ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭೂಮಿಗಾಗಿ ದೇವರ ಉದ್ದೇಶವೇನು?

ಭೂಮಿಗಾಗಿ ದೇವರ ಉದ್ದೇಶವೇನು?

ಭೂಮಿಗಾಗಿ ದೇವರ ಉದ್ದೇಶವೇನು?

ಒಂದು ಉದ್ಯಾನದಲ್ಲಿ ನಡೆಯುತ್ತಿರುವಾಗ ಇಲ್ಲವೆ ಸುಗಂಧಭರಿತ ಪುಷ್ಪಗಳ ಪ್ರದೇಶದಲ್ಲಿ ತಿರುಗಾಡುತ್ತಿರುವಾಗ ನಿಮಗೆ ಸಂತೋಷವಾಗುವುದೇಕೆ? ಒಂದು ಸುಂದರವಾದ ಸರೋವರವನ್ನು ನೋಡುವಾಗ ಇಲ್ಲವೆ ಮುಗಿಲೆತ್ತರದ ಪರ್ವತಗಳನ್ನು ನೋಡುವಾಗ ನಿಮ್ಮ ಮನಸ್ಸು ಪ್ರಫುಲ್ಲಿತವಾಗುವುದೇಕೆ? ಮರಗಳಲ್ಲಿ ಕುಳಿತುಕೊಂಡಿರುವ ಹಕ್ಕಿಗಳ ಉಲ್ಲಾಸದ ಗಾನಗಳಿಗೆ ಕಿವಿಗೊಡಲು ನೀವು ನಿಂತುಕೊಳ್ಳುವುದೇಕೆ? ನಯಚಲನೆಯ ಒಂದು ಜಿಂಕೆಯು ನೆಗೆಯುತ್ತಾ ಹೋಗುವುದನ್ನು ನೋಡುವಾಗ ಇಲ್ಲವೆ ಹುಲ್ಲುಗಾವಲಿನಲ್ಲಿ ಕುರಿಗಳ ಹಿಂಡು ಮೇಯುತ್ತಿರುವುದನ್ನು ನೋಡುವಾಗ ನಿಮಗೆ ಹಿತವಾದ ಭಾವನೆಯು ಹುಟ್ಟುವುದೇಕೆ?

ಈ ಎಲ್ಲ ಪ್ರಶ್ನೆಗಳಿಗೆ ಉತ್ತರವು ಒಂದೇ: ಒಂದು ಪರದೈಸಿನಲ್ಲಿ ಇಲ್ಲವೆ ಉದ್ಯಾನದಲ್ಲಿ ಜೀವಿಸಲಿಕ್ಕಾಗಿಯೇ ನಮ್ಮನ್ನು ಸೃಷ್ಟಿಸಲಾಗಿತ್ತು! ನಮ್ಮ ಪ್ರಥಮ ಹೆತ್ತವರಾದ ಆದಾಮಹವ್ವರು ತಮ್ಮ ಬದುಕನ್ನು ಆರಂಭಿಸಿದ್ದೇ ಪರದೈಸಿನಲ್ಲಿ. ಹೀಗೆ, ಪರದೈಸಿನಲ್ಲಿ ಜೀವಿಸುವ ಆಸೆಯನ್ನು ನಾವು ಅವರಿಂದಲೇ ಪಡೆದೆವು, ಮತ್ತು ಅವರು ಈ ಆಸೆಯನ್ನು ಪಡೆದದ್ದು ತಮ್ಮ ಸೃಷ್ಟಿಕರ್ತನಾದ ಯೆಹೋವ ದೇವರಿಂದ. ಮಾನವರಾದ ನಾವು ಪರದೈಸಿನಲ್ಲಿ ಸಂತೋಷದಿಂದಿರುವೆವು ಎಂದು ಆತನಿಗೆ ತಿಳಿದಿತ್ತು, ಏಕೆಂದರೆ ಇಂಥ ಅದ್ಭುತವಾದ ಮನೆಯಲ್ಲಿ ಆನಂದಿಸಲಿಕ್ಕಾಗಿ ಬೇಕಾದ ಗುಣಗಳೊಂದಿಗೆ ಆತನು ನಮ್ಮನ್ನು ಸೃಷ್ಟಿಸಿದ್ದನು.

ಯೆಹೋವನು ಭೂಮಿಯನ್ನು ಸೃಷ್ಟಿಸಿದ್ದೇಕೆ? ಆತನು ಅದನ್ನು “ಜನನಿವಾಸಕ್ಕಾಗಿಯೇ ರೂಪಿಸಿದನು.” (ಯೆಶಾಯ 45:18) ‘ಭೂಮಿಯನ್ನು ನಿರ್ಮಿಸಿದವನು’ ಆದಾಮಹವ್ವರಿಗೆ ಏದೆನ್‌ ತೋಟ ಎಂಬ ಸುಂದರವಾದ ಪರದೈಸ್‌ ಮನೆಯನ್ನು ಕೊಟ್ಟನು. (ಯೆರೆಮೀಯ 10:12; ಆದಿಕಾಂಡ 2:​7-9, 15, 21, 22) ಅದರಲ್ಲಿದ್ದ ನದಿಗಳಲ್ಲಿ, ಹೂವುಗಳಲ್ಲಿ, ಮರಗಳಲ್ಲಿ ಅವರೆಷ್ಟು ಆನಂದಪಟ್ಟಿರಬೇಕು! ಗಗನದಲ್ಲಿ ಹಕ್ಕಿಗಳು ಸುಲಲಿತವಾಗಿ ಹಾರುವುದನ್ನು ಮತ್ತು ನೆಲದ ಮೇಲೆ ವಿಭಿನ್ನ ಪ್ರಕಾರದ ಪ್ರಾಣಿಗಳು ಅಡ್ಡಾಡುತ್ತಿರುವುದನ್ನು ಅವರು ನೋಡಸಾಧ್ಯವಿತ್ತು ಮತ್ತು ಅವುಗಳಲ್ಲಿ ಒಂದರಿಂದಲೂ ಮಾನವರಿಗೆ ಅಪಾಯವಿರಲಿಲ್ಲ! ಭೂಮಿಯಲ್ಲಿನ ಶುದ್ಧ, ತಿಳಿಯಾದ ನೀರಿನಲ್ಲಿ ಮೀನು ಮತ್ತು ಇತರ ಜೀವಿಗಳು ಚಲಿಸುತ್ತಿದ್ದವು. ಎಲ್ಲದ್ದಕ್ಕಿಂತಲೂ ಮಿಗಿಲಾಗಿ, ಆದಾಮಹವ್ವರು ಜೊತೆಯಾಗಿದ್ದರು. ಅವರು ತಮ್ಮಂತೆಯೇ ಇರುವ ಸಂತಾನವನ್ನು ಹುಟ್ಟಿಸಿ, ದೊಡ್ಡದಾಗುತ್ತಾ ಹೋಗುವ ತಮ್ಮ ಕುಟುಂಬದೊಂದಿಗೆ ಜೊತೆಗೂಡಿ ಸಂತೋಷದಿಂದ ತಮ್ಮ ಪರದೈಸ್‌ ಮನೆಯನ್ನು ವಿಸ್ತರಿಸಸಾಧ್ಯವಿತ್ತು.

ಇಂದು ಭೂಮಿಯು ಒಂದು ಪರದೈಸಲ್ಲದಿದ್ದರೂ, ಅದನ್ನು ಒಂದು ಸಂತೋಷಭರಿತ ಕುಟುಂಬಕ್ಕಿರುವ ಒಳ್ಳೇ ಮನೆಗೆ ಹೋಲಿಸಸಾಧ್ಯವಿದೆ. ದೇವರು ಕೊಟ್ಟಿರುವ ಭೂಗ್ರಹವೆಂಬ ಈ ಮನೆಯಲ್ಲಿ ನಮಗೆ ಬೇಕಾದದ್ದೆಲ್ಲ, ಅಂದರೆ ಬೆಳಕು, ಶಾಖ, ನೀರು, ಆಹಾರ ಇದೆ. ಹಗಲಿನಲ್ಲಿ ಸೂರ್ಯನ ಬೆಳಕು ಮತ್ತು ರಾತ್ರಿ ಸಮಯದಲ್ಲಿ ಚಂದ್ರನ ಸೌಮ್ಯ ಬೆಳಕು ನಮಗೆ ಎಷ್ಟು ಹಿತವನ್ನು ತರುತ್ತದೆ! (ಆದಿಕಾಂಡ 1:​14-18) ಭೂಮಿಯ ನೆಲಮಾಳಿಗೆಯಲ್ಲಿ ಕಲ್ಲಿದ್ದಲು ಹಾಗೂ ಎಣ್ಣೆಯಂಥ ಇಂಧನಗಳಿವೆ ಮತ್ತು ಇವುಗಳನ್ನು ನಾವು ಶಾಖೋತ್ಪಾದನೆಗಾಗಿ ಉಪಯೋಗಿಸಬಲ್ಲೆವು. ಜಲಚಕ್ರ ಮತ್ತು ಭೂಮಿಯಲ್ಲಿರುವ ನದಿಗಳ, ಸರೋವರಗಳ ಹಾಗೂ ಸಮುದ್ರಗಳ ವ್ಯವಸ್ಥೆಯಿಂದಾಗಿ ನಮಗೆ ನೀರು ಸಿಗುತ್ತದೆ. ಭೂಮಿಯ ಮೇಲೆಲ್ಲಾ ಹಸಿರು ಹುಲ್ಲು ಒಂದು ರತ್ನಗಂಬಳಿಯಂತೆ ಹಾಸಿಕೊಂಡಿದೆ.

ಮನೆಯಲ್ಲಿ ಆಹಾರವನ್ನು ಶೇಖರಿಸಿಡಲು ಹೇಗೆ ಒಂದು ಸ್ಥಳವಿರುತ್ತದೊ ಹಾಗೆಯೇ ಭೂಮಿಯ ಉಗ್ರಾಣದಲ್ಲಿ ಬಹಳಷ್ಟು ಆಹಾರವಿದೆ. ಯೆಹೋವನು ‘ಸುಗ್ಗೀಕಾಲಗಳನ್ನೂ ದಯಪಾಲಿಸಿ’ ಹೊಲಗಳಲ್ಲಿನ ಬೆಳೆಗಳು ಮತ್ತು ತೋಟಗಳಲ್ಲಿನ ಹಣ್ಣುಗಳ ಮೂಲಕ ‘ಆಹಾರಕೊಟ್ಟು ನಮ್ಮ ಮನಸ್ಸುಗಳನ್ನು ಆನಂದದಿಂದ ತುಂಬಿಸುತ್ತಾನೆ.’ (ಅ. ಕೃತ್ಯಗಳು 14:16, 17) ಈಗಲೇ ಇಷ್ಟೊಂದು ಸೊಗಸಾದ ಮನೆಯಾಗಿರುವ ಈ ಭೂಮಿಯನ್ನು ‘ಸಂತೋಷದ ದೇವರಾದ’ ಯೆಹೋವನು ಒಂದು ಪರದೈಸನ್ನಾಗಿ ಮಾಡುವಾಗ ಅದು ಹೇಗಿರುವುದೆಂದು ಸ್ವಲ್ಪ ಊಹಿಸಿಕೊಳ್ಳಿ!​—⁠1 ತಿಮೊಥೆಯ 1:⁠11, NW.