ಮುಖಪುಟ ಲೇಖನ | ಯೇಸು ಏಕೆ ಕಷ್ಟಗಳನ್ನು ಅನುಭವಿಸಿ ಸತ್ತನು?
ಇದು ನಿಜವಾಗಲೂ ನಡೆದಿತ್ತಾ?
ಕ್ರಿಸ್ತ ಶಕ 33ರ ವಸಂತಕಾಲವದು. ನಜರೇತಿನ ಯೇಸುವನ್ನು ಕೊಲ್ಲಲಾಯಿತು. ಆತನ ಮೇಲೆ ದಂಗೆಕೋರನೆಂಬ ಸುಳ್ಳಾರೋಪವನ್ನು ಹಾಕಿ, ಕ್ರೂರವಾಗಿ ಹಿಂಸಿಸಿ, ಕಂಬಕ್ಕೆ ಜಡಿಯಲಾಯಿತು. ತುಂಬಾ ನೋವು ಅನುಭವಿಸಿ ಯೇಸು ಪ್ರಾಣಬಿಟ್ಟನು. ಆದರೆ ದೇವರು ಅವನಿಗೆ ಪುನಃ ಜೀವ ಕೊಟ್ಟನು. ಇದಾಗಿ 40 ದಿನಗಳ ನಂತರ ಯೇಸು ಸ್ವರ್ಗಕ್ಕೆ ಹೋದನು.
ಈ ಮನಕಲಕುವಂಥ ಘಟನೆಯ ಬಗ್ಗೆ ಹೊಸ ಒಡಂಬಡಿಕೆಯ ಅಥವಾ ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ ನಾಲ್ಕು ಸುವಾರ್ತಾ ಪುಸ್ತಕಗಳಲ್ಲಿ ತಿಳಿಸಲಾಗಿದೆ. ಆದರೆ ಪ್ರಶ್ನೆ ಏನೆಂದರೆ ಈ ಘಟನೆ ನಿಜವಾಗಲೂ ನಡೆದಿತ್ತಾ? ಇದು ತುಂಬಾ ಪ್ರಾಮುಖ್ಯವಾದ ಪ್ರಶ್ನೆಯಾಗಿದೆ. ಒಂದುವೇಳೆ, ಅದು ನಿಜವಾಗಿ ನಡೆದಿಲ್ಲವಾದರೆ ಕ್ರೈಸ್ತ ನಂಬಿಕೆ ಅನ್ನೋದೇ ವ್ಯರ್ಥ ಮತ್ತು ಪರದೈಸಿನಲ್ಲಿ ಸದಾಕಾಲ ಜೀವಿಸುವ ನಿರೀಕ್ಷೆ ಕೇವಲ ಕನಸಾಗಿಯೇ ಉಳಿಯುತ್ತದೆ. (1 ಕೊರಿಂಥ 15:14) ಒಂದುವೇಳೆ, ಅದು ನಿಜವಾಗಲೂ ನಡೆದಿದ್ದೇ ಆದರೆ ನಮ್ಮೆಲ್ಲರಿಗೂ ಉಜ್ವಲ ಭವಿಷ್ಯತ್ತಿದೆ. ಹಾಗಾದರೆ ಸುವಾರ್ತಾ ಪುಸ್ತಕಗಳಲ್ಲಿರುವ ಮಾಹಿತಿ ನಿಜಾನಾ, ಸುಳ್ಳಾ? ತಿಳಿಯೋಣ ಬನ್ನಿ.
ಆಧಾರಗಳು ಏನು ಹೇಳುತ್ತವೆ?
ಸುವಾರ್ತಾ ಪುಸ್ತಕಗಳು ದಂತಕಥೆಯಂತಲ್ಲ. ಅದರಲ್ಲಿರುವ ಪ್ರತಿಯೊಂದು ಮಾಹಿತಿಯೂ ನಿಷ್ಕೃಷ್ಟ ಮತ್ತು ನಿಖರ. ಉದಾಹರಣೆಗೆ, ಅದರಲ್ಲಿ ತಿಳಿಸಿರುವ ಸ್ಥಳಗಳು ನಿಜವಾಗಿಯೂ ಇದ್ದವು. ಅವುಗಳಲ್ಲಿ ಕೆಲವನ್ನು ಇವತ್ತಿಗೂ ಭೇಟಿ ಮಾಡಬಹುದು. ಅಲ್ಲದೆ, ಈ ವೃತ್ತಾಂತಗಳಲ್ಲಿ ತಿಳಿಸಿರುವ ವ್ಯಕ್ತಿಗಳು ನಿಜವಾಗಿಯೂ ಇದ್ದರು. ಈ ಮಾಹಿತಿಯನ್ನು ಇತಿಹಾಸಗಾರರು ಕೂಡ ಒಪ್ಪಿದ್ದಾರೆ.—ಲೂಕ 3:1, 2, 23.
* ಯೇಸುವನ್ನು ಹೇಗೆ ಸಾಯಿಸಲಾಯಿತೆಂದು ಸುವಾರ್ತಾ ಪುಸ್ತಕಗಳಲ್ಲಿ ತಿಳಿಸಲಾಗಿದೆಯೋ ಅದೇ ರೀತಿಯ ಮರಣದಂಡನೆ ವಿಧಿಸುವ ಪದ್ಧತಿ ರೋಮನ್ ಕಾಲದಲ್ಲಿತ್ತು. ಅಷ್ಟೇ ಅಲ್ಲದೆ, ಘಟನೆಗಳು ನಡೆದದ್ದರ ಬಗ್ಗೆ ಇದ್ದದ್ದನ್ನು ಇದ್ದ ಹಾಗೆ ಸುವಾರ್ತಾ ಪುಸ್ತಕಗಳಲ್ಲಿ ತಿಳಿಸಲಾಗಿದೆ. ಯೇಸುವಿನ ಶಿಷ್ಯರು ಮಾಡಿದ ತಪ್ಪುಗಳು ಸಹ ಅದರಲ್ಲಿ ದಾಖಲಾಗಿವೆ. (ಮತ್ತಾಯ 26:56; ಲೂಕ 22:24-26; ಯೋಹಾನ 18:10, 11) ಸುವಾರ್ತಾ ಪುಸ್ತಕಗಳನ್ನು ಬರೆದವರು ಪ್ರಾಮಾಣಿಕರಾಗಿದ್ದರು ಮತ್ತು ಯೇಸುವಿನ ಬಗ್ಗೆ ಸತ್ಯವನ್ನೇ ಬರೆದರು ಎನ್ನುವುದಕ್ಕೆ ಈ ಎಲ್ಲಾ ವಿಷಯಗಳು ಬಲವಾದ ಆಧಾರವನ್ನು ಕೊಡುತ್ತವೆ.
ಮೊದಲನೇ ಮತ್ತು ಎರಡನೇ ಶತಮಾನದ ಇತಿಹಾಸಗಾರರು ಸಹ ಯೇಸುವಿನ ಬಗ್ಗೆ ತಿಳಿಸಿದ್ದಾರೆ.ಯೇಸು ನಿಜವಾಗಲೂ ಪುನರುತ್ಥಾನವಾದನಾ?
ಯೇಸು ನಿಜವಾಗಿ ಬದುಕಿದ್ದನು ಮತ್ತು ಸತ್ತನು ಎಂದು ನಂಬುವ ಕೆಲವರು ಆತನ ಪುನರುತ್ಥಾನದ ಬಗ್ಗೆ ಸಂಶಯವನ್ನು ವ್ಯಕ್ತಪಡಿಸುತ್ತಾರೆ. ಆರಂಭದಲ್ಲಿ ಯೇಸುವಿನ ಶಿಷ್ಯರು ಕೂಡ ಆತನು ಪುನರುತ್ಥಾನವಾದನು ಎನ್ನುವುದನ್ನು ನಂಬಲಿಲ್ಲ. (ಲೂಕ 24:11) ಆದರೆ ಪುನರುತ್ಥಾನವಾದ ಯೇಸುವನ್ನು ಬೇರೆ ಬೇರೆ ಸಮಯದಲ್ಲಿ ನೋಡಿದ ನಂತರ ಶಿಷ್ಯರಲ್ಲಿದ್ದ ಸಂಶಯ ದೂರವಾಯಿತು. ಒಂದು ಸಂದರ್ಭದಲ್ಲಿ, ಸುಮಾರು 500 ಮಂದಿ ಯೇಸುವನ್ನು ನೋಡಿದರು.—1 ಕೊರಿಂಥ 15:6.
ಯೇಸುವಿನ ಬಗ್ಗೆ ತಿಳಿಸಿದರೆ ತಮ್ಮನ್ನು ಬಂಧಿಸಲಾಗುವುದು ಮತ್ತು ಕೊಲ್ಲಲಾಗುವುದು ಎಂದು ಗೊತ್ತಿದ್ದರೂ ಶಿಷ್ಯರು ಧೈರ್ಯದಿಂದ ಯೇಸುವಿನ ಪುನರುತ್ಥಾನದ ಬಗ್ಗೆ ಎಲ್ಲರಿಗೆ, ಅದರಲ್ಲೂ ಯೇಸುವಿನ ಹತ್ಯೆಗೆ ಕಾರಣರಾದವರಿಗೂ ತಿಳಿಸಿದರು. (ಅಪೊಸ್ತಲರ ಕಾರ್ಯಗಳು 4:1-3, 10, 19, 20; 5:27-32) ಯೇಸುವಿನ ಪುನರುತ್ಥಾನದ ಬಗ್ಗೆ ಸ್ವಲ್ಪ ಸಂಶಯ ಇದ್ದಿದ್ದರೂ ಅವರು ಹೀಗೆ ಧೈರ್ಯದಿಂದ ಹೇಳಲು ಸಾಧ್ಯವಿತ್ತಾ? ಖಂಡಿತ ಇಲ್ಲ. ಯೇಸು ನಿಜವಾಗಿಯೂ ಪುನರುತ್ಥಾನ ಆಗಿದ್ದರಿಂದಲೇ ಕ್ರೈಸ್ತತ್ವ ಅಂದೂ ಇಂದೂ ಲೋಕದ ಮೇಲೆ ಇಷ್ಟೊಂದು ಪ್ರಭಾವ ಬೀರಲು ಸಾಧ್ಯವಾಗಿದೆ.
ಸುವಾರ್ತಾ ಪುಸ್ತಕಗಳು ಯೇಸುವಿನ ಮರಣ ಮತ್ತು ಪುನರುತ್ಥಾನದ ಕುರಿತು ಬಲವಾದ ಆಧಾರಗಳನ್ನು ಒದಗಿಸುತ್ತವೆ. ಇವುಗಳನ್ನು ಸೂಕ್ಷ್ಮವಾಗಿ ಓದುವಾಗ ಈ ಎಲ್ಲಾ ಘಟನೆಗಳು ನಿಜವಾಗಿ ನಡೆದವು ಎಂದು ತಿಳಿಯಬಹುದು. ಇವು ಏಕೆ ನಡೆದವು ಎನ್ನುವುದರ ಬಗ್ಗೆ ತಿಳಿಯುವಾಗ ನಿಮ್ಮ ನಂಬಿಕೆ ಇನ್ನೂ ಬಲಗೊಳ್ಳುತ್ತದೆ. ಇದನ್ನು ಮುಂದಿನ ಲೇಖನದಲ್ಲಿ ತಿಳಿಯೋಣ. (w16-E No.2)
^ ಪ್ಯಾರ. 7 ಕ್ರಿಸ್ತ ಶಕ 55ರಲ್ಲಿ ಹುಟ್ಟಿದ ಟ್ಯಾಸಿಟಸ್ ಹೇಳಿದ್ದು, “ಕ್ರೈಸ್ತರು ಎಂಬ ಹೆಸರು ಯಾರಿಂದ ಬಂತೋ ಆ ಕ್ರಿಸ್ಟಸ್ [ಕ್ರಿಸ್ತನು] ತಿಬೇರಿಯಸ್ನ ಆಳಿಕೆಯ ಕಾಲದಲ್ಲಿ ನಮ್ಮ ಆಡಳಿತಗಾರರಲ್ಲಿ ಒಬ್ಬನಾದ ಪೊಂತ್ಯ ಪಿಲಾತನಿಂದ ಉಗ್ರ ದಂಡನೆಯನ್ನು ಅನುಭವಿಸಿದನು.” ಸ್ಯೂಟೋನಿಯಸ್ (ಮೊದಲನೇ ಶತಮಾನ), ಯೆಹೂದಿ ಇತಿಹಾಸಗಾರನಾದ ಜೋಸೀಫಸ್ (ಮೊದಲನೇ ಶತಮಾನ) ಮತ್ತು ಬಿಥೂನ್ಯದ ರಾಜ್ಯಪಾಲ ಪ್ಲಿನಿ ದ ಯಂಗರ್ (ಎರಡನೇ ಶತಮಾನದ ಆರಂಭ) ಕೂಡ ಯೇಸುವಿನ ಬಗ್ಗೆ ತಿಳಿಸಿದ್ದಾರೆ.