ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾರ ನೈತಿಕ ಮಟ್ಟಗಳ ಮೇಲೆ ನೀವು ಭರವಸೆಯಿಡಸಾಧ್ಯವಿದೆ?

ಯಾರ ನೈತಿಕ ಮಟ್ಟಗಳ ಮೇಲೆ ನೀವು ಭರವಸೆಯಿಡಸಾಧ್ಯವಿದೆ?

ಯಾರ ನೈತಿಕ ಮಟ್ಟಗಳ ಮೇಲೆ ನೀವು ಭರವಸೆಯಿಡಸಾಧ್ಯವಿದೆ?

ಆಫ್ರಿಕ ದೇಶಕ್ಕೆ ಮೊದಲ ಬಾರಿ ಭೇಟಿ ನೀಡಿದ ಒಬ್ಬ ಸಂದರ್ಶಕನು, ರಸ್ತೆಯ ಬದಿಯಲ್ಲಿ ಅಲುಗಾಡದೆ ನೆಟ್ಟಗೆ ನಿಂತಿದ್ದ ಒಬ್ಬ ವ್ಯಕ್ತಿಯನ್ನು ನೋಡಿ ಕುತೂಹಲಗೊಂಡನು. ಕೆಲವು ನಿಮಿಷಗಳಿಗೆ ಒಮ್ಮೆ ಅವನು ಕಾಲೆಳೆದುಕೊಂಡು ಸ್ವಲ್ಪ ಮುಂದಕ್ಕೆ ಸರಿಯುತ್ತಿದ್ದು, ಪುನಃ ನೆಟ್ಟಗೆ ನಿಲ್ಲುತ್ತಿದ್ದದ್ದನ್ನು ಈ ಸಂದರ್ಶಕನು ಗಮನಿಸಿದನು. ಅವನು ಹಾಗೇಕೆ ಚಲಿಸುತ್ತಿದ್ದನು ಎಂಬುದು ಸಮಯಾನಂತರ ಈ ಸಂದರ್ಶಕನ ಅರಿವಿಗೆ ಬಂತು. ವಾಸ್ತವದಲ್ಲಿ, ಅವನು ಒಂದು ಟೆಲಿಫೋನ್‌ ಕಂಬದ ಛಾಯೆಯಲ್ಲಿ ನಿಲ್ಲಲು ಪ್ರಯತ್ನಿಸುತ್ತಿದ್ದನು. ಮಧ್ಯಾಹ್ನದ ಸೂರ್ಯನು ತನ್ನ ಸ್ಥಾನವನ್ನು ಬದಲಾಯಿಸುತ್ತಿರುವಾಗ, ಈ ಛಾಯೆಯು ಸಹ ನಿಧಾನವಾಗಿ ಬದಲಾಗುತ್ತಾ ಇತ್ತು.

ಸೂರ್ಯನಿಂದಾಗಿ ಕಂಬದ ನೆರಳಿನ ಛಾಯೆಯು ನಿಧಾನವಾಗಿ ಬದಲಾಗುತ್ತಿದ್ದಂತೆಯೇ, ಮಾನವ ವ್ಯವಹಾರಗಳು ಮತ್ತು ಮಟ್ಟಗಳು ಸಹ ಹೆಚ್ಚುಕಡಿಮೆಯಾಗುತ್ತಿವೆ ಹಾಗೂ ಬದಲಾಗುತ್ತಿವೆ. ಇದಕ್ಕೆ ವ್ಯತಿರಿಕ್ತವಾಗಿ, ‘ಮೇಲಣಿಂದ ಬರುವ ಸಕಲವಿಧವಾದ ಬೆಳಕಿಗೆ ಮೂಲಕಾರಣನಾದ’ ಯೆಹೋವ ದೇವರು ಮಾತ್ರ ಎಂದೂ ಬದಲಾಗುವುದಿಲ್ಲ. “ಆತನಲ್ಲಿ ಚಂಚಲತ್ವವೇನೂ ಇಲ್ಲ, ವ್ಯತ್ಯಾಸದ ಸೂಚನೆಯೂ ಇಲ್ಲ” ಎಂದು ಶಿಷ್ಯನಾದ ಯಾಕೋಬನು ಬರೆದನು. (ಯಾಕೋಬ 1:17) ಹೀಬ್ರು ಪ್ರವಾದಿಯಾದ ಮಲಾಕಿಯನು ದೇವರ ಸ್ವಂತ ಮಾತುಗಳನ್ನು ದಾಖಲಿಸಿದನು: “ಯೆಹೋವನಾದ ನಾನು ಮಾರ್ಪಟ್ಟಿಲ್ಲ.” (ಮಲಾಕಿಯ 3:6) ಯೆಶಾಯನ ದಿನಗಳಲ್ಲಿ ಇಸ್ರಾಯೇಲ್‌ ಜನಾಂಗಕ್ಕೆ ದೇವರು ಹೇಳಿದ್ದು: “ನಿಮ್ಮ ಮುಪ್ಪಿನ ತನಕ ನಾನೇ ಆಧಾರ, ನರೆಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು; . . . ನಾನೇ ಹೊರುವೆನು.” (ಯೆಶಾಯ 46:4) ಆದುದರಿಂದ, ಕಾಲದ ಗತಿಸುವಿಕೆಯು ಸರ್ವಶಕ್ತನ ವಾಗ್ದಾನಗಳಲ್ಲಿ ನಾವು ಇಟ್ಟಿರುವ ಭರವಸೆಯನ್ನೇನೂ ಬದಲಾಯಿಸಸಾಧ್ಯವಿಲ್ಲ.

ಮೋಶೆಯ ಧರ್ಮಶಾಸ್ತ್ರದಿಂದ ಒಂದು ಪಾಠ

ಯೆಹೋವನ ವಾಗ್ದಾನಗಳು ತುಂಬ ವಿಶ್ವಾಸಾರ್ಹ ಮತ್ತು ಅಚಲವಾಗಿರುವಂತೆಯೇ, ಒಳ್ಳೇದು ಹಾಗೂ ಕೆಟ್ಟದ್ದರ ಕುರಿತಾದ ಆತನ ಮಟ್ಟಗಳು ಸಹ ವಿಶ್ವಾಸಾರ್ಹವಾಗಿವೆ ಮತ್ತು ಅಚಲವಾಗಿವೆ. ಒಬ್ಬ ವ್ಯಾಪಾರಿಯು ಎರಡು ಜೊತೆ ತಕ್ಕಡಿಗಳನ್ನು ಉಪಯೋಗಿಸುತ್ತಿದ್ದು, ಅವುಗಳಲ್ಲಿ ಒಂದರ ತೂಕ ಮಾತ್ರ ಸರಿಯಾಗಿರುವಲ್ಲಿ, ಅಂಥ ವ್ಯಾಪಾರಿಯನ್ನು ನೀವು ನಂಬುತ್ತೀರೋ? ಖಂಡಿತವಾಗಿಯೂ ಇಲ್ಲ. ಅದೇ ರೀತಿಯಲ್ಲಿ, “ಮೋಸದ ತ್ರಾಸು ಯೆಹೋವನಿಗೆ ಅಸಹ್ಯ; ನ್ಯಾಯದ ತೂಕ ಆತನಿಗೆ ಸಂತೋಷ.” (ಜ್ಞಾನೋಕ್ತಿ 11:1; 20:10) ಇಸ್ರಾಯೇಲ್ಯರಿಗೆ ತಾನು ಕೊಟ್ಟಂಥ ಧರ್ಮಶಾಸ್ತ್ರದಲ್ಲಿ ಯೆಹೋವನು ಈ ಆಜ್ಞೆಯನ್ನೂ ಒಳಗೂಡಿಸಿದ್ದನು: “ನ್ಯಾಯವಿಚಾರಣೆ, ತೂಕ, ಅಳತೆ, ಪರಿಮಾಣ ಇವುಗಳಲ್ಲಿ ನೀವು ನ್ಯಾಯವಿರುದ್ಧವಾಗಿ ನಡೆಯಬಾರದು. ತಕ್ಕಡಿ, ತೂಕದ ಕಲ್ಲು, ಕೊಳಗ, ಸೇರು ಇವುಗಳೆಲ್ಲಾ ನ್ಯಾಯವಾಗಿಯೇ ಇರಬೇಕು. ನಾನು ನಿಮ್ಮನ್ನು ಐಗುಪ್ತದೇಶದಿಂದ ಬರಮಾಡಿದ ನಿಮ್ಮ ದೇವರಾದ ಯೆಹೋವನು.”​—ಯಾಜಕಕಾಂಡ 19:​35, 36.

ಆ ಆಜ್ಞೆಗೆ ವಿಧೇಯತೆ ತೋರಿಸುವ ಮೂಲಕ ಇಸ್ರಾಯೇಲ್ಯರು ದೇವರ ಅನುಗ್ರಹವನ್ನು ಹಾಗೂ ಅನೇಕ ಭೌತಿಕ ಪ್ರಯೋಜನಗಳನ್ನು ಪಡೆದುಕೊಂಡರು. ತದ್ರೀತಿಯಲ್ಲಿ, ತೂಕ ಹಾಗೂ ಅಳತೆಗಳಲ್ಲಿ ಮಾತ್ರವಲ್ಲ, ಜೀವಿತದ ಎಲ್ಲ ಕ್ಷೇತ್ರಗಳಲ್ಲಿ ಎಂದೂ ಬದಲಾಗದಂತಹ ಯೆಹೋವನ ಮಟ್ಟಗಳಿಗೆ ಭದ್ರವಾಗಿ ಅಂಟಿಕೊಳ್ಳುವ ಮೂಲಕ ಯಾರು ಆತನಲ್ಲಿ ಭರವಸೆಯಿಡುತ್ತಾರೋ ಅಂತಹ ಆರಾಧಕರಿಗೆ ಆಶೀರ್ವಾದಗಳು ಫಲಿಸುತ್ತವೆ. ದೇವರು ಪ್ರಕಟಿಸುವುದು: “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ.”​—ಯೆಶಾಯ 48:17.

ಇಂದಿನ ಮಟ್ಟಗಳು ಏಕೆ ಕೀಳ್ಮಟ್ಟಕ್ಕೆ ಇಳಿಯುತ್ತಿವೆ?

ಇಂದಿನ ಮಟ್ಟಗಳು ಏಕೆ ಕೀಳ್ಮಟ್ಟಕ್ಕೆ ಇಳಿಯುತ್ತಿವೆ ಎಂಬುದಕ್ಕೆ ಬೈಬಲ್‌ ಕಾರಣವನ್ನು ಕೊಡುತ್ತದೆ. ಬೈಬಲಿನ ಕೊನೆಯ ಪುಸ್ತಕವಾಗಿರುವ ಪ್ರಕಟನೆಯು, ಪರಲೋಕದಲ್ಲಿ ನಡೆದ ಒಂದು ಯುದ್ಧದ ಕುರಿತು ವರ್ಣಿಸುತ್ತದೆ. ಆ ಯುದ್ಧದ ಪರಿಣಾಮವು ಇಂದಿನ ತನಕ ಎಲ್ಲ ಮಾನವರನ್ನು ಬಾಧಿಸುತ್ತಿದೆ. ಅಪೊಸ್ತಲ ಯೋಹಾನನು ಬರೆದುದು: “ಪರಲೋಕದಲ್ಲಿ ಯುದ್ಧ ನಡೆಯಿತು. ಮೀಕಾಯೇಲನೂ ಅವನ ದೂತರೂ ಘಟಸರ್ಪನ ಮೇಲೆ ಯುದ್ಧಮಾಡುವದಕ್ಕೆ ಹೊರಟರು. ಘಟಸರ್ಪನೂ ಅವನ ದೂತರೂ ಯುದ್ಧಮಾಡಿ ಸೋತುಹೋದರು, ಮತ್ತು ಪರಲೋಕದೊಳಗೆ ಅವರಿಗೆ ಸ್ಥಾನವು ತಪ್ಪಿಹೋಯಿತು. ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ ಆ ಮಹಾ ಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪವು ದೊಬ್ಬಲ್ಪಟ್ಟು ಭೂಮಿಗೆ ಬಿದ್ದನು; ಅವನ ದೂತರೂ ಅವನೊಂದಿಗೆ ದೊಬ್ಬಲ್ಪಟ್ಟರು.”​—ಪ್ರಕಟನೆ 12:​7-9.

ಆ ಯುದ್ಧದಿಂದ ಉಂಟಾದ ಪರಿಣಾಮವೇನು? ಯೋಹಾನನು ಮುಂದುವರಿಸಿದ್ದು: “ಪರಲೋಕವೇ, ಅದರಲ್ಲಿ ವಾಸಮಾಡುವವರೇ, ಹರ್ಷಗೊಳ್ಳಿರಿ. ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ.”​—ಪ್ರಕಟನೆ 12:12.

ಇಸವಿ 1914ರಲ್ಲಿ ಒಂದನೆಯ ಲೋಕ ಯುದ್ಧವು ಆರಂಭವಾಗಿ, ಇಂದು ಇರುವ ಮಟ್ಟಗಳಿಗಿಂತ ತೀರ ಭಿನ್ನವಾಗಿದ್ದ ಮಟ್ಟಗಳ ಒಂದು ಯುಗವನ್ನೇ ಕೊನೆಗಾಣಿಸುವ ಮೂಲಕ, ‘ಭೂಮಿಗೆ ದುರ್ಗತಿಯು’ ಉಂಟಾಯಿತು. “1914-18ರ ಮಹಾ ಯುದ್ಧವು, ಯುದ್ಧಕ್ಕೆ ಮುಂಚಿನ ಕಾಲವನ್ನೂ ಯುದ್ಧಾನಂತರದ ಕಾಲವನ್ನು ವಿಭಾಗಿಸುವಂತಹ ಒಂದು ಪಟ್ಟಿಯಂತಿದೆ” ಎಂದು ಬಾರ್‌ಬ್ರ ಟಕ್‌ಮನ್‌ ಎಂಬ ಇತಿಹಾಸಗಾರರು ತಿಳಿಸುತ್ತಾರೆ. “ತದನಂತರದ ವರ್ಷಗಳಲ್ಲಿ ಪ್ರಯೋಜನಾರ್ಹವೂ ಉತ್ಪನ್ನದಾಯಕವೂ ಆಗಿರಸಾಧ್ಯವಿದ್ದ ಅನೇಕರ ಜೀವಗಳನ್ನು ಬಲಿತೆಗೆದುಕೊಳ್ಳುವ ಮೂಲಕ, ಧಾರ್ಮಿಕ ನಂಬಿಕೆಗಳನ್ನು ಹಾಳುಮಾಡುವ ಮೂಲಕ, ವಿಚಾರಗಳನ್ನು ಬದಲಾಯಿಸುವ ಮೂಲಕ ಮತ್ತು ಭ್ರಾಂತಿನಿವಾರಣೆಯ ವಾಸಿಮಾಡಲಾಗದಂತಹ ಗಾಯಗಳನ್ನು ಬಿಟ್ಟುಹೋಗುವ ಮೂಲಕ, ಈ ಯುದ್ಧವು ಎರಡು ಯುಗಗಳ ನಡುವೆ ಶಾರೀರಿಕ ಹಾಗೂ ಮಾನಸಿಕ ಅಂತರವನ್ನು ಉಂಟುಮಾಡಿತು.” ಎರಿಕ್‌ ಹಾಬ್ಸ್‌ಬಾಮ್‌ ಎಂಬ ಇನ್ನೊಬ್ಬ ಇತಿಹಾಸಗಾರರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ: “1914ರಿಂದ, ಅಭಿವೃದ್ಧಿಹೊಂದಿರುವ ದೇಶಗಳಲ್ಲಿ ಸಾಮಾನ್ಯವಾಗಿ ಪರಿಗಣಿಸಲ್ಪಡುತ್ತಿದ್ದ ಮಟ್ಟಗಳಲ್ಲಿ ಗಮನಾರ್ಹ ರೀತಿಯ ಅವನತಿಯುಂಟಾಗಿದೆ . . . ಹತ್ತೊಂಬತ್ತನೆಯ ಶತಮಾನದ ನಮ್ಮ ಪೂರ್ವಜರು ಯಾವುದನ್ನು ಅನಾಗರಿಕತೆಯ ಮಟ್ಟಗಳೆಂದು ಕರೆಯಸಾಧ್ಯವಿತ್ತೋ ಅಂಥ ಮಟ್ಟಗಳನ್ನು ಇಂದು ಎಷ್ಟು ತ್ವರಿತಗತಿಯಿಂದ ಬೆನ್ನಟ್ಟಲಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಷ್ಟೇನೂ ಸುಲಭವಾದದ್ದಲ್ಲ.”

ಮಾನವೀಯತೆ​—ಇಪ್ಪತ್ತನೆಯ ಶತಮಾನದ ಒಂದು ನೈತಿಕ ಇತಿಹಾಸ (ಇಂಗ್ಲಿಷ್‌) ಎಂಬ ತನ್ನ ಪುಸ್ತಕದಲ್ಲಿ, ಲೇಖಕನಾದ ಜಾನಥನ್‌ ಗ್ಲೋವರ್‌ ಬರೆಯುವುದು: “ನೈತಿಕ ನಿಯಮಗಳು ಅದೃಶ್ಯವಾಗುತ್ತಿರುವುದೇ ನಮ್ಮ ಕಾಲದ ಒಂದು ವೈಶಿಷ್ಟ್ಯವಾಗಿದೆ.” ಪಾಶ್ಚಿಮಾತ್ಯ ಲೋಕದಲ್ಲಿ ಧರ್ಮಗಳು ತೀರ ಅವನತಿ ಹೊಂದಿರುವ ಕಾರಣ, ಬಾಹ್ಯ ಮೂಲದಿಂದ ಬಂದಿರುವ ಯಾವುದೇ ನೈತಿಕ ನಿಯಮದ ಬಗ್ಗೆ ಇವರು ಸಂದೇಹವನ್ನು ವ್ಯಕ್ತಪಡಿಸುತ್ತಾರೆ. ಆದರೂ ಇವರು ಈ ಎಚ್ಚರಿಕೆಗಳನ್ನು ಕೊಡುತ್ತಾರೆ: “ಒಂದು ಧಾರ್ಮಿಕ ನೈತಿಕ ನಿಯಮದಲ್ಲಿ ನಂಬಿಕೆಯನ್ನು ಇಡದಿರುವಂಥವರು ಕೂಡ, ಧಾರ್ಮಿಕ ನೈತಿಕ ನಿಯಮವು ಕಣ್ಮರೆಯಾಗುತ್ತಿದೆ ಎಂಬ ಸಂಗತಿಯ ಬಗ್ಗೆ ಚಿಂತೆಯನ್ನು ತೋರಿಸಬೇಕಾಗಿದೆ.”

ವಾಣಿಜ್ಯ, ರಾಜಕೀಯ ಅಥವಾ ಧಾರ್ಮಿಕ ಕ್ಷೇತ್ರಗಳಲ್ಲಾಗಲಿ ಅಥವಾ ವೈಯಕ್ತಿಕ ಹಾಗೂ ಕುಟುಂಬದ ಸಂಬಂಧಗಳಲ್ಲಾಗಲಿ, ಇತ್ತೀಚಿನ ದಿನಗಳಲ್ಲಿ ನಂಬಿಕೆಗೆ ಮಾಡಲ್ಪಟ್ಟಿರುವ ದ್ರೋಹ ಹಾಗೂ ಅದರಿಂದ ಉಂಟಾಗಿರುವ ಘೋರ ಪರಿಣಾಮಗಳು, ಭೂಮಿಯ ನಿವಾಸಿಗಳ ಮೇಲೆ ದುರ್ಗತಿಯನ್ನು ಬರಮಾಡಲಿಕ್ಕಾಗಿ ಪಿಶಾಚನು ರಚಿಸಿರುವ ದುಷ್ಟ ಒಳಸಂಚಿನ ಭಾಗವಾಗಿವೆ. ಸೈತಾನನು ತನ್ನ ಯುದ್ಧವನ್ನು ಕೊನೆಯ ತನಕ ಹೋರಾಡಲು ನಿರ್ಧರಿಸಿದ್ದಾನೆ ಮತ್ತು ದೇವರ ಮಟ್ಟಗಳಿಗನುಸಾರ ಜೀವಿಸಲು ಪ್ರಯತ್ನಿಸುವವರೆಲ್ಲರನ್ನು ತನ್ನೊಂದಿಗೆ ನಾಶಗೊಳಿಸುವ ನಿರ್ಧಾರವನ್ನು ಮಾಡಿದ್ದಾನೆ.​—ಪ್ರಕಟನೆ 12:17.

ಇದರಿಂದ ಮುಕ್ತಿಯಿದೆಯೇ, ಅಂದರೆ ಪ್ರಧಾನವಾಗಿರುವ ನಂಬಿಕೆ ದ್ರೋಹದ ಸಮಸ್ಯೆಗೆ ಪರಿಹಾರವಿದೆಯೇ? ಅಪೊಸ್ತಲ ಪೌಲನು ಉತ್ತರಿಸುವುದು: “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.” (2 ಪೇತ್ರ 3:13) ಈ ವಾಗ್ದಾನದಲ್ಲಿ ನಾವು ಭರವಸೆಯಿಡಸಾಧ್ಯವಿದೆ. ಏಕೆಂದರೆ ತನ್ನ ಉದ್ದೇಶವನ್ನು ಪೂರೈಸುವ ಶಕ್ತಿ ದೇವರಿಗೆ ಇದೆ ಮಾತ್ರವಲ್ಲ, ಅದರ ನೆರವೇರಿಕೆಯ ಖಾತ್ರಿಯನ್ನು ಸಹ ಆತನು ನೀಡುತ್ತಾನೆ. ‘ತನ್ನ ಬಾಯಿಂದ ಹೊರಡುವ ಯಾವುದೇ ಮಾತಿನ’ ಕುರಿತು ಯೆಹೋವನು ತಿಳಿಸುವುದು: “[ಅದು] ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.” ಖಂಡಿತವಾಗಿಯೂ ಇದು ಒಂದು ವಿಶ್ವಾಸಾರ್ಹ ವಾಗ್ದಾನವಾಗಿದೆ!​—ಯೆಶಾಯ 55:11; ಪ್ರಕಟನೆ 21:​4, 5.

ದೇವರ ಮಟ್ಟಗಳಿಗನುಸಾರ ಜೀವಿಸುವುದು

ಹೆಚ್ಚುಕಡಿಮೆಯಾಗುತ್ತಿರುವ ಹಾಗೂ ಅವನತಿಹೊಂದುತ್ತಿರುವ ಮಟ್ಟಗಳಿರುವಂತಹ ಒಂದು ಲೋಕದಲ್ಲಿ, ಬೈಬಲ್‌ ಒದಗಿಸುವ ನಡತೆಯ ಮಟ್ಟಗಳಿಗನುಸಾರ ಜೀವಿಸಲು ಯೆಹೋವನ ಸಾಕ್ಷಿಗಳು ಸತತ ಪ್ರಯತ್ನಗಳನ್ನು ಮಾಡುತ್ತಾರೆ. ಇದರ ಫಲಿತಾಂಶವಾಗಿ, ಅಧಿಕಾಂಶ ಜನರಿಗಿಂತ ಅವರು ಭಿನ್ನರಾಗಿದ್ದಾರೆ. ಇದು ಅನೇಕವೇಳೆ ಇತರರ ಗಮನವನ್ನೂ ಸೆಳೆದಿದೆ ಮತ್ತು ಇತರರ ತುಚ್ಛೀಕಾರವನ್ನು ಸಹ ಅನುಭವಿಸುವಂತೆ ಮಾಡಿದೆ.

ಲಂಡನ್‌ನ ಯೆಹೋವನ ಸಾಕ್ಷಿಗಳ ಅಧಿವೇಶನವೊಂದರಲ್ಲಿ, ಯೆಹೋವನ ಸಾಕ್ಷಿಗಳು ನಿಜವಾಗಿಯೂ ಕ್ರೈಸ್ತರಾಗಿದ್ದಾರೋ ಎಂದು ಟಿವಿ ವರದಿಗಾರನು ಒಬ್ಬ ಪ್ರತಿನಿಧಿಗೆ ಕೇಳಿದನು. ಆ ಪ್ರತಿನಿಧಿಯು ಉತ್ತರಿಸಿದ್ದು: “ಹೌದು, ಖಂಡಿತವಾಗಿಯೂ ಕ್ರೈಸ್ತರಾಗಿದ್ದೇವೆ, ಏಕೆಂದರೆ ಯೇಸು ನಮ್ಮ ಮಾದರಿಯಾಗಿದ್ದಾನೆ. ಲೋಕದಲ್ಲಿ ತುಂಬ ಸ್ವಾರ್ಥವು ತುಂಬಿದೆ ಮತ್ತು ನಾವು ಮಾರ್ಗ, ಸತ್ಯ ಹಾಗೂ ಜೀವದೋಪಾದಿ ಯೇಸು ಕ್ರಿಸ್ತನ ಮೇಲೆ ಗಮನವನ್ನು ಕೇಂದ್ರೀಕರಿಸುತ್ತೇವೆ. ಅವನು ತ್ರಯೈಕ್ಯದ ಭಾಗವಾಗಿಲ್ಲ, ಬದಲಾಗಿ ದೇವಕುಮಾರನಾಗಿದ್ದಾನೆ ಎಂದು ನಾವು ನಂಬುತ್ತೇವೆ. ಆದುದರಿಂದ, ಬೈಬಲಿನ ಕುರಿತಾದ ನಮ್ಮ ತಿಳುವಳಿಕೆಯು, ಇತರ ಪ್ರಮುಖ ಧರ್ಮಗಳಿಗಿಂತ ತೀರ ಭಿನ್ನವಾಗಿದೆ.”

ಬಿಬಿಸಿ ಟೆಲಿವಿಷನ್‌ನಲ್ಲಿ ಈ ಇಂಟರ್‌ವ್ಯೂ ಅನ್ನು ಪ್ರಸಾರಮಾಡಿದಾಗ, ಈ ಮಾತುಗಳಿಂದ ವರದಿಗಾರನು ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದನು: “ಯೆಹೋವನ ಸಾಕ್ಷಿಗಳು ನಮ್ಮ ಮನೆಗಳಿಗೆ ಬರುವುದೇಕೆ ಎಂಬ ವಿಷಯದ ಕುರಿತು ನಾನು ಇನ್ನೂ ಅತ್ಯಧಿಕ ವಿಷಯಗಳನ್ನು ತಿಳಿದುಕೊಂಡಿದ್ದೇನೆ. ಮತ್ತು 25,000 ಜನರು ಇಷ್ಟು ಚೆನ್ನಾಗಿ ಉಡುಪು ಧರಿಸಿಕೊಂಡಿದ್ದು, ಒಂದೇ ಸ್ಥಳದಲ್ಲಿ ಏಕಕಾಲದಲ್ಲಿ ಒಟ್ಟಾಗಿ ಇಷ್ಟು ಒಳ್ಳೇ ರೀತಿಯಲ್ಲಿ ವರ್ತಿಸಿದ್ದನ್ನು ನಾನು ನೋಡಿಯೇ ಇಲ್ಲ ಎಂದು ನನಗನಿಸುತ್ತದೆ.” ದೇವರ ಬದಲಾಗದಂಥ ಮಟ್ಟಗಳಿಗೆ ಅನುಸಾರವಾಗಿ ನಡೆದುಕೊಂಡದ್ದರ ಬಗ್ಗೆ, ಹೊರಗಿನ ವ್ಯಕ್ತಿಯಿಂದ ಖಂಡಿತವಾಗಿಯೂ ಎಷ್ಟು ಅತ್ಯುತ್ತಮ ಪುರಾವೆಯು ನೀಡಲ್ಪಟ್ಟಿತು!

ಇತರರು ಸ್ಥಾಪಿಸಿರುವ ಮಟ್ಟಗಳಿಗನುಸಾರ ತಾವು ಜೀವಿಸಬೇಕು ಎಂಬ ವಿಚಾರವು ಕೆಲವರಿಗೆ ಇಷ್ಟವಾಗುವುದಿಲ್ಲ. ಆದರೆ, ಸ್ವತಃ ನೀವೇ ನಿಮ್ಮ ಬೈಬಲನ್ನು ಪರಿಶೀಲಿಸಿ ದೇವರ ಮಟ್ಟಗಳ ಕುರಿತು ಕಲಿತುಕೊಳ್ಳುವಂತೆ ನಾವು ನಿಮ್ಮನ್ನು ಉತ್ತೇಜಿಸುತ್ತೇವೆ. ಆದರೂ ಬೈಬಲನ್ನು ಮೇಲೆ ಮೇಲೆ ಮಾತ್ರ ಪರಿಶೀಲಿಸುವುದರಲ್ಲಿ ಸಂತೃಪ್ತರಾಗಬೇಡಿ. ಅಪೊಸ್ತಲ ಪೌಲನ ಬುದ್ಧಿವಾದವನ್ನು ಅನುಸರಿಸಿರಿ: “ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ.” (ರೋಮಾಪುರ 12:2) ನಿಮ್ಮ ಸಮುದಾಯದಲ್ಲಿರುವ ರಾಜ್ಯ ಸಭಾಗೃಹವನ್ನು ಸಂದರ್ಶಿಸಿರಿ ಮತ್ತು ಅಲ್ಲಿನ ಸಾಕ್ಷಿಗಳ ಪರಿಚಯಮಾಡಿಕೊಳ್ಳಿರಿ. ಅವರು ಸಾಮಾನ್ಯ ಜನರಾಗಿದ್ದು, ಬೈಬಲಿನ ವಾಗ್ದಾನಗಳಲ್ಲಿ ಭರವಸೆಯಿಡುತ್ತಾರೆ ಮತ್ತು ದೇವರ ಮಟ್ಟಗಳಿಗನುಸಾರ ಜೀವಿಸಲು ಪ್ರಯತ್ನಿಸುವ ಮೂಲಕ ಆತನಲ್ಲಿರುವ ತಮ್ಮ ದೃಢವಿಶ್ವಾಸವನ್ನು ತೋರ್ಪಡಿಸುತ್ತಾರೆ ಎಂಬುದು ನಿಮಗೇ ಗೊತ್ತಾಗುವುದು.

ನಿಮ್ಮ ವೈಯಕ್ತಿಕ ಜೀವನದಲ್ಲಿ ದೇವರ ಅಚಲವಾದ ಹಾಗೂ ವಿಶ್ವಾಸಾರ್ಹ ಮಟ್ಟಗಳಿಗೆ ಭದ್ರವಾಗಿ ಅಂಟಿಕೊಳ್ಳುವುದು, ಖಂಡಿತವಾಗಿಯೂ ನಿಮಗೆ ಆಶೀರ್ವಾದಗಳನ್ನು ತರುವುದು. ದೇವರು ತಾನೇ ಕೊಡುವ ಆಮಂತ್ರಣಕ್ಕೆ ಕಿವಿಗೊಡಿರಿ: “ನೀನು ನನ್ನ ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು! ನಿನ್ನ ಸುಖವು ದೊಡ್ಡ ನದಿಯಂತೆಯೂ ನಿನ್ನ ಕ್ಷೇಮವು ಸಮುದ್ರದ ಅಲೆಗಳ ಹಾಗೂ ಇರುತ್ತಿದ್ದವು.”​—ಯೆಶಾಯ 48:18.

[ಪುಟ 5ರಲ್ಲಿರುವ ಚಿತ್ರಗಳು]

ವಾಣಿಜ್ಯ, ರಾಜಕೀಯ, ಧರ್ಮ ಹಾಗೂ ಕುಟುಂಬ ಸಂಬಂಧಗಳಲ್ಲಿ ಇಂದು ನಂಬಿಕೆ ದ್ರೋಹವಿದೆ