ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗರ್ಭನಿರೋಧ—ದೇವರ ನೈತಿಕ ಮಟ್ಟಗಳಿಗೆ ವಿರುದ್ಧವಾಗಿದೆಯೋ?

ಗರ್ಭನಿರೋಧ—ದೇವರ ನೈತಿಕ ಮಟ್ಟಗಳಿಗೆ ವಿರುದ್ಧವಾಗಿದೆಯೋ?

ಬೈಬಲಿನ ದೃಷ್ಟಿಕೋನ

ಗರ್ಭನಿರೋಧ​—⁠ದೇವರ ನೈತಿಕ ಮಟ್ಟಗಳಿಗೆ ವಿರುದ್ಧವಾಗಿದೆಯೋ?

ನಿಮಗೇನು ಅನಿಸುತ್ತದೆ? ವಿವಾಹಿತರು ಗರ್ಭನಿರೋಧಕವನ್ನು ಬಳಸುವುದು ತಪ್ಪೋ? ಈ ಪ್ರಶ್ನೆಗಳಿಗೆ ನಿಮ್ಮ ಉತ್ತರವು ನಿಮ್ಮ ಧಾರ್ಮಿಕ ನಂಬಿಕೆಗಳ ಮೇಲೆ ಹೊಂದಿಕೊಂಡಿರಬಹುದು. ಕ್ಯಾಥೊಲಿಕ್‌ ಚರ್ಚ್‌ ಬೋಧನೆಗನುಸಾರ ಸಂತಾನೋತ್ಪತ್ತಿಯನ್ನು ತಡೆಗಟ್ಟಲು ಮಾಡಿರುವ ಪ್ರತಿಯೊಂದು ಪ್ರಯತ್ನವು “ಮೂಲತಃ ದುಷ್ಕೃತ್ಯವಾಗಿದೆ.” ವಿವಾಹಿತರ ನಡುವಿನ ಪ್ರತಿಯೊಂದು ಲೈಂಗಿಕ ಸಂಭೋಗವು ಗರ್ಭಧಾರಣೆಗೆ ನಡೆಸುವಂತಿರಲೇ ಬೇಕು ಎಂಬುದು ಕ್ಯಾಥೊಲಿಕ್‌ ಸಿದ್ಧಾಂತವು ಪ್ರವರ್ಧಿಸುತ್ತಿರುವ ಧೋರಣೆಯಾಗಿದೆ. ಹೀಗಿರುವುದರಿಂದ, ಕ್ಯಾಥೊಲಿಕ್‌ ಚರ್ಚ್‌ಗನುಸಾರ ಗರ್ಭನಿರೋಧ “ನೈತಿಕವಾಗಿ ಅನಂಗೀಕೃತ.”

ಆದರೆ ಈ ಧೋರಣೆಯನ್ನು ಅಂಗೀಕರಿಸುವುದು ಅನೇಕರಿಗೆ ಕಷ್ಟ. ಈ ವಿಷಯದ ಕುರಿತು ಪಿಟ್ಸ್‌ಬರ್ಗ್‌ ಪೋಸ್ಟ್‌-ಗಜಟ್‌ನ ಒಂದು ಲೇಖನವು ವರದಿಸುವುದು: “ಕೃತಕ ಜನನ ನಿಯಂತ್ರಣದ ಬಳಕೆಯನ್ನು ಚರ್ಚ್‌ ಅನುಮತಿಸಬೇಕೆಂಬುದು ಅಮೇರಿಕದಲ್ಲಿನ 75 ಪ್ರತಿಶತಕ್ಕಿಂತಲೂ ಅಧಿಕ ಕ್ಯಾಥೊಲಿಕರ ಅಭಿಪ್ರಾಯ. . . . ಮತ್ತು ಪ್ರತಿದಿನವೂ ಲಕ್ಷಾಂತರ ಜನರು ಈ ನಿಷೇಧವನ್ನು ಉಲ್ಲಂಘಿಸುತ್ತಾರೆ.” ಮೂರು ಮಕ್ಕಳ ತಾಯಿಯಾದ ಲಿಂಡಾ ಅವರಲ್ಲಿ ಒಬ್ಬಳು. ಆಕೆ ಗರ್ಭನಿರೋಧಕ ಬಳಸುವುದನ್ನು ಯಾವುದೇ ಸಂಕೋಚವಿಲ್ಲದೆ ಒಪ್ಪಿಕೊಳ್ಳುತ್ತಾಳೆ. ಆದರೆ ಅವಳನ್ನುವುದು: “ನಿಜ ಹೇಳುವುದಾದರೆ, ನನ್ನ ಮನಸ್ಸಾಕ್ಷಿ ಪ್ರಕಾರ ನಾನು ಪಾಪಮಾಡುತ್ತಿಲ್ಲ.”

ಈ ವಿಷಯದ ಕುರಿತು ದೇವರ ವಾಕ್ಯವು ಏನು ಹೇಳುತ್ತದೆ?

ಜೀವವು ಅಮೂಲ್ಯ

ಗರ್ಭಧಾರಣೆಯ ಅತ್ಯಾರಂಭದ ಹಂತದಲ್ಲೂ ಮಗುವಿನ ಜೀವವನ್ನು ದೇವರು ಅಮೂಲ್ಯವಾದುದೆಂದು ಪರಿಗಣಿಸುತ್ತಾನೆ. ಇಸ್ರಾಯೇಲಿನ ಅರಸ ದಾವೀದನು ಪ್ರೇರಿತನಾಗಿ ಬರೆದದ್ದು: “ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನಲ್ಲವೋ? . . . ನಾನು ಇನ್ನೂ ಕೇವಲ ಪಿಂಡವಾಗಿರುವಾಗ ನಿನ್ನ ಕಣ್ಣುಗಳು ನನ್ನನ್ನು ನೋಡಿದವು; ನನ್ನ ಆಯುಷ್ಕಾಲದ ಪ್ರಥಮದಿನವು ಪ್ರಾರಂಭವಾಗುವ ಮೊದಲೇ ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು.” (ಕೀರ್ತನೆ 139:13, 16) ಒಂದು ಹೊಸ ಜೀವವು ಗರ್ಭಧಾರಣೆಯಲ್ಲಿ ಆರಂಭವಾಗುವುದರಿಂದ ಇನ್ನೂ ಜನಿಸದ ಮಗುವಿಗೆ ಹಾನಿ ಮಾಡುವ ಒಬ್ಬನಿಗೆ ಶಿಕ್ಷೆ ವಿಧಿಸಸಾಧ್ಯವಿತ್ತು ಎಂದು ಮೋಶೆಯ ಧರ್ಮಶಾಸ್ತ್ರವು ಸೂಚಿಸುತ್ತದೆ. ಇದರ ಕುರಿತು ವಿಮೋಚನಕಾಂಡ 21:22, 23 ಸ್ಪಷ್ಟವಾಗಿ ವಿವರಿಸಿದೇನಂದರೆ, ಇಬ್ಬರು ಮನುಷ್ಯರು ಜಗಳವಾಡಿದ ಪರಿಣಾಮವಾಗಿ ಗರ್ಭಿಣಿ ಸ್ತ್ರೀ ಇಲ್ಲವೆ ಅವಳ ಅಜಾತ ಶಿಶುವಿಗೆ ಮಾರಕ ಪೆಟ್ಟಾದಲ್ಲಿ, ಆ ವಿಷಯವನ್ನು ನೇಮಿತ ನ್ಯಾಯಧೀಶರ ಮುಂದೆ ತರಬೇಕು. ಅವರು ಪರಿಸ್ಥಿತಿಯನ್ನು ತೂಗಿನೋಡಿ ಅದು ಉದ್ದೇಶಪೂರ್ವಕವಾಗಿ ಮಾಡಿದ್ದೋ ಇಲ್ಲವೋ ಎಂದು ವಿಚಾರಿಸುವರು. ಇದಕ್ಕೆ ಶಿಕ್ಷೆಯು “ಪ್ರಾಣಕ್ಕೆ ಪ್ರತಿಯಾಗಿ ಪ್ರಾಣ” ಅಥವಾ ಜೀವಕ್ಕೆ ಪ್ರತಿಯಾಗಿ ಜೀವವಾಗಿರಸಾಧ್ಯವಿತ್ತು.

ಆ ಮೂಲತತ್ತ್ವಗಳು ಗರ್ಭನಿರೋಧದ ವಿಷಯಕ್ಕೂ ಅನ್ವಯವಾಗುತ್ತವೆ. ಏಕೆಂದರೆ, ಸಂತಾನ ನಿಯಂತ್ರಣದ ಕೆಲವು ವಿಧಾನಗಳು ಗರ್ಭಪಾತದಂತೆ ತೋರುತ್ತವೆ. ಇಂಥ ಗರ್ಭನಿರೋಧಕ ವಿಧಾನಗಳು ಜೀವಕ್ಕೆ ಗೌರವ ತೋರಿಸುವ ದೈವಿಕ ಮೂಲತತ್ತ್ವಕ್ಕೆ ಹೊಂದಿಕೆಯಾಗಿರುವುದಿಲ್ಲ. ಆದರೆ ಬಹುತೇಕ ಗರ್ಭನಿರೋಧಕಗಳಿಂದ ಗರ್ಭಪಾತವಾಗುವುದಿಲ್ಲ. ಅಂಥ ಸಂತಾನ ನಿಯಂತ್ರಣಗಳ ವಿಧಾನಗಳನ್ನು ಬಳಸುವುದರ ಕುರಿತೇನು?

ಕ್ರೈಸ್ತರು ಸಂತಾನೋತ್ಪತ್ತಿ ಮಾಡಬೇಕೆಂಬ ಆಜ್ಞೆ ಬೈಬಲಿನಲ್ಲಿ ಎಲ್ಲಿಯೂ ಕಂಡುಬರುವುದಿಲ್ಲ. ದೇವರು ಪ್ರಥಮ ಮಾನವ ದಂಪತಿ ಮತ್ತು ನೋಹನ ಕುಟುಂಬಕ್ಕೆ ಹೇಳಿದ್ದು: “ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಲೋಕದಲ್ಲೆಲ್ಲಾ ತುಂಬಿಕೊಳ್ಳಿರಿ.” ಆದರೆ ಈ ಆಜ್ಞೆಯು ಕ್ರೈಸ್ತರಿಗೆ ಪುನರಾವರ್ತಿಸಲ್ಪಡಲಿಲ್ಲ. (ಆದಿಕಾಂಡ 1:28; 9:1) ಆದುದರಿಂದ, ವಿವಾಹಿತ ದಂಪತಿಗಳು ತಾವು ಮಕ್ಕಳನ್ನು ಪಡೆಯಬೇಕೋ, ಎಷ್ಟು ಮಕ್ಕಳು ಬೇಕು ಮತ್ತು ಯಾವಾಗ ಬೇಕು ಎಂಬುದನ್ನು ಸ್ವತಃ ನಿರ್ಣಯಿಸಬಹುದು. ಅದೇ ರೀತಿ ಸಂತಾನ ನಿಯಂತ್ರಣವನ್ನು ಬೈಬಲ್‌ ಖಂಡಿಸುವುದಿಲ್ಲ. ಬೈಬಲಿನ ದೃಷ್ಟಿಕೋನದಲ್ಲಿ, ಒಬ್ಬ ಪತಿ ಹಾಗೂ ಪತ್ನಿಯು ಗರ್ಭಪಾತವಾಗದಂಥ ಗರ್ಭನಿರೋಧಕವನ್ನು ಉಪಯೋಗಿಸುವುದು ನಿಜಕ್ಕೂ ಅವರ ಸ್ವಂತ ನಿರ್ಣಯವಾಗಿದೆ. ಹಾಗಾದರೆ, ಕ್ಯಾಥೊಲಿಕ್‌ ಚರ್ಚ್‌ ಗರ್ಭನಿರೋಧಕವನ್ನು ಖಂಡಿಸುವುದೇಕೆ?

ಮಾನವ ವಿವೇಕವೋ ದೈವಿಕ ವಿವೇಕವೋ

ಕ್ಯಾಥೊಲಿಕ್‌ ಮೂಲಗಳಿಗನುಸಾರ ಕ್ರೈಸ್ತರೆಂದು ಹೇಳಿಕೊಂಡವರು ಮೊಟ್ಟಮೊದಲು ಸ್ಟೋಯಿಕ್‌ ನಿಯಮವನ್ನು ಸ್ವೀಕರಿಸಿಕೊಂಡದ್ದು ಎರಡನೇ ಶತಮಾನದಲ್ಲಿ. ಆ ನಿಯಮದ ಪ್ರಕಾರ ವೈವಾಹಿಕ ಜೀವನದಲ್ಲಿ ಸಂಭೋಗ ಮಾಡುವುದರ ಒಂದೇ ಒಂದು ಉದ್ದೇಶ ಸಂತಾನೋತ್ಪತ್ತಿಯಾಗಿದೆ. ಈ ವೀಕ್ಷಣದ ಹಿಂದಿರುವ ತರ್ಕವು ಮಾನವ ತತ್ತ್ವಜ್ಞಾನವಾಗಿದೆಯೇ ಹೊರತು ಬೈಬಲಿನದಲ್ಲ. ಅದು ದೇವರ ವಿವೇಕದ ಮೇಲೆ ಅಲ್ಲ ಬದಲಿಗೆ ಮಾನವ ವಿವೇಕದ ಮೇಲೆ ಆಧಾರಗೊಂಡಿದೆ. ಈ ತತ್ತ್ವಜ್ಞಾನವು ಶತಮಾನದ್ದುದ್ದಕ್ಕೂ ಮುಂದುವರಿದು ವಿವಿಧ ಕ್ಯಾಥೊಲಿಕ್‌ ದೇವತಾಶಾಸ್ತ್ರಜ್ಞರ ವಿವರಗಳಿಂದ ಇನ್ನಷ್ಟು ವಿಸ್ತಾರಗೊಂಡಿತು. * ಲೈಂಗಿಕ ಸುಖಾನುಭವವೇ ಪಾಪವಾಗಿದೆ ಎಂಬುದು ಈ ಬೋಧನೆಯ ತಾರ್ಕಿಕ ತಾತ್ಪರ್ಯ. ಅಂದರೆ, ಸಂತಾನೋತ್ಪತ್ತಿಯ ಸಾಧ್ಯತೆಯನ್ನು ಹೊರತು ಪಡಿಸುವ ಲೈಂಗಿಕ ಸಂಬಂಧಗಳು ಅನೈತಿಕವಾಗಿವೆ ಎಂದು ಅರ್ಥ. ಆದರೆ ಬೈಬಲ್‌ ಈ ರೀತಿ ಬೋಧಿಸುತ್ತಿಲ್ಲ.

ಪತಿಪತ್ನಿಯ ನಡುವಿನ ಯೋಗ್ಯವಾದ ಲೈಂಗಿಕ ಆಪ್ತತೆಯಿಂದ ಉಂಟಾಗಬಲ್ಲ ಆನಂದದ ಕುರಿತು ಬೈಬಲಿನ ಜ್ಞಾನೋಕ್ತಿ ಪುಸ್ತಕವು ಕಾವ್ಯಾತ್ಮಕ ಭಾಷೆಯಲ್ಲಿ ಹೀಗೆ ವಿವರಿಸುತ್ತದೆ: “ಸ್ವಂತ ಕೊಳದ ನೀರನ್ನು, ಸ್ವಂತ ಬಾವಿಯಲ್ಲಿ ಉಕ್ಕುವ ಜಲವನ್ನು ಮಾತ್ರ ಕುಡಿ. . . . ನಿನ್ನ ಬುಗ್ಗೆಯು [ದೇವರ] ಆಶೀರ್ವಾದವನ್ನು ಹೊಂದಲಿ, ನಿನ್ನ ಯೌವನಕಾಲದ ಪತ್ನಿಯಲ್ಲಿ ಆನಂದಿಸು. ಆಕೆ ಮನೋಹರವಾದ ಜಿಂಕೆಯಂತೆಯೂ ಅಂದವಾದ ದುಪ್ಪಿಯ ಹಾಗೂ ಇರುವಳಲ್ಲಾ; ಆಕೆಯ ಸ್ತನಗಳು ನಿನ್ನನ್ನು ಸರ್ವದಾ ತೃಪ್ತಿಪಡಿಸಲಿ, ಆಕೆಯ ಪ್ರೀತಿಯಲ್ಲೇ ನಿರಂತರ ಲೀನವಾಗಿರು.”​—⁠ಜ್ಞಾನೋಕ್ತಿ 5:15, 18, 19.

ಹೀಗಿರಲಾಗಿ, ಪತಿಪತ್ನಿಯ ನಡುವಿನ ಲೈಂಗಿಕ ಸಂಬಂಧವು ದೇವರ ಉಡುಗೊರೆಯಾಗಿದೆ. ಆದರೆ, ಸಂತಾನೋತ್ಪತ್ತಿಯೇ ಅದರ ಏಕಮಾತ್ರ ಉದ್ದೇಶವಲ್ಲ. ವಿವಾಹಿತ ಜೋಡಿಯು ಪರಸ್ಪರ ಕೋಮಲತೆ ಮತ್ತು ಮಮತೆಯನ್ನು ತೋರಿಸುವಂತೆ ಸಹ ಲೈಂಗಿಕ ಸಂಬಂಧಗಳು ಅನುವು ಮಾಡಿಕೊಡುತ್ತವೆ. ಆದುದರಿಂದ, ದಂಪತಿಯು ಕೆಲವೊಂದು ವಿಧದ ಗರ್ಭನಿರೋಧಕಗಳನ್ನು ಬಳಸುವ ಮೂಲಕ ಗರ್ಭಧಾರಣೆಯನ್ನು ತಡೆಯಲು ತೀರ್ಮಾನಿಸುವುದಾದರೆ, ಅಂಥ ನಿರ್ಣಯಮಾಡುವ ಹಕ್ಕು ಅವರಿಗೆ ಇದೆ. ಅವರ ಕುರಿತು ಯಾರೂ ತೀರ್ಪುಮಾಡಬಾರದು.​—⁠ರೋಮಾಪುರ 14:4, 10-13. (g 9/07)

ಇದರ ಬಗ್ಗೆ ನೀವು ಯೋಚಿಸಿದ್ದುಂಟೋ?

◼ ಪತಿಪತ್ನಿಯರ ನಡುವಿನ ಲೈಂಗಿಕ ಸಂಬಂಧಗಳಲ್ಲಿ ಏನಾದರೂ ಪಾಪವಿದೆಯೋ?​ಜ್ಞಾನೋಕ್ತಿ 5:15, 18, 19.

◼ ಕ್ರೈಸ್ತರು ಗರ್ಭನಿರೋಧಕಗಳನ್ನು ಬಳಸುವುದಾದರೆ ಏನನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು?​ವಿಮೋಚನಕಾಂಡ 21:22, 23.

◼ ಗರ್ಭನಿರೋಧಕಗಳನ್ನು ಉಪಯೋಗಿಸುವ ವಿವಾಹಿತ ದಂಪತಿಗಳನ್ನು ಇತರರು ಹೇಗೆ ವೀಕ್ಷಿಸಬೇಕು? ​ರೋಮಾಪುರ 14:4, 10-13.

[ಪಾದಟಿಪ್ಪಣಿ]

^ “ವಿಶ್ವದಲ್ಲೇ ಗರ್ಭನಿರೋಧದ ವಿರುದ್ಧ ಪೋಪ್‌ನ ಪ್ರಪ್ರಥಮ ಶಾಸನ” ಎಂದು ನ್ಯೂ ಕ್ಯಾಥೊಲಿಕ್‌ ಎನ್‌ಸೈಕ್ಲಪೀಡೀಯ ಹೆಸರಿಸುವ ಕಾಯಿದೆಯನ್ನು ಒಂಬತ್ತನೆಯ ಗ್ರೆಗರಿ ವಿಧಿಸಿದ್ದು ಕೇವಲ 13ನೇ ಶತಮಾನದಲ್ಲೇ.

[ಪುಟ 11ರಲ್ಲಿರುವ ಸಂಕ್ಷಿಪ್ತ ವಿವರಣೆ]

ದೇವರು ಪ್ರಥಮ ಮಾನವ ದಂಪತಿ ಮತ್ತು ನೋಹನ ಕುಟುಂಬಕ್ಕೆ ಹೇಳಿದ್ದು: “ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಲೋಕದಲ್ಲೆಲ್ಲಾ ತುಂಬಿಕೊಳ್ಳಿರಿ.” ಆದರೆ ಈ ಆಜ್ಞೆಯು ಕ್ರೈಸ್ತರಿಗೆ ಪುನರಾವರ್ತಿಸಲ್ಪಡಲಿಲ್ಲ