ಅರಣ್ಯಕಾಂಡ 18:1-32

  • ಪುರೋಹಿತರ, ಲೇವಿಯರ ಕೆಲಸಗಳು (1-7)

  • ಪುರೋಹಿತರಿಗೆ ಸಿಗೋ ಪಾಲು (8-19)

    • ಉಪ್ಪಿನ ಒಪ್ಪಂದ (19)

  • ಲೇವಿಯರಿಗೆ ಸಿಗಬೇಕಾದ, ಅವರು ಕೊಡಬೇಕಾದ ಹತ್ತನೇ ಒಂದು ಭಾಗ (20-32)

18  ಆಮೇಲೆ ಯೆಹೋವ ಆರೋನನಿಗೆ “ಆರಾಧನಾ ಸ್ಥಳದ ವಿಷ್ಯದಲ್ಲಿರೋ ನಿಯಮಗಳನ್ನ ಯಾರಾದ್ರೂ ಮುರಿದ್ರೆ ಅದಕ್ಕೆ ನೀನು, ನಿನ್ನ ಮಕ್ಕಳು, ನಿನ್ನ ವಂಶದವರೇ ಜವಾಬ್ದಾರಿ.+ ಪುರೋಹಿತ ಸೇವೆಗೆ ಸಂಬಂಧಿಸಿದ ನಿಯಮಗಳನ್ನ ಯಾರಾದ್ರೂ ಮುರಿದ್ರೆ ಅದಕ್ಕೆ ನೀನೂ ನಿನ್ನ ಮಕ್ಕಳೇ ಜವಾಬ್ದಾರಿ.+  ನಿನ್ನ ತಂದೆಯ ಕುಲದಿಂದ ಅಂದ್ರೆ ಲೇವಿ ಕುಲದಿಂದ ನಿನ್ನ ಸಹೋದರರನ್ನ ಕರ್ಕೊಂಡು ಬಾ. ಅವರು ಸಾಕ್ಷಿ ಡೇರೆ ಮುಂದೆ ನಿನ್ನ ಜೊತೆ ಇದ್ದು+ ನಿನಗೂ ನಿನ್ನ ಮಕ್ಕಳಿಗೂ ಸಹಾಯಕರಾಗಿ ಇರಲಿ.+  ನೀನು ಅವರಿಗೆ ಕೊಡೋ ಕೆಲಸಗಳನ್ನ ಡೇರೆಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನ ಅವರು ಮಾಡಬೇಕು.+ ಆದ್ರೆ ಅವರು ಪವಿತ್ರ ಡೇರೆಯ ಉಪಕರಣಗಳ ಹತ್ರ ಆಗ್ಲಿ ಯಜ್ಞವೇದಿ ಹತ್ರ ಆಗಲಿ ಬರಬಾರದು. ಬಂದ್ರೆ ಸಾಯ್ತಾರೆ, ಜೊತೆಗೆ ನೀನೂ ಸಾಯ್ತೀಯ.+  ಅವರು ನಿನ್ನ ಜೊತೆ ಇದ್ದು ದೇವದರ್ಶನ ಡೇರೆಗೆ ಸಂಬಂಧಿಸಿದ ತಮ್ಮ ಎಲ್ಲ ಜವಾಬ್ದಾರಿಗಳನ್ನ ಮಾಡಬೇಕು. ಆ ಡೇರೆಯ ಎಲ್ಲ ಕೆಲಸಗಳನ್ನ ಮಾಡಬೇಕು. ಬೇರೆಯವರು* ಯಾರೂ ನಿಮ್ಮ ಜೊತೆ ಸೇವೆ ಮಾಡಬಾರದು.+  ಇಸ್ರಾಯೇಲ್ಯರ ಮೇಲೆ ನಾನು ಮತ್ತೆ ಕೋಪ ಮಾಡ್ಕೊಬಾರದು ಅಂದ್ರೆ+ ಪವಿತ್ರ ಡೇರೆ ಮತ್ತೆ ಯಜ್ಞವೇದಿ ವಿಷ್ಯದಲ್ಲಿ ನಿಮಗೆ ಕೊಟ್ಟಿರೋ ಜವಾಬ್ದಾರಿನ ಚೆನ್ನಾಗಿ ಮಾಡಬೇಕು.+  ನಿಮ್ಮ ಸಹೋದರರಾದ ಲೇವಿಯರನ್ನ ನಾನು ಇಸ್ರಾಯೇಲ್ಯರಿಂದ ಆರಿಸ್ಕೊಂಡು ನಿಮಗೆ ಉಡುಗೊರೆಯಾಗಿ ಕೊಟ್ಟಿದ್ದೀನಿ.+ ಅವರು ಯೆಹೋವನಾದ ನನಗೆ ಸೇರಿದವರು. ಅವರು ದೇವದರ್ಶನ ಡೇರೆಯ ಕೆಲಸ ಮಾಡ್ತಾರೆ.+  ಯಜ್ಞವೇದಿ ಮತ್ತೆ ಪರದೆ ಒಳಗಿರೋ ಎಲ್ಲ ವಸ್ತುಗಳಿಗೆ ಸಂಬಂಧಿಸಿದ ಪುರೋಹಿತ ಸೇವೆ ಮಾಡೋ ಜವಾಬ್ದಾರಿ ನಿನಗೂ ನಿನ್ನ ಮಕ್ಕಳಿಗೂ ಇದೆ.+ ಹಾಗಾಗಿ ಈ ಸೇವೆನ ನೀವು ಮಾಡಬೇಕು.+ ಪುರೋಹಿತ ಸೇವೆನ ನಿಮಗೆ ಉಡುಗೊರೆಯಾಗಿ ಕೊಟ್ಟಿದ್ದೀನಿ. ಲೇವಿಯರನ್ನ ಬಿಟ್ಟು ಬೇರೆ ಯಾರಾದ್ರೂ ಪವಿತ್ರ ಡೇರೆ ಹತ್ರ ಬಂದ್ರೆ ಸಾಯಿಸಬೇಕು”+ ಅಂದನು.  ಯೆಹೋವ ಆರೋನನಿಗೆ ಮತ್ತೂ ಹೇಳಿದ್ದು ಏನಂದ್ರೆ “ಇಸ್ರಾಯೇಲ್ಯರು ನನಗೆ ಕೊಡೋ ಕಾಣಿಕೆಗಳ ಜವಾಬ್ದಾರಿಯನ್ನ ನಾನು ನಿನಗೆ ವಹಿಸಿದ್ದೀನಿ.+ ಅವರು ಕಾಣಿಕೆಯಾಗಿ ಕೊಡೋ ಎಲ್ಲ ಪವಿತ್ರ ವಸ್ತುಗಳಲ್ಲಿ ಒಂದು ಪಾಲನ್ನ ನಿನಗೂ ನಿನ್ನ ಮಕ್ಕಳಿಗೂ ಕೊಟ್ಟಿದ್ದೀನಿ. ಇದು ನಿಮಗೆ ಸದಾಕಾಲ ಸಿಗೋ ಪಾಲು.+  ಬೆಂಕಿಯಲ್ಲಿ ಅರ್ಪಿಸೋ ಅತಿ ಪವಿತ್ರ ಅರ್ಪಣೆಗಳಲ್ಲಿ ಅಂದ್ರೆ ಧಾನ್ಯ ಅರ್ಪಣೆಗಳು,+ ಪಾಪಪರಿಹಾರಕ ಬಲಿಗಳು,+ ದೋಷಪರಿಹಾರಕ ಬಲಿಗಳು+ ಹೀಗೆ ಜನ ನನಗೆ ತಂದು ಕೊಡೋ ಎಲ್ಲ ಅರ್ಪಣೆಗಳಿಂದ ಒಂದು ಪಾಲು ನಿಮಗೆ ಸಿಗುತ್ತೆ. ಅದು ನಿನಗೂ ನಿನ್ನ ಮಕ್ಕಳಿಗೂ ಅತಿ ಪವಿತ್ರವಾಗಿದೆ. 10  ತುಂಬ ಪವಿತ್ರವಾದ ಒಂದು ಜಾಗದಲ್ಲಿ ನೀವು ಅದನ್ನ ತಿನ್ನಬೇಕು.+ ನಿಮ್ಮಲ್ಲಿರೋ ಪ್ರತಿಯೊಬ್ಬ ಪುರುಷ ಅದನ್ನ ತಿನ್ನಬಹುದು. ಅದು ನಿಮಗೆ ಪವಿತ್ರವಾಗಿ ಇರಬೇಕು.+ 11  ಇಸ್ರಾಯೇಲ್ಯರು ಕಾಣಿಕೆಯಾಗಿ ತಂದು ಕೊಡೋ ಎಲ್ಲ ಉಡುಗೊರೆಗಳನ್ನ+ ಓಲಾಡಿಸೋ ಎಲ್ಲ ಅರ್ಪಣೆಗಳನ್ನ+ ನಾನು ನಿನಗೆ, ನಿನ್ನ ಗಂಡು ಮಕ್ಕಳಿಗೆ, ಹೆಣ್ಣು ಮಕ್ಕಳಿಗೆ ಕೊಟ್ಟಿದ್ದೀನಿ. ಅದೆಲ್ಲ ನಿಮಗೆ ಸೇರಿದೆ. ಅವು ನಿಮಗೆ ಸದಾಕಾಲ ಸಿಗೋ ಪಾಲು.+ ನಿನ್ನ ಕುಟುಂಬದಲ್ಲಿ ಶುದ್ಧರಾಗಿ ಇರೋರೆಲ್ಲ ಅದನ್ನ ತಿನ್ನಬಹುದು.+ 12  ಇಸ್ರಾಯೇಲ್ಯರು ಯೆಹೋವನಾದ ನನಗೆ ತಂದು ಕೊಡೋ ಮೊದಲ ಬೆಳೆನ+ ಅಂದ್ರೆ ಅತಿ ಉತ್ತಮವಾದ ಎಣ್ಣೆ, ಹೊಸ ದ್ರಾಕ್ಷಾಮದ್ಯ, ಧಾನ್ಯ ಇದನ್ನೆಲ್ಲ ನಿನಗೆ ಕೊಟ್ಟಿದ್ದೀನಿ.+ 13  ಅವರು ತಮ್ಮ ಜಮೀನಲ್ಲಿ ಬೆಳೆದ ಎಲ್ಲ ಬೆಳೆಗಳಲ್ಲಿ ಯೆಹೋವನಾದ ನನಗಾಗಿ ತಂದು ಕೊಡೋ ಮೊದಲ ಬೆಳೆ ನಿನಗೆ ಸೇರಬೇಕು.+ ನಿನ್ನ ಕುಟುಂಬದಲ್ಲಿ ಶುದ್ಧರಾಗಿ ಇರೋರೆಲ್ಲ ಅದನ್ನ ತಿನ್ನಬಹುದು. 14  ಇಸ್ರಾಯೇಲಿನಲ್ಲಿ ದೇವರಿಗೆ ಮೀಸಲಾಗಿಟ್ಟ ಎಲ್ಲ ವಸ್ತುಗಳು* ನಿನಗೆ ಸೇರಬೇಕು.+ 15  ಅವರು ಯೆಹೋವನಿಗೆ ಕೊಡೋ ತಮ್ಮ ಮೊದಲ ಗಂಡು ಮಕ್ಕಳು, ಪ್ರಾಣಿಗಳ ಮೊದಲ ಗಂಡು ಮರಿಗಳು+ ನಿನಗೆ ಸೇರಬೇಕು. ಆದ್ರೆ ಮೊದಲ ಗಂಡು ಮಕ್ಕಳನ್ನ ಅಶುದ್ಧ ಪ್ರಾಣಿಗಳ ಮೊದಲ ಮರಿಗಳನ್ನ ನೀನು ಬಿಡುಗಡೆ ಮಾಡ್ಲೇಬೇಕು.+ 16  ಒಂದು ತಿಂಗಳ ಮತ್ತು ಅದಕ್ತಿಂತ ಜಾಸ್ತಿ ವಯಸ್ಸಿನ ಮೊದಲ ಗಂಡು ಮಕ್ಕಳನ್ನ ಗಂಡುಮರಿಗಳನ್ನ ನೀನು ಬಿಡುಗಡೆ ಬೆಲೆ ತಗೊಂಡು ಬಿಟ್ಟುಬಿಡಬೇಕು. ನಿರ್ಧರಿಸಿದ ಆ ಬೆಲೆ ಆರಾಧನಾ ಸ್ಥಳದ ತೂಕದ ಪ್ರಕಾರ* ಐದು ಬೆಳ್ಳಿ ಶೆಕೆಲ್‌ಗಳು.*+ ಒಂದು ಶೆಕೆಲ್‌ ಅಂದ್ರೆ 20 ಗೇರಾ.* 17  ಮೊದಲ ಗಂಡು ಕರುವನ್ನ, ಮೊದಲ ಗಂಡು ಕುರಿಮರಿಯನ್ನ ಮೊದಲ ಆಡುಮರಿಯನ್ನ ಮಾತ್ರ ಬಿಡುಗಡೆ ಮಾಡಬಾರದು.+ ಅವು ಪವಿತ್ರವಾಗಿವೆ. ಅವುಗಳ ರಕ್ತನ ಯಜ್ಞವೇದಿ ಮೇಲೆ ಚಿಮಿಕಿಸಬೇಕು.+ ಅವುಗಳ ಕೊಬ್ಬನ್ನ ಬೆಂಕಿಯಲ್ಲಿ ಅರ್ಪಿಸಬೇಕು. ಅದ್ರಿಂದ ಮೇಲೇರೋ ಹೊಗೆಯ ಸುವಾಸನೆಯಿಂದ ಯೆಹೋವನಿಗೆ ಖುಷಿ* ಆಗುತ್ತೆ.+ 18  ಅವುಗಳ ಮಾಂಸ ನಿನಗೆ ಸೇರಬೇಕು. ಓಲಾಡಿಸೋ ಅರ್ಪಣೆಯಾಗಿ ಕೊಡೋ ಎದೆ ಭಾಗ, ಬಲಗಾಲು ನಿನಗೆ ಸೇರೋ ತರ ಇದು ಸಹ ನಿನಗೆ ಸೇರಬೇಕು.+ 19  ಇಸ್ರಾಯೇಲ್ಯರು ಯೆಹೋವನಾದ ನನಗೆ ಕೊಡೋ ಎಲ್ಲ ಪವಿತ್ರ ಕಾಣಿಕೆಗಳನ್ನ+ ನಾನು ನಿನಗೂ ನಿನ್ನ ಗಂಡು ಮಕ್ಕಳಿಗೂ ಹೆಣ್ಣು ಮಕ್ಕಳಿಗೂ ಕೊಟ್ಟಿದ್ದೀನಿ. ಅವು ನಿಮಗೆ ಸದಾಕಾಲ ಸಿಗೋ ಪಾಲು.+ ಇದು ಯೆಹೋವನಾದ ನಾನು ನಿನ್ನ ಜೊತೆ, ನಿನ್ನ ವಂಶದವರ ಜೊತೆ ಸದಾಕಾಲಕ್ಕೂ ಮಾಡ್ಕೊಳ್ಳೋ ಉಪ್ಪಿನ* ಒಪ್ಪಂದ.” 20  ಯೆಹೋವ ಆರೋನನಿಗೆ ಇನ್ನೂ ಹೇಳಿದ್ದು ಏನಂದ್ರೆ “ಇಸ್ರಾಯೇಲ್ಯರ ದೇಶದಲ್ಲಿ ನಿನಗೆ ಆಸ್ತಿ ಸಿಗಲ್ಲ. ಅಲ್ಲಿನ ಜಮೀನಲ್ಲಿ ನಿನಗೆ ಯಾವುದೇ ಪಾಲು ಸಿಗಲ್ಲ.+ ಇಸ್ರಾಯೇಲ್ಯರ ಮಧ್ಯದಲ್ಲಿ ನಿನಗೆ ಸಿಗೋ ಪಾಲು, ಆಸ್ತಿ ನಾನೇ.+ 21  ಲೇವಿಯರು ದೇವದರ್ಶನ ಡೇರೆಯಲ್ಲಿ ಮಾಡೋ ಸೇವೆಗಾಗಿ ಅವ್ರಿಗೆ ಇಸ್ರಾಯೇಲಲ್ಲಿರೋ ಪ್ರತಿಯೊಂದ್ರಿಂದ ಹತ್ತರಲ್ಲಿ ಒಂದು ಭಾಗ* ಕೊಡ್ತೀನಿ.+ 22  ಇನ್ನು ಮುಂದೆ ಇಸ್ರಾಯೇಲ್ಯರು ದೇವದರ್ಶನ ಡೇರೆ ಹತ್ರ ಬರಬಾರದು. ಬಂದ್ರೆ ಅವ್ರ ಮೇಲೆ ಪಾಪದ ದೋಷ ಬರುತ್ತೆ. ಅವರು ಸಾಯ್ತಾರೆ. 23  ದೇವದರ್ಶನ ಡೇರೆಯ ಕೆಲಸಗಳನ್ನ ಲೇವಿಯರೇ ಮಾಡಬೇಕು. ಜನ ಪವಿತ್ರ ಡೇರೆಯ ವಿಷ್ಯದಲ್ಲಿ ಪಾಪ ಮಾಡಿದ್ರೆ ಅದಕ್ಕೆ ಲೇವಿಯರೇ ಶಿಕ್ಷೆ ಅನುಭವಿಸಬೇಕು.+ ಇಸ್ರಾಯೇಲ್ಯರ ಮಧ್ಯದಲ್ಲಿ ಲೇವಿಯರು ಆಸ್ತಿ ಪಡ್ಕೊಬಾರದು+ ಅನ್ನೋ ನಿಯಮವನ್ನ ನೀವು ಎಲ್ಲ ಪೀಳಿಗೆಯವರು ಪಾಲಿಸಬೇಕು. 24  ಯೆಹೋವನಾದ ನನಗೆ ಇಸ್ರಾಯೇಲ್ಯರು ಕಾಣಿಕೆಯಾಗಿ ಕೊಡೋ ಹತ್ತನೇ ಒಂದು ಭಾಗವನ್ನ ನಾನು ಲೇವಿಯರಿಗೆ ಆಸ್ತಿಯಾಗಿ ಕೊಟ್ಟಿದ್ದೀನಿ. ಅದಕ್ಕೇ ‘ಇಸ್ರಾಯೇಲ್ಯರ ಮಧ್ಯದಲ್ಲಿ ಲೇವಿಯರು ಆಸ್ತಿಯನ್ನ ಪಡ್ಕೊಬಾರದು’ + ಅಂತ ಹೇಳ್ದೆ.” 25  ಯೆಹೋವ ಮೋಶೆಗೆ ಹೀಗಂದನು 26  “ನೀನು ಲೇವಿಯರಿಗೆ ನನ್ನ ಈ ಮಾತನ್ನ ತಿಳಿಸು: ‘ನನಗೆ ಇಸ್ರಾಯೇಲ್ಯರು ಕೊಡೋ ಹತ್ತರಲ್ಲಿ ಒಂದು ಭಾಗನ ನಿಮಗೆ ಆಸ್ತಿಯಾಗಿ ಕೊಟ್ಟಿದ್ದೀನಿ.+ ಅದ್ರಲ್ಲಿ ಹತ್ತನೇ ಒಂದು ಭಾಗವನ್ನ ನೀವು ಯೆಹೋವನಾದ ನನಗೆ ಕಾಣಿಕೆಯಾಗಿ ಕೊಡಬೇಕು.+ 27  ಇದನ್ನ ನೀವು ನಿಮ್ಮ ಸ್ವಂತ ಕಣದಿಂದ,+ ತುಂಬಿತುಳುಕೋ ದಾಕ್ಷಿತೊಟ್ಟಿಯಿಂದ ತಂದು ಕೊಡೋ ಕಾಣಿಕೆ ಅಂತ ನೆನಸ್ತೀನಿ. 28  ಹೀಗೆ ಯೆಹೋವನಿಗೆ ಕಾಣಿಕೆಗಳನ್ನ ಕೊಡೋಕೆ ನಿಮಗೂ ಸಾಧ್ಯ ಆಗುತ್ತೆ. ಇಸ್ರಾಯೇಲ್ಯರಿಂದ ಸಿಗೋ ಎಲ್ಲ ಹತ್ತರಲ್ಲಿ ಒಂದು ಭಾಗಗಳಿಂದ ನೀವು ಯೆಹೋವನಿಗೆ ಅರ್ಪಿಸೋ ಈ ಕಾಣಿಕೆಯನ್ನ ಪುರೋಹಿತನಾದ ಆರೋನನಿಗೆ ಕೊಡಬೇಕು. 29  ನಿಮಗೆ ಕೊಡೋ ಪ್ರತಿಯೊಂದು ಉಡುಗೊರೆಗಳಲ್ಲಿ ತುಂಬ ಚೆನ್ನಾಗಿರೋದನ್ನ+ ನೀವು ಯೆಹೋವನಿಗೆ ಪವಿತ್ರ ಕಾಣಿಕೆಯಾಗಿ ಕೊಡಬೇಕು.’ 30  ನೀನು ಲೇವಿಯರಿಗೆ ಇದನ್ನೂ ಹೇಳು: ‘ನಿಮಗೆ ಸಿಕ್ಕಿದ ಉಡುಗೊರೆಗಳಲ್ಲಿ ತುಂಬ ಚೆನ್ನಾಗಿರೋದನ್ನ ನೀವು ಕಾಣಿಕೆಯಾಗಿ ಕೊಡುವಾಗ ಅದನ್ನ ನಿಮ್ಮ ಸ್ವಂತ ಕಣದಿಂದ, ದಾಕ್ಷಿತೊಟ್ಟಿಯಿಂದ ತಂದು ಕೊಡೋ ಕಾಣಿಕೆ ಅಂತ ನೆನಸ್ತೀನಿ. 31  ಹೀಗೆ ಕಾಣಿಕೆ ಕೊಟ್ಟ ಮೇಲೆ ಉಳಿದಿದ್ದನ್ನ ನೀವು ಮತ್ತೆ ನಿಮ್ಮ ಮನೆಯವರೆಲ್ಲ ಎಲ್ಲಿ ಬೇಕಾದ್ರೂ ತಿನ್ನಬಹುದು. ಯಾಕಂದ್ರೆ ಅದು ದೇವದರ್ಶನ ಡೇರೆಯಲ್ಲಿ ನೀವು ಮಾಡೋ ಸೇವೆಗೆ ನಿಮಗೆ ಸಿಗೋ ಸಂಬಳ.+ 32  ಎಲ್ಲಿ ತನಕ ನೀವು ಆ ಉಡುಗೊರೆಗಳಲ್ಲಿ ತುಂಬ ಚೆನ್ನಾಗಿರೋದನ್ನ ಕಾಣಿಕೆಯಾಗಿ ಕೊಡ್ತೀರೋ ಅಲ್ಲಿ ತನಕ ನಿಮ್ಮ ಮೇಲೆ ಪಾಪದ ದೋಷ ಬರಲ್ಲ. ಇಸ್ರಾಯೇಲ್ಯರು ಕೊಡೋ ಪವಿತ್ರ ವಸ್ತುಗಳನ್ನ ನೀವು ಅಪವಿತ್ರ ಮಾಡಬಾರದು. ಒಂದುವೇಳೆ ಅಪವಿತ್ರ ಮಾಡಿದ್ರೆ ಸಾಯ್ತೀರ.’”+

ಪಾದಟಿಪ್ಪಣಿ

ಅಕ್ಷ. “ಅಪರಿಚಿತರು.” ಅಂದ್ರೆ, ಆರೋನನ ಕುಟುಂಬಕ್ಕೆ ಸೇರದವರು.
ಅಂದ್ರೆ, ದೇವರಿಗೆ ಮೀಸಲಾಗಿಟ್ಟ ಮೇಲೆ ಹಿಂದೆ ಪಡ್ಕೊಳ್ಳೋಕೆ ಅಥವಾ ಬಿಡಿಸಿಕೊಳ್ಳೋಕೆ ಸಾಧ್ಯ ಇಲ್ಲದ ವಸ್ತುಗಳು. ಅವು ದೇವರಿಗಾಗಿ ಪ್ರತ್ಯೇಕಿಸಲಾದ ವಸ್ತುಗಳಾಗಿವೆ.
ಅಥವಾ “ಪವಿತ್ರ ಶೆಕೆಲಿನ ಪ್ರಕಾರ.”
ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಒಂದು ಗೇರಾದ ತೂಕ 0.57 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಸ್ಥಿರವಾದ, ಯಾವತ್ತೂ ಬದಲಾಗದ.”
ಅಥವಾ, “ದಶಮಾಂಶ.”