ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲನ್ನು ಬಳಸುವುದರಲಿ ಮೂಢನಂಬಿಕೆ ಬೇಡ!

ಬೈಬಲನ್ನು ಬಳಸುವುದರಲಿ ಮೂಢನಂಬಿಕೆ ಬೇಡ!

ಬೈಬಲನ್ನು ಬಳಸುವುದರಲಿ ಮೂಢನಂಬಿಕೆ ಬೇಡ!

“ದೇವರ ವಾಕ್ಯವು ಸಜೀವವಾದದ್ದೂ ಪ್ರಬಲವಾದದ್ದೂ . . . ಆಗಿದೆ.” (ಇಬ್ರಿ. 4:12) ನಮ್ಮ ಹೃದಯವನ್ನು ಸ್ಪರ್ಶಿಸಿ ಬದುಕನ್ನೇ ಬದಲಾಯಿಸುವ ಶಕ್ತಿ ದೇವರ ವಾಕ್ಯಕ್ಕೆ ಇದೆಯೆಂದು ಅಪೊಸ್ತಲ ಪೌಲ ಈ ಮಾತುಗಳಲ್ಲಿ ವ್ಯಕ್ತಪಡಿಸಿದನು.

ಆದರೆ ಮುಂತಿಳಿಸಲಾದಂತೆ ಅಪೊಸ್ತಲರ ಮರಣದ ನಂತರ ಧರ್ಮಭ್ರಷ್ಟತೆ ಹರಡಿದಾಗ ಬೈಬಲ್‌ ಸಂದೇಶಕ್ಕಿರುವ ಶಕ್ತಿಯ ಬಗ್ಗೆ ಗೊಂದಲ-ಗೋಜಲು ಉಂಟಾಯಿತು. (2 ಪೇತ್ರ 2:​1-3) ಸಮಯಾನಂತರ ಚರ್ಚ್‌ ಮುಖಂಡರು ದೇವರ ವಾಕ್ಯಕ್ಕೆ ಮಾಂತ್ರಿಕ ಶಕ್ತಿಯಿದೆ ಎನ್ನತೊಡಗಿದರು. “ಕ್ರೈಸ್ತ ಬರಹಗಳ ಮಾಂತ್ರಿಕ ಬಳಕೆ”ಯ ಕುರಿತು ಪ್ರೊಫೆಸರ್‌ ಹ್ಯಾರೀ ವೈ. ಗ್ಯಾಂಬಲ್‌ ಬರೆದಿದ್ದಾರೆ. “ಬೈಬಲಿನಲ್ಲಿರುವ ಪವಿತ್ರ ಪದಗಳನ್ನು ಓದುವ ಶಬ್ದ ಕಿವಿಗೆ ಬಿದ್ದರೆ ಸಾಕು ಅದರಿಂದಲೇ ನಮಗೆ ಏನಾದರೂ ಒಳಿತಾಗುತ್ತದೆ. ವಿಧರ್ಮಿ ಮಂತ್ರತಂತ್ರಗಳಲ್ಲಿ ಪಠಿಸುವ ಪದಗಳಿಗೇ ಶಕ್ತಿ ಇರುವುದಾದರೆ ಬೈಬಲಿನಲ್ಲಿರುವ ದೇವರ ಮಾತುಗಳಿಗೆ ಇನ್ನೆಷ್ಟು ಶಕ್ತಿ ಇರಬೇಕು” ಎಂದು 3ನೇ ಶತಮಾನದಲ್ಲಿದ್ದ ಚರ್ಚ್‌ ಪಾದ್ರಿ ಆರಿಜನ್‌ ಹೇಳಿದ್ದನ್ನು ಗ್ಯಾಂಬಲ್‌ ವರದಿಸಿದರು. ನಾಲ್ಕನೇ ಶತಮಾನದ ಕೊನೆಯಲ್ಲಿ ಜೀವಿಸಿದ್ದ ಜಾನ್‌ ಕ್ರಿಸೋಸ್ಟಮ್‌ ಎಂಬವರು “ಸುವಾರ್ತಾ ವೃತ್ತಾಂತ ಮನೆಯಲ್ಲಿದ್ದರೆ ಪಿಶಾಚನು ಆ ಮನೆಯ ಹತ್ತಿರವೂ ಸುಳಿಯಲ್ಲ” ಎಂದು ಬರೆದರು. ಮಾತ್ರವಲ್ಲ ಕೆಲವರು ಸುವಾರ್ತಾ ವೃತ್ತಾಂತದ ಕೆಲವು ವಚನಗಳನ್ನು ತಾಯಿತದಂತೆ ಕೊರಳಿಗೆ ಕಟ್ಟಿಕೊಳ್ಳುತ್ತಿದ್ದರೆಂದೂ ವರದಿಸಿದರು. “ತಲೆನೋವಿದ್ದಾಗ ಯೋಹಾನನ ಸುವಾರ್ತಾ ವೃತ್ತಾಂತವನ್ನು ದಿಂಬಿನ ಕೆಳಗಿಟ್ಟುಕೊಂಡು ಮಲಗಬಹುದೆಂದು” ಕ್ಯಾಥೊಲಿಕ್‌ ದೇವತಾಶಾಸ್ತ್ರಜ್ಞ ಆಗಸ್ಟಿನ್‌ ಹೇಳಿದ್ದನ್ನು ಕೂಡ ಪ್ರೊಫೆಸರ್‌ ಗ್ಯಾಂಬಲ್‌ ಉಲ್ಲೇಖಿಸಿದ್ದಾರೆ. ಹೀಗೆ ಬೈಬಲಿಗೆ ಮಾಂತ್ರಿಕಶಕ್ತಿ ಇದೆಯೆಂದು ವೀಕ್ಷಿಸಲಾಗುತ್ತಿತ್ತು. ಆದರೆ ನೀವು ಬೈಬಲನ್ನು ಹೇಗೆ ವೀಕ್ಷಿಸುತ್ತೀರಿ? ಕೇಡನ್ನು ನಿವಾರಿಸುವ ಮತ್ತು ಅದೃಷ್ಟ ಕುಲಾಯಿಸುವ ತಾಯಿತವೆಂಬಂತೆ ವೀಕ್ಷಿಸುತ್ತೀರಾ?

ಬೈಬಲನ್ನು ತಪ್ಪಾಗಿ ಬಳಸುವ ಒಂದು ಸಾಮಾನ್ಯ ವಿಧವಿದೆ. ಅದೇನೆಂದರೆ ಫಕ್ಕನೆ ಬೈಬಲನ್ನು ತೆರೆದು ಕಣ್ಣಿಗೆ ಯಾವ ವಚನ ಬೀಳುತ್ತದೋ ಅದನ್ನು ಓದುವುದು. ಹೀಗೆ ಮಾಡುವವರು ಆ ವಚನವು ತಮಗೆ ಬೇಕಾದ ಮಾರ್ಗದರ್ಶನವನ್ನು ಕೊಡುತ್ತದೆಂದು ನಂಬುತ್ತಾರೆ. ಆಗಸ್ಟಿನ್‌ ಕೂಡ ಹೀಗೆ ಮಾಡಿದ್ದನ್ನು ಪ್ರೊಫೆಸರ್‌ ಗ್ಯಾಂಬಲ್‌ ವರದಿಸಿದ್ದಾರೆ. ಒಮ್ಮೆ ಪಕ್ಕದ ಮನೆಯ ಮಗು “ತಕ್ಕೊಂಡು ಓದು, ತಕ್ಕೊಂಡು ಓದು” ಎಂದು ಕೂಗುತ್ತಿದ್ದದ್ದು ಆಗಸ್ಟಿನ್‌ಗೆ ಕೇಳಿಸಿತಂತೆ. ಬೈಬಲ್‌ ಓದಲು ತನಗೆ ದೇವರು ಕೊಟ್ಟ ಆಜ್ಞೆ ಅದೆಂದು ಪರಿಗಣಿಸಿ ಆಗಸ್ಟಿನ್‌ ತಕ್ಷಣ ಬೈಬಲ್‌ ತೆರೆದು ಕಣ್ಣಿಗೆ ಬಿದ್ದ ವಚನವನ್ನು ಓದಿದರಂತೆ.

ನೀವು ಸಹ ಜನರು ಹೀಗೆ ಮಾಡುವುದನ್ನು ನೋಡಿರಬಹುದು. ಯಾವುದಾದರೂ ಸಮಸ್ಯೆ ಬಂದಾಗ ಅವರು ಪ್ರಾರ್ಥನೆಮಾಡಿ ಫಕ್ಕನೆ ಬೈಬಲನ್ನು ತೆರೆದು ಮೊದಲು ಕಣ್ಣಿಗೆ ಬಿದ್ದ ವಚನವನ್ನು ಓದುತ್ತಾರೆ. ತಮ್ಮ ಸಮಸ್ಯೆಯನ್ನು ನಿವಾರಿಸಲು ಆ ವಚನ ಸಹಾಯಮಾಡುವುದೆಂದು ನಂಬುತ್ತಾರೆ. ಅವರ ಉದ್ದೇಶ ಒಳ್ಳೇದಿರಬಹುದಾದರೂ ಕ್ರೈಸ್ತರಾದ ನಾವು ಬೈಬಲಿನಿಂದ ಮಾರ್ಗದರ್ಶನವನ್ನು ಪಡೆಯುವ ರೀತಿ ಇದಲ್ಲ.

ಯೇಸು ತನ್ನ ಶಿಷ್ಯರಿಗೆ ‘ಸಹಾಯಕನನ್ನು’ ಅಂದರೆ ‘ಪವಿತ್ರಾತ್ಮವನ್ನು’ ಕಳುಹಿಸಿಕೊಡುವೆನೆಂದು ಆಶ್ವಾಸನೆ ಕೊಟ್ಟನು. ಆ ಸಹಾಯಕನು “ನಿಮಗೆ ಎಲ್ಲ ವಿಷಯಗಳನ್ನು ಬೋಧಿಸುವನು ಮತ್ತು ನಾನು ನಿಮಗೆ ಹೇಳಿದ ಎಲ್ಲ ವಿಷಯಗಳನ್ನು ನಿಮ್ಮ ಮನಸ್ಸಿಗೆ ತರುವನು” ಎಂದನು ಯೇಸು. (ಯೋಹಾ. 14:26) ಪವಿತ್ರಾತ್ಮವು ಯಾವುದನ್ನು ಮನಸ್ಸಿಗೆ ತರಲಿಕ್ಕಿತ್ತೆಂದು ಗಮನಿಸಿ. ಶಿಷ್ಯರು ಈಗಾಗಲೇ ಯೇಸುವಿನಿಂದ ಕಲಿತಿದ್ದ ವಿಷಯಗಳನ್ನು. ಆದರೆ ಇದಕ್ಕೆ ತದ್ವಿರುದ್ಧವಾಗಿ ಫಕ್ಕನೆ ಬೈಬಲ್‌ ತೆರೆದು ಮಾರ್ಗದರ್ಶನ ಪಡೆಯಲಿಚ್ಛಿಸುವವರಿಗೆ ಅಂಥ ಬೈಬಲ್‌ ಜ್ಞಾನವೇ ಇರುವುದಿಲ್ಲ. ಹೀಗಿರುವಾಗ ಅವರದನ್ನು ದೇವರು ಕೊಡುವ ಮಾರ್ಗದರ್ಶನೆಯಾಗಿದೆ ಎಂದು ನೆನಸುವುದು ಸರಿಯೇ?

ಜನರು ಮೂಢನಂಬಿಕೆಯಿಂದ ಬೈಬಲನ್ನು ಉಪಯೋಗಿಸುವುದು ಸರ್ವೇಸಾಮಾನ್ಯ. ಅದು ಫಕ್ಕನೆ ಬೈಬಲನ್ನು ತೆರೆದು ಓದುವುದಾಗಿರಬಹುದು ಅಥವಾ ಇನ್ನಿತರ ರೂಢಿಗಳಾಗಿರಬಹುದು. ಆದರೆ ಮಾಟಮಂತ್ರ ಮಾಡುವುದನ್ನು ಬೈಬಲ್‌ ಖಂಡಿಸುತ್ತದೆ. (ಯಾಜ. 19:26; ಧರ್ಮೋ. 18:​9-12; ಅ. ಕಾ. 19:19) “ದೇವರ ವಾಕ್ಯವು ಸಜೀವವಾದದ್ದೂ ಪ್ರಬಲವಾದದ್ದೂ . . . ಆಗಿದೆ” ನಿಜ. ಆದರೆ ಅದನ್ನು ಉಪಯೋಗಿಸುವುದರಲ್ಲಿ ನಾವು ನೈಪುಣ್ಯತೆ ಪಡೆದುಕೊಂಡಿರಬೇಕು. ಬೈಬಲಿನ ನಿಷ್ಕೃಷ್ಟ ಜ್ಞಾನದಿಂದ ಜನರ ಬದುಕು ಉತ್ತಮಗೊಳ್ಳುತ್ತದೆಯೇ ವಿನಃ ಬೈಬಲನ್ನು ಮೂಢನಂಬಿಕೆಯಿಂದ ಬಳಸುವುದರಿಂದ ಅಲ್ಲ. ಬೈಬಲ್‌ ಜ್ಞಾನ ಅನೇಕರಿಗೆ ಉತ್ತಮ ನೈತಿಕತೆಯನ್ನು ತಮ್ಮದಾಗಿಸಿಕೊಳ್ಳಲು, ಬದುಕನ್ನು ಭಗ್ನಗೊಳಿಸುವ ಜೀವನರೀತಿಗಳನ್ನು ಬಿಟ್ಟುಬಿಡಲು ನೆರವಾಗಿದೆ. ಕುಟುಂಬ ಬಂಧವನ್ನು ಬಲಗೊಳಿಸಲು, ಹಾಗೂ ಬೈಬಲಿನ ಕರ್ತೃವಾದ ಯೆಹೋವ ದೇವರೊಂದಿಗೆ ಆಪ್ತ ಸಂಬಂಧ ಬೆಸೆಯಲು ಸಹಾಯಮಾಡಿದೆ.