ಯೋಬ 36:1-33

 • ದೇವರ ಮಹಿಮೆ ಬಗ್ಗೆ ಎಲೀಹು ಹೊಗಳ್ತಾನೆ (1-33)

  • ವಿಧೇಯರಾದ್ರೆ ಸುಖಸಮೃದ್ಧಿ, ದೇವರನ್ನ ಬಿಟ್ಟುಬಿಟ್ರೆ ತಿರಸ್ಕಾರ (11-13)

  • ‘ದೇವರ ತರ ಕಲಿಸುವವರು ಬೇರೆ ಯಾರೂ ಇಲ್ಲ’ (22)

  • ಯೋಬ ದೇವರನ್ನ ಹೊಗಳಬೇಕು (24)

  • “ದೇವರು ಎಷ್ಟು ದೊಡ್ಡವನು ಅಂತ ನಮಗೆ ಊಹೆ ಮಾಡಕ್ಕಾಗಲ್ಲ” (26)

  • ಮಳೆ ಮಿಂಚು ದೇವರ ನಿಯಂತ್ರಣದಲ್ಲಿದೆ (27-33)

36  ಎಲೀಹು ಮತ್ತೆ ಹೀಗಂದ:   “ನನಗಿನ್ನೂ ಮಾತಾಡೋಕೆ ಇದೆ, ದಯವಿಟ್ಟು ತಾಳ್ಮೆಯಿಂದ ಕೇಳು,ದೇವರ ಪರವಾಗಿ ಇನ್ನೂ ಕೆಲವು ವಿಷ್ಯಗಳನ್ನ ಹೇಳಬೇಕು.   ನನಗೆ ಗೊತ್ತಿರೋದನ್ನ ವಿವರಿಸ್ತೀನಿ,ನನ್ನನ್ನ ಸೃಷ್ಟಿ ಮಾಡಿದವನು ಎಷ್ಟು ನೀತಿವಂತ ಅಂತ ಹೇಳ್ತೀನಿ.+   ನನ್ನ ಮಾತು ನಂಬು, ನಾನು ಸುಳ್ಳು ಹೇಳ್ತಿಲ್ಲ,ಪರಿಪೂರ್ಣ ಜ್ಞಾನ ಇರೋ ದೇವ್ರಿಂದ+ ನಾನು ಕಲಿತ ವಿಷ್ಯಗಳನ್ನ ಹೇಳ್ತೀನಿ.   ದೇವರು ಬಲಶಾಲಿ,+ ಆತನು ಯಾರನ್ನೂ ಕೈಬಿಡಲ್ಲ,ಆತನ ತಿಳುವಳಿಕೆ ಅಪಾರ.   ಆತನು ಕೆಟ್ಟವರ ಪ್ರಾಣ ಕಾಪಾಡಲ್ಲ,+ಆದ್ರೆ ಕಷ್ಟದಲ್ಲಿ ಇರುವವರಿಗೆ ನ್ಯಾಯ ಕೊಡ್ತಾನೆ.+   ಆತನು ನೀತಿವಂತರನ್ನ ಯಾವಾಗ್ಲೂ ನೋಡ್ತಾನೆ,+ಅವ್ರನ್ನ ರಾಜರ ಜೊತೆ* ಸಿಂಹಾಸನದಲ್ಲಿ ಕೂರಿಸ್ತಾನೆ,+ಸದಾ ದೊಡ್ಡ ಸ್ಥಾನದಲ್ಲಿ ಇಡ್ತಾನೆ.   ಆದ್ರೆ ಅವ್ರಿಗೆ ಕೋಳ ಹಾಕಿದ್ರೆ,ಕಷ್ಟಗಳೆಂಬ ಹಗ್ಗಗಳಿಂದ ಕಟ್ಟಿದ್ರೆ   ದೇವರು ಅವರು ಮಾಡಿದ ತಪ್ಪನ್ನ ಅವ್ರಿಗೆ ತಿಳಿಸ್ತಾನೆ,ಅವರ ಪಾಪಕ್ಕೆ ಅವರ ಅಹಂಕಾರನೇ ಕಾರಣ ಅಂತ ಹೇಳ್ತಾನೆ. 10  ಅವ್ರಿಗೆ ಬುದ್ಧಿ ಹೇಳಿ ತಿದ್ತಾನೆ,ತಪ್ಪು ಮಾಡೋದನ್ನ ಬಿಟ್ಟುಬಿಡಿ ಅಂತ ಎಚ್ಚರಿಸ್ತಾನೆ.+ 11  ದೇವರ ಮಾತು ಕೇಳಿ ಆತನ ಸೇವೆ ಮಾಡಿದ್ರೆಅವರು ಸುಖಸಮೃದ್ಧಿಯಿಂದ ಬಾಳ್ತಾರೆ,ಅವರು ಜೀವನಪೂರ್ತಿ ಸಂತೋಷ ನೆಮ್ಮದಿಯಿಂದ ಇರ್ತಾರೆ.+ 12  ಅವರು ಮಾತು ಕೇಳದಿದ್ರೆ ಕತ್ತಿಯಿಂದ ಸಾಯ್ತಾರೆ,+ಜ್ಞಾನ ಪಡ್ಕೊಳ್ಳದೆನೇ ಸತ್ತು ಹೋಗ್ತಾರೆ. 13  ಮನಸ್ಸಲ್ಲಿ ದೇವ್ರನ್ನ ಬಿಟ್ಟುಬಿಟ್ಟವರು* ಒಳಗೊಳಗೆ ಕೋಪ ಇಟ್ಕೊಳ್ತಾರೆ. ಆತನು ಅವ್ರಿಗೆ ಶಿಕ್ಷೆ ಕೊಟ್ಟಾಗ್ಲೂ ಸಹಾಯಕ್ಕಾಗಿ ಬೇಡ್ಕೊಳ್ಳಲಿಲ್ಲ. 14  ಅವರು ನೀಚ ಗಂಡಸರ+ ಜೊತೆ* ಜೀವನ ಕಳೀತಾ*ಯೌವನದಲ್ಲೇ ಸಾಯ್ತಾರೆ.+ 15  ಆದ್ರೆ ಕಷ್ಟದಲ್ಲಿ ಇರೋರನ್ನ ದೇವರು ಕಾಪಾಡ್ತಾನೆ,ಬೇರೆಯವ್ರಿಂದ ಕಿರುಕುಳ ಅನುಭವಿಸುವವರ ಕಿವಿಯಲ್ಲಿ ದೇವರು ಮಾತಾಡ್ತಾನೆ. 16  ಆತನು ನಿನ್ನನ್ನ ಕಷ್ಟದ ಬಿಗಿಮುಷ್ಟಿಯಿಂದ ಬಿಡಿಸಿ+ವಿಶಾಲವಾದ ಸ್ಥಳಕ್ಕೆ ಕರ್ಕೊಂಡು ಹೋಗ್ತಾನೆ, ಯಾರೂ ನಿನ್ನನ್ನ ತಡೆಯಲ್ಲ+ನಿನ್ನ ಮೇಜಿನ ಮೇಲೆ ಭರ್ಜರಿ ಊಟ ಸಿದ್ಧಮಾಡಿ ಸಮಾಧಾನ ಮಾಡ್ತಾನೆ.+ 17  ದೇವರು ಕೆಟ್ಟವ್ರಿಗೆ ಶಿಕ್ಷೆ ಕೊಡ್ತೀನಿ ಅನ್ನೋ ತೀರ್ಪು ಕೊಟ್ಟಾಗ,+ನ್ಯಾಯ ಸಿಕ್ತು ಅಂತ ನಿನಗೆ ನೆಮ್ಮದಿ ಆಗುತ್ತೆ. 18  ಆದ್ರೆ ಹುಷಾರಾಗಿರು, ನಿನ್ನ ಕೋಪ ದ್ವೇಷಕ್ಕೆ ತಿರುಗಬಾರದು,*+ದೊಡ್ಡ ಲಂಚ ನಿನ್ನನ್ನ ದಾರಿ ತಪ್ಪಿಸಬಾರದು. 19  ಹಾಗೇನಾದ್ರೂ ಆದ್ರೆ ನೀನೆಷ್ಟೇ ಸಹಾಯ ಕೇಳಿದ್ರೂನೀನೆಷ್ಟೇ ಪ್ರಯತ್ನಪಟ್ರೂ ಕಷ್ಟದಿಂದ ಹೊರಗೆ ಬರೋಕೆ ನಿನಗೆ ಆಗಲ್ಲ.+ 20  ಯಾವಾಗ ರಾತ್ರಿ ಆಗುತ್ತೋ ಅಂತ ಕಾಯಬೇಡ,ಯಾಕಂದ್ರೆ ರಾತ್ರಿಯಲ್ಲೇ ಜನ್ರು ನಾಶ ಆಗ್ತಾರೆ. 21  ಎಚ್ಚರ! ಕೆಟ್ಟದು ಮಾಡೋಕೆ ಹೋಗಬೇಡ,ಕಷ್ಟದಿಂದ ತಪ್ಪಿಸ್ಕೊಳ್ಳೋಕೆ ಕೆಟ್ಟದು ಮಾಡಬೇಡ.+ 22  ನೋಡು! ದೇವರು ತುಂಬ ಶಕ್ತಿಶಾಲಿ,ಆತನ ತರ ಕಲಿಸುವವರು ಬೇರೆ ಯಾರೂ ಇಲ್ಲ. 23  ಯಾವ ದಾರಿಯಲ್ಲಿ ಹೋಗಬೇಕಂತ* ದೇವ್ರಿಗೆ ಯಾರಾದ್ರೂ ಹೇಳಕ್ಕಾಗುತ್ತಾ?+ ‘ನೀನು ಮಾಡಿದ್ದು ತಪ್ಪು’ ಅಂತ ಆತನಿಗೆ ಹೇಳೋಕೆ ಯಾರಿಗಾದ್ರೂ ಆಗುತ್ತಾ?+ 24  ಆತನ ಕೆಲಸಗಳನ್ನ ಬೇರೆಯವ್ರ ಮುಂದೆ ಹೊಗಳೋಕೆ ಮರೀಬೇಡ,+ಅವುಗಳನ್ನ ಜನ್ರು ಹಾಡಿ ಹೊಗಳಿದ್ದಾರೆ.+ 25  ಮನುಷ್ಯರೆಲ್ಲ ಆತನ ಕೆಲಸಗಳನ್ನ ನೋಡಿದ್ದಾರೆ,ಒಂದಲ್ಲ ಒಂದಿನ ಸಾಯೋ ಮನುಷ್ಯ ದೇವರ ಕೆಲಸಗಳನ್ನ ದೂರದಿಂದ ನೋಡ್ತಾನಷ್ಟೇ. 26  ದೇವರು ಎಷ್ಟು ದೊಡ್ಡವನು ಅಂತ ನಮಗೆ ಊಹೆ ಮಾಡಕ್ಕಾಗಲ್ಲ,+ಆತನ ವಯಸ್ಸೆಷ್ಟು ಅಂತ ಕಂಡುಹಿಡಿಯೋಕೆ ನಮ್ಮಿಂದ ಆಗಲ್ಲ.+ 27  ಆತನು ನೀರಿನ ಹನಿಗಳನ್ನ ಮೇಲಕ್ಕೆ ಎಳ್ಕೊಳ್ತಾನೆ,+ಆಮೇಲೆ ಅದು ಮಳೆಯಾಗುತ್ತೆ, ಮಂಜು ಆಗುತ್ತೆ, 28  ಮೋಡಗಳಾಗಿ ಆಮೇಲೆ ಭೂಮಿಗೆ ನೀರು ಸುರಿಯುತ್ತೆ,+ಎಲ್ಲ ಮನುಷ್ಯರ ಮೇಲೆ ಮಳೆ ನೀರು ಬೀಳುತ್ತೆ. 29  ಆಕಾಶದಲ್ಲಿ ಹರಡಿರೋ ಮೋಡಗಳ ಬಗ್ಗೆ ಯಾರಿಗಾದ್ರೂ ಅರ್ಥ ಮಾಡ್ಕೊಳ್ಳೋಕೆ ಆಗುತ್ತಾ? ಆತನ ಡೇರೆ ಒಳಗಿಂದ ಬರೋ ಗುಡುಗಿನ ಬಗ್ಗೆ ಯಾರಿಗಾದ್ರೂ ತಿಳ್ಕೊಳ್ಳೋಕೆ ಆಗುತ್ತಾ?+ 30  ಮೋಡಗಳ ಮೇಲೆ ಆತನು ಹೇಗೆ ಮಿಂಚು ಹೊಡಿಸ್ತಾನೆ,+ಸಮುದ್ರದ ಆಳಗಳನ್ನ ಹೇಗೆ ಮುಚ್ಚುತ್ತಾನೆ ಅಂತ ಯೋಚ್ನೆ ಮಾಡು. 31  ಇದೆಲ್ಲದ್ರಿಂದ ಆತನು ಜನ್ರನ್ನ ಚೆನ್ನಾಗಿ ನೋಡ್ಕೊಳ್ತಾನೆ,*ಅವ್ರಿಗೆ ಹೇರಳವಾಗಿ ಆಹಾರ ಕೊಡ್ತಾನೆ.+ 32  ಆತನು ತನ್ನ ಕೈಗಳಿಂದ ಮಿಂಚನ್ನ ಹಿಡಿತಾನೆ,ಆಮೇಲೆ ಅದನ್ನ ಗುರಿಯಿಟ್ಟು ಬಿಡ್ತಾನೆ.+ 33  ಗುಡುಗಿನ ಆರ್ಭಟ ಆತನ ಬಗ್ಗೆ ಹೇಳುತ್ತೆ,ಪ್ರಾಣಿಗಳಿಗೂ ಆತನು ಬರೋದು* ಗೊತ್ತಾಗುತ್ತೆ.

ಪಾದಟಿಪ್ಪಣಿ

ಬಹುಶಃ, “ಆತನು ರಾಜರನ್ನ.”
ಅಥವಾ “ಧರ್ಮಭ್ರಷ್ಟರು.”
ಅಕ್ಷ. “ದೇವಸ್ಥಾನದಲ್ಲಿ ಬೇರೆ ಗಂಡಸ್ರ ಜೊತೆ ಅನೈತಿಕತೆ ಮಾಡ್ತಿದ್ದ ಗಂಡಸ್ರು.”
ಬಹುಶಃ, “ಜೀವ ಕಳ್ಕೊಳ್ತಾರೆ.”
ಅಥವಾ “ತಿರಸ್ಕಾರದಿಂದ ಚಪ್ಪಾಳೆ ತಟ್ಟಬಾರದು.”
ಬಹುಶಃ, “ಆತನ ದಾರಿ ತಪ್ಪು ಅಂತ ಹೇಳೋಕೆ; ಕಾರಣ ಕೇಳೋಕೆ.”
ಬಹುಶಃ, “ಜನ್ರ ಪರ ವಾದಿಸ್ತಾನೆ.”
ಬಹುಶಃ, “ಏನು ಬರ್ತಿದೆ ಅಂತ.”