ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೂತ್ರ 3 ಪರಸ್ಪರ ಸಹಕರಿಸಿ

ಸೂತ್ರ 3 ಪರಸ್ಪರ ಸಹಕರಿಸಿ

ಸೂತ್ರ 3 ಪರಸ್ಪರ ಸಹಕರಿಸಿ

“ಒಬ್ಬನಿಗಿಂತ ಇಬ್ಬರು ಲೇಸು; . . . ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುವನು.” —ಪ್ರಸಂಗಿ 4:9, 10.

ಅರ್ಥವೇನು? ಯಶಸ್ವೀ ವೈವಾಹಿಕ ಜೀವನ ನಡೆಸುತ್ತಿರುವ ದಂಪತಿಗಳು ಬೈಬಲಿನಲ್ಲಿ ತಿಳಿಸಲಾದ ಶಿರಸ್ಸುತನದ ದೈವಿಕ ಏರ್ಪಾಡನ್ನು ಮಾನ್ಯಮಾಡುತ್ತಾರೆ. (ಎಫೆಸ 5:22-24) ಅವರಿಬ್ಬರ ಮನೋಭಾವ “ನಾವು” “ನಮ್ಮದು” ಎಂದಿರುತ್ತದೆ, “ನಾನು” “ನನ್ನದು” ಎಂದಲ್ಲ. ಹೀಗೆ, ಪರಸ್ಪರ ಸಹಕರಿಸುವ ದಂಪತಿಗಳು ತಾವಿನ್ನೂ ಅವಿವಾಹಿತರೋ ಎಂಬಂತೆ ಒಂಟೊಂಟಿಯಾಗಿ ಏನನ್ನೂ ಮಾಡುವುದಿಲ್ಲ. ಬೈಬಲ್‌ ಹೇಳುವಂತೆ ಅವರೀಗ “ಒಂದೇ ಶರೀರ” ಆಗಿದ್ದಾರೆ. ಈ ಪದಗಳು ಪತಿಪತ್ನಿಯರ ಬಿಡಿಸಲಾಗದ ಬಂಧವನ್ನು ಮಾತ್ರವಲ್ಲ ಅವರ ನಡುವಿನ ಆಪ್ತತೆಯನ್ನೂ ಸೂಚಿಸುತ್ತವೆ.—ಆದಿಕಾಂಡ 2:24.

ಪ್ರಾಮುಖ್ಯವೇಕೆ? ನೀವು ಮತ್ತು ನಿಮ್ಮ ಸಂಗಾತಿ ಸಹಕರಿಸದಿರುವಲ್ಲಿ, ಸಮಸ್ಯೆ ಎದ್ದಾಗ ನಿಮ್ಮ ಗಮನ ಅದನ್ನು ಪರಿಹರಿಸುವುದರ ಮೇಲಲ್ಲ ಸಂಗಾತಿಯ ಹುಳುಕು ಹುಡುಕುವುದರಲ್ಲೇ ನೆಟ್ಟಿರುತ್ತದೆ. ಚಿಕ್ಕಪುಟ್ಟ ಸಮಸ್ಯೆಗಳೂ ತಟ್ಟನೆ ಬೆಟ್ಟದಷ್ಟು ದೊಡ್ಡದಾಗಬಹುದು. ವ್ಯತಿರಿಕ್ತವಾಗಿ, ನೀವಿಬ್ಬರೂ ಪರಸ್ಪರ ಸಹಕರಿಸುವಲ್ಲಿ ಒಂದಕ್ಕೊಂದು ಡಿಕ್ಕಿಹೊಡೆಯಲಿರುವ ಎರಡು ವಿಮಾನಗಳ ಇಬ್ಬರು ಪೈಲಟ್‌ಗಳಂತಿರದೆ ಒಂದೇ ವಿಮಾನದ ಪೈಲಟ್‌ ಮತ್ತು ಸಹಪೈಲಟ್‌ರಂತೆ ಇರುವಿರಿ. ಭಿನ್ನಾಭಿಪ್ರಾಯದ ಬಿರುಕು ಕಾಣಿಸಿಕೊಳ್ಳುವಾಗ ಒಬ್ಬರನ್ನೊಬ್ಬರು ದೂರುತ್ತಾ ಸಮಯ ಮತ್ತು ಭಾವನಾತ್ಮಕ ಶಕ್ತಿಯನ್ನು ಹಾಳುಮಾಡದೆ ಅದನ್ನು ಪರಿಹರಿಸಲು ದಾರಿ ಕಂಡುಹಿಡಿಯುವಿರಿ.

ಹೀಗೆ ಮಾಡಿ. ನೀವು ಎಷ್ಟರ ಮಟ್ಟಿಗೆ ಸಹಕರಿಸುತ್ತೀರೆಂದು ಪರಿಶೀಲಿಸಲು ಈ ಕೆಳಗಿನ ಪ್ರಶ್ನೆಗಳನ್ನು ಕೇಳಿಕೊಳ್ಳಿ.

ನಾನು ಸಂಪಾದಿಸಿದ ಮಾತ್ರಕ್ಕೆ “ಎಲ್ಲಾ ಹಣ ನನ್ನದೇ” ಎಂದನ್ನುತ್ತೇನೋ?

ನನ್ನ ಸಂಗಾತಿಯ ಸಂಬಂಧಿಕರನ್ನು, ಆಪ್ತ ಸಂಬಂಧಿಕರನ್ನು ಕೂಡ ದೂರ ಇಡುತ್ತೇನೋ?

ಸಂಗಾತಿಯಿಂದ ದೂರವಿದ್ದಾಗ ಮಾತ್ರ ನನಗೆ ನೆಮ್ಮದಿ ಸಿಗುತ್ತದೋ?

ದೃಢನಿರ್ಣಯ ಮಾಡಿ. ನೀವು ಹೆಚ್ಚು ಸಹಕರಿಸಲು ಬಯಸುತ್ತೀರೆಂದು ನಿಮ್ಮ ಸಂಗಾತಿಗೆ ತೋರಿಸಬಹುದಾದ ಒಂದೆರಡು ವಿಧಗಳನ್ನು ಯೋಚಿಸಿ.

ಇದರ ಬಗ್ಗೆ ನಿಮ್ಮ ಸಂಗಾತಿಯ ಸಲಹೆಯನ್ನು ಕೇಳಬಾರದೇಕೆ? (g09-E 10)

[ಪುಟ 5ರಲ್ಲಿರುವ ಚಿತ್ರ]

ನೀವಿಬ್ಬರು ಸಹಕರಿಸುವಾಗ ಒಂದೇ ವಿಮಾನದ ಪೈಲಟ್‌ ಮತ್ತು ಸಹಪೈಲಟ್‌ರಂತೆ ಇರುತ್ತೀರಿ