ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸತ್ತವರು ಬದುಕಿರುವವರಿಗೆ ಸಹಾಯ ಮಾಡಶಕ್ತರಾ?

ಸತ್ತವರು ಬದುಕಿರುವವರಿಗೆ ಸಹಾಯ ಮಾಡಶಕ್ತರಾ?

ಬೈಬಲಿನ ದೃಷ್ಟಿಕೋನ

ಸತ್ತವರು ಬದುಕಿರುವವರಿಗೆ ಸಹಾಯ ಮಾಡಶಕ್ತರಾ?

ಸತ್ತಿರುವ ಜನರು ತಮ್ಮನ್ನು ಕಾಪಾಡುತ್ತಾರೆಂದು ಇಂದು ಅನೇಕರು ನೆನಸುತ್ತಾರೆ. ಈ ನಂಬಿಕೆ ಪ್ರಾಚೀನ ಕಾಲದಲ್ಲೂ ಇತ್ತೆಂದು ಗ್ರೀಕ್‌ ಕವಿಯಾದ ಹೋಮರ್‌ ಬರೆದ ಕಥೆಯಿಂದ ನಮಗೆ ತಿಳಿದುಬರುತ್ತದೆ. ಆ ಕಥೆಯ ನಾಯಕ ಒಡೆಸಿಸ್‌ನಿಗೆ ತನ್ನ ತಾಯ್ನಾಡಾದ ಇಥಾಕ ಎಂಬ ದ್ವೀಪಕ್ಕೆ ಹಿಂದಿರುಗಿ ಹೋಗಬೇಕಾಗಿತ್ತು. ಹೇಗೆ ಹೋಗಬೇಕೆಂದು ತಿಳಿದುಕೊಳ್ಳಲು, ಸತ್ತು ಹೋಗಿರುವ ಒಬ್ಬ ಮಂತ್ರವಾದಿ ಸ್ತ್ರೀಯನ್ನು ವಿಚಾರಿಸುತ್ತಾನೆ.

ತಮ್ಮ ಬದುಕಲ್ಲಿ ಕಾಡುತ್ತಿರುವ ಪ್ರಶ್ನೆಗಳ ಬಗ್ಗೆ ಸತ್ತು ಹೋಗಿರುವವರಿಂದ ಉತ್ತರ ಸಿಗುತ್ತೆ ಅಂತ ಅನೇಕರು ನೆನೆಸುತ್ತಾರೆ. ಮಾಟಮಂತ್ರ ಮಾಡಿಸುತ್ತಾರೆ. ತಮ್ಮ ಸತ್ತ ಪೂರ್ವಜರ ಗೋರಿಯ ಮೇಲೆ ಮಲಗುತ್ತಾರೆ. ಸತ್ತವರಿಂದ ಸಹಾಯ ಪಡೆದುಕೊಳ್ಳುವುದು ನಿಜವಾಗಿಯೂ ಸಾಧ್ಯನಾ?

ಈ ನಂಬಿಕೆ ಬಹು ವ್ಯಾಪಕ

ಸತ್ತವರೊಂದಿಗೆ ಮಾತಾಡಲು ಸಾಧ್ಯ ಎಂದು ಅನೇಕ ಧರ್ಮಗಳು ಜನರಿಗೆ ಬೋಧಿಸುತ್ತವೆ. ಎನ್‌ಸೈಕ್ಲೋಪಿಡಿಯ ಆಫ್‌ ರಿಲಿಜನ್‌ ಹೇಳುವುದು: “ಸತ್ತವರ ಬಳಿ ವಿಚಾರಿಸಿ ಭವಿಷ್ಯ ನುಡಿಯುವ ಕಲೆ ಅಥವಾ ವಿದ್ಯೆ ಮೂಲತಃ ಪ್ರೇತವ್ಯವಹಾರದ ಭಾಗ. ಇದು ಬಹು ವ್ಯಾಪಕ.” ದ ನ್ಯೂ ಕ್ಯಾಥೊಲಿಕ್‌ ಎನ್‌ಸೈಕ್ಲೋಪಿಡಿಯ ಹೇಳುವುದು: “ಸತ್ತವರೊಂದಿಗೆ ವ್ಯವಹಾರ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತೆ. ಅಲ್ಲದೆ ಜಗದ್ವ್ಯಾಪಕ ಸಹ.” ದೇವರ ಮೇಲೆ ಧರ್ಮದ ಮೇಲೆ ನಂಬಿಕೆ ಇರುವವರು ಸಹ ಮಾಟಮಂತ್ರದ ಕಡೆಗೆ ಒಲವು ತೋರಿಸುತ್ತಾರೆ ಅನ್ನೋದರಲ್ಲಿ ಆಶ್ಚರ್ಯ ಇಲ್ಲ.

“ಸತ್ತವರೊಂದಿಗೆ ವ್ಯವಹರಿಸುವುದನ್ನು ಚರ್ಚ್‌ ಬಲವಾಗಿ ಖಂಡಿಸಿತಾದರೂ ನವೋದಯ ಕಾಲವಾದ 14ರಿಂದ 16ನೇ ಶತಮಾನದಲ್ಲಿ ಇದು ಇಮ್ಮಡಿಗೊಂಡಿತು” ಎಂದೆನ್ನುತ್ತೆ ದ ನ್ಯೂ ಕ್ಯಾಥೊಲಿಕ್‌ ಎನ್‌ಸೈಕ್ಲೋಪಿಡಿಯ.

ಪ್ರಾಚೀನ ಕಾಲದಲ್ಲಿ ಯೆಹೋವ ದೇವರು ತನ್ನ ಜನರಿಗೆ ಹೀಗೆ ಆಜ್ಞೆಯಿತ್ತಿದ್ದನು: “ಸತ್ತವರನ್ನು ವಿಚಾರಿಸುವವರು . . . ಯಾರೂ ನಿಮ್ಮಲ್ಲಿ ಇರಬಾರದು.” (ಧರ್ಮೋಪದೇಶಕಾಂಡ 18:9-13) ಯೆಹೋವನು ಯಾಕಿಷ್ಟು ಕಟ್ಟುನಿಟ್ಟಿನ ನಿಯಮವನ್ನು ಕೊಟ್ಟನು? ಒಂದುವೇಳೆ ಜೀವಿತರು ಸತ್ತವರೊಂದಿಗೆ ಮಾತಾಡಲು ಶಕ್ತರಾಗುತ್ತಿದ್ದಲ್ಲಿ, ಮಾತಾಡಬಾರದೆಂಬ ದೇವರ ನಿರ್ಬಂಧ ಒಂದು ಕ್ರೂರ ಕೃತ್ಯವಾಗಿರುತ್ತಿತ್ತಲ್ಲವಾ? ನಿಜಾಂಶವೇನೆಂದರೆ ಸತ್ತವರೊಂದಿಗೆ ನಾವು ಮಾತಾಡಲು ಸಾಧ್ಯವೇ ಇಲ್ಲ. ಹೇಗೆ ಗೊತ್ತು?

ಸತ್ತವರಿಗೆ ಯಾವುದೇ ಪ್ರಜ್ಞೆ ಇಲ್ಲ ಎಂದು ಶಾಸ್ತ್ರವಚನಗಳು ಪದೇಪದೇ ಹೇಳುತ್ತೆ. ಪ್ರಸಂಗಿ 9:5ನ್ನು ಪರಿಗಣಿಸಿ: “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; ಅವರಿಗೆ ಇನ್ನು ಮೇಲೆ ಪ್ರತಿಫಲವೇನೂ ಇಲ್ಲ, ಅವರ ಜ್ಞಾಪಕವೇ ಹೋಯಿತಲ್ಲವೆ”. ಕೀರ್ತನೆ 146:3,4 ಹೇಳುವುದು, “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯಮಾಡ ಶಕ್ತನಲ್ಲ; ಅವನ ಉಸಿರು ಹೋಗಲು ಮಣ್ಣಿಗೆ ಸೇರುತ್ತಾನೆ; ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವವು.” ಸತ್ತ ಜನರು ಪುನಃ “ಬದುಕುವುದಿಲ್ಲ. ತೀರಿಹೋದ ಆ ಆತ್ಮಗಳು ಎದ್ದು ಬರುವುದಿಲ್ಲ” ಎಂದು ಬೈಬಲ್‌ ಲೇಖಕನಾದ ಯೆಶಾಯನು ಹೇಳಿದನು.—ಯೆಶಾಯ 26:14, ಪವಿತ್ರ ಗ್ರಂಥ.

ಆದರೆ ಅನೇಕ ಜನರು ಹೇಳ್ತಾರೆ, ಮಾಟಮಂತ್ರದ ಮೂಲಕ ತಮ್ಮ ಸತ್ತ ಪ್ರಿಯ ಜನರೊಂದಿಗೆ ಮಾತಾಡಿದ್ರು ಅಂತ. ಇಂಥ ವಿಷಯಗಳೆಲ್ಲ ಹೊಸದೇನಲ್ಲ. ಆದರೂ ಇದರಿಂದ ಒಂದು ವಿಷ್ಯವಂತೂ ಸ್ಪುಟ. ಅವರು ಯಾರೊಂದಿಗೊ (ಅಮಾನುಷ ಶಕ್ತಿ) ಮಾತಾಡಿದ್ರು. ಆದರೆ ಮೇಲಿನ ವಚನಗಳೆಲ್ಲ ತಿಳಿಸುವಂತೆ, ಅವರು ಸತ್ತವರೊಂದಿಗೆ ಮಾತಾಡಿರಕ್ಕಂತೂ ಸಾಧ್ಯನೇ ಇಲ್ಲ. ಹಾಗಾದರೆ ಅವರು ಮಾತಾಡಿರುವುದು ಯಾರೊಂದಿಗೆ?

ಮಾತಾಡಿದ್ದಾದ್ರೂ ಯಾರತ್ರ?

ಬೈಬಲ್‌ ಈ ಗುಟ್ಟನ್ನು ರಟ್ಟು ಮಾಡುತ್ತೆ. ದೇವರ ಆತ್ಮ ಪುತ್ರರು ಆತನಿಗೆ ವಿರುದ್ಧವಾಗಿ ನಡೆದರು ಮತ್ತು ದೆವ್ವಗಳಾದರು ಎಂದೆನ್ನುತ್ತೆ ಬೈಬಲ್‌. (ಆದಿಕಾಂಡ 6:1-5; ಯೂದ 6, 7) ಆ ದೆವ್ವಗಳು ಇಂಥ ನೀಚ ಕೆಲಸ ಮಾಡಿದ್ದಲ್ಲದೆ, ಜನರು ಸತ್ತ ಮೇಲೂ ಎಲ್ಲೋ ಒಂದು ಕಡೆ ಜೀವಿಸುತ್ತಾರೆ ಎಂಬ ಸುಳ್ಳನ್ನು ಹಬ್ಬಿಸಿವೆ. ಈ ಸುಳ್ಳನ್ನು ದೃಢೀಕರಿಸುವ ಸಲುವಾಗಿ ಸತ್ತ ಜನರಂತೆ ನಟಿಸುತ್ತಾ ಅವರ ಸ್ವರದಲ್ಲೇ ಜೀವಿತರೊಂದಿಗೆ ಮಾತಾಡುತ್ತವೆ.

ಇಸ್ರಾಯೇಲಿನ ರಾಜನಾದ ಸೌಲನು ಯೆಹೋವನಿಗೆ ಅವಿಧೇಯನಾದ ಕಾರಣ ಆತನು ಅವನ ಕೈಬಿಟ್ಟನು. ಹಾಗಾಗಿ ಅವನು ಸತ್ತ ಸಮುವೇಲನನ್ನು ಸಂಪರ್ಕಿಸಲು ಮಾಂತ್ರಿಕಳ ಬಳಿ ಹೋಗುತ್ತಾನೆ. ಅವನಿಗೆ ಬೇಕಾಗಿರುವ ಸಂದೇಶ ಸಿಕ್ಕಿತಾದರೂ ಅದು ಸಿಕ್ತಿದ್ದು ಸಮುವೇಲನಿಂದಲ್ಲ. ಸಮುವೇಲನು ಜೀವದಿಂದಿರುವಾಗಲೂ ರಾಜನನ್ನು ಭೇಟಿಯಾಗಲು ನಿರಾಕರಿಸಿದ್ದನು. ಅಲ್ಲದೆ ಸಮುವೇಲನು ಮಾಟಮಂತ್ರಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ವಿರೋಧಿಸುತ್ತಿದ್ದನು. ನಿಜಾಂಶ ಏನೆಂದರೆ, ಸೌಲನು ಮಾತಾಡಿದ್ದು ಸಮುವೇಲನಂತೆ ನಟಿಸುತ್ತಿದ್ದ ಒಂದು ದೆವ್ವದೊಂದಿಗೆ.—1 ಸಮುವೇಲ 28:3-20.

ದೆವ್ವಗಳು ದೇವರ ವೈರಿಗಳು. ಅವುಗಳೊಂದಿಗೆ ನಾವು ಸಂಪರ್ಕ ಇಟ್ಟುಕೊಳ್ಳುವುದಾಗಲಿ, ವಿಚಾರಿಸುವುದಾಗಲಿ ತುಂಬ ಅಪಾಯಕಾರಿ. ಆದ್ದರಿಂದಲೇ ಶಾಸ್ತ್ರವಚನಗಳು ನಮಗೆ ಹೀಗೆ ಹೇಳುತ್ತೆ: “ಸತ್ತವರಲ್ಲಿ ವಿಚಾರಿಸುವವರ ಮತ್ತು ಬೇತಾಳಿಕರ ಹತ್ತಿರ ಹೋಗಬಾರದು; ಅವರ ಆಲೋಚನೆಯನ್ನು ಕೇಳಿ ಅಶುದ್ಧರಾಗಬಾರದು.” (ಯಾಜಕಕಾಂಡ 19:31) “ಸತ್ತವರನ್ನು ವಿಚಾರಿಸುವವರು . . . ಯೆಹೋವನಿಗೆ ಅಸಹ್ಯರಾಗಿದ್ದಾರೆ” ಎಂದು ಧರ್ಮೋಪದೇಶಕಾಂಡ 18:11, 12 ತಿಳಿಸುತ್ತೆ. ಯೆಹೋವನು ಸೌಲನನ್ನು ಕೊಲ್ಲಿಸಲು ಅವನ ಅನೇಕ ಅವಿಧೇಯ ಕೃತ್ಯಗಳಲ್ಲಿ ‘ಪ್ರೇತಸಿದ್ಧರಲ್ಲಿ ವಿಚಾರಿಸಿದ್ದು’ ಒಂದು.—1 ಪೂರ್ವಕಾಲವೃತ್ತಾಂತ 10:13, 14.

ಹಾಗಾದರೆ ಬದುಕಲ್ಲಿ ಅತ್ಯುಚ್ಛ ಮಾರ್ಗದರ್ಶನ ಬೇಕಿರುವಾಗ ನಾವು ಯಾರ ಬಳಿ ಹೋಗುವುದು? ಜೀವನದಲ್ಲಿ ಕಳವಳಕ್ಕೀಡು ಮಾಡುವ ಪ್ರಶ್ನೆಗಳು ಎದುರಾದಾಗ ಇಲ್ಲವೆ ಆಯ್ಕೆಗಳನ್ನು ಮಾಡಬೇಕಾದಾಗ ನಮಗೆ ಯಾರು ಸಹಾಯ ನೀಡಬಲ್ಲರು? ಶಾಸ್ತ್ರವಚನಗಳು ಯೆಹೋವ ದೇವರನ್ನು “ಮಹಾ ಬೋಧಕನನ್ನಾಗಿ” ವರ್ಣಿಸುತ್ತೆ. ನೀವು ಮತ್ತು ನಿಮ್ಮ ಪ್ರಿಯರು ಆತನ ವಾಕ್ಯವಾದ ಬೈಬಲಿನ ಜ್ಞಾನ ಪಡೆದುಕೊಂಡು, ಅದರಂತೆ ನಡೆದರೆ ಅದು ನಿಮ್ಮನ್ನು ಮಾರ್ಗದರ್ಶಿಸುವುದು. “ಇದೇ ಮಾರ್ಗ ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವುದು.” (ಯೆಶಾಯ 30:20, 21) ನಿಜ ಕ್ರೈಸ್ತರಿಗೆ ಇಂದು ದೇವರ ಸ್ವರ ನಿಜವಾಗಿಯೂ ಕೇಳಿಸುವುದಿಲ್ಲವಾದರೂ ಆತನು ತನ್ನ ವಾಕ್ಯವಾದ ಬೈಬಲ್‌ ಮೂಲಕ ಮಾರ್ಗದರ್ಶಿಸುತ್ತಾನೆ. ಯೆಹೋವನು ತಾನೇ ನಮ್ಮೆಲ್ಲರ ಮಾರ್ಗದರ್ಶಕನಾಗಿದ್ದಾನೆ. (g12-E 06)

ಈ ಬಗ್ಗೆ ಯೋಚಿಸಿದ್ದೀರಾ?

● ಸತ್ತವರನ್ನು ವಿಚಾರಿಸುವವರನ್ನು ದೇವರು ಹೇಗೆ ವೀಕ್ಷಿಸುತ್ತಾನೆ? —ಧರ್ಮೋಪದೇಶಕಾಂಡ 18:9-13.

● ಸತ್ತವರು ಬದುಕಿರುವವರಿಗೆ ಸಹಾಯ ಮಾಡಶಕ್ತರಾ? ನಿಮ್ಮ ಉತ್ತರಕ್ಕೆ ಕಾರಣವೇನು?— ಪ್ರಸಂಗಿ 9:5.

● ಮಾರ್ಗದರ್ಶನೆಗಾಗಿ ನಾವು ಯಾರ ಕಡೆಗೆ ನೋಡಬಲ್ಲೆವು?—ಯೆಶಾಯ 30:20, 21.