ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೋಹ ಮತ್ತು ಜಲಪ್ರಳಯ ಸತ್ಯವೋ ಮಿಥ್ಯೆಯೋ?

ನೋಹ ಮತ್ತು ಜಲಪ್ರಳಯ ಸತ್ಯವೋ ಮಿಥ್ಯೆಯೋ?

ನೋಹ ಮತ್ತು ಜಲಪ್ರಳಯ ಸತ್ಯವೋ ಮಿಥ್ಯೆಯೋ?

ಒಂದು ಉತ್ತಮ ಪರಿಸ್ಥಿತಿಗಾಗಿ ನೀವು ಹಂಬಲಿಸುತ್ತೀರೋ? ಜನರು ಪರಸ್ಪರ ಶಾಂತಿಯಿಂದ ಜೀವಿಸುವ ಲೋಕವನ್ನು, ಯುದ್ಧವಾಗಲಿ ಹಿಂಸಾಚಾರವಾಗಲಿ ದಬ್ಬಾಳಿಕೆಯಾಗಲಿ ಇರದ ಲೋಕವನ್ನು ನೋಡಲು ನೀವು ಬಯಸುತ್ತೀರೋ? ಹಾಗಿದ್ದರೆ, ಚಿರಪರಿಚಿತವಾದ ಚಾರಿತ್ರಿಕ ಘಟನೆಯೊಂದು ನಿಮಗೆ ಉತ್ತೇಜನವನ್ನು ಕೊಡಬಲ್ಲದು. ಅದು ನೋಹ ಎಂಬ ದೇವಭಕ್ತನ ನೈಜ ವೃತ್ತಾಂತ. ಅವನ ಕಾಲದಲ್ಲಿ ಬಂದ ಭೌಗೋಳಿಕ ಜಲಪ್ರಳಯದಿಂದ ಅವನು ತನ್ನನ್ನು ಮತ್ತು ತನ್ನ ಕುಟುಂಬವನ್ನು ರಕ್ಷಿಸಲಿಕ್ಕಾಗಿ ಒಂದು ನಾವೆಯನ್ನು ಕಟ್ಟಿದನು. ಆ ಪ್ರಳಯದಲ್ಲಿ ದುಷ್ಟರಾದರೋ ಮುಳುಗಿ ನಾಶವಾದರು.

ನೋಹನ ವೃತ್ತಾಂತವು ಲೋಕವ್ಯಾಪಕವಾಗಿ ಹೆಸರಾಂತ. ನೋಹನ ಚರಿತ್ರೆಯು ಬೈಬಲಿನ ಆದಿಕಾಂಡ ಪುಸ್ತಕದ 6-9ನೆಯ ಅಧ್ಯಾಯದಲ್ಲಿ ಕಂಡುಬರುತ್ತದೆ. ಕುರಾನಿನಲ್ಲಿ ಅದರ ಉಲ್ಲೇಖವಿದೆ. ಭೂಮಿಯಾದ್ಯಂತ ಅಗಣಿತ ಜನರ ದಂತಕಥೆಗಳಲ್ಲೂ ಅದು ಇದೆ. ಆ ಜಲಪ್ರಳಯ ನಿಜವಾಗಿಯೂ ಸಂಭವಿಸಿತ್ತೋ ಅಥವಾ ಜನರು ಸತ್ಕ್ರಿಯೆಗಳನ್ನು ಮಾಡಬೇಕೆಂದು ಉತ್ತೇಜಿಸುವ ಕೇವಲ ರೂಪಕಕಥೆ ಅದಾಗಿದೆಯೋ? ಈ ಪ್ರಶ್ನೆಯ ಕುರಿತು ತತ್ವಶಾಸ್ತ್ರಿಗಳು ಮತ್ತು ವಿಜ್ಞಾನಿಗಳು ಶತಮಾನಗಳಿಂದ ಚರ್ಚೆ ನಡೆಸಿದ್ದಾರೆ. ಆದರೂ ದೇವರ ವಾಕ್ಯವಾದ ಬೈಬಲ್‌ ವೃತ್ತಾಂತವು ಯಾವ ಸಂದೇಹಕ್ಕೂ ಎಡೆಗೊಡುವುದಿಲ್ಲ. ವೃತ್ತಾಂತವು ಕಟ್ಟುಕಥೆಯಲ್ಲ, ಸತ್ಯಸಂಗತಿ. ಇದನ್ನು ಗಮನಿಸಿರಿ:

ಜಲಪ್ರಳಯವು ಸರಿಯಾಗಿ ಯಾವ ವರ್ಷದಲ್ಲಿ, ತಿಂಗಳಲ್ಲಿ ಮತ್ತು ಯಾವ ದಿನದಲ್ಲಿ ಆರಂಭಗೊಂಡಿತೆಂದು ಆದಿಕಾಂಡ ವೃತ್ತಾಂತವು ತಿಳಿಸುತ್ತದೆ. ಯಾವಾಗ ಮತ್ತು ಎಲ್ಲಿ ಆ ನಾವೆಯು ತೇಲಾಡುತ್ತಾ ಬಂದು ನಿಂತುಕೊಂಡಿತೆಂದೂ ನೆಲವು ಯಾವಾಗ ಪೂರ್ಣವಾಗಿ ಒಣಗಿಹೋಯಿತೆಂದೂ ವೃತ್ತಾಂತ ಹೇಳುತ್ತದೆ. ನಾವೆಯ ಕುರಿತ ವಿವರಗಳೂ ಅಂದರೆ ಅದರ ವಿನ್ಯಾಸ, ಉದ್ದಗಲಗಳು, ಅದನ್ನು ಕಟ್ಟಲು ಉಪಯೋಗಿಸಲ್ಪಟ್ಟ ಸಾಮಗ್ರಿಗಳ ಕುರಿತೂ ನಿಖರವಾಗಿ ತಿಳಿಸಲಾಗಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ದಂತಕಥೆಗಳಲ್ಲಿ ಅಂಥ ವಿವರಗಳು ಅಸ್ಪಷ್ಟ.

ಬೈಬಲಿನಲ್ಲಿರುವ ಎರಡು ವಂಶಾವಳಿ ದಾಖಲೆಗಳು ನೋಹನು ಒಬ್ಬ ನಿಜ ವ್ಯಕ್ತಿಯಾಗಿದ್ದನೆಂದು ರುಜುಪಡಿಸುತ್ತವೆ. (1 ಪೂರ್ವಕಾಲವೃತ್ತಾಂತ 1:4; ಲೂಕ 3:36) ಈ ವಂಶಾವಳಿಗಳನ್ನು ಸಂಕಲಿಸಿದ ಬೈಬಲ್‌ ಲೇಖಕರಾದ ಎಜ್ರ ಮತ್ತು ಲೂಕ ಶ್ರದ್ಧೆಯುಳ್ಳ ಸಂಶೋಧಕರಾಗಿದ್ದರು. ಲೂಕನು ಯೇಸು ಕ್ರಿಸ್ತನ ವಂಶಾವಳಿಯನ್ನು ನೋಹನ ತನಕ ಪತ್ತೆಹಚ್ಚಿ ತಿಳಿಸಿದ್ದಾನೆ.

ನೋಹ ಮತ್ತು ಜಲಪ್ರಳಯವನ್ನು ಕುರಿತು ಪ್ರವಾದಿಗಳಾದ ಯೆಶಾಯ, ಯೆಹೆಜ್ಕೇಲ ಹಾಗೂ ಕ್ರೈಸ್ತ ಅಪೊಸ್ತಲರಾದ ಪೌಲ ಮತ್ತು ಪೇತ್ರರು ಬೈಬಲಿನಲ್ಲಿ ಉಲ್ಲೇಖಿಸಿರುತ್ತಾರೆ.—ಯೆಶಾಯ 54:9; ಯೆಹೆಜ್ಕೇಲ 14:14, 20; ಇಬ್ರಿಯ 11:7; 1 ಪೇತ್ರ 3:19, 20; 2 ಪೇತ್ರ 2:5.

ಯೇಸು ಕ್ರಿಸ್ತನು ಜಲಪ್ರಳಯವನ್ನು ಉಲ್ಲೇಖಿಸುತ್ತಾ ಹೇಳಿದ್ದು: “ನೋಹನ ದಿವಸಗಳಲ್ಲಿ ನಡೆದ ಹಾಗೆಯೇ ಮನುಷ್ಯಕುಮಾರನ ದಿವಸಗಳಲ್ಲಿಯೂ ನಡೆಯುವದು. ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ಊಟಮಾಡುತ್ತಿದ್ದರು, ಕುಡಿಯುತ್ತಿದ್ದರು, ಮದುವೆಮಾಡಿಕೊಳ್ಳುತ್ತಿದ್ದರು, ಮದುವೆಮಾಡಿಕೊಡುತ್ತಿದ್ದರು. ಆಗ ಜಲಪ್ರಳಯವು ಬಂದು ಎಲ್ಲರನ್ನು ನಾಶಮಾಡಿತು.” (ಲೂಕ 17:26, 27) ಆ ಪ್ರಳಯವು ಸಂಭವಿಸದೆ ಇರುತ್ತಿದ್ದಲ್ಲಿ ಯೇಸು “ಮನುಷ್ಯಕುಮಾರನ ದಿವಸಗಳ” ಕುರಿತು ಹೇಳಿದ ಮಾತು ಅರ್ಥಹೀನವಾಗಿರುತ್ತಿತ್ತು.

ಬೈಬಲ್‌ ಹೇಳುವ ವಿಷಯಗಳನ್ನು “ಕುಚೋದ್ಯಗಾರರು” ಗೇಲಿಮಾಡುವರೆಂದು ಅಪೊಸ್ತಲ ಪೇತ್ರನು ಮುಂತಿಳಿಸಿದನು. ಪೇತ್ರನು ಬರೆದದ್ದು: “ಹೀಗೆ ಮಾತಾಡುವವರು ಒಂದು ಸಂಗತಿಯನ್ನು ತಿಳಿದರೂ ಬೇಕೆಂದು ಮರೆತುಬಿಡುತ್ತಾರೆ; ಅದೇನಂದರೆ— . . . ನೀರುಗಳಿಂದಲೇ [ನೋಹನ] ಕಾಲದಲ್ಲಿದ್ದ ಲೋಕವು ಜಲಪ್ರಳಯದಲ್ಲಿ ನಾಶವಾಯಿತು.” ಈ ನಿಜ “ಸಂಗತಿ”ಯನ್ನು ನಾವು ಅಲಕ್ಷಿಸಸಾಧ್ಯವೋ? ಖಂಡಿತವಾಗಿ ಸಾಧ್ಯವಿಲ್ಲ. ಪೇತ್ರನು ಮುಂದುವರಿಸುತ್ತಾ ಅಂದದ್ದು; “ಈಗಿರುವ ಭೂಮ್ಯಾಕಾಶಗಳು ಅದೇ ವಾಕ್ಯದ ಬಲದಿಂದ ಬೆಂಕಿಯ ಮೂಲಕ ನಾಶವಾಗುವದಕ್ಕೆ ಇಡಲ್ಪಟ್ಟಿವೆ; ಮತ್ತು ಭಕ್ತಿಹೀನರ ಶಿಕ್ಷಾವಿಧಿಯೂ ನಾಶವೂ ಉಂಟಾಗುವ ದಿನಕ್ಕಾಗಿ ಆ ಬೆಂಕಿ ಸಿದ್ಧವಾಗಿದೆ.”​—⁠2 ಪೇತ್ರ 3:3-7.

ಹೌದು, ಪುನಃ ಒಮ್ಮೆ ದೇವರು ದುಷ್ಟರನ್ನು ನಾಶಮಾಡುವನು. ಆ ನಾಶನವನ್ನು ಪಾರಾಗುವ ಜನರೂ ಇರುವರು. ನೋಹನ ಮಾದರಿಯನ್ನು ಅನುಕರಿಸುವ ಮೂಲಕ ನಾವು ಸಹ ನೀತಿವಂತ ಜನರೊಂದಿಗೆ ಪಾರಾಗಿ, ಇಡೀ ಭೂಮಿಯು ಸುಂದರ ಉದ್ಯಾನವನದಂತಾಗುವ ಪರದೈಸದೊಳಗೆ ಉಳಿಯುವೆವು. (w08 6/1)