ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

2. ಶುದ್ಧವಾಗಿಡಿ

2. ಶುದ್ಧವಾಗಿಡಿ

2. ಶುದ್ಧವಾಗಿಡಿ

ಒಬ್ಬ ವೈದ್ಯನು ರೋಗಿಯ ಸಂರಕ್ಷಣೆಗಾಗಿ ಶಸ್ತ್ರಚಿಕಿತ್ಸೆಯ ಮುಂಚೆ ತನ್ನ ಕೈಗಳನ್ನು, ಉಪಕರಣಗಳನ್ನು, ಶಸ್ತ್ರಚಿಕಿತ್ಸೆಯ ಕೊಠಡಿಯನ್ನು ಶುದ್ಧವಾಗಿಡುತ್ತಾನೆ. ಅದೇ ರೀತಿ ನಿಮ್ಮ ಕುಟುಂಬದ ಸುರಕ್ಷೆಗಾಗಿ ನಿಮ್ಮನ್ನು, ಅಡಿಗೆ ಕೋಣೆಯನ್ನು ಹಾಗೂ ಆಹಾರವನ್ನು ಶುಚಿಯಾಗಿಡಬೇಕು.

ಕೈಗಳನ್ನು ತೊಳೆಯಿರಿ.

“ಕೈಗಳಿಂದಲೇ ಶೀತ, ಜ್ವರದಂಥ ಸುಮಾರು ಶೇಕಡ 80ರಷ್ಟು ಸಾಂಕ್ರಾಮಿಕ ರೋಗಗಳು ಹರಡುತ್ತವೆ” ಎಂದು ಕೆನಡದ ಪಬ್ಲಿಕ್‌ ಹೆಲ್ತ್‌ ಏಜೆನ್ಸಿ ತಿಳಿಸುತ್ತದೆ. ಊಟಮಾಡುವ ಮುನ್ನ, ಊಟ ತಯಾರಿಸುವ ಮುನ್ನ, ಶೌಚಾಲಯ ಉಪಯೋಗಿಸಿದ ನಂತರ ಸೋಪ್‌ ಹಾಕಿ ಕೈಗಳನ್ನು ಚೆನ್ನಾಗಿ ತೊಳೆಯಿರಿ.

ಅಡಿಗೆ ಮನೆಯನ್ನು ಶುಚಿಯಾಗಿಡಿ.

ಒಂದು ಅಧ್ಯಯನಕ್ಕನುಸಾರ ಮನೆಯಲ್ಲಿ ಅತಿ ಶುದ್ಧವಾಗಿರುವ ಸ್ಥಳ ಶೌಚಗೃಹ. ಆದರೆ “ಅತಿ ಹೆಚ್ಚು ರೋಗಾಣುಗಳಿಂದ ಕೂಡಿದ ಸ್ಥಳ ಅಡಿಗೆ ಕೋಣೆ. ಪಾತ್ರೆ ತೊಳೆಯಲು ಬಳಸುವ ಸ್ಕ್ರಬ್ಬರ್‌/ಸ್ಪಾಂಜ್‌ನಲ್ಲಿ ಹೆಚ್ಚು ರೋಗಾಣುಗಳು ಇರುತ್ತವೆ.”

ಹಾಗಾಗಿ ಅವನ್ನು ಆಗಾಗ ಬದಲಾಯಿಸಿ. ಬಿಸಿ ನೀರಿಗೆ ಸೋಪು ಹಾಕಿ ಅಡಿಗೆ ಕೋಣೆಯ ಸ್ಲ್ಯಾಬನ್ನು ತೊಳೆಯಿರಿ. ಇದು ಸುಲಭವಲ್ಲ ನಿಜ. ಮನೆಯಲ್ಲಿ ನಲ್ಲಿಯ ಸೌಕರ್ಯವಿಲ್ಲದ ಸ್ಥಳದಲ್ಲಿ ವಾಸಿಸುವ ಬೋಲಾ ಎಂಬ ಸ್ತ್ರೀಯೊಬ್ಬಳು ಹೇಳುವುದು: “ಮನೆ, ಅಡಿಗೆ ಕೋಣೆ ಶುದ್ಧವಾಗಿಡುವುದು ಸುಲಭವಾಗಿರಲಿಲ್ಲ. ಹಾಗಿದ್ದರೂ ಅದಕ್ಕಾಗಿ ನೀರು, ಸೋಪು ಎಂದಿಗೂ ಕಡಿಮೆಯಾಗದಂತೆ ನಾನು ನೋಡಿಕೊಳ್ಳುತ್ತಿದ್ದೆ.”

ತೊಳೆದು ತಿನ್ನಿ.

ಮಾರ್ಕೆಟಿನಿಂದ ತಂದ ತರಕಾರಿ, ಹಣ್ಣುಹಂಪಲುಗಳಿಗೆ ಕೊಳಚೆ ನೀರು, ಮಲಮೂತ್ರ ತಾಗಿ ಅಶುದ್ಧವಾಗಿರುತ್ತದೆ. ಹಾಗಾಗಿ ತಿನ್ನುವ ಮುಂಚೆ ಚೆನ್ನಾಗಿ ತೊಳೆಯಿರಿ. ಹಣ್ಣು, ತರಕಾರಿಗಳ ಸಿಪ್ಪೆ ತೆಗೆದು ತಿನ್ನುವ/ಬೇಯಿಸುವ ನಿರ್ಧಾರ ಮಾಡಿರುವುದಾದರೂ ಅದನ್ನು ಮೊದಲು ತೊಳೆಯಬೇಕು. ಆಗ ರೋಗಾಣುಗಳಿಂದ ಮುಕ್ತವಾಗುತ್ತದೆ. ಇದಕ್ಕೆ ಸ್ವಲ್ಪ ಸಮಯ ಹಿಡಿಯುತ್ತೆ ನಿಜ. ಆದರೂ ಹೀಗೆ ಮಾಡುವುದು ಉಪಯುಕ್ತ. ಬ್ರೆಜಿಲ್‌ನ ಡೈಯಾನ್‌ ಹೀಗೆ ಹೇಳುತ್ತಾರೆ: “ಸ್ಯಾಲಡ್‌ ತಯಾರಿಸುವಾಗ ನಾನು ಎಂದೂ ಗಡಿಬಿಡಿ ಮಾಡುವುದಿಲ್ಲ. ಸ್ಯಾಲಡ್‌ ಎಲೆಗಳನ್ನು ಚೆನ್ನಾಗಿ ತೊಳೆಯುತ್ತೇನೆ.”

ಹಸಿ ಮಾಂಸವನ್ನು ಪ್ರತ್ಯೇಕವಾಗಿಡಿ.

ಬ್ಯಾಕ್ಟೀರಿಯ ಹರಡದಂತೆ ಹಸಿ ಮಾಂಸ, ಸಮುದ್ರ ಆಹಾರ ಮುಂತಾದವುಗಳನ್ನು ಡಬ್ಬದಲ್ಲಿಯೊ ಕವರಿನಲ್ಲಿಯೊ ಹಾಕಿ ಬಂದ್‌ ಮಾಡಿ ಇಡಿ. ಅಂಥ ಆಹಾರವನ್ನು ತುಂಡು ಮಾಡಲು ಪ್ರತ್ಯೇಕವಾದ ಚಾಕು, ಮಣೆಯನ್ನು ಉಪಯೋಗಿಸಿ. ಪ್ರತಿ ಉಪಯೋಗದ ಮುಂಚೆ ಮತ್ತು ಅನಂತರ ಸೋಪಿನಿಂದಲೂ ಬಿಸಿ ನೀರಿನಿಂದಲೂ ಅದನ್ನು ತೊಳೆಯಿರಿ.

ಮುಂದಿನ ಲೇಖನದಲ್ಲಿ ಆಹಾರವನ್ನು ಸುರಕ್ಷಿತವಾಗಿ ಸಿದ್ಧಮಾಡುವುದು ಹೇಗೆಂದು ನೋಡೋಣ. (g12-E 06)

[ಪುಟ 5ರಲ್ಲಿರುವ ಚೌಕ]

ಮಕ್ಕಳಿಗೆ ತರಬೇತು ನೀಡಿ: “ತಿನ್ನುವ, ಉಣ್ಣುವ ಮುಂಚೆ ಕೈಗಳನ್ನು ತೊಳೆಯುವಂತೆ, ನೆಲಕ್ಕೆ ಬಿದ್ದ ಆಹಾರವನ್ನು ಹೆಕ್ಕಿ ತಿನ್ನದಂತೆ ನಮ್ಮ ಮಕ್ಕಳಿಗೆ ಕಲಿಸಿದ್ದೇವೆ.”—ಹೊಯ್‌, ಹಾಂಗ್‌ ಕಾಂಗ್‌