ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅನ್ಯಾಯಕ್ಕೆ ಕಾರಣಗಳು

ಅನ್ಯಾಯಕ್ಕೆ ಕಾರಣಗಳು

ಅನ್ಯಾಯಕ್ಕೆ ಕಾರಣಗಳು

ಇವತ್ತಿನ ಜನರ ಪ್ರವೃತ್ತಿ ಬಗ್ಗೆ ಬೈಬಲ್‌ ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೇ ಹೇಳಿತ್ತು: “ಕಡೇ ದಿವಸಗಳಲ್ಲಿ ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳು ಬರುವವು . . . ಜನರು ಸ್ವಪ್ರೇಮಿಗಳೂ ಹಣಪ್ರೇಮಿಗಳೂ . . . ಕೃತಜ್ಞತೆಯಿಲ್ಲದವರೂ ನಿಷ್ಠೆಯಿಲ್ಲದವರೂ ಸ್ವಾಭಾವಿಕ ಮಮತೆಯಿಲ್ಲದವರೂ ಯಾವುದೇ ಒಪ್ಪಂದಕ್ಕೆ ಸಿದ್ಧರಿಲ್ಲದವರೂ . . . ಒಳ್ಳೇತನವನ್ನು ಪ್ರೀತಿಸದವರೂ ದ್ರೋಹಿಗಳೂ ಹಟಮಾರಿಗಳೂ ಹೆಮ್ಮೆಯಿಂದ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸುವ ಬದಲು ಭೋಗವನ್ನು ಪ್ರೀತಿಸುವವರೂ” ಆಗಿರುವರು.—2 ತಿಮೊಥೆಯ 3:1-4.

ಇಂಥ ಜನರೇ ಇಂದಿನ ಲೋಕದಲ್ಲಿ ತುಂಬಿದ್ದಾರೆ. ಇದನ್ನು ಒಪ್ಪದವರು ಯಾರಿದ್ದಾರೆ ಹೇಳಿ? ಎಲ್ಲೆಡೆ ದುರಾಸೆ, ಪೂರ್ವಗ್ರಹ, ಸಮಾಜವಿರೋಧಿ ಭಾವನೆ, ಭ್ರಷ್ಟಾಚಾರ, ಆರ್ಥಿಕ ಅಸಮಾನತೆ ಇಂಥ ದುರ್ಗುಣಗಳು ರಾರಾಜಿಸುತ್ತಿವೆ. ಇವುಗಳನ್ನು ಒಂದೊಂದಾಗಿ ನೋಡೋಣ.

ದುರಾಸೆ. “ದುರಾಸೆ ಒಳ್ಳೇದು” “ದುರಾಸೆಯಿಂದ ಲಾಭ ಇದೆ” ಎಂಬೆಲ್ಲ ಮಾತುಗಳು ಕೇಳಿಬರುತ್ತವೆ. ಆದರೆ ಸತ್ಯಸಂಗತಿ ಏನೆಂದರೆ ದುರಾಸೆ ಕೆಟ್ಟದು. ಹಾನಿಯೇ ಅದರಿಂದ ದಕ್ಕುವುದು! ಉದಾ: ಲೆಕ್ಕಾಚಾರದಲ್ಲಿ ವಂಚನೆ, ಬಂಡವಾಳ ಹೂಡಿಕೆಯ ಮೋಸದಾಟ, ಹಿಂದೆ ಮುಂದೆ ನೋಡದೆ ಮಾಡುವ ಸಾಲದ ವ್ಯವಹಾರ ಇವೆಲ್ಲಕ್ಕೆ ಕಾರಣ ದುರಾಸೆಯೇ. ಇಂಥ ದುರಾಸೆಯಿಂದ ಜನರು ತೊಂದರೆಯಲ್ಲಿ ಸಿಲುಕುತ್ತಾರೆ. ಇವರಲ್ಲಿ ಕೆಲವರು ‘ಅತಿಯಾಸೆ ಗತಿಗೇಡು’ ಎಂಬಂತೆ ತಾವು ತೋಡಿದ ಗುಂಡಿಗೆ ತಾವೇ ಬೀಳುತ್ತಾರೆ. ಆದರೆ ಇನ್ನು ಕೆಲವರು ಬೇರೆಯವರ ದುರಾಸೆಗೆ ಬಲಿಯಾಗಿ ಮನೆಮಠ ಕಳೆದುಕೊಂಡ ಅಮಾಯಕರು.

ಪೂರ್ವಗ್ರಹ. ಪೂರ್ವಗ್ರಹ ಪೀಡಿತ ಜನರು ಜನಾಂಗ, ಮೈಬಣ್ಣ, ಲಿಂಗ, ಸಾಮಾಜಿಕ ಸ್ಥಾನಮಾನ, ಧರ್ಮದ ಆಧಾರದ ಮೇಲೆ ಜನರಿಗೆ ಅನ್ಯಾಯ, ತಾರತಮ್ಯ ನಡೆಯುತ್ತಿದೆ. ಉದಾ: ಯುನೈಟೆಡ್‌ ನೇಶನ್ಸ್‌ ಕಮಿಟಿಯ ಗಮನಕ್ಕೆ ಬಂದ ಸಂಗತಿಯೊಂದು ಹೀಗಿದೆ: ದಕ್ಷಿಣ ಅಮೆರಿಕದ ಒಂದು ದೇಶದಲ್ಲಿ ಗರ್ಭಿಣಿ ಸ್ತ್ರೀಯೊಬ್ಬಳು ಬಡವಳು, ಬೇರೆ ಜನಾಂಗದವಳು ಎಂಬ ಕಾರಣಕ್ಕೆ ವೈದಕೀಯ ಸೌಲಭ್ಯ ದೊರೆಯಲಿಲ್ಲ. ಆಕೆ ಆಸ್ಪತ್ರೆಯಲ್ಲೇ ಮೃತಪಟ್ಟಳು. ಇನ್ನೂ ಹಲವೆಡೆ ಪೂರ್ವಗ್ರಹದ ಅಟ್ಟಹಾಸ ಎಷ್ಟಿದೆಯೆಂದರೆ ಜನಾಂಗಹತ್ಯೆ, ಸಾಮೂಹಿಕ ಮಾರಣಹೋಮವೇ ನಡೆದಿದೆ.

ಸಮಾಜವಿರೋಧಿ ವರ್ತನೆ. ಸಮಾಜವಿರೋಧಿ ವರ್ತನೆಯ ಬಗೆಗೊಂದು ಕೈಪಿಡಿ (ಇಂಗ್ಲಿಷ್‌): “ಸಮಾಜವಿರೋಧಿ ವರ್ತನೆಯಿಂದಾಗಿ ಪ್ರತಿವರ್ಷ ಹತ್ತಾರು ಸಾವಿರ ಕುಟುಂಬಗಳು ಛಿದ್ರಛಿದ್ರಗೊಂಡಿವೆ, ಲಕ್ಷಾಂತರ ಜೀವನಷ್ಟವಾಗಿದೆ, ಮಿಲಿಯಗಟ್ಟಲೆ ಮೌಲ್ಯದ ಆಸ್ತಿಪಾಸ್ತಿ ನಾಶವಾಗಿದೆ. ಈ ರೀತಿಯ ವರ್ತನೆ ಸಮಾಜದಲ್ಲಿ ಹಿಂಸೆ, ದ್ವೇಷವನ್ನು ತುಂಬಿಸಿದೆ. ಹಾಗಾಗಿ ಒಂದುವೇಳೆ ಭವಿಷ್ಯದಲ್ಲಿ ಇತಿಹಾಸಕಾರರು ಇಪ್ಪತ್ತನೆಯ ಶತಮಾನದ ಕೊನೆಭಾಗವನ್ನು ‘ಆಕಾಶಯಾನ ಯುಗ,’ ‘ಮಾಹಿತಿ ಯುಗ’ ಎನ್ನದೆ ‘ಸಮಾಜವಿರೋಧಿ ಯುಗ (ಸಮಾಜ ತನ್ನ ವಿರುದ್ಧವೇ ಸೆಣಸಾಡಿದ ಸಮಯ)’ ಎಂದು ಕರೆದರೂ ಅದರಲ್ಲಿ ಆಶ್ಚರ್ಯವೇನಿಲ್ಲ.” ಈ ಕೈಪಿಡಿ ಪ್ರಕಟಗೊಂಡ ವರ್ಷದಿಂದ ಅಂದರೆ 1997ರಿಂದ ಇಂದಿನ ವರೆಗೂ ಜನರ ಸಮಾಜವಿರೋಧಿ ವರ್ತನೆಯಲ್ಲಿ ಏನೂ ಬದಲಾವಣೆ ಆಗಿಲ್ಲ.

ಭ್ರಷ್ಟಾಚಾರ. ದಕ್ಷಿಣ ಆಫ್ರಿಕ ಸರ್ಕಾರ ಆಸ್ಪತ್ರೆಗಳ ಏಳಿಗೆಗೆಂದು ಮಂಜೂರು ಮಾಡಿದ 400 ಕೋಟಿ ಡಾಲರ್‌ ಮೊತ್ತದಲ್ಲಿ ಶೇಕಡ 81ಕ್ಕಿಂತ ಹೆಚ್ಚು ಹಣ ದುರ್ವಯಗೊಂಡಿತು. “ಆ ಪ್ರದೇಶದ ಆಸ್ಪತ್ರೆ, ಕ್ಲೀನಿಕ್‌, ಆರೋಗ್ಯ ಕೇಂದ್ರಗಳ ಏಳಿಗೆಗೆಂದು” ಮಂಜೂರಾದ ಹಣ ಆ ಕೆಲಸಕ್ಕೆ ಉಪಯೋಗಗೊಂಡಿಲ್ಲ ಎಂದು ದ ಪಬ್ಲಿಕ್‌ ಮ್ಯಾನೇಜರ್‌ ಪತ್ರಿಕೆ ತಿಳಿಸುತ್ತದೆ.

ಆರ್ಥಿಕ ಅಸಮಾನತೆ. ಭಾರತದಲ್ಲಿ ಇತ್ತೀಚಿನ 20 ವರ್ಷಗಳಲ್ಲಿ ಆದಾಯದ ಅಸಮಾನತೆ ದುಪ್ಪಟ್ಟಾಗಿದೆ. ಎಲ್ಲರ ಸಂಪಾದನೆ ಸಮಾನವಾಗಿಲ್ಲ. ಉಚ್ಚ ವರ್ಗದ ಜನರ ಸಂಪಾದನೆ ಮಧ್ಯಮ ವರ್ಗದ ಜನರ ಸಂಪಾದನೆಯ ಐದು ಪಟ್ಟು ಹೆಚ್ಚಿದೆ. ಇಡೀ ವಿಶ್ವದಲ್ಲಿ ದಿನಕ್ಕೆ 70 ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಸಂಪಾದಿಸುತ್ತಿರುವ ಜನರ ಸಂಖ್ಯೆ 140 ಕೋಟಿ. ಬಡತನದ ಬೇಗೆಯಿಂದ ಪ್ರತಿದಿನ 25,000 ಮಕ್ಕಳು ಅಸುನೀಗುತ್ತಿದ್ದಾರೆ.

ಅನ್ಯಾಯಕ್ಕೆ ಅಂಕುಶ ಹಾಕುವವರಿಲ್ಲವೇ?

1987ರಲ್ಲಿ ಆಸ್ಟ್ರೇಲಿಯ ಪ್ರಧಾನಿಯ ಗುರಿ ಇದಾಗಿತ್ತು: 1990ರಷ್ಟಕ್ಕೆ ಆಸ್ಟ್ರೇಲಿಯದ ಒಂದೂ ಮಗು ಬಡತನದಲ್ಲಿರದಂತೆ ಮಾಡುತ್ತೇನೆ. ಆದ್ರೆ ಅದನ್ನು ಅವರಿಂದ ಸಾಧಿಸಲು ಆಗಲಿಲ್ಲ. ಕೊನೆಗೆ ಅಂಥ ಗುರಿಯನ್ನಿಟ್ಟದ್ದಕ್ಕೆ ವಿಷಾದಿಸುವಂತಾಯಿತು.

ಒಬ್ಬ ವ್ಯಕ್ತಿ ಎಷ್ಟೇ ಬಲಶಾಲಿ, ಶ್ರೀಮಂತ, ಪ್ರಭಾವಿಯೇ ಆಗಿರಲಿ ಅವನೂ ಒಬ್ಬ ಹುಲುಮಾನವ. ಅನ್ಯಾಯವನ್ನು ಸಂಪೂರ್ಣ ಅಳಿಸಿಹಾಕಲು ಅಶಕ್ತ. ಒಬ್ಬ ಶಕ್ತಿಶಾಲಿ ಮನುಷ್ಯ ಕೂಡ ಅನ್ಯಾಯಕ್ಕೆ ಒಳಗಾಗಿ ನೋವನುಭವಿಸುತ್ತಾನೆ. ಸಮಯಸಂದತೆ ವೃದ್ಧನಾಗುತ್ತಾನೆ, ಸಾಯುತ್ತಾನೆ. ಮಾನವನ ಇತಿಮಿತಿಯ ಬಗ್ಗೆ ನೋಡುವಾಗ ಬೈಬಲಿನ ಈ ಎರಡು ವಾಕ್ಯಗಳು ನೆನಪಿಗೆ ಬರುತ್ತವೆ:

“ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.”ಯೆರೆಮೀಯ 10:23.

“ಪ್ರಭುಗಳಲ್ಲಿ ಭರವಸವಿಡಬೇಡಿರಿ; . . . ಅವನು ಸಹಾಯಮಾಡ ಶಕ್ತನಲ್ಲ.”ಕೀರ್ತನೆ 146:3.

ಈ ಮಾತುಗಳ ಅರ್ಥ ಗ್ರಹಿಸಿಕೊಂಡರೆ ಸಾಕು, ಮಾನವ ಪ್ರಯತ್ನಗಳು ನೆಲಕಚ್ಚುವಾಗ ನಾವು ನಿರಾಶರಾಗೆವು. ಹಾಗಾದರೆ ಅನ್ಯಾಯ ಅಳಿಸಿಹಾಕಲು ಬೇರೆ ಮಾರ್ಗವಿಲ್ಲವೇ? ಮುಂದಿನ ಲೇಖನದಲ್ಲಿ ಉತ್ತರವಿದೆ. ನೀತಿನ್ಯಾಯ ವಿಜೃಂಭಿಸುವ ಒಂದು ಲೋಕ ಬೇಗನೆ ಬರಲಿದೆ ಎಂದು ಅದು ತಿಳಿಸುತ್ತದೆ. ಈ ಮಧ್ಯೆ ನಾವೇನು ಮಾಡಬಹುದು? ನಮ್ಮ ಆಲೋಚನೆಗಳನ್ನು ಕೆಲಸಗಳನ್ನು ಪರಿಶೀಲಿಸೋಣ. ‘ನಾನು ನ್ಯಾಯವಂತನಾಗಿದ್ದೇನಾ? ವೈಯಕ್ತಿಕವಾಗಿ ಸರಿಪಡಿಸಬೇಕಾದ ವಿಷ್ಯವೇನಾದರೂ ಇದ್ಯಾ?’ ಎಂದು ನಮ್ಮನ್ನೇ ಕೇಳಿಕೊಳ್ಳೋಣ. ಈ ಪ್ರಶ್ನೆಗಳ ಬಗ್ಗೆಯೂ ಮುಂದಿನ ಲೇಖನ ಚರ್ಚಿಸುತ್ತೆ. (g12-E 05)

[ಪುಟ 10,11ರಲ್ಲಿರುವ ಚಿತ್ರಗಳು]

A. ಜನಾಂಗೀಯ ಹಲ್ಲೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಬಂಧಿಸುತ್ತಿರುವ ಚೀನಾದ ಪೊಲೀಸರು

B. ಇಂಗ್ಲೆಂಡಿನ ಲಂಡನಿನಲ್ಲಿ ನಡೆಯುತ್ತಿರುವ ಲೂಟಿ, ಆಸ್ತಿಪಾಸ್ತಿ ಹಾನಿ

C. ರುವಾಂಡದ ನಿರಾಶ್ರಿತರ ಕ್ಯಾಂಪ್‌

[ಕೃಪೆ]

ಎಡಬದಿ: © Adam Dean/Panos Pictures; ಮಧ್ಯೆ: © Matthew Aslett/Demotix/CORBIS; ಬಲಬದಿ: © David Turnley/CORBIS