ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಕೃತಿಯಲ್ಲಿ ವ್ಯಕ್ತವಾಗುವ ದೇವರ ವಿವೇಕ

ಪ್ರಕೃತಿಯಲ್ಲಿ ವ್ಯಕ್ತವಾಗುವ ದೇವರ ವಿವೇಕ

ಪ್ರಕೃತಿಯಲ್ಲಿ ವ್ಯಕ್ತವಾಗುವ ದೇವರ ವಿವೇಕ

“ಸೃಷ್ಟಿಕರ್ತನಾದ ದೇವರು . . . ಕಾಡುಮೃಗಗಳಿಗಿಂತ ನಮಗೆ ಹೆಚ್ಚು ಜ್ಞಾನವನ್ನು ಬೋಧಿಸುತ್ತಾ ಆಕಾಶದ ಪಕ್ಷಿಗಳಿಗಿಂತ ಹೆಚ್ಚು ಬುದ್ಧಿಯನ್ನು ನಮಗೆ ಕಲಿಸುತ್ತಾನೆ.”—ಯೋಬ 35:10, 11.

ಪಕ್ಷಿಗಳಲ್ಲಿರುವ ಸಾಮರ್ಥ್ಯ ವಿಸ್ಮಯಕರ. ಅವು ಆಕಾಶದಲ್ಲಿ ಲೀಲಾಜಾಲವಾಗಿ ತೋರಿಸುವ ಕಸರತ್ತು ವಿಮಾನ ವಿನ್ಯಾಸಕರನ್ನೂ ಬೆರಗುಗೊಳಿಸುತ್ತದೆ. ಕೆಲವು ಜಾತಿಯ ಪಕ್ಷಿಗಳು ಸಾವಿರಾರು ಮೈಲಿ ದೂರ ಹಾರುತ್ತಾ ಸಮುದ್ರವನ್ನು ದಾಟಿ ವಲಸೆಹೋಗುತ್ತವೆ. ಸಮುದ್ರದಲ್ಲಿ ಅವುಗಳಿಗೆ ಯಾವುದೇ ಮಾರ್ಗಸೂಚಿ ಇಲ್ಲದಿದ್ದರೂ ದಿಕ್ಕು ತಪ್ಪದೆ ತಮ್ಮ ಗುರಿಯನ್ನು ತಲಪುತ್ತವೆ.

ಇನ್ನೊಂದು ಗಮನಾರ್ಹ ಕೌಶಲವು ತಮ್ಮ ಧ್ವನಿ ಮತ್ತು ಮಧುರಗಾನದ ಮೂಲಕ ಸಂಭಾಷಿಸುವ ಅವುಗಳ ಸಾಮರ್ಥ್ಯವೇ ಆಗಿದೆ. ಇದು ಸೃಷ್ಟಿಕರ್ತನ ವಿವೇಕವನ್ನು ಮತ್ತಷ್ಟೂ ತಿಳಿಯಪಡಿಸುತ್ತದೆ. ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ.

ಪಕ್ಷಿಮಾತು

ಕೆಲವು ಜಾತಿಯ ಪಕ್ಷಿಗಳು ಮೊಟ್ಟೆಯಿಂದ ಹೊರಬರುವ ಮೊದಲೇ ಸಂಭಾಷಿಸಲು ಶುರುಮಾಡುತ್ತವೆ. ಉದಾಹರಣೆಗೆ ಲಾವಕ್ಕಿಯನ್ನು ತೆಗೆದುಕೊಳ್ಳಿ. ಅದು ದಿನಕ್ಕೆ ಒಂದರಂತೆ ಕಡಿಮೆಪಕ್ಷ ಎಂಟು ಮೊಟ್ಟೆಗಳನ್ನಿಡುತ್ತದೆ. ಮೊದಲ ಮೊಟ್ಟೆ ಬಿರಿದು ಮರಿ ಹೊರಬರಲು ಎಷ್ಟು ಸಮಯ ತಗಲುತ್ತದೋ ಅಷ್ಟೇ ಸಮಯ ಪ್ರತಿಯೊಂದು ಮೊಟ್ಟೆಗೂ ಬೇಕಾಗುವುದಾದರೆ ಎಲ್ಲಾ ಮರಿಗಳು ಹೊರಬರಲು ಸುಮಾರು ಎಂಟು ದಿನ ಬೇಕಾಗುತ್ತದೆ. ಹಾಗಾಗುವಲ್ಲಿ ತಾಯಿ ಹಕ್ಕಿ ತುಂಬ ಕಷ್ಟಪಡಬೇಕಾಗುತ್ತದೆ. ಏಕೆಂದರೆ ಅದು ಮರಿಗಳನ್ನು ಆರೈಕೆ ಮಾಡುವ ಅದೇ ಸಮಯದಲ್ಲಿ ಉಳಿದ ಮೊಟ್ಟೆಗಳಿಗೆ ಕಾವು ಕೊಡುವ ಕೆಲಸವನ್ನೂ ಮಾಡಬೇಕಾಗುತ್ತದೆ. ಆದರೆ ಹೀಗಾಗದೆ ಎಲ್ಲಾ ಎಂಟು ಮರಿಗಳು ಕೇವಲ ಆರು ಗಂಟೆಗಳ ಅವಧಿಯಲ್ಲಿ ಮೊಟ್ಟೆಯೊಡೆದು ಹೊರಬರುತ್ತವೆ. ಇದು ಹೇಗೆ ಸಾಧ್ಯ? ಸಂಶೋಧಕರು ಹೇಳುವ ಪ್ರಕಾರ, ಇದಕ್ಕೆ ಮುಖ್ಯ ಕಾರಣವೇನೆಂದರೆ ಮರಿಗಳು ಮೊಟ್ಟೆಯೊಳಗಿರುವಾಗಲೇ ಒಂದಕ್ಕೊಂದು ಸಂವಾದಿಸಿ ಒಟ್ಟಿಗೆ ಹೊರಬರುವಂತೆ ಏರ್ಪಡಿಸಿಕೊಳ್ಳುತ್ತವೆ.

ಪಕ್ಷಿಗಳು ಬೆಳೆದು ದೊಡ್ಡವಾದಾಗ ಸಾಮಾನ್ಯವಾಗಿ ಗಂಡು ಪಕ್ಷಿಗಳೇ ಹಾಡುತ್ತವೆ. ಮುಖ್ಯವಾಗಿ ಸಂತಾನೋತ್ಪತ್ತಿಯ ಸಮಯದಲ್ಲಿ ತನ್ನ ಪ್ರದೇಶದ ಸ್ವಾಮ್ಯವನ್ನು ಪ್ರಚುರಪಡಿಸಲು ಅಥವಾ ಸಂಗಾತಿಯನ್ನು ಆಕರ್ಷಿಸಲು ಗಂಡುಹಕ್ಕಿ ಹಾಡುತ್ತದೆ. ಸಾವಿರಾರು ಪಕ್ಷಿ ಪ್ರಭೇದಗಳಲ್ಲಿ ಒಂದೊಂದಕ್ಕೂ ತಮ್ಮದೇ ಆದ ಭಾಷಾಶೈಲಿಯಿದೆ. ಇದು ಹೆಣ್ಣುಹಕ್ಕಿಗಳಿಗೆ ತಮ್ಮ ಜಾತಿಯ ಜೊತೆಗಳನ್ನು ಕಂಡುಕೊಳ್ಳಲು ಸಹಾಯಮಾಡುತ್ತದೆ.

ಹಕ್ಕಿಗಳು ಹೆಚ್ಚಾಗಿ ಮುಂಜಾನೆ ಮತ್ತು ಸಾಯಂಕಾಲಗಳಲ್ಲಿ ಹಾಡುತ್ತವೆ. ಇದಕ್ಕೆ ಒಂದು ಸಕಾರಣವಿದೆ. ಆ ಸಮಯಗಳಲ್ಲಿ ಗಾಳಿಯಾಗಲಿ ಸದ್ದುಗದ್ದಲವಾಗಲಿ ಅಷ್ಟಾಗಿ ಇರುವುದಿಲ್ಲ. ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಪಕ್ಷಿಗಳ ಸುಶ್ರಾವ್ಯ ಹಾಡುಗಳು ಇತರ ಸಮಯಗಳಿಗಿಂತ 20 ಪಟ್ಟು ಹೆಚ್ಚು ಉತ್ತಮವಾಗಿ ಕೇಳಿಬರುತ್ತವೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ.

ಹೆಚ್ಚಾಗಿ ಗಂಡು ಹಕ್ಕಿಗಳೇ ಹಾಡುತ್ತವಾದರೂ, ಗಂಡು ಮತ್ತು ಹೆಣ್ಣು ಹಕ್ಕಿಗಳೆರಡೂ ವಿವಿಧ ರೀತಿಯ ಶಬ್ದಗಳನ್ನು ಮಾಡುತ್ತವೆ. ಈ ಶಬ್ದಗಳಿಗೆ ವಿಭಿನ್ನ ಅರ್ಥಗಳೂ ಇವೆ. ಉದಾಹರಣೆಗೆ ಫಿಂಚ್‌ ಹಕ್ಕಿಯು ಒಂಭತ್ತು ರೀತಿಯಲ್ಲಿ ಕೂಗುತ್ತದೆ. ಆಕಾಶದಲ್ಲಿ ಬೇಟೆಗಾರ ಪಕ್ಷಿ ಹಾರುತ್ತಾ ಬರುವುದನ್ನು ಕಂಡಾಗ ಒಂದು ರೀತಿಯ ಎಚ್ಚರಿಕೆಯ ಕೂಗನ್ನು ನೀಡಿದರೆ, ಭೂಚರ ಜೀವಿಗಳಿಂದ ಅಪಾಯವಿದ್ದಾಗ ಇನ್ನೊಂದು ರೀತಿಯಲ್ಲಿ ಕೂಗುತ್ತದೆ.

ಒಂದು ಅತ್ಯುತ್ಕೃಷ್ಟ ಕೊಡುಗೆ

ಪಕ್ಷಿಗಳಿಗಿರುವ ಹುಟ್ಟರಿವು ನಿಜಕ್ಕೂ ಅದ್ಭುತಕರ. ಆದರೆ ಸಂಭಾಷಣಾ ಕೌಶಲ್ಯದ ವಿಷಯದಲ್ಲಿ ಮಾನವರಿಗಿರುವ ಸಾಮರ್ಥ್ಯವು ಅದಕ್ಕಿಂತಲೂ ಎಷ್ಟೋ ಅತ್ಯದ್ಭುತ. ಏಕೆಂದರೆ ದೇವರು “ಆಕಾಶದ ಪಕ್ಷಿಗಳಿಗಿಂತ ಹೆಚ್ಚು ಬುದ್ಧಿಯನ್ನು” ಮಾನವರಿಗೆ ಕೊಟ್ಟಿದ್ದಾನೆಂದು ಯೋಬ 35:11 ಹೇಳುತ್ತದೆ. ಮಾನವರಲ್ಲಿರುವ ಅದ್ವಿತೀಯ ವಿಷಯವೇನೆಂದರೆ ಅವರಿಗೆ ಧ್ವನಿ ಅಥವಾ ಹಾವಾಭಾವಗಳ ಮೂಲಕ ಕಷ್ಟ ಹಾಗೂ ಜಟಿಲವಾದ ಆಲೋಚನೆಗಳನ್ನೂ ವಿಚಾರಗಳನ್ನೂ ವ್ಯಕ್ತಪಡಿಸುವ ಸಾಮರ್ಥ್ಯವಿದೆ.

ಇತರ ಜೀವಿಗಳಿಗೆ ವ್ಯತಿರಿಕ್ತವಾಗಿ, ಮಾನವ ಶಿಶುಗಳು ತುಂಬಾ ಜಟಿಲ ಭಾಷೆಗಳನ್ನು ಕಲಿಯುವ ಸಾಮರ್ಥ್ಯದೊಂದಿಗೆ ಹುಟ್ಟುತ್ತವೆ. ಅಮೆರಿಕನ್‌ ಸೈಂಟಿಸ್ಟ್‌ ಎಂಬ ಅಂತರ್ಜಾಲ ಪತ್ರಿಕೆಯೊಂದು ತಿಳಿಸುವುದು: “ಹಸುಳೆಗಳೊಂದಿಗೆ ಹೆತ್ತವರು ನೇರವಾಗಿ ಮಾತನಾಡದಿದ್ದಾಗಲೂ ಅವು ಭಾಷೆಯನ್ನು ಕಲಿತುಕೊಳ್ಳುತ್ತವೆ; ಕಿವುಡ ಮಕ್ಕಳಿಗೆ ಮನೆಯಲ್ಲಿ ಸನ್ನೆಭಾಷೆಯನ್ನು ಕಲಿಸದಿರುವಾಗಲೂ ಅವರು ತಮ್ಮದೇ ಆದ ಸನ್ನೆ ಭಾಷೆಗಳನ್ನು ಕಂಡುಹಿಡಿಯುತ್ತಾರೆ.”

ನಮ್ಮ ಭಾವನೆ ಮತ್ತು ಆಲೋಚನೆಗಳನ್ನು ಮಾತು ಅಥವಾ ಸನ್ನೆಯ ಮೂಲಕ ವ್ಯಕ್ತಪಡಿಸುವ ನಮ್ಮ ಸಾಮರ್ಥ್ಯವು ನಿಜಕ್ಕೂ ದೇವರ ಅದ್ಭುತ ಕೊಡುಗೆ. ಅದಕ್ಕಿಂತಲೂ ಅತ್ಯುನ್ನತವಾದ ಇನ್ನೊಂದು ಕೊಡುಗೆಯನ್ನು ಮಾನವರಿಗೆ ಕೊಡಲಾಗಿದೆ. ಅದು ಪ್ರಾರ್ಥನೆಯ ಮೂಲಕ ದೇವರೊಂದಿಗೆ ಮಾತಾಡುವ ಸಾಮರ್ಥ್ಯವೇ ಆಗಿದೆ. ವಾಸ್ತವವೇನೆಂದರೆ ನಾವು ಆತನೊಂದಿಗೆ ಮಾತನಾಡುವಂತೆ ಸ್ವತಃ ಯೆಹೋವ ದೇವರೇ ನಮ್ಮನ್ನು ಆಮಂತ್ರಿಸುತ್ತಾನೆ. “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ” ಎಂದು ದೇವರ ವಾಕ್ಯವಾದ ಬೈಬಲ್‌ ಹೇಳುತ್ತದೆ.—ಫಿಲಿಪ್ಪಿಯ 4:6.

ಕಷ್ಟಕರ ನಿರ್ಣಯಗಳನ್ನು ನಾವು ಮಾಡಬೇಕಾದಾಗ, ಬೈಬಲಿನಲ್ಲಿ ದಾಖಲಿಸಿಟ್ಟಿರುವ ಅಪಾರ ವಿವೇಕವನ್ನು ಬಳಸಿಕೊಳ್ಳಬೇಕೆಂದು ಯೆಹೋವನು ಬಯಸುತ್ತಾನೆ. ಮಾತ್ರವಲ್ಲ ಅದರಲ್ಲಿರುವ ಬುದ್ಧಿವಾದವನ್ನು ಅನ್ವಯಿಸಿಕೊಳ್ಳಲು ಸಹ ಆತನು ನಮಗೆ ಸಹಾಯಮಾಡುತ್ತಾನೆ. ಬೈಬಲ್‌ ಲೇಖಕನಾದ ಯಾಕೋಬನು ಹೇಳುವುದು, “ನಿಮ್ಮಲ್ಲಿ ಯಾವನಿಗಾದರೂ ಜ್ಞಾನ ಕಡಿಮೆಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ, ಅದು ಅವನಿಗೆ ದೊರಕುವದು; ದೇವರು ಹಂಗಿಸದೆ ಎಲ್ಲರಿಗೂ ಉದಾರ ಮನಸ್ಸಿನಿಂದ ಕೊಡುವವನಾಗಿದ್ದಾನೆ.”—ಯಾಕೋಬ 1:5.

ನೀವು ಹೇಗೆ ಪ್ರತಿಕ್ರಿಯಿಸುವಿರಿ?

ಪಕ್ಷಿಯ ಮಧುರ ಗಾನ ಅಥವಾ ಮಗುವಿನ ಮೊದಲ ತೊದಲು ನುಡಿಯನ್ನು ಕೇಳುವಾಗ ನಿಮಗೆ ಹೇಗನಿಸುತ್ತದೆ? ದೇವರ ವಿವೇಕವನ್ನು ಆತನ ಸೃಷ್ಟಿಯಲ್ಲಿ ನೀವು ಕಾಣುತ್ತೀರೋ?

ಕೀರ್ತನೆಗಾರನಾದ ದಾವೀದನು ತನ್ನನ್ನು ದೇವರು ರೂಪಿಸಿದ ವಿಧದ ಕುರಿತು ಧ್ಯಾನಿಸಿದ ಬಳಿಕ ಪ್ರೇರಿತನಾಗಿ ಹೇಳಿದ್ದು: “ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ.” (ಕೀರ್ತನೆ 139:14) ಸೃಷ್ಟಿಯಲ್ಲಿ ಸ್ಪಷ್ಟವಾಗಿ ಕಂಡುಬರುವ ದೇವರ ವಿವೇಕವನ್ನು ನೀವು ಕೃತಜ್ಞತೆ ತುಂಬಿದ ಹೃದಯದಿಂದ ಪರಿಶೀಲಿಸುವಾಗ, ಆತನು ನಿಮಗೆ ಒಳ್ಳೆಯ ಮಾರ್ಗದರ್ಶನ ನೀಡುವನೆಂಬ ನಿಮ್ಮ ಭರವಸೆಯು ಇನ್ನಷ್ಟು ಹೆಚ್ಚುವುದು ನಿಶ್ಚಯ. (w08 5/1)

[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]

ಮಾತಾಡುವ ಸಾಮರ್ಥ್ಯವು ದೇವರ ಅದ್ಭುತ ವರವಾಗಿದೆ

[ಪುಟ 4ರಲ್ಲಿರುವ ಚಿತ್ರ ಕೃಪೆ]

© Dayton Wild/Visuals Unlimited