ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನ್ನ ಸೃಷ್ಟಿಕರ್ತನನ್ನು ಸೇವಿಸುತ್ತಾ ಮುಂದುವರಿಯಲು ದೃಢನಿಶ್ಚಿತಳು

ನನ್ನ ಸೃಷ್ಟಿಕರ್ತನನ್ನು ಸೇವಿಸುತ್ತಾ ಮುಂದುವರಿಯಲು ದೃಢನಿಶ್ಚಿತಳು

ಜೀವನ ಕಥೆ

ನನ್ನ ಸೃಷ್ಟಿಕರ್ತನನ್ನು ಸೇವಿಸುತ್ತಾ ಮುಂದುವರಿಯಲು ದೃಢನಿಶ್ಚಿತಳು

ಕಾನ್‌ಸ್ಟನ್ಸ್‌ ಬೇನಾನ್‌ಟೀ ಅವರು ಹೇಳಿದಂತೆ

ಎಲ್ಲವು ಕೊಂಚ ಸಮಯದಲ್ಲಿಯೇ ಸಂಭವಿಸಿತು! ಕೇವಲ ಆರು ದಿನಗಳೊಳಗೆ, ನಮ್ಮ 22 ತಿಂಗಳ ಮಗಳಾದ ಕಾಮೀಲ್‌ಗೆ ತೀವ್ರ ಜ್ವರ ಬಂದು ಅವಳು ತೀರಿಕೊಂಡಳು. ನಾನು ಸಹಿಸಲಾರದ ದುಃಖದಲ್ಲಿದ್ದೆ. ನಾನೂ ಸಾಯಬಯಸಿದೆ. ಇಂಥ ಸಂಗತಿ ಸಂಭವಿಸುವಂತೆ ದೇವರು ಏಕೆ ಅನುಮತಿಸಿದನು? ನನಗೆ ಒಂದೂ ಅರ್ಥವಾಗಲಿಲ್ಲ.

ನನ್ನ ಹೆತ್ತವರು ಇಟಲಿಯ ಸಿಸಲಿಯದಲ್ಲಿನ ಕಾಸ್ಟೆಲ್ಲಾಮ್ಮಾರೇ ಡೆಲ್‌ ಗೋಲ್ಫೊ ಎಂಬ ಪಟ್ಟಣದಿಂದ ವಲಸೆಬಂದು ನ್ಯೂ ಯಾರ್ಕ್‌ ಸಿಟಿಯಲ್ಲಿ ನೆಲೆಸಿದ್ದರು. ಅಲ್ಲಿ ನಾನು 1908ರ ಡಿಸೆಂಬರ್‌ 8ರಂದು ಜನಿಸಿದೆ. ನಮ್ಮ ಕುಟುಂಬದಲ್ಲಿ ನನ್ನ ತಂದೆ, ತಾಯಿ ಮತ್ತು ಎಂಟು ಮಕ್ಕಳು, ಅಂದರೆ ಐದು ಹುಡುಗರು ಹಾಗೂ ಮೂವರು ಹುಡುಗಿಯರು ಇದ್ದೆವು. *

ಇಸವಿ 1927ರಲ್ಲಿ ನನ್ನ ತಂದೆಯವರಾದ ಸ್ಯಾನ್ಟೋ ಕಾಟಾನ್‌ಸಾರೊ, ಬೈಬಲ್‌ ವಿದ್ಯಾರ್ಥಿಗಳೆಂದು ಆಗ ಕರೆಯಲಾಗುತ್ತಿದ್ದ ಯೆಹೋವನ ಸಾಕ್ಷಿಗಳ ಒಂದು ಸಣ್ಣ ಗುಂಪು ಕೂಡಿಬರುತ್ತಿದ್ದ ಕೂಟಗಳಿಗೆ ಹಾಜರಾಗಲು ಆರಂಭಿಸಿದರು. ನ್ಯೂ ಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಮುಖ್ಯ ಕಾರ್ಯಾಲಯದಲ್ಲಿ (ಬೆತೆಲ್‌ ಎಂದು ಕರೆಯಲಾಗುವ ಸ್ಥಳದಲ್ಲಿ) ಸೇವೆಸಲ್ಲಿಸುತ್ತಿದ್ದ ಇಟಲಿಯ ಸಹೋದರರಾದ ಜೊವಾನ್‌ನೀ ಡೇಚೆಕರವರು ಈ ಕೂಟಗಳನ್ನು ಬ್ರೂಕ್ಲಿನ್‌ಗೆ ಹತ್ತಿರದಲ್ಲಿದ್ದ, ನಾವು ವಾಸಿಸುತ್ತಿದ್ದ ನ್ಯೂ ಜರ್ಸೀಯಲ್ಲಿ ನಡೆಸುತ್ತಿದ್ದರು. ಸಮಯಾನಂತರ ತಂದೆಯವರು ಸಾರುವ ಕೆಲಸದಲ್ಲಿ ಭಾಗವಹಿಸಲು ತೊಡಗಿದರು ಮತ್ತು ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸಿದರು. 1953ರಲ್ಲಿ ಅವರು ತಮ್ಮ ಕೊನೆಯುಸಿರನ್ನೆಳೆಯುವ ತನಕ ಈ ಕೆಲಸವನ್ನು ಮುಂದುವರಿಸಿದರು.

ತಾಯಿಯವರು ಯುವತಿಯಾಗಿದ್ದಾಗ ಕ್ರೈಸ್ತ ಸಂನ್ಯಾಸಿನಿ (ನನ್‌) ಆಗಬೇಕೆಂದು ಬಯಸಿದ್ದರು, ಆದರೆ ಅವರ ಹೆತ್ತವರು ಅದಕ್ಕೆ ಅನುಮತಿ ನೀಡಿರಲಿಲ್ಲ. ಆರಂಭದಲ್ಲಿ, ನಾನು ನನ್ನ ತಾಯಿಯಿಂದ ಪ್ರಭಾವಿತಳಾಗಿ ಅವರ ಮಾತಿಗನುಸಾರ ತಂದೆಯೊಂದಿಗೆ ಬೈಬಲ್‌ ಅಧ್ಯಯನದಲ್ಲಿ ಜೊತೆಗೂಡುತ್ತಿರಲಿಲ್ಲ. ಆದರೆ ಬೇಗನೆ ನಾನು ನನ್ನ ತಂದೆಯಲ್ಲಿ ಬದಲಾವಣೆಗಳನ್ನು ಗಮನಿಸಿದೆ. ಅವರು ಶಾಂತ ಗುಣದವರೂ ಮೃದುಸ್ವಭಾವದವರೂ ಆಗಿ ಮಾರ್ಪಟ್ಟರು ಮತ್ತು ಈ ಕಾರಣ ಕುಟುಂಬದಲ್ಲಿ ಬಹಳಷ್ಟು ಶಾಂತಿ ನೆಲೆಸಿತು. ಇದನ್ನು ನಾನು ಇಷ್ಟಪಟ್ಟೆ.

ಈ ಮಧ್ಯೆ, ನನ್ನ ಪ್ರಾಯದವರೇ ಆದ ಚಾರ್ಲ್ಸ್‌ರನ್ನು ನಾನು ಭೇಟಿಯಾದೆ. ಬ್ರೂಕ್ಲಿನ್‌ ಅವರ ಹುಟ್ಟೂರಾಗಿತ್ತು. ನನ್ನ ಕುಟುಂಬದಂತೆ ಅವರ ಕುಟುಂಬವೂ ಸಿಸಲಿಯಿಂದ ಬಂದಿತ್ತು. ಬೇಗನೆ ನಮ್ಮ ನಿಶ್ಚಿತಾರ್ಥವಾಯಿತು. ನಮ್ಮ ತಂದೆಯವರು, 1931ರಲ್ಲಿ ಒಹಾಯೋದ ಕೊಲಂಬಸ್‌ನಲ್ಲಿ ನಡೆದ ಯೆಹೋವನ ಸಾಕ್ಷಿಗಳ ಅಧಿವೇಶನವನ್ನು ಹಾಜರಾಗಿ ಹಿಂದಿರುಗಿದ ಕೂಡಲೆ ನಾವು ವಿವಾಹವಾದೆವು. ಮುಂದಿನ ವರುಷವೇ ನಮ್ಮ ಮಗಳಾದ ಕಾಮೀಲ್‌ ಜನಿಸಿದಳು. ಅವಳು ತೀರಿಕೊಂಡಾಗ, ನನ್ನ ಎದೆಯೊಡೆಯಿತು. ಒಂದು ದಿನ ಅಳುತ್ತಾ ಇದ್ದ ಚಾರ್ಲ್ಸ್‌ ನನಗೆ ಹೀಗೆ ಹೇಳಿದರು: “ಹೇಗೆ ಕಾಮೀಲ್‌ ನಿನ್ನ ಮಗಳೊ ಹಾಗೆಯೇ ಅವಳು ನನ್ನ ಮಗಳು ಸಹ. ನಾವು ಯಾಕೆ ಒಬ್ಬರನ್ನೊಬ್ಬರು ಸಂತೈಸುತ್ತಾ ನಮ್ಮ ಜೀವನವನ್ನು ಮುಂದುವರಿಸಬಾರದು?”

ನಾವು ಸತ್ಯವನ್ನು ಸ್ವೀಕರಿಸಿದೆವು

ಕಾಮೀಲ್‌ಳ ಶವಸಂಸ್ಕಾರದಂದು ನೀಡಿದ ಭಾಷಣದಲ್ಲಿ ತಂದೆಯವರು ಪುನರುತ್ಥಾನದ ನಿರೀಕ್ಷೆಯ ಕುರಿತು ಮಾತಾಡಿದ್ದರು ಎಂಬುದನ್ನು ಚಾರ್ಲ್ಸ್‌ ನನಗೆ ನೆನಪಿಸಿದರು. “ಪುನರುತ್ಥಾನದಲ್ಲಿ ನಿಮಗೆ ನಿಜವಾಗಿಯೂ ನಂಬಿಕೆಯಿದೆಯೊ?” ಎಂದು ನಾನು ಅವರನ್ನು ಪ್ರಶ್ನಿಸಿದೆ.

“ನಂಬಿಕೆಯಿದೆ! ಬೈಬಲ್‌ ಇದರ ಕುರಿತು ಏನು ತಿಳಿಸುತ್ತದೆ ಎಂಬ ಹೆಚ್ಚಿನ ವಿಷಯವನ್ನು ನಾವೇಕೆ ಕಂಡುಕೊಳ್ಳಬಾರದು?” ಎಂದು ಅವರು ಉತ್ತರಿಸಿದರು.

ಆ ರಾತ್ರಿ ನನಗೆ ನಿದ್ರೆಯೇ ಬರಲಿಲ್ಲ. ಬೆಳಿಗ್ಗೆ ಆರು ಗಂಟೆಗೆ ಎದ್ದು, ತಂದೆಯವರು ಕೆಲಸಕ್ಕೆ ಹೋಗುವ ಮುಂಚೆ ಅವರಲ್ಲಿಗೆ ಹೋಗಿ, ನಾನು ಮತ್ತು ಚಾರ್ಲ್ಸ್‌ ಬೈಬಲನ್ನು ಅಧ್ಯಯನಮಾಡಲು ಬಯಸುತ್ತೇವೆ ಎಂದು ತಿಳಿಸಿದೆ. ಅವರು ಅಪಾರ ಸಂತೋಷದಿಂದ ನನ್ನನ್ನು ತಬ್ಬಿಕೊಂಡರು. ನಾವು ಮಾತಾಡುತ್ತಿದ್ದದ್ದು ಇನ್ನೂ ಮಲಗಿಕೊಂಡಿದ್ದ ನನ್ನ ತಾಯಿಯ ಕಿವಿಗೆ ಬಿತ್ತು. ಏನಾಯಿತು ಎಂದು ಅವಳು ನನ್ನನ್ನು ಕೇಳಿದಾಗ, “ಏನೂ ಇಲ್ಲ, ನಾನು ಮತ್ತು ಚಾರ್ಲ್ಸ್‌ ಬೈಬಲ್‌ ಅಧ್ಯಯನಮಾಡಲು ನಿರ್ಣಯಿಸಿದ್ದೇವೆ” ಎಂದು ನಾನು ಹೇಳಿದೆ.

“ನಾವೆಲ್ಲರೂ ಬೈಬಲನ್ನು ಅಧ್ಯಯನಮಾಡಬೇಕು” ಎಂಬುದು ಅವಳ ಉತ್ತರವಾಗಿತ್ತು. ಹೀಗೆ ನಾವೆಲ್ಲರೂ, ಅಂದರೆ ನನ್ನ ತಮ್ಮತಂಗಿಯರನ್ನು ಸೇರಿಸಿ ಒಟ್ಟಿಗೆ 11 ಮಂದಿ, ಒಂದು ಕುಟುಂಬವಾಗಿ ಅಧ್ಯಯನಮಾಡಲು ಆರಂಭಿಸಿದೆವು.

ಬೈಬಲ್‌ ಅಧ್ಯಯನವು ನನಗೆ ಸಾಂತ್ವನವನ್ನು ನೀಡಿತು. ನಿಧಾನವಾಗಿ ನನ್ನ ಮಾನಸಿಕ ಗಲಿಬಿಲಿ ಹಾಗೂ ದುಃಖವು ದೂರವಾಗಿ, ನನ್ನಲ್ಲಿ ನಿರೀಕ್ಷೆ ಮೂಡಿತು. ಒಂದು ವರುಷದ ಅನಂತರ ಅಂದರೆ 1935ರಲ್ಲಿ, ನಾನು ಮತ್ತು ಚಾರ್ಲ್ಸ್‌ ಬೈಬಲ್‌ ಸತ್ಯಗಳನ್ನು ಇತರರೊಂದಿಗೆ ಹಂಚಲು ಆರಂಭಿಸಿದೆವು. 1937ರ ಫೆಬ್ರವರಿ ತಿಂಗಳಿನಲ್ಲಿ, ನೀರಿನ ದೀಕ್ಷಾಸ್ನಾನದ ಶಾಸ್ತ್ರೀಯ ಅರ್ಥವನ್ನು ವಿವರಿಸಿದ ಒಂದು ಭಾಷಣವನ್ನು ಬ್ರೂಕ್ಲಿನ್‌ನಲ್ಲಿರುವ ಮುಖ್ಯ ಕಾರ್ಯಾಲಯದಲ್ಲಿ ಕೇಳಿಸಿಕೊಂಡ ಅನಂತರ ಅನೇಕ ಮಂದಿ ಇತರರೊಂದಿಗೆ ಹತ್ತಿರದ ಒಂದು ಹೋಟೆಲಿನ ಈಜು ಕೊಳದಲ್ಲಿ ನಾವು ದೀಕ್ಷಾಸ್ನಾನ ಪಡೆದುಕೊಂಡೆವು. ನಾನು ಈ ಹೆಜ್ಜೆಯನ್ನು ತೆಗೆದುಕೊಂಡದ್ದು ನನ್ನ ಮಗಳನ್ನು ಪುನಃ ನೋಡಬಲ್ಲೆ ಎನ್ನುವ ನಿರೀಕ್ಷೆಯಿಂದ ಮಾತ್ರವಲ್ಲ, ನಾನು ಅರಿತುಕೊಳ್ಳಲು ಮತ್ತು ಪ್ರೀತಿಸಲು ಆರಂಭಿಸಿರುವ ನಮ್ಮ ಸೃಷ್ಟಿಕರ್ತನನ್ನು ಸೇವಿಸಬೇಕೆಂಬ ಬಯಕೆಯಿಂದ ಕೂಡ.

ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸುವುದು

ನಾನೇನನ್ನು ಕಲಿತುಕೊಂಡೆನೊ ಅದರ ಕುರಿತು ಇತರರೊಂದಿಗೆ ಮಾತಾಡುವುದು ಪುಳಕಿತಗೊಳಿಸುವಂಥ ಸಂಗತಿಯಾಗಿತ್ತು ಮತ್ತು ಆ ಸಮಯದಲ್ಲಿ ಅನೇಕರು ರಾಜ್ಯ ಸಂದೇಶಕ್ಕೆ ಪ್ರತಿಕ್ರಿಯಿಸಿ ಅದನ್ನು ಘೋಷಿಸುವುದರಲ್ಲಿ ಭಾಗವಹಿಸುತ್ತಿದ್ದ ಕಾರಣ ಅದೊಂದು ಪ್ರತಿಫಲದಾಯಕ ಕೆಲಸವೂ ಆಗಿತ್ತು. (ಮತ್ತಾಯ 9:37) 1941ರಲ್ಲಿ ನಾನು ಮತ್ತು ಚಾರ್ಲ್ಸ್‌ ಪಯನೀಯರರಾದೆವು​—⁠ಯೆಹೋವನ ಸಾಕ್ಷಿಗಳು ತಮ್ಮ ಪೂರ್ಣ ಸಮಯದ ಶುಶ್ರೂಷಕರನ್ನು ಹೀಗೆ ಕರೆಯುತ್ತಾರೆ. ಸ್ವಲ್ಪ ಸಮಯದಲ್ಲಿಯೇ ನಾವು ಒಂದು ಟ್ರೇಲರ್‌ (ಒಯ್ಯಲಾಗುವ ಮನೆ) ಅನ್ನು ಖರೀದಿಸಿದೆವು ಮತ್ತು ಚಾರ್ಲ್ಸ್‌, ನಮ್ಮ ಕುಟುಂಬಕ್ಕೆ ಸೇರಿದ್ದ ಪ್ಯಾಂಟ್‌ ತಯಾರಿಸುವ ಕಾರ್ಖಾನೆಯನ್ನು ನನ್ನ ತಮ್ಮನಾದ ಫ್ರ್ಯಾಂಕ್‌ನ ಕೈಗೊಪ್ಪಿಸಿದರು. ಸಮಾಯನಂತರ, ನಾವು ಸ್ಪೆಷಲ್‌ ಪಯನೀಯರರಾಗಿ ನೇಮಿಸಲ್ಪಟ್ಟಿದ್ದೇವೆ ಎಂಬ ಪತ್ರವನ್ನು ಪಡೆದುಕೊಂಡಾಗ ನಮ್ಮ ಸಂತೋಷವು ಉಕ್ಕಿಹರಿಯಿತು. ಆರಂಭದಲ್ಲಿ ನಾವು ನ್ಯೂ ಜರ್ಸೀಯಲ್ಲಿ ಸೇವೆಸಲ್ಲಿಸಿದೆವು, ಅನಂತರ ನಮ್ಮನ್ನು ನ್ಯೂ ಯಾರ್ಕ್‌ ಸ್ಟೇಟ್‌ಗೆ ಕಳುಹಿಸಲಾಯಿತು.

ಇಸವಿ 1946ರಲ್ಲಿ ಮೇರಿಲ್ಯಾಂಡ್‌ನ ಬಾಲ್ಟಿಮೋರ್‌ನಲ್ಲಿ ನಡೆದ ಅಧಿವೇಶನಕ್ಕೆ ಹಾಜರಾಗಿದ್ದಾಗ, ಯೆಹೋವನ ಸಾಕ್ಷಿಗಳ ವಿಶೇಷ ಪ್ರತಿನಿಧಿಗಳೊಂದಿಗಿನ ಒಂದು ಕೂಟಕ್ಕೆ ಉಪಸ್ಥಿತರಾಗುವಂತೆ ನಮ್ಮನ್ನು ಕೇಳಿಕೊಳ್ಳಲಾಯಿತು. ಅಲ್ಲಿ ನಾವು ನೇತನ್‌ ಏಚ್‌. ನಾರ್‌ ಮತ್ತು ಮಿಲ್ಟನ್‌ ಜಿ. ಹೆನ್ಶಲ್‌ರನ್ನು ಭೇಟಿಯಾದೆವು. ಅವರು ನಮ್ಮೊಂದಿಗೆ ಮಿಷನೆರಿ ಕೆಲಸದ ಬಗ್ಗೆ ಮಾತಾಡಿದರು. ಮುಖ್ಯವಾಗಿ ಇಟಲಿಯಲ್ಲಿ ಸಾರುವ ಕೆಲಸವನ್ನು ಮಾಡುವುದರ ಕುರಿತು ಮಾತಾಡಿದರು. ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ಗೆ ಹಾಜರಾಗುವ ಸಾಧ್ಯತೆಯ ಕುರಿತು ನಾವು ಪರಿಗಣಿಸುವಂತೆ ಅವರು ನಮ್ಮನ್ನು ಕೇಳಿಕೊಂಡರು.

“ಇದರ ಕುರಿತು ಆಲೋಚಿಸಿ, ಅನಂತರ ನಿಮ್ಮ ಉತ್ತರವನ್ನು ತಿಳಿಸಿ” ಎಂದು ನಮಗೆ ಹೇಳಲಾಯಿತು. ಆಫೀಸಿನಿಂದ ಹೊರಬಂದು, ನಾನು ಮತ್ತು ಚಾರ್ಲ್ಸ್‌ ಒಬ್ಬರಿಗೊಬ್ಬರು ನೋಡಿಕೊಂಡೆವು, ಕೂಡಲೆ ತಿರುಗಿ ಪುನಃ ಹಿಂದೆ ಆಫೀಸಿಗೆ ಹೋದೆವು. “ನಾವು ಅದರ ಕುರಿತು ಆಲೋಚಿಸಿದೆವು. ನಾವು ಗಿಲ್ಯಡ್‌ಗೆ ಹಾಜರಾಗಲು ಸಿದ್ಧರಾಗಿದ್ದೇವೆ” ಎಂದು ಹೇಳಿದೆವು. ಹತ್ತು ದಿವಸಗಳ ಅನಂತರ ನಾವು ಗಿಲ್ಯಡ್‌ನ ಏಳನೇ ತರಗತಿಗೆ ಹಾಜರಾದೆವು.

ನಮಗೆ ತರಬೇತಿ ದೊರೆತ ತಿಂಗಳುಗಳನ್ನು ನಾವು ಎಂದಿಗೂ ಮರೆಯಲಾರೆವು. ಮುಖ್ಯವಾಗಿ, ವಿದೇಶಿ ಕ್ಷೇತ್ರದಲ್ಲಿನ ಕಷ್ಟಗಳನ್ನು ಎದುರಿಸಲು ನಮ್ಮನ್ನು ಸಿದ್ಧಪಡಿಸುತ್ತಿದ್ದ ಬೋಧಕರಲ್ಲಿದ್ದ ತಾಳ್ಮೆ ಮತ್ತು ಪ್ರೀತಿಯು ನಮ್ಮ ಮನತಟ್ಟಿತು. 1946ರ ಜುಲೈ ತಿಂಗಳಿನಲ್ಲಿ ಪದವೀಧರರಾದ ಮೇಲೆ ಸ್ವಲ್ಪ ಸಮಯದ ವರೆಗೆ ನ್ಯೂ ಯಾರ್ಕ್‌ ಸಿಟಿಯಲ್ಲಿ ಇಟಲಿಯ ಜನರು ವಾಸಿಸುತ್ತಿದ್ದ ಕ್ಷೇತ್ರದಲ್ಲಿ ಸಾರುವಂತೆ ನಮಗೆ ನೇಮಕವು ಕೊಡಲ್ಪಟ್ಟಿತು. ಅನಂತರ ಒಂದು ರೋಮಾಂಚನಕಾರಿ ದಿನ ಬಂತು! 1947ರ ಜೂನ್‌ 25ರಂದು ನಾವು ನಮ್ಮ ಮಿಷನೆರಿ ನೇಮಕವಾದ ಇಟಲಿಗೆ ಹೊರಟೆವು.

ನಮ್ಮ ನೇಮಕದಲ್ಲಿ ನೆಲೆಸುವುದು

ಈ ಹಿಂದೆ ಮಿಲಿಟರಿ ಉದ್ದೇಶಕ್ಕಾಗಿ ಉಪಯೋಗಿಸುತ್ತಿದ್ದ ಹಡಗಿನಲ್ಲಿ ನಾವು ಪ್ರಯಾಣಿಸಿದೆವು. 14 ದಿನಗಳನ್ನು ಸಮುದ್ರ ಪ್ರಯಾಣದಲ್ಲಿ ಕಳೆದು, ನಾವು ಇಟಲಿಯ ಜೆನೊಅ ಬಂದರಿನಲ್ಲಿ ಬಂದಿಳಿದೆವು. ಕೇವಲ ಎರಡು ವರುಷಗಳ ಹಿಂದೆ ಅಂತ್ಯಗೊಂಡ ಎರಡನೇ ಲೋಕ ಯುದ್ಧದಿಂದಾದ ಅನಾಹುತಗಳು ಪಟ್ಟಣದಲ್ಲಿ ಎದ್ದುಕಾಣುತ್ತಿದ್ದವು. ಉದಾಹರಣೆಗೆ, ಬಾಂಬ್‌ ದಾಳಿಯ ಕಾರಣ ರೈಲು ನಿಲ್ದಾಣದಲ್ಲಿನ ಎಲ್ಲ ಕಿಟಕಿಗಾಜುಗಳು ಒಡೆದುಹೋಗಿತ್ತು. ಜೆನೊಅದಿಂದ ಒಂದು ಸರಕು ರವಾನೆಯ ರೈಲುಗಾಡಿಯಲ್ಲಿ, ಬ್ರಾಂಚ್‌ ಆಫೀಸ್‌ ಮತ್ತು ಮಿಷನೆರಿ ಗೃಹವಿರುವ ಸ್ಥಳವಾದ ಮಿಲನ್‌ಗೆ ನಾವು ಪ್ರಯಾಣಿಸಿದೆವು.

ಯುದ್ಧಾನಂತರದ ಸಮಯದಲ್ಲಿನ ಇಟಲಿಯ ಜೀವನ ಪರಿಸ್ಥಿತಿಗಳು ತೀರ ಕೆಳಮಟ್ಟದ್ದಾಗಿದ್ದವು. ಪುನರ್ನಿರ್ಮಾಣ ಪ್ರಯತ್ನಗಳು ಜಾರಿಯಲ್ಲಿದ್ದವು, ಆದರೆ ಬಡತನವು ವ್ಯಾಪಕವಾಗಿತ್ತು. ಬೇಗನೆ ನಾನು ಒಂದು ಗಂಭೀರ ಅನಾರೋಗಕ್ಕೆ ತುತ್ತಾದೆ. ನನ್ನ ಹೃದಯವು ಬಹಳ ಅಪಾಯಕರ ಸ್ಥಿತಿಯಲ್ಲಿದೆ ಮತ್ತು ನಾನು ಯುನೈಟೆಡ್‌ ಸ್ಟೇಟ್ಸ್‌ಗೆ ಹಿಂದಿರುಗುವುದು ಉತ್ತಮ ಎಂದು ಒಬ್ಬ ಡಾಕ್ಟರ್‌ ಭಾವಿಸಿದರು. ಆದರೆ ಅವರು ಮಾಡಿದ ರೋಗನಿರ್ಣಯವು ತಪ್ಪಾಗಿತ್ತು ಎಂಬುದಕ್ಕೆ ಸಂತೋಷಪಡುತ್ತೇನೆ. ಇದು ಸಂಭವಿಸಿ 58 ವರುಷಗಳು ಕಳೆದಿರುವುದಾದರೂ ನಾನು ಇನ್ನೂ ನನ್ನ ನೇಮಕದಲ್ಲಿ ಇಟಲಿಯಲ್ಲೇ ಇದ್ದೇನೆ.

ನಮ್ಮ ನೇಮಕದಲ್ಲಿ ಕೆಲವೇ ವರುಷಗಳನ್ನು ನಾವು ಕಳೆದ ಅನಂತರ, ಯುನೈಟೆಡ್‌ ಸ್ಟೇಟ್ಸ್‌ನಲ್ಲಿದ್ದ ನನ್ನ ತಮ್ಮಂದಿರು ನಮಗೊಂದು ಕಾರನ್ನು ನೀಡಲು ಬಯಸಿದರು. ಆದರೆ ಅವರ ಈ ನೀಡಿಕೆಯನ್ನು ಚಾರ್ಲ್ಸ್‌ ವಿನಯದಿಂದ ನಿರಾಕರಿಸಿದರು. ಈ ನಿರ್ಣಯವನ್ನು ನಾನು ಗಣ್ಯಮಾಡಿದೆ, ಏಕೆಂದರೆ ನಮಗೆ ತಿಳಿದಿದ್ದ ಮಟ್ಟಿಗೆ ಆ ಸಮಯದಲ್ಲಿ ಇಟಲಿಯಲ್ಲಿದ್ದ ಸಾಕ್ಷಿಗಳಲ್ಲಿ ಯಾರೂ ಕಾರನ್ನು ಹೊಂದಿರಲಿಲ್ಲ. ಆದುದರಿಂದ, ನಾವು ಸಹ ನಮ್ಮ ಕ್ರೈಸ್ತ ಸಹೋದರರ ಜೀವನ ಮಟ್ಟಕ್ಕೆ ಅನುಗುಣವಾಗಿ ಜೀವಿಸುವುದು ಉತ್ತಮವೆಂದು ಚಾರ್ಲ್ಸ್‌ಗೆ ಅನಿಸಿತು. 1961ರಲ್ಲಿ ನಾವು ಒಂದು ಚಿಕ್ಕ ಕಾರನ್ನು ಪಡೆದುಕೊಳ್ಳುವ ತನಕ ನಮ್ಮ ಬಳಿ ಕಾರಿರಲಿಲ್ಲ.

ಮಿಲನ್‌ನಲ್ಲಿದ್ದ ನಮ್ಮ ಮೊದಲ ರಾಜ್ಯ ಸಭಾಗೃಹವು ನೆಲಮಾಳಿಗೆಯಲ್ಲಿದ್ದು, ಅದು ಮಣ್ಣಿನ ನೆಲವನ್ನು ಹೊಂದಿತ್ತು. ಅದರಲ್ಲಿ ಶೌಚಾಲಯವಿರಲಿಲ್ಲ ಮತ್ತು ನೀರಿನ ವ್ಯವಸ್ಥೆಯ ಕುರಿತು ಹೇಳಬೇಕೆಂದರೆ ಬರೀ ಮಳೆ ಬಂದಾಗಲೆಲ್ಲ ನಮ್ಮ ಕಾಲಿನಡಿಯಲ್ಲಿ ಇರುತ್ತಿದ್ದ ನೀರನ್ನು ಬಿಟ್ಟರೆ ರಾಜ್ಯ ಸಭಾಗೃಹದಲ್ಲಿ ಬೇರೆಲ್ಲೂ ನೀರಿನ ವ್ಯವಸ್ಥೆ ಇರಲಿಲ್ಲ. ಅಲ್ಲಿಲ್ಲಿ ಓಡಾಡುತ್ತಿದ್ದ ಇಲಿಗಳ ಒಡನಾಟವೂ ನಮಗಿರುತ್ತಿತ್ತು. ಎರಡು ವಿದ್ಯುತ್‌ ಬಲ್ಬುಗಳು ನಮ್ಮ ಕೂಟಗಳಿಗೆ ಬೆಳಕನ್ನು ನೀಡುತ್ತಿದ್ದವು. ಈ ಎಲ್ಲ ಅನಾನುಕೂಲತೆಯ ಮಧ್ಯದಲ್ಲಿಯೂ ಯಥಾರ್ಥ ಜನರು ನಮ್ಮ ಕೂಟಗಳಿಗೆ ಬರುವುದನ್ನು ಮತ್ತು ಕ್ರಮೇಣ ನಮ್ಮೊಂದಿಗೆ ಶುಶ್ರೂಷೆಯಲ್ಲಿ ಸೇರಿಕೊಳ್ಳುವುದನ್ನು ನೋಡುವುದು ಬಹಳ ಉತ್ತೇಜನದಾಯಕವಾಗಿತ್ತು.

ಮಿಷನೆರಿ ಅನುಭವಗಳು

ಒಮ್ಮೆ ನಾವು, ಶಾಂತಿ​—⁠ಅದು ಬಾಳಬಲ್ಲದೊ? (ಇಂಗ್ಲಿಷ್‌) ಎಂಬ ಪುಸ್ತಿಕೆಯನ್ನು ಒಬ್ಬ ವ್ಯಕ್ತಿಗೆ ನೀಡಿದೆವು. ನಾವು ಅಲ್ಲಿಂದ ಇನ್ನೇನು ಹೊರಡಲಿಕ್ಕಿದ್ದಾಗ, ಅವನ ಪತ್ನಿಯಾದ ಸ್ಯಾನ್ಟೀನಾ ಕಿರಾಣಿ ಸಾಮಾನುಗಳಿಂದ ತುಂಬಿದ ಚೀಲಗಳನ್ನು ಹಿಡಿದುಕೊಂಡು ಅಲ್ಲಿಗೆ ಬಂದಳು. ಅವಳಿಗೆ ಸ್ವಲ್ಪ ಸಿಟ್ಟುಬಂದಂತಿತ್ತು; ತನಗೆ ಎಂಟು ಮಂದಿ ಹೆಣ್ಣುಮಕ್ಕಳನ್ನು ನೋಡಿಕೊಳ್ಳಲಿಕ್ಕಿದೆ ಮತ್ತು ಸ್ವಲ್ಪವೂ ಬಿಡುವಿನ ಸಮಯವಿಲ್ಲ ಎಂದೆಲ್ಲ ಅವಳು ಗೊಣಗಿದಳು. ಮುಂದಿನ ಬಾರಿ ನಾನು ಸ್ಯಾನ್ಟೀನಾಳನ್ನು ಭೇಟಿಯಾದಾಗ ಅವಳ ಗಂಡನು ಮನೆಯಲ್ಲಿರಲಿಲ್ಲ ಮತ್ತು ಅವಳು ಉಣ್ಣೆಯ ಬಟ್ಟೆಯನ್ನು ಹೆಣೆಯುತ್ತಿದ್ದಳು. “ನಿಮಗೆ ಕಿವಿಗೊಡಲು ನನಗೆ ಸಮಯವಿಲ್ಲ, ಮಾತ್ರವಲ್ಲದೆ ನನಗೆ ಓದಲು ಸಹ ಬರುವುದಿಲ್ಲ” ಎಂದು ಅವಳು ಹೇಳಿದಳು.

ನಾನು ಮನಸ್ಸಿನಲ್ಲಿಯೇ ಯೆಹೋವನಿಗೆ ಪ್ರಾರ್ಥಿಸಿದೆ. ಆಮೇಲೆ, ನನ್ನ ಗಂಡನಿಗಾಗಿ ಹಣಕ್ಕೆ ಒಂದು ಸ್ವೆಟರನ್ನು ಅವಳು ಹೆಣೆದುಕೊಡಬಲ್ಲಳೆ ಎಂದು ನಾನು ಕೇಳಿದೆ. ಎರಡು ವಾರಗಳ ಅನಂತರ ನನಗೆ ಸ್ವೆಟರ್‌ ಸಿಕ್ಕಿತು ಮತ್ತು ಸ್ಯಾನ್ಟೀನಾ ಹಾಗೂ ನಾನು “ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವುದು” (ಇಂಗ್ಲಿಷ್‌) ಎಂಬ ಪುಸ್ತಕದ ಸಹಾಯದಿಂದ ಕ್ರಮವಾಗಿ ಬೈಬಲನ್ನು ಅಧ್ಯಯನಮಾಡಲು ಆರಂಭಿಸಿದೆವು. ಸ್ಯಾನ್ಟೀನಾ ಓದಲು ಕಲಿತುಕೊಂಡಳು ಮತ್ತು ಅವಳ ಗಂಡನ ವಿರೋಧದ ಮಧ್ಯೆಯೂ ಅವಳು ಪ್ರಗತಿಮಾಡಿ ದೀಕ್ಷಾಸ್ನಾನವನ್ನು ಪಡೆದುಕೊಂಡಳು. ಅವಳ ಐದು ಮಂದಿ ಹೆಣ್ಣುಮಕ್ಕಳು ಸಾಕ್ಷಿಗಳಾದರು ಮತ್ತು ಅನೇಕ ಇತರರು ಬೈಬಲ್‌ ಸತ್ಯವನ್ನು ಸ್ವೀಕರಿಸುವಂತೆ ಸ್ಯಾನ್ಟೀನಾ ಸಹಾಯಮಾಡಿದ್ದಾಳೆ.

ಇಸವಿ 1951ರ ಮಾರ್ಚ್‌ ತಿಂಗಳಿನಲ್ಲಿ, ಇತರ ಇಬ್ಬರು ಮಿಷನೆರಿಗಳೊಂದಿಗೆ ಅಂದರೆ ರೂತ್‌ ಕ್ಯಾನ್‌ಅನ್‌ * ಮತ್ತು ಬಿಲ್‌ ವನ್‌ಅರ್ಟ್‌ರನ್ನು ಅನಂತರ ವಿವಾಹವಾದ ಲೊಯಿಸ್‌ ಕ್ಯಾಲಹಾನ್‌ರೊಂದಿಗೆ ನಮ್ಮನ್ನು ಸಾಕ್ಷಿಗಳಿಲ್ಲದ ಬ್ರೆಷಾ ಎಂಬ ಸ್ಥಳಕ್ಕೆ ವರ್ಗಾಯಿಸಲಾಯಿತು. ನಾವು ಅಲ್ಲೊಂದು ಸಜ್ಜುಗೊಳಿಸಿದ ಮನೆಯನ್ನು ಕಂಡುಕೊಂಡೆವು. ಆದರೆ ಎರಡು ತಿಂಗಳುಗಳ ಅನಂತರ, ನಾವು ಆ ಮನೆಯನ್ನು 24 ತಾಸುಗಳೊಳಗೆ ಖಾಲಿಮಾಡಬೇಕೆಂದು ಮನೆಯ ಯಜಮಾನನು ತಿಳಿಸಿದನು. ಆ ಕ್ಷೇತ್ರದಲ್ಲಿ ಯಾರೂ ಸಾಕ್ಷಿಗಳಿಲ್ಲದ ಕಾರಣ, ಹೋಟೆಲಿಗೆ ಹೋಗಿ ತಂಗುವುದಲ್ಲದೆ ಬೇರೆ ಯಾವುದೇ ಉಪಾಯವಿರಲಿಲ್ಲ. ನಾವು ಹೆಚ್ಚುಕಡಿಮೆ ಎರಡು ತಿಂಗಳುಗಳ ವರೆಗೆ ಹೋಟೆಲಿನಲ್ಲಿಯೇ ಉಳುಕೊಂಡೆವು.

ನಮ್ಮ ಆಹಾರವು ಬಹಳ ಕಡಿಮೆಯಿತ್ತು: ಕಾಫಿ, ಸ್ವಲ್ಪ ಉಪಾಹಾರ, ಸ್ವಲ್ಪ ಚೀಸ್‌ ಮತ್ತು ಹಣ್ಣುಹಂಪಲುಗಳು. ಈ ಎಲ್ಲ ಅನಾನುಕೂಲತೆಗಳ ಮಧ್ಯದಲ್ಲಿಯೂ ನಾವು ಆಶೀರ್ವದಿತರಾಗಿದ್ದೆವು. ಸಕಾಲದಲ್ಲಿ, ನಮಗೆ ಒಂದು ಸಣ್ಣ ಮನೆ ಸಿಕ್ಕಿತು ಮತ್ತು 1952ರ ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ 35 ಮಂದಿ, ನಾವು ರಾಜ್ಯ ಸಭಾಗೃಹವಾಗಿ ಉಪಯೋಗಿಸುತ್ತಿದ್ದ ಒಂದು ಸಣ್ಣ ಕೋಣೆಯಲ್ಲಿ ಹಾಜರಾಗಿದ್ದರು.

ಪಂಥಾಹ್ವಾನಗಳನ್ನು ಎದುರಿಸುವುದು

ಆ ಸಮಯದಲ್ಲಿ, ಪಾದ್ರಿವರ್ಗವು ಜನರ ಮೇಲೆ ಬಹಳಷ್ಟು ಪ್ರಭಾವವನ್ನು ಬೀರುತ್ತಿತ್ತು. ಉದಾಹರಣೆಗೆ, ನಾವು ಬ್ರೆಷಾದಲ್ಲಿ ಸಾರುತ್ತಿದ್ದಾಗ, ನಮ್ಮ ಮೇಲೆ ಕಲ್ಲುಗಳನ್ನು ಎಸೆಯುವಂತೆ ಕೆಲವು ಹುಡುಗರು ಪಾದ್ರಿಗಳಿಂದ ಉತ್ತೇಜಿಸಲ್ಪಟ್ಟರು. ಹಾಗಿದ್ದರೂ, ಸಮಯಾನಂತರ 16 ಜನರು ನಮ್ಮೊಂದಿಗೆ ಬೈಬಲನ್ನು ಅಧ್ಯಯನಮಾಡಲು ಆರಂಭಿಸಿದರು ಮತ್ತು ಸ್ವಲ್ಪ ಸಮಯದಲ್ಲಿಯೇ ಅವರು ಸಾಕ್ಷಿಗಳಾದರು. ಇವರಲ್ಲಿ ಯಾರು ಸಹ ಇದ್ದರೆಂದು ತುಸು ಯೋಚಿಸಿ. ನಮ್ಮ ಮೇಲೆ ಕಲ್ಲುಗಳನ್ನು ಎಸೆಯುತ್ತೇವೆಂದು ನಮ್ಮನ್ನು ಬೆದರಿಸಿದ ಹುಡುಗರಲ್ಲಿ ಒಬ್ಬನು ಸಹ ಇದ್ದನು! ಅವನೀಗ ಬ್ರೆಷಾದಲ್ಲಿನ ಒಂದು ಸಭೆಯಲ್ಲಿ ಹಿರಿಯನಾಗಿ ಸೇವೆಸಲ್ಲಿಸುತ್ತಿದ್ದಾನೆ. 1955ರಲ್ಲಿ ನಾವು ಬ್ರೆಷಾವನ್ನು ಬಿಟ್ಟುಹೋಗುವಾಗ, ಅಲ್ಲಿ 40 ರಾಜ್ಯ ಪ್ರಚಾರಕರು ಸಾರುವ ಕೆಲಸದಲ್ಲಿ ಭಾಗವಹಿಸುತ್ತಿದ್ದರು.

ಇದರ ಅನಂತರ ನಾವು ಮೂರು ವರುಷಗಳ ಕಾಲ ಲೆಗ್‌ಹಾರ್ನ್‌ನಲ್ಲಿ (ಲೀವೊರ್ನೋ) ಸೇವೆಸಲ್ಲಿಸಿದೆವು. ಅಲ್ಲಿ ಹೆಚ್ಚಿನ ಸಾಕ್ಷಿಗಳು ಸ್ತ್ರೀಯರಾಗಿದ್ದರು ಮತ್ತು ಈ ಕಾರಣ, ಸಾಮಾನ್ಯವಾಗಿ ಸಹೋದರರಿಗೆ ನೇಮಕವಾಗುವ ಸಭಾ ಕೆಲಸಗಳನ್ನು ಸ್ತ್ರೀಯರೇ ನೋಡಿಕೊಳ್ಳಬೇಕಾಗಿತ್ತು. ಅನಂತರ, 11 ವರುಷಗಳ ಹಿಂದೆ ಎಲ್ಲಿಂದ ನಾವು ಆರಂಭಿಸಿದ್ದೆವೊ ಆ ಜೆನೊಅಕ್ಕೆ ಪುನಃ ಬಂದೆವು. ಇಷ್ಟರೊಳಗಾಗಿ ಅಲ್ಲಿ ಒಂದು ಸಭೆಯಿತ್ತು. ನಮ್ಮ ಮನೆಯಿದ್ದ ಕಟ್ಟಡದ ಮೊದಲನೇ ಮಹಡಿಯಲ್ಲಿ ರಾಜ್ಯ ಸಭಾಗೃಹವಿತ್ತು.

ನಾವು ಜೆನೊಅಕ್ಕೆ ಬಂದೊಡನೆ ಒಂದು ಸ್ತ್ರೀಯೊಂದಿಗೆ ನಾನು ಬೈಬಲ್‌ ಅಧ್ಯಯನವನ್ನು ಆರಂಭಿಸಿದೆ. ಆಕೆಯ ಗಂಡನು ಹಿಂದೆ ಒಬ್ಬ ಬಾಕ್ಸರ್‌ ಆಗಿದ್ದ ಮತ್ತು ಬಾಕ್ಸಿಂಗ್‌ ಕಲಿಸುವ ಒಂದು ಕೇಂದ್ರದ ಮ್ಯಾನೇಜರ್‌ ಆಗಿದ್ದ. ಆ ಸ್ತ್ರೀಯು ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿ, ಬೇಗನೆ ನಮ್ಮ ಕ್ರೈಸ್ತ ಸಹೋದರಿಯಾದಳು. ಆದರೆ, ಆಕೆಯ ಗಂಡನು ಅವಳನ್ನು ವಿರೋಧಿಸುತ್ತಿದ್ದನು ಮತ್ತು ಬಹಳ ಕಾಲದ ವರೆಗೆ ಅವನು ಒಬ್ಬ ವಿರೋಧಿಯಾಗಿಯೇ ಇದ್ದನು. ಸಮಯಾನಂತರ ಅವನು ತನ್ನ ಹೆಂಡತಿಯೊಂದಿಗೆ ಕೂಟಗಳಿಗೆ ಬರಲಾರಂಭಿಸಿದನು. ಆದರೆ ಸಭಾಗೃಹದ ಒಳಗೆ ಬರುವ ಬದಲು ಹೊರಗೆಯೇ ಕುಳಿತು ಆಲಿಸುತ್ತಿದ್ದನು. ನಾವು ಜೆನೊಅವನ್ನು ಬಿಟ್ಟಹೋದ ಅನಂತರ, ಅವನು ಒಂದು ಬೈಬಲ್‌ ಅಧ್ಯಯನಕ್ಕಾಗಿ ಕೇಳಿಕೊಂಡಿದ್ದಾನೆಂದು ನಮಗೆ ತಿಳಿದುಬಂತು. ಸಕಾಲದಲ್ಲಿ ಅವನು ಸಹ ದೀಕ್ಷಾಸ್ನಾನವನ್ನು ಪಡೆದುಕೊಂಡನು ಮತ್ತು ಒಬ್ಬ ಪ್ರೀತಿಪರ ಕ್ರೈಸ್ತ ಮೇಲ್ವಿಚಾರಕನಾದನು. ಅವನು ತನ್ನ ಮರಣದ ವರೆಗೆ ನಂಬಿಗಸ್ತನಾಗಿ ಉಳಿದನು.

ಒಬ್ಬ ಪೊಲೀಸನೊಂದಿಗೆ ನಿಶ್ಚಿತಾರ್ಥವಾದ ಒಬ್ಬ ಸ್ತ್ರೀಯೊಂದಿಗೂ ನಾನು ಬೈಬಲ್‌ ಅಧ್ಯಯನವನ್ನು ಮಾಡಿದೆ. ಆರಂಭದಲ್ಲಿ, ಅವನು ಸ್ವಲ್ಪ ಆಸಕ್ತಿಯನ್ನು ತೋರಿಸಿದನು, ಆದರೆ ವಿವಾಹವಾದ ಮೇಲೆ ಅವನ ಮನೋಭಾವ ಬದಲಾಯಿತು. ಅವನು ಅವಳನ್ನು ವಿರೋಧಿಸಲಾರಂಭಿಸಿದನು ಮತ್ತು ಈ ಕಾರಣ ಅವಳು ಅಧ್ಯಯನಮಾಡುವುದನ್ನು ನಿಲ್ಲಿಸಿದಳು. ಅನಂತರ ಅವಳು ಅಧ್ಯಯನವನ್ನು ಪುನಃ ಆರಂಭಿಸಿದಾಗ, ಅವಳ ಗಂಡನು ಅವಳನ್ನು ಬೆದರಿಸತೊಡಗಿದನು. ಎಂದಾದರೂ ನಾವು ಅಧ್ಯಯನಮಾಡುವುದನ್ನು ತಾನು ನೋಡಿದರೆ ನಮ್ಮಿಬ್ಬರನ್ನೂ ಗುಂಡಿಕ್ಕಿ ಸಾಯಿಸುತ್ತೇನೆಂದು ಅವನು ಬೆದರಿಕೆಯನ್ನೊಡ್ಡಿದನು. ಹೀಗಿದ್ದರೂ, ಅವಳು ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿ ದೀಕ್ಷಾಸ್ನಾನವನ್ನು ಪಡೆದುಕೊಂಡಳು. ಅವನು ನಮ್ಮನ್ನು ಗಂಡಿಕ್ಕಿ ಕೊಲ್ಲಲಿಲ್ಲ ಎಂದು ಹೇಳಬೇಕಾಗಿಲ್ಲ. ವಾಸ್ತವದಲ್ಲಿ, ಕೆಲವು ವರುಷಗಳ ಅನಂತರ ನಾನು ಜೆನೊಅದಲ್ಲಿ ನಡೆದ ಒಂದು ಸಮ್ಮೇಳನಕ್ಕೆ ಹಾಜರಾಗಿದ್ದಾಗ ಯಾರೋ ಒಬ್ಬರು ನನ್ನ ಹಿಂದಿನಿಂದ ಬಂದು ತನ್ನ ಕೈಗಳಿಂದ ನನ್ನ ಕಣ್ಣನ್ನು ಮುಚ್ಚಿ, ‘ಯಾರು ಹೇಳಿ ನೋಡುವ’ ಎಂದು ಕೇಳಿದನು. ಅವನು ಆ ಸ್ತ್ರೀಯ ಗಂಡನಾಗಿದ್ದನು ಎಂದು ನಾನು ನೋಡಿದಾಗ ನನ್ನ ಕಣ್ಣೀರನ್ನು ತಡೆಹಿಡಿಯಲಾರದೆ ಹೋದೆ. ನನ್ನನ್ನು ತಬ್ಬಿಕೊಂಡ ಬಳಿಕ, ಇಂದೇ ತಾನು ದೀಕ್ಷಾಸ್ನಾನ ಹೊಂದಿ ಯೆಹೋವನಿಗೆ ತನ್ನ ಸಮರ್ಪಣೆಯನ್ನು ಸಂಕೇತಿಸಿದ್ದೇನೆ ಎಂದು ತಿಳಿಸಿದನು.

ಇಸವಿ 1964ರಿಂದ 1972ರ ತನಕ ಚಾರ್ಲ್ಸ್‌ ಸಭೆಗಳನ್ನು ಆಧ್ಯಾತ್ಮಿಕವಾಗಿ ಬಲಪಡಿಸಲು ಭೇಟಿನೀಡುತ್ತಿದ್ದಾಗ ಅವರೊಂದಿಗೆ ಹೋಗುವ ಸುಯೋಗ ನನಗಿತ್ತು. ನಾವು ಉತ್ತರ ಇಟಲಿಯಲ್ಲಿರುವ ಹೆಚ್ಚುಕಡಿಮೆ ಎಲ್ಲ ಸ್ಥಳಗಳಿಗೆ​—⁠ಪೀಡ್‌ಮಾಂಟ್‌, ಲೊಮ್‌ಬಾರ್‌ಡೀ ಮತ್ತು ಲಗ್ಯೂರೀಅಗೆ ಭೇಟಿನೀಡಿದ್ದೇವೆ. ಅನಂತರ ನಾವು ನಮ್ಮ ಪಯನೀಯರ್‌ ಸೇವೆಯನ್ನು ಫ್ಲಾರೆನ್ಸ್‌ನ ಹತ್ತಿರದಲ್ಲಿ ಮತ್ತು ತದನಂತರ ವೆರ್‌ಚೆಲೀಯಲ್ಲಿ ಮುಂದುವರಿಸಿದೆವು. 1977ರಲ್ಲಿ ವೆರ್‌ಚೆಲೀಯಲ್ಲಿ ಕೇವಲ ಒಂದೇ ಸಭೆಯಿತ್ತು, ಆದರೆ 1999ರಲ್ಲಿ ನಾವು ಆ ಸ್ಥಳವನ್ನು ಬಿಡುವಷ್ಟರೊಳಗೆ ಅಲ್ಲಿ ಮೂರು ಸಭೆಗಳಿದ್ದವು. ಆ ವರುಷ, ನಾನು 91 ವರುಷ ಪ್ರಾಯದವಳಾದೆ. ಆಗ ನಾವು ರೋಮ್‌ನಲ್ಲಿರುವ ಮಿಷನೆರಿ ಗೃಹಕ್ಕೆ ಸ್ಥಳಾಂತರಿಸುವಂತೆ ಉತ್ತೇಜಿಸಲ್ಪಟ್ಟೆವು. ಈ ಮಿಷನೆರಿ ಗೃಹವು, ಸುಂದರವಾದ ಸಣ್ಣ ಕಟ್ಟಡವಾಗಿದ್ದು ತುಲನಾತ್ಮಕವಾಗಿ ಪ್ರಶಾಂತ ಕ್ಷೇತ್ರದಲ್ಲಿದೆ.

ಇನ್ನೊಂದು ದುಃಖಕರ ಸನ್ನಿವೇಶ

ಇಸವಿ 2002ರ ಮಾರ್ಚ್‌ ತಿಂಗಳಿನಲ್ಲಿ, ಹಿಂದೆಂದೂ ಆರೋಗ್ಯದ ಸಮಸ್ಯೆಯನ್ನು ಎದುರಿಸಿರದ ಚಾರ್ಲ್ಸ್‌ ಥಟ್ಟನೆ ಅಸ್ವಸ್ಥರಾದರು. ಅವರ ಆರೋಗ್ಯವು ಕ್ಷೀಣಿಸುತ್ತಾ ಹೋಯಿತು ಮತ್ತು 2002ರ ಮೇ 11ರಂದು ಅವರು ಮೃತಪಟ್ಟರು. 71 ವರುಷಗಳ ವೈವಾಹಿಕ ಜೀವನದಲ್ಲಿ ನಾವಿಬ್ಬರೂ ನೋವುನಲಿವುಗಳನ್ನು ಒಟ್ಟಿಗೆ ಹಂಚಿಕೊಂಡಿದ್ದೆವು. ಅವರ ಮರಣವು ನನಗೆ ಅಪಾರವಾದ ದುಃಖವನ್ನು ಮತ್ತು ನಷ್ಟವನ್ನು ತಂದಿತು.

ಈಗ ನಾನು ಚಾರ್ಲ್ಸ್‌ರನ್ನು ನೆನಪಿಸಿಕೊಳ್ಳುವಾಗೆಲ್ಲ, ಕೋಟು ಮತ್ತು 1930ಗಳ ಶೈಲಿಯ ಟೋಪಿಯನ್ನು ಧರಿಸುತ್ತಿದ್ದ ಅವರ ಚಿತ್ರಣ ಅನೇಕವೇಳೆ ನನ್ನ ಮನಸ್ಸಿಗೆ ಬರುತ್ತದೆ. ಅವರ ಮುಗುಳ್ನಗೆಯನ್ನು ನೆನಪಿಸಿಕೊಳ್ಳುತ್ತೇನೆ ಇಲ್ಲವೆ ಅವರ ಸುಪರಿಚಿತ ನಗೆ ನನಗೆ ಕೇಳಿಸಿದಂತೆ ಆಗುತ್ತದೆ. ಯೆಹೋವನ ಸಹಾಯ ಮತ್ತು ಅನೇಕ ಪ್ರಿಯ ಕ್ರೈಸ್ತ ಸಹೋದರಸಹೋದರಿಯರ ಪ್ರೀತಿಯಿಂದಾಗಿ ನಾನು ಈ ದುಃಖಕರ ಸನ್ನಿವೇಶವನ್ನು ತಾಳಿಕೊಳ್ಳಲು ಸಾಧ್ಯವಾಗಿದೆ. ಚಾರ್ಲ್ಸ್‌ರನ್ನು ಪುನಃ ನೋಡಲಿರುವ ಸಮಯಕ್ಕಾಗಿ ನಾನು ಬಹಳ ಆತುರದಿಂದ ಎದುರುನೋಡುತ್ತಿದ್ದೇನೆ.

ನನ್ನ ಸೇವೆಯನ್ನು ಮುಂದುವರಿಸುವುದು

ನನ್ನ ಸೃಷ್ಟಿಕರ್ತನನ್ನು ಸೇವಿಸುವುದು ನನ್ನ ಜೀವನದ ಅತ್ಯುತ್ತಮ ಸಂಗತಿಯಾಗಿದೆ. ಬಹಳ ವರುಷಗಳಿಂದ, ‘ಯೆಹೋವನು ಸರ್ವೋತ್ತಮನೆಂದು ನಾನು ಅನುಭವ ಸವಿದು ನೋಡಿದ್ದೇನೆ.’ (ಕೀರ್ತನೆ 34:⁠8) ನಾನು ಆತನ ಪ್ರೀತಿಯನ್ನು ಮತ್ತು ಆತನ ಕಾಳಜಿಯನ್ನು ಅನುಭವಿಸಿದ್ದೇನೆ. ನನ್ನ ಮಗುವನ್ನು ಕಳೆದುಕೊಂಡೆನಾದರೂ, ಯೆಹೋವನು ನನಗೆ ಇಟಲಿಯಾದ್ಯಂತ ಚದರಿರುವ ಮತ್ತು ನನ್ನ ಹಾಗೂ ಆತನ ಹೃದಯಕ್ಕೆ ಆನಂದವನ್ನು ತರುವ ಅನೇಕಾನೇಕ ಆಧ್ಯಾತ್ಮಿಕ ಪುತ್ರ ಪುತ್ರಿಯರನ್ನು ನೀಡಿದ್ದಾನೆ.

ಇತರರೊಂದಿಗೆ ನನ್ನ ಸೃಷ್ಟಿಕರ್ತನ ಬಗ್ಗೆ ಮಾತಾಡುವುದೇ ನನಗೆ ಅತಿ ಪ್ರಿಯವಾದ ವಿಷಯ. ಆದುದರಿಂದಲೇ ಈಗಲೂ ನಾನು ಸಾರುವುದನ್ನು ಮತ್ತು ಬೈಬಲ್‌ ಅಧ್ಯಯನಗಳನ್ನು ನಡೆಸುವುದನ್ನು ಮುಂದುವರಿಸುತ್ತಿದ್ದೇನೆ. ನನ್ನ ಆರೋಗ್ಯದ ಕಾರಣ ಹೆಚ್ಚನ್ನು ಮಾಡಲು ಸಾಧ್ಯವಿಲ್ಲವಲ್ಲ ಎಂದು ಕೆಲವೊಮ್ಮೆ ನಾನು ದುಃಖಿಸುತ್ತೇನೆ. ಆದರೆ ನನ್ನ ಇತಿಮಿತಿಗಳನ್ನು ಯೆಹೋವನು ಬಲ್ಲನು ಮತ್ತು ನಾನೇನನ್ನು ಮಾಡಬಲ್ಲೆನೊ ಅದಕ್ಕಾಗಿ ಆತನು ನನ್ನನ್ನು ಪ್ರೀತಿಸುತ್ತಾನೆ ಹಾಗೂ ಗಣ್ಯಮಾಡುತ್ತಾನೆ ಎಂದು ನಾನು ಗ್ರಹಿಸುತ್ತೇನೆ. (ಮಾರ್ಕ 12:42) “ಪ್ರಾಣವಿರುವ ವರೆಗೂ ಯೆಹೋವನನ್ನು ಸ್ತುತಿಸುವೆನು; ಜೀವಮಾನವೆಲ್ಲಾ ನನ್ನ ದೇವರನ್ನು ಕೊಂಡಾಡುವೆನು” ಎಂಬ ಕೀರ್ತನೆ 146:2ರಲ್ಲಿರುವ ಮಾತುಗಳಿಗನುಸಾರ ಜೀವಿಸಲು ನಾನು ಪ್ರಯತ್ನಿಸುತ್ತಿದ್ದೇನೆ. *

[ಪಾದಟಿಪ್ಪಣಿಗಳು]

^ ಪ್ಯಾರ. 5 ನನ್ನ ತಮ್ಮನಾದ ಆ್ಯಂಜೆಲೋ ಕಾಟಾನ್‌ಸಾರೊವಿನ ಅನುಭವವು 1975, ಏಪ್ರಿಲ್‌ 1ರ ಕಾವಲಿನಬುರುಜು (ಇಂಗ್ಲಿಷ್‌), ಪುಟ 205-7ರಲ್ಲಿ ಪ್ರಕಟಿಸಲ್ಪಟ್ಟಿದೆ.

^ ಪ್ಯಾರ. 28 ಇಸವಿ 1971, ಮೇ 1ರ ಕಾವಲಿನಬುರುಜು (ಇಂಗ್ಲಿಷ್‌), ಪುಟ 277-80ರಲ್ಲಿ ಇವರ ಜೀವನ ಕಥೆಯನ್ನು ನೀವು ಕಾಣಸಾಧ್ಯವಿದೆ.

^ ಪ್ಯಾರ. 41 ಈ ಲೇಖನವು ಸಿದ್ಧಗೊಳಿಸಲ್ಪಡುತ್ತಿರುವಾಗ, 2005ರ ಜುಲೈ 16ರಂದು ಸಹೋದರಿ ಬೇನಾನ್‌ಟೀ ಮೃತಪಟ್ಟರು. ಅವರು 96 ವರುಷದವರಾಗಿದ್ದರು.

[ಪುಟ 13ರಲ್ಲಿರುವ ಚಿತ್ರ]

ಕಾಮೀಲ್‌

[ಪುಟ 14ರಲ್ಲಿರುವ ಚಿತ್ರ]

1931ರಲ್ಲಿ ನಮ್ಮ ವಿವಾಹದ ದಿನದಂದು

[ಪುಟ 14ರಲ್ಲಿರುವ ಚಿತ್ರ]

ಮೊದಲಲ್ಲಿ ಆಸಕ್ತಿಯಿಲ್ಲದಿದ್ದರೂ, ನಾವೆಲ್ಲರೂ ಬೈಬಲನ್ನು ಅಧ್ಯಯನಮಾಡಬೇಕೆಂದು ತಾಯಿಯವರು ಒಪ್ಪಿಕೊಂಡರು

[ಪುಟ 15ರಲ್ಲಿರುವ ಚಿತ್ರ]

1946ರಲ್ಲಿ ಸಹೋದರ ನಾರ್‌ರೊಂದಿಗೆ ಗಿಲ್ಯಡ್‌ ಪದವಿಪ್ರದಾನ ಕಾರ್ಯಕ್ರಮದಲ್ಲಿ

[ಪುಟ 17ರಲ್ಲಿರುವ ಚಿತ್ರ]

ಚಾರ್ಲ್ಸ್‌ರೊಂದಿಗೆ ಅವರ ಮರಣಕ್ಕಿಂತ ಸ್ವಲ್ಪ ಸಮಯ ಮುಂಚೆ