ಮಾಹಿತಿ ಇರುವಲ್ಲಿ ಹೋಗಲು

ಸುಖೀ ಸಂಸಾರಕ್ಕೆ ಸಲಹೆಗಳು

ಒಳ್ಳೇ ಮಾರ್ಕ್ಸ್‌ ಗಳಿಸಲು ನಿಮ್ಮ ಮಕ್ಕಳಿಗೆ ಸಹಾಯ

ಒಳ್ಳೇ ಮಾರ್ಕ್ಸ್‌ ಗಳಿಸಲು ನಿಮ್ಮ ಮಕ್ಕಳಿಗೆ ಸಹಾಯ

ನಿಮ್ಮ ಮಗುಗೆ ಸ್ಕೂಲ್‌ ಅಂದ್ರೇನೇ ಆಗಲ್ವಾ?, ‘ಓದೋ, ಹೋಂವರ್ಕ್‌ ಮಾಡೋ’ ಅಂದ್ರೆ ಎಗರಿ ರಂಪಾಟ ಮಾಡ್ತಾನಾ? ಹಾಗಾದರೆ, ಅವನಿಗೆ ಸ್ಕೂಲಲ್ಲಿ ಒಳ್ಳೇ ಮಾರ್ಕ್ಸೂ ಬರಲ್ಲ, ಅವನು ಒಳ್ಳೇ ಬುದ್ಧೀನೂ ಕಲಿಯಲ್ಲ. ನಿಮ್ಮ ಮಗು ಚೆನ್ನಾಗಿ ಓದೋ ಥರ ಮಾಡೋಕೆ ನೀವೇನು ಮಾಡಬೇಕು?

 ನಿಮಗಿದು ತಿಳಿದಿರಲಿ

ಒತ್ತಾಯದಿಂದ ಒಂಚೂರು ಪ್ರಯೋಜನ ಇಲ್ಲ. ನೀವು ಒತ್ತಾಯ ಮಾಡೋಕೆ ಹೋದ್ರೆ ಮಗುಗೆ ಸ್ಕೂಲಲ್ಲೂ ಮನೆಲೂ ತಲೆಕೆಟ್ಟೋಗುತ್ತೆ! ಆಗ ಸುಳ್ಳು ಹೇಳೋದು, ಮಾರ್ಕ್ಸ್‌ ಮುಚ್ಚಿಡೋದು, ಮಾರ್ಕ್ಸ್‌ ಕಾರ್ಡಲ್ಲಿ ನಿಮ್‌ ಸೈನ್‌ ಅವನೇ ಮಾಡೋದು ಅಥವಾ ಸ್ಕೂಲಿಗೆ ಬಂಕ್‌ ಮಾಡೋದು ಮಾಡಬಹುದು. ಆಗ ಇರೋ ತೊಂದರೆಗೆ ತುಪ್ಪ ಸುರಿದಂತೆ ಇರುತ್ತೆ.

ಗಿಫ್ಟ್‌ ಕೊಟ್ರೆ ಗಮನ ಓದಿನ ಮೇಲೆ ಬರಲ್ಲ. “‘ಒಳ್ಳೇ ಮಾರ್ಕ್ಸ್‌ ತೆಗೆದ್ರೆ ಗಿಫ್ಟ್‌ ಕೊಡಿಸ್ತೀನಿ’ ಅಂತ ಮಗಳಿಗೆ ಹೇಳ್ದೆ. ಮಾರ್ಕ್ಸ್‌ ಬರ್ದಿದ್ದಾಗ ಅವಳಿಗೆ ‘ಗಿಫ್ಟ್‌ ಸಿಕ್ಕಿಲ್ವೇ’ ಅಂತ ಚಿಂತೆ ಆಯ್ತೇ ಹೊರತು, ‘ನಾನು ಓದಿಲ್ವಲ್ಲಾ’ ಅಂತ ಯೋಚಿಸ್ಲೇ ಇಲ್ಲ” ಅಂತ ತಂದೆ ಆಂಡ್ರ್ಯೂ ಹೇಳ್ತಾರೆ.

ಟೀಚರ್ಸ್‌ನ ದೂರಿದ್ರೆ ಮಗು ಕಲಿಯಲ್ಲ. ಒಳ್ಳೇ ಮಾರ್ಕ್ಸ್‌ ಪಡ್ಯೋಕೆ ಜಾಸ್ತಿ ಕಷ್ಟ ಪಡಬೇಕಿಲ್ಲ ಅಂತ ಮಗು ಅಂದ್ಕೊಬಿಡುತ್ತೆ. ತಾನು ತಪ್ಪು ಮಾಡಿ ಅದನ್ನ ಬೇರೆಯವ್ರ ತಲೆ ಮೇಲೆ ಹಾಕಿಬಿಡಬಹುದು, ಬೇರೆಯವ್ರು ಅದನ್ನ ಸರಿ ಮಾಡಬೇಕು ಅಂತ ಕಾಯಬಹುದು. ಒಂದೇ ಮಾತಲ್ಲಿ ಹೇಳೋದಾದ್ರೆ, ಮಾಡಿದ ತಪ್ಪಿನ ಜವಾಬ್ದಾರಿ ಹೊತ್ತುಕೊಳ್ಳೋದನ್ನ ಕಲಿಯಲ್ಲ. ಆದರೆ ಈ ಥರ ಜವಾಬ್ದಾರಿ ಹೊತ್ತುಕೊಳ್ಳೋದು ದೊಡ್ಡವರಾದ ಮೇಲೆ ಜೀವನ ಮಾಡೋಕೆ ತುಂಬ ಮುಖ್ಯ.

 ನೀವೇನು ಮಾಡಬಹುದು

ಕೋಪ ಮಾಡ್ಕೋಬೇಡಿ. ಕೋಪ ಬಂದಾಗ ಮಾರ್ಕ್ಸ್‌ ಬಗ್ಗೆ ಏನೂ ಮಾತಾಡೋಕೆ ಹೋಗ್ಬೇಡಿ. “ನಾನು ನನ್ನ ಹೆಂಡ್ತಿ ಸಮಾಧಾನವಾಗಿ ಇರೋವಾಗ ಮಗು ಜೊತೆ ಓದಿನ ಬಗ್ಗೆ ಚೆನ್ನಾಗಿ ಮಾತಾಡೋಕೆ ಆಗಿದೆ” ಅಂತ ಬ್ರೆಟ್‌ ಅನ್ನೋ ತಂದೆ ಹೇಳ್ತಾರೆ.

ಬೈಬಲ್‌ ತತ್ವ: “ಪ್ರತಿಯೊಬ್ಬನು ಕಿವಿಗೊಡುವುದರಲ್ಲಿ ಶೀಘ್ರನೂ ಮಾತಾಡುವುದರಲ್ಲಿ ದುಡುಕದವನೂ ಕೋಪಿಸುವುದರಲ್ಲಿ ನಿಧಾನಿಯೂ ಆಗಿರಬೇಕು.”—ಯಾಕೋಬ 1:19.

ನಿಜವಾದ ಕಾರಣ ಏನಂತ ಕಂಡುಹಿಡೀರಿ. ಸ್ಕೂಲಲ್ಲಿ ಗೇಲಿ, ಪರೀಕ್ಷೆ ಭಯ, ಕುಟುಂಬದಲ್ಲಿ ಗಲಾಟೆ, ಕಡಿಮೆ ನಿದ್ದೆ, ಸಮಯದ ಕೊರತೆ ಅಥವಾ ಗಮನ ಕೊಡೋಕೆ ಆಗದಿರೋ ಕಾರಣಗಳಿಂದ ಮಕ್ಕಳು ಚೆನ್ನಾಗಿ ಓದದೇ ಇರಬಹುದು. ನೀವು ನಿಮ್ಮ ಮಗುಗೆ ಸೋಮಾರಿ ಅಂತ ಹಣೆಪಟ್ಟಿ ಕಟ್ಟಬೇಡಿ.

ಬೈಬಲ್‌ ತತ್ವ: “ವಿಷಯವನ್ನು ಆಲೋಚಿಸುವವನಿಗೆ ಯಶಸ್ಸು ಸಿಗುತ್ತದೆ.”—ಜ್ಞಾನೋಕ್ತಿ 16:20, NW.

ಓದೋಕೆ ಸರಿಯಾದ ಜಾಗ ಮಾಡಿಕೊಡಿ. ಓದೋಕೆ, ಹೋಂವರ್ಕ್‌ ಮಾಡೋಕೆ ಶೆಡ್ಯೂಲ್‌ ಮಾಡಿ. ಯಾವುದೇ ತೊಂದರೆ ಇಲ್ದೆ (ಟಿವಿ, ಫೋನ್‌) ಓದಿಕೊಳ್ಳೋಕೆ ಅನುಕೂಲವಾಗಿರೋ ಜಾಗ ಮಾಡಿಕೊಡಿ. ಗಂಟೆಗಟ್ಟಲೇ ಓದಬೇಕು ಅನ್ನದೇ ಸ್ವಲ್ಪ ಸ್ವಲ್ಪ ಹೊತ್ತು ಓದೋಕೆ ಬಿಡಿ, ಆಗ ಗಮನ ಕೊಡೋಕೆ ಸಾಧ್ಯ ಆಗುತ್ತೆ. ಜರ್ಮನಿಯಲ್ಲಿರೋ ತಂದೆ, “ಪರೀಕ್ಷೆ ಬರ್ತಿದೆ ಅಂತ ಗೊತ್ತಾದ ತಕ್ಷಣ ದಿನಾನೂ ಸ್ವಲ್ಪ ಸ್ವಲ್ಪ ಪುನರಾವರ್ತನೆ ಮಾಡ್ತೇವೆ, ಕೊನೇವರೆಗೂ ಕಾಯಲ್ಲ” ಅಂತ ಹೇಳ್ತಾರೆ.

ಬೈಬಲ್‌ ತತ್ವ: ‘ಪ್ರತಿಯೊಂದು ಕೆಲಸಕ್ಕೂ ಸಮಯವಿದೆ.’—ಪ್ರಸಂಗಿ 3:1.

ಓದು ಯಾಕೆ ಮುಖ್ಯ ಅಂತ ಅರ್ಥಮಾಡಿಸಿ. ಸ್ಕೂಲಿಗೆ ಹೋಗೋದ್ರಿಂದ ಏನೆಲ್ಲ ಪ್ರಯೋಜನ ಸಿಗುತ್ತೆ ಅಂತ ನಿಮ್ಮ ಮಗು ಈಗ ಅರ್ಥಮಾಡಿಕೊಂಡ್ರೆ ಚೆನ್ನಾಗಿ ಓದೋಕೆ ಆಸಕ್ತಿ ಬರುತ್ತೆ. ಉದಾಹರಣೆಗೆ, ಸ್ಕೂಲಲ್ಲಿ ಕಲಿಯೋ ಲೆಕ್ಕಗಳು ಹಣವನ್ನು ಸರಿಯಾಗಿ ಖರ್ಚು ಮಾಡೋದು ಹೇಗೆ ಅಂತ ಕಲಿಸುತ್ತೆ.

ಬೈಬಲ್‌ ತತ್ವ: ‘ಜ್ಞಾನವನ್ನು ಪಡೆ, ವಿವೇಕವನ್ನು ಸಂಪಾದಿಸು . . .ಅದನ್ನು ಶ್ರೇಷ್ಠವೆಂದು ಭಾವಿಸು.‘—ಜ್ಞಾನೋಕ್ತಿ 4:5, 8.

ಸಲಹೆ: ಹೋಂವರ್ಕ್‌ ಮಾಡೋಕೆ ಸಹಾಯ ಮಾಡಿ, ಆದ್ರೆ ನೀವೇ ಮಾಡಿ ಕೊಡಬೇಡಿ. “ನಮ್‌ ಮಗಳು ನಾವು ಹೇಳಿಕೊಡೋದಕ್ಕೇ ಕಾಯ್ತಿದ್ಳು, ಅವ್ಳ ಬುದ್ಧಿ ಮಾತ್ರ ಉಪಯೋಗಿಸ್ತಿರಲಿಲ್ಲ” ಅಂತ ಆಂಡ್ರ್ಯೂ ಹೇಳ್ತಾರೆ. ಅವರೇ ಹೇಗೆ ಹೋಂವರ್ಕ್‌ ಮಾಡಬಹುದು ಅಂತ ಹೇಳಿಕೊಡಿ.