“ಕಿಂಗ್ಸ್ಲಿಗೆ ಮಾಡಲು ಆಗುತ್ತದೆಂದರೆ, ನನಗೂ ಆಗುತ್ತದೆ!”
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಇದು ಕಿಂಗ್ಸ್ಲಿರವರ ಮೊದಲ ನೇಮಕ. ಅವರ ಭುಜ ತಟ್ಟಿದ ಕೂಡಲೇ ಬೈಬಲ್ ಓದುವಿಕೆಯನ್ನು ಶುರುಮಾಡುತ್ತಾರೆ. ಒಂದು ಪದವನ್ನೂ ಅಕ್ಷರವನ್ನೂ ಬಿಡದೆ ಜಾಗ್ರತೆಯಿಂದ ಉಚ್ಚರಿಸುತ್ತಿದ್ದಾರೆ. ಅರೆ! ಅವರು ಬೈಬಲ್ ನೋಡಿಕೊಂಡು ಓದುತ್ತಿಲ್ಲ. ಯಾಕೆ?
ಕಿಂಗ್ಸ್ಲಿರವರಿಗೆ ಕಣ್ಣು ಕಾಣುವುದಿಲ್ಲ, ಸರಿಯಾಗಿ ಕಿವಿ ಕೇಳುವುದಿಲ್ಲ ಮತ್ತು ಅತ್ತಿತ್ತ ತಿರುಗಾಡಲು ಗಾಲಿಕುರ್ಚಿ ಬಳಸುತ್ತಾರೆ. ಶ್ರೀಲಂಕದಲ್ಲಿರುವ ಇವರು ಯೆಹೋವನ ಬಗ್ಗೆ ಕಲಿತು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ದಾಖಲಾಗಲು ಹೇಗೆ ಸಾಧ್ಯವಾಯಿತು? ವಿವರಿಸುತ್ತೇನೆ ಕೇಳಿ.
ಕಿಂಗ್ಸ್ಲಿರವರನ್ನು ಮೊದಲ ಬಾರಿ ಭೇಟಿಯಾದಾಗ ಸತ್ಯಕ್ಕಾಗಿ ಅವರಿಗಿದ್ದ ದಾಹ ನೋಡಿ ನನಗೆ ತುಂಬ ಆಶ್ಚರ್ಯವಾಗಿತ್ತು. ಈಗಾಗಲೇ ಅವರ ಜೊತೆ ತುಂಬ ಸಹೋದರರು ಬೈಬಲ್ ಅಧ್ಯಯನ ನಡೆಸಿದ್ದರು. ಕಿಂಗ್ಸ್ಲಿ ಬಳಿ ಇದ್ದ ಬ್ರೇಲ್ ಲಿಪಿಯ * ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕವಂತೂ ಬಳಸಿ ಬಳಸಿ ಒಂದು ಸ್ಥಿತಿಗೆ ಬಂದಿತ್ತು!! * ಅವರ ಜೊತೆ ನಾನು ಪುನಃ ಬೈಬಲ್ ಅಧ್ಯಯನ ನಡೆಸಬಹುದಾ ಎಂದು ಕೇಳಿದಾಗ ಅವರು ಒಪ್ಪಿಕೊಂಡರು. ಆದರೆ ಎರಡು ಸವಾಲು ನಮ್ಮ ಮುಂದಿತ್ತು.
ಮೊದಲನೇದು, ಕಿಂಗ್ಸ್ಲಿ ಇದ್ದದ್ದು ವಯಸ್ಸಾದವರಿಗೆ ಮತ್ತು ವಿಕಲಚೇತನರಿಗೆಂದೇ ಇದ್ದ ಮನೆಯಲ್ಲಿ. ಸುತ್ತಮುತ್ತ ತುಂಬ ಶಬ್ದ ಇರುತ್ತಿತ್ತು ಮತ್ತು ಕಿಂಗ್ಸ್ಲಿಗೆ ಸರಿಯಾಗಿ ಕಿವಿ ಕೇಳದ ಕಾರಣ ನಾನು ಜೋರಾಗಿ ಮಾತಾಡಬೇಕಾಗಿತ್ತು. ಎಷ್ಟು ಜೋರಾಗಿ ಎಂದರೆ ಆ ಮನೆಯಲ್ಲಿದ್ದ ಎಲ್ಲರಿಗೂ ನಮ್ಮ ಬೈಬಲ್ ಅಧ್ಯಯನ ಕೇಳಿಸುತ್ತಿತ್ತು!
ಎರಡನೇ ಸವಾಲು, ಕಿಂಗ್ಸ್ಲಿರವರಿಗೆ ಬೈಬಲ್ ಅಧ್ಯಯನದ ಸಮಯದಲ್ಲಿ ಸ್ವಲ್ಪ ಮಾಹಿತಿಯನ್ನು ಮಾತ್ರ ಓದಲು ಮತ್ತು ಅರ್ಥ ಮಾಡಿಕೊಳ್ಳಲು ಆಗುತ್ತಿತ್ತು. ನಮ್ಮ ಅಧ್ಯಯನ ಫಲಕಾರಿಯಾಗಲು ಅವರು ಶ್ರದ್ಧೆಯಿಂದ ಮುಂಚೆಯೇ ತಯಾರಿ ಮಾಡುತ್ತಿದ್ದರು. ಅಧ್ಯಯನದ ವಿಷಯಗಳನ್ನು ಪುನಃ ಪುನಃ ಓದುತ್ತಿದ್ದರು ಮತ್ತು ಬ್ರೇಲ್ ಲಿಪಿಯಲ್ಲಿದ್ದ ಬೈಬಲ್ನಿಂದ ವಚನಗಳನ್ನು ಓದಿ ಮನಸ್ಸಲ್ಲೇ ಉತ್ತರಗಳನ್ನು ಸಿದ್ಧಮಾಡುತ್ತಿದ್ದರು. ಅವರು ತಯಾರಿ ಮಾಡಲು ಈ ವಿಧಾನ ಬಳಸಿದ್ದರಿಂದ ಅಧ್ಯಯನ ತುಂಬ ಚೆನ್ನಾಗಿ ನಡೆಯುತ್ತಿತ್ತು. ನಾವು ಅಧ್ಯಯನ ಮಾಡುತ್ತಿದ್ದಾಗ ಕಿಂಗ್ಸ್ಲಿ ಚಾಪೆಯ ಮೇಲೆ ಕಾಲು ಮಡಚಿ ಕೂತುಕೊಳ್ಳುತ್ತಿದ್ದರು. ನೆಲವನ್ನು ಕೈಯಿಂದ ತಟ್ಟುತ್ತಾ ಜೋರಾದ ಧ್ವನಿಯಲ್ಲಿ ಕಲಿತ ವಿಷಯವನ್ನು ಖುಷಿಯಿಂದ ಹೇಳುತ್ತಿದ್ದರು. ವಾರಕ್ಕೆ ಎರಡು ಸಲ ನಾವು ಬೈಬಲ್ ಅಧ್ಯಯನ ನಡೆಸುತ್ತಿದ್ದೆವು. ಪ್ರತಿ ಸಲ ಎರಡೆರಡು ತಾಸು ಹಿಡಿಯುತ್ತಿತ್ತು!
ಕೂಟಗಳ ಹಾಜರಿ ಮತ್ತು ಭಾಗವಹಿಸುವಿಕೆ
ಕಿಂಗ್ಸ್ಲಿರವರಿಗೆ ಕೂಟಕ್ಕೆ ಹಾಜರಾಗಲು ತುಂಬ ಆಸೆಯಿತ್ತು. ಆದರೆ ಇದೊಂದು ಕಷ್ಟದ ಕೆಲಸವಾಗಿತ್ತು. ಏಕೆಂದರೆ ಗಾಲಿಕುರ್ಚಿಯಲ್ಲಿ ಕೂರಲು ಇಳಿಯಲು, ಗಾಲಿಕುರ್ಚಿಯಿಂದ ಕಾರ್ಗೆ, ನಂತರ ಕಾರ್ನಿಂದ ರಾಜ್ಯ ಸಭಾಗೃಹಕ್ಕೆ ಹೋಗಲು ಅವರಿಗೆ ಸಹಾಯ ಬೇಕು. ಇವರಿಗೆ ಸಹಾಯ ಮಾಡುವುದನ್ನು ಸಭೆಯಲ್ಲಿರುವ ಅನೇಕ ಸಹೋದರ ಸಹೋದರಿಯರು ಸುಯೋಗವೆಂದು ನೆನಸಿ ಸರದಿ ಪ್ರಕಾರ ಸಹಾಯಮಾಡುತ್ತಾರೆ. ಕೂಟ ನಡೆಯುವಾಗ ಕಿಂಗ್ಸ್ಲಿ ಕಿವಿಯ ಬಳಿ ಸ್ಪೀಕರ್ ಇಟ್ಟುಕೊಂಡು ಗಮನಕೊಟ್ಟು ಕೇಳಿಸಿಕೊಳ್ಳುತ್ತಾರೆ, ಉತ್ತರಗಳನ್ನೂ ಕೊಡುತ್ತಾರೆ!
ಕಿಂಗ್ಸ್ಲಿರವರ ಬೈಬಲ್ ಅಧ್ಯಯನ ಆರಂಭವಾಗಿ ಸ್ವಲ್ಪ ಸಮಯ ಆದ ಮೇಲೆ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಗೆ ದಾಖಲಾಗಬೇಕೆಂದು ತೀರ್ಮಾನ ಮಾಡಿದರು. ಅವರ ಮೊದಲ ನೇಮಕ ಬೈಬಲ್ ಓದುವಿಕೆಯಾಗಿತ್ತು. ಅದಕ್ಕಿನ್ನೂ ಎರಡು ವಾರಗಳಿರುವಾಗ ತಯಾರಿ ಮಾಡುತ್ತಿದ್ದೀರಾ ಎಂದು ಕೇಳಿದೆ. “ಹೌದು ಬ್ರದರ್, ಈಗಾಗಲೇ 30 ಬಾರಿ ಮಾಡಿದ್ದೇನೆ” ಎಂದು ತುಂಬ ಆತ್ಮವಿಶ್ವಾಸದಿಂದ ಹೇಳಿದರು. ಅವರಿಗೆ ಶಭಾಷ್ ಹೇಳಿ ನೀವು ಓದುವುದನ್ನು ನಾನು ಕೇಳಿಸಿಕೊಳ್ಳಬೇಕು ಎಂದೆ. ತಮ್ಮ ಬ್ರೇಲ್ ಬೈಬಲನ್ನು ತೆಗೆದು ಅದರ ಮೇಲೆ ಬೆರಳುಗಳನ್ನಿಟ್ಟು ಓದಲು ಆರಂಭಿಸಿದರು. ಸಾಮಾನ್ಯವಾಗಿ ಅವರು ಏನಾದರೂ ಓದುವಾಗ ಬೆರಳುಗಳನ್ನು ಹಾಳೆಯಲ್ಲಿರುವ ಪದಗಳ ಮೇಲೆ ಆಡಿಸುತ್ತಾ ಓದುತ್ತಾರೆ. ಆದರೆ ಈ ಬಾರಿ ಒಂದು ವಿಷಯ ಗಮನಿಸಿದೆ. ಅವರು ಓದುವಾಗ ಬೆರಳನ್ನು ಆಡಿಸುತ್ತಿರಲಿಲ್ಲ. ಬೈಬಲ್ ಓದುವಿಕೆಯ ಆ ಇಡೀ ಭಾಗವನ್ನು ಬಾಯಿಪಾಠ ಮಾಡಿದ್ದರು!
ಅದನ್ನು ನೋಡಿ ನನಗೆ ನಂಬಲಿಕ್ಕೆ ಆಗಲಿಲ್ಲ. ನನ್ನ ಕಣ್ಣಿ೦ದ ನೀರು ಹರಿಯುತ್ತಿತ್ತು. ಬರೀ 30 ಸಲ ಓದಿ ತಯಾರಿ ಮಾಡಿ ಇಷ್ಟು ಚೆನ್ನಾಗಿ ನೆನಪಿಡಲು ಹೇಗೆ ಸಾಧ್ಯವಾಯಿತು ಎಂದು ಕೇಳಿದೆ. ಅದಕ್ಕವರು: “ಬ್ರದರ್ ನಾನು ದಿನಕ್ಕೆ 30 ಸಲ ಓದಿ ತಯಾರಿ ಮಾಡಿದ್ದೇನೆ” ಎಂದರು. ಕಿಂಗ್ಸ್ಲಿ ಕಳೆದ ಒಂದು ತಿಂಗಳಿಗಿಂತ ಹೆಚ್ಚು ಸಮಯದಿಂದ ಪ್ರತಿ ದಿನ ಚಾಪೆ ಮೇಲೆ ಕೂತು ಪುನಃ ಪುನಃ ಓದಿ ಎಲ್ಲಾ ವಚನಗಳನ್ನು ಬಾಯಿಪಾಠ ಮಾಡಿದ್ದರು!
ಕೊನೆಗೂ ಕಿಂಗ್ಸ್ಲಿರವರ ನೇಮಕವಿದ್ದ ದಿನ ಬಂದೇಬಿಟ್ಟಿತು. ರಾಜ್ಯ ಸಭಾಗೃಹದಲ್ಲಿ ಅವರು ಓದಿ ಮುಗಿಸಿದ್ದೇ ತಡ, ಸಭೆಯಲ್ಲಿ ಇದ್ದವರೆಲ್ಲರೂ ಸಂತೋಷದಿಂದ ಚಪ್ಪಾಳೆ ತಟ್ಟಿದರು. ಈ ಹೊಸ ವಿದ್ಯಾರ್ಥಿಯ ಆತ್ಮವಿಶ್ವಾಸ ನೋಡಿ ತುಂಬ ಮಂದಿ ಅತ್ತರು ಸಹ. ಸಭೆಯಲ್ಲಿನ ಪ್ರಚಾರಕಳೊಬ್ಬಳು ಭಾಷಣ ಕೊಡಲು ತುಂಬ ಹೆದರುತ್ತಿದ್ದಳು. ಆದ್ದರಿಂದ ಭಾಷಣ ನೀಡುವುದನ್ನೇ ನಿಲ್ಲಿಸಿ ಬಿಟ್ಟಿದ್ದಳು. ಆದರೆ ಕಿಂಗ್ಸ್ಲಿರವರ ನೇಮಕ ಮುಗಿದ ನಂತರ, ಇನ್ನು ಮುಂದೆ ತಾನು ಭಾಷಣಗಳನ್ನು ಕೊಡುತ್ತೇನೆ ಎಂದು ಹೇಳಿದಳು. ಏಕೆ ಎಂದು ಕೇಳಿದಾಗ ಅವಳಂದದ್ದು: “ಕಿಂಗ್ಸ್ಲಿಗೆ ಮಾಡಲು ಆಗುತ್ತದೆಂದರೆ, ನನಗೂ ಆಗುತ್ತದೆ!”
ಮೂರು ವರ್ಷದ ಬೈಬಲ್ ಅಧ್ಯಯನದ ನಂತರ ಕಿಂಗ್ಸ್ಲಿರವರು ತಾವು ಯೆಹೋವನಿಗೆ ಮಾಡಿದ ಸಮರ್ಪಣೆಯನ್ನು 2008 ಸೆಪ್ಟೆಂಬರ್ 6ರಂದು ದೀಕ್ಷಾಸ್ನಾನದ ಮೂಲಕ ಬಹಿರಂಗವಾಗಿ ತೋರಿಸಿಕೊಟ್ಟರು. ಅಂದಿನಿಂದ ಹಿಡಿದು 2014ರ ಮೇ 13ರಂದು ಕೊನೆಯುಸಿರು ಎಳೆಯುವ ತನಕ ಕಿಂಗ್ಸ್ಲಿ ನಿಷ್ಠಾವಂತ ಸಾಕ್ಷಿಯಾಗಿದ್ದರು. ಪರದೈಸ್ನಲ್ಲಿ ಪರಿಪೂರ್ಣ ಆರೋಗ್ಯ ಮತ್ತು ಶಕ್ತಿಯೊಂದಿಗೆ ಯೆಹೋವನ ಸೇವೆಯನ್ನು ನಂಬಿಗಸ್ತಿಕೆಯಿಂದ ಮುಂದುವರಿಸುತ್ತೇನೆ ಎಂಬ ದೃಢಭರವಸೆ ಅವರಿಗಿತ್ತು. (ಯೆಶಾ. 35:5, 6)—ಪೌಲ್ ಮ್ಯಾಕ್ ಮ್ಯಾನಸ್ ಹೇಳಿದಂತೆ.
^ ಪ್ಯಾರ. 4 ಕುರುಡರು ಕೈಯಾಡಿಸಿ ಓದಲು ಅನುಕೂಲವಾಗುವ ಉಬ್ಬು ಬರಹ ಅಥವಾ ಮುದ್ರಣ.
^ ಪ್ಯಾರ. 4 ಇಸವಿ 1995ರ ಮುದ್ರಣ; ಈಗ ಮುದ್ರಿಸಲಾಗುತ್ತಿಲ್ಲ.