ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೂತ್ರ 4 ಗೌರವ ತೋರಿಸಿ

ಸೂತ್ರ 4 ಗೌರವ ತೋರಿಸಿ

ಸೂತ್ರ 4 ಗೌರವ ತೋರಿಸಿ

“ಎಲ್ಲ . . . ಕಿರಿಚಾಟ ಮತ್ತು ನಿಂದಾತ್ಮಕ ಮಾತುಗಳನ್ನು . . . ನಿಮ್ಮಿಂದ ತೆಗೆದುಹಾಕಿರಿ.”—ಎಫೆಸ 4:31.

ಅರ್ಥವೇನು? ಭಿನ್ನಾಭಿಪ್ರಾಯಗಳು ಕಲಹತುಂಬಿದ ಕುಟುಂಬಗಳಲ್ಲೂ ಇರುತ್ತವೆ ಯಶಸ್ವೀ ಕುಟುಂಬಗಳಲ್ಲೂ ಇರುತ್ತವೆ. ವ್ಯತ್ಯಾಸವೇನೆಂದರೆ ಯಶಸ್ವೀ ಕುಟುಂಬಗಳು ಆ ಭಿನ್ನಾಭಿಪ್ರಾಯಗಳನ್ನು ವ್ಯಂಗ್ಯ, ಹೀನಾಯ ಅಥವಾ ಬೇರಾವುದೇ ವಿಧದ ನಿಂದಾತ್ಮಕ ಮಾತುಗಳನ್ನಾಡದೆ ಬಗೆಹರಿಸುತ್ತವೆ. ಇಂಥ ಕುಟುಂಬಗಳ ಸದಸ್ಯರು ತಮ್ಮನ್ನು ಮನೆಮಂದಿ ಹೇಗೆ ಉಪಚರಿಸಬೇಕೆಂದು ಬಯಸುತ್ತಾರೋ ಅದೇ ರೀತಿಯಲ್ಲಿ ಅವರನ್ನು ಉಪಚರಿಸುತ್ತಾರೆ.—ಮತ್ತಾಯ 7:12.

ಪ್ರಾಮುಖ್ಯವೇಕೆ? ಮಾತುಗಳು ಹರಿತವಾದ ಆಯುಧದ ಇರಿತದಂತೆ ನೋವನ್ನುಂಟುಮಾಡಬಲ್ಲವು. ಬೈಬಲ್‌ ನಾಣ್ಣುಡಿಯೊಂದು ಹೇಳುವುದು: “ಕಾಡುವ ಜಗಳಗಂಟಿಯ ಸಹವಾಸಕ್ಕಿಂತಲೂ ಕಾಡಿನ ವಾಸವೇ ಲೇಸು.” (ಜ್ಞಾನೋಕ್ತಿ 21:19) ಈ ಮಾತು ಜಗಳಗಂಟ ಪುರುಷರಿಗೂ ಅನ್ವಯಿಸುತ್ತದೆ. ಮಕ್ಕಳನ್ನು ಬೆಳೆಸುವ ವಿಷಯದಲ್ಲಿ ಬೈಬಲ್‌ ಹೆತ್ತವರಿಗನ್ನುವುದು: “ನಿಮ್ಮ ಮಕ್ಕಳು ಮನಗುಂದಿಹೋಗದಂತೆ ಅವರನ್ನು ಕೆಣಕುತ್ತಾ ಇರಬೇಡಿ.” (ಕೊಲೊಸ್ಸೆ 3:21) ಮಕ್ಕಳ ಮೇಲೆ ಯಾವಾಗಲೂ ಟೀಕಾಪ್ರಹಾರ ಮಾಡುತ್ತಾ ಇದ್ದರೆ ತಾವೆಂದೂ ಹೆತ್ತವರನ್ನು ಮೆಚ್ಚಿಸಲಾರೆವು ಎಂಬ ಭಾವನೆ ಅವರಲ್ಲಿ ಹುಟ್ಟಬಹುದು. ಅಷ್ಟೇ ಅಲ್ಲ ಹೆತ್ತವರನ್ನು ಮೆಚ್ಚಿಸುವ ಪ್ರಯತ್ನವನ್ನೇ ಕೈಬಿಟ್ಟಾರು.

ಹೀಗೆ ಮಾಡಿ. ನೀವು ಎಷ್ಟರ ಮಟ್ಟಿಗೆ ನಿಮ್ಮ ಕುಟುಂಬವನ್ನು ಗೌರವಿಸುತ್ತೀರೆಂದು ಪರಿಶೀಲಿಸಲು ಈ ಕೆಳಗಿನ ಪ್ರಶ್ನೆಗಳನ್ನು ಕೇಳಿಕೊಳ್ಳಿ.

ನನ್ನ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳಿರುವಾಗ ಯಾರಾದರೊಬ್ಬರು ಸಿಟ್ಟಿನಿಂದ ಹೊರನಡೆಯುತ್ತಾರೋ?

ನನ್ನ ಸಂಗಾತಿ ಅಥವಾ ಮಕ್ಕಳೊಂದಿಗೆ ಮಾತಾಡುವಾಗ ದಡ್ಡ, ಪೆದ್ದ ಎಂಬಂಥ ಅವಾಚ್ಯ ಪದಗಳನ್ನು ಬಳಸುತ್ತೇನೋ?

ನಾನು ಬೆಳೆದುಬಂದ ಪರಿಸರದಲ್ಲಿ ಮಾತು ಮಾತಿಗೆ ಅವಾಚ್ಯ ಪದಗಳನ್ನು ಬಳಸಲಾಗುತ್ತಿತ್ತೋ?

ದೃಢನಿರ್ಣಯ ಮಾಡಿ. ಗೌರವಪೂರ್ವಕವಾಗಿ ಮಾತಾಡುವ ವಿಷಯದಲ್ಲಿ ಒಂದೆರಡು ಗುರಿಗಳನ್ನಿಡಿ. (ಸಲಹೆ: ಮಾತಾಡುವಾಗ ಯಾವಾಗಲೂ ಸಂಗಾತಿ/ಮಕ್ಕಳ ಮೇಲೆ ದೂರುಹೊರಿಸದೆ ಬರೇ ನಿಮ್ಮ ಅನಿಸಿಕೆಯನ್ನು ತಿಳಿಸಿ. ಉದಾಹರಣೆಗೆ, “ನೀನು ಯಾವಾಗಲೂ ನನ್ನ ಮನಸ್ಸು ನೋಯಿಸುತ್ತೀ” ಎನ್ನುವ ಬದಲು “ಇದರಿಂದ ನನ್ನ ಮನಸ್ಸಿಗೆ ನೋವಾಗುತ್ತದೆ” ಎಂದು ಹೇಳಿ.)

ನೀವಿಟ್ಟಿರುವ ಗುರಿ(ಗಳ) ಬಗ್ಗೆ ನಿಮ್ಮ ಸಂಗಾತಿಗೆ ಹೇಳಬಾರದೇಕೆ? ಮೂರು ತಿಂಗಳ ನಂತರ ನೀವೆಷ್ಟು ಪ್ರಗತಿಮಾಡಿದ್ದೀರಿ ಎಂದು ಅವರನ್ನು ಕೇಳಿ.

ನಿಮ್ಮ ಮಕ್ಕಳೊಂದಿಗೆ ಮನನೋಯಿಸುವ ರೀತಿಯಲ್ಲಿ ಮಾತಾಡದಿರಲು ಏನೇನು ಮಾಡಬೇಕೆಂದು ಯೋಚಿಸಿ.

ನೀವು ಮಕ್ಕಳೊಂದಿಗೆ ಒರಟಾಗಿ ಇಲ್ಲವೆ ವ್ಯಂಗ್ಯವಾಗಿ ಮಾತಾಡಿರುವಲ್ಲಿ ಅದಕ್ಕಾಗಿ ಅವರ ಬಳಿ ಕ್ಷಮೆ ಕೇಳಬಾರದೇಕೆ? (g09-E 10)

[ಪುಟ 6ರಲ್ಲಿರುವ ಚಿತ್ರ]

ಸಾಗರದ ಅಲೆಗಳು ಗಟ್ಟಿಯಾದ ಬಂಡೆಯನ್ನು ಸವೆಸುವಂತೆ ನಿರಂತರ ಬಳಸಲಾಗುವ ಮನನೋಯಿಸುವ ಮಾತುಗಳು ಕುಟುಂಬ ಬಂಧವನ್ನು ಸವೆಸಬಲ್ಲವು