ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯುವಜನರೇ ನಿಮ್ಮಹೆತ್ತವರಹೃದಯವನ್ನು ನೀವು ಸ್ಪರ್ಶಿಸುತ್ತೀರಿ

ಯುವಜನರೇ ನಿಮ್ಮಹೆತ್ತವರಹೃದಯವನ್ನು ನೀವು ಸ್ಪರ್ಶಿಸುತ್ತೀರಿ

ಯುವಜನರೇ ನಿಮ್ಮಹೆತ್ತವರಹೃದಯವನ್ನು ನೀವು ಸ್ಪರ್ಶಿಸುತ್ತೀರಿ

“ನನ್ನ ಮಕ್ಕಳು ಸತ್ಯವನ್ನನುಸರಿಸಿ ನಡೆಯುವವರಾಗಿದ್ದಾರೆಂದು ಕೇಳುವದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ” ಎಂದು ಬರೆದನು ವೃದ್ಧ ಅಪೋಸ್ತಲ ಯೋಹಾನನು. (3 ಯೋಹಾನ  4) ಈ ಬೈಬಲ್‌ ವಚನದಲ್ಲಿ ತಿಳಿಸಲಾದ ಆ ಮಕ್ಕಳು ಕ್ರೈಸ್ತ ಶಿಷ್ಯರಿಗೆ ಸೂಚಿಸಲ್ಪಟ್ಟಿದ್ದಾರಾದರೂ, ದೈವಭಕ್ತರಾದ ಹೆತ್ತವರು ಯೋಹಾನನ ಆ ಭಾವನಾತ್ಮಕ ಮಾತುಗಳನ್ನು ಸುಲಭವಾಗಿ ಅರ್ಥಮಾಡಬಲ್ಲರು. ಹೆತ್ತವರು ಹೇಗೆ ತಮ್ಮ ಮಕ್ಕಳ ಜೀವನದಲ್ಲಿ ಮಹತ್ವದ ವ್ಯತ್ಯಾಸವನ್ನು ಮಾಡುತ್ತಾರೋ ಹಾಗೆಯೇ ಮಕ್ಕಳು ಸಹ ತಮ್ಮ ಹೆತ್ತವರ ಜೀವನವನ್ನು ಮಹತ್ತಾಗಿ ಪ್ರಭಾವಿಸುತ್ತಾರೆ.

ಮಕ್ಕಳು ಹೆತ್ತವರ ಜೀವನವನ್ನು ಎಷ್ಟು ಆಳವಾಗಿ ಪ್ರಭಾವಿಸಬಲ್ಲರೆಂಬದನ್ನು ಇಸ್ರಾಯೇಲ್ಯ ರಾಜನಾದ ಸೊಲೊಮೋನನು ಗಮನಿಸಿದ್ದನು. ಅವನು ಬರೆದುದು: “ಮಗನು ಜ್ಞಾನಿಯಾದರೆ ತಂದೆಗೆ ಸುಖ; ಅಜ್ಞಾನಿಯಾದರೆ ತಾಯಿಗೆ ದುಃಖ.” (ಜ್ಞಾನೋಕ್ತಿ 10:1) ಆದುದರಿಂದ ಎಲ್ಲಾ ಮಕ್ಕಳು, ದೊಡ್ಡ ಮಕ್ಕಳೂ ಸಹ, ತಮ್ಮ ತಂದೆತಾಯಿಗಳ ಮೇಲೆ ತಮ್ಮ ಕೃತ್ಯಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಪರಿಗಣಿಸುವುದು ಒಳ್ಳೆಯದು. ಇದು ಯೋಗ್ಯವಾಗಿದೆ ಏಕೆ?

ದೈವಭಕ್ತರಾದ ನಿಮ್ಮ ಹೆತ್ತವರು ನಿಮ್ಮ ಲಾಲನೆ ಪಾಲನೆಗಾಗಿ ಪಟ್ಟ ಪರಿಶ್ರಮ ಚಿಂತೆಗಳೆಲ್ಲವುಗಳ ಕುರಿತು ತುಸು ಯೋಚಿಸಿರಿ! ನೀವು ಹುಟ್ಟುವುದಕ್ಕೆ ಬಹಳ ಮುಂಚೆಯೇ ಅವರು ನಿಮಗಾಗಿ ಚಿಂತಿಸಲು ಮತ್ತು ಪ್ರಾರ್ಥಿಸಲು ತೊಡಗಿದ್ದರು. ನೀವು ಹುಟ್ಟಿದ ಮೇಲಾದರೋ ಅವರು ನಿಮ್ಮೊಂದಿಗೆ ತಮ್ಮ ಪ್ರೀತಿಯ ಆಪ್ತ ಬಂಧವನ್ನು ಬೆಸೆದರು. ತಂದೆತಾಯ್ತನದ ಆ ಆನಂದಕರ ಹಾಗೂ ಗಂಭೀರ ಸುಯೋಗ ಮತ್ತು ಜವಾಬ್ದಾರಿಗಾಗಿ ಅವರು ದೇವರಿಗೆ ಉಪಕಾರ ಹೇಳಿದ್ದಿರಬಹುದು. ಒಂದು ಪುಟಾಣಿ ಕೂಸು ಈಗ ತಮ್ಮ ಪರಾಮರಿಕೆಯ ಕೆಳಗಿದೆ ಎಂದು ಯೆಹೋವನ ಆರಾಧಕರಾದ ಅವರು ಅರಿತುಕೊಂಡು, ಅದನ್ನು ಗಂಭೀರ ವಿಷಯವಾಗಿ ಪರಿಗಣಿಸಿದರು.

ನಿಮ್ಮ ಹೆತ್ತವರು ನಿಜ ಕ್ರೈಸ್ತರಾಗಿರುವುದರಿಂದ, ಭರವಸಯೋಗ್ಯ ಮಾರ್ಗದರ್ಶನಕ್ಕಾಗಿ ಬೈಬಲ್‌ ಮತ್ತು ಬೈಬಲಾಧಾರಿತ ಸಾಹಿತ್ಯಗಳ ಸಹಾಯವನ್ನು ಪಡೆದರು. ಮಕ್ಕಳನ್ನು ಸಾಕಿಸಲಹುವುದರಲ್ಲಿ ಅನುಭವವಿದ್ದವರ ಸಲಹೆಯನ್ನು ಕೇಳಿದರು. ತಮ್ಮ ಚಿಂತೆಗಳನ್ನು ಪ್ರಾರ್ಥನೆಯ ಮೂಲಕ ದೇವರಿಗೆ ತಿಳಿಸುವುದನ್ನೂ ಮುಂದುವರಿಸಿದರು. (ನ್ಯಾಯಸ್ಥಾಪಕರು 13:⁠8) ನೀವು ಬೆಳೆಯುತ್ತಾ ಬಂದಂತೆ ನಿಮ್ಮ ಒಳ್ಳೆಯ ಗುಣಗಳು ಮತ್ತು ನಿಮ್ಮ ತಪ್ಪುಒಪ್ಪುಗಳು ಹೆತ್ತವರಿಗೆ ತಿಳಿದುಬಂದವು. (ಯೋಬ 1:⁠5) ನೀವು ಹದಿಹರೆಯಕ್ಕೆ ಬಂದಾಗ ಹೊಸ ಸಮಸ್ಯೆಗಳು ಎದ್ದವು. ಕೆಲವೊಮ್ಮೆ ನೀವು ದಂಗೆಕೋರರಾಗಿ ವರ್ತಿಸಿದ್ದಿರಲೂಬಹುದು. ಆಗ ನಿಮ್ಮ ಸ್ವರ್ಗೀಯ ತಂದೆಯಾದ ಯೆಹೋವನನ್ನು ನೀವು ಬಿಡದೆ ಆರಾಧಿಸುವಂತೆ ಸಹಾಯ ಮಾಡುವುದು ಹೇಗೆಂದು ನಿಮ್ಮ ಹೆತ್ತವರು ಬಹಳವಾಗಿ ಯೋಚಿಸುತ್ತಾ ಇನ್ನೂ ಹೆಚ್ಚು ಪ್ರಾರ್ಥಿಸಿದರು, ಅದಕ್ಕಾಗಿ ಇನ್ನೂ ಹೆಚ್ಚು ಓದಿದರು.

ನಿಮ್ಮ ಹೆತ್ತವರಿಗೆ ನೀವು ಯಾವಾಗಲೂ ಅವರು ಹೆತ್ತುಹೊತ್ತು ಸಲಹಿದ ಚಿಕ್ಕ ಮಗುವಾಗಿದ್ದೀರಿ ಎಂದು ನೆನಪಿಡಿ. ನೀವು ಬೆಳೆದು ದೊಡ್ಡವರಾದ ಮೇಲೂ ನಿಮ್ಮ ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಕ್ಷೇಮಕ್ಕಾಗಿ ಅವರು ಚಿಂತಿಸುತ್ತಾ ಇರುತ್ತಾರೆ. ಆದರೂ ನಿಮ್ಮ ಸ್ವಂತ ನಿರ್ಣಯಗಳನ್ನು ನೀವೇ ಮಾಡಬೇಕಾಗಿದೆ ಎಂಬುದು ಹೆತ್ತವರಿಗೆ ನೆನಪಿದೆ ಮತ್ತು ಕೊನೆಗೆ ನಿಮ್ಮ ಜೀವನವು ಯಾವ ಕಡೆಗೆ ತಿರುಗಲಿದೆ ಎಂಬ ವಿಷಯದಲ್ಲಿ ಯಾವ ಗ್ಯಾರಂಟಿಯೂ ಇರುವುದಿಲ್ಲ. ಯಾವ ಮಾರ್ಗವನ್ನು ಅನುಸರಿಸಬೇಕೆಂದು ನಿಮಗಾಗಿ ನಿರ್ಣಯಿಸಿ ಕೊಳ್ಳುವವರು ಕಟ್ಟಕಡೆಗೆ ನೀವೇ ಆಗಿರುವಿರಿ.

ಹೀಗಿರುವಲ್ಲಿ, ತಮ್ಮ ಮಕ್ಕಳು ‘ಸತ್ಯವನ್ನನುಸರಿಸಿ ನಡೆಯುತ್ತಿದ್ದಾರೆ’ ಎಂದು ಕೇಳಿಸಿಕೊಳ್ಳುವುದಕ್ಕಿಂತ ‘ಹೆಚ್ಚಿನ ಸಂತೋಷವು’ ಹೆತ್ತವರಿಗೆ ಬೇರೆ ಯಾವುದೂ ಇಲ್ಲ ಎಂಬುದು ನ್ಯಾಯಸಮ್ಮತ. ಆದರೂ, ಇದಕ್ಕೆ ವ್ಯತಿರಿಕ್ತವಾದ ಸನ್ನಿವೇಶವು ಸಹಾ ಸತ್ಯ, ಅಂದರೆ ಬುದ್ಧಿಹೀನರಾಗಿ ನಡೆಯುವ ಮಕ್ಕಳು ನಿಶ್ಚಯವಾಗಿಯೂ ಅವರ ಹೆತ್ತವರಿಗೆ ದುಃಖವನ್ನು ತರುತ್ತಾರೆ. ಸೊಲೊಮೋನನು ಬರೆದುದು: “ಜ್ಞಾನಹೀನನಾದ ಮಗನು ತಂದೆಗೆ ಕಿರಿಕಿರಿ, ತಾಯಿಗೆ ಕರಕರೆ.” (ಜ್ಞಾನೋಕ್ತಿ 17:25) ನಿಶ್ಚಯವಾಗಿಯೂ ತಮ್ಮ ಮಗ/ಮಗಳು ಸತ್ಯದೇವರ ಆರಾಧನೆಯನ್ನು ತ್ಯಜಿಸಿಬಿಡುವಾಗ ಹೆತ್ತವರಿಗಾಗುವ ದುಃಖವಾದರೋ ಅಪಾರವೇ ಸರಿ!

ಸ್ಪಷ್ಟವಾಗಿ, ಎಳೆಯರೂ ಯುವಜನರೂ ಆಗಿರುವ ನೀವು ನಿಮ್ಮ ಕುಟುಂಬದ ಒಳಗೂ ಹೊರಗೂ ಗಮನಾರ್ಹ ಪ್ರಭಾವ ಬೀರುತ್ತೀರಿ. ನಿಮ್ಮ ವರ್ತನೆಗಳು ನಿಮ್ಮ ಹೆತ್ತವರ ಹೃದಯವನ್ನು ಆಳವಾಗಿ ಸ್ಪರ್ಶಿಸುತ್ತವೆ ಎಂಬುದಂತೂ ಖಂಡಿತ. ದೇವರನ್ನೂ ಆತನ ಮೂಲತತ್ತ್ವಗಳನ್ನೂ ನೀವು ತಿರಸ್ಕರಿಸುವುದಾದರೆ ನಿಮ್ಮ ಹೆತ್ತವರು ವ್ಯಥೆಗೀಡಾಗುವರು. ಇದಕ್ಕೆ ವ್ಯತಿರಿಕ್ತವಾದದ್ದು ಸಹ ಸತ್ಯ. ಯೆಹೋವನಿಗೆ ನೀವು ನಂಬಿಗಸ್ತರೂ ವಿಧೇಯರೂ ಆಗಿದ್ದರೆ ನಿಮ್ಮ ಹೆತ್ತವರು ಉಲ್ಲಾಸಿಸುವರು. ಆದುದರಿಂದ ನಿಮ್ಮ ಹೆತ್ತವರ ಹೃದಯವು ಹರ್ಷಿಸುವಂತೆ ಮಾಡಲು ದೃಢನಿಶ್ಚಯದಿಂದಿರ್ರಿ! ನಿಮ್ಮನ್ನು ಸಾಕಿ-ಸಲಹಿ ಪ್ರೀತಿಸಿದವರಿಗಾಗಿ ನೀವು ಕೊಡಬಲ್ಲ ಅತ್ಯಮೂಲ್ಯ ಕೊಡುಗೆ ಬೇರೊಂದಿಲ್ಲ ನಿಶ್ಚಯ. (w07 5/1)