ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರೋಗಮುಕ್ತವಾದ ಒಂದು ಲೋಕ

ರೋಗಮುಕ್ತವಾದ ಒಂದು ಲೋಕ

ರೋಗಮುಕ್ತವಾದ ಒಂದು ಲೋಕ

“ಸರ್ವರಿಗೂ ಮೂಲಭೂತ ಆರೋಗ್ಯಾರೈಕೆಯನ್ನು ಖಾತ್ರಿಪಡಿಸಲಿಕ್ಕಾಗಿರುವ ಸಹಭಾಗಿತ್ವ ಮನೋಭಾವದಲ್ಲಿ ಮತ್ತು ಸೇವೆಯಲ್ಲಿ ಎಲ್ಲಾ ದೇಶಗಳು ಸಹಕರಿಸಬೇಕು, ಏಕೆಂದರೆ ಯಾವುದೇ ಒಂದು ದೇಶದಲ್ಲಿನ ಜನರಿಂದ ಸಾಧಿಸಲ್ಪಡುವ ಆರೋಗ್ಯವು ಪ್ರತಿಯೊಂದು ದೇಶಕ್ಕೆ ನೇರವಾಗಿ ಸಂಬಂಧಿಸಿದ್ದಾಗಿದೆ ಮತ್ತು ಪ್ರಯೋಜನದಾಯಕವಾಗಿದೆ.”​—⁠ಆಲ್ಮ-ಆಟ ಘೋಷಣೆ, ಸೆಪ್ಟೆಂಬರ್‌ 12, 1978.

ಇಪ್ಪತ್ತೈದು ವರ್ಷಗಳ ಹಿಂದೆ, ಭೂಮಿಯಲ್ಲಿರುವ ಪ್ರತಿಯೊಬ್ಬರಿಗೆ ಮೂಲಭೂತ ಆರೋಗ್ಯಾರೈಕೆಯನ್ನು ಒದಗಿಸುವ ಗುರಿಯನ್ನು ಸಾಧಿಸಸಾಧ್ಯವಿದೆ ಎಂದು ಕೆಲವರಿಗೆ ಅನಿಸಿತು. ಈಗ ಯಾವುದು ಕಸಕ್‌ಸ್ತಾನ್‌ ಆಗಿದೆಯೋ ಆ ಆಲ್ಮ-ಆಟದಲ್ಲಿ ನಡೆದ ‘ಮೂಲಭೂತ ಆರೋಗ್ಯಾರೈಕೆಯ ಕುರಿತಾದ ಅಂತಾರಾಷ್ಟ್ರೀಯ ಸಮ್ಮೇಳನ’ಕ್ಕೆ ಹಾಜರಾದ ಪ್ರತಿನಿಧಿಗಳು, 2000 ಇಸವಿಯಷ್ಟಕ್ಕೆ ಪ್ರಮುಖ ಸೋಂಕು ರೋಗಗಳ ವಿರುದ್ಧ ಮಾನವಕುಲದವರೆಲ್ಲರೂ ಸೋಂಕು ಪ್ರತಿರಕ್ಷೆಯನ್ನು ಪಡೆಯುವಂತೆ ಏರ್ಪಡಿಸುವ ನಿರ್ಧಾರವನ್ನು ಮಾಡಿದರು. ಅದೇ ವರ್ಷದಲ್ಲಿ, ಭೂಮಿಯಲ್ಲಿರುವ ಪ್ರತಿಯೊಬ್ಬರಿಗೂ ಮೂಲಭೂತ ನೈರ್ಮಲ್ಯ ವ್ಯವಸ್ಥೆ ಮತ್ತು ಸುರಕ್ಷಿತ ನೀರು ಲಭ್ಯವಾಗುವುದು ಎಂಬ ನಿರೀಕ್ಷೆಯೂ ಅವರಿಗಿತ್ತು. ಲೋಕಾರೋಗ್ಯ ಸಂಸ್ಥೆ (ಡಬ್ಲ್ಯೂ.ಏಚ್‌.ಓ.)ಯ ಎಲ್ಲಾ ಸದಸ್ಯ ರಾಜ್ಯಗಳು ಈ ಘೋಷಣೆಗೆ ಸಹಿ ಹಾಕಿದವು.

ಈ ಗುರಿಯು ಖಂಡಿತವಾಗಿಯೂ ಪ್ರಶಂಸಾರ್ಹವಾಗಿತ್ತಾದರೂ, ತರುವಾಯದ ಕಾರ್ಯಾವಳಿಗಳು ನಿರಾಶಾದಾಯಕವಾಗಿದ್ದವು. ಖಂಡಿತವಾಗಿಯೂ ಇಂದು ಮೂಲಭೂತ ಆರೋಗ್ಯಾರೈಕೆಯು ಪ್ರತಿಯೊಬ್ಬರಿಗೂ ಲಭ್ಯವಿಲ್ಲ, ಮತ್ತು ಸೋಂಕು ರೋಗಗಳು ಈಗಲೂ ಭೂಮಿಯ ಮೇಲಿರುವ ನೂರಾರು ಕೋಟಿ ಜನರ ಜೀವಗಳಿಗೆ ಬೆದರಿಕೆಯನ್ನೊಡ್ಡುತ್ತಿವೆ. ಮತ್ತು ಈ ಮಾರಕ ರೋಗಗಳು ಅನೇಕವೇಳೆ, ಜೀವಿತದ ಪ್ರಮುಖ ಘಟ್ಟದಲ್ಲಿರುವ ಮಕ್ಕಳನ್ನು ಹಾಗೂ ವಯಸ್ಕರನ್ನು ಬಾಧಿಸುತ್ತವೆ.

ಏಡ್ಸ್‌, ಕ್ಷಯ, ಮತ್ತು ಮಲೇರಿಯ ಎಂಬ ರೋಗಗಳ ಮುಮ್ಮಡಿ ಬೆದರಿಕೆಯು, ‘ಸಹಭಾಗಿತ್ವ ಮನೋಭಾವದಲ್ಲಿ ಸಹಕರಿಸುವಂತೆ’ ದೇಶಗಳನ್ನು ಒತ್ತಾಯಿಸಿಲ್ಲ. ‘ಏಡ್ಸ್‌, ಕ್ಷಯ ಮತ್ತು ಮಲೇರಿಯ ರೋಗಗಳ ವಿರುದ್ಧವಾದ ಹೋರಾಟಕ್ಕಾಗಿರುವ ಭೌಗೋಳಿಕ ನಿಧಿ’ ಎಂಬ ಇತ್ತೀಚಿಗೆ ಸ್ಥಾಪಿತವಾದ ಸಂಸ್ಥೆಯು, ಈ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲಿಕ್ಕಾಗಿ 13 ಶತಕೋಟಿ ಅಮೆರಿಕನ್‌ ಡಾಲರುಗಳನ್ನು ಸರಕಾರಗಳ ಬಳಿ ವಿನಂತಿಸಿಕೊಂಡಿತು. 2002ನೇ ಇಸವಿಯ ಬೇಸಗೆಕಾಲದಷ್ಟಕ್ಕೆ ಕೇವಲ 2 ಶತಕೋಟಿ ಅಮೆರಿಕನ್‌ ಡಾಲರುಗಳಷ್ಟು ಹಣವು ಮಾತ್ರ ನೀಡಲ್ಪಟ್ಟಿತಾದರೂ, ಅದೇ ವರ್ಷದಲ್ಲಿ ಮಿಲಿಟರಿಗಾಗಿ ವ್ಯಯಿಸಲ್ಪಟ್ಟ ಹಣವು 700 ಶತಕೋಟಿ ಅಮೆರಿಕನ್‌ ಡಾಲರುಗಳನ್ನು ತಲಪಿತ್ತು! ಅಸಂತೋಷಕರವಾಗಿಯೇ, ಇಂದಿನ ವಿಭಾಗಿತ ಲೋಕದಲ್ಲಿ ಪ್ರತಿಯೊಬ್ಬರ ಒಳಿತಿಗಾಗಿ ಎಲ್ಲಾ ದೇಶಗಳನ್ನು ಒಂದುಗೂಡಿಸಲು ಸಮರ್ಥವಾಗಿರುವಂಥ ಬೆದರಿಕೆಗಳು ಕೆಲವೇ.

ಆರೋಗ್ಯಾಧಿಕಾರಿಗಳಿಗೆ ಅತ್ಯುತ್ತಮವಾದ ಹೇತುಗಳಿರುವುದಾದರೂ, ಸೋಂಕು ರೋಗಗಳ ವಿರುದ್ಧವಾದ ಹೋರಾಟದಲ್ಲಿ ಅವರಿಗೆ ತುಂಬ ಇತಿಮಿತಿಗಳಿವೆ. ಸರಕಾರಗಳು ಅಗತ್ಯವಿರುವ ಹಣವನ್ನು ಒದಗಿಸದಿರಬಹುದು. ಸೂಕ್ಷ್ಮಜೀವಿಗಳು ಅನೇಕ ಔಷಧಗಳಿಗೆ ಪ್ರತಿರೋಧವನ್ನು ಬೆಳೆಸಿಕೊಂಡಿವೆ, ಮತ್ತು ಜನರು ಅತ್ಯಂತ ಅಪಾಯಕರ ಜೀವನ ರೀತಿಯನ್ನು ಬೆನ್ನಟ್ಟುವುದನ್ನೇ ಪಟ್ಟುಹಿಡಿಯುತ್ತಿರಬಹುದು. ಅಷ್ಟುಮಾತ್ರವಲ್ಲ, ಕೆಲವೊಂದು ಕ್ಷೇತ್ರಗಳಲ್ಲಿ ಸರ್ವಸಾಮಾನ್ಯವಾಗಿರುವ ಬಡತನ, ಯುದ್ಧ, ಮತ್ತು ಬರಗಾಲಗಳಂಥ ಸಮಸ್ಯೆಗಳು ಲಕ್ಷಾಂತರ ಮಾನವರಿಗೆ ಯಶಸ್ವಿಕರವಾಗಿ ರೋಗಾಣುಗಳನ್ನು ಸೋಂಕಿಸಲು ಸೂಕ್ತವಾದ ಅವಕಾಶಗಳನ್ನು ಒದಗಿಸುತ್ತವೆ.

ನಮ್ಮ ಆರೋಗ್ಯದ ಬಗ್ಗೆ ದೇವರಿಗಿರುವ ಆಸಕ್ತಿ

ರೋಗಗಳ ಸಮಸ್ಯೆಗೆ ಒಂದು ಪರಿಹಾರವಿದೆ. ಯೆಹೋವ ದೇವರು ಮಾನವಕುಲದ ಆರೋಗ್ಯದಲ್ಲಿ ತುಂಬ ಆಸಕ್ತಿ ವಹಿಸುತ್ತಾನೆ ಎಂಬ ಸ್ಪಷ್ಟವಾದ ಪುರಾವೆ ನಮಗಿದೆ. ನಮ್ಮ ಸೋಂಕು ಪ್ರತಿರಕ್ಷೆಯೇ ಈ ಆಸಕ್ತಿಗೆ ಪ್ರಮುಖ ರುಜುವಾತಾಗಿದೆ. ಪುರಾತನ ಇಸ್ರಾಯೇಲಿಗೆ ಯೆಹೋವನು ಕೊಟ್ಟ ಅನೇಕ ನಿಯಮಗಳು, ಸೋಂಕು ರೋಗಗಳಿಂದ ಅವರನ್ನು ಕಾಪಾಡುವ ಬಯಕೆಯು ಆತನಿಗಿತ್ತು ಎಂಬುದನ್ನು ತೋರಿಸುತ್ತವೆ. *

ತನ್ನ ತಂದೆಯ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಯೇಸು ಕ್ರಿಸ್ತನು ಸಹ ಅಸ್ವಸ್ಥರಿಗಾಗಿ ಸಹಾನುಭೂತಿಯನ್ನು ತೋರಿಸುತ್ತಾನೆ. ಕುಷ್ಠರೋಗದಿಂದ ನರಳುತ್ತಿದ್ದ ವ್ಯಕ್ತಿಯೊಬ್ಬನನ್ನು ಯೇಸು ಭೇಟಿಯಾದ ವಿಷಯವನ್ನು ಮಾರ್ಕನ ಸುವಾರ್ತೆಯು ವರ್ಣಿಸುತ್ತದೆ. “ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಎಂದು ಆ ಕುಷ್ಠರೋಗಿಯು ಹೇಳಿದನು. ಆ ಮನುಷ್ಯನು ಸಹಿಸಿಕೊಂಡಿದ್ದ ನೋವು ಹಾಗೂ ಕಷ್ಟಾನುಭವವನ್ನು ಯೇಸು ಮನಗಂಡಾಗ, ಅವನಿಗೆ ತುಂಬ ಕನಿಕರವುಂಟಾಯಿತು. ಅದಕ್ಕೆ ಯೇಸು ಉತ್ತರಿಸಿದ್ದು: “ನನಗೆ ಮನಸ್ಸುಂಟು; ಶುದ್ಧವಾಗು.”​—⁠ಮಾರ್ಕ 1:​40, 41.

ಯೇಸುವಿನ ಅದ್ಭುತಕರ ಗುಣಪಡಿಸುವಿಕೆಗಳು ಕೆಲವೇ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಸುವಾರ್ತಾ ಲೇಖಕನಾದ ಮತ್ತಾಯನು ದಾಖಲಿಸುವುದೇನೆಂದರೆ, ಯೇಸು “ಗಲಿಲಾಯದಲ್ಲೆಲ್ಲಾ ತಿರುಗಾಡಿ ಅಲ್ಲಿಯವರ ಸಭಾಮಂದಿರಗಳಲ್ಲಿ ಉಪದೇಶ ಮಾಡುತ್ತಾ, ಪರಲೋಕರಾಜ್ಯದ ಸುವಾರ್ತೆಯನ್ನು ಸಾರಿಹೇಳುತ್ತಾ ಜನರ ಎಲ್ಲಾ ತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು.” (ಓರೆ ಅಕ್ಷರಗಳು ನಮ್ಮವು.) (ಮತ್ತಾಯ 4:​23) ಅವನ ಗುಣಪಡಿಸುವಿಕೆಗಳು ಕೇವಲ ಯೂದಾಯ ಮತ್ತು ಗಲಿಲಾಯದಲ್ಲಿದ್ದ ಅಸ್ವಸ್ಥರಿಗೆ ಮಾತ್ರ ಸಹಾಯಮಾಡಲಿಲ್ಲ. ಆ ಗುಣಪಡಿಸುವಿಕೆಗಳು, ಯೇಸು ಯಾವುದರ ಕುರಿತು ಸಾರಿದನೋ ಆ ದೇವರ ರಾಜ್ಯವು ಯಾರಿಂದಲೂ ವಿರೋಧವನ್ನು ಎದುರಿಸದೆ ಮಾನವಕುಲದ ಮೇಲೆ ಆಳ್ವಿಕೆ ನಡೆಸುವಾಗ, ಎಲ್ಲಾ ರೀತಿಯ ರೋಗಗಳು ಹೇಗೆ ಅಂತಿಮವಾಗಿ ಕಾಣೆಯಾಗುವವು ಎಂಬುದರ ಮುನ್ನೋಟವನ್ನು ನಮಗೆ ನೀಡುತ್ತವೆ.

ಭೂವ್ಯಾಪಕ ಆರೋಗ್ಯ ನನಸಾಗದ ಕನಸಲ್ಲ

ಭೂವ್ಯಾಪಕ ಆರೋಗ್ಯವು ನನಸಾಗದ ಕನಸಲ್ಲ ಎಂದು ಬೈಬಲ್‌ ನಮಗೆ ಆಶ್ವಾಸನೆ ನೀಡುತ್ತದೆ. ‘ದೇವರ ನಿವಾಸವು ಮನುಷ್ಯರಲ್ಲಿ ಇರುವಂಥ’ ಸಮಯವನ್ನು ಅಪೊಸ್ತಲ ಯೋಹಾನನು ಮುನ್ನೋಡಿದನು. ದೇವರು ಈ ರೀತಿಯಲ್ಲಿ ಕ್ರಿಯೆಗೈಯುವುದರ ಫಲಿತಾಂಶವಾಗಿ, ‘ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಗುವುದು.’ ಇದು ತುಂಬ ಒಳ್ಳೇದಾಗಿರುವುದಾದರೂ ನಂಬಲು ಅಸಾಧ್ಯವಾಗಿರುವಂತೆ ತೋರುತ್ತದೋ? ಮುಂದಿನ ವಚನದಲ್ಲಿ ದೇವರು ತಾನೇ ಪ್ರಕಟಿಸುವುದು: “ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ.”​—⁠ಪ್ರಕಟನೆ 21:3-5.

ರೋಗದ ಅಂತ್ಯವು ಅಗತ್ಯವಾಗಿ ಬಡತನ, ಬರಗಾಲ, ಮತ್ತು ಯುದ್ಧದ ಅಂತ್ಯವನ್ನು ಸಹ ಕೇಳಿಕೊಳ್ಳುತ್ತದೆ ಎಂಬುದಂತೂ ನಿಶ್ಚಯ, ಏಕೆಂದರೆ ಅನೇಕವೇಳೆ ಈ ವಿಪತ್ತುಗಳೂ ಸೋಂಕು ರೋಗದ ಸೂಕ್ಷ್ಮಜೀವಾಣುಗಳೂ ಜೊತೆಜೊತೆಯಾಗಿ ಕಾರ್ಯನಡಿಸುತ್ತವೆ. ಆದುದರಿಂದ, ಯೆಹೋವನು ಈ ಬೃಹತ್‌ ಕೆಲಸವನ್ನು ತನ್ನ ರಾಜ್ಯಕ್ಕೆ, ಕ್ರಿಸ್ತನಿಂದ ಆಳಲ್ಪಡುವ ಒಂದು ಸ್ವರ್ಗೀಯ ಸರಕಾರಕ್ಕೆ ನೇಮಿಸುತ್ತಾನೆ. ಲಕ್ಷಾಂತರ ಮಂದಿಯ ಕಟ್ಟಾಸಕ್ತಿಯ ಪ್ರಾರ್ಥನೆಗಳಿಗೆ ಉತ್ತರವಾಗಿ ಈ ಸರಕಾರವು ಬಂದೇ ಬರುವುದು, ಮತ್ತು ದೇವರ ಚಿತ್ತವು ಭೂಲೋಕದಲ್ಲಿಯೂ ನೆರವೇರುವುದನ್ನು ಖಾತ್ರಿಪಡಿಸುವುದು.​—⁠ಮತ್ತಾಯ 6:10.

ನಾವು ಯಾವಾಗ ದೇವರ ರಾಜ್ಯವನ್ನು ನಿರೀಕ್ಷಿಸಸಾಧ್ಯವಿದೆ? ಈ ಪ್ರಶ್ನೆಯ ಕುರಿತು ಮಾತಾಡುತ್ತಿರುವಾಗ ಯೇಸು ಮುಂತಿಳಿಸಿದ್ದೇನೆಂದರೆ, ಲೋಕದಲ್ಲಿರುವ ಜನರು ತುಂಬ ಅರ್ಥಗರ್ಭಿತವಾದ ವಿಕಸನಗಳ ಸರಮಾಲೆಯನ್ನು ನೋಡುವರು ಮತ್ತು ಇದು ಅತಿ ಬೇಗನೆ ರಾಜ್ಯವು ಸೂಕ್ತವಾದ ಕ್ರಮವನ್ನು ಕೈಗೊಳ್ಳಲಿದೆ ಎಂಬುದರ ಸೂಚನೆಯಾಗಿರುವುದು. ಈ ವೈಶಿಷ್ಟ್ಯಗಳಲ್ಲಿ ಒಂದು, ‘ಅಲ್ಲಲ್ಲಿ ಉಂಟಾಗುವ ಅಂಟುಜಾಡ್ಯಗಳೇ’ (NW) ಆಗಿವೆ ಎಂದು ಅವನು ಹೇಳಿದನು. (ಲೂಕ 21:10, 11; ಮತ್ತಾಯ 24:3, 7) “ಅಂಟುಜಾಡ್ಯ” ಎಂಬುದಕ್ಕಾಗಿರುವ ಗ್ರೀಕ್‌ ಪದವು “ಯಾವುದೇ ರೀತಿಯ ಮಾರಕ ಸೋಂಕು ರೋಗವನ್ನು” ಸೂಚಿಸುತ್ತದೆ. ವೈದ್ಯಕೀಯ ವಿಜ್ಞಾನದ ಎಲ್ಲಾ ಪ್ರಗತಿಯ ಹೊರತಾಗಿಯೂ, ಖಂಡಿತವಾಗಿ 20ನೆಯ ಶತಮಾನವು ಅಂಟುಜಾಡ್ಯಗಳ ಘೋರ ತಲೆದೋರುವಿಕೆಗಳನ್ನು ಕಂಡಿದೆ.​—⁠“1914 ರಿಂದ ಸಂಭವಿಸಿದ ಅಂಟುಜಾಡ್ಯದಿಂದ ಉಂಟಾದ ಸಾವುಗಳು” ಎಂಬ ಚೌಕವನ್ನು ನೋಡಿ.

ಸುವಾರ್ತಾ ಪುಸ್ತಕಗಳಲ್ಲಿರುವ ಯೇಸುವಿನ ಮಾತುಗಳಿಗೆ ಸದೃಶವಾದ, ಪ್ರಕಟನೆ ಪುಸ್ತಕದಲ್ಲಿರುವ ಒಂದು ಪ್ರವಾದನೆಯು, ಯೇಸು ಕ್ರಿಸ್ತನು ಸ್ವರ್ಗದಲ್ಲಿ ಅಧಿಕಾರವನ್ನು ಪಡೆದುಕೊಳ್ಳುವಾಗ ಅವನನ್ನು ಜೊತೆಗೂಡುವ ಬೇರೆ ಬೇರೆ ಕುದುರೆ ಸವಾರರನ್ನು ಚಿತ್ರಿಸುತ್ತದೆ. ನಾಲ್ಕನೆಯ ಕುದುರೆ ಸವಾರನು ‘ಬೂದಿಬಣ್ಣದ ಕುದುರೆಯ’ ಮೇಲೆ ಕುಳಿತುಕೊಂಡಿದ್ದು, ಅವನು ತನ್ನ ಹಾದಿಯಲ್ಲಿ “ಅಂಟುರೋಗ”ವನ್ನು ಬಿತ್ತುತ್ತಾನೆ. (ಪ್ರಕಟನೆ 6:​2, 4, 5, 8) ಇಸವಿ 1914 ರಿಂದ, ಕೆಲವು ಪ್ರಮುಖ ಸೋಂಕು ರೋಗಗಳಿಂದ ಉಂಟುಮಾಡಲ್ಪಟ್ಟಿರುವ ಮರಣ ಸಂಖ್ಯೆಯನ್ನು ನೋಡುವಾಗ, ಈ ಸಾಂಕೇತಿಕ ಕುದುರೆ ಸವಾರನು ನಿಜವಾಗಿಯೂ ಸವಾರಿಮಾಡುತ್ತಿದ್ದಾನೆ ಎಂಬುದನ್ನು ಅದು ದೃಢಪಡಿಸುತ್ತದೆ. ಲೋಕವ್ಯಾಪಕವಾಗಿ ಜನರು “ಅಂಟುರೋಗ”ದಿಂದ ನರಳುತ್ತಿರುವುದು, ದೇವರ ರಾಜ್ಯದ ಆಗಮನವು ಸಮೀಪಿಸಿದೆ ಎಂಬುದಕ್ಕೆ ಇನ್ನೂ ಹೆಚ್ಚಿನ ರುಜುವಾತನ್ನು ಒದಗಿಸುತ್ತದೆ. *​—⁠ಮಾರ್ಕ 13:29.

ಕೆಲವು ದಶಕಗಳ ವರೆಗೆ ಸೋಂಕು ರೋಗಗಳ ಹಬ್ಬುವಿಕೆಯನ್ನು ನಿಯಂತ್ರಿಸುವುದರಲ್ಲಿ ವೈದ್ಯಕೀಯ ವಿಜ್ಞಾನವು ಯಶಸ್ಸನ್ನು ಪಡೆದಿರುವುದಾದರೂ, ಒಂದು ಹೊಸ ಸಮಸ್ಯೆಯು ನಮ್ಮನ್ನು ಬೆದರಿಸಲು ಆರಂಭಿಸುತ್ತಿದೆ. ಈ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಲು ನಮಗೆ ಮನುಷ್ಯಾತೀತ ಪರಿಹಾರದ ಅಗತ್ಯವಿದೆ ಎಂಬುದಂತೂ ಸ್ಪಷ್ಟ. ನಮ್ಮ ಸೃಷ್ಟಿಕರ್ತನು ಇದನ್ನೇ ಮಾಡುವ ವಾಗ್ದಾನವಿತ್ತಿದ್ದಾನೆ. ಪ್ರವಾದಿಯಾದ ಯೆಶಾಯನು ನಮಗೆ ಆಶ್ವಾಸನೆ ನೀಡುವುದೇನೆಂದರೆ, ದೇವರ ರಾಜ್ಯದ ಕೆಳಗೆ “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” ಅಷ್ಟುಮಾತ್ರವಲ್ಲ, “[ದೇವರು] ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು.” (ಯೆಶಾಯ 25:8; 33:22, 24) ಆ ದಿನವು ಉದಯಿಸುವಾಗ, ರೋಗವು ಸದಾಕಾಲಕ್ಕೂ ಸಂಪೂರ್ಣವಾಗಿ ಜಯಿಸಲ್ಪಟ್ಟಿರುವುದು. (g04 5/22)

[ಪಾದಟಿಪ್ಪಣಿಗಳು]

^ ಮೋಶೆಯ ಧರ್ಮಶಾಸ್ತ್ರದಲ್ಲಿ ಮಲವಿಸರ್ಜನೆ, ನೈರ್ಮಲ್ಯವ್ಯವಸ್ಥೆ, ಆರೋಗ್ಯಶಾಸ್ತ್ರ, ಮತ್ತು ಸಂಪರ್ಕ ನಿಷೇಧದ ಕುರಿತಾದ ಸೂಚನೆಗಳು ಒಳಗೂಡಿದ್ದವು. ಡಾ. ಏಚ್‌. ಓ. ಫಿಲಿಪ್ಸ್‌ ಹೇಳಿದ್ದೇನೆಂದರೆ, “ಬೈಬಲಿನಲ್ಲಿ ಕೊಡಲ್ಪಟ್ಟಿರುವ ಜೀವನದ ವಾಸ್ತವಾಂಶಗಳು, ರೋಗನಿರ್ಣಯ, ಚಿಕಿತ್ಸೆ, ಮತ್ತು ರೋಗಗಳನ್ನು ತಡೆಗಟ್ಟುವ ರೂಢಿಗಳು, ಹಿಪೊಕ್ರೇಟಿಸನ ಸಿದ್ಧಾಂತಗಳಿಗಿಂತ ಹೆಚ್ಚು ಮುಂದುವರಿದಂಥವುಗಳು ಮತ್ತು ವಿಶ್ವಾಸಾರ್ಹವಾದವುಗಳು ಆಗಿವೆ.”

^ ದೇವರ ರಾಜ್ಯದ ಆಗಮನವು ಸಮೀಪಿಸಿದೆ ಎಂಬುದನ್ನು ರುಜುಪಡಿಸುವ ಇನ್ನೂ ಹೆಚ್ಚಿನ ವೈಶಿಷ್ಟ್ಯಗಳ ಪರಿಗಣನೆಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದ 11ನೆಯ ಅಧ್ಯಾಯವನ್ನು ನೋಡಿ.

[ಪುಟ 12ರಲ್ಲಿರುವ ಚೌಕ]

1914ರಿಂದ ಸಂಭವಿಸಿದ ಅಂಟುಜಾಡ್ಯದಿಂದ ಉಂಟಾದ ಸಾವುಗಳು

ಈ ಸಂಖ್ಯಾಸಂಗ್ರಹಣಗಳು ಅಂದಾಜಾಗಿವೆ ಎಂಬುದಂತೂ ಖಂಡಿತ. ಆದರೂ 1914ರಿಂದ ಎಷ್ಟರ ಮಟ್ಟಿಗೆ ಅಂಟುಜಾಡ್ಯಗಳು ಮಾನವಕುಲವನ್ನು ಬಾಧಿಸಿವೆ ಎಂಬುದನ್ನು ಅವು ಸೂಚಿಸುತ್ತವೆ.

ಸಿಡುಬು ರೋಗ (30 ಕೋಟಿ ಮತ್ತು 50 ಕೋಟಿಯ ನಡುವಣ ಸಂಖ್ಯೆ) ಸಿಡುಬು ರೋಗಕ್ಕಾಗಿ ಯಾವುದೇ ಪರಿಣಾಮಕಾರಿ ಚಿಕಿತ್ಸೆಯು ಎಂದೂ ಕಂಡುಹಿಡಿಯಲ್ಪಟ್ಟಿರಲಿಲ್ಲ. ಆದರೆ 1980ರಷ್ಟಕ್ಕೆ, ಒಂದು ಬೃಹತ್‌ ಅಂತಾರಾಷ್ಟ್ರೀಯ ಲಸಿಕೆ ಕಾರ್ಯಕ್ರಮವು ಅಂತಿಮವಾಗಿ ಈ ರೋಗವನ್ನು ನಿರ್ಮೂಲಗೊಳಿಸುವುದರಲ್ಲಿ ಸಫಲವಾಯಿತು.

ಕ್ಷಯರೋಗ (10 ಕೋಟಿ ಮತ್ತು 15 ಕೋಟಿಯ ನಡುವಣ ಸಂಖ್ಯೆ) ಕ್ಷಯರೋಗವು ಈಗ ಪ್ರತಿ ವರ್ಷ ಹೆಚ್ಚುಕಡಿಮೆ 20 ಲಕ್ಷ ಮಂದಿಯನ್ನು ಕೊಲ್ಲುತ್ತದೆ, ಮತ್ತು ಲೋಕದಲ್ಲಿರುವ ಪ್ರತಿ 3 ಜನರಲ್ಲಿ ಒಬ್ಬನಿಗೆ ಕ್ಷಯರೋಗದ ಬ್ಯಾಕ್ಟೀರಿಯವು ಇದೆ.

ಮಲೇರಿಯ (8 ಕೋಟಿ ಮತ್ತು 12 ಕೋಟಿಯ ನಡುವಣ ಸಂಖ್ಯೆ) ಇಪ್ಪತ್ತನೆಯ ಶತಮಾನದ ಮೊದಲ ಅರ್ಧಭಾಗದಲ್ಲಿ, ಮಲೇರಿಯ ಜ್ವರದಿಂದ ಸಾಯುತ್ತಿದ್ದವರ ಸಂಖ್ಯೆಯು ವರ್ಷವೊಂದಕ್ಕೆ ಸುಮಾರು 20 ಲಕ್ಷವಾಗಿತ್ತು. ಈಗ ಅತ್ಯಂತ ಹೆಚ್ಚಿನ ಮರಣ ಸಂಖ್ಯೆಯು ಆಫ್ರಿಕದ ಉಪಸಹಾರದಲ್ಲಿ ವರದಿಸಲ್ಪಟ್ಟಿದ್ದು, ಈಗಲೂ ಮಲೇರಿಯ ಜ್ವರವು ವರ್ಷವೊಂದಕ್ಕೆ ಹತ್ತು ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಕೊಲ್ಲುತ್ತದೆ.

ಸ್ಪ್ಯಾನಿಷ್‌ ಇನ್‌ಫ್ಲೂಎನ್ಸಾ (2 ಕೋಟಿ ಮತ್ತು 3 ಕೋಟಿಯ ನಡುವಣ ಸಂಖ್ಯೆ) ಮರಣ ಸಂಖ್ಯೆಯು ಅತ್ಯಧಿಕವಾಗಿತ್ತೆಂದು ಕೆಲವು ಇತಿಹಾಸಗಾರರು ಹೇಳುತ್ತಾರೆ. ಈ ಮಾರಕ ಸಾಂಕ್ರಾಮಿಕ ರೋಗವು, ಒಂದನೆಯ ಲೋಕ ಯುದ್ಧದ ಬಳಿಕ 1918 ಮತ್ತು 1919ರಲ್ಲಿ ಲೋಕವ್ಯಾಪಕವಾಗಿ ಹಬ್ಬಿತ್ತು. “ಗೆಡ್ಡೆ ಪ್ಲೇಗು ಸಹ ಇಷ್ಟೊಂದು ಜನರನ್ನು ಇಷ್ಟು ತ್ವರಿತವಾಗಿ ಕೊಂದಿರಲಿಲ್ಲ” ಎಂದು ಮಾನವ ಮತ್ತು ಸೂಕ್ಷ್ಮಜೀವಿಗಳು (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುತ್ತದೆ.

ಟೈಫಸ್‌ ಜ್ವರ (ಸುಮಾರು 2 ಕೋಟಿ) ಟೈಫಸ್‌ ಜ್ವರವೆಂಬ ಸಾಂಕ್ರಾಮಿಕ ರೋಗವು ಅನೇಕವೇಳೆ ಯುದ್ಧದ ಜೊತೆಯಲ್ಲೇ ಬರುತ್ತಿತ್ತು, ಮತ್ತು ಒಂದನೆಯ ಲೋಕ ಯುದ್ಧವು ಎಂಥ ಟೈಫಸ್‌ ಅಂಟುಜಾಡ್ಯವನ್ನು ಕೆರಳಿಸಿತೆಂದರೆ, ಇದು ಪೂರ್ವ ಯೂರೋಪ್‌ನಲ್ಲಿನ ದೇಶಗಳನ್ನೆಲ್ಲಾ ಧ್ವಂಸಮಾಡಿಬಿಟ್ಟಿತು.

ಏಡ್ಸ್‌ (2 ಕೋಟಿಗಿಂತ ಹೆಚ್ಚು) ಈ ಆಧುನಿಕ ವ್ಯಾಧಿಯು ಈಗ ಪ್ರತಿ ವರ್ಷ 30 ಲಕ್ಷ ಜನರನ್ನು ಕೊಲ್ಲುತ್ತಿದೆ. ವಿಶ್ವ ಸಂಸ್ಥೆಯ ಏಡ್ಸ್‌ ಕಾರ್ಯಕ್ರಮದ ಪ್ರಚಲಿತ ಅಂದಾಜುಗಳು ಸೂಚಿಸುವುದೇನೆಂದರೆ, “ಅತಿ ವಿಸ್ತಾರವಾದ ತಡೆಗಟ್ಟುವಿಕೆ ಮತ್ತು ಚಿಕಿತ್ಸಾ ಪ್ರಯತ್ನಗಳು ಇಲ್ಲದಿರುವಲ್ಲಿ, 2000 ಮತ್ತು 2020ನೇ ಇಸವಿಯೊಳಗೆ . . . 6.8 ಕೋಟಿ ಜನರು ಸಾಯುವರು.”

[ಪುಟ 11ರಲ್ಲಿರುವ ಚಿತ್ರಗಳು]

ದೇವರ ರಾಜ್ಯದಲ್ಲಿ ಇಂಥ ರೋಗಗಳು ಎಂದೂ ಬೆದರಿಕೆಯನ್ನು ಒಡ್ಡವು

ಏಡ್ಸ್‌

ಮಲೇರಿಯ

ಕ್ಷಯರೋಗ

[ಕೃಪೆ]

ಏಡ್ಸ್‌: CDC; ಮಲೇರಿಯ: CDC/Dr. Melvin; ಕ್ಷಯರೋಗ: © 2003 Dennis Kunkel Microscopy, Inc.

[ಪುಟ 13ರಲ್ಲಿರುವ ಚಿತ್ರ]

ಯೇಸು ಎಲ್ಲಾ ರೀತಿಯ ರೋಗಗಳು ಮತ್ತು ಬೇನೆಯನ್ನು ಗುಣಪಡಿಸಿದನು