ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 5

ಮಾರ್ಗದರ್ಶನದ ಪ್ರಾಮುಖ್ಯತೆ

ಮಾರ್ಗದರ್ಶನದ ಪ್ರಾಮುಖ್ಯತೆ

ಮಕ್ಕಳಿಗೆ ಯಾರು ಮಾರ್ಗದರ್ಶನ ನೀಡಬೇಕು?

ಮಕ್ಕಳಿಗೆ ದೊಡ್ಡವರ ಮಾರ್ಗದರ್ಶನ ಮತ್ತು ಸಲಹೆಯ ಅಗತ್ಯ ಇದೆ. ಬೇರೆಲ್ಲರಿಗಿಂತ ಹೆತ್ತವರಾದ ನೀವೇ ಇದನ್ನು ಉತ್ತಮ ರೀತಿಯಲ್ಲಿ ಪೂರೈಸಬಲ್ಲಿರಿ. ಇದು ನಿಮ್ಮ ಕರ್ತವ್ಯ ಸಹ. ಬೇರೆ ಅನುಭವಸ್ಥರು ಕೂಡ ನಿಮ್ಮ ಮಕ್ಕಳಿಗೆ ಸಲಹೆ-ಸಹಾಯ ನೀಡಬಹುದು.

ಮಕ್ಕಳಿಗೆ ಯಾಕೆ ದೊಡ್ಡವರ ಮಾರ್ಗದರ್ಶನ ಬೇಕು?

ಅನೇಕ ದೇಶಗಳಲ್ಲಿ ಯುವಕರು ದೊಡ್ಡವರೊಟ್ಟಿಗೆ ಹೆಚ್ಚು ಬೆರೆಯುವುದಿಲ್ಲ. ಇದನ್ನು ನೋಡಿ:

  • ಮಕ್ಕಳು ದಿನದ ಹೆಚ್ಚಿನ ಸಮಯ ಶಾಲೆಯಲ್ಲಿರುತ್ತಾರೆ. ಅಲ್ಲಿ ಶಿಕ್ಷಕರಿಗಿಂತ ಮಕ್ಕಳೇ ಜಾಸ್ತಿ ಇರುತ್ತಾರೆ.

  • ಶಾಲೆಯಾದ ಮೇಲೆ ಮಕ್ಕಳು ಮನೆಗೆ ಬರುತ್ತಾರೆ, ಆದರೆ ಹೆಚ್ಚಿನ ಹೆತ್ತವರು ಕೆಲಸಕ್ಕೆ ಹೋಗುವುದರಿಂದ ಆ ಮಕ್ಕಳು ಒಂಟಿಯಾಗಿ ಮನೆಯಲ್ಲಿ ಇರಬೇಕಾಗುತ್ತದೆ.

  • ಅಮೆರಿಕದ ಒಂದು ಅಧ್ಯಯನವು ಹೇಳುವ ಪ್ರಕಾರ 8 ರಿಂದ 12 ವಯಸ್ಸಿನ ಮಕ್ಕಳು ದಿನದ 6 ತಾಸುಗಳನ್ನು ಟಿ.ವಿ., ಮೊಬೈಲ್‌ ಅಥವಾ ಗೇಮ್‌ಗಳಲ್ಲಿ ಕಳೆಯುತ್ತಾರೆ. *

“ಮಕ್ಕಳು ಮಾರ್ಗದರ್ಶನೆ, ಸಲಹೆ ಮತ್ತು ಸಹಾಯಕ್ಕಾಗಿ ಬೇರೆ ಮಕ್ಕಳ ಹತ್ತಿರ ಹೋಗುತ್ತಾರೇ ಹೊರತು ತಮ್ಮ ತಂದೆ-ತಾಯಿ, ಟೀಚರ್‌ ಅಥವಾ ಬೇರೆ ದೊಡ್ಡವರ ಹತ್ತಿರ ಅಲ್ಲ.” ಎನ್ನುತ್ತದೆ ಹೋಲ್ಡ್‌ ಆನ್‌ ಟು ಯೋರ್‌ ಕಿಡ್ಸ್‌ ಎಂಬ ಪುಸ್ತಕ.

ಮಾರ್ಗದರ್ಶನವನ್ನು ಕೊಡುವುದು ಹೇಗೆ?

ನಿಮ್ಮ ಮಕ್ಕಳೊಂದಿಗೆ ಸಮಯ ಕಳೆಯಿರಿ.

ಬೈಬಲ್‌ ತತ್ವ: “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು.”—ಜ್ಞಾನೋಕ್ತಿ 22:6.

ಮಕ್ಕಳು ಮಾರ್ಗದರ್ಶನಕ್ಕಾಗಿ ತಮ್ಮ ಹೆತ್ತವರ ಕಡೆಗೆ ನೋಡುತ್ತಾರೆ. ನಿಜವೇನೆಂದರೆ, ಮಕ್ಕಳು ಹದಿವಯಸ್ಸಿನಲ್ಲಿ ಕಾಲಿಡುವಾಗಲೂ ತಮ್ಮ ಗೆಳೆಯರ ಮಾತಿಗಿಂತ ಹೆತ್ತವರ ಸಲಹೆಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ. ಯು ಆ್ಯಂಡ್‌ ಯೋರ್‌ ಅಡಲೆಸೆಂಟ್‌ ಎನ್ನುವ ಪುಸ್ತಕದಲ್ಲಿ ಡಾ. ಲಾರೆನ್ಸ್‌ ಸ್ಟೇನ್ಬರ್ಗ್‌ ಹೀಗೆ ಹೇಳುತ್ತಾರೆ: “ತಾರುಣ್ಯವನ್ನು ದಾಟಿ ಯುವಕರಾಗುವ ತನಕ, ಮಕ್ಕಳ ಮನೋಭಾವದಲ್ಲಿ ಮತ್ತು ಸ್ವಭಾವದಲ್ಲಿ ಆಗುವ ಬದಲಾವಣೆಗೆ ಹೆತ್ತವರ ಮನೋಭಾವ ಮತ್ತು ನಡವಳಿಕೆಯೇ ಪ್ರಮುಖ ಕಾರಣ. ಹೆತ್ತವರ ಮಾತುಗಳನ್ನು ಅವರು ಪ್ರತಿಯೊಂದು ಸಲ ಒಪ್ಪುವುದಿಲ್ಲವಾದರೂ ಅಥವಾ ಮೆಚ್ಚುವುದಿಲ್ಲವಾದರೂ, ಹೆತ್ತವರು ಹೇಗೆ ಯೋಚಿಸುತ್ತಾರೆ ಅಂತ ತಿಳಿಯಲು ಅವರು ಇಷ್ಟಪಡುತ್ತಾರೆ ಮತ್ತು ಹೆತ್ತವರು ಹೇಳುವುದನ್ನು ಕೇಳುತ್ತಾರೆ.”

ನಿಮ್ಮ ಸಲಹೆಗಳಿಗಾಗಿ ಮಕ್ಕಳು ಆಸೆಪಡುವುದರಿಂದ ನಿಮ್ಮಿಂದ ಆಗುವುದನ್ನೆಲ್ಲಾ ಮಾಡಿ. ಮಕ್ಕಳೊಟ್ಟಿಗೆ ಸಮಯ ಕಳೆಯಿರಿ ಮತ್ತು ನಿಮ್ಮ ದೃಷ್ಟಿಕೋನವನ್ನು, ಮೌಲ್ಯಗಳನ್ನು ಮತ್ತು ಅನುಭವಗಳನ್ನು ಅವರೊಟ್ಟಿಗೆ ಹಂಚಿಕೊಳ್ಳಿರಿ.

ಒಬ್ಬ ಒಳ್ಳೇ ಸಲಹೆಗಾರನನ್ನು ಪರಿಚಯಿಸಿರಿ.

ಬೈಬಲ್‌ ತತ್ವ: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.”—ಜ್ಞಾನೋಕ್ತಿ 13:20.

ನಿಮ್ಮ ಮಕ್ಕಳಿಗೆ ಮಾರ್ಗದರ್ಶನ ನೀಡುವ, ಸಹಾಯಮಾಡುವ ಯಾರಾದರೊಬ್ಬ ಹಿರಿಯ ವ್ಯಕ್ತಿ ನಿಮಗೆ ಗೊತ್ತಾ? ನಿಮ್ಮ ಮಕ್ಕಳು ಅವರ ಜೊತೆ ಸಮಯ ಕಳೆಯುವಂತೆ ಏರ್ಪಾಡು ಮಾಡಿ. ಹಾಗಂತ, ಹೆತ್ತವರಾಗಿ ನಿಮಗಿರುವ ಜವಾಬ್ದಾರಿಯನ್ನು ನೀವು ಬಿಟ್ಟುಬಿಡಬಾರದು. ಆದರೆ ಕೇಡು ಮಾಡದ, ನಂಬಬಹುದಾದ ಒಬ್ಬ ಹಿರಿಯ ವ್ಯಕ್ತಿ ಕೊಡುವ ಪ್ರೋತ್ಸಾಹದಿಂದಾಗಿ ನೀವು ಕೊಡುವ ತರಬೇತಿಯನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಲು ಮಕ್ಕಳಿಗೆ ಸಹಾಯವಾಗುತ್ತದೆ. ತಿಮೊಥೆಯನು ದೊಡ್ಡವನಾದಾಗಲೂ ಅಪೊಸ್ತಲ ಪೌಲನ ಸಹವಾಸದಿಂದಾಗಿ ಸಹಾಯ ಪಡೆದನು, ಪೌಲನು ಸಹ ತಿಮೊಥೆಯನ ಸಹವಾಸದಿಂದ ಪ್ರಯೋಜನ ಹೊಂದಿದನು ಎಂದು ಬೈಬಲ್‌ ಹೇಳುತ್ತದೆ. —ಫಿಲಿಪ್ಪಿ 2:20, 22.

ಕೂಡುಕುಟುಂಬ ಕಣ್ಮರೆಯಾಗಿರುವ ಈ ಕಾಲದಲ್ಲಿ ಅಜ್ಜ-ಅಜ್ಜಿ, ಚಿಕ್ಕಪ್ಪ-ದೊಡ್ಡಪ್ಪ ಹಾಗೂ ಇತರ ಸಂಬಂಧಿಕರು ಬೇರೆ ಯಾವುದೋ ಸ್ಥಳಗಳಲ್ಲಿ ಇರುತ್ತಾರೆ. ನಿಮ್ಮ ಕುಟುಂಬದವರೂ ಬೇರೆ ಬೇರೆ ಕಡೆಯಲ್ಲಿದ್ದರೆ, ನಿಮ್ಮ ಮಕ್ಕಳಲ್ಲಿ ಯಾವ ಗುಣಗಳಿರಬೇಕೆಂದು ನೀವು ಬಯಸುತ್ತೀರೋ ಅಂಥ ಗುಣಗಳಿರುವ ವ್ಯಕ್ತಿಗಳನ್ನು ಪರಿಚಯಿಸಿ, ಅವರಿಂದ ಕಲಿಯಲು ಅವಕಾಶವನ್ನು ಮಾಡಿಕೊಡಿ.

^ ಪ್ಯಾರ. 9 ಅದೇ ಅಧ್ಯಯನವು, ಹದಿವಯಸ್ಕರು ಸುಮಾರು 9 ತಾಸುಗಳನ್ನು ಹೀಗೆ ಕಳೆಯುತ್ತಾರೆ ಅಂತ ತಿಳಿಸುತ್ತದೆ. ಇವುಗಳಲ್ಲಿ ಮಕ್ಕಳು ಹೋಂ ವರ್ಕ್‌ಗೆಂದು, ಬೇರೆ ಶಾಲಾ ಪ್ರಾಜೆಕ್ಟ್‌ಗೆಂದು ಅಥವಾ ಕಂಪ್ಯೂಟರ್‌ಗೆಂದು ಬಳಸುವ ಸಮಯ ಸೇರಿಲ್ಲ.