ಮಾಹಿತಿ ಇರುವಲ್ಲಿ ಹೋಗಲು

ಸೋಲಿಲ್ಲದೆ ಸಾಗುತಿರುವ ಬೈಬಲ್‌

ಸೋಲಿಲ್ಲದೆ ಸಾಗುತಿರುವ ಬೈಬಲ್‌

ಸೋಲಿಲ್ಲದೆ ಸಾಗುತಿರುವ ಬೈಬಲ್‌

ಬೈಬಲ್‌ ಹಾಳಾಗದೆ ಇಲ್ಲಿಯ ತನಕ ಉಳಿದುಕೊಂಡಿದೆ ಅಂದ್ರೆ ಅದೊಂದು ಅದ್ಭುತ ಅಂತಾನೇ ಹೇಳಬಹುದು. ಬೈಬಲನ್ನು 1900 ವರ್ಷಗಳ ಹಿಂದೆ ಬರೆಯಲಾಯಿತು. ಮೊದಲು ಇದನ್ನು ಹಾಳಾಗುವ ವಸ್ತುಗಳಾದ ಪಪೈರಸ್‌ ಹಾಳೆಗಳು ಮತ್ತು ಪ್ರಾಣಿಗಳ ಚರ್ಮದ ಮೇಲೆ ಬರೆಯಲಾಯಿತು. ಇವತ್ತಿನ ಕೆಲವು ಜನರು ಮಾತಾಡುವ ಭಾಷೆಯನ್ನೇ ಬೈಬಲ್‌ ಮೂಲ ಬರಹದಲ್ಲಿ ಬಳಸಲಾಗಿದೆ. ಅಧಿಕಾರದಲ್ಲಿ ಇರುವವರು, ಚಕ್ರವರ್ತಿಗಳು, ಧಾರ್ಮಿಕ ನಾಯಕರು ಬೈಬಲನ್ನು ಸರ್ವನಾಶ ಮಾಡಲು ತುಂಬ ಪ್ರಯತ್ನಿಸಿದ್ದಾರೆ.

ಬೈಬಲ್‌ ಇಷ್ಟೆಲ್ಲ ಅಡ್ಡಿತಡೆಗಳನ್ನು ಜಯಿಸಿ, ಜನರಿಗೆ ಚಿರಪರಿಚಿತವಾದ ಪುಸ್ತಕವಾಗಿ ಹೇಗೆ ಪರಿಣಮಿಸಿತು? ಅದಕ್ಕಿರುವ ಎರಡು ಕಾರಣಗಳನ್ನು ನೋಡಿ.

ಸಂರಕ್ಷಣೆಗೆ ಕಾರಣವಾದ ಹಲವಾರು ಪ್ರತಿಗಳು

ಇಸ್ರಾಯೇಲ್ಯರು ಬೈಬಲ್‌ ಮೂಲ ಬರಹವನ್ನು ಸಂರಕ್ಷಿಸಿದ್ದರು. ಆ ಸುರುಳಿಗಳನ್ನು ಅವರು ಜೋಪಾನವಾಗಿ ಇಟ್ಟಿದ್ದಷ್ಟೇ ಅಲ್ಲ, ಅದರ ಅನೇಕ ನಕಲು ಪ್ರತಿಗಳನ್ನು ಮಾಡಿದರು. ಉದಾಹರಣೆಗೆ ಇಸ್ರಾಯೇಲ್ಯರ ರಾಜರು, “ಲೇವಿಯರಾದ ಪುರೋಹಿತರ ಹತ್ರ ಇರೋ ನಿಯಮ ಪುಸ್ತಕ ತಗೊಂಡು . . . ಒಂದು ಪ್ರತಿಯನ್ನ ಮಾಡಿಟ್ಕೊಬೇಕು” ಅನ್ನೋ ನಿಯಮ ಇತ್ತು.—ಧರ್ಮೋಪದೇಶಕಾಂಡ 17:18.

ಅನೇಕ ಇಸ್ರಾಯೇಲ್ಯರು ದೇವರ ವಾಕ್ಯವನ್ನು ಓದಲು ತುಂಬ ಇಷ್ಟಪಡುತ್ತಿದ್ದರು. ಒಳ್ಳೇ ತರಬೇತಿ ಪಡೆದ ಬರಹಗಾರರು ತುಂಬ ಜಾಗೃತೆಯಿಂದ ಮೂಲ ಪ್ರತಿಯನ್ನು ನಕಲು ಮಾಡಿದ್ರು. ಅಂಥ ಬರಹಗಾರರಲ್ಲಿ ದೇವಭಯವಿದ್ದ ಒಬ್ಬ ವ್ಯಕ್ತಿ ಎಜ್ರ. “ಇವ್ನೊಬ್ಬ ನಕಲುಗಾರ. ಇಸ್ರಾಯೇಲ್‌ ದೇವರಾದ ಯೆಹೋವ ಮೋಶೆಗೆ ಕೊಟ್ಟಿದ್ದ ನಿಯಮ ಪುಸ್ತಕದಲ್ಲಿ ಇವನು ಪರಿಣಿತ.” (ಎಜ್ರ 7:6) ಮಸೋರೀಟ್ಸ್‌ ಅನ್ನೋ ಒಂದು ಗುಂಪು 6 ರಿಂದ 10 ನೇ ಶತಮಾನದಲ್ಲಿ ಹೀಬ್ರು ಶಾಸ್ತ್ರಗಳನ್ನು ಅಥವಾ ಹಳೆಯ ಒಡಂಬಡಿಕೆಯನ್ನು ನಕಲು ಮಾಡಿದ್ರು. ತಪ್ಪಾಗದೆ ಇರೋಕಾಗಿ ಪ್ರತಿಯೊಂದು ಅಕ್ಷರಗಳನ್ನು ಅವರು ಜಾಗೃತೆಯಿಂದ ನಕಲು ಮಾಡಿದ್ರು. ಇಷ್ಟು ಜಾಗೃತೆಯಿಂದ ನಕಲು ಮಾಡಿದ್ದಕ್ಕಾಗಿ ಬೈಬಲ್‌ ನಿಖರವಾಗಿದೆ. ಶತ್ರುಗಳು ನಾಶಮಾಡಲು ಎಷ್ಟೇ ಪ್ರಯತ್ನಪಟ್ಟರೂ ಅದು ಹಾಗೇ ಉಳಿದುಕೊಳ್ಳಲು ಸಹಾಯವಾಗಿದೆ.

ಉದಾಹರಣೆಗೆ, ಕ್ರಿಸ್ತ ಪೂರ್ವ 168 ರಲ್ಲಿ ಸಿರಿಯಾದ ಅಧಿಕಾರಿ 4 ನೇ ಆ್ಯಂಟಿಯಾಕಸ್‌ ಇಡೀ ಪ್ಯಾಲಸ್ತೀನಿನಲ್ಲಿದ್ದ ಹೀಬ್ರು ಶಾಸ್ತ್ರ ವಚನಗಳನ್ನು ಸರ್ವನಾಶ ಮಾಡಲು ಪ್ರಯತ್ನಪಟ್ಟ. ಯೆಹೂದಿ ಇತಿಹಾಸ ಹೇಳುವುದು: “ಅವರು ತಮಗೆ ಸಿಕ್ಕಿದ ಎಲ್ಲಾ ಸುರುಳಿಗಳನ್ನು ಹರಿದು ಸುಟ್ಟು ಹಾಕಿದರು.” ಯೆಹೂದಿ ಎನ್‌ಸೈಕ್ಲೋಪೀಡಿಯಾ ಹೇಳುವುದು: “ಈ ಕೆಲಸ ಮಾಡುತ್ತಿದ್ದ ಅಧಿಕಾರಿಗಳು ಕೋಪದಿಂದ ಕುದಿಯುತ್ತಿದ್ದರು . . . ಯಾರ ಹತ್ತಿರವಾದ್ರೂ ಈ ಪವಿತ್ರ ಪುಸ್ತಕ ಸಿಕ್ಕಿದ್ರೆ ಅವರಿಗೆ ಮರಣದಂಡನೆ ವಿಧಿಸುತ್ತಿದ್ದರು.” ಹಾಗಿದ್ರೂ ಪ್ಯಾಲಸ್ತೀನಿನಲ್ಲಿದ್ದ ಯೆಹೂದಿಗಳ ಹತ್ತಿರ ಮತ್ತು ಬೇರೆ ದೇಶಗಳಲ್ಲಿದ್ದ ಜನರ ಹತ್ತಿರ ಈ ಪ್ರತಿಗಳು ಉಳಿದುಕೊಂಡವು.

ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥ ಅಥವಾ “ಹೊಸ ಒಡಂಬಡಿಕೆ” ಬರೆದು ಮುಗಿಸಿದ ಕೂಡಲೇ ಅದರಲ್ಲಿರುವ ಪತ್ರಗಳ, ಭವಿಷ್ಯವಾಣಿಗಳ ಮತ್ತು ಐತಿಹಾಸಿಕ ಘಟನೆಗಳ ಅನೇಕ ನಕಲು ಪ್ರತಿಗಳನ್ನು ಮಾಡಿದ್ರು. ಉದಾಹರಣೆಗೆ, ಯೋಹಾನ ತನ್ನ ಸುವಾರ್ತಾ ಪುಸ್ತಕವನ್ನು ಎಫೆಸದಲ್ಲಿ ಅಥವಾ ಎಫೆಸದ ಹತ್ತಿರ ಬರೆದ. ಅವನು ಈ ಸುವಾರ್ತಾ ಪುಸ್ತಕವನ್ನು ಬರೆದು 50 ವರ್ಷದೊಳಗೆ ಅದರ ಒಂದು ನಕಲು ಪ್ರತಿಯ ಭಾಗ ನೂರಾರು ಮೈಲಿ ದೂರದಲ್ಲಿದ್ದ ಈಜಿಪ್ಟಲ್ಲಿ ಸಿಗ್ತು ಅಂತ ಪರಿಣಿತರು ಹೇಳ್ತಾರೆ. ದೂರದೂರದಲ್ಲಿದ್ದ ಕ್ರೈಸ್ತರ ಹತ್ತಿರ ಶಾಸ್ತ್ರವಚನಗಳ ನಕಲು ಪ್ರತಿ ಇತ್ತು ಅಂತ ಇದು ಸೂಚಿಸುತ್ತೆ.

ಈ ಪ್ರತಿಗಳು ಜನರ ಕೈಯಲ್ಲಿ ಇದ್ದಿದ್ದರಿಂದಾನೇ ಯೇಸು ಬಂದು ಹೋಗಿ ಎಷ್ಟೋ ಶತಮಾನಗಳಾದ್ರೂ ಅವು ಹಾಗೇ ಉಳಿದುಕೊಳ್ತು. ಕ್ರಿಸ್ತ ಶಕ 303 ಫೆಬ್ರವರಿ 23 ರ ಬೆಳಗ್ಗೆ ರೋಮನ್‌ ಚಕ್ರವರ್ತಿ ಡಯಕ್ಲೀಷನ್‌, ಸೈನಿಕರು ಚರ್ಚ್‌ ಬಾಗಿಲು ಮುರಿಯುವುದನ್ನು ಮತ್ತು ಶಾಸ್ತ್ರವಚನಗಳ ಪ್ರತಿಗಳನ್ನು ಸುಟ್ಟುಹಾಕುವುದನ್ನು ನೋಡುತ್ತಾ ನಿಂತಿದ್ದ. ಪ್ರತಿಗಳನ್ನು ಸುಟ್ಟುಹಾಕಿದ್ರೆ ಕ್ರೈಸ್ತ ಧರ್ಮವನ್ನೇ ಸರ್ವನಾಶ ಮಾಡಬಹುದು ಅಂತ ಡಯಕ್ಲೀಷನ್‌ ಯೋಚಿಸಿದ್ದ. ಮಾರನೇ ದಿನಾನೇ ರೋಮನ್‌ ಸಾಮ್ರಾಜ್ಯದಲ್ಲಿದ್ದ ಎಲ್ಲಾ ಪ್ರತಿಗಳನ್ನು ಜನರ ಕಣ್ಣೆದುರಿಗೆ ಸುಟ್ಟುಹಾಕಬೇಕು ಅಂತ ಆಜ್ಞೆ ಕೊಡ್ತಾನೆ. ಹಾಗಿದ್ರೂ ಕೆಲವು ಪ್ರತಿಗಳು ಉಳಿದುಕೊಳ್ತು. ಅಷ್ಟೇ ಅಲ್ಲ, ನಕಲು ಪ್ರತಿಗಳನ್ನೂ ಮಾಡಲಾಯಿತು. ಡಯಕ್ಲೀಷನ್‌ ಜನರನ್ನು ಹಿಂಸಿಸಿದ ಸ್ವಲ್ಪ ಸಮಯದಲ್ಲೇ ಗ್ರೀಕ್‌ ಬೈಬಲಿನ ದೊಡ್ಡ ಭಾಗದ ಎರಡು ನಕಲು ಪ್ರತಿಗಳನ್ನು ಮಾಡಲಾಯಿತು. ಆ ಪ್ರತಿಗಳು ಇಂದಿಗೂ ಉಳಿದುಕೊಂಡಿವೆ. ಅದರ ಒಂದು ಪ್ರತಿ ರೋಮಿನಲ್ಲಿದೆ, ಇನ್ನೊಂದು ಲಂಡನಿನಲ್ಲಿರೋ ಬ್ರಿಟೀಷ್‌ ಲೈಬ್ರರಿಯಲ್ಲಿದೆ.

ಬೈಬಲಿನ ಮೂಲ ಹಸ್ತಪ್ರತಿಗಳು ಈಗ ಇಲ್ಲದೆ ಇದ್ದರೂ ಇಡೀ ಬೈಬಲಿನ ಅಥವಾ ಅದರ ಭಾಗಗಳ ಸಾವಿರಾರು ನಕಲು ಪ್ರತಿಗಳು ಇಲ್ಲಿಯ ತನಕ ಉಳಿದುಕೊಂಡಿವೆ. ಈ ನಕಲು ಪ್ರತಿಗಳಲ್ಲಿ ಕೆಲವು ತುಂಬಾ ಹಳೆಯವು. ಮೂಲ ಪ್ರತಿಯಲ್ಲಿರುವ ಮಾಹಿತಿ ನಕಲು ಪ್ರತಿಯಲ್ಲೂ ಇದೆಯಾ ಅಥವಾ ಬದಲಾಗಿದೆಯಾ? ಹೀಬ್ರು ಶಾಸ್ತ್ರವಚನಗಳ ಬಗ್ಗೆ ಡಬ್ಲ್ಯೂ. ಹೆಚ್‌. ಗ್ರೀನ್‌ ಹೇಳಿದ್ದು: “ಪ್ರಾಚೀನ ಗ್ರಂಥಗಳಲ್ಲೇ ಇಷ್ಟು ನಿಖರವಾಗಿ ಬರೆದ ಗ್ರಂಥ ಬೇರೆ ಯಾವುದೂ ಇಲ್ಲ ಅಂತ ಧೈರ್ಯವಾಗಿ ಹೇಳಬಹುದು.” ಬೈಬಲ್‌ ಹಸ್ತಪ್ರತಿಗಳ ಬಗ್ಗೆ ಚೆನ್ನಾಗಿ ಅಧ್ಯಯನ ಮಾಡಿದ ಸರ್‌ ಫ್ಯಾಡ್ರಿಕ್‌ ಕೆನ್ಯನ್‌ ಅವರು ಕ್ರೈಸ್ತ ಗ್ರೀಕ್‌ ಶಾಸ್ತ್ರ ವಚನಗಳ ಬಗ್ಗೆ ಹೇಳಿದ್ದು: “ಮೂಲ ಪ್ರತಿಗಳು ಮತ್ತು ಈಗ ಉಳಿದುಕೊಂಡಿರುವ ಮೊದಲ ಪ್ರತಿಗಳ ನಡುವೆ ಇರುವ ದಿನಾಂಕ ಅದೊಂದು ಸಣ್ಣ ವಿಷಯವಾಗಿರೋದ್ರಿಂದ ಅದನ್ನು ಕಡೆಗಣಿಸುವ ಸಾಧ್ಯತೆ ಇದೆ. ಮೂಲಪ್ರತಿಯಲ್ಲಿರುವ ವಿಷಯಗಳೇ ಇವತ್ತು ನಮ್ಮ ಕೈಗೆ ಸಿಕ್ಕಿದೆ ಅನ್ನುವ ವಿಷಯದಲ್ಲಿರುವ ಸಂಶಯವನ್ನು ತೆಗೆದುಹಾಕಲಾಗಿದೆ. ಹೊಸ ಒಂಡಂಬಡಿಕೆ ಪುಸ್ತಕಗಳ ಸತ್ಯತೆ ಮತ್ತು ಪ್ರಾಮಾಣಿಕತೆ ಇವೆರಡನ್ನೂ ಅಂತಿಮವಾಗಿ ಸ್ಥಿರೀಕರಿಸಲಾಗಿದೆ ಅಂತ ಪರಿಗಣಿಸಬಹುದು.” ಅವರು ಇನ್ನೂ ಹೇಳಿದ್ದು: “ಬೈಬಲ್‌ ಬರಹದಲ್ಲಿ ಬದಲಾವಣೆ ಆಗಿಲ್ಲ ಅನ್ನುವುದನ್ನು ನಾವು ಖಚಿತವಾಗಿ ಹೇಳಬಹುದು . . . ಈ ಲೋಕದಲ್ಲಿರುವ ಬೇರೆ ಯಾವ ಪುಸ್ತಕದ ಬಗ್ಗೆನೂ ಈ ರೀತಿ ಹೇಳೋಕೆ ಆಗಲ್ಲ.”

ಬೈಬಲ್‌ ಭಾಷಾಂತರ

ಬೈಬಲ್‌ ಜನರಿಗೆ ಚಿರಪರಿಚಿತ ಆಗಿರೋದಕ್ಕೆ ಇರುವ ಎರಡನೇ ಮುಖ್ಯ ಕಾರಣ ಏನಂದ್ರೆ ಅದು ಅನೇಕ ಭಾಷೆಗಳಲ್ಲಿ ಲಭ್ಯವಿರೋದೆ. ಇದು ದೇವರ ಉದ್ದೇಶವನ್ನ ಪೂರೈಸಿದೆ. ಆ ಉದ್ದೇಶ ಏನಂದ್ರೆ ಎಲ್ಲಾ ದೇಶದ ಮತ್ತು ಭಾಷೆಯ ಜನ್ರು ದೇವರ ಬಗ್ಗೆ ತಿಳ್ಕೊಂಡು “ಪವಿತ್ರಶಕ್ತಿಗೆ ಮತ್ತು ಸತ್ಯಕ್ಕೆ ತಕ್ಕ ಹಾಗೆ“ ಆತನನ್ನ ಆರಾಧಿಸಬೇಕು ಅನ್ನೋದೆ ಆಗಿದೆ.—ಯೋಹಾನ 4:23, 24; ಮೀಕ 4:2.

ಹೀಬ್ರು ಶಾಸ್ತ್ರ ವಚನಗಳನ್ನ ಗ್ರೀಕ್‌ ಭಾಷೆಗೆ ಮೊದಲು ಭಾಷಾಂತರ ಮಾಡಿದ ಆವೃತ್ತಿಯೇ ಸೆಪ್ಟೂಅಜೆಂಟ್‌. ಇದನ್ನು ಪ್ಯಾಲಸ್ತೀನಿನ ಹೊರಗಡೆ ಇದ್ದ ಗ್ರೀಕ್‌ ಮಾತಾಡೋ ಯೆಹೂದ್ಯರಿಗಾಗಿ ಮಾಡಲಾಯಿತು. ಯೇಸು ಭೂಮಿಗೆ ಬರುವುದಕ್ಕೂ ಎರಡು ಶತಮಾನಗಳ ಮುಂಚೆನೇ ಇದರ ಭಾಷಾಂತರ ಮುಗಿಯಿತು. ಇದು ಪೂರ್ಣಗೊಂಡ ಕೆಲವು ಶತಮಾನಗಳಲ್ಲಿ ಇಡೀ ಬೈಬಲನ್ನು ತುಂಬಾ ಭಾಷೆಗಳಲ್ಲಿ ಅನುವಾದಿಸಲಾಯಿತು. ಆದರೆ ರಾಜರು ಮತ್ತು ಪುರೋಹಿತರು ತಮ್ಮೆಲ್ಲ ಅಧಿಕಾರವನ್ನು ಬಳಸಿ ಜನ ಸಾಮಾನ್ಯರಿಗೆ ಬೈಬಲ್‌ ಸಿಗದೇ ಇರೋ ತರ ತುಂಬಾ ಪ್ರಯತ್ನ ಮಾಡಿದ್ರು. ಇವರು ಜನ ಸಾಮಾನ್ಯರ ಭಾಷೆಯಲ್ಲಿ ಬೈಬಲ್‌ ಭಾಷಾಂತರ ಆಗೋದನ್ನೂ ತಡೆದರು. ಹೀಗೆ ಜನರು ಆಧ್ಯಾತ್ಮಿಕ ಅಂಧಕಾರದಲ್ಲಿ ಇರುವ ತರ ಮಾಡಿದ್ರು.

ಚರ್ಚ್‌ ಮತ್ತು ಸರಕಾರ ವಿರೋಧಿಸಿದ್ರೂ ಕೆಲವರು ತಮ್ಮ ಜೀವವನ್ನೇ ಪಣಕ್ಕಿಟ್ಟು ಜನಸಾಮಾನ್ಯರ ಭಾಷೆಯಲ್ಲಿ ಬೈಬಲನ್ನು ಅನುವಾದಿಸಿದರು. ಉದಾಹರಣೆಗೆ, 1530 ರಲ್ಲಿ ಆಕ್ಸ್‌ಫರ್ಡ್‌ನಲ್ಲಿ ಶಿಕ್ಷಣ ಪಡೆದ ವಿಲಿಯಂ ಟಿಂಡೆಲ್‌ ಹೀಬ್ರು ಶಾಸ್ತ್ರಗಳ ಮೊದಲ ಐದು ಪುಸ್ತಕಗಳನ್ನು ಮುದ್ರಿಸಿದರು. ತುಂಬಾ ವಿರೋಧ ಇದ್ರು ಹೀಬ್ರುವಿನಿಂದ ನೇರವಾಗಿ ಇಂಗ್ಲಿಷಿಗೆ ಭಾಷಾಂತರ ಮಾಡಿದ ಮೊದಲ ವ್ಯಕ್ತಿ ಇವರು. ಯೆಹೋವ ಅನ್ನೋ ಹೆಸರು ಉಪಯೋಗಿಸಿದ ಮೊದಲ ಭಾಷಾಂತರಗಾರ ಟೆಂಡಲ್‌ ಆಗಿದ್ದಾರೆ. ಸ್ಪ್ಯಾನಿಷ್‌ ಬೈಬಲ್‌ ವಿದ್ವಾಂಸರಾದ ಕ್ಯಾಸಿಯೋ ಡೊರೋ ಡೀ ರೈನಾ ಅವರು ಸ್ಪ್ಯಾನಿಷ್‌ ಬೈಬಲನ್ನು ಭಾಷಾಂತರ ಮಾಡುತ್ತಿದ್ದ ಆರಂಭದ ಸಮಯದಲ್ಲಿ ಕ್ಯಾಥೋಲಿಕ್‌ ಹಿಂಸಕರಿಂದ ನಿರಂತರವಾಗಿ ಸಾವಿನ ಅಪಾಯವನ್ನ ಎದುರಿಸುತ್ತಿದ್ರು. ಅವರು ತಮ್ಮ ಭಾಷಾಂತರವನ್ನು ಪೂರ್ಣಗೊಳಿಸೋಕೆ ಇಂಗ್ಲೆಂಡ್‌, ಜರ್ಮನಿ, ಫ್ರಾನ್ಸ್‌, ಹೋಲ್ಯಾಂಡ್‌ ಮತ್ತು ಸ್ವಿಜ಼ರ್ಲ್ಯಾಂಡ್‌ಗಳಂತ ಜಾಗಗಳಿಗೆ ಹೋದ್ರು. *

ಇವತ್ತು ಬೈಬಲ್‌ ಎಷ್ಟೋ ಭಾಷೆಗಳಲ್ಲಿ ಭಾಷಾಂತರ ಆಗ್ತಾ ಇದೆ. ಅಷ್ಟೇ ಅಲ್ಲ, ಲಕ್ಷಾಂತರ ಪ್ರತಿಗಳನ್ನು ಮುದ್ರಿಸಲಾಗುತ್ತಿದೆ. ಜನರಿಗೆ ಚಿರಪರಿಚಿತವಾಗಿರೋ ಈ ಬೈಬಲ್‌ ಉಳಿದಿರುವುದು ಅಪೊಸ್ತಲ ಪೇತ್ರನ ಮಾತು ಎಷ್ಟು ಸತ್ಯ ಅಂತ ತೋರಿಸುತ್ತೆ. ಅವನು ಹೇಳಿದ್ದು: “ಹುಲ್ಲು ಬಾಡಿಹೋಗುತ್ತೆ, ಹೂವು ಉದುರಿಹೋಗುತ್ತೆ. ಆದ್ರೆ ಯೆಹೋವನ ಮಾತು ಯಾವಾಗ್ಲೂ ಇರುತ್ತೆ.”—1 ಪೇತ್ರ 1:24, 25.

[ಪಾದಟಿಪ್ಪಣಿ]

^ ಪ್ಯಾರ. 14 ರೈನಾರ ಆವೃತ್ತಿ 1569 ರಲ್ಲಿ ಮುದ್ರಿಸಲಾಯಿತು. 1602 ರಲ್ಲಿ ಸಿಪ್ರಿಯಾನೋ ಡೇ ವಲೇರಾ ಅವರು ಇದನ್ನ ಪರಿಷ್ಕರಿಸಿದ್ರು.

[ಚೌಕ/ಚಿತ್ರ]

ನಾನು ಯಾವ ಭಾಷಾಂತರ ಓದಬೇಕು?

ಅನೇಕ ಭಾಷೆಗಳಲ್ಲಿ ಎಷ್ಟೋ ಬೈಬಲ್‌ ಭಾಷಾಂತರಗಳಿವೆ. ಕೆಲವು ಭಾಷಾಂತರಗಳಲ್ಲಿ ತುಂಬ ಕಠಿಣ ಮತ್ತು ಹಳೆಯ ಪದಗಳನ್ನು ಬಳಸಿರುತ್ತಾರೆ. ಆದರೆ ಇನ್ನೂ ಕೆಲವು ಭಾಷಾಂತರ ಓದಲು ಸುಲಭವಾಗಿರುತ್ತೆ. ಆದರೆ ನಿಖರವಾದ ಮತ್ತು ಸಂಪೂರ್ಣ ಮಾಹಿತಿ ಇರಲ್ಲ. ಮತ್ತೂ ಕೆಲವು ಭಾಷಾಂತರಗಳಲ್ಲಿ, ಅಕ್ಷರಾರ್ಥವಾಗಿ ಪದ ಅನುವಾದ ಮಾಡಲಾಗಿರುತ್ತೆ.

ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಪವಿತ್ರ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರ ಇಂಗ್ಲಿಷ್‌ ಬೈಬಲನ್ನು ಮೂಲ ಭಾಷೆಯಿಂದ ಅನುವಾದಿಸಲಾಯಿತು. ಭಾಷಾಂತರವಾದ ಈ ಬೈಬಲನ್ನೇ ಬಳಸಿ ಬೇರೆ 60 ಭಾಷೆಗಳಿಗೆ ಅನುವಾದಿಸಲಾಯಿತು. ಅಷ್ಟೇ ಅಲ್ಲ, ಅವರು ಮೂಲ ಭಾಷೆಯ ಬರಹಕ್ಕೂ ಹೋಲಿಸಿ ನೋಡ್ತಿದ್ರು. ನೂತನ ಲೋಕ ಭಾಷಾಂತರದ ಗುರಿ ಏನಂದ್ರೆ, ಮೂಲ ಭಾಷೆಯ ಬರಹವನ್ನು ಅಕ್ಷರಾರ್ಥವಾಗಿ ಇಟ್ಟರೂ ಅದರ ಅರ್ಥವನ್ನು ಮರೆ ಮಾಡದೆ ಇರೋದು. ಪುರಾತನ ಕಾಲದಲ್ಲಿದ್ದ ಜನರು ಮೂಲ ಭಾಷೆಯ ಬರಹವನ್ನು ಹೇಗೆ ಅರ್ಥ ಮಾಡಿಕೊಂಡ್ರೋ ಹಾಗೇ ಇವತ್ತಿನ ಜನರು ಈ ಬೈಬಲನ್ನು ಅರ್ಥ ಮಾಡಿಕೊಳ್ಳಬೇಕು ಅನ್ನೋದು ಭಾಷಾಂತರಗಾರರ ಗುರಿಯಾಗಿತ್ತು.

ಕೆಲವು ಭಾಷಾ ಪಂಡಿತರು ನಿಖರತೆಯ ಬಗ್ಗೆ ತಿಳಿಯಲು ಆಧುನಿಕ ಬೈಬಲ್‌ ಭಾಷಾಂತರಗಳನ್ನು ಪರೀಕ್ಷಿಸಿದ್ರು. ಅದರಲ್ಲಿ ನೂತನ ಲೋಕ ಭಾಷಾಂತರ ಕೂಡ ಇತ್ತು. ಅವರಲ್ಲಿ ಒಬ್ಬ ಪಂಡಿತ, ಜೇಸನ್‌ ಡೇವಿಡ್‌ ಬೀಡನ್‌. ಇವರು ಅಮೆರಿಕಾದ ಉತ್ತರ ಅರಿಜೋನಾ ವಿಶ್ವವಿದ್ಯಾನಿಲಯದಲ್ಲಿ ಧಾರ್ಮಿಕ ಅಧ್ಯಯನದ ಸಹ-ಪ್ರಾಧ್ಯಾಪಕರು. ಇವರು 2003 ರಲ್ಲಿ 9 ಬೈಬಲುಗಳ ಅಧ್ಯಯನ ಮಾಡಿ 200 ಪುಟಗಳಿರೋ ಪುಸ್ತಕವನ್ನು ಮುದ್ರಿಸಿದರು. ಆ 9 ಬೈಬಲುಗಳು “ಇಂಗ್ಲೀಷ್‌ ಮಾತಾಡುವ ಲೋಕದ ಬೇರೆ ಬೇರೆ ಕಡೆಗಳಲ್ಲಿ ಬಳಕೆಯಲ್ಲಿದ್ದ ಬೈಬಲ್‌ ಆಗಿತ್ತು.” * ಇವರು ಹೆಚ್ಚು ವಿವಾದಾತ್ಮಕವಾದ ವಚನಗಳನ್ನು ಪರೀಕ್ಷಿಸುತ್ತಿದ್ರು. ಯಾಕಂದ್ರೆ “ಭಾಷಾಂತರವಾಗಿರೋ ಇಂಥ ವಚನಗಳಲ್ಲೇ ತಿರುಚುವ ಸಾಧ್ಯತೆ ಹೆಚ್ಚಾಗಿತ್ತು.” ಇಂಗ್ಲಿಷ್‌ ಭಾಷಾಂತರದ ಪ್ರತಿಯೊಂದು ಭಾಗವನ್ನು ಗ್ರೀಕ್‌ ಬರಹದ ಜೊತೆ ಹೋಲಿಸಿ ನೋಡಿ ಎಲ್ಲಿ ತಪ್ಪರ್ಥ ಬರುತ್ತೆ ಅಂತ ಕಂಡು ಹಿಡಿಯುತ್ತಿದ್ರು. ಕೊನೆಗೆ ಅವರು ಏನು ಹೇಳಿದ್ರು?

ಬೀಡನ್‌ ಅವರು ಹೇಳಿದ್ದು ಸಮಾಜದಲ್ಲಿ ಇರುವವರು ಮತ್ತು ಅನೇಕ ಪಂಡಿತರು ನೂತನ ಲೋಕ ಭಾಷಾಂತರವನ್ನು ಮಾಡಿದ ಭಾಷಾಂತರಗಾರರು ತಮ್ಮ ಧರ್ಮಕ್ಕೆ ತಕ್ಕ ಹಾಗೇ ತಿರುಚಿರೋದ್ರಿಂದ ವ್ಯತ್ಯಾಸ ಇದೆ ಅಂತ ನೆನಸ್ತಾರೆ. ಆಗಿದ್ರೂ ಅವರು ಹೇಳಿದ್ದು: “ಇಷ್ಟು ವ್ಯತ್ಯಾಸ ಬರೋಕೆ ಕಾರಣ, ನೂತನ ಲೋಕ ಭಾಷಾಂತರವನ್ನು ನಿಖರವಾಗಿ ಮಾಡೋ ಉದ್ದೇಶದಿಂದ ಅಕ್ಷರಾರ್ಥವಾಗಿ ಮತ್ತು ಹಳೆಯ ಶೈಲಿಯಲ್ಲಿ ಭಾಷಾಂತರ ಮಾಡಲಾಗಿದೆ. ನೂತನ ಲೋಕ ಭಾಷಾಂತರದಲ್ಲಿ ಬಳಸಿರೋ ಕೆಲವೊಂದು ವಿಷಯಗಳನ್ನು ಬೀಡನ್‌ ಅವರು ಒಪ್ಪದೇ ಇದ್ರೂ “ನಾನು ಹೋಲಿಸಿ ನೋಡಿರೋ ಭಾಷಾಂತರಗಳಲ್ಲೇ ಇದು ಹೆಚ್ಚು ನಿಖರವಾಗಿದೆ. ಇದೊಂದು ಒಳ್ಳೇ ಭಾಷಾಂತರ” ಅಂತ ಹೇಳಿದ್ರು.

ಇಸ್ರಾಯೇಲಿನ ಒಬ್ಬ ಹೀಬ್ರು ಪಂಡಿತ ಡಾ. ಬೆಂಜಮಿನ್‌ ಕೆಡರ್‌ ನೂತನ ಲೋಕ ಭಾಷಾಂತರದ ಬಗ್ಗೆ ಇದೇ ತರದ ಹೇಳಿಕೆ ಕೊಟ್ಟರು. 1989 ರಲ್ಲಿ ಅವರು ಹೇಳಿದ್ದು: “ಈ ಭಾಷಾಂತರದಲ್ಲಿ ನಿಖರತೆಯನ್ನು ಇಡಲಿಕ್ಕಾಗಿ ಭಾಷಾಂತರಗಾರರು ಪ್ರಾಮಾಣಿಕವಾಗಿ ಪ್ರಯತ್ನಪಟ್ಟಿದ್ದಾರೆ. ಈ ನೂತನ ಲೋಕ ಭಾಷಾಂತರದಲ್ಲಿ ತಿರುಚಿ ಅರ್ಥ ಬದಲಾಯಿಸಿದ್ದನ್ನು ನನಗೆ ಕಂಡು ಹಿಡಿಯೋಕೆ ಆಗಿಲ್ಲ.”

ಕೆಲವು ಪ್ರಶ್ನೆಗಳನ್ನ ಕೇಳಿಕೊಳ್ಳಿ: ‘ನಾನು ಯಾವ ಉದ್ದೇಶದಿಂದ ಬೈಬಲ್‌ ಓದ್ತಾ ಇದ್ದಿನಿ? ಅಷ್ಟೊಂದು ನಿಖರತೆ ಇಲ್ಲ ಅಂದ್ರು ಪರವಾಗಿಲ್ಲ, ಓದೋಕೆ ಸುಲಭ ಇರೋ ಬೈಬಲನ್ನ ಬಯಸ್ತಾ ಇದ್ದಿನಾ ? ಮೂಲ ಬೈಬಲಲ್ಲಿ ಇರೋ ತರಾನೇ ಅರ್ಥ ಕೊಡೋ ಬೈಬಲ್‌ ಓದೋಕೆ ನಾನು ಇಷ್ಟಪಡ್ತೇನಾ? ( 2 ಪೇತ್ರ 1:20,21 ) ಈ ಪ್ರಶ್ನೆಗಳಿಗೆ ನೀವು ಕೊಡೋ ಉತ್ತರ, ಯಾವ ಭಾಷಾಂತರ ಬೇಕು ಅಂತ ತೀರ್ಮಾನಿಸೋಕೆ ಸಹಾಯ ಮಾಡುತ್ತೆ.

[ಪಾದಟಿಪ್ಪಣಿ]

^ ಪ್ಯಾರ. 22 ನೂತನ ಲೋಕ ಭಾಷಾಂತರ ಅಲ್ಲದೆ ಇದರಲ್ಲಿರುವ ಇನ್ನೂ ಕೆಲವು ಭಾಷಾಂತರಗಳು, ಆ್ಯಂಪ್ಲಿಫೈಡ್‌ ನ್ಯೂ ಟೆಸ್ಟಮೆಂಟ್‌, ದ ಲಿವಿಂಗ್‌ ಬೈಬಲ್‌, ದ ನ್ಯೂ ಅಮೆರಿಕನ್‌ ಬೈಬಲ್‌ ವಿದ್‌ ರಿವೈಸ್ಡ್‌ ನ್ಯೂ ಟೆಸ್ಟಮೆಂಟ್‌, ನ್ಯೂ ಅಮೆರಿಕನ್‌ ಸ್ಟ್ಯಾಂಡರ್ಡ್‌ ಬೈಬಲ್‌, ದ ಹೋಲಿ ಬೈಬಲ್‌—ನ್ಯೂ ಇಂಟರ್‌ನ್ಯಾಶನಲ್‌ ವರ್ಶನ್‌, ದ ನ್ಯೂ ರಿವೈಸ್ಡ್‌ ಸ್ಟ್ಯಾಂಡರ್ಡ್‌ ವರ್ಶನ್‌, ದ ಬೈಬಲ್‌ ಇನ್‌ ಟುಡೇಸ್‌ ಇಂಗ್ಲಿಷ್‌ ವರ್ಶನ್‌ ಮತ್ತು ಕಿಂಗ್‌ ಜೇಮ್ಸ್‌ ವರ್ಶನ್‌.

[ಚಿತ್ರ]

“ಪವಿತ್ರ ಶಾಸ್ತ್ರ ಗ್ರಂಥದ ನೂತನ ಲೋಕ ಭಾಷಾಂತರ” ಅನೇಕ ಭಾಷೆಗಳಲ್ಲಿ ಲಭ್ಯ