ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಾಂತ್ವನ ಪಡೆದು ಸಾಂತ್ವನ ನೀಡಿ

ಸಾಂತ್ವನ ಪಡೆದು ಸಾಂತ್ವನ ನೀಡಿ

ಸಾಂತ್ವನ ಪಡೆದು ಸಾಂತ್ವನ ನೀಡಿ

ಅಪರಿಪೂರ್ಣರಾದ ನಾವು ಅನೇಕ ತರದ ಕಾಯಿಲೆಗಳಿಂದ ಬಳಲುತ್ತೇವೆ. ಕೆಲವೊಮ್ಮೆ ಭೀಕರ ರೋಗಗಳಿಂದಲೂ ಬಾಧಿತರು. ಇಂತಹ ಪರಿಸ್ಥಿತಿಯನ್ನು ನಾವು ಹೇಗೆ ತಾನೆ ಎದುರಿಸುವುದು?

ಒಂದು ಸಹಾಯ, ಸ್ನೇಹಿತರು, ಕುಟುಂಬದವರು ಮತ್ತು ಜೊತೆ ಆರಾಧಕರು ಕೊಡುವ ಸಾಂತ್ವನವೇ.

ನಿಜ ಸ್ನೇಹಿತರಿಂದ ಬರುವ ಕೋಮಲ ಕಾಳಜಿಭರಿತ ಮಾತುಗಳು ಗಾಯಕ್ಕೆ ಮುಲಾಮು ಹಾಕಿದಂತಿರುತ್ತೆ. ನಮ್ಮನ್ನು ಚೈತನ್ಯಗೊಳಿಸುತ್ತೆ. (ಜ್ಞಾನೋ. 16:24; 18:24; 25:11) ನಿಜ ಕ್ರೈಸ್ತರು ಕೇವಲ ಸಾಂತ್ವನ ಪಡೆದುಕೊಳ್ಳುವುದು ಮಾತ್ರವಲ್ಲ ಇತರರನ್ನು ಸಾಂತ್ವನಗೊಳಿಸಲೂ ಮುಂದಾಗುತ್ತಾರೆ. “ದೇವರಿಂದ ನಾವು ಹೊಂದಿರುವ ಸಾಂತ್ವನದಿಂದಾಗಿ ಯಾವುದೇ ರೀತಿಯ ಸಂಕಟದಲ್ಲಿರುವವರನ್ನು ನಾವು ಸಾಂತ್ವನಗೊಳಿಸಲು ಶಕ್ತರಾಗುತ್ತೇವೆ.” (2 ಕೊರಿಂ. 1:4; ಲೂಕ 6:31) ಮೆಕ್ಸಿಕೊ ದೇಶದಲ್ಲಿ ಜಿಲ್ಲಾ ಮೇಲ್ವಿಚಾರಕರಾಗಿ ಸೇವೆ ಮಾಡುತ್ತಿರುವ ಸಹೋದರ ಆಂಟೋನ್ಯೋ ಇದನ್ನು ತಮ್ಮ ಜೀವನದಲ್ಲಿ ಅನುಭವಿಸಿದರು.

ತನಗೆ ರಕ್ತದ ಕ್ಯಾನ್ಸರ್‌ (ಲಿಂಫೋಮ) ಇದೆ ಎಂದು ತಿಳಿದುಬಂದಾಗ ಆಂಟೋನ್ಯೋಗೆ ಎದೆ ಒಡೆದಂತಾಯಿತು. ಆದರೂ ನಕಾರಾತ್ಮಕ ಭಾವನೆಗಳಿಂದ ಹೊರಬರಲು ಅವರು ತುಂಬ ಪ್ರಯತ್ನಪಟ್ಟರು. ಹೇಗೆ? ರಾಜ್ಯ ಗೀತೆಗಳನ್ನು ಜ್ಞಾಪಿಸಿಕೊಳ್ಳುತ್ತಾ ಜೋರಾಗಿ ಹಾಡುತ್ತಿದ್ದರು. ಹೀಗೆ ಅದರಲ್ಲಿರುವ ಪದಗಳನ್ನು ಕೇಳಿಸಿಕೊಂಡು ಮನನ ಮಾಡುತ್ತಿದ್ದರು. ಜೋರಾಗಿ ಪ್ರಾರ್ಥನೆ ಮಾಡುತ್ತಿದ್ದರು. ಬೈಬಲನ್ನು ಓದುವುದು ಸಹ ಅವರಿಗೆ ತುಂಬ ಸಾಂತ್ವನ ನೀಡುತ್ತಿತ್ತು.

ಸಹೋದರ ಸಹೋದರಿಯರಿಂದ ಬಂದ ಸಹಾಯಹಸ್ತ ಅವರನ್ನು ಇನ್ನೂ ಹೆಚ್ಚು ಬಲಪಡಿಸಿತು. ಅವರು ಹೇಳುವುದು: “ನಾನು ನನ್ನ ಹೆಂಡತಿ ಭಾವನಾತ್ಮಕವಾಗಿ ಕುಗ್ಗಿ ಹೋದಾಗ, ಸಭೆಯ ಹಿರಿಯನಾಗಿರುವ ನಮ್ಮ ಒಬ್ಬ ಸಂಬಂಧಿಗೆ ಮನೆಗೆ ಬಂದು ಪ್ರಾರ್ಥಿಸುವಂತೆ ಕೇಳಿಕೊಳ್ಳುತ್ತಿದ್ದೆವು. ಇದು ನಮಗೆ ಸಾಂತ್ವನ ನೀಡಿ ನೆಮ್ಮದಿ ಕೊಡುತ್ತಿತ್ತು. ನಮ್ಮ ಕುಟುಂಬದವರಿಗೆ, ಸಹೋದರ ಸಹೋದರಿಯರಿಗೆ ನಾವು ಯಾವಾಗಲೂ ಆಭಾರಿಗಳು. ಸಿಡಿಲಿನಂತೆ ಬಂದೆರಗಿದ ಸಮಸ್ಯೆಯಿಂದ ಕಡಿಮೆ ಸಮಯದಲ್ಲೇ ಹೊರಬರಲು ಇದು ಸಹಾಯ ಮಾಡಿತು.” ಇಂಥ ಪ್ರೀತಿಭರಿತ ಕಾಳಜಿ ತೋರುವ ಸ್ನೇಹಿತರು ಇದ್ದದ್ದಕ್ಕೆ ಅವರಿಗೆಷ್ಟು ಸಂತೋಷವಾಗಿರಬೇಕಲ್ಲವೆ!

ಇಂಥ ವೇದನಾಮಯ ಸನ್ನಿವೇಶದಲ್ಲಿ ಸಹಾಯ ನೀಡುವ ಇನ್ನೊಂದು ವಿಷಯ ಪವಿತ್ರಾತ್ಮ ಶಕ್ತಿ. ಅಪೊಸ್ತಲ ಪೇತ್ರನು ದೇವರ ಪವಿತ್ರಾತ್ಮವನ್ನು “ಉಚಿತ ವರ” ಎಂದು ಕರೆದನು. (ಅ. ಕಾ. 2:38) ಇದು ಕ್ರಿ.ಶ. 33ರ ಪಂಚಾಶತ್ತಮದಂದು ಅನೇಕ ಕ್ರೈಸ್ತರ ಮೇಲೆ ಪವಿತ್ರಾತ್ಮ ಸುರಿಸಲ್ಪಟ್ಟಾಗ ಸಾಬೀತಾಯಿತು. ಈ ಶಕ್ತಿ ನಮಗೆಲ್ಲರಿಗೂ ಲಭ್ಯ. ಈ ವರದ ಸಹಾಯ ನಿತ್ಯ ನಿರಂತರ. ಹಾಗಾಗಿ ಅದನ್ನು ಹೆಚ್ಚೆಚ್ಚು ಒದಗಿಸುವಂತೆ ದೇವರಲ್ಲಿ ಕೇಳಿಕೊಳ್ಳಬಾರದೇಕೆ?—ಯೆಶಾ. 40:28-31.

ನೋವುಣ್ಣುತ್ತಿರುವವರಿಗೆ ನಿಜ ಕಾಳಜಿ ತೋರಿಸಿ

ಅಪೊಸ್ತಲ ಪೌಲ ಅನೇಕ ಕಷ್ಟ ತೊಂದರೆ ಸಹಿಸಿಕೊಂಡನು. ಕೆಲವೊಮ್ಮೆ ಸಾವಿನ ದವಡೆಗೂ ಸಿಲುಕಿದನು. (2 ಕೊರಿಂ. 1:8-10) ಆದರೂ ಸಾವನ್ನು ನೆನಸಿ ಹೆದರುತ್ತಾ ಕೂರಲಿಲ್ಲ. ದೇವರು ತನಗೆ ಬೆಂಗಾವಲಾಗಿದ್ದಾನೆ ಎಂಬ ಭರವಸೆಯೇ ಅವನಿಗೆ ಸಾಂತ್ವನ ನೀಡಿತು. ಅವನು ಬರೆದದ್ದು: “ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ. ಆತನು ಕೋಮಲ ಕರುಣೆಯ ತಂದೆಯೂ ಸಕಲ ಸಾಂತ್ವನದ ದೇವರೂ ಆಗಿದ್ದಾನೆ. ನಮ್ಮ ಎಲ್ಲ ಸಂಕಟಗಳಲ್ಲಿ ಆತನು ನಮ್ಮನ್ನು ಸಾಂತ್ವನಗೊಳಿಸುತ್ತಾನೆ.” (2 ಕೊರಿಂ. 1:3, 4) ತನ್ನ ಸಮಸ್ಯೆಗಳಿಂದ ಕುಗ್ಗಿಹೋಗದೆ, ತನಗಾದ ಅನುಭವದಿಂದಾಗಿ ಇತರರ ಕಡೆಗೆ ಹೆಚ್ಚು ಅನುಭೂತಿ ತೋರಿಸಲು ಶಕ್ತನಾದನು. ಹೀಗೆ ಪೌಲನು ಇತರರನ್ನು ಸಾಂತ್ವನಗೊಳಿಸಲು ಸನ್ನದ್ಧನಾದನು.

ಸಹೋದರ ಆಂಟೋನ್ಯೋ ಕಾಯಿಲೆಯಿಂದ ಗುಣಮುಖರಾಗಿ ಮತ್ತೆ ಸಂಚರಣ ಸೇವೆಯಲ್ಲಿ ತೊಡಗಿದರು. ಇತರರ ಕಡೆಗೆ ಯಾವಾಗಲೂ ಆಸಕ್ತಿ ತೋರಿಸುವ ಅವರೂ ಅವರ ಪತ್ನಿ ನಂತರ ಅಸ್ವಸ್ಥರನ್ನು ಭೇಟಿಮಾಡಿ ಉತ್ತೇಜಿಸುವುದಕ್ಕೆ ಹೆಚ್ಚು ಗಮನಕೊಟ್ಟರು. ಉದಾಹರಣೆಗೆ ಗಂಭೀರ ಕಾಯಿಲೆಯಿಂದ ಬಳಲಿದ್ದ ಒಬ್ಬ ಸಹೋದರನನ್ನು ಅವರು ಭೇಟಿ ಮಾಡಿದರು. ಅವನಿಗೆ ತನ್ನ ಅಸ್ವಸ್ಥತೆಯಿಂದಾಗಿ ಕೂಟಗಳಿಗೆ ಹೋಗಲು ಸಹ ಇಷ್ಟವಿರಲಿಲ್ಲ. ಆಂಟೋನ್ಯೋ ಹೇಳಿದ್ದು: “ಅವನಿಗೆ ಯೆಹೋವನ ಮೇಲೆ ಸಹೋದರರ ಮೇಲೆ ಪ್ರೀತಿ ಇರಲಿಲ್ಲ ಎಂದಲ್ಲ, ಬದಲಿಗೆ ಅಸ್ವಸ್ಥತೆ ಅವನ ಭಾವನೆಗಳನ್ನು ಎಷ್ಟರ ಮಟ್ಟಿಗೆ ಕಂಗೆಡಿಸಿತ್ತೆಂದರೆ, ತಾನು ಪ್ರಯೋಜನಕ್ಕೆ ಬಾರದವನು ಎಂದು ನೆನೆಸಲು ಶುರುಮಾಡಿದ್ದ.”

ಈ ಸಹೋದರನನ್ನು ಉತ್ತೇಜಿಸಲು ಆಂಟೋನ್ಯೋ ಏನು ಮಾಡಿದರು? ಎಲ್ಲರೂ ಒಟ್ಟು ಸೇರಿರುವ ಸಂದರ್ಭವೊಂದರಲ್ಲಿ ಪ್ರಾರ್ಥಿಸುವಂತೆ ಆ ಸಹೋದರನನ್ನು ಕೇಳಿಕೊಂಡರು. ಅಸಮರ್ಥ ಭಾವನೆಯಿದ್ದರೂ ಅವನು ಪ್ರಾರ್ಥಿಸಲು ಒಪ್ಪಿದನು. “ಅವನು ಎಷ್ಟು ಚೆನ್ನಾಗಿ ಪ್ರಾರ್ಥನೆ ಮಾಡಿದನು ಗೊತ್ತಾ! ಅನಂತರ ಅವನಲ್ಲಿ ಆ ನಿಷ್ಪ್ರಯೋಜಕ ಭಾವನೆಯೇ ಕಾಣಸಿಗಲಿಲ್ಲ. ತಾನು ಸಮರ್ಥನು ಎಂಬ ಭಾವನೆ ಅವನಲ್ಲಿ ಮತ್ತೆ ಮೂಡಿತು” ಎನ್ನುತ್ತಾರೆ ಆಂಟೋನ್ಯೋ.

ಸ್ವಲ್ಪವೊ ಜಾಸ್ತಿಯೊ ನಾವೆಲ್ಲರೂ ಕಷ್ಟಕರ ಸನ್ನಿವೇಶಗಳನ್ನು ಅನುಭವಿಸಿದ್ದೇವೆ. ಆದರೆ ಪೌಲನು ಹೇಳಿದಂತೆ ಆ ಅನುಭವಗಳು ಇತರರನ್ನು ನಾವು ಸಾಂತ್ವನಗೊಳಿಸುವಂತೆ ತಯಾರುಗೊಳಿಸುತ್ತವೆ. ಆದ್ದರಿಂದ, ನಾವೆಲ್ಲರೂ ಇತರರ ದುಃಖ ಚಿಂತೆಗಳ ಕಡೆಗೆ ಸೂಕ್ಷ್ಮಗ್ರಾಹಿಗಳಾಗಿರೋಣ. ಸಾಂತ್ವನದ ಮೂಲನಾದ ಯೆಹೋವನನ್ನು ಅನುಕರಿಸೋಣ.