ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರು ಕೆಲವು ಪ್ರಾರ್ಥನೆಗಳನ್ನ ಯಾಕೆ ಕೇಳಲ್ಲ?

ದೇವರು ಕೆಲವು ಪ್ರಾರ್ಥನೆಗಳನ್ನ ಯಾಕೆ ಕೇಳಲ್ಲ?

ಯೆಹೋವ ದೇವರು ನಾವಾತನಿಗೆ ಪ್ರಾರ್ಥಿಸಬೇಕು ಅಂತ ಬಯಸ್ತಾನೆ ಮತ್ತು ಅದನ್ನ ಕೇಳಿಸ್ಕೊಂಡಾಗ ತುಂಬ ಖುಷಿಪಡ್ತಾನೆ. ಆದ್ರೆ ದೇವರು ಎಲ್ಲ ಪ್ರಾರ್ಥನೆಗಳನ್ನ ಯಾಕೆ ಕೇಳಲ್ಲ? ಯಾವ ತರ ಪ್ರಾರ್ಥಿಸಿದ್ರೆ ಕೇಳ್ತಾನೆ? ಇದರ ಬಗ್ಗೆ ಪವಿತ್ರ ಗ್ರಂಥ ಏನು ಹೇಳುತ್ತೆ ನೋಡೋಣ.

‘ನೀನು ಪ್ರಾರ್ಥನೆಮಾಡುವಾಗ ಹೇಳಿದ್ದನ್ನೇ ಪುನಃ ಪುನಃ ಹೇಳಬೇಡ.’—ಮತ್ತಾಯ 6:7.

ನಿಮ್ಮ ಫ್ರೆಂಡ್‌ ಯಾವಾಗಲು ಹೇಳಿದ ವಿಷ್ಯನೇ ಹೇಳ್ತಿದ್ರೆ ಹೇಗನಿಸುತ್ತೆ? ದಿನಾ ಅದನ್ನೇ ಕೇಳಿಕೇಳಿ ಸಾಕಾಗಿ ಹೋಗುತ್ತಲ್ವಾ? ಅದೇ ತರ ನೀವುನೂ ಯಾವಾಗ್ಲೂ ಒಂದು ಪುಸ್ತಕದಿಂದ ಪ್ರಾರ್ಥನೆನ ಓದ್ತಿದ್ರೆ ಅಥವಾ ಬಾಯಿಪಾಠ ಮಾಡಿ ಅದನ್ನೇ ಪದೇಪದೇ ಹೇಳ್ತಿದ್ರೆ ಯೆಹೋವ ದೇವರಿಗೆ ಇಷ್ಟ ಆಗಲ್ಲ. ನಾವು ಪ್ರಾರ್ಥಿಸುವಾಗ ಸ್ವಂತ ಮಾತಲ್ಲಿ ಮನಬಿಚ್ಚಿ ಎಲ್ಲಾ ಭಾವನೆಗಳನ್ನ ಹೇಳಿಕೊಳ್ಳಬೇಕಂತ ದೇವರು ಇಷ್ಟಪಡ್ತಾನೆ.

‘ನೀವು ಬೇಡಿಕೊಳ್ಳುತ್ತೀರಾದರೂ ಪಡೆದುಕೊಳ್ಳುವುದಿಲ್ಲ, ಏಕೆಂದರೆ ತಪ್ಪಾದ ಉದ್ದೇಶದಿಂದ ಬೇಡಿಕೊಳ್ಳುತ್ತಿದ್ದೀರಿ.’—ಯಾಕೋಬ 4:3.

ಒಂದು ವಿಷ್ಯ ದೇವರಿಗೆ ಇಷ್ಟ ಆಗಲ್ಲ ಅಂತ ಗೊತ್ತಿದ್ರೂ ಅದಕ್ಕಾಗಿ ಪ್ರಾರ್ಥಿಸ್ತಿದ್ರೆ ಅಂತ ಪ್ರಾರ್ಥನೆಗಳನ್ನ ದೇವರು ಕೇಳಲ್ಲ. ಉದಾಹರಣೆಗೆ ಒಬ್ಬ ವ್ಯಕ್ತಿ ದುಡ್ಡಿನ ಆಸೆಗಾಗಿ ಜೂಜಾಡಿ, ಅದೃಷ್ಟ ಚೆನ್ನಾಗಿರೋ ಹಾಗೆ ಮಾಡಿ ಇದ್ರಲ್ಲಿ ನನ್ನ ಗೆಲ್ಸಪ್ಪಾ ಅಂತ ಯೆಹೋವ ದೇವರ ಹತ್ರ ಬೇಡ್ಕೊಂಡ್ರೆ ಆತನು ಅದನ್ನ ಕೇಳ್ತಾನಾ? ಇಲ್ಲ. ಯಾಕಂದ್ರೆ ದುರಾಸೆಪಡಬಾರದು ಮತ್ತು ಅದೃಷ್ಟದಲ್ಲಿ ನಂಬಿಕೆ ಇಡಬಾರದು ಅಂತ ದೇವರು ಸ್ಪಷ್ಟವಾಗಿ ಹೇಳಿದ್ದಾನೆ. (ಯೆಶಾಯ 65:11; ಲೂಕ 12:15) ದೇವರು ನಮ್ಮ ಪ್ರಾರ್ಥನೆಗಳನ್ನ ಕೇಳಬೇಕಂದ್ರೆ ಇಂಥ ತಪ್ಪಾದ ವಿಷ್ಯಗಳಿಗಾಗಿ ಪ್ರಾರ್ಥಿಸಬಾರದು. ಬದಲಿಗೆ ಆತನ ದೃಷ್ಟಿಯಲ್ಲಿ ಯಾವುದು ಸರಿ ಅಂತ ತಿಳ್ಕೊಂಡು ಅದಕ್ಕಾಗಿ ಪ್ರಾರ್ಥಿಸಬೇಕು.

‘ದೇವರ ಉಪದೇಶಕ್ಕೆ ಕಿವಿಗೊಡದವನು ಮಾಡುವ ಪ್ರಾರ್ಥನೆ ಅಸಹ್ಯ.’—ಜ್ಞಾನೋಕ್ತಿ 28:9.

ಹಿಂದಿನ ಕಾಲದಲ್ಲಿ ಕೆಟ್ಟ ಕೆಲಸಗಳನ್ನ ಮಾಡ್ತಾ ಯಾರು ದೇವರ ನಿಯಮನ ಪಾಲಿಸುತ್ತಾ ಇರಲಿಲ್ಲವೋ ಅಂಥವರ ಪ್ರಾರ್ಥನೆಗಳನ್ನ ಆತನು ಕೇಳ್ತಿರಲಿಲ್ಲ. (ಯೆಶಾಯ 1:15, 16) ದೇವರು ಬದಲಾಗಿಲ್ಲ, ಇಂದು ಸಹ ಅಂಥವರ ಪ್ರಾರ್ಥನೆಗಳನ್ನ ಆತನು ಕೇಳಲ್ಲ. (ಮಲಾಕಿಯ 3:6) ಹಾಗಾಗಿ ದೇವರು ನಮ್ಮ ಪ್ರಾರ್ಥನೆಗಳನ್ನ ಕೇಳಬೇಕಂದ್ರೆ ನಾವು ಆತನ ನಿಯಮಗಳನ್ನ ಪಾಲಿಸಬೇಕು. ಹಾಗಾದ್ರೆ ಇದರ ಅರ್ಥ ಹಿಂದೆ ಮಾಡಿದ ತಪ್ಪುಗಳನ್ನ ಮನಸ್ಸಲ್ಲಿಟ್ಟು ದೇವರು ನಮ್ಮ ಪ್ರಾರ್ಥನೆಗಳನ್ನ ಯಾವತ್ತೂ ಕೇಳಲ್ಲ ಅಂತನಾ? ಹಾಗೇನಿಲ್ಲ. ನಾವು ಪಶ್ಚಾತ್ತಾಪಪಟ್ಟು ದೇವರ ಇಷ್ಟದಂತೆ ನಡೆಯೋದಾದ್ರೆ ಆತನು ಕ್ಷಮಿಸಿ ನಮ್ಮ ಪ್ರಾರ್ಥನೆಗಳನ್ನ ಖಂಡಿತ ಕೇಳ್ತಾನೆ.—ಅಪೊಸ್ತಲರ ಕಾರ್ಯ 3:19.