ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ನೀವು ಓದಿ ಗಣ್ಯಮಾಡಿದ್ದೀರೋ? ಹಾಗಾದರೆ, ಈ ಮುಂದಿನ ಪ್ರಶ್ನೆಗಳಿಗೆ ನೀವು ಉತ್ತರವನ್ನು ನೀಡಲು ಶಕ್ತರಾಗಿದ್ದೀರೋ ಎಂದು ನೋಡಿ:

ಒತ್ತಡವನ್ನು ಕಡಿಮೆಮಾಡಲಿಕ್ಕಾಗಿ, ಪರ್ವತ ಪ್ರಸಂಗವನ್ನು ಒಳಗೊಂಡಿರುವ ಯಾವ ವೈಯಕ್ತಿಕ ಕಾರ್ಯಕ್ರಮವನ್ನು ನೀವು ಉಪಯೋಗಿಸಬಹುದು?

ಪ್ರತಿ ದಿನ, ಪರ್ವತ ಪ್ರಸಂಗದಲ್ಲಿ ಅಥವಾ ಸುವಾರ್ತಾ ಪುಸ್ತಕದ ಬೇರೆ ಕಡೆಗಳಲ್ಲಿ ತಿಳಿಸಲ್ಪಟ್ಟಿರುವ ಯೇಸುವಿನ ಮೂಲಭೂತ ಬೋಧನೆಗಳಲ್ಲಿ ಒಂದನ್ನು ನೀವು ಓದಸಾಧ್ಯವಿದೆ. ಆ ಬೋಧನೆಯ ಕುರಿತು ಮನನಮಾಡುವ ಮೂಲಕ ಮತ್ತು ಅದನ್ನು ವೈಯಕ್ತಿಕವಾಗಿ ಅನ್ವಯಿಸಿಕೊಳ್ಳಲು ಪ್ರಯತ್ನಿಸುವ ಮೂಲಕ, ನೀವು ಅತ್ಯಧಿಕ ಸಂತೋಷವನ್ನು ಕಂಡುಕೊಳ್ಳಬಹುದು ಹಾಗೂ ಒತ್ತಡವನ್ನು ಕಡಿಮೆಗೊಳಿಸಬಹುದು.​—12/15, ಪುಟಗಳು 12-14.

ಸಭಾ ಹಿರಿಯರು ಹೆಚ್ಚಿನ ಜವಾಬ್ದಾರಿಗಳನ್ನು ನಿರ್ವಹಿಸಲಿಕ್ಕಾಗಿ ಶುಶ್ರೂಷಾ ಸೇವಕರಿಗೆ ತರಬೇತಿ ನೀಡುವುದಕ್ಕಾಗಿರುವ ಮೂರು ಒಳ್ಳೇ ಕಾರಣಗಳು ಯಾವುವು?

ಯೆಹೋವನ ಸಾಕ್ಷಿಗಳ ಸಂಖ್ಯೆಯಲ್ಲಿ ಬೆಳವಣಿಗೆಯಾಗುತ್ತಿರುವುದರಿಂದ, ಹೊಸದಾಗಿ ದೀಕ್ಷಾಸ್ನಾನ ಪಡೆದುಕೊಂಡಿರುವವರಿಗೆ ಪ್ರಗತಿಯನ್ನು ಮಾಡುವಂತೆ ಸಹಾಯಮಾಡಲಿಕ್ಕಾಗಿ ಹೆಚ್ಚಿನ ಜವಾಬ್ದಾರಿಯುತ ಪುರುಷರ ಅಗತ್ಯವಿದೆ. ದೀರ್ಘ ಸಮಯದಿಂದ ಹಿರಿಯರಾಗಿರುವ ಕೆಲವರು, ವೃದ್ಧಾಪ್ಯ ಅಥವಾ ಆರೋಗ್ಯ ಸಮಸ್ಯೆಗಳ ಕಾರಣದಿಂದ ಹೆಚ್ಚನ್ನು ಮಾಡಲು ಅಶಕ್ತರಾಗಿದ್ದಾರೆ. ಮತ್ತು ಕೆಲವು ಸಮರ್ಥ ಹಿರಿಯರು, ಸ್ಥಳಿಕ ಸಭೆಗಿಂತ ಆಚೆ ವಿಸ್ತರಿಸಿರುವ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಆದುದರಿಂದ ಅವರು ಈ ಮುಂಚಿನಂತೆ ತಮ್ಮ ಸಭೆಯಲ್ಲಿ ಹೆಚ್ಚನ್ನು ಮಾಡಲು ಅಶಕ್ತರಾಗಿರಬಹುದು.​—1/1, ಪುಟ 29.

ನಿಜವಾಗಿಲ್ಲದಂಥ ದೇವರುಗಳಲ್ಲಿ ಜನರು ಹೇಗೆ ಭರವಸೆಯಿಡುತ್ತಾರೆ?

ಅನೇಕರು ತಮ್ಮ ಸ್ವಂತ ಧರ್ಮದ ದೇವರುಗಳನ್ನು ಆರಾಧಿಸುತ್ತಾರೆ, ಆದರೆ ಇವು ಎಲೀಯನ ದಿನಗಳಲ್ಲಿದ್ದ ಬಾಳನಂಥ ನಿರ್ಜೀವ ದೇವರುಗಳಾಗಿದ್ದು, ಯಾರನ್ನೂ ರಕ್ಷಿಸಲಾರವು. (1 ಅರಸು 18:​26, 29; ಕೀರ್ತನೆ 135:​15-17) ಇನ್ನಿತರರು, ಭವಿಷ್ಯತ್ತಿಗಾಗಿ ಯಾವುದೇ ರೀತಿಯ ನೈಜ ನಿರೀಕ್ಷೆಯನ್ನು ಒದಗಿಸಲಾರದಂಥ ಮನೋರಂಜನಾ ಜಗತ್ತಿನ ವ್ಯಕ್ತಿಗಳನ್ನು ಅಥವಾ ಕ್ರೀಡಾ ತಾರೆಗಳನ್ನು ಪೂಜ್ಯಭಾವದಿಂದ ಕಾಣುತ್ತಾರೆ. ಇದಕ್ಕೆ ಪ್ರತಿಯಾಗಿ, ಯೆಹೋವನಾದರೋ ನಿಜವಾಗಿಯೂ ಅಸ್ತಿತ್ವದಲ್ಲಿದ್ದಾನೆ ಮತ್ತು ತನ್ನ ಉದ್ದೇಶಗಳನ್ನು ನೆರವೇರಿಸುತ್ತಾನೆ.​—1/15, ಪುಟಗಳು 3-5.

ದೇವರ ಎಚ್ಚರಿಕೆಗೆ ಕಾಯಿನನು ತೋರಿಸಿದ ಪ್ರತಿಕ್ರಿಯೆಯಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು?

ದೇವರು ನಮಗೆ ಇಚ್ಛಾ ಸ್ವಾತಂತ್ರ್ಯವನ್ನು ಕೊಟ್ಟಿದ್ದಾನೆ, ಮತ್ತು ಒಳ್ಳೇದನ್ನು ಮಾಡುವುದರಿಂದ ವಿಮುಖರಾಗುವುದಕ್ಕೆ ಬದಲಾಗಿ ಯಾವುದು ಸರಿಯಾದದ್ದಾಗಿದೆಯೋ ಅದನ್ನೇ ಮಾಡುವ ಆಯ್ಕೆಯನ್ನು ನಾವು ಮಾಡಸಾಧ್ಯವಿದೆ. ಆದರೆ ಕಾಯಿನನು ಒಳ್ಳೇದನ್ನು ಮಾಡುವುದರಿಂದ ವಿಮುಖನಾದನು. ಯಾರು ಪಶ್ಚಾತ್ತಾಪಪಡುವುದಿಲ್ಲವೋ ಅವರ ಮೇಲೆ ಯೆಹೋವನು ತನ್ನ ನ್ಯಾಯತೀರ್ಪನ್ನು ಬರಮಾಡುತ್ತಾನೆ ಎಂದು ಸಹ ಈ ಬೈಬಲ್‌ ವೃತ್ತಾಂತವು ತೋರಿಸುತ್ತದೆ.​—1/15, ಪುಟಗಳು 22-3.

ಸ್ವಚ್ಛತೆಯು ಇಂದು ವಿಶೇಷವಾಗಿ ಪ್ರಾಮುಖ್ಯವಾದದ್ದಾಗಿದೆ ಏಕೆ?

ಇಂದಿನ ಜೀವನ ಶೈಲಿಯು ಬದಲಾಗುತ್ತಿರುವುದರಿಂದ, ಅನೇಕ ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸಲಿಕ್ಕಾಗಿ ಹೆಚ್ಚು ಸಮಯವನ್ನು ವಿನಿಯೋಗಿಸುವುದಿಲ್ಲ. ಈ ಮೊದಲು ಹೀಗೆ ಸ್ವಚ್ಛಮಾಡುವುದು ಸಾಮಾನ್ಯವಾಗಿತ್ತು. ಆಹಾರ ಮತ್ತು ನೀರಿನ ಕುರಿತಾದ ಸ್ವಚ್ಛತೆಯನ್ನು ಅಲಕ್ಷಿಸುವುದು, ಆರೋಗ್ಯಕ್ಕೆ ಅಪಾಯಗಳನ್ನು ಒಡ್ಡಸಾಧ್ಯವಿದೆ. ಶಾರೀರಿಕ ಸ್ವಚ್ಛತೆಯ ಜೊತೆಗೆ, ಆತ್ಮಿಕ, ನೈತಿಕ, ಹಾಗೂ ಮಾನಸಿಕ ಸ್ವಚ್ಛತೆಗೂ ಗಮನವನ್ನು ಕೊಡುವಂತೆ ಬೈಬಲ್‌ ಎತ್ತಿಹೇಳುತ್ತದೆ.​—2/1, ಪುಟಗಳು 3-6.

ಕ್ರೈಸ್ತಪೂರ್ವದ ಸಾಕ್ಷಿಗಳ ಕುರಿತು ಪೌಲನು “ನಾವಿಲ್ಲದೆ ಅವರು ಸಿದ್ಧಿಗೆ” ಬರುವುದಿಲ್ಲ ಎಂದು ಹೇಳಿದನು. ಅದು ಹೇಗೆ? (ಇಬ್ರಿಯ 11:40)

ಬರಲಿರುವ ಸಹಸ್ರವರ್ಷದಾಳಿಕೆಯ ಸಮಯದಲ್ಲಿ, ಸ್ವರ್ಗದಲ್ಲಿರುವ ಕ್ರಿಸ್ತನು ಮತ್ತು ಅವನ ಅಭಿಷಿಕ್ತ ಸಹೋದರರು, ರಾಜರೂ ಯಾಜಕರೂ ಆಗಿ ಕಾರ್ಯನಡಿಸುತ್ತಾ ಪ್ರಾಯಶ್ಚಿತ್ತದ ಪ್ರಯೋಜನಗಳನ್ನು ಪುನರುತ್ಥಾನಹೊಂದುವವರಿಗೆ ಹಂಚುವರು. ಹೀಗೆ, ಇಬ್ರಿಯ 11ನೆಯ ಅಧ್ಯಾಯದಲ್ಲಿ ತಿಳಿಸಲ್ಪಟ್ಟಿರುವ ನಂಬಿಗಸ್ತ ಜನರು “ಸಿದ್ಧಿಗೆ” ಬರುವರು.​—2/1, ಪುಟ 23.

“ನೀವು . . . ಪ್ರಾಣಾಪಾಯದ [“ರಕ್ತದ,” NW] ತನಕ ಇನ್ನೂ ಅದನ್ನು ಎದುರಿಸಲಿಲ್ಲ” ಎಂದು ಪೌಲನು ಇಬ್ರಿಯರಿಗೆ ಹೇಳಿದಾಗ, ಅವನು ಏನನ್ನು ಸೂಚಿಸುತ್ತಿದ್ದನು? (ಇಬ್ರಿಯ 12:4)

ಸಾಯುವ ತನಕ ಎದುರಿಸುವುದನ್ನು ಅವನು ಅರ್ಥೈಸುತ್ತಿದ್ದನು. ಮರಣದ ತನಕ ನಂಬಿಗಸ್ತರಾಗಿದ್ದವರ ಐತಿಹಾಸಿಕ ಮಾದರಿಗಳು ಸಹ ಇದ್ದವು. ಪೌಲನು ಇದನ್ನು ಯಾರಿಗೆ ಬರೆದನೋ ಆ ಇಬ್ರಿಯರು ಆ ಹಂತದ ತನಕ ಪರೀಕ್ಷಿಸಲ್ಪಡದಿದ್ದರೂ, ಅವರು ಏನೇ ಬಂದರೂ ತಾಳಿಕೊಳ್ಳಲಿಕ್ಕಾಗಿ ತಮ್ಮ ನಂಬಿಕೆಯನ್ನು ಕಟ್ಟುತ್ತಾ, ಪ್ರೌಢತೆಯತ್ತ ಪ್ರಗತಿಮಾಡುವ ಅಗತ್ಯವಿತ್ತು.​—2/15, ಪುಟ 29.

ಯೆಹೋವನ ಕರುಣೆಯು ಆತನ ನ್ಯಾಯವನ್ನು ತಗ್ಗಿಸುತ್ತದೆಂದು ಹೇಳದೇ ಇರುವುದು ಒಳ್ಳೇದೇಕೆ?

ಕೆಲವು ಭಾಷೆಗಳಲ್ಲಿ, “ತಗ್ಗಿಸು” ಎಂಬುದು ತೀವ್ರತೆಯನ್ನು ಕಡಿಮೆಗೊಳಿಸು ಅಥವಾ ನಿಗ್ರಹಿಸು ಎಂಬರ್ಥವನ್ನು ಕೊಡಸಾಧ್ಯವಿದೆ. ಯೆಹೋವನು ನ್ಯಾಯ ಹಾಗೂ ಕರುಣೆಯ ದೇವರಾಗಿದ್ದಾನೆ, ಮತ್ತು ಆತನು ಈ ಗುಣಗಳನ್ನು ತೋರಿಸುವಾಗ, ಈ ಎರಡೂ ಗುಣಗಳು ಒಂದಕ್ಕೊಂದು ಹೊಂದಿಕೆಯಲ್ಲಿ ಕಾರ್ಯನಡಿಸುತ್ತವೆ. (ವಿಮೋಚನಕಾಂಡ 34:​6, 7; ಧರ್ಮೋಪದೇಶಕಾಂಡ 32:4; ಕೀರ್ತನೆ 116:5; 145:9) ಯೆಹೋವನ ಕರುಣೆಯು ಆತನ ನ್ಯಾಯದ ತೀವ್ರತೆಯನ್ನು ಕಡಿಮೆಗೊಳಿಸಬೇಕಾಗಿಲ್ಲ ಅಥವಾ ತಗ್ಗಿಸಬೇಕಾಗಿಲ್ಲ.​—3/1, ಪುಟ 30.

ಮೃತನಾಗಿರುವ ಒಬ್ಬ ಕುಟುಂಬ ಸದಸ್ಯನ ದೇಹದ ಶವಸಂರಕ್ಷಣೆಮಾಡುವುದು ಒಬ್ಬ ಕ್ರೈಸ್ತನಿಗೆ ಯೋಗ್ಯವಾದದ್ದೋ?

ಶವಸಂರಕ್ಷಣೆಯು ಒಂದು ಶವವನ್ನು ಕಾಪಾಡುವ ವಿಧಾನವಾಗಿದೆ. ಪುರಾತನ ಕಾಲದವರಲ್ಲಿ ಕೆಲವರು ಧಾರ್ಮಿಕ ಕಾರಣಗಳಿಗಾಗಿ ಈ ಪದ್ಧತಿಯನ್ನು ಅನುಸರಿಸಿದರು. ಸತ್ಯ ಆರಾಧಕರ ವಿಷಯದಲ್ಲಿ ಇದು ಹಾಗಿರಲಾರದು. (ಪ್ರಸಂಗಿ 9:5; ಅ. ಕೃತ್ಯಗಳು 24:15) ಶವಸಂರಕ್ಷಣೆಯು ಕೇವಲ ತಡೆಯಲಸಾಧ್ಯವಾದದ್ದನ್ನು, ಅಂದರೆ ಒಂದು ದೇಹವು ಮಣ್ಣಿಗೆ ಹಿಂದಿರುಗುವುದನ್ನು ಸ್ವಲ್ಪ ತಡಮಾಡುತ್ತದೆ ಅಷ್ಟೇ. (ಆದಿಕಾಂಡ 3:19) ಒಂದುವೇಳೆ ಕಾನೂನು ಶವಸಂರಕ್ಷಣೆಯನ್ನು ಅಗತ್ಯಪಡಿಸುವಲ್ಲಿ, ಕುಟುಂಬದ ಕೆಲವು ಸದಸ್ಯರು ಬಯಸುವಲ್ಲಿ, ಅಥವಾ ಶವಸಂಸ್ಕಾರಕ್ಕಾಗಿ ಕೆಲವರು ಬಹಳ ದೂರದ ಸ್ಥಳಗಳಿಂದ ಬರಬೇಕಾಗಿರುವುದರಿಂದ ಇದನ್ನು ಮಾಡಬೇಕಾಗಿರುವಲ್ಲಿ, ಇದರ ಬಗ್ಗೆ ಚಿಂತಿಸುವ ಅಗತ್ಯವಿರುವುದಿಲ್ಲ.​—3/15, ಪುಟಗಳು 29-31.

ದೇವರು ಎಲ್ಲ ದೇಶಗಳ ಜನರನ್ನು ಸ್ವಾಗತಿಸುತ್ತಾನೆ ಎಂಬುದನ್ನು ಯಾವ ಬೈಬಲ್‌ ಉದಾಹರಣೆಗಳು ನಮಗೆ ಕಲಿಸುತ್ತವೆ?

ಯೆಹೋವನು ಪ್ರವಾದಿಯಾದ ಯೋನನನ್ನು ನಿನೆವೆಯ ನಿವಾಸಿಗಳಿಗೆ ಎಚ್ಚರಿಕೆ ನೀಡಲಿಕ್ಕಾಗಿ ಕಳುಹಿಸಿದನು, ಮತ್ತು ಅವರ ಪಶ್ಚಾತ್ತಾಪವನ್ನು ಅಂಗೀಕರಿಸುವಂತೆ ದೇವರು ಯೋನನನ್ನು ಉತ್ತೇಜಿಸಿದನು. ತನ್ನ ನಡೆನುಡಿಯ ಮೂಲಕ ಯೇಸು ಸಮಾರ್ಯದವರ ಕಡೆಗೆ ಪ್ರೀತಿಯನ್ನು ತೋರಿಸುವುದನ್ನು ಪ್ರೋತ್ಸಾಹಿಸಿದನು. ಅಪೊಸ್ತಲ ಪೇತ್ರನೂ ಅಪೊಸ್ತಲ ಪೌಲನೂ ಅನ್ಯರಿಗೆ ಸುವಾರ್ತೆಯನ್ನು ಕೊಂಡೊಯ್ಯುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಇಂತಹ ಉದಾಹರಣೆಗಳಿಂದ, ಎಲ್ಲ ಹಿನ್ನೆಲೆಗಳ ಜನರಿಗೆ ಸಹಾಯಮಾಡಲು ಪ್ರಯತ್ನಿಸುವುದರ ಆವಶ್ಯಕತೆಯನ್ನು ನಾವು ಮನಗಾಣಸಾಧ್ಯವಿದೆ.​—4/1, ಪುಟಗಳು 21-4.