ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಇಂದಿನ ಬದುಕಿಗೆ ಅಂದಿನ ಬುದ್ಧಿಮಾತು

ಚಿಂತೆ ಮಾಡಬೇಡಿ

ಚಿಂತೆ ಮಾಡಬೇಡಿ

ಬೈಬಲ್‌ ತತ್ವ: ‘ನಿಮ್ಮ ಕುರಿತು ಚಿಂತೆಮಾಡುವುದನ್ನು ನಿಲ್ಲಿಸಿರಿ.’—ಮತ್ತಾಯ 6:25.

ಈ ಮಾತುಗಳ ಅರ್ಥವೇನು? ಯೇಸು ಈ ಮಾತುಗಳನ್ನು ಗುಡ್ಡದ ಮೇಲೆ ಕೊಟ್ಟ ಭಾಷಣದಲ್ಲಿ ತಿಳಿಸಿದನು. ಒಂದು ಬೈಬಲ್‌ ಶಬ್ದಕೋಶಕ್ಕನುಸಾರ ‘ಚಿಂತೆ ಮಾಡುವುದು’ ಎನ್ನುವುದಕ್ಕಿರುವ ಗ್ರೀಕ್‌ ಪದದ ಅರ್ಥ, “ದಿನನಿತ್ಯ ಜೀವನದಲ್ಲಿ ಎದುರಾಗುವ ಬಡತನ, ಹಸಿವು ಮತ್ತಿತರ ಸಮಸ್ಯೆಗಳಿಗೆ ಒಬ್ಬ ವ್ಯಕ್ತಿ ತೋರಿಸುವ ಸಾಮಾನ್ಯ ಪ್ರತಿಕ್ರಿಯೆ” ಎಂದಾಗಿದೆ. ಚಿಂತೆ ಅಂದರೆ ಭವಿಷ್ಯದಲ್ಲಾಗುವ ವಿಷಯಗಳ ಬಗ್ಗೆ ಅತಿಯಾಗಿ ಯೋಚಿಸುವುದಾಗಿದೆ. ನಮ್ಮ ಮತ್ತು ನಮ್ಮ ಪ್ರಿಯರ ಒಳ್ಳೇದಕ್ಕಾಗಿ ಮತ್ತು ಭೌತಿಕ ಅಗತ್ಯಗಳಿಗಾಗಿ ಯೋಚಿಸುವುದರಲ್ಲಿ ತಪ್ಪೇನಿಲ್ಲ. ಹಾಗೆ ನಾವು ಯೋಚಿಸುವುದು ಸಹಜ. (ಫಿಲಿಪ್ಪಿ 2:20) ಆದರೆ “ಚಿಂತೆಮಾಡಬೇಡಿ” ಎಂದು ಯೇಸು ಹೇಳಿದಾಗ ಅವನು ತನ್ನ ಶಿಷ್ಯರಿಗೆ ಅಗತ್ಯಕ್ಕಿಂತ ಹೆಚ್ಚು ಯೋಚನೆ ಮಾಡದಂತೆ ಹೇಳುತ್ತಿದ್ದನು. ಯಾಕೆಂದರೆ ನಾಳೆಯ ಬಗ್ಗೆ ಅತಿಯಾಗಿ ಚಿಂತೆ ಮಾಡಿದರೆ ನಾವು ಇವತ್ತಿನ ಸಂತೋಷವನ್ನೂ ಕಳೆದುಕೊಳ್ಳುತ್ತೇವೆ.—ಮತ್ತಾಯ 6:31, 34.

ಹೀಗೆ ಮಾಡುವುದು ನಮ್ಮ ಕಾಲಕ್ಕೆ ಸೂಕ್ತನಾ? ಯೇಸು ಹೇಳಿದ ಈ ಸಲಹೆಯನ್ನು ಪಾಲಿಸಿದರೆ ನಮಗೇ ಒಳ್ಳೇದು. ಯಾಕೆಂದರೆ ಒಬ್ಬ ವ್ಯಕ್ತಿ ಚಿಂತೆ ಮಾಡುವಾಗ ಅವನ ಅನುವೇದನಾ ನರವ್ಯೂಹ ತುಂಬ ಚುರುಕಾಗುತ್ತದೆ. ಇದರಿಂದ ‘ಅಲ್ಸರ್‌, ಆಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಬರಬಹುದು’ ಎಂದು ಕೆಲವು ಸಂಶೋಧನೆಗಳಿಂದ ತಿಳಿದುಬಂದಿದೆ.

ಚಿಂತೆ ಮಾಡದೇ ಇರಲು ಯೇಸು ಒಂದು ಪ್ರಾಮುಖ್ಯ ಕಾರಣ ಕೊಟ್ಟನು. ಅದೇನೆಂದರೆ ಚಿಂತೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. “ಚಿಂತೆಮಾಡುವ ಮೂಲಕ ನಿಮ್ಮಲ್ಲಿ ಯಾರು ತನ್ನ ಆಯುಷ್ಯವನ್ನು ಸ್ವಲ್ಪವಾದರೂ ಹೆಚ್ಚಿಸಿಕೊಳ್ಳಬಲ್ಲನು?” ಎಂದು ಅವನು ಕೇಳಿದನು. (ಮತ್ತಾಯ 6:27) ಚಿಂತೆ ಮಾಡುತ್ತಾ ಇರುವುದರಿಂದ ನಮ್ಮ ಆಯುಷ್ಯ ಒಂದು ಸೆಕೆಂಡಷ್ಟೂ ಹೆಚ್ಚಾಗುವುದಿಲ್ಲ. ಅಷ್ಟೇ ಅಲ್ಲದೆ, ನಾವು ನೆನಸಿದಂತೆ ಎಲ್ಲಾ ಆಗೋದೂ ಇಲ್ಲ. ಇದರ ಬಗ್ಗೆ ಒಬ್ಬ ವಿದ್ವಾಂಸ ಹೀಗೆ ಹೇಳಿದ್ದಾನೆ: “ಭವಿಷ್ಯದ ಬಗ್ಗೆ ಚಿಂತೆ ಮಾಡುವುದು ವ್ಯರ್ಥ. ಸಾಮಾನ್ಯವಾಗಿ, ನಾವು ಚಿಂತೆ ಮಾಡಿದಂತೆಯೇ ಆಗುವುದು ತುಂಬ ಕಡಿಮೆ.”

ಚಿಂತೆ ಮಾಡುವುದನ್ನು ನಿಲ್ಲಿಸುವುದು ಹೇಗೆ? ಮೊದಲನೆದಾಗಿ, ದೇವರಲ್ಲಿ ಭರವಸೆ ಇಡಿ. ದೇವರು ಹಕ್ಕಿಗಳಿಗೆ ಆಹಾರ ಕೊಟ್ಟು, ಹೂವುಗಳಿಗೆ ಸುಂದರವಾಗಿ ಉಡಿಸಿ ತೊಡಿಸುತ್ತಾನೆ. ಹಾಗಿರುವಾಗ ತಮ್ಮ ಜೀವನದಲ್ಲಿ ಆತನ ಆರಾಧನೆಗೆ ಪ್ರಥಮ ಸ್ಥಾನ ಕೊಡುವ ಮಾನವರಿಗೆ ಬೇಕಾದ ಅಗತ್ಯಗಳನ್ನು ಪೂರೈಸುವುದಿಲ್ಲವಾ? (ಮತ್ತಾಯ 6:25, 26, 28-30) ಎರಡನೆಯದಾಗಿ, ಆಯಾ ದಿನದ ಬಗ್ಗೆ ಮಾತ್ರ ಯೋಚಿಸಿ. “ನಾಳೆಯ ವಿಷಯವಾಗಿ ಎಂದೂ ಚಿಂತೆಮಾಡಬೇಡಿ; ನಾಳೆಯ ದಿನವು ತನ್ನದೇ ಆದ ಚಿಂತೆಗಳನ್ನು ಹೊಂದಿರುವುದು. ಪ್ರತಿದಿನಕ್ಕೆ ಅದಕ್ಕಿರುವ ಕೆಡುಕೇ ಸಾಕು” ಎಂದನು ಯೇಸು. ಈ ಮಾತನ್ನು ನೀವು ಸಹ ಒಪ್ಪುತ್ತೀರ ತಾನೇ?—ಮತ್ತಾಯ 6:34.

ಯೇಸುವಿನ ವಿವೇಕಯುತ ಸಲಹೆಗೆ ಕಿವಿಗೊಡುವುದಾದರೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದಕ್ಕಿಂತ ಮುಖ್ಯವಾಗಿ, ನಾವು ಮನಶಾಂತಿಯನ್ನು ಪಡೆಯುತ್ತೇವೆ. ಇದನ್ನೇ ಬೈಬಲಿನಲ್ಲಿ “ದೇವಶಾಂತಿ” ಎಂದು ಹೇಳಲಾಗಿದೆ.—ಫಿಲಿಪ್ಪಿ 4:6, 7. ▪ (w16-E No.1)