ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಸುರಕ್ಷಿತ ಭಾವನೆಯನ್ನು ಹೊಡೆದೋಡಿಸುವುದು ಹೇಗೆ?

ಅಸುರಕ್ಷಿತ ಭಾವನೆಯನ್ನು ಹೊಡೆದೋಡಿಸುವುದು ಹೇಗೆ?

ಈಗಷ್ಟೇ ಹುಟ್ಟಿದ ಮಗುವಿಗಿಂತ ಅಸಹಾಯಕರು ಬೇರೆ ಯಾರೂ ಇಲ್ಲ. ನಾವು ಈ ಲೋಕಕ್ಕೆ ಬಂದಾಗ ನಾವೆಷ್ಟು ಸುರಕ್ಷಿತರಾಗಿರುತ್ತೇವೆ ಅನ್ನುವುದು ನಮ್ಮ ಹೆತ್ತವರ ಮೇಲೆ ಅವಲಂಬಿಸಿತ್ತು. ನಾವು ನಡೆಯಲು ಕಲಿತಾಗ ನಮಗಿಂತ ತುಂಬ ಎತ್ತರವಾಗಿರುವ ಅಪರಿಚಿತರನ್ನು ನೋಡಿದಾಗ ತುಂಬ ಭಯವಾಯಿತು. ಆದರೆ ನಮ್ಮ ತಂದೆ ಅಥವಾ ತಾಯಿಯ ಕೈ ಹಿಡಿದಾಗ ಸುರಕ್ಷಿತ ಭಾವನೆ ಮೂಡಿತು.

ಚಿಕ್ಕವರಾಗಿದ್ದಾಗ, ಹೆತ್ತವರು ಕೊಡುವ ಪ್ರೀತಿ ಮತ್ತು ಪ್ರೋತ್ಸಾಹದ ಮೇಲೆ ನಮ್ಮ ಸಂತೋಷ ಹೊಂದಿಕೊಂಡಿತ್ತು. ನಮ್ಮನ್ನು ಹೆತ್ತವರು ಪ್ರೀತಿಸುತ್ತಿದ್ದಾರೆ ಎಂದು ತಿಳಿದಾಗ ಭದ್ರತೆಯ ಅನಿಸಿಕೆ ಆಯಿತು. ‘ವೆರಿ ಗುಡ್‌’ ಅಂದಾಗ ಆತ್ಮವಿಶ್ವಾಸ ಹೆಚ್ಚಾಯಿತು ಮತ್ತು ಪ್ರಗತಿ ಮಾಡಿದೆವು.

ನಾವು ಸ್ವಲ್ಪ ದೊಡ್ಡವರಾದಾಗ ಆತ್ಮೀಯ ಗೆಳೆಯರಿಂದಾಗಿ ಸುರಕ್ಷಿತ ಭಾವನೆ ಹೆಚ್ಚಾಯಿತು. ನಮ್ಮೊಂದಿಗೆ ಅವರಿದ್ದಾಗ ಆರಾಮವಾಗಿದ್ದೆವು ಮತ್ತು ಅವರಿಂದಾಗಿ ಶಾಲೆಯಲ್ಲಿನ ಭಯ ಸಹ ಕಡಿಮೆ ಆಯಿತು.

ಇಲ್ಲಿ ವಿವರಿಸಲಾದ ಬಾಲ್ಯ ಅತೀ ಉತ್ತಮವಾದದ್ದು. ಆದರೆ ಕೆಲವು ಯುವಜನರಿಗೆ ಆತ್ಮೀಯ ಗೆಳೆಯರೇ ಇರುವುದಿಲ್ಲ, ಅನೇಕ ಮಕ್ಕಳಿಗೆ ಹೆತ್ತವರ ಬೆಂಬಲ ಸಿಗುವುದಿಲ್ಲ. ಮೆಲಿಸ್ಸಾ * ಎಂಬಾಕೆ ಹೀಗೆ ಹೇಳುತ್ತಾಳೆ: “ಒಂದಾಗಿರುವ ಕುಟುಂಬದ ಚಿತ್ರವನ್ನು ನೋಡಿದಾಗೆಲ್ಲಾ ‘ಚಿಕ್ಕವಳಿದ್ದಾಗ ನನಗೂ ಈ ರೀತಿ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತಲ್ಲ’ ಎಂದು ಯೋಚಿಸುತ್ತೇನೆ.” ನಿಮಗೂ ಹೀಗೆ ಅನಿಸಿದೆಯಾ?

ಅಸುರಕ್ಷಿತ ಪರಿಸರದಲ್ಲಿ ಬೆಳೆದ ಮಕ್ಕಳ ಸಮಸ್ಯೆ

ನಿಮಗೆ ಪ್ರೀತಿ ಮತ್ತು ಪ್ರೋತ್ಸಾಹ ಸಿಕ್ಕಿದ್ದೇ ತುಂಬ ಅಪರೂಪ ಆಗಿದ್ದಿರಬಹುದು. ನಿಮ್ಮ ಹೆತ್ತವರು ಯಾವಾಗಲೂ ಜಗಳವಾಡುತ್ತಿದ್ದದ್ದು, ಅವರ ಮದುವೆ ಮುರಿದದ್ದು ನಿಮಗೆ ನೆನಪಾಗಬಹುದು. ಈ ರೀತಿ ಆಗುವುದಕ್ಕೆ ‘ನಾನೇ ಕಾರಣ’ ಎಂದು ನಿಮ್ಮನ್ನು ನೀವೇ ದೂರುತ್ತಿರಬಹುದು ಅಥವಾ ನಿಮ್ಮ ಹೆತ್ತವರಲ್ಲಿ ಒಬ್ಬರು ನಿಮಗೆ ಕೆಟ್ಟ ಮಾತಲ್ಲಿ ಬೈದಿರಬಹುದು ಅಥವಾ ಕ್ರೂರವಾಗಿ ಹೊಡೆದಿರಬಹುದು. ಇದರಿಂದಾಗಿ ನೀವು ಚಿಕ್ಕ ವಯಸ್ಸಲ್ಲೇ ಆತ್ಮವಿಶ್ವಾಸ ಕಳೆದುಕೊಂಡಿರಬಹುದು.

ಅಸುರಕ್ಷಿತ ಭಾವನೆ ಇರುವ ಮಕ್ಕಳು ಹೇಗೆ ಪ್ರತಿಕ್ರಿಯಿಸುತ್ತಾರೆ? ಕೆಲವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಡ್ರಗ್ಸ್‌ ಮತ್ತು ಕುಡಿಕತನದಂಥ ಚಟಕ್ಕೆ ಬೀಳುತ್ತಾರೆ. ಕೆಲವರು ತಮಗಿರುವ ಒಂಟಿತನ ದೂರಮಾಡಲು ಗೂಂಡಾಗಳ ಗುಂಪಿಗೆ ಸೇರಿಕೊಳ್ಳುತ್ತಾರೆ. ಅಸುರಕ್ಷಿತ ಭಾವನೆ ಇರುವ ಹದಿವಯಸ್ಸಿನವರು ಪ್ರೀತಿ ಪಡೆಯಬೇಕೆಂಬ ಆಸೆಯಿಂದ ಪ್ರೀತಿ-ಪ್ರೇಮದ ಬಲೆಗೆ ಬೀಳುತ್ತಾರೆ. ಇಂಥ ಸಂಬಂಧಗಳು ಬಾಳುವುದು ಕಡಿಮೆ ಮತ್ತು ಅವು ನುಚ್ಚುನೂರಾದಾಗ ಅಸುರಕ್ಷಿತ ಭಾವನೆ ಇನ್ನೂ ಹೆಚ್ಚಾಗುತ್ತದೆ.

ಅಸುರಕ್ಷಿತ ಪರಿಸರದಲ್ಲಿ ಬೆಳೆದ ಎಲ್ಲರೂ ಈ ರೀತಿ ಅಡ್ಡದಾರಿಗೆ ಹೋಗದಿದ್ದರೂ ಅವರಲ್ಲಿ ಆತ್ಮವಿಶ್ವಾಸದ ಕೊರತೆ ಇರುತ್ತದೆ. “ನನ್ನ ಅಮ್ಮ ನನಗೆ ಯಾವಾಗಲೂ ‘ಪ್ರಯೋಜನಕ್ಕೆ ಬಾರದವಳು’ ಅಂತ ಹೇಳುತ್ತಿದ್ದರು. ಇದರಿಂದ ಅದು ನನ್ನ ಮನಸ್ಸಿನಲ್ಲಿ ಕೂತು ನಾನು ಅಂಥವಳೇ ಎನ್ನುವ ಮನೋಭಾವ ಬೆಳೆಯಿತು. ಅವರು ನನಗೆ ಪ್ರಶಂಸೆ ನೀಡಿದ್ದಾಗಲಿ, ಪ್ರೀತಿ ತೋರಿಸಿದ್ದಾಗಲಿ ಇಲ್ಲವೇ ಇಲ್ಲ” ಎಂದು ಆ್ಯನಾ ಹೇಳುತ್ತಾಳೆ.

ಅಸುರಕ್ಷಿತ ಭಾವನೆಗೆ ನಾವು ಬೆಳೆದು ಬಂದ ಪರಿಸ್ಥಿತಿ ಮಾತ್ರ ಕಾರಣವಾಗಿರುವುದಿಲ್ಲ. ವಿವಾಹ ವಿಚ್ಛೇದನ, ವೃದ್ಧಾಪ್ಯದ ಸಮಸ್ಯೆಗಳು ಅಥವಾ ತಾವು ಹೇಗೆ ಕಾಣುತ್ತೇವೆ ಎಂಬ ಆಲೋಚನೆಯಿಂದಲೂ ಈ ಭಾವನೆ ಬರಬಹುದು. ವಿಷಯವು ಏನೇ ಆಗಿರಲಿ, ಅದು ನಮ್ಮ ಸಂತೋಷವನ್ನು ಮತ್ತು ಇತರರೊಂದಿಗಿನ ನಮ್ಮ ಸಂಬಂಧವನ್ನು ಹಾಳುಮಾಡುತ್ತದೆ. ಈ ಭಾವನೆಯನ್ನು ಎದುರಿಸಲು ನಾವೇನು ಮಾಡಬೇಕು?

ದೇವರು ನಮ್ಮ ಬಗ್ಗೆ ಕಾಳಜಿವಹಿಸುತ್ತಾನೆ

ಇದಕ್ಕೆ ಸಹಾಯ ನಮ್ಮ ಮುಂದೇ ಇದೆ. ನಮಗೆಲ್ಲರಿಗೂ ಸಹಾಯ ಮಾಡಲು ಒಬ್ಬನು ಬಯಸುತ್ತಾನೆ ಮಾತ್ರವಲ್ಲ, ಅದು ಅವನಿಂದ ಸಾಧ್ಯ ಸಹ. ಆತನೇ ದೇವರು.

“ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ; ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ” ಎಂದು ದೇವರು ಪ್ರವಾದಿ ಯೆಶಾಯನ ಮೂಲಕ ತಿಳಿಸಿದ್ದಾನೆ. (ಯೆಶಾಯ 41:10, 13) ದೇವರು ನಮ್ಮನ್ನು ತನ್ನ ಕೈಯಿಂದ ಎತ್ತಿ ಸಹಾಯ ಮಾಡುತ್ತಾನೆ ಎಂದು ತಿಳಿಯುವುದರಿಂದ ಎಷ್ಟೊಂದು ನೆಮ್ಮದಿ ಸಿಗುತ್ತದೆ! ಹಾಗಾಗಿ, ನಾವು ಚಿಂತೆ ಮಾಡುವ ಅವಶ್ಯಕತೆನೇ ಇಲ್ಲ!

ಚಿಂತೆಯಲ್ಲಿದ್ದಾಗ ದೇವರ ಕೈ ಹಿಡಿಯಲು ಕಲಿತ ದೇವರ ಆರಾಧಕರ ಬಗ್ಗೆ ಬೈಬಲಿನಲ್ಲಿ ತಿಳಿಸಲಾಗಿದೆ. ಸಮುವೇಲನ ತಾಯಿಯಾದ ಹನ್ನಳು ಆರಂಭದಲ್ಲಿ ಮಕ್ಕಳಿಲ್ಲದ ಕಾರಣ ನೊಂದು-ಬೆಂದುಹೋಗಿದ್ದಳು. ಆಕೆ ಬಂಜೆಯಾಗಿದ್ದರಿಂದ ಜನ ಅವಳನ್ನು ನಿಂದಿಸಿದರು. ಇದರಿಂದ ಅವಳು ಏನೂ ತಿನ್ನದೆ, ಅಳುತ್ತಾ ಇದ್ದಳು. (1 ಸಮುವೇಲ 1:6, 8) ಆದರೆ ಅವಳು ತನ್ನ ಭಾವನೆಗಳನ್ನು ದೇವರಲ್ಲಿ ಹೇಳಿಕೊಂಡ ನಂತರ ದುಃಖಾನೇ ಪಡಲಿಲ್ಲ.—1 ಸಮುವೇಲ 1:18.

ಕೀರ್ತನೆಗಾರನಾದ ದಾವೀದನಿಗೆ ಸಹ ಕೆಲವೊಮ್ಮೆ ಅಸುರಕ್ಷಿತ ಭಾವನೆ ಮೂಡಿತು. ಅನೇಕ ವರ್ಷಗಳವರೆಗೆ ರಾಜ ಸೌಲನು ಅವನನ್ನು ಕೊಲ್ಲಲು ಹೊಂಚುಹಾಕುತ್ತಿದ್ದನು. ಅವನ ಜೀವ ತೆಗೆಯಲು ಅನೇಕ ಸಲ ಧಾಳಿ ಮಾಡಲಾಯಿತು. ಕೆಲವೊಮ್ಮೆ ಅವನಿಗೆ ತಾನು ಸಮಸ್ಯೆಗಳಲ್ಲಿ ಮುಳುಗಿಹೋಗಿದ್ದೇನೆ ಎಂದನಿಸಿತು. (ಕೀರ್ತನೆ 55:3-5; 69:1) ಇಷ್ಟೆಲ್ಲಾ ಸಮಸ್ಯೆ ಇದ್ದರೂ ಆತನು ಹೀಗೆ ಬರೆದನು, “ನಾನು ನಿರ್ಭಯವಾಗಿರುವದರಿಂದ ಮಲಗಿಕೊಂಡು ಕೂಡಲೆ ನಿದ್ದೆಮಾಡುವೆನು; ಯಾಕಂದರೆ ಯೆಹೋವನೇ, ನಾನು ಯಾವ ಅಪಾಯವೂ ಇಲ್ಲದೆ ಸುರಕ್ಷಿತನಾಗಿರುವಂತೆ ನೀನು ಕಾಪಾಡುತ್ತೀ.”—ಕೀರ್ತನೆ 4:8.

ಹನ್ನ ಮತ್ತು ದಾವೀದ ಇಬ್ಬರೂ ತಮ್ಮ ಚಿಂತೆಗಳನ್ನು ದೇವರ ಮೇಲೆ ಹಾಕಿದರು ಮತ್ತು ಆತನು ಅವರಿಗೆ ಸಹಾಯ ಮಾಡಿದನು. (ಕೀರ್ತನೆ 55:22) ನಾವು ಸಹ ಅವರಂತಿರಲು ಏನು ಮಾಡಬೇಕು?

ಸುರಕ್ಷಿತ ಭಾವನೆಗೆ ಮೂರು ಮಾರ್ಗಗಳು

1. ತಂದೆಯಾದ ಯೆಹೋವನಲ್ಲಿ ನಂಬಿಕೆಯಿಡಲು ಕಲಿಯಿರಿ.

“ಒಬ್ಬನೇ ಸತ್ಯ ದೇವರಾಗಿರುವ” ತನ್ನ ತಂದೆಯನ್ನು ತಿಳಿದುಕೊಳ್ಳುವಂತೆ ಯೇಸು ಸಲಹೆ ಕೊಟ್ಟಿದ್ದಾನೆ. (ಯೋಹಾನ 17:3) “ಆತನು ನಮ್ಮಲ್ಲಿ ಪ್ರತಿಯೊಬ್ಬನಿಗೂ ಬಹಳ ದೂರವಾಗಿರುವುದಿಲ್ಲ” ಎಂದು ಅಪೊಸ್ತಲ ಪೌಲನು ನಮಗೆ ಭರವಸೆ ಕೊಡುತ್ತಾನೆ. (ಅಪೊಸ್ತಲರ ಕಾರ್ಯಗಳು 17:27) “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು” ಎಂದು ಯಾಕೋಬನು ಬರೆದಿದ್ದಾನೆ.—ಯಾಕೋಬ 4:8.

ಚಿಂತೆಯನ್ನು ಹೋಗಲಾಡಿಸಲು ಪ್ರಮುಖ ಹೆಜ್ಜೆ, ನಮ್ಮನ್ನು ಪ್ರೀತಿಸುವ ಮತ್ತು ಕಾಳಜಿ ವಹಿಸುವ ಸ್ವರ್ಗೀಯ ತಂದೆ ನಮಗಿದ್ದಾರೆ ಎಂದು ತಿಳಿಯುವುದೇ ಆಗಿದೆ. ಇದನ್ನು ತಿಳಿದು ಆತನ ಮೇಲೆ ನಂಬಿಕೆ ಬೆಳೆಸಿಕೊಳ್ಳಲು ಸ್ವಲ್ಪ ಸಮಯ ಬೇಕೆನ್ನುವುದೇನೋ ನಿಜ. ಆದರೆ ಹಾಗೆ ಮಾಡಿದರೆ ನಮಗೆ ತುಂಬ ಪ್ರಯೋಜನವಾಗುತ್ತೆ. “ಯೆಹೋವನು ನನಗೆ ತಂದೆಯಂತೆ ಆಪ್ತನಾದಾಗ ನನ್ನ ಭಾವನೆಗಳನ್ನೆಲ್ಲಾ ಆತನಲ್ಲಿ ಹೇಳಿಕೊಳ್ಳಲು ಸಾಧ್ಯವಾಯಿತು. ಇದರಿಂದ ನನ್ನ ಮನಸ್ಸು ಹಗುರವಾಯಿತು” ಎನ್ನುತ್ತಾಳೆ ಕ್ಯಾರಲಿನ್‌.

ರೇಚಲ್‌ ಹೇಳುವುದು, “ಹೆತ್ತವರು ನನ್ನನ್ನು ಬಿಟ್ಟು ಬೇರೆ ದೇಶಕ್ಕೆ ಹೋದರು. ಆದರೆ ಯೆಹೋವನು ನನಗೆ ಸಹಾಯ ಮಾಡಿದನು. ಇದರಿಂದ ನನ್ನಲ್ಲಿ ಸುರಕ್ಷಿತ ಭಾವನೆ ಮೂಡಿತು. ನಾನು ನನ್ನ ಸಮಸ್ಯೆಗಳ ಬಗ್ಗೆ ಆತನೊಂದಿಗೆ ಮಾತಾಡಿದೆ ಮತ್ತು ಸಹಾಯ ಮಾಡುವಂತೆ ಕೇಳಿಕೊಂಡೆ. ಆಗ ಆತನು ನನಗೆ ಸಹಾಯ ಮಾಡಿದನು.” *

2. ಆಧ್ಯಾತ್ಮಿಕ ಕುಟುಂಬವನ್ನು ಹುಡುಕಿ.

ತನ್ನ ಶಿಷ್ಯರು ಒಬ್ಬರು ಇನ್ನೊಬ್ಬರ ಜೊತೆ ಸಹೋದರ-ಸಹೋದರಿಯರಂತೆ ವ್ಯವಹರಿಸಲು ಯೇಸು ಕಲಿಸಿದನು. ‘ನೀವೆಲ್ಲರೂ ನನ್ನ ಸಹೋದರರು’ ಎಂದು ಹೇಳಿದನು. (ಮತ್ತಾಯ 23:8) ತನ್ನ ನಿಜ ಹಿಂಬಾಲಕರು ಒಬ್ಬರನೊಬ್ಬರು ಪ್ರೀತಿಸಬೇಕು ಮತ್ತು ದೊಡ್ಡ ಆಧ್ಯಾತ್ಮಿಕ ಕುಟುಂಬವಾಗಬೇಕು ಎಂದು ಬಯಸಿದನು.—ಮತ್ತಾಯ 12:48-50; ಯೋಹಾನ 13:35.

ಯೆಹೋವನ ಸಾಕ್ಷಿಗಳು ಆಧ್ಯಾತ್ಮಿಕ ಕುಟುಂಬವಾಗಿದ್ದು ಪ್ರೀತಿ ಮತ್ತು ನೆಮ್ಮದಿಯನ್ನು ಬೆಳೆಸಲು ಪ್ರಯತ್ನಿಸುತ್ತಾರೆ. (ಇಬ್ರಿಯ 10:24, 25) ಸಭಾಗೃಹದಲ್ಲಿ ನಡೆಯುವ ಕೂಟಗಳು ಮುಲಾಮುಗಳ ಥರ ಅನೇಕರ ಮನಸ್ಸಿಗಾದ ಗಾಯ, ನೋವುಗಳನ್ನು ವಾಸಿಮಾಡಿವೆ.

“ನಾನಿದ್ದ ಸ್ಥಳೀಯ ಸಭಾಗೃಹದಲ್ಲಿ ನನಗೊಬ್ಬ ಆಪ್ತ ಸ್ನೇಹಿತೆ ಇದ್ದಳು. ಅವಳು ನಾನು ಅನುಭವಿಸುತ್ತಿದ್ದ ನೋವನ್ನು ಅರ್ಥಮಾಡಿಕೊಂಡಿದ್ದಳು. ನಾನು ಹೇಳೋದೆಲ್ಲಾ ಕೇಳಿಸಿಕೊಳ್ಳುತ್ತಿದ್ದಳು, ನನಗೋಸ್ಕರ ಬೈಬಲ್‌ ಓದುತ್ತಿದ್ದಳು ಮತ್ತು ನನ್ನೊಂದಿಗೆ ಪ್ರಾರ್ಥಿಸುತ್ತಿದ್ದಳು. ನನಗೆ ಒಂಟಿ ಭಾವನೆ ಬರದಂತೆ ನೋಡಿಕೊಳ್ಳುತ್ತಿದ್ದಳು. ನನ್ನ ಎಲ್ಲ ವಿಷಯಗಳನ್ನು ಹೇಳಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳಲು ನನಗೆ ಸಹಾಯ ಮಾಡಿದಳು. ಈಗ ನನಗೆ ಸುರಕ್ಷಿತ ಭಾವನೆ ಬಂದಿದೆ. ಅವಳ ಸಹಕಾರಕ್ಕಾಗಿ ತುಂಬ ಧನ್ಯವಾದ” ಎನ್ನುತ್ತಾಳೆ ಇವಾ. “ನಾನು ಸಭೆಯಲ್ಲಿ ತಾಯಿ ಮತ್ತು ತಂದೆಯನ್ನು ಕಂಡುಕೊಂಡಿದ್ದೇನೆ. ಅವರು ನಿಜವಾಗಲೂ ನನಗೆ ಪ್ರೀತಿ ತೋರಿಸಿದರು ಮತ್ತು ಸುರಕ್ಷಿತ ಭಾವನೆ ಬೆಳೆಯಲು ಸಹಾಯಮಾಡಿದರು” ಎಂದು ರೇಚಲ್‌ ಹೇಳುತ್ತಾಳೆ.

3. ಇತರರಿಗೆ ಪ್ರೀತಿ ಮತ್ತು ಕರುಣೆ ತೋರಿಸಿ.

ಇತರರಿಗೆ ಪ್ರೀತಿ ಮತ್ತು ಕರುಣೆ ತೋರಿಸುವಾಗ ಅವರೊಂದಿಗೆ ಬಲವಾದ ಗೆಳೆತನವನ್ನು ಬೆಳೆಸುತ್ತೇವೆ. ಯೇಸು ಹೇಳಿದ್ದು: “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ.” (ಅಪೊಸ್ತಲರ ಕಾರ್ಯಗಳು 20:35) ನಾವು ಎಷ್ಟು ಹೆಚ್ಚು ಪ್ರೀತಿಯನ್ನು ತೋರಿಸುತ್ತೇವೋ ಅಷ್ಟೇ ಹೆಚ್ಚು ಪ್ರೀತಿಯನ್ನು ಪಡೆಯುತ್ತೇವೆ. “ಕೊಡುವುದನ್ನು ರೂಢಿಮಾಡಿಕೊಳ್ಳಿರಿ, ಆಗ ಜನರು ನಿಮಗೆ ಕೊಡುವರು” ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು.—ಲೂಕ 6:38.

ಪ್ರೀತಿಯನ್ನು ತೋರಿಸುವುದರಿಂದ ಮತ್ತು ಪಡೆಯುವುದರಿಂದ ಸುರಕ್ಷಿತ ಭಾವನೆ ಬರುತ್ತದೆ. “ಪ್ರೀತಿಯು ಎಂದಿಗೂ ವಿಫಲವಾಗುವುದಿಲ್ಲ” ಎಂದು ಬೈಬಲ್‌ ಹೇಳುತ್ತದೆ. (1 ಕೊರಿಂಥ 13:8) “ನನ್ನ ಬಗ್ಗೆ ನನಗಿರುವ ನಕರಾತ್ಮಕ ಭಾವನೆಗಳು ನಿಜವಲ್ಲವೆಂದು ಗೊತ್ತು. ಇತರರಿಗೆ ಸಹಾಯ ಮಾಡುವ ಮೂಲಕ ಇಂಥ ಭಾವನೆಯಿಂದ ಹೊರಬರುತ್ತೇನೆ. ಬೇರೆಯವರಿಗೆ ಸಹಾಯ ಮಾಡುವಾಗೆಲ್ಲಾ ತೃಪ್ತಿ ಸಿಗುತ್ತದೆ” ಎಂದು ಮರಿಯಾ ಹೇಳುತ್ತಾಳೆ.

ಎಲ್ಲರಿಗೂ ಸುರಕ್ಷತೆ

ಮೇಲೆ ತಿಳಿಸಲಾದಂತೆ ಮಾಡಿದ ತಕ್ಷಣ ಎಲ್ಲ ಸರಿಹೋಗುವುದಿಲ್ಲ. ಆದರೆ ಅದನ್ನು ಪಾಲಿಸುವುದರಿಂದ ತುಂಬ ಪ್ರಯೋಜನ ಸಿಗುತ್ತದೆ. “ನನಗೆ ಅಸುರಕ್ಷಿತ ಭಾವನೆ ಈಗಲೂ ಇದೆ. ಆದರೆ ಈಗ ನನ್ನ ಆತ್ಮವಿಶ್ವಾಸ ಹೆಚ್ಚಾಗಿದೆ. ದೇವರು ನನ್ನ ಬಗ್ಗೆ ಕಾಳಜಿವಹಿಸುತ್ತಾನೆಂದು ನನಗೆ ಗೊತ್ತು. ನನಗೆ ಸುರಕ್ಷಿತ ಭಾವನೆ ಬರಲು ಸಹಾಯ ಮಾಡುವ ತುಂಬ ಆತ್ಮೀಯ ಸ್ನೇಹಿತರಿದ್ದಾರೆ” ಎಂದು ಕ್ಯಾರಲಿನ್‌ ಹೇಳುತ್ತಾಳೆ. ರೇಚಲ್‌ಗೂ ಅಂಥದ್ದೇ ಭಾವನೆ ಇದೆ. ಅವಳು ಹೇಳುವುದು, “ಆಗಾಗ ನಾನು ದುಃಖದಲ್ಲಿ ಮುಳುಗಿಹೋಗುತ್ತೇನೆ. ಆದರೆ ಅಂಥ ಸಮಯದಲ್ಲಿ ಸಲಹೆಕೊಟ್ಟು ಸಹಾಯಮಾಡುವ ಆಧ್ಯಾತ್ಮಿಕ ಸಹೋದರ-ಸಹೋದರಿಯರು ನನಗಿದ್ದಾರೆ. ನಾನು ಸಕರಾತ್ಮಕವಾಗಿ ಯೋಚಿಸಲು ಅವರು ನನಗೆ ಸಹಾಯಮಾಡುತ್ತಾರೆ. ಅದಕ್ಕಿಂತಲೂ ಮುಖ್ಯವಾಗಿ ಸ್ವರ್ಗೀಯ ತಂದೆ ನನಗಿದ್ದಾನೆ. ನಾನು ಆತನೊಂದಿಗೆ ದಿನಾಲೂ ಮಾತಾಡಬಹುದು. ಇದು ನನಗೆ ತುಂಬ ಸಹಾಯಮಾಡುತ್ತದೆ.”

ಹೊಸ ಲೋಕ ಬರಲಿಕ್ಕಿದೆ ಮತ್ತು ಅದರಲ್ಲಿ ಪ್ರತಿಯೊಬ್ಬರೂ ಸುರಕ್ಷಿತ ಭಾವನೆಯನ್ನು ಪಡೆಯಲಿಕ್ಕಿದ್ದಾರೆ ಎಂದು ಬೈಬಲ್‌ ಹೇಳುತ್ತದೆ

ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಹ ಇದೆ. ಹೊಸ ಲೋಕ ಬರಲಿಕ್ಕಿದೆ ಮತ್ತು ಅದರಲ್ಲಿ ಪ್ರತಿಯೊಬ್ಬರೂ ಸುರಕ್ಷಿತ ಭಾವನೆಯನ್ನು ಪಡೆಯಲಿಕ್ಕಿದ್ದಾರೆ ಎಂದು ಬೈಬಲ್‌ ಹೇಳುತ್ತದೆ. ದೇವರ ಮಾತು ಭರವಸೆ ಕೊಡುವುದು: “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು.” (ಮೀಕ 4:4) ಆಗ, ನಮ್ಮೊಂದಿಗೆ ಯಾರೂ ಭಯಪಡಿಸುವ ರೀತಿಯಲ್ಲಿ ವರ್ತಿಸುವುದಿಲ್ಲ, ಹಾನಿನೂ ಮಾಡುವುದಿಲ್ಲ. ಎಂಥಾ ನೋವಿದ್ದರೂ ಅದನ್ನು “ಯಾರೂ ಜ್ಞಾಪಿಸಿಕೊಳ್ಳರು.” (ಯೆಶಾಯ 65:17, 25) ದೇವರು ಮತ್ತು ಆತನ ಮಗನಾದ ಯೇಸು ಕ್ರಿಸ್ತ ಇಬ್ಬರೂ ಸೇರಿ ‘ಧರ್ಮವನ್ನು’ [“ನೀತಿಯನ್ನು” NW] ಸ್ಥಾಪಿಸುವರು. ಇದರ ಫಲಿತಾಂಶ ‘ಶಾಂತಿ ನಿರ್ಭಯಗಳು ನಿತ್ಯವೂ ಇರುವವು.’—ಯೆಶಾಯ 32:17. ▪ (w16-E No.1)

^ ಪ್ಯಾರ. 5 ಎಲ್ಲ ಹೆಸರುಗಳನ್ನು ಬದಲಾಯಿಸಲಾಗಿವೆ.

^ ಪ್ಯಾರ. 21 ದೇವರ ಸಮೀಪಕ್ಕೆ ಬರಲು ಬಯಸುವವರಿಗೆ ಯೆಹೋವನ ಸಾಕ್ಷಿಗಳು ಉಚಿತವಾಗಿ ಬೈಬಲ್‌ ಅಧ್ಯಯನ ಮಾಡುತ್ತಾರೆ.