ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೊಡುವುದರಿಂದ ಸಿಗುವ ಸಂತೋಷದ ಬಗ್ಗೆ ನಿಮಗೆ ಗೊತ್ತಿದೆಯೋ?

ಕೊಡುವುದರಿಂದ ಸಿಗುವ ಸಂತೋಷದ ಬಗ್ಗೆ ನಿಮಗೆ ಗೊತ್ತಿದೆಯೋ?

ಕೊಡುವುದರಿಂದ ಸಿಗುವ ಸಂತೋಷದ ಬಗ್ಗೆ ನಿಮಗೆ ಗೊತ್ತಿದೆಯೋ?

ನಂಬಿಗಸ್ತ ಕ್ರೈಸ್ತ ಸಹೋದರಿಯೊಬ್ಬಳು ಕ್ರಿಯಾಶೀಲ ಕ್ರೈಸ್ತ ಸೇವೆಯಲ್ಲಿ ಸುಮಾರು 50 ವರ್ಷಗಳನ್ನು ಕಳೆದಿದ್ದಳು. ವೃದ್ಧಾಪ್ಯದ ಕಾರಣದಿಂದಾಗಿ ಅವಳು ಶಾರೀರಿಕವಾಗಿ ತುಂಬ ದುರ್ಬಲಳಾಗಿದ್ದಳಾದರೂ, ಹೊಸದಾಗಿ ನಿರ್ಮಿಸಲ್ಪಟ್ಟಿದ್ದ ರಾಜ್ಯ ಸಭಾಗೃಹವನ್ನು ನೋಡಿಬರಲು ನಿರ್ಧರಿಸಿದಳು. ಒಬ್ಬ ಕ್ರೈಸ್ತ ಸಹೋದರನ ಕೈಯನ್ನು ಹಿಡಿದುಕೊಂಡು ಅವಳು ಸಭಾಗೃಹವನ್ನು ಪ್ರವೇಶಿಸಿದಳು ಮತ್ತು ನಿಧಾನವಾಗಿ ಆದರೆ ನೇರವಾಗಿ ತನ್ನ ಉದ್ದಿಷ್ಟ ಸ್ಥಾನದ ಕಡೆಗೆ ಅಂದರೆ ಕಾಣಿಕೆ ಪೆಟ್ಟಿಗೆಯ ಬಳಿಗೆ ನಡೆದಳು. ಅವಳು ಈ ಉದ್ದೇಶಕ್ಕಾಗಿಯೇ ಉಳಿತಾಯಮಾಡಿದ್ದ ಸಾಕಷ್ಟು ಮೊತ್ತದ ಹಣವನ್ನು ಕಾಣಿಕೆ ಪೆಟ್ಟಿಗೆಯಲ್ಲಿ ಹಾಕಿದಳು. ಸಭಾಗೃಹದ ನಿರ್ಮಾಣಕಾರ್ಯದಲ್ಲಿ ಶಾರೀರಿಕವಾಗಿ ನೆರವು ನೀಡಲು ಅವಳು ಅಸಮರ್ಥಳಾಗಿದ್ದರೂ ಈ ರೀತಿಯಲ್ಲಿ ಸಹಾಯಮಾಡುವ ಬಯಕೆ ಅವಳಲ್ಲಿತ್ತು.

ಈ ಕ್ರೈಸ್ತ ಸ್ತ್ರೀಯು ಇನ್ನೊಬ್ಬ ನಂಬಿಗಸ್ತ ಸ್ತ್ರೀಯನ್ನು ನಿಮ್ಮ ನೆನಪಿಗೆ ತರಬಹುದು. ಅವಳು, ಯಾರು ದೇವಾಲಯದ ಬೊಕ್ಕಸದಲ್ಲಿ ಎರಡು ಕಾಸುಗಳನ್ನು ಹಾಕುತ್ತಿರುವುದನ್ನು ಯೇಸು ನೋಡಿದನೋ ಆ ‘ಬಡ ವಿಧವೆಯೇ.’ ಅವಳ ಸನ್ನಿವೇಶವು ಹೇಗಿತ್ತು ಎಂಬುದು ನಮಗೆ ತಿಳಿಸಲ್ಪಟ್ಟಿಲ್ಲವಾದರೂ, ಆ ಕಾಲದಲ್ಲಿ ಗಂಡನಿಲ್ಲದಿರುವುದು ಒಬ್ಬ ಸ್ತ್ರೀಗೆ ಗಂಭೀರವಾದ ಆರ್ಥಿಕ ಸಂಕಷ್ಟವನ್ನು ತಂದೊಡ್ಡಸಾಧ್ಯವಿತ್ತು. ಖಂಡಿತವಾಗಿಯೂ ಯೇಸುವಿಗೆ ಅವಳ ವಿಷಯದಲ್ಲಿ ಸಹಾನುಭೂತಿಯುಂಟಾಯಿತು, ಏಕೆಂದರೆ ಅವಳ ಪಾಡನ್ನು ಅವನು ಸಂಪೂರ್ಣವಾಗಿ ಅರಿತವನಾಗಿದ್ದನು. ತನ್ನ ಶಿಷ್ಯರ ಮುಂದೆ ಅವಳನ್ನು ಒಂದು ಮಾದರಿಯಾಗಿ ಉಪಯೋಗಿಸುತ್ತಾ, ಅವಳ ಚಿಕ್ಕ ಕಾಣಿಕೆಯು ‘ಅವಳಿಗಿದ್ದದ್ದೆಲ್ಲವನ್ನು, ಅವಳ ಜೀವನವನ್ನೇ’ ಪ್ರತಿನಿಧಿಸಿತು ಎಂಬುದನ್ನು ತಿಳಿಯಪಡಿಸಿದನು.​—⁠ಮಾರ್ಕ 12:​41-44.

ಅಗತ್ಯದಲ್ಲಿದ್ದಂಥ ಈ ಬಡ ವಿಧವೆಯು ಈ ತ್ಯಾಗವನ್ನು ಏಕೆ ಮಾಡಿದಳು? ಯೆರೂಸಲೇಮಿನಲ್ಲಿದ್ದ ದೇವಾಲಯದಲ್ಲಿ ಯಾರ ಆರಾಧನೆಯು ಕೇಂದ್ರೀಕೃತವಾಗಿತ್ತೋ ಆ ಯೆಹೋವ ದೇವರಲ್ಲಿ ಅವಳಿಗೆ ತುಂಬ ಭಕ್ತಿಯಿತ್ತು ಎಂಬುದಂತೂ ಸುಸ್ಪಷ್ಟ. ಅವಳು ಹೆಚ್ಚೇನನ್ನೂ ಮಾಡಸಾಧ್ಯವಿರಲಿಲ್ಲವಾದರೂ ಪವಿತ್ರ ಸೇವೆಯನ್ನು ವರ್ಧಿಸುವ ಬಯಕೆ ಅವಳಿಗಿತ್ತು. ಅಷ್ಟುಮಾತ್ರವಲ್ಲ, ತನ್ನಿಂದಾದಷ್ಟನ್ನು ಕಾಣಿಕೆಯಾಗಿ ಕೊಡುವುದರಲ್ಲಿ ಅವಳು ನಿಜವಾದ ಆನಂದವನ್ನು ಕಂಡುಕೊಂಡಿರಬೇಕು.

ಯೆಹೋವನ ಕೆಲಸಕ್ಕೆ ಬೆಂಬಲ ನೀಡುವುದು

ಭೌತಿಕ ಹಾಗೂ ಹಣಕಾಸಿನ ಕಾಣಿಕೆಗಳನ್ನು ನೀಡುವುದು ಯಾವಾಗಲೂ ಶುದ್ಧಾರಾಧನೆಯ ಅವಿಭಾಜ್ಯ ಅಂಗವಾಗಿದೆ, ಮತ್ತು ಅತ್ಯಧಿಕ ಆನಂದದ ಮೂಲವೂ ಆಗಿದೆ. (1 ಪೂರ್ವಕಾಲವೃತ್ತಾಂತ 29:⁠9) ಪುರಾತನ ಇಸ್ರಾಯೇಲಿನಲ್ಲಿ ಕಾಣಿಕೆಗಳು ಕೇವಲ ದೇವಾಲಯವನ್ನು ಸುಂದರಗೊಳಿಸಲಿಕ್ಕಾಗಿ ಮಾತ್ರವಲ್ಲ, ಪ್ರತಿ ದಿನ ಯೆಹೋವನ ಆರಾಧನೆಯ ಎಲ್ಲಾ ಚಟುವಟಿಕೆಗಳನ್ನು ಪೂರೈಸಿಕೊಂಡು ಹೋಗಲಿಕ್ಕಾಗಿಯೂ ಉಪಯೋಗಿಸಲ್ಪಡುತ್ತಿದ್ದವು. ದೇವಾಲಯದ ಸೇವಾಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದ ಲೇವಿಯರಿಗೆ ಬೆಂಬಲ ನೀಡಲಿಕ್ಕಾಗಿ ಇಸ್ರಾಯೇಲ್ಯರು ತಮ್ಮ ಉತ್ಪನ್ನದ ಹತ್ತನೆಯ ಒಂದು ಪಾಲನ್ನು ಕಾಣಿಕೆಯಾಗಿ ನೀಡುವಂತೆ ಧರ್ಮಶಾಸ್ತ್ರವು ಅಗತ್ಯಪಡಿಸಿತ್ತು. ಆದರೆ ತಾವು ಪಡೆದುಕೊಂಡ ವಸ್ತುಗಳ ಹತ್ತನೆಯ ಒಂದು ಪಾಲನ್ನು ಲೇವಿಯರು ಸಹ ಯೆಹೋವನಿಗೆ ಕಾಣಿಕೆಯಾಗಿ ನೀಡಬೇಕಾಗಿತ್ತು.​—⁠ಅರಣ್ಯಕಾಂಡ 18:​21-29.

ಧರ್ಮಶಾಸ್ತ್ರದೊಡಂಬಡಿಕೆಯ ಆವಶ್ಯಕತೆಗಳಿಂದ ಕ್ರೈಸ್ತರು ವಿಮೋಚಿಸಲ್ಪಟ್ಟರಾದರೂ, ಸತ್ಯಾರಾಧನೆಯನ್ನು ಬೆಂಬಲಿಸುವುದರಲ್ಲಿ ದೇವರ ಸೇವಕರು ಭೌತಿಕವಾಗಿ ಕಾಣಿಕೆಯನ್ನು ಕೊಡುವ ಮೂಲತತ್ತ್ವವು ಬದಲಾಗದೆ ಉಳಿಯಿತು. (ಗಲಾತ್ಯ 5:⁠1) ಇದಕ್ಕೆ ಕೂಡಿಸಿ, ಪ್ರಥಮ ಶತಮಾನದ ಕ್ರೈಸ್ತರು ಅಗತ್ಯದಲ್ಲಿರುವ ತಮ್ಮ ಸಹೋದರರಿಗೆ ಸಹಾಯಮಾಡಲಿಕ್ಕಾಗಿ ಕಾಣಿಕೆ ನೀಡುವುದನ್ನು ಸಂತೋಷದ ಸಂಗತಿಯಾಗಿ ಪರಿಗಣಿಸಿದರು. (ಅ. ಕೃತ್ಯಗಳು 2:45, 46) ಅಪೊಸ್ತಲ ಪೌಲನು ಕ್ರೈಸ್ತರಿಗೆ, ದೇವರು ಉದಾರಭಾವದಿಂದ ಹೇಗೆ ಎಲ್ಲವನ್ನೂ ಅವರಿಗೆ ಹೇರಳವಾಗಿ ದಯಪಾಲಿಸುತ್ತಾನೋ ಹಾಗೆಯೇ ಅವರು ಇತರರಿಗೆ ಉದಾರತೆಯನ್ನು ತೋರಿಸಬೇಕೆಂದು ನೆನಪು ಹುಟ್ಟಿಸಿದನು. ಅವನು ಬರೆದುದು: “ಇಹಲೋಕ ವಿಷಯದಲ್ಲಿ ಐಶ್ವರ್ಯವುಳ್ಳವರು ಅಹಂಕಾರಿಗಳಾಗಿರದೆ ಅಸ್ಥಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡದೆ ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲವನ್ನೂ ಹೇರಳವಾಗಿ ದಯಪಾಲಿಸುವ ದೇವರ ಮೇಲೆ ನಿರೀಕ್ಷೆಯನ್ನಿಡಬೇಕೆಂತಲೂ ವಾಸ್ತವವಾದ ಜೀವವನ್ನು ಹೊಂದುವದಕ್ಕೋಸ್ಕರ ಅವರು ಒಳ್ಳೇದನ್ನು ಮಾಡುವವರೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ ದಾನಧರ್ಮಗಳನ್ನು ಮಾಡುವವರೂ ಪರೋಪಕಾರಮಾಡುವವರೂ ಆಗಿದ್ದು ಮುಂದಿನ ಕಾಲಕ್ಕೆ ಒಳ್ಳೇ ಅಸ್ತಿವಾರವಾಗುವಂಥವುಗಳನ್ನು ತಮಗೆ ಕೂಡಿಸಿಟ್ಟುಕೊಳ್ಳಬೇಕೆಂತಲೂ ಅವರಿಗೆ ಆಜ್ಞಾಪಿಸು.” (1 ತಿಮೊಥೆಯ 6:17-19; 2 ಕೊರಿಂಥ 9:11) ವಾಸ್ತವದಲ್ಲಿ, ತನ್ನ ವೈಯಕ್ತಿಕ ಅನುಭವದಿಂದ ಪೌಲನು “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ” ಎಂಬ ಯೇಸುವಿನ ಮಾತುಗಳನ್ನು ದೃಢಪಡಿಸಶಕ್ತನಾಗಿದ್ದನು.​—⁠ಅ. ಕೃತ್ಯಗಳು 20:⁠35.

ಇಂದು ಕ್ರೈಸ್ತ ಕೊಡುವಿಕೆ

ಇಂದು ಯೆಹೋವನ ಸೇವಕರು ತಮ್ಮ ಭೌತಿಕ ಸಂಪನ್ಮೂಲಗಳನ್ನು ಪರಸ್ಪರರ ಸಹಾಯಕ್ಕಾಗಿ ಮತ್ತು ದೇವರ ಕೆಲಸದ ಬೆಂಬಲಕ್ಕಾಗಿ ಉಪಯೋಗಿಸುವುದನ್ನು ಮುಂದುವರಿಸುತ್ತಿದ್ದಾರೆ. ಕೊಂಚವನ್ನೇ ಹೊಂದಿರುವವರು ಸಹ ತಮ್ಮಿಂದಾದಷ್ಟನ್ನು ಕಾಣಿಕೆಯಾಗಿ ನೀಡುತ್ತಾರೆ. ಕಾಣಿಕೆಯಾಗಿ ನೀಡಲ್ಪಡುವ ಹಣಕಾಸನ್ನು ಸಾಧ್ಯವಾದಷ್ಟು ಅತ್ಯುತ್ತಮವಾದ ರೀತಿಯಲ್ಲಿ ಉಪಯೋಗಿಸಲು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಯೆಹೋವನ ಮುಂದೆ ಜವಾಬ್ದಾರಿಯನ್ನು ಹೊತ್ತಿದೆ. (ಮತ್ತಾಯ 24:45) ಈ ಹಣಕಾಸನ್ನು, ಬ್ರಾಂಚ್‌ ಆಫೀಸುಗಳ ಕಾರ್ಯನಿರ್ವಹಣೆಗಾಗಿ, ಬೈಬಲ್‌ಗಳು ಮತ್ತು ಬೈಬಲ್‌ ಸಾಹಿತ್ಯಗಳನ್ನು ಭಾಷಾಂತರಿಸಿ ಪ್ರಕಟಿಸಲಿಕ್ಕಾಗಿ, ದೊಡ್ಡ ಕ್ರೈಸ್ತ ಒಟ್ಟುಗೂಡುವಿಕೆಗಳನ್ನು ಏರ್ಪಡಿಸಲಿಕ್ಕಾಗಿ, ಸಂಚರಣ ಮೇಲ್ವಿಚಾರಕರು ಹಾಗೂ ಮಿಷನೆರಿಗಳನ್ನು ತರಬೇತುಗೊಳಿಸಿ ಕಳುಹಿಸಲಿಕ್ಕಾಗಿ, ವಿಪತ್ತಿನ ಸಮಯದಲ್ಲಿ ಪರಿಹಾರವನ್ನು ಒದಗಿಸಲಿಕ್ಕಾಗಿ, ಹಾಗೂ ಇನ್ನೂ ಅನೇಕ ಅತ್ಯಾವಶ್ಯಕ ಉದ್ದೇಶಗಳಿಗಾಗಿ ಉಪಯೋಗಿಸಲಾಗುತ್ತದೆ. ಇಂಥ ಉದ್ದೇಶಗಳಲ್ಲಿ ಒಂದರ ಮೇಲೆ, ಅಂದರೆ ಆರಾಧನಾ ಸ್ಥಳಗಳನ್ನು ಕಟ್ಟಲಿಕ್ಕಾಗಿ ಹಣಕಾಸಿನ ಸಹಾಯಮಾಡುವ ವಿಷಯದ ಮೇಲೆ ನಾವು ಗಮನವನ್ನು ಕೇಂದ್ರೀಕರಿಸೋಣ.

ಆಧ್ಯಾತ್ಮಿಕ ಶಿಕ್ಷಣದಿಂದ ಮತ್ತು ಹಿತಕರವಾದ ಸಹವಾಸದಿಂದ ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ ಯೆಹೋವನ ಸಾಕ್ಷಿಗಳು ತಮ್ಮ ರಾಜ್ಯ ಸಭಾಗೃಹಗಳಲ್ಲಿ ವಾರಕ್ಕೆ ಅನೇಕಾವರ್ತಿ ಕೂಡಿಬರುತ್ತಾರೆ. ಆದರೂ ಅನೇಕ ದೇಶಗಳಲ್ಲಿ, ಸ್ಥಳಿಕ ಸಾಕ್ಷಿಗಳು ರಾಜ್ಯ ಸಭಾಗೃಹಗಳ ನಿರ್ಮಾಣಕಾರ್ಯಕ್ಕೆ ಹಣಕಾಸನ್ನು ಒಟ್ಟುಗೂಡಿಸುವುದನ್ನು ಆರ್ಥಿಕ ಪರಿಸ್ಥಿತಿಗಳು ಅಸಾಧ್ಯವಾಗಿ ಮಾಡುತ್ತವೆ; ಅದಕ್ಕಾಗಿ ಅವರಿಗೆ ಇತರರಿಂದ ಹಣಕಾಸಿನ ಸಹಾಯವನ್ನು ಪಡೆಯುವ ಅಗತ್ಯವಿದೆ. ಆದುದರಿಂದಲೇ, 1999ರಲ್ಲಿ ಯೆಹೋವನ ಸಾಕ್ಷಿಗಳು, ಸಂಪದ್ಭರಿತ ದೇಶಗಳಿಂದ ಬಂದ ಹಣಕಾಸನ್ನು, ಬಡ ದೇಶಗಳಲ್ಲಿ ರಾಜ್ಯ ಸಭಾಗೃಹಗಳನ್ನು ಕಟ್ಟಲಿಕ್ಕಾಗಿ ಉಪಯೋಗಿಸುವ ಒಂದು ಕಾರ್ಯಕ್ರಮವನ್ನು ಆರಂಭಿಸಿದರು. ಅಷ್ಟುಮಾತ್ರವಲ್ಲ, ಸಾವಿರಾರು ಮಂದಿ ಸ್ವಯಂಸೇವಕರು, ಅನೇಕವೇಳೆ ಇಂಥ ಬಡ ದೇಶಗಳ ಗ್ರಾಮೀಣ ಕ್ಷೇತ್ರಗಳಲ್ಲಿ ಕೆಲಸಮಾಡುವ ಮೂಲಕ ತಮ್ಮ ಸಮಯ ಹಾಗೂ ಕೌಶಲಗಳನ್ನು ದಾನವಾಗಿ ನೀಡಿದ್ದಾರೆ. ನಿರ್ಮಾಣಕಾರ್ಯದ ಸಮಯದಲ್ಲಿ, ಸ್ಥಳಿಕ ಸಾಕ್ಷಿಗಳು ಕಟ್ಟಡವನ್ನು ಕಟ್ಟುವ ಹಾಗೂ ದುರಸ್ತಿಯನ್ನು ಮಾಡುವ ಕೌಶಲಗಳನ್ನು ಕಲಿಯುತ್ತಾರೆ, ಮತ್ತು ರಾಜ್ಯ ಸಭಾಗೃಹ ನಿಧಿಯು ಅಗತ್ಯವಿರುವ ಸಾಧನಗಳು ಮತ್ತು ವಸ್ತುಗಳನ್ನು ಖರೀದಿಸುವುದನ್ನು ಸಾಧ್ಯಗೊಳಿಸುತ್ತದೆ. ಈಗ ಈ ಹೊಸ ಸಭಾಗೃಹಗಳನ್ನು ಉಪಯೋಗಿಸುತ್ತಿರುವ ಸಾಕ್ಷಿಗಳು, ತಮ್ಮ ಜೊತೆ ವಿಶ್ವಾಸಿಗಳ ಸಮಯ ಹಾಗೂ ಹಣದ ಕೊಡುಗೆಗಾಗಿ ತುಂಬ ಆಭಾರಿಗಳಾಗಿದ್ದಾರೆ. ಸ್ಥಳಿಕ ಸಾಕ್ಷಿಗಳು ಸಹ ಪ್ರತಿ ತಿಂಗಳು ಹೊಸ ರಾಜ್ಯ ಸಭಾಗೃಹದ ದುರಸ್ತಿಗಾಗಿ ಮತ್ತು ನಿರ್ಮಾಣಕಾರ್ಯದ ವೆಚ್ಚಗಳನ್ನು ನಿರ್ವಹಿಸಲಿಕ್ಕಾಗಿ ಕಾಣಿಕೆ ನೀಡುತ್ತಾರೆ.

ಸ್ಥಳಿಕ ಕಾರ್ಯವಿಧಾನಗಳು ಹಾಗೂ ವಸ್ತುಗಳನ್ನು ಉಪಯೋಗಿಸಿ ರಾಜ್ಯ ಸಭಾಗೃಹಗಳನ್ನು ನಿರ್ಮಿಸಲಾಗುತ್ತದೆ. ಈ ಸಭಾಗೃಹಗಳು ತುಂಬ ಆಡಂಭರವಾಗಿ ಇಲ್ಲದಿರುವುದಾದರೂ ಆಕರ್ಷಣೀಯವಾಗಿಯೂ ಪ್ರಾಯೋಗಿಕವಾಗಿಯೂ ಅನುಕೂಲಕರವಾಗಿಯೂ ಇರುತ್ತವೆ. ಇಸವಿ 1999ರಲ್ಲಿ ನಿರ್ಮಾಣ ಯೋಜನೆಯು ಆರಂಭಗೊಂಡಾಗ, ಮಿತವಾದ ಸಂಪನ್ಮೂಲಗಳಿದ್ದ ಸುಮಾರು 40 ದೇಶಗಳು ಮಾತ್ರ ಇದರಲ್ಲಿ ಒಳಗೂಡಿದ್ದವು. ಅಂದಿನಿಂದ, ನಿರ್ಮಾಣ ಯೋಜನೆಯು ಇಂಥ 116 ದೇಶಗಳನ್ನು ಆವರಿಸುವಷ್ಟರ ಮಟ್ಟಿಗೆ ವಿಸ್ತರಿಸಲ್ಪಟ್ಟಿದ್ದು, ಲೋಕದಲ್ಲಿರುವ ಯೆಹೋವನ ಸಾಕ್ಷಿಗಳ ಅರ್ಧಕ್ಕಿಂತಲೂ ಹೆಚ್ಚು ಸಭೆಗಳನ್ನು ಒಳಗೂಡಿದೆ. ಕಳೆದ ಐದು ವರ್ಷಗಳಲ್ಲಿ, ಈ ಏರ್ಪಾಡಿನ ಕೆಳಗೆ 9,000ಕ್ಕಿಂತಲೂ ಹೆಚ್ಚು ರಾಜ್ಯ ಸಭಾಗೃಹಗಳು, ಅಂದರೆ ದಿನವೊಂದಕ್ಕೆ ಸರಾಸರಿ 5ಕ್ಕಿಂತಲೂ ಹೆಚ್ಚು ಹೊಸ ಸಭಾಗೃಹಗಳು ಕಟ್ಟಲ್ಪಟ್ಟಿವೆ! ಈಗಲೂ ಈ 116 ದೇಶಗಳಲ್ಲಿ, 14,500 ಹೊಸ ರಾಜ್ಯ ಸಭಾಗೃಹಗಳ ಅಗತ್ಯವಿದೆ. ಯೆಹೋವನ ಆಶೀರ್ವಾದ ಮತ್ತು ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ ಸಿದ್ಧಮನಸ್ಸು ಹಾಗೂ ಉದಾರಭಾವದ ಮೂಲಕ, ಈ ಆವಶ್ಯಕತೆಯನ್ನು ಪೂರೈಸಲು ಸಾಕಷ್ಟು ಹಣಕಾಸು ಇರುವುದೆಂದು ನಿರೀಕ್ಷಿಸಲಾಗಿದೆ.​—⁠ಕೀರ್ತನೆ 127:⁠1.

ರಾಜ್ಯ ಸಭಾಗೃಹಗಳು ಅಭಿವೃದ್ಧಿಗೆ ಸಹಾಯಕವಾಗಿವೆ

ಈ ಭಾರೀ ಪ್ರಯತ್ನವು ಸ್ಥಳಿಕ ಸಾಕ್ಷಿಗಳ ಮೇಲೆ ಮತ್ತು ರಾಜ್ಯ ಸಾರುವಿಕೆಯ ಕೆಲಸದ ಮೇಲೆ ಯಾವ ಪರಿಣಾಮವನ್ನು ಬೀರಿದೆ? ಅನೇಕ ಸ್ಥಳಗಳಲ್ಲಿ, ಒಂದು ರಾಜ್ಯ ಸಭಾಗೃಹವು ಕಟ್ಟಲ್ಪಟ್ಟ ಬಳಿಕ ಕೂಟಗಳ ಹಾಜರಿಯಲ್ಲಿ ಸಾಕಷ್ಟು ಏರಿಕೆಯಿದೆ. ಈ ವಿಷಯದ ಕುರಿತು ಬುರುಂಡಿಯಿಂದ ಬಂದ ಈ ವರದಿಯಲ್ಲಿ ಒಂದು ಉದಾಹರಣೆಯಿದೆ: “ರಾಜ್ಯ ಸಭಾಗೃಹವು ಕಟ್ಟಿಮುಗಿಸಲ್ಪಟ್ಟ ಸ್ವಲ್ಪ ಸಮಯದಲ್ಲೇ ಅದು ಜನರಿಂದ ತುಂಬಿಹೋಗುತ್ತದೆ. ಉದಾಹರಣೆಗೆ, ಕೂಟಗಳಲ್ಲಿ ಸರಾಸರಿ 100 ಮಂದಿ ಹಾಜರಿರುತ್ತಿದ್ದ ಒಂದು ಸಭೆಗಾಗಿ ರಾಜ್ಯ ಸಭಾಗೃಹವೊಂದು ನಿರ್ಮಿಸಲ್ಪಟ್ಟಿತು. ಅವರ ಹೊಸ ರಾಜ್ಯ ಸಭಾಗೃಹವು 150 ಮಂದಿ ಕುಳಿತುಕೊಳ್ಳಬಹುದಾದಷ್ಟು ದೊಡ್ಡದಿತ್ತು. ಇದು ಕಟ್ಟಿಮುಗಿಸಲ್ಪಟ್ಟಾಗ 250 ಮಂದಿ ಕೂಟಗಳಿಗೆ ಹಾಜರಾಗುತ್ತಿದ್ದರು.”

ಇಂಥ ಹೆಚ್ಚಳವು ಏಕಾಗುತ್ತದೆ? ಒಂದು ಕಾರಣವೇನೆಂದರೆ, ಒಂದು ವಿಧ್ಯುಕ್ತ ಕೂಟದ ಸ್ಥಳವಿಲ್ಲದ ಕಾರಣ ಒಂದು ಮರದ ಕೆಳಗೊ ಅಥವಾ ಹೊಲದಲ್ಲೊ ಕೂಡಿಬರಬೇಕಾಗಿರುವ ರಾಜ್ಯ ಪ್ರಚಾರಕರ ಗುಂಪುಗಳು ಕೆಲವೊಮ್ಮೆ ಸಂಶಯಾಸ್ಪದವಾಗಿ ಪರಿಗಣಿಸಲ್ಪಡುತ್ತವೆ. ಒಂದು ದೇಶದಲ್ಲಿ, ಕುಲಸಂಬಂಧಿತ ಹಿಂಸಾಚಾರಕ್ಕೂ ಇಂಥ ಚಿಕ್ಕ ಧಾರ್ಮಿಕ ಗುಂಪುಗಳಿಗೂ ಸಂಬಂಧವಿದೆಯೆಂದು ಪರಿಗಣಿಸಲಾಗುತ್ತದೆ ಮತ್ತು ಎಲ್ಲಾ ಧಾರ್ಮಿಕ ಕೂಟಗಳು ಒಂದು ಆರಾಧನಾ ಗೃಹದ ಒಳಗೇ ನಡೆಸಲ್ಪಡುವಂತೆ ಕಾನೂನು ಅಗತ್ಯಪಡಿಸುತ್ತದೆ.

ಯೆಹೋವನ ಸಾಕ್ಷಿಗಳು ತಮ್ಮ ಸ್ವಂತ ಸಭಾಗೃಹಗಳನ್ನು ಹೊಂದಿರುವುದು, ಅವರು ಒಬ್ಬ ನಿರ್ದಿಷ್ಟ ಪಾಲಕನ ಶಿಷ್ಯರಾಗಿಲ್ಲ ಎಂಬುದನ್ನು ಸಮುದಾಯಕ್ಕೆ ರುಜುಪಡಿಸಲು ಸಹಾಯಮಾಡುತ್ತದೆ. ಯೆಹೋವನ ಸಾಕ್ಷಿಗಳ ಸಿಂಬಾಬ್ವೆ ಬ್ರಾಂಚ್‌ ಆಫೀಸ್‌ ಹೀಗೆ ಬರೆಯುತ್ತದೆ: “ಗತ ಸಮಯಗಳಲ್ಲಿ, ಈ ಕ್ಷೇತ್ರದಲ್ಲಿರುವ ಸಹೋದರರು ಖಾಸಗಿ ಮನೆಗಳಲ್ಲಿ ಕೂಡಿಬರುತ್ತಿದ್ದರು, ಮತ್ತು ಅವರು ಎಲ್ಲಿ ಕೂಡಿಬರುತ್ತಿದ್ದರೋ ಆ ಮನೆಯ ಯಜಮಾನನ ಹೆಸರಿನಿಂದ ಸ್ಥಳಿಕ ಜನರು ಆ ಸಭೆಯನ್ನು ಗುರುತಿಸುತ್ತಿದ್ದರು. ಅವರು ಸಹೋದರರನ್ನು ‘ಶ್ರೀಮಾನ್‌ . . . ರವರ ಚರ್ಚಿಗೆ ಸೇರಿದವರು’ ಎಂದು ಸಂಬೋಧಿಸುತ್ತಿದ್ದರು. ಆದರೆ ಈಗ ಪ್ರತಿಯೊಂದು ಸಭಾಗೃಹದಲ್ಲಿ ‘ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹ’ ಎಂದು ಸ್ಪಷ್ಟವಾಗಿ ಗುರುತಿಸಲ್ಪಟ್ಟಿರುವ ಸೂಚನಾಫಲಕಗಳನ್ನು ಜನರು ನೋಡುತ್ತಿರುವುದರಿಂದ ಇದೆಲ್ಲವೂ ಬದಲಾಗಿದೆ.”

ಹರ್ಷಚಿತ್ತರಾಗಿ ಕೊಡುವವರು

“ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು” ಎಂದು ಅಪೊಸ್ತಲ ಪೌಲನು ಬರೆದನು. (2 ಕೊರಿಂಥ 9:⁠7) ದೊಡ್ಡ ಕಾಣಿಕೆಗಳು ತುಂಬ ಸಹಾಯಕರವಾಗಿವೆ ಎಂಬುದಂತೂ ಖಂಡಿತ. ಆದರೆ ಯೆಹೋವನ ಸಾಕ್ಷಿಗಳ ಕೆಲಸಕ್ಕೆ ಕಾಣಿಕೆಯಾಗಿ ಕೊಡಲ್ಪಡುವ ಹಣಕಾಸಿನ ಹೆಚ್ಚಿನ ಭಾಗವು ರಾಜ್ಯ ಸಭಾಗೃಹದ ಕಾಣಿಕೆ ಪೆಟ್ಟಿಗೆಗಳಿಂದ ಬರುವಂಥದ್ದಾಗಿದೆ. ಕಾಣಿಕೆಗಳು ದೊಡ್ಡದಾಗಿರಲಿ ಚಿಕ್ಕದಾಗಿರಲಿ ಅವೆಲ್ಲವೂ ಪ್ರಾಮುಖ್ಯವಾಗಿವೆ ಮತ್ತು ಅವು ಎಂದಿಗೂ ಅಲಕ್ಷಿಸಲ್ಪಡುವುದಿಲ್ಲ. ಬಡ ವಿಧವೆಯು ತನ್ನ ಎರಡು ಕಾಸುಗಳನ್ನು ಕಾಣಿಕೆಯಾಗಿ ನೀಡುವುದನ್ನು ಯೇಸು ಗಮನಿಸಿದನು ಎಂಬುದನ್ನು ಜ್ಞಾಪಿಸಿಕೊಳ್ಳಿರಿ. ದೇವದೂತರು ಮತ್ತು ಯೆಹೋವನು ಸಹ ಅವಳನ್ನು ನೋಡಿದರು. ನಮಗೆ ಆ ವಿಧವೆಯ ಹೆಸರು ಸಹ ಗೊತ್ತಿಲ್ಲ, ಆದರೂ ಅವಳ ನಿಸ್ವಾರ್ಥ ಕೃತ್ಯವು ಸರ್ವಕಾಲಕ್ಕೂ ಬೈಬಲಿನಲ್ಲಿ ದಾಖಲಿಸಲ್ಪಡುವಂತೆ ಯೆಹೋವನು ಖಾತ್ರಿಪಡಿಸಿಕೊಂಡನು.

ರಾಜ್ಯ ಸಭಾಗೃಹದ ನಿರ್ಮಾಣದ ಜೊತೆಗೆ, ನಮ್ಮ ಕಾಣಿಕೆಗಳು ಅತ್ಯಾವಶ್ಯಕವಾದ ರಾಜ್ಯ ಕೆಲಸದ ಎಲ್ಲಾ ಅಂಶಗಳನ್ನೂ ಬೆಂಬಲಿಸುತ್ತವೆ. ಈ ರೀತಿಯಲ್ಲಿ ಸಹಕರಿಸುವುದು, ನಾವು ಉಲ್ಲಾಸಪಡಲು ಮತ್ತು ಅತ್ಯಧಿಕ ರೀತಿಯಲ್ಲಿ “ದೇವರಿಗೆ ಕೃತಜ್ಞತಾಸ್ತುತಿಯನ್ನು” ಸಲ್ಲಿಸಲು ಕಾರಣವನ್ನು ಕೊಡುತ್ತದೆ. (2 ಕೊರಿಂಥ 9:12) ಬೆನಿನ್‌ನಲ್ಲಿರುವ ನಮ್ಮ ಕ್ರೈಸ್ತ ಸಹೋದರರು ವರದಿಸುವುದು: “ಅಂತಾರಾಷ್ಟ್ರೀಯ ಸಹೋದರರ ಬಳಗದಿಂದ ಪಡೆದುಕೊಂಡ ಹಣಕಾಸಿನ ಸಹಾಯಕ್ಕಾಗಿ ಪ್ರತಿ ದಿನ ಯೆಹೋವನಿಗೆ ಕೃತಜ್ಞತೆಯ ಅನೇಕಾನೇಕ ಪ್ರಾರ್ಥನೆಗಳು ಸಲ್ಲಿಸಲ್ಪಡುತ್ತವೆ.” ಅದೇ ಸಮಯದಲ್ಲಿ, ರಾಜ್ಯದ ಕೆಲಸವನ್ನು ಹಣಕಾಸಿನ ಸಹಾಯದಿಂದ ಬೆಂಬಲಿಸುವುದರಲ್ಲಿ ಪಾಲನ್ನು ಹೊಂದಿರುವ ನಾವೆಲ್ಲರೂ ಕ್ರೈಸ್ತ ಕೊಡುವಿಕೆಯಿಂದ ಬರುವಂಥ ಸಂತೋಷವನ್ನು ಅನುಭವಿಸುವಂತಾಗಲಿ!

[ಪುಟ 22, 23ರಲ್ಲಿರುವ ಚೌಕ/ಚಿತ್ರ]

ಕೆಲವರು ಕೊಡಲು ಆಯ್ಕೆಮಾಡುವ ವಿಧಗಳು

ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆಗಳು

ಅನೇಕರು, “ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆಗಳು​—⁠ಮತ್ತಾಯ 24:14” ಎಂದು ಗುರುತುಮಾಡಲ್ಪಟ್ಟ ಕಾಣಿಕೆ ಪೆಟ್ಟಿಗೆಗಳಲ್ಲಿ ಹಾಕಲು ಬಯಸುವ ಹಣದ ಮೊತ್ತವನ್ನು ಬದಿಗಿರಿಸುತ್ತಾರೆ ಅಥವಾ ಬಜೆಟ್‌ ಮಾಡುತ್ತಾರೆ.

ಸಭೆಗಳು ಈ ಹಣವನ್ನು ಪ್ರತಿ ತಿಂಗಳು, ತಮ್ಮ ದೇಶದ ಕೆಲಸವನ್ನು ನೋಡಿಕೊಳ್ಳುತ್ತಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿಗೆ ಕಳುಹಿಸುತ್ತವೆ. ಹಣದ ಸ್ವಯಂಪ್ರೇರಿತ ದಾನಗಳನ್ನು ನೇರವಾಗಿ ಈ ಆಫೀಸುಗಳಿಗೇ ಕಳುಹಿಸಬಹುದು. ಬ್ರಾಂಚ್‌ ಆಫೀಸುಗಳ ವಿಳಾಸಗಳು ಈ ಪತ್ರಿಕೆಯ 2ನೇ ಪುಟದಲ್ಲಿ ಕೊಡಲ್ಪಟ್ಟಿವೆ. ಚೆಕ್‌ಗಳನ್ನು “ವಾಚ್‌ ಟವರ್‌”ಗೆ ಸಂದಾಯವಾಗಬೇಕೆಂದು ಗುರುತಿಸಬೇಕು. ಆಭರಣಗಳು ಅಥವಾ ಇತರ ಬೆಲೆಬಾಳುವ ವಸ್ತುಗಳನ್ನೂ ದಾನವಾಗಿ ಕೊಡಬಹುದು. ಇಂತಹ ಕಾಣಿಕೆಗಳೊಂದಿಗೆ, ಇದು ನೇರವಾಗಿ ಕೊಟ್ಟಿರುವ ಕೊಡುಗೆ ಎಂದು ಹೇಳುವ ಸಂಕ್ಷಿಪ್ತ ಪತ್ರವು ಜೊತೆಗೂಡಿರಬೇಕು.

ಷರತ್ತುಬದ್ಧ ದಾನದ ಏರ್ಪಾಡು

ವಾಚ್‌ ಟವರ್‌ನ ಪ್ರಯೋಜನಕ್ಕಾಗಿ ಹಣವನ್ನು ಟ್ರಸ್ಟಿನಲ್ಲಿ ಇಡಬಹುದು. ಆದರೆ, ಹಣವು ವಿನಂತಿಸಿಕೊಳ್ಳಲ್ಪಡುವಾಗ ಅದನ್ನು ಹಿಂದಿರುಗಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಮೇಲೆ ತಿಳಿಸಲ್ಪಟ್ಟಿರುವ ವಿಳಾಸದಲ್ಲಿ ಸೆಕ್ರಿಟರಿಯ ಮತ್ತು ಖಜಾಂಚಿಯ ಆಫೀಸನ್ನು ಸಂಪರ್ಕಿಸಿರಿ.

ಚ್ಯಾರಿಟಬಲ್‌ ಯೋಜನೆ

ನೇರವಾದ ಹಣದ ಕೊಡುಗೆಗಳಿಗೆ ಕೂಡಿಸಿ, ಲೋಕವ್ಯಾಪಕ ರಾಜ್ಯ ಸೇವೆಯ ಪ್ರಯೋಜನಕ್ಕಾಗಿ ಸಹಾಯಮಾಡಬಹುದಾದ ಬೇರೆ ಬೇರೆ ವಿಧಾನಗಳಿವೆ. ಇವು ಕೆಳಗಿನವುಗಳನ್ನು ಒಳಗೂಡುತ್ತವೆ:

ವಿಮೆ: ವಾಚ್‌ ಟವರ್‌ ಸೊಸೈಟಿ ಅನ್ನು ಒಂದು ಜೀವ ವಿಮಾ ಪಾಲಿಸಿ ಇಲ್ಲವೆ ನಿವೃತ್ತಿ ವೇತನ/ಪೆನ್‌ಶನ್‌ ಯೋಜನೆಯ ಫಲಾನುಭವಿಯಾಗಿ ಹೆಸರಿಸಬಹುದು.

ಬ್ಯಾಂಕ್‌ ಖಾತೆಗಳು: ಬ್ಯಾಂಕ್‌ ಖಾತೆಗಳು, ಠೇವಣಾತಿ ಸರ್ಟಿಫಿಕೇಟುಗಳು, ಅಥವಾ ವೈಯಕ್ತಿಕ ನಿವೃತ್ತಿ ಖಾತೆಗಳನ್ನು ಸ್ಥಳಿಕ ಬ್ಯಾಂಕ್‌ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿ ವಾಚ್‌ ಟವರ್‌ ಸೊಸೈಟಿ ಅನ್ನು ಟ್ರಸ್ಟ್‌ ಆಗಿ ಇಟ್ಟುಕೊಳ್ಳಬಹುದು ಅಥವಾ ದಾನಿಯು ಮರಣಹೊಂದುವಲ್ಲಿ ಸೊಸೈಟಿಗೆ ಅವು ಸಲ್ಲುವಂತೆ ಏರ್ಪಡಿಸಬಹುದು.

ಸ್ಟಾಕ್‌ಗಳು ಮತ್ತು ಬಾಂಡ್‌ಗಳು: ಸ್ಟಾಕ್‌ಗಳು ಹಾಗೂ ಬಾಂಡ್‌ಗಳನ್ನು ನೇರವಾದ ಕೊಡುಗೆಯಾಗಿ ವಾಚ್‌ ಟವರ್‌ ಸೊಸೈಟಿಗೆ ದಾನಮಾಡಬಹುದು.

ಸ್ಥಿರಾಸ್ತಿ: ವಿಕ್ರಯಯೋಗ್ಯ ಸ್ಥಿರಾಸ್ತಿಯನ್ನು ನೇರವಾದ ಒಂದು ಕೊಡುಗೆಯಾಗಿ ದಾನಮಾಡಬಹುದು, ಇಲ್ಲವೆ ವಾಸದ ಮನೆಯಿರುವ ಆಸ್ತಿಯಾಗಿರುವಲ್ಲಿ ದಾನಿಯು ಅವನ ಅಥವಾ ಅವಳ ಜೀವಮಾನಕಾಲದಲ್ಲಿ ಅದರಲ್ಲಿ ಜೀವಿಸುತ್ತಾ ಇರಬಲ್ಲ ಏರ್ಪಾಡಿನೊಂದಿಗೆ ಜೀವಾವಧಿ ಅನುಭೋಗಕ್ಕೆ ಕಾದಿರಿಸಿದ ಆಸ್ತಿಯಾಗಿ ದಾನಮಾಡಬಹುದು. ಯಾವುದೇ ಸ್ಥಿರಾಸ್ತಿಯನ್ನು ಸೊಸೈಟಿಗೆ ದಾನಕೊಡುವ ಕರಾರುಪತ್ರವನ್ನು ತಯಾರಿಸುವ ಮೊದಲು ನಿಮ್ಮ ದೇಶದಲ್ಲಿರುವ ಬ್ರಾಂಚ್‌ ಆಫೀಸನ್ನು ಸಂಪರ್ಕಿಸಿರಿ.

ವರ್ಷಾಶನ ದಾನ: ವರ್ಷಾಶನ ದಾನದ ಏರ್ಪಾಡು ಅಂದರೆ ಒಬ್ಬನು ತನ್ನಲ್ಲಿರುವ ಹಣವನ್ನು ಅಥವಾ ಬಂಡವಾಳ ಪತ್ರಗಳನ್ನು ವಾಚ್‌ ಟವರ್‌ ಸೊಸೈಟಿಗೆ ವರ್ಗಾಯಿಸುತ್ತಾನೆ. ಇದಕ್ಕೆ ಪ್ರತಿಯಾಗಿ, ದಾನಿಯು ಅಥವಾ ಅವನಿಂದ ನೇಮಿಸಲ್ಪಟ್ಟವನು ತನ್ನ ಜೀವಮಾನದಾದ್ಯಂತ ಪ್ರತಿ ವರುಷ ನಿರ್ದಿಷ್ಟ ವಾರ್ಷಿಕ ವೇತನವನ್ನು ಪಡೆಯುತ್ತಾನೆ. ಅಷ್ಟುಮಾತ್ರವಲ್ಲದೆ, ವರ್ಷಾಶನ ದಾನವು ಸ್ಥಾಪಿತವಾದ ವರುಷ ದಾನಿಗೆ ವರಮಾನ ತೆರಿಗೆಯಲ್ಲಿ ಕಡಿತ ಸಿಗುತ್ತದೆ.

ಉಯಿಲುಗಳು ಮತ್ತು ಟ್ರಸ್ಟ್‌ಗಳು: ಆಸ್ತಿ ಅಥವಾ ಹಣವನ್ನು ಕಾನೂನುಬದ್ಧವಾಗಿ ನಿರ್ವಹಿಸಿದ ಉಯಿಲಿನ ಮೂಲಕ, ವಾಚ್‌ ಟವರ್‌ ಸೊಸೈಟಿಗೆ ಬಿಟ್ಟುಹೋಗಬಹುದು. ಅಥವಾ ವಾಚ್‌ ಟವರ್‌ ಸೊಸೈಟಿ ಅನ್ನು ಒಂದು ಟ್ರಸ್ಟ್‌ ಒಪ್ಪಿಗೆ ಪತ್ರದ ಫಲಾನುಭವಿಯಾಗಿ ಹೆಸರಿಸಬಹುದು. ಕೆಲವು ದೇಶಗಳಲ್ಲಿ, ಒಂದು ಧಾರ್ಮಿಕ ಸಂಸ್ಥೆಗೆ ಪ್ರಯೋಜನವನ್ನು ನೀಡುವಂಥ ಟ್ರಸ್ಟ್‌, ನಿರ್ದಿಷ್ಟ ತೆರಿಗೆ ವಿನಾಯಿತಿಗಳನ್ನು ನೀಡಬಹುದಾದರೂ, ಭಾರತದಲ್ಲಿ ಸನ್ನಿವೇಶವು ಹೀಗಿರುವುದಿಲ್ಲ.

“ಚ್ಯಾರಿಟಬಲ್‌ ಯೋಜನೆ” ಎಂಬ ಪದವು ಸೂಚಿಸುವಂತೆ, ಈ ರೀತಿಯ ದಾನಗಳು ದಾನಿಯು ಕೆಲವೊಂದು ಯೋಜನೆಯನ್ನು ಮಾಡುವಂತೆ ಅಗತ್ಯಪಡಿಸುತ್ತವೆ. ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಕೆಲಸಕ್ಕೆ ಯಾವುದೇ ರೀತಿಯ ಚ್ಯಾರಿಟಬಲ್‌ ಯೋಜನೆಯಿಂದ ಪ್ರಯೋಜನವಾಗುವಂತೆ ಬಯಸುವ ವ್ಯಕ್ತಿಗಳಿಗೆ ನೆರವು ನೀಡಲು, ಲೋಕವ್ಯಾಪಕ ರಾಜ್ಯ ಸೇವೆಯನ್ನು ಬೆಂಬಲಿಸಲು ಚ್ಯಾರಿಟಬಲ್‌ ಯೋಜನೆ ಎಂಬ ಬ್ರೋಷರ್‌ ಅನ್ನು ಇಂಗ್ಲಿಷ್‌ ಮತ್ತು ಸ್ಪ್ಯಾನಿಷ್‌ ಭಾಷೆಯಲ್ಲಿ ತಯಾರಿಸಲಾಗಿದೆ. ಈಗ ಅಥವಾ ಅಂತಿಮ ಉಯಿಲಿನ ಮೂಲಕ ಕೊಡುಗೆಗಳನ್ನು ನೀಡಬಹುದಾದ ವಿವಿಧ ವಿಧಾನಗಳ ಬಗ್ಗೆ ಮಾಹಿತಿಯನ್ನು ಒದಗಿಸಲಿಕ್ಕಾಗಿ ಈ ಬ್ರೋಷರ್‌ ಬರೆಯಲ್ಪಟ್ಟಿದೆ. ಬ್ರೋಷರನ್ನು ಓದಿದ ಬಳಿಕ ಮತ್ತು ತಮ್ಮ ಸ್ವಂತ ವಕೀಲರೊಂದಿಗೆ ಚರ್ಚಿಸಿದ ಬಳಿಕ ಅನೇಕರು, ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ ಕೆಲಸವನ್ನು ಬೆಂಬಲಿಸುವ ಸಹಾಯವನ್ನು ನೀಡಲು ಶಕ್ತರಾಗಿದ್ದಾರೆ ಮತ್ತು ಈ ರೀತಿಯಾಗಿ ಮಾಡುವ ಮೂಲಕ ತಮ್ಮ ತೆರಿಗೆ ಪ್ರಯೋಜನಗಳನ್ನು ಸಹ ಹೆಚ್ಚಿಸಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ, ಪತ್ರಗಳ ಅಥವಾ ಫೋನಿನ ಮೂಲಕ ಕೆಳಗೆ ಪಟ್ಟಿಮಾಡಲ್ಪಟ್ಟಿರುವ ವಿಳಾಸದಲ್ಲಿ ಅಥವಾ ನಿಮ್ಮ ದೇಶದಲ್ಲಿರುವ ಯೆಹೋವನ ಸಾಕ್ಷಿಗಳ ಕೆಲಸವನ್ನು ನೋಡಿಕೊಳ್ಳುವ ಆಫೀಸಿನಲ್ಲಿ ನೀವು ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಬಹುದು.

Charitable Planning Office

Jehovah’s Witnesses,

Post Box 6440,

Yelahanka,

Bangalore 560 064,

Karnataka.

Telephone: (080) 28468072

[ಪುಟ 20, 21ರಲ್ಲಿರುವ ಚಿತ್ರಗಳು]

ಯೆಹೋವನ ಸಾಕ್ಷಿಗಳ ಹಳೆಯ ಮತ್ತು ಹೊಸ ಕೂಟದ ಸ್ಥಳಗಳು

ಸಾಂಬಿಯ

ಸೆಂಟ್ರಲ್‌ ಆಫ್ರಿಕನ್‌ ರಿಪಬ್ಲಿಕ್‌