ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನದಿಗಳು ಚಪ್ಪಾಳೆಹೊಡೆಯಲಿ”

“ನದಿಗಳು ಚಪ್ಪಾಳೆಹೊಡೆಯಲಿ”

ಯೆಹೋವನ ಸೃಷ್ಟಿಯ ವೈಭವ

“ನದಿಗಳು ಚಪ್ಪಾಳೆಹೊಡೆಯಲಿ”

ಭೂಪಟದ ಮೇಲೆ ಸ್ವಲ್ಪ ಕಣ್ಣೋಡಿಸಿರಿ. ಹೆಚ್ಚಿನ ಸ್ಥಳಗಳಲ್ಲಿ ಭೂಪ್ರದೇಶಗಳ ಮಧ್ಯದಿಂದ ಗೆರೆಗಳು ಸುರುಳಿ ಸುರುಳಿಯಾಗಿ ಹೋಗುತ್ತಿರುವುದನ್ನು ನೀವು ನೋಡುವಿರಿ. ಈ ಗೆರೆಗಳು ಬಯಲುಪ್ರದೇಶಗಳು, ಮರುಭೂಮಿಗಳು ಮತ್ತು ಹುಲ್ಲುಗಾವಲುಗಳನ್ನು ಹಾದುಹೋಗುತ್ತವೆ. ಅವು, ಕಣಿವೆಗಳು, ಕಮರಿಗಳು ಮತ್ತು ಕಾಡುಗಳನ್ನು ಬಳಸಿ ದಾರಿಮಾಡಿಕೊಂಡು ಮುಂದೆ ಹೋಗುತ್ತವೆ. (ಹಬಕ್ಕೂಕ 3:⁠9) ಇವು ನಮ್ಮ ಭೂಗ್ರಹದ ಜೀವನಾಲೆಗಳಾಗಿರುವ ನದಿಗಳೇ ಆಗಿವೆ. ಇಂಥ ಜಲಮಾರ್ಗಗಳು, ಭೂಮಿಯ ಸೃಷ್ಟಿಕರ್ತನಾದ ಯೆಹೋವನ ವಿವೇಕ ಮತ್ತು ಶಕ್ತಿಗೆ ಸಾಕ್ಷ್ಯವಾಗಿವೆ. ನಾವು ಅವುಗಳನ್ನು ಗಮನಿಸುತ್ತಿರುವಾಗ, ಹೀಗೆ ಹಾಡಿದ ಕೀರ್ತನೆಗಾರನ ಭಾವನೆಗಳಲ್ಲಿ ಪಾಲಿಗರಾಗುತ್ತೇವೆ: “ನದಿಗಳು ಚಪ್ಪಾಳೆಹೊಡೆಯಲಿ; ಪರ್ವತಗಳೆಲ್ಲಾ ಉತ್ಸಾಹಧ್ವನಿಮಾಡಲಿ.”​—⁠ಕೀರ್ತನೆ 98:8, 9. *

ನದಿಗಳಿಗೂ ಮಾನವ ಇತಿಹಾಸಕ್ಕೂ ಹತ್ತಿರದ ನಂಟು ಇದೆ. ಏದೆನಿನಿಂದ ಹೊರಡುತ್ತಿದ್ದ ಒಂದು ನದಿಯಿಂದ ವಿಭಾಗವಾದಂಥ ನಾಲ್ಕು ಪ್ರಧಾನ ನದಿಗಳ ಕುರಿತಾಗಿ ಬೈಬಲ್‌ ಮಾತಾಡುತ್ತದೆ. (ಆದಿಕಾಂಡ 2:​10-14) ಅತ್ಯಾರಂಭದ ನಾಗರಿಕತೆಗಳಲ್ಲಿನ ಒಂದು ನಾಗರಿಕತೆಯು, ಮಧ್ಯಪೂರ್ವದಲ್ಲಿನ ಟೈಗ್ರಿಸ್‌ ಮತ್ತು ಯೂಫ್ರೇಟೀಸ್‌ ನದಿಗಳ ಫಲವತ್ತಾದ ಕಣಿವೆಗಳಲ್ಲಿ ಚಿಗುರಿತು. ಚೀನಾದಲ್ಲಿನ ಹ್ವಾಂಗ್‌ ನದಿ, ದಕ್ಷಿಣ ಏಷಿಯದಲ್ಲಿನ ಗಂಗಾ ಮತ್ತು ಸಿಂಧು ನದಿಗಳು, ಮತ್ತು ಈಜಿಪ್ಟ್‌ನ ನೈಲ್‌ ನದಿಯಿಂದ ಮಹಾ ನಾಗರಿಕತೆಗಳು ಹುಟ್ಟಿಕೊಂಡವು.

ಆದುದರಿಂದ, ನದಿಗಳ ಶಕ್ತಿ, ಸಮೃದ್ಧಿ ಮತ್ತು ಸೌಂದರ್ಯದ ವಿಷಯದಲ್ಲಿ ಮನುಷ್ಯನು ಯಾವಾಗಲೂ ಬೆಕ್ಕಸಬೆರಗಾಗುವುದು ಅಚ್ಚರಿಯ ಸಂಗತಿಯಲ್ಲ. ಈಜಿಪ್ಟ್‌ ದೇಶದ ನೈಲ್‌ ನದಿಯು ಸುಮಾರು 6,670 ಕಿಲೊಮೀಟರ್‌ ದೂರದ ವರೆಗೆ ಹರಿಯುತ್ತದೆ. ಅತ್ಯಂತ ದೊಡ್ಡ ನದಿಯೆಂಬ ಹೆಸರು, ದಕ್ಷಿಣ ಅಮೆರಿಕದ ಅಮೆಸಾನ್‌ ನದಿಗಿದೆ. ಕೆಲವೊಂದು ನದಿಗಳು ಅವುಗಳ ಗಾತ್ರದಿಂದಾಗಿ ಘನಗಾಂಭೀರ್ಯವುಳ್ಳದ್ದಾಗಿದ್ದರೂ, ಅದೇ ಸಮಯದಲ್ಲಿ ಚಿಕ್ಕ ನದಿಗಳು ಸಹ ತುಂಬ ಮನೋಹರವಾಗಿರಬಲ್ಲವು. ಇದಕ್ಕೆ ಉದಾಹರಣೆ ಜಪಾನಿನಲ್ಲಿನ ವೇಗವಾಗಿ ಹರಿಯುವ ಟೋನೇ ನದಿ ಆಗಿದೆ.

ನದಿಯು ಹರಿಯುವುದು ಹೇಗೆ? ಒಂದೇ ಶಬ್ದದಲ್ಲಿ ಹೇಳುವುದಾದರೆ, ಗುರುತ್ವಾಕರ್ಷಣೆಯಿಂದ. ಎತ್ತರ ಪ್ರದೇಶಗಳಿಂದ ತಗ್ಗು ಪ್ರದೇಶಗಳಿಗೆ ನೀರನ್ನು ಸೆಳೆಯುವಂಥದ್ದು ಗುರುತ್ವಾಕರ್ಷಣ ಶಕ್ತಿಯೇ. ಕೆಲವೊಮ್ಮೆ ಇದರಿಂದಾಗಿ ಭೋರ್ಗರೆಯುವ ಜಲಪಾತಗಳು ಉಂಟಾಗುತ್ತವೆ. ಶಕ್ತಿ ಮತ್ತು ವೈಭವದ ಈ ಪ್ರದರ್ಶನಗಳನ್ನು ವರ್ಣಿಸುತ್ತಾ, ಬೈಬಲ್‌ ಹೇಳುವುದು: “ಯೆಹೋವನೇ, ನದಿಗಳು ಮೊರೆದವು, ನದಿಗಳು ಭೋರಿಟ್ಟವು; ನದಿಗಳು ಘೋಷಿಸುತ್ತವೆ.”​—⁠ಕೀರ್ತನೆ 93:⁠3.

“ಧಾರಾಕಾರದ ಮಳೆಯನ್ನು ಕಳುಹಿಸುವವನಾರು?” ಎಂದು ಯೆಹೋವನು ದೇವಭಕ್ತ ಪುರುಷನಾದ ಯೋಬನನ್ನು ಕೇಳಿದನು. (ಯೋಬ 38:​25, ಕಂಟೆಂಪರರಿ ಇಂಗ್ಲಿಷ್‌ ವರ್ಷನ್‌) ಹೌದು, ಇಷ್ಟೊಂದು ನೀರು ಎಲ್ಲಿಂದ ಬರುತ್ತದೆ? ಜಲಚಕ್ರ ಎಂದು ಕರೆಯಲಾಗುವ ಒಂದು ಸಂಕೀರ್ಣ ವ್ಯವಸ್ಥೆಯಿಂದಲೇ. ಭೂಮಿಯ ನೀರು, ಸೂರ್ಯನ ಶಕ್ತಿ ಹಾಗೂ ಗುರುತ್ವಾಕರ್ಷಣೆಯಿಂದಾಗಿ ಸತತವಾಗಿ ಪರಿಚಲನಾ ಸ್ಥಿತಿಯಲ್ಲಿದೆ. ನೀರು ಬಾಷ್ಪೀಕರಿಸಲ್ಪಟ್ಟ ಬಳಿಕ ವಾಯುಮಂಡಲಕ್ಕೆ ಮೇಲೇರುತ್ತದೆ. ಕೊನೆಗೆ ಅದು ತಣ್ಣಗಾಗಿ, ಮೋಡಗಳ ರೂಪತಾಳುತ್ತದೆ. ಕಾಲಾನಂತರ, ಈ ನೀರು ಹಿಮ ಇಲ್ಲವೆ ಮಳೆಯಾಗಿ ಭೂಮಿಗೆ ತಿರುಗಿಬರುತ್ತದೆ. ಹೆಚ್ಚಿನ ನೀರು, ಸಾಗರಗಳು, ಸರೋವರಗಳು, ನದಿಗಳು, ಹಿಮನದಿಗಳು, ಪೋಲಾರ್‌ ಪ್ರದೇಶದ ಹಿಮಕವಚಗಳು ಮತ್ತು ನೆಲದಡಿಯಲ್ಲಿ ಶೇಖರಿಸಲ್ಪಟ್ಟಿದೆ.

ಈ ಗಮನಾರ್ಹವಾದ ಚಕ್ರದ ಕುರಿತಾಗಿ, ಬೈಬಲ್‌ ಹೇಳುವುದು: “ನದಿಗಳೆಲ್ಲಾ ಸಮುದ್ರಕ್ಕೆ ಹರಿದು ಹೋಗುವವು; ಆದರೂ ಸಮುದ್ರವು ತುಂಬುವದಿಲ್ಲ; ಅವು ಎಲ್ಲಿಗೆ ಹರಿದು ಹೋಗುತ್ತವೋ ಅಲ್ಲಿಗೇ ತಿರಿಗಿ ಹೋಗುವವು.” (ಪ್ರಸಂಗಿ 1:7) ಅಪರಿಮಿತ ವಿವೇಕ ಹಾಗೂ ಪ್ರೀತಿಪರ ಕಾಳಜಿಯ ದೇವರಾದ ಯೆಹೋವನೊಬ್ಬನೇ ಅಂಥ ಚಕ್ರವನ್ನು ಜಾರಿಗೆ ತರಸಾಧ್ಯವಿತ್ತು. ಮತ್ತು ಅಂಥ ಚಾತುರ್ಯಭರಿತ ವಿನ್ಯಾಸವು ದೇವರು ಎಂಥ ರೀತಿಯ ವ್ಯಕ್ತಿಯಾಗಿದ್ದಾನೆಂದು ತೋರಿಸುತ್ತದೆ? ಆತನು ಮಹಾ ವಿವೇಕ ಹಾಗೂ ಪ್ರೀತಿಪರ ಕಾಳಜಿಯುಳ್ಳ ದೇವರಾಗಿದ್ದಾನೆ ಎಂಬುದನ್ನೇ.​—⁠ಕೀರ್ತನೆ 104:​13-15, 24, 25; ಜ್ಞಾನೋಕ್ತಿ 3:​19, 20.

ನದಿಗಳ ಗಾತ್ರ ಮತ್ತು ಸಂಖ್ಯೆಯು ಬಹಳ ದೊಡ್ಡದಾಗಿದ್ದರೂ, ಅವು ಲೋಕದ ತಾಜಾ ನೀರಿನ ಅತಿ ಚಿಕ್ಕ ಪ್ರಮಾಣವನ್ನು ಹೊಂದಿರುತ್ತವೆ. ಹಾಗಿದ್ದರೂ ಅವು ಜೀವಕ್ಕೆ ಅತ್ಯಾವಶ್ಯಕವಾಗಿವೆ. “ನೀರು ಲಭ್ಯವಿಲ್ಲದಿರುವಲ್ಲಿ ಮತ್ತು ನೀರಿನ ಮೇಲೆ ಸ್ವಲ್ಪ ಪ್ರಮಾಣದ ನಿಯಂತ್ರಣವಿಲ್ಲದಿರುವಲ್ಲಿ, ಮಾನವ ಜೀವಿತದ ಅತೀ ಸರಳ ಹಾಗೂ ಅತೀ ಸಂಕೀರ್ಣಭರಿತ ಅಗತ್ಯಗಳನ್ನು ಪೂರೈಸುವುದು ಅಸಾಧ್ಯವಾಗಿರುತ್ತಿತ್ತು. ಆ ವಾಸ್ತವಾಂಶಕ್ಕೆ ಪ್ರತಿಕ್ರಿಯೆಯಲ್ಲಿ ಮನುಷ್ಯನು ವರ್ತಿಸಿರುವ ರೀತಿಯು, ನಾಗರಿಕತೆಯ ಇತಿಹಾಸದಲ್ಲಿ ಒಂದು ಪ್ರಧಾನ ಅಂಶವಾಗಿರುತ್ತದೆ” ಎಂದು ನೀರು (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುತ್ತದೆ.

ಸಾವಿರಾರು ವರ್ಷಗಳಿಂದ, ನದಿಗಳು ಮನುಷ್ಯನ ದಾಹವನ್ನು ತಣಿಸಿ, ಅವನ ತೋಟಗಳಿಗೂ ನೀರನ್ನು ಒದಗಿಸಿವೆ. ಅನೇಕ ನದಿಗಳುದ್ದಕ್ಕೂ ಇರುವ ಫಲವತ್ತಾದ ಮಣ್ಣು ಬೆಳೆಗಾಗಿ ಉಪಯುಕ್ತವಾಗಿದೆ. ಯೆಹೋವನ ಸೇವಕರಿಗೆ ಕೊಡಲ್ಪಟ್ಟಿರುವ ಆಶೀರ್ವಾದದಲ್ಲಿ ಈ ವಿಚಾರವು ಹೇಗೆ ವ್ಯಕ್ತಪಡಿಸಲ್ಪಟ್ಟಿದೆ ಎಂಬುದನ್ನು ಗಮನಿಸಿರಿ: “ಯಾಕೋಬ್ಯರೇ, ನಿಮ್ಮ ಡೇರೆಗಳು ಎಷ್ಟೋ ಚೆಲುವಾಗಿವೆ; ಇಸ್ರಾಯೇಲ್ಯರೇ, ನಿಮ್ಮ ನಿವಾಸಗಳು ಎಷ್ಟೋ ರಮ್ಯವಾಗಿವೆ. ಉದ್ದವಾಗಿ ಚಾಚಿಕೊಂಡಿರುವ ತಗ್ಗುಗಳಂತೆಯೂ, ನದಿಯ ಬಳಿಯಲ್ಲಿರುವ ತೋಟಗಳಂತೆಯೂ ಕಾಣಿಸುತ್ತವೆ. ಯೆಹೋವನು ನೆಟ್ಟ ಅಗರು ಮರಗಳಿಗೂ ನೀರಿನ ಬಳಿಯಲ್ಲಿರುವ ದೇವದಾರುವೃಕ್ಷಗಳಿಗೂ ಸಮಾನವಾಗಿವೆ.” (ಅರಣ್ಯಕಾಂಡ 24:5, 6) ನೀವಿಲ್ಲಿ ನೋಡುವ ಬಾತುಕೋಳಿಗಳು ಹಾಗೂ ನರಿಯಂಥ ಪ್ರಾಣಿಗಳನ್ನು ಪೋಷಿಸಲು ಸಹ ನದಿಗಳು ಸಹಾಯಮಾಡುತ್ತವೆ. ವಾಸ್ತವದಲ್ಲಿ, ನಾವು ನದಿಗಳ ಬಗ್ಗೆ ಹೆಚ್ಚು ಅಭ್ಯಾಸಿಸಿದಂತೆ ಯೆಹೋವನಿಗೆ ಉಪಕಾರಸಲ್ಲಿಸಲು ನಾವು ಹೆಚ್ಚು ನಿರ್ಬಂಧಿಸಲ್ಪಡುತ್ತೇವೆ.

[ಪಾದಟಿಪ್ಪಣಿ]

^ ಪ್ಯಾರ. 3 ಇಸವಿ 2004ರ ಯೆಹೋವನ ಸಾಕ್ಷಿಗಳ ಕ್ಯಾಲೆಂಡರ್‌ನ (ಇಂಗ್ಲಿಷ್‌) ಮೇ/ಜೂನ್‌ ತಿಂಗಳುಗಳನ್ನು ನೋಡಿ.

[ಪುಟ 8ರಲ್ಲಿರುವ ಚೌಕ/ಚಿತ್ರ]

ಅರ್ಜೆಂಟೀನ ಮತ್ತು ಬ್ರಸಿಲ್‌ನ ನಡುವಿನ ಗಡಿಯಲ್ಲಿರುವ ಈಗ್ವಸೂ ಜಲಪಾತವು ಎಲ್ಲಾ ಜಲಪಾತಗಳಿಗಿಂತಲೂ ಅತ್ಯಂತ ಅಗಲವಾದದ್ದೆಂದು ಪರಿಗಣಿಸಲ್ಪಡುತ್ತದೆ. ಅದು ಒಂದು ಬದಿಯಿಂದ ಇನ್ನೊಂದು ಬದಿ ವರೆಗೆ ಮೂರು ಕಿಲೊಮೀಟರ್‌ಗಳಿಗಿಂತಲೂ ಹೆಚ್ಚು ಅಗಲವಾಗಿ ಹರವಿದೆ. ಅದು ಆದಿಸ್ಥಿತಿಯಲ್ಲೇ ಇರುವ ಉಷ್ಣವಲಯದ ಒಂದು ಕಾಡಿನಲ್ಲಿ ನೆಲೆಸಿದ್ದು, ಸುಮಾರು 300 ಚಿಕ್ಕ ಜಲಪಾತಗಳಿಂದ ರಚಿತವಾಗಿದೆ. ಮಳೆಗಾಲದಲ್ಲಿ ಪ್ರತಿ ಸೆಕೆಂಡಿಗೆ ಸುಮಾರು 10,000 ಘನಮೀಟರುಗಳಷ್ಟು ನೀರು ಕೆಳಕ್ಕೆ ಧುಮುಕುತ್ತದೆ.

[ಪುಟ 9ರಲ್ಲಿರುವ ಚಿತ್ರ]

ಟೋನೇ ನದಿ, ಜಪಾನ್‌