ಒಂದನೇ ಅರಸು 18:1-46

  • ಎಲೀಯ ಓಬದ್ಯನನ್ನ ಮತ್ತು ಅಹಾಬನನ್ನ ಭೇಟಿಯಾದ (1-18)

  • ಕರ್ಮೆಲಿನಲ್ಲಿ ಬಾಳನ ಪ್ರವಾದಿಗಳ ವಿರುದ್ಧ ಎಲೀಯ (19-40)

    • ‘ಎರಡು ಮನಸ್ಸಿನವರಾಗಿದ್ರು’ (21)

  • ಮೂರುವರೆ ವರ್ಷಗಳ ಬರಗಾಲ ಕೊನೆ ಆಯ್ತು (41-46)

18  ಸ್ವಲ್ಪ ಸಮಯ ಆದ್ಮೇಲೆ ಬರಗಾಲದ ಮೂರನೇ ವರ್ಷದಲ್ಲಿ+ ಯೆಹೋವ ಎಲೀಯನಿಗೆ “ನೀನು ಅಹಾಬನ ಹತ್ರ ಹೋಗು. ನಾನು ಮಳೆ ಬರೋ ತರ ಮಾಡ್ತೀನಿ”+ ಅಂತ ಹೇಳಿದನು. 2  ಹಾಗಾಗಿ ಎಲೀಯ ಅಹಾಬನನ್ನ ನೋಡೋಕೆ ಹೋದ. ಸಮಾರ್ಯದಲ್ಲಿ ಆಗ ಬರಗಾಲ ಜಾಸ್ತಿ ಆಗಿತ್ತು.+ 3  ಅದೇ ಸಮಯಕ್ಕೆ ಅಹಾಬ ತನ್ನ ಅರಮನೆಯ ಮೇಲ್ವಿಚಾರಕನಾಗಿದ್ದ ಓಬದ್ಯನನ್ನ ಕರೆಸಿದ. (ಓಬದ್ಯ ಯೆಹೋವನಿಗೆ ಭಯಪಡೋ ವ್ಯಕ್ತಿಯಾಗಿದ್ದ. 4  ಈಜೆಬೇಲ್‌+ ಯೆಹೋವನ ಪ್ರವಾದಿಗಳನ್ನ ಕೊಲ್ತಾ ಇದ್ದಾಗ ಓಬದ್ಯ 100 ಪ್ರವಾದಿಗಳನ್ನ ಐವತ್ತೈವತ್ತು ಜನ್ರ ಎರಡು ಗುಂಪು ಮಾಡಿ ಗುಹೆಯಲ್ಲಿ ಬಚ್ಚಿಟ್ಟು ಅವ್ರಿಗೆ ಬೇಕಾದ ಆಹಾರ, ನೀರು ಕೊಡ್ತಿದ್ದ.) 5  ಅಹಾಬ ಓಬದ್ಯನಿಗೆ “ನೀನು ದೇಶದಲ್ಲಿರೋ ಎಲ್ಲ ಬಾವಿ, ಕಾಲುವೆಗಳ ಹತ್ರ ಹೋಗಿ ಬಾ. ನಮ್ಮ ಕುದುರೆಗಳಿಗೆ ಮತ್ತು ಹೇಸರಗತ್ತೆಗಳಿಗೆ ಬೇಕಾಗುವಷ್ಟು ಹುಲ್ಲು ಅಲ್ಲಿ ಸಿಗಬಹುದು. ಇಲ್ಲಾಂದ್ರೆ ನಮ್ಮ ಪ್ರಾಣಿಗಳೆಲ್ಲ ಸತ್ತು ಹೋಗುತ್ತೆ” ಅಂದ. 6  ಆಮೇಲೆ ಅಹಾಬ ಮತ್ತು ಓಬದ್ಯ ದೇಶ ಸುತ್ತಿ ನೋಡಿಬರೋಕೆ ಅದ್ರ ಪ್ರಾಂತ್ಯಗಳನ್ನ ಹಂಚ್ಕೊಂಡ್ರು. ಒಂದು ದಾರಿಯಲ್ಲಿ ಅಹಾಬ ಹೋದ್ರೆ, ಇನ್ನೊಂದು ದಾರಿಯಲ್ಲಿ ಓಬದ್ಯ ಹೋದ. 7  ಓಬದ್ಯ ದಾರಿಯಲ್ಲಿ ಬರ್ತಿದ್ದಾಗ ಎಲೀಯ ಅವನನ್ನ ಭೇಟಿಯಾದ. ಓಬದ್ಯ ಎಲೀಯನನ್ನ ಗುರುತುಹಿಡಿದ ತಕ್ಷಣ ಅವನಿಗೆ ಅಡ್ಡಬಿದ್ದು “ನೀನು ನನ್ನ ಒಡೆಯ ಎಲೀಯ ಅಲ್ವಾ?”+ ಅಂತ ಕೇಳಿದ. 8  ಅದಕ್ಕೆ ಎಲೀಯ “ಹೌದು ನಾನೇ. ನೀನು ಹೋಗಿ ನಿನ್ನ ಯಜಮಾನನಿಗೆ ‘ಎಲೀಯ ಬಂದಿದ್ದಾನೆ’ ಅಂತ ಹೇಳು” ಅಂದ. 9  ಆದ್ರೆ ಓಬದ್ಯ ಅವನಿಗೆ “ನಾನು ಏನು ಪಾಪ ಮಾಡಿದ್ದೀನಿ ಅಂತ ನನಗೆ ಅಹಾಬನ ಕೈಯಲ್ಲಿ ಸಿಕ್ಕಿಹಾಕೊಂಡು ಸಾಯೋಕೆ ಹೇಳ್ತಿದ್ದೀಯಾ? 10  ನಿನ್ನ ದೇವರಾದ ಯೆಹೋವನ ಆಣೆ, ನನ್ನ ಯಜಮಾನ ನಿನ್ನನ್ನ ಹುಡುಕದಿರೋ ಜಾಗಾನೇ ಇಲ್ಲ. ಯಾರಾದ್ರೂ ‘ಅವನು ಇಲ್ಲಿ ಇಲ್ಲ’ ಅಂತ ಹೇಳಿದ್ರೆ ನನ್ನ ಯಜಮಾನ, ನಿನ್ನನ್ನ ಅವರು ನಿಜವಾಗ್ಲೂ ನೋಡಿಲ್ಲ ಅಂತ ಅವ್ರ ಕೈಯಿಂದ ಆಣೆ ಮಾಡಿಸ್ತಿದ್ದ.+ 11  ಆದ್ರೆ ಈಗ ನೀನು ನನಗೆ ‘ಹೋಗಿ ನಿನ್ನ ಯಜಮಾನನಿಗೆ “ಎಲೀಯ ಬಂದಿದ್ದಾನೆ” ಅಂತ ಹೇಳು’ ಅಂತ ಹೇಳ್ತಾ ಇದ್ದೀಯ. 12  ನಾನು ನಿನ್ನ ಬಿಟ್ಟು ಆಕಡೆ ಹೋದ್ಮೇಲೆ ಯೆಹೋವನ ಪವಿತ್ರಶಕ್ತಿ ನಿನ್ನನ್ನ ನನಗೆ ಗೊತ್ತಿಲ್ಲದ ಜಾಗಕ್ಕೆ ಕರ್ಕೊಂಡು ಹೋಗುತ್ತೆ.+ ನಾನು ಅಹಾಬನಿಗೆ ನಿನ್ನ ಬಗ್ಗೆ ಹೇಳಿದ ಮೇಲೆ ನೀನು ಅವನಿಗೆ ಸಿಗದಿದ್ರೆ ಅವನು ನನ್ನನ್ನ ಖಂಡಿತ ಸಾಯಿಸ್ತಾನೆ. ನಾನು ಚಿಕ್ಕಂದಿನಿಂದ ಯೆಹೋವನಿಗೆ ಭಯಪಡೋ ವ್ಯಕ್ತಿಯಾಗಿದ್ದೀನಿ. 13  ಒಡೆಯನೇ, ಈಜೆಬೇಲ್‌ ಯೆಹೋವನ ಪ್ರವಾದಿಗಳನ್ನ ಕೊಲ್ತಾ ಇದ್ದಾಗ ನಾನು ಯೆಹೋವನ 100 ಪ್ರವಾದಿಗಳನ್ನ ಐವತ್ತರ ಎರಡು ಗುಂಪು ಮಾಡಿ ಗುಹೆಯಲ್ಲಿ ಬಚ್ಚಿಟ್ಟು ಅವ್ರಿಗೆ ಬೇಕಾದ ಊಟ, ನೀರು ಕೊಟ್ಟಿದ್ದು ನಿನಗೆ ಗೊತ್ತಿಲ್ವಾ?+ 14  ಆದ್ರೂ ಯಾಕೆ ನೀನು ನನಗೆ ‘ಹೋಗಿ ನಿನ್ನ ಯಜಮಾನನಿಗೆ “ಎಲೀಯ ಬಂದಿದ್ದಾನೆ” ಅಂತ ಹೇಳು’ ಅಂತಿದ್ದೀಯಾ? ಯಜಮಾನ ನನ್ನನ್ನ ಖಂಡಿತ ಸಾಯಿಸ್ತಾನೆ” ಅಂದ. 15  ಆದ್ರೆ ಎಲೀಯ “ನಾನು ಆರಾಧಿಸೋ ಸೈನ್ಯಗಳ ದೇವರಾದ ಯೆಹೋವನ ಮೇಲೆ ಆಣೆ, ಇವತ್ತು ನಾನು ಅವನಿಗೆ ಸಿಗ್ತೀನಿ” ಅಂದ. 16  ಆಗ ಓಬದ್ಯ ಅಹಾಬನಿಗೆ ವಿಷ್ಯ ಹೇಳಿದ. ಅಹಾಬ ಎಲೀಯನನ್ನ ಭೇಟಿ ಮಾಡೋಕೆ ಹೋದ. 17  ಅಹಾಬ ಎಲೀಯನನ್ನ ನೋಡಿ ತಕ್ಷಣ “ಇಸ್ರಾಯೇಲಿನ ಮೇಲೆ ಕಷ್ಟ ತಂದವನೇ, ನೀನು ಮತ್ತೆ ಬಂದ್ಯಾ?” ಅಂತ ಕೇಳಿದ. 18  ಅದಕ್ಕೆ ಅವನು “ಇಸ್ರಾಯೇಲಿನ ಮೇಲೆ ಕಷ್ಟ ತಂದವನು ನಾನಲ್ಲ. ಯೆಹೋವನ ಆಜ್ಞೆಗಳನ್ನ ತೊರೆದು ಬಾಳ್‌ ದೇವರುಗಳ ಹಿಂದೆ ಹೋಗಿ ಕಷ್ಟ ತಂದವನು ನೀನು ಮತ್ತು ನಿನ್ನ ಕುಟುಂಬದವರು.+ 19  ಈಗ ಎಲ್ಲ ಇಸ್ರಾಯೇಲ್ಯರನ್ನ ಕರ್ಮೆಲ್‌+ ಬೆಟ್ಟದ ಮೇಲೆ ನನ್ನ ಮುಂದೆ ಬರೋಕೆ ಹೇಳು. ಜೊತೆಗೆ ಈಜೆಬೇಲಳ ಜೊತೆ ಊಟ ಮಾಡೋ ಬಾಳನ 450 ಪ್ರವಾದಿಗಳನ್ನ, ಅಶೇರ್‌ ದೇವತೆಯ*+ 400 ಪ್ರವಾದಿಗಳನ್ನ ಒಟ್ಟುಸೇರಿಸು” ಅಂದ. 20  ಆಗ ಅಹಾಬ ಎಲ್ಲ ಇಸ್ರಾಯೇಲ್ಯರಿಗೂ ಸಂದೇಶ ಕಳಿಸಿದ. ಪ್ರವಾದಿಗಳನ್ನ ಕರ್ಮೆಲ್‌ ಬೆಟ್ಟದ ಮೇಲೆ ಬರೋಕೆ ಹೇಳಿದ. 21  ಆಮೇಲೆ ಎಲೀಯ ಎಲ್ಲ ಜನ್ರ ಹತ್ರ ಹೋಗಿ “ಎಷ್ಟರ ತನಕ ನೀವು ಎರಡು ಮನಸ್ಸಿನವರಾಗಿ ಇರ್ತಿರಾ?*+ ಯೆಹೋವ ಸತ್ಯ ದೇವರಾಗಿದ್ರೆ ಆತನ ಮಾತು ಕೇಳಿ,+ ಬಾಳ ಸತ್ಯ ದೇವರಾಗಿದ್ರೆ ಅವನ ಹಿಂದೆ ಹೋಗಿ” ಅಂದ. ಆದ್ರೆ ಜನ ಅದಕ್ಕೆ ಒಂದೇ ಒಂದು ಮಾತೂ ಆಡಲಿಲ್ಲ. 22  ಆಮೇಲೆ ಎಲೀಯ ಜನ್ರಿಗೆ “ಯೆಹೋವನ ಪ್ರವಾದಿಗಳಲ್ಲಿ ಉಳಿದಿರೋದು ನಾನೊಬ್ಬನೇ.+ ಆದ್ರೆ ಬಾಳನ ಪ್ರವಾದಿಗಳು 450 ಜನ ಇದ್ದಾರೆ. 23  ಒಂದು ಕೆಲಸ ಮಾಡಿ, ಎರಡು ಹೋರಿ ತನ್ನಿ. ಅದ್ರಲ್ಲಿ ಒಂದನ್ನ ಬಾಳನ ಪ್ರವಾದಿಗಳು ಆರಿಸ್ಕೊಂಡು ಅದನ್ನ ಕತ್ತರಿಸಿ ಕಟ್ಟಿಗೆ ಮೇಲೆ ಇಡಲಿ. ಆದ್ರೆ ಅದಕ್ಕೆ ಅವರು ಬೆಂಕಿ ಹಚ್ಚಬಾರದು. ಇನ್ನೊಂದು ಹೋರಿನ ನಾನು ತಗೊಂಡು ಅದನ್ನ ಕತ್ತರಿಸಿ ಕಟ್ಟಿಗೆ ಮೇಲೆ ಇಡ್ತೀನಿ. ನಾನೂ ಅದಕ್ಕೆ ಬೆಂಕಿ ಹಚ್ಚಲ್ಲ. 24  ಆಮೇಲೆ ಬಾಳನ ಪ್ರವಾದಿಗಳು ಅವ್ರ ದೇವರ ಹೆಸ್ರನ್ನ ಕೂಗಲಿ+ ಮತ್ತು ನಾನು ಯೆಹೋವನ ಹೆಸ್ರನ್ನ ಕೂಗ್ತೀನಿ. ಯಾವ ದೇವರು ಬೆಂಕಿ ಕಳಿಸಿ ಉತ್ತರ ಕೊಡ್ತಾನೋ ಆತನೇ ಸತ್ಯ ದೇವರು”+ ಅಂದ. ಅದಕ್ಕೆ ಜನ್ರೆಲ್ಲ “ನೀನು ಹೇಳಿದ್ದೇ ಆಗಲಿ” ಅಂದ್ರು. 25  ಎಲೀಯ ಬಾಳನ ಪ್ರವಾದಿಗಳಿಗೆ “ನಿಮ್ಮ ಕಡೆ ಜಾಸ್ತಿ ಜನ ಇರೋದ್ರಿಂದ ಮೊದ್ಲು ನೀವು ಒಂದು ಹೋರಿಯನ್ನ ಆರಿಸ್ಕೊಂಡು ಬಲಿಗೆ ತಯಾರಿಸಿ. ಆಮೇಲೆ ನಿಮ್ಮ ದೇವರ ಹೆಸ್ರನ್ನ ಕೂಗಿ. ಆದ್ರೆ ಅದಕ್ಕೆ ನೀವು ಬೆಂಕಿ ಹಚ್ಚಬಾರದು” ಅಂದ. 26  ಆಗ ಅವರು ಒಂದು ಹೋರಿ ತಗೊಂಡು ಅದನ್ನ ಬಲಿಗಾಗಿ ತಯಾರಿಸಿದ್ರು. ಆಮೇಲೆ ಅವರು ಬೆಳಿಗ್ಗೆಯಿಂದ ಹಿಡಿದು ಮಧ್ಯಾಹ್ನದ ತನಕ ಬಾಳನ ಹೆಸ್ರನ್ನ ಕೂಗ್ತಾ “ಬಾಳನೇ ನಮಗೆ ಉತ್ರ ಕೊಡು!” ಅಂತ ಹೇಳ್ತಾ ಇದ್ರು. ಆದ್ರೆ ಅವ್ರಿಗೆ ಯಾವ ಸ್ವರನೂ ಕೇಳಿಸಲಿಲ್ಲ, ಯಾವ ಉತ್ತರನೂ ಬರಲಿಲ್ಲ.+ ಆದ್ರೂ ಅವರು ಮಾಡಿದ್ದ ಯಜ್ಞವೇದಿ ಸುತ್ತ ಕುಣಿಯುತ್ತಾ ನೆಗೆಯುತ್ತಾ ಇದ್ರು. 27  ಮಧ್ಯಾಹ್ನದ ಮೇಲೆ ಎಲೀಯ ಅವ್ರನ್ನ ಅಣಕಿಸ್ತಾ “ಇನ್ನೂ ಸ್ವಲ್ಪ ಗಟ್ಟಿಯಾಗಿ ಕೂಗಿ! ಎಷ್ಟಾದ್ರೂ ಅವನು ದೇವರು ತಾನೇ!+ ಅವನು ಯಾವುದೋ ಚಿಂತೆಯಲ್ಲಿ ಮುಳುಗಿರಬೇಕು, ಇಲ್ಲಾ ಬಯಲಿಗೆ* ಹೋಗಿರಬೇಕು. ಇಲ್ಲಾಂದ್ರೆ ಅವನು ನಿದ್ದೆ ಮಾಡ್ತಿರಬೇಕು, ಯಾರಾದ್ರೂ ಅವನನ್ನ ಎಬ್ಬಿಸಬೇಕೋ ಏನೋ!” ಅಂದ. 28  ಅವರು ಗಟ್ಟಿಯಾಗಿ ಕೂಗ್ತಾ ಅವ್ರ ಪದ್ಧತಿ ಪ್ರಕಾರ ತಮ್ಮನ್ನೇ ಕತ್ತಿಗಳಿಂದ, ಶೂಲಗಳಿಂದ ತಿವಿದುಕೊಳ್ತಾ ಇದ್ರು. ಮೈಯೆಲ್ಲ ರಕ್ತ ಬರೋ ಹಾಗೇ ಮಾಡ್ಕೊಳ್ತಿದ್ರು. 29  ಮಧ್ಯಾಹ್ನ ಕಳೆದು ಸಂಜೆ ಧಾನ್ಯ ಅರ್ಪಣೆ ಕೊಡೋ ಸಮಯ ಬಂದ್ರೂ ಅವರು ತಮ್ಮ ಹುಚ್ಚುತನ ಬಿಡಲಿಲ್ಲ. ಆದ್ರೆ ಅವ್ರಿಗೆ ಯಾವ ಸ್ವರನೂ ಕೇಳಿಸಲಿಲ್ಲ, ಯಾವ ಉತ್ತರನೂ ಬರಲಿಲ್ಲ ಮತ್ತು ಅವ್ರ ಕಡೆಗೆ ಯಾರೂ ಗಮನ ಕೊಡಲಿಲ್ಲ.+ 30  ಕೊನೆಗೆ ಎಲೀಯ ಎಲ್ಲ ಜನ್ರಿಗೆ “ನನ್ನ ಹತ್ರ ಬನ್ನಿ” ಅಂತ ಕರೆದ. ಆಗ ಜನ್ರೆಲ್ಲ ಅವನ ಹತ್ರ ಬಂದ್ರು. ಆಗ ಅವನು ಹಾಳಾಗಿದ್ದ ಯೆಹೋವನ ಯಜ್ಞವೇದಿ ಸರಿಮಾಡಿದ.+ 31  ಆಮೇಲೆ 12 ಕಲ್ಲು ತಗೊಂಡ. ಯೆಹೋವ ಯಾಕೋಬನಿಗೆ “ನಿನ್ನ ಹೆಸ್ರು ಇನ್ಮುಂದೆ ಇಸ್ರಾಯೇಲ್‌ ಅಂತ ಆಗುತ್ತೆ”+ ಅಂದಿದ್ದ. ಆ ಯಾಕೋಬನ ಮಕ್ಕಳ ಕುಲಗಳ ಸಂಖ್ಯೆಗೆ ತಕ್ಕ ಹಾಗೆ ಎಲೀಯ ಈ ಕಲ್ಲುಗಳನ್ನ ಆರಿಸ್ಕೊಂಡ. 32  ಆ ಕಲ್ಲುಗಳಿಂದ ಎಲೀಯ ಯೆಹೋವನ ಹೆಸ್ರಿಗಾಗಿ ಒಂದು ಯಜ್ಞವೇದಿ ಕಟ್ಟಿದ.+ ಆಮೇಲೆ ಅವನು ಯಜ್ಞವೇದಿ ಸುತ್ತ ಹಳ್ಳ ಮಾಡಿದ. ಅದು ಎಷ್ಟು ದೊಡ್ಡದಿತ್ತಂದ್ರೆ ಅದ್ರಲ್ಲಿ ಎರಡು ಸೆಯಾ ಅಳತೆಯ* ಬೀಜಗಳನ್ನ ಬಿತ್ತಬಹುದಿತ್ತು. 33  ಆಮೇಲೆ ಅವನು ಕಟ್ಟಿಗೆ ತುಂಡುಗಳನ್ನ ಜೋಡಿಸಿ+ ಹೋರಿಯನ್ನ ಕತ್ತರಿಸಿ ಅದ್ರ ಮೇಲಿಟ್ಟ. “ನಾಲ್ಕು ದೊಡ್ಡ ಜಾಡಿಗಳಲ್ಲಿ ನೀರು ತುಂಬಿಸ್ಕೊಂಡು ಬಂದು ಅದನ್ನ ಸರ್ವಾಂಗಹೋಮ ಬಲಿ ಮೇಲೆ ಮತ್ತು ಕಟ್ಟಿಗೆ ತುಂಡುಗಳ ಮೇಲೆ ಹಾಕಿ” ಅಂದ. 34  ಆಮೇಲೆ ಅವನು “ಇನ್ನೊಂದು ಸಲ ಹಾಗೇ ಮಾಡಿ” ಅಂದ. ಅವರು ಮತ್ತೆ ಹಾಗೇ ಮಾಡಿದ್ರು. ಇನ್ನೂ ಒಂದು ಸಲ ಅವನು “ಮೂರನೇ ಸಲನೂ ಹಾಗೇ ಮಾಡಿ” ಅಂದ. ಹಾಗಾಗಿ ಅವರು ಮೂರನೇ ಸಲನೂ ಹಾಗೇ ಮಾಡಿದ್ರು. 35  ನೀರು ಯಜ್ಞವೇದಿಯ ಮೇಲಿಂದ ಹರಿದು ಅದ್ರ ಸುತ್ತ ತುಂಬ್ಕೊಂಡ್ತು. ಅವನು ಹಳ್ಳದಲ್ಲೂ ನೀರು ತುಂಬಿಸಿದ. 36  ಸಂಜೆಯ ಧಾನ್ಯ ಅರ್ಪಣೆಯ ಸಮಯ ಆದಾಗ+ ಪ್ರವಾದಿ ಎಲೀಯ ಮುಂದೆ ಬಂದು “ಯೆಹೋವನೇ, ಅಬ್ರಹಾಮ,+ ಇಸಾಕ,+ ಇಸ್ರಾಯೇಲನ ದೇವರೇ, ಇವತ್ತು ಎಲ್ರಿಗೂ ಇಸ್ರಾಯೇಲಿನಲ್ಲಿ ನೀನೇ ದೇವರು, ನಾನು ನಿನ್ನ ಸೇವಕ ಮತ್ತು ನೀನು ಹೇಳಿರೋದಕ್ಕೇ ನಾನು ಇದನ್ನೆಲ್ಲ ಮಾಡ್ತಾ ಇದ್ದೀನಿ ಅಂತ ಗೊತ್ತಾಗಲಿ.+ 37  ಯೆಹೋವನೇ ನನಗೆ ಉತ್ರ ಕೊಡು! ಈ ಜನ್ರಿಗೆ ಯೆಹೋವನಾದ ನೀನೇ ಸತ್ಯ ದೇವರು ಅಂತ ಮತ್ತು ನೀನೇ ಅವರ ಹೃದಯನ ನಿನ್ನ ಕಡೆಗೆ ತಿರುಗಿಸ್ಕೊಳ್ತಿದ್ದೀಯ ಅಂತ ಗೊತ್ತಾಗೋ ತರ ಮಾಡಿ ನನಗೆ ಉತ್ತರ ಕೊಡು”+ ಅಂದ. 38  ತಕ್ಷಣ ಯೆಹೋವನ ಬೆಂಕಿ ಮೇಲಿಂದ ಬಂದು ಸರ್ವಾಂಗಹೋಮ ಬಲಿಯನ್ನ,+ ಕಟ್ಟಿಗೆ ತುಂಡುಗಳನ್ನ, ಕಲ್ಲುಗಳನ್ನ, ಧೂಳನ್ನ ಸುಟ್ಟುಬಿಡ್ತು. ಹಳ್ಳದಲ್ಲಿದ್ದ ನೀರನ್ನೆಲ್ಲ ಹೀರಿಬಿಡ್ತು.+ 39  ಜನ್ರೆಲ್ಲ ಅದನ್ನ ನೋಡಿದ ತಕ್ಷಣ ಅಡ್ಡಬಿದ್ದು “ಯೆಹೋವನೇ ಸತ್ಯ ದೇವರು! ಯೆಹೋವನೇ ಸತ್ಯ ದೇವರು!” ಅಂತ ಕೂಗಿದ್ರು. 40  ಆಮೇಲೆ ಎಲೀಯ ಅವ್ರಿಗೆ “ಬಾಳನ ಪ್ರವಾದಿಗಳನ್ನ ಹಿಡೀರಿ! ಅವ್ರಲ್ಲಿ ಒಬ್ಬನೂ ಉಳಿಬಾರದು!” ಅಂದ. ಆಗ ಅವರು ಬಾಳನ ಪ್ರವಾದಿಗಳನ್ನ ಹಿಡಿದ್ರು. ಎಲೀಯ ಆ ಪ್ರವಾದಿಗಳನ್ನ ಕೀಷೋನ್‌+ ಕಣಿವೆಗೆ ಕರ್ಕೊಂಡು ಬಂದು ಅಲ್ಲಿ ಅವ್ರನ್ನ ಕೊಂದು ಹಾಕಿದ.+ 41  ಎಲೀಯ ಅಹಾಬನಿಗೆ “ನೀನು ಹೋಗಿ ಊಟ ಮಾಡು. ಯಾಕಂದ್ರೆ ನನಗೆ ಜೋರಾಗಿ ಮಳೆ ಬರೋ ಶಬ್ದ ಕೇಳಿಸ್ತಾ ಇದೆ”+ ಅಂದ. 42  ಆಗ ಅಹಾಬ ಹೋದ. ಎಲೀಯ ಕರ್ಮೆಲ್‌ ಬೆಟ್ಟದ ಮೇಲೆ ಹೋಗಿ ನೆಲಕ್ಕೆ ಬಿದ್ದು ಮಂಡಿಯೂರಿ ಕಾಲಿನ ಮಧ್ಯ ತಲೆ ಇಟ್ಟು ಕೂತ್ಕೊಂಡ.+ 43  ಆಮೇಲೆ ಎಲೀಯ ತನ್ನ ಸೇವಕನಿಗೆ “ದಯವಿಟ್ಟು ಮೇಲೆ ಹೋಗಿ, ಸಮುದ್ರದ ಕಡೆ ನೋಡು” ಅಂದ. ಆಗ ಅವನು ಹೋಗಿ ನೋಡ್ಕೊಂಡು ಬಂದು “ಅಲ್ಲಿ ಏನೂ ಕಾಣಿಸ್ತಿಲ್ಲ” ಅಂದ. ಹೀಗೆ ಏಳು ಸಲ ಎಲೀಯ ಅವನಿಗೆ “ಹೋಗಿ ನೋಡು” ಅಂದ. 44  ಏಳನೇ ಸಲ ಸೇವಕ ಬಂದು “ಮನುಷ್ಯನ ಅಂಗೈಯಷ್ಟು ಚಿಕ್ಕ ಮೋಡ ಸಮುದ್ರದ ಮೇಲಿಂದ ಬರ್ತಿರೋದು ಕಾಣ್ತಿದೆ” ಅಂದ. ಆಗ ಎಲೀಯ “ನೀನು ಹೋಗಿ ಅಹಾಬಗೆ ‘ಬೇಗ ರಥ ಸಿದ್ಧಮಾಡ್ಕೊಂಡು ಕೆಳಗಿಳಿದು ಹೋಗು. ಇಲ್ಲಾಂದ್ರೆ ಜೋರು ಮಳೆಯಲ್ಲಿ ಸಿಕ್ಕಿಹಾಕೊಳ್ತೀಯ’ ಅಂತ ಹೇಳು” ಅಂದ. 45  ಅದೇ ಸಮಯಕ್ಕೆ ದಟ್ಟವಾದ ಮೋಡ ಕವಿದು ಗಾಳಿ ಬೀಸಿ ಜೋರು ಮಳೆ ಶುರು ಆಯ್ತು.+ ಅಹಾಬ ರಥವನ್ನ ಓಡಿಸ್ಕೊಂಡು ಇಜ್ರೇಲಿಗೆ ಹೋದ.+ 46  ಯೆಹೋವ ಎಲೀಯಗೆ ಶಕ್ತಿ ಕೊಟ್ಟಿದ್ರಿಂದ ಎಲೀಯ ಸೊಂಟಕ್ಕೆ ಬಟ್ಟೆ ಕಟ್ಕೊಂಡು ಓಡ್ತಾ ಅಹಾಬನಿಗಿಂತ ಮುಂಚೆನೇ ಇಜ್ರೇಲಿಗೆ ತಲುಪಿದ.

ಪಾದಟಿಪ್ಪಣಿ

ಅಥವಾ “ಪೂಜಾಕಂಬದ.”
ಅಥವಾ “ಎರಡು ದೋಣಿಗಳ ಮೇಲೆ ಕಾಲು ಇಡ್ತೀರಾ.”
ಅಥವಾ “ಪಾಯಿಖಾನೆಗೆ.”
ಒಂದು ಸೆಯಾ=7.33 ಲೀ. ಪರಿಶಿಷ್ಟ ಬಿ14 ನೋಡಿ.