ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಪಾಠ 6

ನೈತಿಕ ಮೌಲ್ಯಗಳು

ನೈತಿಕ ಮೌಲ್ಯಗಳು

ನೈತಿಕ ಮೌಲ್ಯಗಳು ಅಂದರೇನು?

ಒಳ್ಳೆಯ ನೈತಿಕ ಮೌಲ್ಯವಿರುವ ಜನರಿಗೆ ಸರಿ ಮತ್ತು ತಪ್ಪನ್ನು ಗುರುತಿಸುವ ಸಾಮರ್ಥ್ಯ ಇರುತ್ತದೆ. ಅವರ ಮೌಲ್ಯಗಳು ತತ್ವಗಳ ಮೇಲೆ ಹೊಂದಿಕೊಂಡಿರುತ್ತವೇ ಹೊರತು ಒಂದು ಕ್ಷಣಕ್ಕೆ ಅವರಿಗೆ ಹೇಗನಿಸುತ್ತದೆ ಎನ್ನುವುದರ ಮೇಲಲ್ಲ. ಹಾಗಾಗಿ ಯಾರು ನೋಡದಿದ್ದಾಗಲೂ ಸರಿಯಾದದ್ದನ್ನು ಮಾಡುವಂತೆ ಈ ಮೌಲ್ಯಗಳು ಅವರನ್ನು ಪ್ರೇರೇಪಿಸುತ್ತವೆ.

ನೈತಿಕ ಮೌಲ್ಯಗಳು ಯಾಕೆ ಮುಖ್ಯ?

ಇಂದು ಮಕ್ಕಳಿಗೆ ಶಾಲೆಯಿಂದ, ಹಾಡುಗಳಿಂದ, ಚಲನಚಿತ್ರಗಳು ಮತ್ತು ಟಿ.ವಿ. ಕಾರ್ಯಕ್ರಮಗಳಿಂದ ಸರಿ ಮತ್ತು ತಪ್ಪಿನ ಬಗ್ಗೆ ದಾರಿತಪ್ಪಿಸುವಂಥ ಮಾಹಿತಿ ತುಂಬ ಸಿಗುತ್ತದೆ. ಇಂತಹ ಮಾಹಿತಿ ಮಕ್ಕಳ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಹೆತ್ತವರು ಕಲಿಸಿರುವ ವಿಷಯಗಳು ಸರಿಯಾಗಿವೆಯಾ ಎಂದು ಪ್ರಶ್ನಿಸುವಂತೆ ಮಾಡುತ್ತದೆ.

ಈ ಸಮಸ್ಯೆ ಹೆಚ್ಚಾಗಿ ಹದಿವಯಸ್ಸಿನ ಮಕ್ಕಳಿಗೆ ಬರುತ್ತದೆ. “ತಾವು ಜನಪ್ರಿಯ ಆಗಬೇಕು ಅನ್ನೋ ತೀವ್ರ ಒತ್ತಡ ಸಮವಯಸ್ಕರಿಂದ ಮತ್ತು ಮಾಧ್ಯಮಗಳಿಂದ ಬರುತ್ತವೆ ಎಂದು ಹದಿವಯಸ್ಕರು ಅರ್ಥಮಾಡಿಕೊಳ್ಳಬೇಕು. ತಮ್ಮ ನೀತಿಯ ಮಟ್ಟಗಳು ಹಾಗೂ ಆಯ್ಕೆಗಳಿಗೆ ಅನುಸಾರವಾಗಿ ನಿರ್ಣಯಗಳನ್ನು ಮಾಡಲು ಅವರು ಕಲಿಯಬೇಕು. ಕೆಲವೊಮ್ಮೆ ತಮ್ಮ ಸ್ನೇಹಿತರಿಗೆ ಇಷ್ಟವಾಗದಿದ್ದರೂ ಇದನ್ನು ಮಾಡಬೇಕಾಗುತ್ತೆ.” ಎಂದು ಬಿಯಾಂಡ್‌ ದ ಬಿಗ್‌ ಟಾಕ್‌ ಎಂಬ ಪುಸ್ತಕ ಹೇಳುತ್ತದೆ. ಹಾಗಾಗಿ ಮಕ್ಕಳು ಹದಿಹರೆಯಕ್ಕೆ ಕಾಲಿಡುವ ಮುಂಚೆನೇ ಹೆತ್ತವರು ಅವರಿಗೆ ತರಬೇತಿ ನೀಡಬೇಕು.

ನೈತಿಕ ಮೌಲ್ಯಗಳನ್ನು ಕಲಿಸುವುದು ಹೇಗೆ?

ಸರಿ ಯಾವುದು, ತಪ್ಪು ಯಾವುದು ಎಂದು ಹೇಳಿಕೊಡಿ.

ಬೈಬಲ್‌ ತತ್ವ: ಪ್ರೌಢರು . . . ಸರಿ ಮತ್ತು ತಪ್ಪಿನ ಭೇದವನ್ನು ತಿಳಿಯಲಿಕ್ಕಾಗಿ . . . ತಮ್ಮ ಗ್ರಹಣ ಶಕ್ತಿಗಳನ್ನು ತರಬೇತುಗೊಳಿಸಿಕೊಂಡಿದ್ದಾರೆ.” —ಇಬ್ರಿಯ 5:14.

 • ಸರಿ-ತಪ್ಪನ್ನು ಗುರುತಿಸಲು ಸಹಾಯ ಮಾಡುವ ಪದಗಳನ್ನು ಉಪಯೋಗಿಸುತ್ತಿರಿ. ಪ್ರತಿದಿನದ ಸನ್ನಿವೇಶಗಳನ್ನು ಬಳಸುತ್ತಾ ವಿಷಯಗಳ ನಡುವಿನ ಪ್ರಾಮುಖ್ಯ ವ್ಯತ್ಯಾಸಗಳನ್ನು ತಿಳಿಸಿ. “ಇದು ಪ್ರಾಮಾಣಿಕತೆ; ಅದು ಅಪ್ರಾಮಾಣಿಕತೆ.” “ಇದು ನಿಷ್ಠೆ; ಅದು ದ್ರೋಹ.” “ಇದು ದಯೆ; ಅದು ನಿರ್ದಯೆ” ಎಂದು ಸ್ಪಷ್ಟವಾಗಿ ಹೇಳಿಕೊಡಿ. ಆಗ ನಿಧಾನವಾಗಿ ನಿಮ್ಮ ಮಗುವಿಗೆ ಏನು ಮಾಡಿದರೆ ಸರಿ ಹಾಗೂ ಏನು ಮಾಡಿದರೆ ತಪ್ಪು ಎಂದು ಗೊತ್ತಾಗುತ್ತದೆ.

 • ಒಂದು ವಿಷಯ ಯಾಕೆ ಸರಿ ಅಥವಾ ಯಾಕೆ ತಪ್ಪು ಎಂದು ವಿವರಿಸಿ. ಉದಾಹರಣೆಗೆ, ಪ್ರಾಮಾಣಿಕರಾಗಿರುವುದು ಯಾಕೆ ಒಳ್ಳೇದು? ಸುಳ್ಳು ಹೇಳುವುದರಿಂದ ಗೆಳೆತನ ಯಾಕೆ ಹಾಳಾಗುತ್ತೆ? ಕದಿಯುವುದು ಯಾಕೆ ತಪ್ಪು? ಎಂಬ ಕೆಲವು ಪ್ರಶ್ನೆಗಳನ್ನು ಕೇಳಿ. ಈ ರೀತಿ ಚರ್ಚಿಸುವಾಗ, ಸರಿ ಯಾವುದು ತಪ್ಪು ಯಾವುದು ಎಂದು ಗುರುತಿಸಲು ನಿಮ್ಮ ಮಕ್ಕಳಿಗೆ ಸಹಾಯವಾಗುತ್ತದೆ.

 • ಒಳ್ಳೇ ನೈತಿಕ ಮಟ್ಟಗಳಿರುವುದರಿಂದ ಸಿಗುವ ಪ್ರಯೋಜನಗಳನ್ನು ಒತ್ತಿ ಹೇಳಿ. ಉದಾಹರಣೆಗೆ, “ನೀನು ಪ್ರಾಮಾಣಿಕನಾಗಿದ್ದರೆ, ಜನರು ನಿನ್ನನ್ನು ನಂಬುತ್ತಾರೆ,” ಅಥವಾ “ನೀನು ದಯೆ ತೋರಿಸಿದರೆ, ಎಲ್ಲರು ನಿನ್ನೊಂದಿಗೆ ಇರಲು ಇಷ್ಟಪಡುತ್ತಾರೆ” ಎಂಬಂಥ ಮಾತುಗಳನ್ನು ಹೇಳಿ.

 ನಿಮ್ಮ ಇಡೀ ಕುಟುಂಬ ಒಳ್ಳೇ ನೈತಿಕ ಮಟ್ಟಗಳ ಪ್ರಕಾರ ನಡೆಯುವಂತೆ ನೋಡಿಕೊಳ್ಳಿ.

ಬೈಬಲ್‌ ತತ್ವ: “ನೀವು ಏನಾಗಿದ್ದೀರಿ ಎಂಬುದನ್ನು ಪ್ರಮಾಣೀಕರಿಸುತ್ತಾ ಇರಿ.”—2 ಕೊರಿಂಥ 13:5.

 • ನಿಮ್ಮ ಇಡೀ ಕುಟುಂಬ ಒಂದೇ ನೈತಿಕ ಮಟ್ಟಗಳನ್ನು ಪಾಲಿಸುವಾಗ, ನೀವು ಹೀಗೆ ಹೇಳಲು ಸಾಧ್ಯ:

  • “ನಮ್ಮ ಕುಟುಂಬದಲ್ಲಿ ಯಾರೂ ಸುಳ್ಳು ಹೇಳಲ್ಲ.”

  • “ನಾವು ಬೇರೆಯವರ ಮೇಲೆ ಕೈ ಮಾಡಲ್ಲ ಅಥವಾ ಅವರ ಮೇಲೆ ಕೂಗಾಡಲ್ಲ.”

  • “ನಾವು ಹೀಯಾಳಿಸುವಂಥ ಮಾತುಗಳನ್ನು ಆಡಲ್ಲ.”

ಆಗ ನಿಮ್ಮ ಮಕ್ಕಳು ನೈತಿಕ ಮಟ್ಟಗಳನ್ನು ಬರೀ ಒಂದು ಆಜ್ಞೆ ಅಂತ ನೋಡದೆ ಅದನ್ನು ತಮ್ಮ ಕುಟುಂಬದ ಗುರುತಾಗಿ ನೋಡುತ್ತಾರೆ.

 • ಆಗಾಗ ನಿಮ್ಮ ಕುಟುಂಬದ ಮೌಲ್ಯಗಳನ್ನು ನಿಮ್ಮ ಮಕ್ಕಳಿಗೆ ತಿಳಿಸುತ್ತಾ ಇರಿ. ಅವರಿಗೆ ಕಲಿಸಲು ಪ್ರತಿದಿನ ನಡೆಯುವ ಘಟನೆಗಳನ್ನೇ ಉಪಯೋಗಿಸಿ. ನೀವು ಕಲಿಸುತ್ತಿರುವ ಮೌಲ್ಯಗಳಿಗೂ, ಟಿ.ವಿಯಲ್ಲಿ ಅಥವಾ ಶಾಲೆಯಲ್ಲಿ ತಿಳಿಸುವ ಮೌಲ್ಯಗಳಿಗೂ ಇರುವ ವ್ಯತ್ಯಾಸಗಳನ್ನು ತಿಳಿಸಿ. “ಇಂಥ ಸನ್ನಿವೇಶದಲ್ಲಿ ನೀನೇನು ಮಾಡುತ್ತೀಯಾ?” “ಇಂಥ ಸನ್ನಿವೇಶದಲ್ಲಿ ನಮ್ಮ ಕುಟುಂಬ ಯಾವ ನಿರ್ಣಯ ಮಾಡಬಹುದು ಅಂತ ನಿನಗನ್ಸುತ್ತೆ?” ಎಂಬಂಥ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಿ.

ಸರಿಯಾದದ್ದನ್ನೇ ಮಾಡುವಂತೆ ಪ್ರೋತ್ಸಾಹಿಸಿ.

ಬೈಬಲ್‌ ತತ್ವ: “ಒಳ್ಳೇ ಮನಸ್ಸಾಕ್ಷಿಯುಳ್ಳವರಾಗಿರಿ.” —1 ಪೇತ್ರ 3:16.

 • ಒಳ್ಳೇ ವಿಷಯಗಳನ್ನು ಮಾಡಿದಾಗ ಪ್ರಶಂಸಿಸಿ. ನಿಮ್ಮ ಮಕ್ಕಳು ಒಳ್ಳೇ ನೈತಿಕ ಮಟ್ಟಗಳನ್ನು ಪಾಲಿಸಿದಾಗ ಅವರನ್ನು ಪ್ರಶಂಸಿಸಿ ಮತ್ತು ಯಾಕೆ ಹೊಗಳಿದ್ದೀರೆಂದು ವಿವರಿಸಿ. ಆಗ ನಿಮ್ಮ ಮಕ್ಕಳಿಗೆ ತಾನು ಒಳ್ಳೇ ವಿಷಯ ಮಾಡಿದ್ದೇನೆಂದು ಗೊತ್ತಾಗುತ್ತದೆ. ಉದಾಹರಣೆಗೆ, ನೀವು ಹೀಗೆ ಹೇಳಬಹುದು: “ನೀನು ಒಳ್ಳೇ ಕೆಲಸ ಮಾಡಿದ್ದೀಯ, ನಂಗೆ ತುಂಬ ಹೆಮ್ಮೆ ಆಯ್ತು.” ನಿಮ್ಮ ಮಕ್ಕಳು ತಾವು ಮಾಡಿದ್ದ ತಪ್ಪುಗಳನ್ನು ಒಪ್ಪಿಕೊಂಡರೆ, ಮೊದಲು ಅವರು ಸತ್ಯ ಹೇಳಿದ್ದಕ್ಕಾಗಿ ಪ್ರಶಂಸಿಸಿ ಆಮೇಲೆ ಅವರ ತಪ್ಪನ್ನು ತಿದ್ದಿ.

 • ಕೆಟ್ಟ ವಿಷಯಗಳನ್ನು ಮಾಡಿದಾಗ ತಿದ್ದಿ. ತಪ್ಪು ಮಾಡಿದಾಗ ಅದನ್ನು ಒಪ್ಪಿಕೊಳ್ಳಬೇಕೆಂದು ಮಕ್ಕಳಿಗೆ ಕಲಿಸಿ. ಅವರು ಮಾಡಿದ್ದರಲ್ಲಿ ಏನು ತಪ್ಪಿತ್ತೆಂದು ಹೇಳಿ. ಅವರ ತಪ್ಪು ನಡತೆಗೂ ಕುಟುಂಬದ ಮೌಲ್ಯಗಳಿಗೂ ಎಷ್ಟು ವ್ಯತ್ಯಾಸ ಇದೆ ಎಂದು ತೋರಿಸಿ. ಕೆಲವು ಹೆತ್ತವರು ಮಕ್ಕಳಿಗೆ ಬೇಜಾರಾಗಬಾರದೆಂದು ಅವರ ತಪ್ಪನ್ನು ತಿಳಿಸುವುದೇ ಇಲ್ಲ. ಆದರೆ ನಿಮ್ಮ ಮಕ್ಕಳು ಮಾಡಿದ್ದು ಯಾಕೆ ತಪ್ಪು ಎಂದು ನೀವು ವಿವರಿಸುವಾಗ, ಅವರ ಮನಸ್ಸಾಕ್ಷಿಗೆ ತರಬೇತಿ ಕೊಟ್ಟಂತಾಗುತ್ತದೆ. ಮಾತ್ರವಲ್ಲ, ಮುಂದೆ ಅದೇ ತಪ್ಪನ್ನು ಮಾಡದಂತೆ ಅವರನ್ನು ತಡೆಯುತ್ತದೆ.