊಂದಿಗೆ ಸಂಪರ್ಕ

ನಮ್ಮ ಹಳ್ಳಿಗೆ ಹಿಂದಿರುಗಿದ ನಂತರ, ನಾನು ನನ್ನ ಶಾಲಾಭ್ಯಾಸವನ್ನು ಆರಂಭಿಸಲು ಶಕ್ತನಾದೆ. ಇದು, ನಾನು ಕ್ರೈಸ್ತಪ್ರಪಂಚದ ಧರ್ಮಗಳ ಸಂಪರ್ಕಕ್ಕೆ ಬರುವಂತೆ ಮಾಡಿತು. 1950ರ ದಶಕಗಳಲ್ಲಿ ಪಾಶ್ಚಾತ್ಯ ಶಿಕ್ಷಣವು, ಸರಕಾರದೊಂದಿಗೆ ನಿಕಟವಾಗಿ ಸಂಬಂಧಿಸಿತ್ತು. ನಾನು ಕ್ಯಾಥೊಲಿಕ್‌ ಪ್ರಾಥಮಿಕ ಶಾಲೆಯೊಂದಕ್ಕೆ ಹಾಜರಾಗುತ್ತಿದ್ದದ್ದರಿಂದ, ನಾನೊಬ್ಬ ರೋಮನ್‌ ಕ್ಯಾಥೊಲಿಕನಾಗಬೇಕಾಗಿತ್ತು.

ಇಸವಿ 1966ರಲ್ಲಿ ನಾನು 19 ವರ್ಷದವನಾದಾಗ, ಇವೊಸಾದಿಂದ ಸುಮಾರು ಎಂಟು ಕಿಲೊಮೀಟರ್‌ಗಳಷ್ಟು ದೂರದಲ್ಲಿದ್ದ ಇವೊಹಿನಿ ಪಟ್ಟಣದ ಪಿಲ್‌ಗ್ರಿಮ್‌ ಬ್ಯಾಪ್ಟಿಸ್ಟ್‌ ಸೆಕೆಂಡರಿ ಶಾಲೆಗೆ ನನ್ನನ್ನು ಸೇರಿಸಲಾಯಿತು. ಅಲ್ಲಿ ನನ್ನ ಧಾರ್ಮಿಕ ಶಿಕ್ಷಣವು ಬದಲಾಯಿತು. ಈಗ ನಾನೊಂದು ಪ್ರಾಟೆಸ್ಟಂಟ್‌ ಶಾಲೆಗೆ ಹಾಜರಾಗುತ್ತಿದ್ದದ್ದರಿಂದ, ಕ್ಯಾಥೊಲಿಕ್‌ ಪಾದ್ರಿಗಳು, ನಾನು ಭಾನುವಾರದಂದು ಪ್ರಭು ಭೋಜನದಲ್ಲಿ ಪಾಲ್ಗೊಳ್ಳುವುದನ್ನು ತಡೆದರು.

ನಾನು ಈ ಬ್ಯಾಪ್ಟಿಸ್ಟ್‌ ಶಾಲೆಯಲ್ಲಿದ್ದಾಗಲೇ ನನಗೆ ಮೊದಲ ಬಾರಿ ಬೈಬಲಿನೊಂದಿಗೆ ಸಂಪರ್ಕವಾಯಿತು. ನಾನು ಕ್ಯಾಥೊಲಿಕ್‌ ಚರ್ಚಿಗೆ ಹೋಗುವುದನ್ನು ಮುಂದುವರಿಸಿದೆನಾದರೂ, ಪ್ರತಿ ಭಾನುವಾರ ಕ್ಯಾಥೊಲಿಕ್‌ ಚರ್ಚಿನ ಆರಾಧನಾ ಕ್ರಿಯೆಯ ನಂತರ ನಾನು ನನ್ನಷ್ಟಕ್ಕೆ ಬೈಬಲನ್ನು ಓದುತ್ತಿದ್ದೆ. ಯೇಸು ಕ್ರಿಸ್ತನ ಬೋಧನೆಗಳು ನನ್ನನ್ನು ಆಕರ್ಷಿಸಿದವು ಮತ್ತು ನಾನು ದೈವಿಕ ಭಕ್ತಿಯ ಒಂದು ಅರ್ಥಪೂರ್ಣ ಬಾಳ್ವೆಯನ್ನು ನಡೆಸಬೇಕೆಂಬ ಆಸೆಯನ್ನು ನನ್ನಲ್ಲಿ ಚಿಗುರಿಸಿದವು. ನಾನು ಬೈಬಲನ್ನು ಓದುತ್ತಾ ಹೋದಂತೆ, ಧಾರ್ಮಿಕ ಮುಖಂಡರಲ್ಲಿ ಕೆಲವರ ಕಪಟಾಚಾರ ಮತ್ತು ಸಾಮಾನ್ಯ ಜನರಲ್ಲಿ ಅನೇಕರ ಅನೈತಿಕ ಜೀವನ ಶೈಲಿಯನ್ನು ನಾನು ಹೆಚ್ಚೆಚ್ಚು ಹೇಸತೊಡಗಿದೆ. ಯಾಕೆಂದರೆ ಕ್ರೈಸ್ತರೆಂದು ಹೇಳಿಕೊಳ್ಳುತ್ತಿರುವವರಲ್ಲಿ ನಾನು ಏನನ್ನು ನೋಡಿದೆನೊ ಅದು, ಯೇಸು ಮತ್ತು ಅವನ ಅಪೊಸ್ತಲರು ಏನು ಕಲಿಸಿದರೊ ಮತ್ತು ಮಾಡಿದರೊ ಅದಕ್ಕಿಂತ ತುಂಬ ಭಿನ್ನವಾಗಿತ್ತು.

ನಿರ್ದಿಷ್ಟವಾಗಿ ಕೆಲವೊಂದು ಘಟನೆಗಳಿಂದ ನನಗೆ ತುಂಬ ಆಘಾತವಾಯಿತು. ಒಂದು ದಿನ ನಾನು ಒಬ್ಬ ಕ್ಯಾಥೊಲಿಕ್‌ ಬೋಧಕನ ಕಿರಾಣಿ ಅಂಗಡಿಗೆ ಒಂದು ಜಪಮಾಲೆಯನ್ನು ಖರೀದಿಸಲು ಹೋದಾಗ, ಆ ಅಂಗಡಿಯ ಬಾಗಿಲ ನಿಲುಪಟ್ಟಿಯಲ್ಲಿ ಒಂದು ಜುಜೂ ತಾಯಿತಿಯು ತೂಗುಹಾಕಲ್ಪಟ್ಟಿರುವುದನ್ನು ನೋಡಿದೆ. ಇನ್ನೊಂದು ಸಲ, ಬ್ಯಾಪ್ಟಿಸ್ಟ್‌ ಶಾಲೆಯ ಪ್ರಾಂಶುಪಾಲರು ನನ್ನನ್ನು ಲೈಂಗಿಕವಾಗಿ ದುರುಪಯೋಗಿಸಲು ಪ್ರಯತ್ನಿಸಿದರು. ಅವನೊಬ್ಬ ಸಲಿಂಗಕಾಮಿಯಾಗಿದ್ದಾನೆ ಮತ್ತು ಇತರರನ್ನು ಹಾಗೆ ದುರುಪಯೋಗಿಸಿದ್ದನೆಂದು ನನಗೆ ಆಮೇಲೆ ತಿಳಿದುಬಂತು. ನಾನು ಈ ವಿಷಯಗಳ ಕುರಿತಾಗಿ ಯೋಚಿಸುತ್ತಾ, ನನ್ನಷ್ಟಕ್ಕೆ ಹೀಗೆ ಕುತೂಹಲಪಟ್ಟೆ: ‘ಯಾರ ಸದಸ್ಯರು ಮತ್ತು ಮುಖಂಡರು ಸಹ ತಮ್ಮ ಗಂಭೀರವಾದ ಪಾಪಗಳಿಗೆ ಲೆಕ್ಕವೊಪ್ಪಿಸಬೇಕಾಗುವುದಿಲ್ಲವೊ ಅಂಥ ಧರ್ಮಗಳನ್ನು ದೇವರು ಸಮ್ಮತಿಸುತ್ತಾನೊ?’

ಧರ್ಮವನ್ನು ಬದಲಾಯಿಸಿದ್ದು

ಆದರೂ, ನಾನು ಬೈಬಲಿನಲ್ಲಿ ಏನನ್ನು ಓದಿದ್ದೆನೊ ಅದನ್ನು ಈಗಲೂ ಇಷ್ಟಪಡುತ್ತಿದ್ದೆ ಮತ್ತು ಅದನ್ನು ಓದುವುದನ್ನು ಮುಂದುವರಿಸುವ ದೃಢಸಂಕಲ್ಪಮಾಡಿದೆ. “ಈ ಲೋಕದಲ್ಲಿ ಶಾಂತಿಯಿರುವುದು ಯೆಹೋವನ ಸಾಕ್ಷಿಗಳಿಗೆ ಮಾತ್ರ,” ಎಂದು ತಂದೆಯವರು ಸುಮಾರು 15 ವರ್ಷಗಳ ಹಿಂದೆ ಹೇಳಿದ್ದ ಆ ಮಾತುಗಳ ಕುರಿತಾಗಿ ನಾನು ಯೋಚಿಸಲಾರಂಭಿಸಿದ್ದು ಆಗಲೇ. ಆದರೆ ನನ್ನ ಶಾಲೆಯಲ್ಲಿದ್ದ ಸಾಕ್ಷಿ ಯುವ ಜನರಿಗೆ ಅಪಹಾಸ್ಯ ಮಾಡಲಾಗುತ್ತಿತ್ತು ಮತ್ತು ಅವರು ನಮ್ಮ ಬೆಳಗ್ಗಿನ ಆರಾಧನೆಯಲ್ಲಿ ಒಳಗೂಡದಿದ್ದ ಕಾರಣ ಕೆಲವೊಮ್ಮೆ ಅವರನ್ನು ಶಿಕ್ಷಿಸಲಾಗುತ್ತಿತ್ತು. ಇದರಿಂದಾಗಿ ನನಗೆ ಸ್ವಲ್ಪ ಹೆದರಿಕೆಯಿತ್ತು. ಮತ್ತು ಅವರ ಕೆಲವೊಂದು ನಂಬಿಕೆಗಳು ನನಗೆ ವಿಚಿತ್ರವಾಗಿ ತೋರುತ್ತಿದ್ದವು. ಉದಾಹರಣೆಗಾಗಿ, 1,44,000 ಮಂದಿ ಮಾತ್ರ ಸ್ವರ್ಗಕ್ಕೆ ಹೋಗುವರೆಂಬದನ್ನು ನಂಬಲು ನನಗೆ ಕಷ್ಟವಾಗುತ್ತಿತ್ತು. (ಪ್ರಕಟನೆ 14:3) ನಾನು ಸ್ವರ್ಗಕ್ಕೆ ಹೋಗಲು ಅಪೇಕ್ಷಿಸುತ್ತಿದ್ದದರಿಂದ, ಆ ಸಂಖ್ಯೆಯು ನನ್ನ ಜನನದ ಮುಂಚೆಯೇ ಎಲ್ಲಿ ಪೂರ್ಣಗೊಂಡಿದೆಯೊ ಎಂದು ಯೋಚಿಸುತ್ತಿದ್ದೆ.

ಆ ಸಾಕ್ಷಿಗಳು ತಮ್ಮ ನಡತೆ ಮತ್ತು ಮನೋಭಾವದಲ್ಲಿ ಬೇರೆಯವರಿಗಿಂತ ಭಿನ್ನರಾಗಿದ್ದರೆಂಬುದು ಸುಸ್ಪಷ್ಟವಾಗಿತ್ತು. ಶಾಲೆಯಲ್ಲಿದ್ದ ಇತರ ಯುವ ಜನರ ಅನೈತಿಕ ಮತ್ತು ಹಿಂಸಾತ್ಮಕ ಚಟುವಟಿಕೆಗಳಲ್ಲಿ ಅವರು ಒಳಗೂಡುತ್ತಿರಲಿಲ್ಲ. ಬೈಬಲಿನಲ್ಲಿ ತಿಳಿಸಲ್ಪಟ್ಟಿರುವಂತೆ ನಿಜ ಧರ್ಮವನ್ನು ಆಚರಿಸುತ್ತಿರುವವರು ಇರಬೇಕಾಗಿರುವಂತೆ ಅವರು ನಿಜವಾಗಿಯೂ ಲೋಕದಿಂದ ಪ್ರತ್ಯೇಕರಾಗಿದ್ದರೆಂದು ನನಗನಿಸುತ್ತಿತ್ತು.​—ಯೋಹಾನ 17:​14-16; ಯಾಕೋಬ 1:27.

ನಾನು ಇನ್ನೂ ಹೆಚ್ಚು ಪರೀಕ್ಷಿಸಲು ನಿರ್ಣಯಿಸಿದೆ. ಸೆಪ್ಟೆಂಬರ್‌ 1969ರಲ್ಲಿ ನಾನು “ನಿತ್ಯಜೀವಕ್ಕೆ ನಡಿಸುವ ಸತ್ಯವು” ಎಂಬ ಪುಸ್ತಕವನ್ನು ಪಡೆಯಲು ಶಕ್ತನಾದೆ. ಅದರ ಮುಂದಿನ ತಿಂಗಳು, ಯೆಹೋವನ ಸಾಕ್ಷಿಗಳ ಒಬ್ಬ ಪೂರ್ಣ ಸಮಯದ ಶುಶ್ರೂಷಕನಾಗಿದ್ದ ಒಬ್ಬ ಪಯನೀಯರನು ನನ್ನೊಂದಿಗೆ ಅಧ್ಯಯನವನ್ನು ಆರಂಭಿಸಿದನು. ನನ್ನ ಮೊದಲನೆಯ ಅಧ್ಯಯನದಿಂದ ಪ್ರೇರಿತನಾಗಿ, ನಾನು ಶನಿವಾರ ರಾತ್ರಿ ಸತ್ಯ ಪುಸ್ತಕವನ್ನು ಓದಲಾರಂಭಿಸಿದವನು ಮರುದಿನ ಮಧ್ಯಾಹ್ನದೊಳಗೆ ಅದನ್ನು ಓದಿ ಮುಗಿಸಿಬಿಟ್ಟೆ. ತತ್‌ಕ್ಷಣವೇ, ನಾನು ಓದಿದಂಥ ಅದ್ಭುತಕರ ವಿಷಯಗಳ ಬಗ್ಗೆ ನಾನು ನನ್ನ ಜೊತೆ ವಿದ್ಯಾರ್ಥಿಗಳಿಗೆ ಹೇಳತೊಡಗಿದೆ. ನನ್ನ ಹೊಸ ಧರ್ಮವು ನನಗೆ ಹುಚ್ಚು ಹಿಡಿಸಿದೆಯೆಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನೆನಸಿದರು. ಆದರೆ ನಾನು ಹುಚ್ಚನಾಗುತ್ತಿರಲಿಲ್ಲವೆಂದು ನನಗೆ ಗೊತ್ತಿತ್ತು.​—ಅ. ಕೃತ್ಯಗಳು 26:24.

ನಾನೊಂದು ಹೊಸ ಧರ್ಮದ ಬಗ್ಗೆ ಸಾರುತ್ತಿದ್ದೇನೆಂಬ ಸುದ್ದಿಯನ್ನು ನನ್ನ ಹೆತ್ತವರಿಗೆ ತಲಪಿಸಲಾಯಿತು. ನನ್ನ ಸಮಸ್ಯೆಯೇನೆಂಬುದನ್ನು ಪತ್ತೆಹಚ್ಚಲಿಕ್ಕಾಗಿ ನಾನು ಆ ಕೂಡಲೇ ಮನೆಗೆ ಹಿಂದೆ ಬರುವಂತೆ ಅವರು ಕೇಳಿಕೊಂಡರು. ನನಗೆ ಯಾರಿಂದಲೂ ಸಲಹೆಪಡೆಯಲಿಕ್ಕಾಗಲಿಲ್ಲ, ಯಾಕೆಂದರೆ ಎಲ್ಲ ಸಾಕ್ಷಿಗಳು ಇಲೇಶಾ ಎಂಬಲ್ಲಿ ನಡೆಯುತ್ತಿದ್ದ ತಮ್ಮ ಜಿಲ್ಲಾ ಅಧಿವೇಶನಕ್ಕೆ ಹೋಗಿದ್ದರು. ನಾನು ಮನೆಗೆ ಹೋದಾಗ ನನ್ನ ತಾಯಿ ಮತ್ತು ಬೇರೆ ಸಂಬಂಧಿಕರು ನನ್ನ ಮೇಲೆ ಪ್ರಶ್ನೆಗಳ ಹಾಗೂ ಟೀಕೆಯ ಸುರಿಮಳೆಗೈದರು. ನಾನು ಏನನ್ನು ಕಲಿಯುತ್ತಿದ್ದೇನೊ ಅದನ್ನು ನನ್ನಿಂದಾಗುವಷ್ಟರ ಮಟ್ಟಿಗೆ ಬೈಬಲಿನಿಂದ ಸಮರ್ಥಿಸಲು ಪ್ರಯತ್ನಿಸಿದೆ.​—1 ಪೇತ್ರ 3:15.

ಯೆಹೋವನ ಸಾಕ್ಷಿಗಳು ಸುಳ್ಳು ಬೋಧಕರಾಗಿದ್ದಾರೆಂಬುದನ್ನು ರುಜುಪಡಿಸಲು ಪ್ರಯತ್ನಿಸಿ ಸೋತುಹೋದ ನನ್ನ ಸೋದರಮಾವ, ಇನ್ನೊಂದು ವಿಧಾನವನ್ನು ಪ್ರಯತ್ನಿಸಿದರು. ಅವರು ನನ್ನ ಬಳಿ ಹೀಗೆ ಬೇಡಿದರು: “ನೋಡು ನೀನು ಶಾಲೆಗೆ ಹೋದದ್ದು ಶಿಕ್ಷಣಪಡೆಯಲಿಕ್ಕಾಗಿ ಎಂಬುದನ್ನು ನೆನಪಿನಲ್ಲಿಟ್ಟುಕೊ. ನೀನು ನಿನ್ನ ಅಭ್ಯಾಸವನ್ನು ಬಿಟ್ಟು, ಸಾರುತ್ತಾ ಹೋದರೆ, ನಿನ್ನ ಶಿಕ್ಷಣವನ್ನು ಎಂದಿಗೂ ಮುಗಿಸಲಾರಿ. ಆದುದರಿಂದ ನಿನ್ನ ಶಾಲೆಯನ್ನು ಮೊದಲು ಮುಗಿಸಿ, ಅನಂತರ ಈ ಹೊಸ ಧರ್ಮವನ್ನು ಸೇರಬಾರದೇಕೆ?” ಆ ಸಮಯದಲ್ಲಿ ನನಗೆ ಇದು ಸರಿತೋಚಿತು, ಆದುದರಿಂದ ನಾನು ಸಾಕ್ಷಿಗಳೊಂದಿಗೆ ಅಧ್ಯಯನ ಮಾಡುವುದನ್ನು ನಿಲ್ಲಿಸಿದೆ.

ಡಿಸೆಂಬರ್‌ 1970ರಲ್ಲಿ ನನ್ನ ಗ್ರ್ಯಾಜುಏಷನ್‌ ಆದ ಕೂಡಲೇ, ನಾನು ನೇರವಾಗಿ ರಾಜ್ಯ ಸಭಾಗೃಹಕ್ಕೆ ಹೋದೆ, ಮತ್ತು ಅಂದಿನಿಂದ ಹಿಡಿದು ಈ ವರೆಗೂ ನಾನು ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹಾಜರಾಗುತ್ತಿದ್ದೇನೆ. ನಾನು ದೇವರಿಗೆ ಮಾಡಿದ ಸಮರ್ಪಣೆಯ ಸಂಕೇತವಾಗಿ 1971ರ ಆಗಸ್ಟ್‌ 30ರಂದು ನಾನು ದೀಕ್ಷಾಸ್ನಾನ ಪಡೆದೆ. ಇದರಿಂದಾಗಿ ನನ್ನ ಹೆತ್ತವರು ಮಾತ್ರವಲ್ಲ, ಇಡೀ ಸಮುದಾಯವೇ ತತ್ತರಿಸಿಹೋಯಿತು. ನಾನು ಅವರನ್ನು ತುಂಬ ನಿರಾಶೆಗೊಳಿಸಿದ್ದೇನೆ, ಯಾಕೆಂದರೆ ಇವೊಸಾದಲ್ಲಿ ಅಥವಾ ಸುತ್ತಲಿನ ಪ್ರದೇಶದಲ್ಲಿ ಸರಕಾರಿ ವಿದ್ಯಾರ್ಥಿವೇತನವನ್ನು ಪಡೆದಿರುವವನು ನಾನೊಬ್ಬನೆ ಎಂದು ಅವರು ಹೇಳಿದರು. ನನ್ನ ಬಗ್ಗೆ ಅನೇಕರು ಉಚ್ಚ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ನಾನು ನನ್ನ ಶಿಕ್ಷಣವನ್ನು ಸಮುದಾಯದ ಏಳಿಗೆಗಾಗಿ ಉಪಯೋಗಿಸುವೆನೆಂದು ಅವರು ನಿರೀಕ್ಷಿಸಿದ್ದರು.

ನನ್ನ ಧರ್ಮ ಬದಲಾವಣೆಯ ಫಲಿತಾಂಶಗಳು

ನನ್ನ ಕುಟುಂಬದ ಮತ್ತು ಸಮುದಾಯದ ಹಿರಿಯ ವ್ಯಕ್ತಿಗಳು, ನಾನು ನನ್ನ ಧರ್ಮವನ್ನು ಬಿಟ್ಟುಬಿಡುವಂತೆ ನನ್ನ ಮನವೊಲಿಸಲಿಕ್ಕಾಗಿ ಕೆಲವು ಪ್ರತಿನಿಧಿಗಳನ್ನು ಕಳುಹಿಸಿದರು. ಅವರ ಪ್ರಯತ್ನಗಳೊಂದಿಗೆ ಅವರು ಶಾಪಗಳನ್ನೂ ಒಳಗೂಡಿಸಿದರು. “ನೀನು ಈ ಧರ್ಮವನ್ನು ಬಿಡದಿದ್ದರೆ, ನಿನ್ನ ಭವಿಷ್ಯತ್ತು ಮಣ್ಣುಪಾಲಾಗುವುದು. ನಿನಗೆ ಉದ್ಯೋಗ ಸಿಗಲಿಕ್ಕಿಲ್ಲ. ನೀನು ನಿನ್ನ ಸ್ವಂತ ಮನೆಯನ್ನು ಕಟ್ಟಲಾರಿ. ನೀನು ಮದುವೆಯಾಗಿ ಒಂದು ಕುಟುಂಬವನ್ನು ಬೆಳೆಸಲಾರಿ” ಎಂದೆಲ್ಲಾ ಅವರು ಹೇಳಿದರು.

ಅವರು ಹೇಳಿದ ಈ ಎಲ್ಲ ಕೆಟ್ಟ ಫಲಿತಾಂಶಗಳಿಗೆ ವ್ಯತಿರಿಕ್ತವಾಗಿ, ನಾನು ಶಾಲೆಯನ್ನು ಮುಗಿಸಿದ ಹತ್ತು ತಿಂಗಳುಗಳೊಳಗೆ ನನಗೆ ಒಬ್ಬ ಶಿಕ್ಷಕನೋಪಾದಿ ಉದ್ಯೋಗ ಸಿಕ್ಕಿತು. ಅಕ್ಟೋಬರ್‌ 1972ರಲ್ಲಿ ನಾನು ನನ್ನ ಪ್ರಿಯ ಮಡದಿ ವೆರೊನಿಕಳನ್ನು ಮದುವೆಯಾದೆ. ತದನಂತರ ಸರಕಾರವು ನನ್ನನ್ನು ಕೃಷಿ ವಿಸ್ತಾರಕಾರ್ಯದ ಏಜೆಂಟನಾಗಿ ತರಬೇತಿಗೊಳಿಸಿತು. ನಾನು ನನ್ನ ಮೊದಲ ಕಾರನ್ನು ಖರೀದಿಸಿದೆ ಮತ್ತು ನಮ್ಮ ಮನೆಯನ್ನು ಕಟ್ಟಲು ಆರಂಭಿಸಿದೆ. 1973ರ ನವೆಂಬರ್‌ 5ರಂದು, ನಮ್ಮ ಮೊದಲ ಮಗಳಾದ ವಿಕ್ಟರಿಯಳ ಜನನವಾಯಿತು. ಮತ್ತು ಮುಂದಿನ ವರ್ಷಗಳಲ್ಲಿ ನಮಗೆ ಲಿಡ್ಯ, ವಿಲ್ಫ್ರೆಡ್‌, ಮತ್ತು ಜೋನ್‌ ಹುಟ್ಟಿದರು. 1986ರಲ್ಲಿ ನಮ್ಮ ಕೊನೆಯ ಮಗನಾದ ಮೈಕಾ ಹುಟ್ಟಿದನು. ಇವರೆಲ್ಲರೂ, ಯೆಹೋವನಿಂದ ಬಂದ ಸ್ವಾಸ್ತ್ಯವಾದ ಅಮೂಲ್ಯ ಮಕ್ಕಳಾಗಿ ಪರಿಣಮಿಸಿದ್ದಾರೆ.​—ಕೀರ್ತನೆ 127:3.

ಹಿಂದಿರುಗಿ ನೋಡುವಾಗ, ನನ್ನ ಸಮುದಾಯದ ಎಲ್ಲ ಶಾಪಗಳು ಆಶೀರ್ವಾದಗಳಾಗಿ ಪರಿಣಮಿಸಿದವೆಂದು ನಾನು ಹೇಳಬಲ್ಲೆ. ಆದುದರಿಂದಲೇ ನಾನು ನನ್ನ ಮೊದಲನೆ ಮಗಳಿಗೆ ವಿಕ್ಟರಿ (ಇದರರ್ಥ ವಿಜಯ) ಎಂಬ ಹೆಸರಿಟ್ಟೆ. ಇತ್ತೀಚೆಗೆ ನನ್ನ ಸಮುದಾಯವು ನನಗೆ ಪತ್ರಬರೆದು ಹೇಳಿದ್ದು: “ದೇವರು ನಿನ್ನನ್ನು ಆಶೀರ್ವದಿಸುತ್ತಿರುವುದರಿಂದ ನೀನು ದಯವಿಟ್ಟು ಊರಿಗೆ ಹಿಂದಿರುಗಿ ನಮ್ಮ ಸಮುದಾಯದ ಬೆಳವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಬಯಸುತ್ತೇವೆ.”

ದೇವರ ಮಾರ್ಗಗಳಲ್ಲಿ ಮಕ್ಕಳನ್ನು ಬೆಳೆಸುವುದು

ಮಕ್ಕಳನ್ನು ಬೆಳೆಸುವ ನಮ್ಮ ದೈವಿಕ ಜವಾಬ್ದಾರಿಯನ್ನು ಪೂರೈಸುವುದು ಮತ್ತು ಭೌತಿಕ ಸಿರಿಸಂಪತ್ತುಗಳನ್ನು ಬೆನ್ನಟ್ಟುವುದು, ಹೀಗೆ ಎರಡೂ ಕೆಲಸಗಳನ್ನು ಒಂದೇ ಸಮಯದಲ್ಲಿ ಮಾಡಲಾರೆವೆಂದು ನನಗೆ ಮತ್ತು ನನ್ನ ಹೆಂಡತಿಗೆ ತಿಳಿದಿತ್ತು. ಆದುದರಿಂದ ನಾವೊಂದು ಸರಳ ಜೀವನವನ್ನು ನಡೆಸುವುದರಲ್ಲಿ ಸಂತೃಪ್ತರಾಗಿರಲು ಕಲಿತಿದ್ದೇವೆ. ಒಂದು ಭಿನ್ನವಾದ ಜೀವನಶೈಲಿಯನ್ನು ಆಯ್ಕೆಮಾಡುವುದರಿಂದ ಎದುರಾಗಬಹುದಾದ ಸಂಭಾವ್ಯ ಫಲಿತಾಂಶಗಳನ್ನು ಅನುಭವಿಸುವ ಬದಲು ನಾವು ಈ ರೀತಿಯಲ್ಲಿ ಜೀವಿಸಲು ಇಷ್ಟಪಡುತ್ತೇವೆ.

ಲೋಕದ ನಮ್ಮ ಭಾಗದಲ್ಲಿ, ಅನೇಕ ಕುಟುಂಬಗಳು ಸೇರಿಕೊಂಡು ಒಂದೇ ಕಟ್ಟಡದಲ್ಲಿದ್ದು, ಒಂದೇ ಬಚ್ಚಲುಮನೆ, ಅಡಿಗೆಮನೆ ಮುಂತಾದವುಗಳನ್ನು ಉಪಯೋಗಿಸುವುದು ಸರ್ವಸಾಮಾನ್ಯವಾಗಿದೆ. ಆದರೆ, ಒಬ್ಬ ಸರಕಾರಿ ನೌಕರನಾಗಿ ನಾನು ವರ್ಗಾಯಿಸಲ್ಪಡುತ್ತಿದ್ದ ಯಾವುದೇ ಪಟ್ಟಣದಲ್ಲಿ ಕೇವಲ ಖಾಸಗಿಯಾದ ಮನೆಗಳನ್ನು ಬಾಡಿಗೆಗೆ ಪಡೆದುಕೊಳ್ಳಲು ಶಕ್ತರಾದದ್ದಕ್ಕಾಗಿ ನಾವು ಸಂತೋಷಿಸುತ್ತೇವೆ. ಇಂಥ ವಸತಿಸೌಕರ್ಯಗಳು ದುಬಾರಿಯಾಗಿವೆ ನಿಜ, ಆದರೆ ಹೀಗಿರುವುದರಿಂದ ನಮ್ಮ ಮಕ್ಕಳು ಅಹಿತಕರವಾದ ಪ್ರಭಾವಗಳಿಗೆ ಒಡ್ಡಲ್ಪಡುವ ಸಾಧ್ಯತೆಯು ಕಡಿಮೆಯಾಗಿದೆ. ಈ ಎಲ್ಲ ವರ್ಷಗಳಲ್ಲಿ ನಾವು ನಮ್ಮ ಮಕ್ಕಳನ್ನು ಆತ್ಮಿಕವಾಗಿ ಆರೋಗ್ಯಕರವಾಗಿದ್ದ ಒಂದು ಪರಿಸರದಲ್ಲಿ ಬೆಳೆಸಲು ಶಕ್ತರಾದದ್ದಕ್ಕಾಗಿ ನಾನು ಯೆಹೋವನಿಗೆ ಉಪಕಾರ ಹೇಳುತ್ತೇನೆ.

ಅಷ್ಟುಮಾತ್ರವಲ್ಲದೆ, ನನ್ನ ಹೆಂಡತಿಯು ಕೆಲಸಕ್ಕೆ ಹೋಗದೆ ಮನೆಯಲ್ಲೇ ಉಳಿದು, ನಮ್ಮ ಮಕ್ಕಳ ಆರೈಕೆಯನ್ನು ಮಾಡಿದ್ದಾಳೆ. ನಾನು ಕೆಲಸವನ್ನು ಮುಗಿಸಿ ಮನೆಗೆ ಬರುವಾಗ, ನಾವು ಜೊತೆಯಾಗಿ ಒಂದು ಕುಟುಂಬದೋಪಾದಿ ಕೆಲಸಮಾಡಲು ಪ್ರಯತ್ನಿಸುತ್ತೇವೆ. ನಾವು ಏನೇ ಮಾಡುತ್ತಿರಲಿ ಅದನ್ನು ಒಂದು ತಂಡದೋಪಾದಿ ಮಾಡುತ್ತೇವೆ. ಇದರಲ್ಲಿ ಕುಟುಂಬ ಬೈಬಲ್‌ ಅಧ್ಯಯನ, ಸಭಾ ಕೂಟಗಳಿಗಾಗಿ ತಯಾರಿ ಮತ್ತು ಹಾಜರಾಗುವಿಕೆ, ಕ್ರೈಸ್ತ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವಿಕೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದೂ ಸೇರಿರುತ್ತದೆ.

ನಾವು ಧರ್ಮೋಪದೇಶಕಾಂಡ 6:​6, 7ರಲ್ಲಿರುವ ಸಲಹೆಯನ್ನು ಪಾಲಿಸಲು ಪ್ರಯತ್ನಿಸಿದ್ದೇವೆ. ಹೆತ್ತವರು ತಮ್ಮ ಮಕ್ಕಳಿಗೆ ಕೇವಲ ಮನೆಯಲ್ಲಿ ಅಲ್ಲ, ಬದಲಾಗಿ ಪ್ರತಿಯೊಂದು ಸಂದರ್ಭದಲ್ಲೂ ಕಲಿಸುವಂತೆ ಅದು ಪ್ರೇರೇಪಿಸುತ್ತದೆ. ಇದರಿಂದಾಗಿ ನಮ್ಮ ಮಕ್ಕಳು ಲೌಕಿಕ ಜನರ ಬದಲು ಸಾಕ್ಷಿಗಳ ನಡುವೆ ಸಾಂಗತ್ಯವನ್ನು ಪಡೆದಿದ್ದಾರೆ. ನಾನು ಮತ್ತು ವೆರೊನಿಕ, ನಮ್ಮ ನಂಬಿಕೆಗಳೊಂದಿಗೆ ಸಮ್ಮತಿಸದಂಥ ಜನರೊಂದಿಗೆ ಅನಾವಶ್ಯಕವಾಗಿ ಸಮಯ ಕಳೆಯದಿರುವುದರಿಂದ, ಮಕ್ಕಳು ನಮ್ಮ ಮಾದರಿಯಿಂದಲೂ ತಮ್ಮ ಸಹವಾಸಗಳ ಬಗ್ಗೆ ಜಾಗ್ರತೆ ವಹಿಸಲು ಕಲಿತಿದ್ದಾರೆ.​—ಜ್ಞಾನೋಕ್ತಿ 13:20; 1 ಕೊರಿಂಥ 15:33.

ಕೇವಲ ನಮ್ಮ ಮಾರ್ಗದರ್ಶನ ಮತ್ತು ಕಲಿಸುವಿಕೆಯು ಮಾತ್ರ ನಮ್ಮ ಮಕ್ಕಳ ಜೀವನದ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಿಲ್ಲವೆಂಬುದು ನಿಜ. ನಮ್ಮ ಮನೆ ಬಾಗಿಲು ಆಗ ಮತ್ತು ಈಗಲೂ ಹುರುಪಿನ ಕ್ರೈಸ್ತರಿಗಾಗಿ ತೆರೆದಿದೆ. ಹೀಗೆ ನಮ್ಮ ಮನೆಗೆ ಬಂದವರಲ್ಲಿ ಅನೇಕರು ಯೆಹೋವನ ಸಾಕ್ಷಿಗಳ ಸಂಚರಣಾ ಶುಶ್ರೂಷಕರಾಗಿದ್ದಾರೆ. ಈ ಪ್ರೌಢ ಕ್ರೈಸ್ತರು ನಮ್ಮ ಕುಟುಂಬದೊಂದಿಗೆ ಕಳೆದಿರುವ ಸಮಯವು, ನಮ್ಮ ಮಕ್ಕಳಿಗೆ ಅವರ ಸ್ವತ್ಯಾಗದ ಜೀವನ ರೀತಿಯನ್ನು ಗಮನಿಸಿ ಕಲಿತುಕೊಳ್ಳುವ ಅವಕಾಶವನ್ನು ಕೊಟ್ಟಿದೆ. ಇದು ನಮ್ಮ ಕಲಿಸುವಿಕೆಗೆ ಹೆಚ್ಚು ಬಲವನ್ನು ನೀಡಿದೆ ಮತ್ತು ಮಕ್ಕಳು ಸತ್ಯವನ್ನು ತಮ್ಮದಾಗಿ ಮಾಡಿಕೊಂಡಿದ್ದಾರೆ.

ದೈವಿಕ ಭಕ್ತಿಗಾಗಿ ಪ್ರತಿಫಲ ಸಿಕ್ಕಿದೆ

ಇಂದು ನನ್ನ ಹೆಂಡತಿ ಮತ್ತು ನಾನು, ನಮ್ಮ ಮಕ್ಕಳಲ್ಲಿ ನಾಲ್ವರೊಂದಿಗೆ ಪೂರ್ಣ ಸಮಯದ ಶುಶ್ರೂಷೆಯಲ್ಲಿದ್ದೇವೆ. ನಾನು 1973ರಲ್ಲಿ ಪಯನೀಯರ್‌ ಸೇವೆಯನ್ನು ಆರಂಭಿಸಿದೆ. ಆದರೆ ವರ್ಷಗಳಾದ್ಯಂತ, ಆರ್ಥಿಕ ಬಿಕ್ಕಟ್ಟುಗಳಿಂದಾಗಿ ನಾನು ಆಗಾಗ್ಗೆ ಪೂರ್ಣ ಸಮಯದ ಶುಶ್ರೂಷೆಯನ್ನು ನಿಲ್ಲಿಸಬೇಕಾಗುತ್ತಿತ್ತು. ಯೆಹೋವನ ಸಾಕ್ಷಿಗಳ ಕ್ರೈಸ್ತ ಮೇಲ್ವಿಚಾರಕರಿಗೆ ತರಬೇತಿಯನ್ನು ಕೊಡುವ ರಾಜ್ಯ ಶುಶ್ರೂಷಾ ಶಾಲೆಯಲ್ಲಿ ಕಲಿಸುವುದರಲ್ಲಿ ಪಾಲ್ಗೊಳ್ಳುವ ಸುಯೋಗವೂ ನನಗೆ ಸಿಕ್ಕಿದೆ. ಸದ್ಯಕ್ಕೆ ನಾನು ಹಾಸ್ಪಿಟಲ್‌ ಲಿಯೆಸಾನ್‌ ಕಮಿಟಿಯ ಒಬ್ಬ ಸದಸ್ಯನಾಗಿ ಮತ್ತು ಉಹುನ್‌ಮೊರಾದ ನಗರ ಮೇಲ್ವಿಚಾರಕನಾಗಿ ಸೇವೆಸಲ್ಲಿಸುವ ಸುಯೋಗದಲ್ಲಿ ಆನಂದಿಸುತ್ತಿದ್ದೇನೆ.

ನನ್ನ ಮೊದಲ ಇಬ್ಬರು ಪುತ್ರಿಯರಾದ ವಿಕ್ಟರಿ ಮತ್ತು ಲಿಡ್ಯ, ಉತ್ತಮ ಕ್ರೈಸ್ತ ಹಿರಿಯರೊಂದಿಗೆ ವಿವಾಹವಾಗಿ ಸಂತೋಷದಿಂದಿದ್ದಾರೆ. ಅವರು ಮತ್ತು ಅವರ ಗಂಡಂದಿರು, ನೈಜೀರಿಯದ ಇಗೀಡೂಮಾದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸ್‌ನಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ನಮ್ಮ ಹಿರಿಯ ಮಗ ವಿಲ್ಫ್ರೆಡ್‌ ಒಬ್ಬ ಶುಶ್ರೂಷಾ ಸೇವಕನಾಗಿ ಸೇವೆಸಲ್ಲಿಸುತ್ತಿದ್ದಾನೆ ಮತ್ತು ನಮ್ಮ ಕಿರಿಯ ಮಗ ಮೈಕಾ ಆಗಿಂದಾಗ್ಗೆ ಆಕ್ಸಿಲಿಯರಿ ಪಯನೀಯರನೋಪಾದಿ ಸೇವೆಸಲ್ಲಿಸುತ್ತಿರುತ್ತಾನೆ. 1997ರಲ್ಲಿ ಜೋನ್‌ ತನ್ನ ಸೆಕೆಂಡರಿ ಶಾಲಾಭ್ಯಾಸವನ್ನು ಮುಗಿಸಿ, ರೆಗ್ಯುಲರ್‌ ಪಯನೀಯರ್‌ ಸೇವೆಯನ್ನು ಆರಂಭಿಸಿದಳು.

ನನ್ನ ಜೀವಿತದ ಅತಿ ಪ್ರತಿಫಲದಾಯಕ ಅನುಭವಗಳಲ್ಲಿ, ಇತರರು ಯೆಹೋವ ದೇವರನ್ನು ಸೇವಿಸುವಂತೆ ಸಹಾಯಮಾಡುವುದು ಸೇರಿರುತ್ತದೆ. ಅಂಥವರಲ್ಲಿ ನನ್ನ ಕೂಡುಕುಟುಂಬದ ಸದಸ್ಯರಲ್ಲಿ ಕೆಲವರು ಸೇರಿದ್ದಾರೆ. ನನ್ನ ತಂದೆಯವರು ಯೆಹೋವನನ್ನು ಆರಾಧಿಸುವ ಪ್ರಯತ್ನವನ್ನು ಮಾಡಿದರು, ಆದರೆ ಬಹುಪತ್ನಿತ್ವದ ಆಚರಣೆಯು ಅವರನ್ನು ತಡೆಹಿಡಿಯಿತು. ಚಿಕ್ಕಂದಿನಿಂದಲೇ ನಾನು ಜನರನ್ನು ಪ್ರೀತಿಸಿದ್ದೇನೆ. ಬೇರೆಯವರು ನರಳುತ್ತಿರುವುದನ್ನು ನೋಡುವಾಗ, ಅವರ ಮುಂದೆ ನನ್ನ ಸಮಸ್ಯೆಗಳು ಏನೂ ಅಲ್ಲವೆಂದು ನನಗನಿಸುತ್ತದೆ. ಅವರಿಗೆ ಸಹಾಯಮಾಡುವುದರ ಕುರಿತು ನನಗಿರುವ ಯಥಾರ್ಥ ಮನಸ್ಸನ್ನು ಅವರು ಗಮನಿಸುತ್ತಾರೆಂದು ನಾನೆಣಿಸುತ್ತೇನೆ ಮತ್ತು ಇದರಿಂದಾಗಿ ಅವರಿಗೆ ನನ್ನೊಂದಿಗೆ ಮಾತಾಡಲು ಹೆಚ್ಚು ಸುಲಭವಾಗುತ್ತದೆ.

ದೇವರ ಉದ್ದೇಶಗಳ ಕುರಿತಾದ ಜ್ಞಾನವನ್ನು ಪಡೆದುಕೊಳ್ಳಲು ನಾನು ಸಹಾಯಮಾಡಿದವರಲ್ಲಿ ಒಬ್ಬನು, ಹಾಸಿಗೆಗೆ ಅಂಟಿಕೊಂಡಿದ್ದ ಒಬ್ಬ ಯುವ ಪುರುಷನಾಗಿದ್ದನು. ಅವನು ವಿದ್ಯುತ್‌ ಕಂಪೆನಿಯೊಂದರಲ್ಲಿ ಕಾರ್ಮಿಕನಾಗಿದ್ದನು. ಕೆಲಸಮಾಡುತ್ತಿದ್ದಾಗ ಅವನಿಗೊಮ್ಮೆ ಭಯಂಕರವಾದ ವಿದ್ಯುತ್‌ ಆಘಾತ ತಗಲಿ, ಎದೆಯಿಂದ ಕೆಳಭಾಗಕ್ಕೆ ಲಕ್ವಹೊಡೆಯಿತು. ಅವನೊಂದು ಬೈಬಲ್‌ ಅಧ್ಯಯನವನ್ನು ಸ್ವೀಕರಿಸಿದನು, ಮತ್ತು ತಾನು ಕಲಿತಂಥ ವಿಷಯಗಳಿಗೆ ಕ್ರಮೇಣ ಪ್ರತಿಕ್ರಿಯೆ ತೋರಿಸಲಾರಂಭಿಸಿದನು. 1995ರ ಅಕ್ಟೋಬರ್‌ 14ರಂದು, ನಮ್ಮ ಮನೆಯ ಬಳಿಯಿದ್ದ ಒಂದು ಹೊಳೆಯಲ್ಲಿ ಅವನ ದೀಕ್ಷಾಸ್ನಾನವಾಯಿತು. 15 ವರ್ಷಗಳಲ್ಲಿ, ಅವನು ತನ್ನ ಹಾಸಿಗೆಯನ್ನು ಬಿಟ್ಟು ಚಲಿಸಿದ್ದು ಇದೇ ಮೊದಲು. ಇದು ಅವನ ಜೀವಿತದ ಅತಿ ಸಂತೋಷದ ದಿನವಾಗಿದೆಯೆಂದು ಅವನು ಹೇಳಿದನು. ಈಗ ಅವನು ಸಭೆಯಲ್ಲಿ ಒಬ್ಬ ಶುಶ್ರೂಷಾ ಸೇವಕನಾಗಿದ್ದಾನೆ.

ಸುಮಾರು 30 ವರ್ಷಗಳ ಹಿಂದೆ ನಾನು ಯೆಹೋವನನ್ನು ಆತನ ಐಕ್ಯ, ಸಮರ್ಪಿತ ಜನರೊಂದಿಗೆ ಸೇವಿಸುವ ಆಯ್ಕೆಯನ್ನು ಮಾಡಿದ್ದಕ್ಕಾಗಿ ನನಗೆ ಕಿಂಚಿತ್ತೂ ಖೇದವಿಲ್ಲವೆಂದು ನಾನು ಹೇಳಬಯಸುತ್ತೇನೆ. ಇವರೊಳಗೆ ನಾನು ನಿಜವಾದ ಪ್ರೀತಿಯನ್ನು ಕ್ರಿಯೆಯಲ್ಲಿ ನೋಡಿದ್ದೇನೆ. ತನ್ನ ನಂಬಿಗಸ್ತ ಸೇವಕರಿಗೆ ಯೆಹೋವನು ಕೊಡುವ ಪ್ರತಿಫಲದಲ್ಲಿ ನಿತ್ಯ ಜೀವದ ನಿರೀಕ್ಷೆ ಇಲ್ಲದಿರುತ್ತಿದ್ದರೂ, ನಾನು ಆಗಲೂ ದೈವಿಕ ಭಕ್ತಿಯ ಜೀವನವನ್ನು ನಡೆಸಲು ಆಶಿಸುತ್ತಿದ್ದೆ. (1 ತಿಮೊಥೆಯ 6:6; ಇಬ್ರಿಯ 11:6) ನನ್ನ ಬದುಕನ್ನು ರೂಪಿಸಿ, ಸ್ಥಿರಗೊಳಿಸಿ, ನನಗೂ ನನ್ನ ಕುಟುಂಬಕ್ಕೂ ಆನಂದ, ತೃಪ್ತಿ ಮತ್ತು ಸಂತೋಷವನ್ನು ತಂದಿರುವ ಮಾರ್ಗವು ಇದೇ ಆಗಿದೆ.

[ಪುಟ 25ರಲ್ಲಿರುವ ಚಿತ್ರ]

1990ರಲ್ಲಿ ನನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ

[ಪುಟ 26ರಲ್ಲಿರುವ ಚಿತ್ರ]

ನನ್ನ ಹೆಂಡತಿ ಮಕ್ಕಳು ಮತ್ತು ಇಬ್ಬರು ಅಳಿಯಂದಿರೊಂದಿಗೆ