ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಳೆಗಾಗಿ ಚಿಮ್ಮಲಿ ಕೃತಜ್ಞತೆ

ಮಳೆಗಾಗಿ ಚಿಮ್ಮಲಿ ಕೃತಜ್ಞತೆ

ಮಳೆಗಾಗಿ ಚಿಮ್ಮಲಿ ಕೃತಜ್ಞತೆ

ಅಹಹಾ ಮಳೆ ಬಂತು ಮಳೆ! ಮಳೆಯಿಲ್ಲದಿರುತ್ತಿದ್ದರೆ ನಾವೇನು ಮಾಡೇವು! ಆದರೆ ಬಿರುಮಳೆ ಬಂದರೆ ಆಗ? ನೆರೆಹಾವಳಿಯೇ ಹಾವಳಿ! ಶೀತಲವಾದ ತೇವಭರಿತ ಹವಾಮಾನದಲ್ಲಿ ವಾಸಿಸುವ ಜನರಿಗಾದರೋ ಮಳೆಯೆಂದರೆ ನಡುಕ. (ಎಜ್ರ 10:⁠9) ಆದರೆ ಹೆಚ್ಚಿನ ಸಮಯ ಬಿಸಿಬಿಸಿಯಾದ ಶುಷ್ಕ ಹವೆಯನ್ನೇ ತಾಳಿಕೊಳ್ಳಬೇಕಾದ ಇತರ ಲಕ್ಷಾಂತರ ಮಂದಿಯ ವಿಷಯದಲ್ಲೇನು? ಕಟ್ಟಕಡೆಗೆ ಮಳೆ ಸುರಿದಾಗ, ‘ಅಹಾ . . . ಎಷ್ಟು ಹೊಯ್ಯುವಿಯೋ ಹೊಯ್ಯ್‌ ಮಳೆಯೇ’ ಎಂಬ ಚೈತನ್ಯಭರಿತ ಹರ್ಷೋದ್ಗಾರ!

ಅಪೊಸ್ತಲ ಪೌಲನು ಮಿಷನೆರಿ ಕೆಲಸವನ್ನು ನಡೆಸಿದ ಏಷ್ಯಾ ಮೈನರ್‌ನ ಒಳನಾಡಿನಂಥ ಬೈಬಲ್‌ ದೇಶಗಳಲ್ಲಿ ಹವೆಯು ಇದೇ ರೀತಿ ಇತ್ತು. ಪೌಲನು ಅಲ್ಲಿದ್ದಾಗ ಪುರಾತನ ಇಕೋನ್ಯದವರಿಗೆ ಅಂದದ್ದು: “ಆತನು [ದೇವರು] ತನ್ನ ವಿಷಯದಲ್ಲಿ ಸಾಕ್ಷಿಕೊಡದೆ ಇರಲಿಲ್ಲ; ನಿಮಗೆ ಆಕಾಶದಿಂದ ಮಳೆಯನ್ನೂ ಸುಗ್ಗೀಕಾಲಗಳನ್ನೂ ದಯಪಾಲಿಸಿ ಆಹಾರಕೊಟ್ಟು ನಿಮ್ಮ ಮನಸ್ಸುಗಳನ್ನು ಆನಂದದಿಂದ ತುಂಬಿಸಿ ಉಪಕಾರ ಮಾಡುತ್ತಾ ಬಂದವನು ಆತನೇ.” (ಅ. ಕೃತ್ಯಗಳು 14:17) ಪೌಲನು ಮಳೆಯ ಕುರಿತು ಮೊದಲು ತಿಳಿಸಿದ್ದನ್ನು ಗಮನಿಸಿ. ಯಾಕಂದರೆ ಮಳೆಯ ಹೊರತು ಯಾವ ಬೆಳೆಯೂ ಬೆಳೆಯಲಾರದು ಅಲ್ಲದೆ ‘ಸುಗ್ಗೀ ಕಾಲಗಳೂ’ ಇರಲಾರವು.

ಮಳೆಯ ಬಗ್ಗೆ ಬೈಬಲ್‌ ಬಹಳ ವಿಷಯಗಳನ್ನು ತಿಳಿಸುತ್ತದೆ. ಬೈಬಲಿನಲ್ಲಿ ಮಳೆಯನ್ನು ಸೂಚಿಸುವ ಹೀಬ್ರು ಮತ್ತು ಗ್ರೀಕ್‌ ಶಬ್ದಗಳು ನೂರಕ್ಕಿಂತಲೂ ಹೆಚ್ಚು ಸಾರಿ ಕಂಡುಬರುತ್ತವೆ. ಈ ಗಮನಾರ್ಹ ಉಡುಗೊರೆಯ ಕುರಿತು ನೀವು ಹೆಚ್ಚನ್ನು ತಿಳಿಯ ಬಯಸುತ್ತೀರೋ? ಅದೇ ಸಮಯದಲ್ಲಿ, ಬೈಬಲಿನ ವೈಜ್ಞಾನಿಕ ನಿಷ್ಕೃಷ್ಟತೆಯಲ್ಲಿ ನಿಮ್ಮ ನಂಬಿಕೆಯನ್ನು ಬಲಗೊಳಿಸಲು ಇಚ್ಛಿಸುವಿರೋ?

ಮಳೆಯ ಕುರಿತು ಬೈಬಲ್‌ ಹೇಳುವುದು

ಮಳೆಯಿರಬೇಕಾದರೆ ಯಾವುದು ಅತ್ಯಾವಶ್ಯಕ ಎಂಬ ಪ್ರಾಮುಖ್ಯ ವಿಷಯದ ಕಡೆಗೆ ಯೇಸು ಕ್ರಿಸ್ತನು ಗಮನಸೆಳೆದನು. ಆತನಂದದ್ದು: “ನಿಮ್ಮ ತಂದೆ . . . ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುತ್ತಾನೆ; ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ.” (ಮತ್ತಾಯ 5:45) ಯೇಸು ಮಳೆಯ ಕುರಿತು ತಿಳಿಸುವ ಮುಂಚೆ ಸೂರ್ಯನಿಗೆ ನಿರ್ದೇಶಿಸಿದ್ದನ್ನು ನೀವು ಗಮನಿಸಿದಿರೋ? ಅದು ಸೂಕ್ತವಾಗಿತ್ತು ಏಕೆಂದರೆ ಸೂರ್ಯನು ಸಸ್ಯಗಳ ಬೆಳೆವಣಿಗೆಗೆ ಬೇಕಾದ ಶಕ್ತಿಯನ್ನು ಒದಗಿಸುತ್ತಾನೆ ಮಾತ್ರವಲ್ಲ ಭೂಮಿಯ ಜಲಚಕ್ರಕ್ಕೂ ಕಾರಣನಾಗಿದ್ದಾನೆ. ಹೌದು, ಪ್ರತಿವರ್ಷ ಸುಮಾರು 4,00,000 ಕಿ.ಮೀ. ಸಮುದ್ರ ಜಲವನ್ನು ತಿಳಿನೀರಿನ ಹಬೆಯಾಗಿ ಮಾರ್ಪಡಿಸುವಂಥದ್ದು ಸೂರ್ಯನ ತಾಪವೇ. ಯೆಹೋವ ದೇವರು ಸೂರ್ಯನನ್ನು ಉಂಟುಮಾಡಿದ ಕಾರಣ ಆತನನ್ನು ಸೂಕ್ತವಾಗಿಯೇ ಮಳೆಯನ್ನು ಸುರಿಸುವಾತನೆಂದೂ ಕರೆಯಲಾಗಿದೆ.

ಬೈಬಲ್‌ ಜಲಚಕ್ರವನ್ನು ವರ್ಣಿಸುತ್ತಾ ಅನ್ನುವುದು: “ಆಹಾ, ದೇವರು . . . ನೀರಿನ ಹನಿಗಳನ್ನು ಎಳೆದುಕೊಳ್ಳುವನು, ಅವು ತಿಳಿಮಳೆಯಾಗಿ ಆತನ ಮಂಜಿನಿಂದ ಉದುರುವವು. ಮೋಡಗಳು ಅದನ್ನು ಸುರಿಸಿ ಬಹುಜನರ ಮೇಲೆ ಚಿಮಕಿಸುವವು.” (ಯೋಬ 36:​26-28) ವೈಜ್ಞಾನಿಕವಾಗಿ ನಿಷ್ಕೃಷ್ಟವಾದ ಈ ಮಾತುಗಳನ್ನು ಬರೆದಂದಿನಿಂದ ಸಾವಿರಾರು ವರ್ಷಗಳಲ್ಲಿ ಮನುಷ್ಯನಿಗೆ ಜಲಚಕ್ರವನ್ನು ಅರ್ಥಮಾಡಿಕೊಳ್ಳಲು ತುಂಬಾ ಸಮಯ ಸಿಕ್ಕಿತ್ತು. 2003ರ ಜಲವಿಜ್ಞಾನ ಮತ್ತು ತಂತ್ರಜ್ಞಾನ (ಇಂಗ್ಲಿಷ್‌) ಪಠ್ಯ ಪುಸ್ತಕವು ಹೇಳುವುದು, “ಮಳೆ ಹನಿಯು ರೂಪುಗೊಳ್ಳುವ ಪ್ರಕ್ರಿಯೆಯು ಪ್ರಸ್ತುತ ಖಚಿತವಾಗಿ ತಿಳಿದಿರುವುದಿಲ್ಲ.”

ಮೋಡಗಳಲ್ಲಿರುವ ಚಿಕ್ಕ ಚಿಕ್ಕ ಹನಿಗಳ ನಾಭಿಗಳಾಗಿ ಮಾರ್ಪಡುವ ಅತಿ ಸೂಕ್ಷ್ಮ ಕಣಗಳಿಂದ ಮಳೆಯ ಹನಿಗಳು ರೂಪಿಸಲ್ಪಡುತ್ತವೆ ಎಂದು ವಿಜ್ಞಾನಿಗಳಿಗೆ ತಿಳಿದಿದೆ. ಈ ಸೂಕ್ಷ್ಮ ಹನಿಗಳು ಒಂದು ಮಳೆಯ ತೊಟ್ಟಾಗಬೇಕಾದರೆ ಗಾತ್ರದಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚು ಪಾಲು ದೊಡ್ಡದಾಗಬೇಕು. ಇದೊಂದು ಜಟಿಲವಾದ ಪ್ರಕ್ರಿಯೆಯಾಗಿದ್ದು ಅದಕ್ಕೆ ಹಲವಾರು ತಾಸುಗಳು ಹಿಡಿಯುತ್ತದೆ. ಒಂದು ವೈಜ್ಞಾನಿಕ ಪಠ್ಯಪುಸ್ತಕವಾದ ಹೈಡ್ರಾಲಾಜಿ ಇನ್‌ ಪ್ರಾಕ್ಟಿಸ್‌ ಹೇಳುವುದು: “ಮೋಡದ ಸೂಕ್ಷ್ಮ ಹನಿಗಳು ಹೇಗೆ ಮಳೇ ಹನಿಗಳಾಗುತ್ತವೆ ಎಂಬದಕ್ಕೆ ಹಲವಾರು ನಿರೂಪಣೆಗಳಿವೆ. ಮತ್ತು ಹಲವಾರು ನಿಯೋಜಿತ ವಿಧಾನಗಳ ವಿವರದ ಬಗ್ಗೆ ಮಾಡಲಾದ ಪರಿಶೀಲನೆಗಳು ಸಂಶೋಧಕರ ಗಮನಸೆಳೆದಿವೆ.”

ಮಳೆಯನ್ನು ಉತ್ಪಾದಿಸುವ ಈ ಪ್ರಕ್ರಿಯೆಗಳ ನಿರ್ಮಾಣಿಕನು ತನ್ನ ಸೇವಕನಾದ ಯೋಬನಿಗೆ ದೈನ್ಯತೆಯ ಪಾಠ ಕಲಿಸುವ ಈ ಪ್ರಶ್ನೆಗಳನ್ನು ಕೇಳಿದನು: ‘ಮಳೆಗೆ ತಂದೆಯುಂಟೋ? ಮಂಜಿನ ಹನಿಗಳನ್ನು ಪಡೆದವನು ಯಾರು? ಯಾರು ಕಾರ್ಮುಗಿಲಿಗೆ ಜ್ಞಾನವನ್ನು ದಯಪಾಲಿಸಿದರು? . . . ಜ್ಞಾನದಿಂದ ಯಾರು ಮೇಘಗಳನ್ನು ಲೆಕ್ಕಿಸುವರು? ಆಕಾಶದಲ್ಲಿನ ಬುದ್ದಲಿಗಳನ್ನು ಮೊಗಚಿಹಾಕಿದವರು ಯಾರು?’ (ಯೋಬ 38:​28, 36, 37) ಈಗ ಸುಮಾರು 3,500 ವರ್ಷಗಳ ನಂತರವೂ ವಿಜ್ಞಾನಿಗಳು ಈ ಜಟಿಲ ಪ್ರಶ್ನೆಗಳ ಕುರಿತು ತಿಳಿಯಲು ಹೆಣಗಾಡುತ್ತಿದ್ದಾರೆ.

ಜಲಚಕ್ರದ ಕಾರ್ಯವಿಧಾನ

ನದಿ ನೀರಿನ ಮೂಲವು ಮಳೆ ನೀರಲ್ಲ ಸಮುದ್ರದ ನೀರು ಎಂದೂ ಅದು ಭೂಮಿಯ ಕೆಳಗಿನಿಂದ ಹೇಗೋ ಹರಿದು ಪರ್ವತಗಳ ಶಿಖರಕ್ಕೇರಿ ತಿಳಿನೀರಾಗಿ ಪರಿಣಮಿಸುತ್ತದೆ ಎಂದೂ ಗ್ರೀಕ್‌ ತತ್ವಜ್ಞಾನಿಗಳು ಕಲಿಸಿದರು. ಅದೇ ಅಭಿಪ್ರಾಯದಲ್ಲಿ ಸೊಲೊಮೋನನು ತನ್ನ ಮಾತುಗಳನ್ನು ಬರೆದಿದ್ದನೆಂದು ಒಂದು ಬೈಬಲ್‌ನ ವ್ಯಾಖ್ಯಾನ ಹೇಳುತ್ತದೆ. ಆದರೆ ಸೊಲೊಮೋನನ ಅಭಿಪ್ರಾಯ ಹಾಗಿರಲಿಲ್ಲ. ಅವನಂದದ್ದು: “ನದಿಗಳೆಲ್ಲಾ ಸಮುದ್ರಕ್ಕೆ ಹರಿದು ಹೋಗುವವು; ಆದರೂ ಸಮುದ್ರವು ತುಂಬುವದಿಲ್ಲ; ಅವು ಎಲ್ಲಿಗೆ ಹರಿದು ಹೋಗುತ್ತವೋ ಅಲ್ಲಿಗೇ ತಿರಿಗಿ ಹೋಗುವವು.” (ಪ್ರಸಂಗಿ 1:⁠7) ಸಮುದ್ರದ ನೀರು ಹೇಗಾದರೂ ಪರ್ವತಗಳ ಶಿಖರಕ್ಕೇರಿ ನದಿಗಳ ಮೂಲವಾಗಿ ಪರಿಣಮಿಸುವುದು ಎಂಬ ಅರ್ಥದಲ್ಲಿ ಸೊಲೊಮೋನನು ಇದನ್ನು ಹೇಳಿದನೋ? ಆ ಪ್ರಶ್ನೆಯನ್ನು ಉತ್ತರಿಸಲಿಕ್ಕಾಗಿ ಸೊಲೊಮೋನನ ದೇಶಸ್ಥರು ಜಲಚಕ್ರದ ಕುರಿತು ಏನನ್ನು ನಂಬಿದ್ದರು ಎಂದು ನಾವು ನೋಡೋಣ. ಅವರು ತಪ್ಪು ಕಲ್ಪನೆಗಳನ್ನು ಅಂಗೀಕರಿಸಿದ್ದರೋ?

ಸೊಲೊಮೋನನ ದಿನಗಳ ನಂತರ ನೂರು ವರ್ಷಗಳೊಳಗೆ ದೇವರ ಪ್ರವಾದಿಯಾದ ಎಲೀಯನು ಮಳೆಯನ್ನು ನಿರೀಕ್ಷಿಸಬಹುದಾದ ದಿಕ್ಕಿನ ಕುರಿತು ತನಗಿದ್ದ ಜ್ಞಾನವನ್ನು ಸೂಚಿಸಿದನು. ಅವನ ದಿನದಲ್ಲಿ ದೇಶವು ಮೂರಕ್ಕಿಂತಲೂ ಹೆಚ್ಚು ವರ್ಷ ಘೋರ ಅನಾವೃಷ್ಟಿಯನ್ನು ಅನುಭವಿಸಿತು. (ಯಾಕೋಬ 5:17) ಯೆಹೋವ ದೇವರು ತನ್ನ ಜನರ ಮೇಲೆ ಈ ವಿಪತ್ತನ್ನು ಯಾಕೆ ತಂದನು ಎಂದರೆ ಅವರು ಆತನನ್ನು ತಿರಸ್ಕರಿಸಿ ಕಾನಾನ್ಯರ ಮಳೆ ದೇವರಾದ ಬಾಳನನ್ನು ಪೂಜಿಸಿದ ಕಾರಣದಿಂದಲೇ. ಆದರೆ ಎಲೀಯನ ಮಾತು ಕೇಳಿ ಇಸ್ರಾಯೇಲ್ಯರು ಪಶ್ಚಾತ್ತಾಪಪಟ್ಟದ್ದರಿಂದ ಆತನು ಈಗ ಮಳೆಗಾಗಿ ಪ್ರಾರ್ಥಿಸಲು ಸಿದ್ಧನಾದನು. ಪ್ರಾರ್ಥಿಸುತ್ತಾ ಇರುವಾಗ “ಸಮುದ್ರದ ಕಡೆಗೆ ನೋಡು” ಎಂದು ಎಲೀಯನು ಅವನ ಸೇವಕನಿಗೆ ಹೇಳಿದನು. “ಅಂಗೈಯಷ್ಟು ಚಿಕ್ಕದಾದ ಮೋಡವು ಸಮುದ್ರದಿಂದ ಏರಿ ಬರುತ್ತಲಿದೆ” ಎಂದು ಸೇವಕನು ತಿಳಿಸಿದಾಗ ತನ್ನ ಪ್ರಾರ್ಥನೆಗೆ ಉತ್ತರ ಸಿಕ್ಕಿತು ಎಂದು ಎಲೀಯನಿಗೆ ತಿಳಿಯಿತು. ತುಸ ಹೊತ್ತಿನಲ್ಲಿಯೇ “ಆಕಾಶವು ಮೋಡಗಾಳಿಗಳಿಂದ ಕಪ್ಪಾಗಿ ದೊಡ್ಡ ಮಳೆಯು ಪ್ರಾರಂಭವಾಯಿತು.” (1 ಅರಸುಗಳು 18:​43-45) ಹೀಗೆ ಎಲೀಯನು ಜಲಚಕ್ರದ ಕುರಿತು ತನಗಿದ್ದ ಜ್ಞಾನವನ್ನು ತೋರಿಸಿದನು. ಸಾಗರದ ಮೇಲೆ ರೂಪುಗೊಳ್ಳುವ ಮಳೆಮೋಡಗಳು ಗಾಳಿಗಳಿಂದಾಗಿ ನೂಕಲ್ಪಡುವಾಗ ಅವು ಪೂರ್ವಾಭಿಮುಖವಾಗಿ ವಾಗ್ದತ್ತ ದೇಶವಾದ ಕಾನಾನಿನ ಕಡೆಗೆ ಚಲಿಸುವವು ಎಂದು ಅವನಿಗೆ ಗೊತ್ತಿತ್ತು. ಈ ದಿನಗಳ ವರೆಗೆ ಇದೇ ವಿಧಾನದಿಂದಲೇ ಆ ದೇಶದಲ್ಲಿ ಮಳೆ ಬೀಳುತ್ತದೆ.

ಎಲೀಯನು ಮಳೆಗಾಗಿ ಪ್ರಾರ್ಥಿಸಿದ ಸುಮಾರು ನೂರು ವರ್ಷಗಳ ನಂತರ ಬಡ ರೈತ ಆಮೋಸನು ಜಲಚಕ್ರದ ಮೂಲದ ಕುರಿತು ಒಂದು ಮಹತ್ವದ ವಿವರವನ್ನು ಒತ್ತಿಹೇಳಿದನು. ಬಡಜನರ ಮೇಲೆ ದಬ್ಬಾಳಿಕೆ ನಡೆಸಿದ್ದಕ್ಕಾಗಿ ಮತ್ತು ಸುಳ್ಳುದೇವರನ್ನು ಪೂಜಿಸಿದ್ದಕ್ಕಾಗಿ ಇಸ್ರಾಯೇಲ್ಯರ ವಿರುದ್ಧ ಪ್ರವಾದಿಸಲು ದೇವರು ಆಮೋಸನನ್ನು ಬಳಸಿದನು. ದೇವರ ಹಸ್ತದಿಂದ ನಾಶವಾಗಿ ಹೋಗುವ ಬದಲು ‘ಯೆಹೋವನ ಕಡೆಗೆ ತಿರುಗಿಕೊಂಡು’ ಬದುಕುವಂತೆ ಆಮೋಸನು ಅವರನ್ನು ಪ್ರೇರೇಪಿಸಿದನು. ಯೆಹೋವನೊಬ್ಬನನ್ನೇ ಆರಾಧಿಸಬೇಕು ಏಕೆಂದರೆ ಆತನು ನಿರ್ಮಾಣಿಕನೂ ‘ಸಾಗರದ ಜಲವನ್ನು ಬರಮಾಡಿಕೊಂಡು ಭೂಮಂಡಲದ ಮೇಲೆ ಸುರಿಯುವಾತನೂ’ ಆಗಿದ್ದಾನೆ ಎಂದು ಆಮೋಸನು ವಿವರಿಸಿದನು. (ಆಮೋಸ 5:​6, 8) ಜಲಚಕ್ರ ಮತ್ತು ಅದರ ಆಶ್ಚರ್ಯಕರ ಕಾರ್ಯವಿಧಾನವನ್ನು ಅನಂತರ ಆಮೋಸನು ಇನ್ನೊಮ್ಮೆ ಹೇಳಿದನು. (ಆಮೋಸ 9:⁠6) ಹೀಗೆ ಭೂಮಿಯ ಮೇಲೆ ಧರಧರನೆ ಬೀಳುವ ಮಳೆಯ ಮುಖ್ಯ ಮೂಲವು ಸಾಗರಗಳೇ ಎಂದು ಆಮೋಸನು ತೋರಿಸಿಕೊಟ್ಟನು.

ಜಲಚಕ್ರದ ನಿಜತ್ವವನ್ನು 1687ರಲ್ಲಿ ಎಡ್ಮಂಡ್‌ ಹ್ಯಾಲಿ ವೈಜ್ಞಾನಿಕವಾಗಿ ಸಾಬೀತುಪಡಿಸಿದರು. ಆದರೂ ಹ್ಯಾಲಿಯ ಪುರಾವೆಯನ್ನು ನಂಬಲು ಇತರರಿಗೆ ತುಂಬ ಸಮಯ ತಗಲಿತು. “ಭೂಮಿಯ ಒಳಗೆ ಪರಿಚಲನಾ ವ್ಯವಸ್ಥೆ ಇದೆ ಮತ್ತು ಸಾಗರದ ನೀರು ಪರ್ವತಗಳ ಶಿಖರಗಳಿಗೆ ರವಾನಿಸಲ್ಪಟ್ಟು ಅಲ್ಲಿ ಹೊರಹಾಕಲ್ಪಡುತ್ತದೆ ಎಂಬ ಭಾವನೆಯು 18ನೆಯ ಶತಮಾನಗಳ ವರೆಗೂ ಇತ್ತು” ಎಂಬದಾಗಿ ಎನ್‌ಸೈಕ್ಲಪೀಡಿಯ ಬ್ರಿಟಾನಿಕ ಆನ್‌ಲೈನ್‌ ಹೇಳುತ್ತದೆ. ಇಂದು ಜಲಚಕ್ರದ ಕಾರ್ಯವಿಧಾನದ ಕುರಿತ ಸತ್ಯತೆಯು ಎಲ್ಲರಿಗೂ ತಿಳಿದ ಸಂಗತಿ. ಅದೇ ಮೂಲವು ವಿವರಿಸುವುದು: “ಸಾಗರದ ನೀರು ಆವಿಯಾಗುತ್ತದೆ. ನಂತರ ವಾತಾವರಣವನ್ನು ಸೇರಿ ಸಾಂದ್ರೀಕರಣಗೊಳ್ಳುತ್ತದೆ ಮತ್ತು ಮಳೆ ಹನಿಯಾಗಿ ಭೂಮಿಗೆ ಬೀಳುತ್ತದೆ. ಕಟ್ಟಕಡೆಗೆ ನದಿಗಳಿಗೆ ಹರಿದು ಪುನಃ ಸಮುದ್ರವನ್ನು ಸೇರುತ್ತದೆ.” ಪ್ರಸಂಗಿ 1:7ರಲ್ಲಿ ಜಲಚಕ್ರದ ಕುರಿತಾಗಿ ದಾಖಲೆಯಾದ ಸೊಲೊಮೋನನ ಮಾತುಗಳು ಮಳೆಯು ಮತ್ತು ಮೋಡಗಳು ಒಳಗೂಡಿರುವ ಇದೇ ಪ್ರಕ್ರಿಯೆಗೆ ಸೂಚಿಸುತ್ತವೆ ಎಂದು ಸ್ಪಷ್ಟ.

ಇದು ನಿಮ್ಮನ್ನು ಹೇಗೆ ಪ್ರಚೋದಿಸಬೇಕು?

ಹಲವಾರು ಬೈಬಲ್‌ ಲೇಖಕರಿಂದ ಅಷ್ಟು ನಿಷ್ಕೃಷ್ಟವಾಗಿ ವರ್ಣಿಸಲ್ಪಟ್ಟ ಜಲಚಕ್ರದ ನಿಜತ್ವವು, ಬೈಬಲ್‌ ನಿಜವಾಗಿಯೂ ಮಾನವರ ನಿರ್ಮಾಣಿಕನಾದ ಯೆಹೋವನಿಂದ ಪ್ರೇರಿತ ಎಂಬುದಕ್ಕೆ ಇರುವ ಅನೇಕ ನಿದರ್ಶನಗಳಲ್ಲಿ ಒಂದು. (2 ತಿಮೊಥೆಯ 3:16) ಮಾನವನು ಭೂಮಿಯನ್ನು ಕೆಟ್ಟದಾಗಿ ನಿರ್ವಹಿಸಿರುವುದೇ ಹವಾಮಾನದ ವೈಪರೀತ್ಯಕ್ಕೆ ಕಾರಣ. ಇದರಿಂದಾಗಿ ಕೆಲವೆಡೆಗಳಲ್ಲಿ ತೀವ್ರ ಅನಾವೃಷ್ಟಿಯೂ ನೆರೆಗಳೂ ಉಂಟಾಗಿವೆ. ಆದರೆ ಜಲಚಕ್ರದ ನಿರ್ಮಾಣಿಕನಾದ ಯೆಹೋವನು ಹಸ್ತಕ್ಷೇಪ ಮಾಡಿ ‘ಲೋಕನಾಶಕರನ್ನು ನಾಶಮಾಡುವನೆಂದು’ ಬಹಳ ಹಿಂದೆಯೇ ವಾಗ್ದಾನಿಸಿದ್ದಾನೆ.​—⁠ಪ್ರಕಟನೆ 11:⁠18.

ಮಳೆಯು ದೇವರು ಕೊಟ್ಟ ಅನೇಕ ಉಡುಗೊರೆಗಳಲ್ಲಿ ಒಂದು. ಅದಕ್ಕಾಗಿ ನಾವು ಗಣ್ಯತೆ ತೋರಿಸುವುದು ಹೇಗೆ? ದೇವರ ವಾಕ್ಯವಾದ ಬೈಬಲನ್ನು ಅಧ್ಯಯನ ಮಾಡುವ ಮೂಲಕ ಮತ್ತು ನೀವದರಿಂದ ಕಲಿತ ವಿಷಯವನ್ನು ಅನ್ವಯಿಸಿಕೊಳ್ಳುವ ಮೂಲಕವೇ. ಆಗ ದೇವರ ಎಲ್ಲಾ ಕೊಡುಗೆಗಳನ್ನು ಸದಾಕಾಲ ಆನಂದಿಸಶಕ್ತರಾಗುವ ಹೊಸ ಲೋಕದೊಳಗೆ ಪಾರಾಗುವ ನಿರೀಕ್ಷೆಯು ನಿಮ್ಮದಾಗಬಲ್ಲದು. ಏಕೆಂದರೆ ಮಳೆಯ ಮೂಲದಾತನಾದ ಯೆಹೋವ ದೇವರಿಂದಲೇ “ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳೂ” ಹೊರಟುಬರುತ್ತವೆ.​—⁠ಯಾಕೋಬ 1:17. (w09 1/1)

[ಪುಟ 26, 27ರಲ್ಲಿರುವ ರೇಖಾಕೃತಿ/ಚಿತ್ರ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಘನೀಕರಣ

ಆವಿಯ ಸಾಂದ್ರೀಕರಣ ಸಸ್ಯಗಳ ಬಾಷ್ಪ ವಿಸರ್ಜನೆ ಬಾಷ್ಪೀಕರಣ

ಹೆಚ್ಚುವರಿ ನೀರು

ಅಂತರ್ಜಲ

[ಪುಟ 26ರಲ್ಲಿರುವ ಚಿತ್ರಗಳು]

ಎಲೀಯನು ಪ್ರಾರ್ಥಿಸಿದಾಗ ಅವನ ಸೇವಕನು “ಸಮುದ್ರದ ಕಡೆಗೆ” ನೋಡಿದನು