ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಹದ್ದಿನ ದೇಶ”ದಲ್ಲಿ ಯೆಹೋವನ ವಾಕ್ಯವು ಉನ್ನತಕ್ಕೇರುತ್ತಿದೆ

“ಹದ್ದಿನ ದೇಶ”ದಲ್ಲಿ ಯೆಹೋವನ ವಾಕ್ಯವು ಉನ್ನತಕ್ಕೇರುತ್ತಿದೆ

“ಹದ್ದಿನ ದೇಶ”ದಲ್ಲಿ ಯೆಹೋವನ ವಾಕ್ಯವು ಉನ್ನತಕ್ಕೇರುತ್ತಿದೆ

“ಹದ್ದಿನ ದೇಶ.” ಅಲ್ಬೇನಿಯದವರು ತಮ್ಮ ಭಾಷೆಯಲ್ಲಿ ತಮ್ಮ ದೇಶವನ್ನು ಹೀಗೆ ಕರೆಯುತ್ತಾರೆ. ಈ ದೇಶವು ಏಡ್ರಿಯಾಟಿಕ್‌ ಸಮುದ್ರಕ್ಕೆ ಮುಖಮಾಡಿ, ಬಾಲ್ಕನ್‌ ದ್ವೀಪಕಲ್ಪದ ಮೇಲೆ ನೆಲೆಗೊಂಡು, ಗ್ರೀಸ್‌ ಮತ್ತು ಪೂರ್ವ ಯುಗೊಸ್ಲಾವಿಯದ ನಡುವಿನ ಪ್ರದೇಶದಲ್ಲಿದೆ. ಅಲ್ಬೇನಿಯದವರ ಮೂಲದ ಕುರಿತು ಹಲವಾರು ಊಹೆಗಳಿರುವುದಾದರೂ, ಹೆಚ್ಚಿನ ಇತಿಹಾಸಕಾರರು ಅಲ್ಬೇನಿಯದವರು ಮತ್ತು ಅವರ ಭಾಷೆಯು ಪ್ರಾಚೀನ ಇಲ್ಲುರಿಕದವರಿಂದ ಇಳಿದು ಬಂದಿದೆ ಎಂದು ಒಪ್ಪಿಕೊಳ್ಳುತ್ತಾರೆ ಮತ್ತು ಈ ಇಲ್ಲುರಿಕದವರ ಸಂಸ್ಕೃತಿಯು ದಿ ಎನ್‌ಸೈಕ್ಲಪೀಡೀಯ ಬ್ರಿಟ್ಯಾನಿಕಕ್ಕನುಸಾರ, ಸಾ.ಶ.ಪೂ. 2000ದಷ್ಟು ಹಿಂದಿನದ್ದಾಗಿದೆ.

ಅಲ್ಬೇನಿಯದ ನೈಸರ್ಗಿಕ ಸೌಂದರ್ಯವು ತೀರ ಉತ್ತರದಲ್ಲಿರುವ ಹರಿದ ಅಂಚುಳ್ಳ ಬೆಟ್ಟಗಳಿಂದ, ದಕ್ಷಿಣದಲ್ಲಿ ಅತಿ ದೂರದ ವರೆಗೆ ಏಡ್ರಿಯಾಟಿಕ್‌ನಲ್ಲಿರುವ ಬಿಳಿ ಮರಳ ಕಿನಾರೆಗಳ ವರೆಗೆ ವ್ಯಾಪಿಸುತ್ತದೆ. ಆದರೆ ಇಲ್ಲಿಯ ಅತಿ ಮಹಾನ್‌ ಸೌಂದರ್ಯವು ಇಲ್ಲಿಯ ಜನರಲ್ಲಿದೆ. ಅವರು ಆದರಣೀಯರು ಮತ್ತು ಸತ್ಕಾರಭಾವದವರು, ಉತ್ಸಾಹಭರಿತ ಭಾವಪ್ರದರ್ಶಕರು, ಚುರುಕಾಗಿ ಕಲಿಯುವವರಾಗಿದ್ದು ತಮ್ಮ ಅಭಿಪ್ರಾಯಗಳನ್ನು ಲವಲವಿಕೆಯ ಭಾವಾಭಿನಯಗಳ ಮೂಲಕ ಭಾವೋದ್ರೇಕದಿಂದ ವ್ಯಕ್ತಪಡಿಸುವವರಾಗಿದ್ದಾರೆ.

ಒಬ್ಬ ಹೆಸರಾಂತ ಮಿಷನೆರಿಯ ಭೇಟಿ

ಜನರ ಆಕರ್ಷಕ ವ್ಯಕ್ತಿತ್ವ ಮತ್ತು ಸುಂದರವಾದ ನೈಸರ್ಗಿಕ ದೃಶ್ಯಗಳು ಶತಮಾನಗಳ ಹಿಂದೆ ಒಬ್ಬ ಅಪೂರ್ವ ಪ್ರಯಾಣಿಕನ ಗಮನವನ್ನು ಸೆಳೆದವು ಎಂಬುದರಲ್ಲಿ ಸಂಶಯವೇ ಇಲ್ಲ. ವ್ಯಾಪಕವಾಗಿ ಪ್ರಯಾಣಿಸಿದ ಅಪೊಸ್ತಲ ಪೌಲನು ಸುಮಾರು ಸಾ.ಶ. 56ರಲ್ಲಿ ಬರೆದುದು: “ನಾನು . . . ಇಲ್ಲುರಿಕ ಸೀಮೆಯ ಪರ್ಯಂತರಕ್ಕೂ ಸುತ್ತಿ ಕ್ರಿಸ್ತನ ಸುವಾರ್ತೆಯ ಸಾರೋಣವನ್ನು ನೆರವೇರಿಸಿದ್ದೇನೆ.” (ರೋಮಾಪುರ 15:19) ಇಲ್ಲುರಿಕದ ದಕ್ಷಿಣ ಭಾಗವು ಇಂದಿನ ಮಧ್ಯ ಮತ್ತು ಉತ್ತರ ಅಲ್ಬೇನಿಯವನ್ನು ಸರಿಹೋಲುತ್ತದೆ. ಪೌಲನು ಇಲ್ಲುರಿಕದ ದಕ್ಷಿಣದಲ್ಲಿರುವ ಗ್ರೀಸ್‌ನ ಕೊರಿಂಥ ಪಟ್ಟಣದಿಂದ ಬರೆಯುತ್ತಿದ್ದನು. ಅವನು “ಇಲ್ಲುರಿಕ ಸೀಮೆಯ ಪರ್ಯಂತರಕ್ಕೂ” ಪೂರ್ಣವಾಗಿ ಸಾರಿದನು ಎಂದು ಹೇಳುವಾಗ, ಅವನು ಇಲ್ಲುರಿಕದ ಗಡಿಯ ವರೆಗೆ ಅಥವಾ ಆ ಪ್ರದೇಶದೊಳಗೆ ಹೋದನು ಎಂದು ಸೂಚಿಸುತ್ತದೆ. ವಿಷಯವು ಏನೇ ಇರಲಿ, ಅವನು ಇಂದಿನ ದಕ್ಷಿಣ ಅಲ್ಬೇನಿಯದಲ್ಲಿ ಸಾರಿರಬಹುದು. ಹೀಗೆ ನಮಗೆ ತಿಳಿದಿರುವಂತೆ ಅಲ್ಬೇನಿಯದಲ್ಲಿ ಪ್ರಥಮವಾಗಿ ರಾಜ್ಯದ ಕುರಿತು ಸಾರಿದವನು ಪೌಲನೇ.

ಶತಮಾನಗಳು ದಾಟಿದವು. ಸಾಮ್ರಾಜ್ಯಗಳು ಆಳಿಅಳಿದವು. 1912ರಲ್ಲಿ ಅಲ್ಬೇನಿಯವು ಸ್ವತಂತ್ರ ರಾಜ್ಯವಾಗುವ ತನಕ ಯೂರೋಪಿನಲ್ಲಿರುವ ಈ ಸಣ್ಣ ಪ್ರದೇಶದಲ್ಲಿ ವಿದೇಶಿ ಅಧಿಕಾರಗಳು ಆಳುತ್ತಿದ್ದವು. ಸುಮಾರು ಒಂದು ದಶಕದ ಬಳಿಕ ಯೆಹೋವನ ರಾಜ್ಯದ ಸಂದೇಶವು ಅಲ್ಬೇನಿಯದಲ್ಲಿ ಪುನಃ ಒಮ್ಮೆ ಕೇಳಿಬಂತು.

ಆಧುನಿಕ ಸಮಯದಲ್ಲಿ ಒಂದು ಆಸಕ್ತಿಕರ ಆರಂಭ

ಅಮೆರಿಕದಲ್ಲಿದ್ದ ಅಂತಾರಾಷ್ಟ್ರೀಯ ಬೈಬಲ್‌ ವಿದ್ಯಾರ್ಥಿಗಳೆಂದು ಆಗ ಕರೆಯಲ್ಪಡುತ್ತಿದ್ದ ಯೆಹೋವನ ಸಾಕ್ಷಿಗಳೊಂದಿಗೆ ಸಹವಾಸಿಸುತ್ತಿದ್ದ ಅಲ್ಬೇನಿಯದ ಕೆಲವು ವಲಸೆಗಾರರು, ತಾವು ಕಲಿತಂಥ ವಿಷಯಗಳನ್ನು ತಮ್ಮ ಜನರೊಂದಿಗೆ ಹಂಚಿಕೊಳ್ಳಲು 1920ರ ದಶಕದಲ್ಲಿ ಅಲ್ಬೇನಿಯಕ್ಕೆ ಹಿಂದಿರುಗಿದರು. ಇವರಲ್ಲಿ ನಾಶೊ ಈಡ್ರೀಸೀ ಒಬ್ಬನಾಗಿದ್ದನು. ಕೆಲವರು ಸುವಾರ್ತೆಗೆ ಒಳ್ಳೆಯ ಪ್ರತಿಕ್ರಿಯೆಯನ್ನು ತೋರಿಸಿದರು. ಹೆಚ್ಚಾಗುತ್ತಿದ್ದ ಆಸಕ್ತಿಯನ್ನು ಪೋಷಿಸಲು, 1924ರಲ್ಲಿ ಅಲ್ಬೇನಿಯದ ಸಾರುವ ಕೆಲಸದ ಮೇಲ್ವಿಚಾರಣೆಯನ್ನು ರೊಮೇನಿಯದ ಬ್ರಾಂಚ್‌ ಆಫೀಸಿಗೆ ನೇಮಿಸಲಾಯಿತು.

ಆ ವರುಷಗಳಲ್ಲಿ ಅಲ್ಬೇನಿಯದಲ್ಲಿ ಯೆಹೋವನ ಕುರಿತು ಕಲಿತವರಲ್ಲಿ ತಾನಾಸ್‌ ಡ್ಯೂಲೀ (ಆತಾನ್‌ ಡ್ಯೂಲೀಸ್‌) ಒಬ್ಬನಾಗಿದ್ದನು. ಅವನು ಜ್ಞಾಪಿಸಿಕೊಂಡದ್ದು: “1925ರಲ್ಲಿ ಅಲ್ಬೇನಿಯದಲ್ಲಿ ಮೂರು ಸಂಘಟಿತ ಸಭೆಗಳಿದ್ದವು ಹಾಗೂ ದೇಶದಾದ್ಯಂತ ಅಲ್ಲಲ್ಲಿ ಪ್ರತ್ಯೇಕವಾದ ಬೈಬಲ್‌ ವಿದ್ಯಾರ್ಥಿಗಳು ಮತ್ತು ಆಸಕ್ತ ಜನರಿದ್ದರು. ಅವರ ನಡುವೆ ಇದ್ದ ಪ್ರೀತಿಯು ಅವರ ಸುತ್ತಲೂ ಇದ್ದ ಜನರಿಗಿಂತ ಎಷ್ಟೋ ಗಾಢವಾಗಿತ್ತು!” *

ಉತ್ತಮ ರಸ್ತೆಗಳ ವ್ಯವಸ್ಥೆಯ ಕೊರತೆಯು ಪ್ರಯಾಣವನ್ನು ತುಂಬಾ ಕಷ್ಟಕರವಾಗಿ ಮಾಡಿತು. ಆದರೂ, ಹುರುಪುಳ್ಳ ಪ್ರಚಾರಕರು ಈ ಪಂಥಾಹ್ವಾನವನ್ನು ಸ್ವೀಕರಿಸಿದರು. ಉದಾಹರಣೆಗೆ, 1928ರಲ್ಲಿ ದಕ್ಷಿಣ ಕರಾವಳಿಯಲ್ಲಿರುವ ವ್ಲೋರದಲ್ಲಿ ಆರೆಟೀ ಪೀನಳು 18 ವರ್ಷದವಳಾಗಿದ್ದಾಗ ದೀಕ್ಷಾಸ್ನಾನ ಪಡೆದಳು. ಅವಳು ಕೈಯಲ್ಲಿ ಬೈಬಲನ್ನು ಹಿಡಿದುಕೊಂಡು ಸುವಾರ್ತೆಯನ್ನು ಸಾರುತ್ತಾ ಏರುಪೇರುಗಳುಳ್ಳ ಬೆಟ್ಟಗಳನ್ನು ಹತ್ತಿ ಇಳಿದಳು. 1930ರ ದಶಕದ ಆರಂಭದ ಭಾಗದಲ್ಲಿ ಅವಳು ವ್ಲೋರದಲ್ಲಿದ್ದ ಹುರುಪಿನ ಸಭೆಯ ಭಾಗವಾಗಿದ್ದಳು.

1930ರಷ್ಟಕ್ಕೆ ಅಲ್ಬೇನಿಯದ ಸಾರುವ ಕೆಲಸದ ಮೇಲ್ವಿಚಾರಣೆಯನ್ನು ಗ್ರೀಸ್‌ನಲ್ಲಿದ್ದ ಆ್ಯಥೆನ್ಸ್‌ ಬ್ರಾಂಚ್‌ ಆಫೀಸಿಗೆ ಕೊಡಲಾಯಿತು. 1932ರಲ್ಲಿ ಗ್ರೀಸ್‌ನಿಂದ ಒಬ್ಬ ಸಂಚರಣ ಮೇಲ್ವಿಚಾರಕರು, ಸಹೋದರರನ್ನು ಉತ್ತೇಜಿಸಲು ಮತ್ತು ಬಲಪಡಿಸಲು ಅಲ್ಬೇನಿಯಕ್ಕೆ ಬಂದರು. ಆಗ ಬೈಬಲ್‌ ಸತ್ಯವನ್ನು ಕಲಿಯುತ್ತಿದ್ದವರಲ್ಲಿ ಹೆಚ್ಚಿನವರಿಗೆ ಸ್ವರ್ಗೀಯ ನಿರೀಕ್ಷೆ ಇತ್ತು. ಅವರು ಶುದ್ಧ ಮತ್ತು ಯಥಾರ್ಥ ಜನರೆಂಬ ಒಳ್ಳೆಯ ಹೆಸರು ಅವರಿಗೆ ಎಲ್ಲ ಕಡೆಗಳಲ್ಲಿ ಆಳವಾದ ಗೌರವವನ್ನು ತಂದುಕೊಟ್ಟಿತು. ಈ ನಂಬಿಗಸ್ತ ಸಹೋದರರ ಕೆಲಸವು ಬಹಳಷ್ಟು ಫಲವನ್ನು ಉತ್ಪಾದಿಸಿತು. 1935ರಲ್ಲಿ ಮತ್ತು 1936ರಲ್ಲಿ, ಪ್ರತಿ ವರ್ಷ ಸುಮಾರು 6,500 ಬೈಬಲ್‌ ಪ್ರಕಾಶನಗಳನ್ನು ಅಲ್ಬೇನಿಯದಲ್ಲಿ ವಿತರಿಸಲಾಯಿತು.

ಒಂದು ದಿನ ವ್ಲೋರ ಪಟ್ಟಣದ ಮಧ್ಯಭಾಗದಲ್ಲಿ ನಾಶೊ ಈಡ್ರೀಸೀಯವರು ಜೆ. ಎಫ್‌. ರದರ್‌ಫರ್ಡ್‌ರವರ ಒಂದು ಭಾಷಣವನ್ನು ಗ್ರ್ಯಾಮಫೋನಿನಲ್ಲಿ ನುಡಿಸಿದರು. ಅಂದು ಜನರು ತಮ್ಮ ಅಂಗಡಿಗಳನ್ನು ಮುಚ್ಚಿ ಸಹೋದರ ಈಡ್ರೀಸೀಯವರು ಅಲ್ಬೇನ್ಯನ್‌ ಭಾಷೆಯಲ್ಲಿ ಭಾಷಾಂತರಿಸುವಾಗ ಕಿವಿಗೊಡಲು ಬಂದರು. ಆ ಆರಂಭದ, ಅವಿರತವಾಗಿ ದುಡಿಯುತ್ತಿದ್ದ ಬೈಬಲ್‌ ಶಿಕ್ಷಕರ ಹುರುಪು ಆಶೀರ್ವದಿಸಲ್ಪಟ್ಟಿತು. ಹೀಗೆ 1940ರಷ್ಟಕ್ಕೆ ಅಲ್ಬೇನಿಯದಲ್ಲಿ 50 ಮಂದಿ ಸಾಕ್ಷಿಗಳಿದ್ದರು.

ಒಂದು ನಾಸ್ತಿಕ ರಾಜ್ಯ

ಇಸವಿ 1939ರಲ್ಲಿ ಇಟಲಿಯ ಫ್ಯಾಸಿಸ್ಟರು ಈ ದೇಶವನ್ನು ವಶಪಡಿಸಿಕೊಂಡರು. ಯೆಹೋವನ ಸಾಕ್ಷಿಗಳ ಕಾನೂನುಬದ್ಧ ಮನ್ನಣೆಯನ್ನು ರದ್ದುಪಡಿಸಲಾಯಿತು ಮತ್ತು ಅವರ ಸಾರುವ ಕೆಲಸವನ್ನು ನಿಷೇಧಿಸಲಾಯಿತು. ಸ್ವಲ್ಪವೇ ಸಮಯದ ಅನಂತರ ಜರ್ಮನ್‌ ಸೈನ್ಯವು ದೇಶವನ್ನು ಆಕ್ರಮಿಸಿತು. ಎರಡನೇ ಲೋಕ ಯುದ್ಧವು ಕೊನೆಗೊಳ್ಳುವಾಗ, ಅನ್ವರ್‌ ಹೋಸಾ ಎಂಬ ಪ್ರಭಾವಶಾಲಿ ಮಿಲಿಟರಿ ಅಧಿಕಾರಿಯು ಉದಯಿಸಿದನು. ಅವನ ಕಮ್ಯೂನಿಸ್ಟ್‌ ಪಕ್ಷವು 1946ರ ಚುನಾವಣೆಯನ್ನು ಗೆದ್ದಿತು ಮತ್ತು ಅವನು ಪ್ರಧಾನ ಮಂತ್ರಿಯಾದನು. ಇದನ್ನು ಹಿಂಬಾಲಿಸಿದ ವರ್ಷಗಳು ಬಿಡುಗಡೆಯ ಸಮಯವೆಂದು ಕರೆಯಲ್ಪಟ್ಟವಾದರೂ, ಯೆಹೋವನ ಜನರಿಗೆ ಅದು ದಬ್ಬಾಳಿಕೆಯ ಸಮಯವಾಗಿ ಪರಿಣಮಿಸಿತು.

ಕಾಲಕ್ರಮೇಣ, ಧರ್ಮದ ವಿಷಯದಲ್ಲಿ ಸರಕಾರದ ಸೈರಣೆಯು ಕಡಿಮೆಯಾಗತೊಡಗಿತು. ಕ್ರೈಸ್ತ ತಾಟಸ್ಥ್ಯಕ್ಕೆ ಹೊಂದಿಕೆಯಲ್ಲಿ ಅಲ್ಬೇನಿಯದಲ್ಲಿದ್ದ ಯೆಹೋವನ ಸಾಕ್ಷಿಗಳು ಶಸ್ತ್ರಧಾರಿಗಳಾಗಲು ಮತ್ತು ರಾಜಕೀಯದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದರು. (ಯೆಶಾಯ 2:​2-4; ಯೋಹಾನ 15:​17-19) ಅನೇಕರಿಗೆ ಆಹಾರ ಅಥವಾ ಮೂಲಭೂತ ಜೀವನಾವಶ್ಯಕತೆಗಳನ್ನು ಕೊಡದೆ ಸೆರೆಮನೆಯಲ್ಲಿ ಹಾಕಲಾಯಿತು. ಅನೇಕ ಸಂದರ್ಭಗಳಲ್ಲಿ, ಸೆರೆಮನೆಯ ಹೊರಗಿದ್ದ ಅವರ ಆಧ್ಯಾತ್ಮಿಕ ಸಹೋದರಿಯರು ಅವರ ಬಟ್ಟೆಗಳನ್ನು ತೊಳೆದರು ಮತ್ತು ಅವರಿಗಾಗಿ ಅಡಿಗೆಮಾಡಿದರು.

ಹಿಂಸೆಯ ಮಧ್ಯೆಯೂ ನಿರ್ಭೀತರು

ಪೆರ್‌ಮೇತಿನ ಹತ್ತಿರವಿದ್ದ ಹಳ್ಳಿಯಲ್ಲಿ 1940ನೇ ದಶಕದ ಆರಂಭದ ಭಾಗದಲ್ಲಿ ಆಗ ಹದಿಪ್ರಾಯದವಳಾಗಿದ್ದ ಫ್ರೋಸೀನಾ ಜೆಕಾ ಎಂಬವಳು, ತನ್ನ ಅಣ್ಣಂದಿರು ಚಮ್ಮಾರನಾದ ನಾಶೊ ಡೊರಿ ಎಂಬ ಸಾಕ್ಷಿಯಿಂದ ಕಲಿತ ವಿಷಯಗಳನ್ನು ಕೇಳಿಸಿಕೊಂಡಳು. * ಅಧಿಕಾರಿಗಳು ಯೆಹೋವನ ಸಾಕ್ಷಿಗಳ ಮೇಲೆ ಕಠಿನ ಕಾನೂನು ಕ್ರಮಕೈಗೊಳ್ಳಲು ತೊಡಗಿದ್ದರು. ಆದರೆ ಹೆತ್ತವರ ಅಸಮ್ಮತಿಯ ಮಧ್ಯೆಯೂ ಫ್ರೋಸೀನಾಳ ನಂಬಿಕೆಯು ಹೆಚ್ಚೆಚ್ಚು ಬಲಗೊಂಡಿತು. “ಅವರು ನನ್ನ ಶೂಗಳನ್ನು ಅಡಗಿಸಿಡುತ್ತಿದ್ದರು ಮತ್ತು ನಾನು ಕ್ರೈಸ್ತ ಕೂಟಗಳಿಗೆ ಹೋದರೆ ನನ್ನನ್ನು ಹೊಡೆಯುತ್ತಿದ್ದರು. ಒಬ್ಬ ಅವಿಶ್ವಾಸಿ ವ್ಯಕ್ತಿಯನ್ನು ನಾನು ಮದುವೆಯಾಗುವಂತೆ ಒಡಂಬಡಿಸಲು ಪ್ರಯತ್ನಿಸಿದರು. ಹಾಗೆ ಮಾಡಲು ನಿರಾಕರಿಸಿದಾಗ, ಅವರು ನನ್ನನ್ನು ಮನೆಯಿಂದ ಹೊರಗೆ ಹಾಕಿದರು. ಆ ದಿವಸ ಹಿಮ ಬೀಳುತ್ತಾ ಇತ್ತು. ನಾಶೊ ಡೊರಿಯವರು ಜಿರೊಕಾಸ್ಟರ್‌ನಲ್ಲಿದ್ದ ಸಹೋದರ ಗೋಲ ಫ್ಲೋಕೋರವರನ್ನು ನನಗೆ ಸಹಾಯಮಾಡುವಂತೆ ಕೇಳಿಕೊಂಡರು. ಅವರು ತಮ್ಮ ಕುಟುಂಬದೊಂದಿಗೆ ಜೀವಿಸಲು ಏರ್ಪಾಡುಮಾಡಿದರು. ನನ್ನ ಸಹೋದರರು ತಮ್ಮ ತಟಸ್ಥ ನಿಲುವಿನ ಕಾರಣ ಸೆರೆಮನೆಯಲ್ಲಿ ಎರಡು ವರ್ಷಗಳಿದ್ದರು. ಅವರು ಬಿಡುಗಡೆಗೊಂಡ ಅನಂತರ, ನಾನು ಅವರೊಂದಿಗೆ ವಾಸಿಸಲು ವ್ಲೋರಕ್ಕೆ ಸ್ಥಳಾಂತರಿಸಿದೆ.

“ಪೊಲೀಸರು ನನ್ನನ್ನು ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಒತ್ತಾಯಿಸಿದರು. ನಾನು ನಿರಾಕರಿಸಿದೆ. ಅವರು ನನ್ನನ್ನು ಬಂಧಿಸಿ, ಒಂದು ಕೋಣೆಯೊಳಗೆ ಕರೆದೊಯ್ದು ನನ್ನ ಸುತ್ತ ನಿಂತರು. ಅವರಲ್ಲಿ ಒಬ್ಬನು ನನ್ನನ್ನು ಬೆದರಿಸಿದ್ದು: ‘ನಿನಗೆ ನಾವೇನು ಮಾಡಬಹುದೆಂದು ನಿನಗೆ ತಿಳಿದಿದೆಯಾ?’ ಅದಕ್ಕೆ ನಾನು ಉತ್ತರಿಸಿದೆ: ‘ಯೆಹೋವನು ಅನುಮತಿಸುವುದಷ್ಟನ್ನೇ ನೀವು ಮಾಡಬಹುದು.’ ಅವನು ಸಿಟ್ಟಿನಿಂದ ಪ್ರತ್ಯುತ್ತರಿಸಿದ್ದು: ‘ನಿನಗೆ ಹುಚ್ಚು ಹಿಡಿದಿರಬೇಕು! ಇಲ್ಲಿಂದ ತೊಲಗು!’”

ಇದೇ ನಿಷ್ಠೆಯ ಆತ್ಮವು ಈ ಎಲ್ಲ ವರ್ಷಗಳಲ್ಲಿ ಅಲ್ಬೇನಿಯದ ಸಹೋದರರ ವೈಶಿಷ್ಟ್ಯವಾಗಿತ್ತು. 1957ರೊಳಗೆ 75 ರಾಜ್ಯ ಪ್ರಚಾರಕರ ಉಚ್ಚಾಂಕವನ್ನು ತಲಪಲಾಯಿತು. 1960ನೇ ದಶಕದ ಆರಂಭದಲ್ಲಿ ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯಕಾರ್ಯಾಲಯವು, ಅಮೆರಿಕದಲ್ಲಿದ್ದ ಅಲ್ಬೇನಿಯದ ವಲಸೆಗಾರರಾದ ಜಾನ್‌ ಮಾರ್ಕ್ಸ್‌ರನ್ನು ಕ್ರೈಸ್ತ ಕೆಲಸವನ್ನು ಸಂಘಟಿಸಲು ಸಹಾಯಮಾಡಲಿಕ್ಕಾಗಿ ಟಿರಾನೆಗೆ ಭೇಟಿಕೊಡಲು ಏರ್ಪಾಡುಮಾಡಿತು. * ಆದರೆ ಸ್ವಲ್ಪ ಸಮಯದೊಳಗೆ ಲೂಚೀ ಜೆಕಾ, ಮೀಹಾಲ್‌ ಸ್ವೇಸೀ, ಲೆಯೋನೀಧಾ ಪೋಪೆ ಮತ್ತು ಇತರ ಜವಾಬ್ದಾರಿಯುತ ಸಹೋದರರನ್ನು ಕಾರ್ಮಿಕ ಶಿಬಿರಗಳಲ್ಲಿ ಹಾಕಲಾಯಿತು.

ಕಾರ್ಗತ್ತಲಿನಲ್ಲಿ ಬೆಳಕಿನ ಆಶಾಕಿರಣ

ಇಸವಿ 1967ರ ತನಕ ಅಲ್ಬೇನಿಯದಲ್ಲಿ ಎಲ್ಲ ಧರ್ಮಗಳ ಕಡೆಗೆ ಅಸಮ್ಮತಿಯನ್ನು ತೋರಿಸಲಾಗುತ್ತಿತ್ತು ಅಷ್ಟೇ. ಆದರೆ ತದನಂತರ ಧರ್ಮವನ್ನು ಸ್ವಲ್ಪವೂ ಸಹಿಸಲಾಗುತ್ತಿರಲಿಲ್ಲ. ಕ್ಯಾಥೊಲಿಕ್‌, ಆರ್ತಡಾಕ್ಸ್‌ ಅಥವಾ ಮುಸ್ಲಿಮ್‌ ಪಾದ್ರಿಗಳಿಗೆ ಸಂಸ್ಕಾರಬದ್ಧ ಪೂಜೆಗಳಲ್ಲಿ ಸೇವೆ ಸಲ್ಲಿಸಲಿಕ್ಕಿರಲಿಲ್ಲ. ಚರ್ಚುಗಳನ್ನು ಮತ್ತು ಮಸೀದಿಗಳನ್ನು ಮುಚ್ಚಲಾಯಿತು ಅಥವಾ ಅವುಗಳನ್ನು ವ್ಯಾಯಾಮ ಶಾಲೆ, ವಸ್ತುಸಂಗ್ರಹಾಲಯ ಇಲ್ಲವೆ ಮಾರುಕಟ್ಟೆಗಳಾಗಿ ಪರಿವರ್ತಿಸಲಾಯಿತು. ಯಾರ ಬಳಿಯೂ ಬೈಬಲ್‌ ಇರಸಾಧ್ಯವಿರಲಿಲ್ಲ. ದೇವರಲ್ಲಿ ನಂಬಿಕೆಯ ವಿಚಾರವನ್ನೇ ಯಾರೊಬ್ಬರೂ ವ್ಯಕ್ತಪಡಿಸಬಾರದಿತ್ತು.

ಸುವಾರ್ತೆ ಸಾರುವುದು ಮತ್ತು ಸಭೆಯಾಗಿ ಕೂಡಿಕೊಳ್ಳುವುದು ಒಂದು ಸಾಹಸಕಾರ್ಯವಾಗಿತ್ತು. ಸಾಕ್ಷಿಗಳು ಒಬ್ಬರು ಇನ್ನೊಬ್ಬರಿಂದ ಪ್ರತ್ಯೇಕಿಸಲ್ಪಟ್ಟಿದ್ದರೂ, ಅವರು ಯೆಹೋವನನ್ನು ಸೇವಿಸಲು ತಮ್ಮಿಂದಾದುದೆಲ್ಲವನ್ನೂ ಮಾಡಿದರು. 1960ರಿಂದ 1980ರ ತನಕ ಸಾಕ್ಷಿಗಳ ಸಂಖ್ಯೆ ತೀವ್ರವಾಗಿ ಕುಸಿದು ತೀರ ಚಿಕ್ಕದಾಯಿತು. ಆದರೂ, ಅವರು ಆಧ್ಯಾತ್ಮಿಕವಾಗಿ ಪ್ರಬಲರಾಗಿದ್ದರು.

ಅಲ್ಬೇನಿಯದಲ್ಲಿ ರಾಜಕೀಯ ಬದಲಾವಣೆಗಳು 1980ರ ದಶಕದ ಕೊನೆಯಲ್ಲಿ ನಿಧಾನವಾಗಿ ಸುಧಾರಿಸತೊಡಗಿದವು. ಆಹಾರ ಮತ್ತು ಬಟ್ಟೆಗಳ ಅಭಾವ ಇತ್ತು. ಜನರು ಸಂತೋಷಿತರಾಗಿರಲಿಲ್ಲ. ಪೂರ್ವ ಯೂರೋಪಿನಾದ್ಯಂತ ಆಗುತ್ತಿದ್ದ ಸುಧಾರಣೆಗಳು 1990ರ ಆರಂಭದಲ್ಲಿ ಅಲ್ಬೇನಿಯ ದೇಶಕ್ಕೂ ಬಂದುಮುಟ್ಟಿದವು. 45 ವರ್ಷಗಳ ನಿರಂಕುಶ ಆಡಳಿತದ ಅನಂತರ, ಒಂದು ಹೊಸ ಸರಕಾರವು ಧಾರ್ಮಿಕ ಸ್ವಾತಂತ್ರ್ಯವನ್ನು ಪುನಃ ಕೊಟ್ಟಿತು.

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಮಾರ್ಗದರ್ಶನಕ್ಕನುಸಾರ, ಆಸ್ಟ್ರೀಯ ಮತ್ತು ಗ್ರೀಸ್‌ನಲ್ಲಿರುವ ಬ್ರಾಂಚ್‌ ಆಫೀಸುಗಳು ಕೂಡಲೆ ಅಲ್ಬೇನಿಯದ ಸ್ಥಳಿಕ ಸಹೋದರರನ್ನು ಸಂಪರ್ಕಿಸಲು ಆರಂಭಿಸಿದವು. ಅಲ್ಬೇನ್ಯನ್‌ ಭಾಷೆಯನ್ನು ತಿಳಿದವರಾಗಿದ್ದ ಗ್ರೀಸ್‌ನ ಸಹೋದರರು, ಹೊಸದಾಗಿ ಭಾಷಾಂತರಿಸಲ್ಪಟ್ಟ ಕೆಲವೊಂದು ಬೈಬಲ್‌ ಸಾಹಿತ್ಯಗಳನ್ನು ಟಿರಾನೆ ಮತ್ತು ಬರಾಟ್‌ಗೆ ತಂದರು. ಈ ಹಿಂದೆ ಚದುರಿದ್ದ ಸ್ಥಳಿಕ ಸಹೋದರರು ಹಲವಾರು ವರ್ಷಗಳ ಅನಂತರ ಪ್ರಥಮ ಬಾರಿಗೆ ವಿದೇಶದಿಂದ ಬಂದ ಸಾಕ್ಷಿಗಳನ್ನು ಭೇಟಿಯಾದಾಗ, ಅವರ ಹೃದಯಗಳು ಸಂತೋಷದಿಂದ ತುಂಬಿತುಳುಕಿದವು.

ಹುರುಪುಳ್ಳ ವಿದೇಶಿ ಪಯನೀಯರರು ಕೆಲಸದಲ್ಲಿ ಮುಂದಾಳುತ್ವ ವಹಿಸುತ್ತಾರೆ

ಇಸವಿ 1992ರ ಆರಂಭದಲ್ಲಿ, ಆಡಳಿತ ಮಂಡಲಿಯು ಅಲ್ಬೇನಿಯದ ಹಿನ್ನೆಲೆ ಇದ್ದ ಮಿಷನೆರಿ ದಂಪತಿಗಳಾದ ಮೈಕಲ್‌ ಮತ್ತು ಲಿಂಡ ಡೀಗ್ರೆಗೊರ್ಯೊರವರನ್ನು ಅಲ್ಬೇನಿಯಕ್ಕೆ ಸ್ಥಳಾಂತರಿಸಲು ಏರ್ಪಾಡುಮಾಡಿತು. ಇವರು ನಂಬಿಗಸ್ತರಾಗಿದ್ದ ವೃದ್ಧರನ್ನು ಸಂಪರ್ಕಿಸಿ ಅವರು ಪುನಃ ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಕುಟುಂಬದ ಭಾಗವಾಗಲು ಸಹಾಯಮಾಡಿದರು. ನಾಲ್ಕು ಗ್ರೀಕ್‌ ಪಯನೀಯರರೊಂದಿಗೆ ಶ್ರಮಜೀವಿಗಳಾಗಿದ್ದ 16 ಮಂದಿ ಇಟಲಿಯ ವಿಶೇಷ ಪಯನೀಯರರು ಅಥವಾ ಪೂರ್ಣ ಸಮಯದ ಸೌವಾರ್ತಿಕರು ನವೆಂಬರ್‌ನಲ್ಲಿ ಅಲ್ಬೇನಿಯಕ್ಕೆ ಆಗಮಿಸಿದರು. ಅವರು ಸ್ಥಳಿಕ ಭಾಷೆಯನ್ನು ಕಲಿಯಲು ಸಹಾಯಮಾಡಲಿಕ್ಕಾಗಿ ಭಾಷಾ ಕೋರ್ಸ್‌ ಅನ್ನು ಏರ್ಪಾಡಿಸಲಾಯಿತು.

ಈ ವಿದೇಶಿ ಪಯನೀಯರರಿಗೆ ದೈನಂದಿನ ಜೀವನವು ಕಷ್ಟಕರವಾಗಿತ್ತು. ವಿದ್ಯುಚ್ಛಕ್ತಿ ವ್ಯವಸ್ಥೆ ಅನಿಶ್ಚಿತವಾಗಿತ್ತು. ಚಳಿಗಾಲವು ತಣ್ಣಗಿದ್ದು, ಆರ್ದ್ರತೆಯುಳ್ಳದ್ದಾಗಿರುತ್ತಿತ್ತು. ಆಹಾರ ಮತ್ತು ಇತರ ಜೀವನಾವಶ್ಯಕತೆಗಳನ್ನು ಪಡೆಯಲು ಜನರು ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲುತ್ತಿದ್ದರು. ಆದರೆ ಸಹೋದರರು ಎದುರಿಸುತ್ತಿದ್ದ ಅತಿ ದೊಡ್ಡ ಸಮಸ್ಯೆಯು, ಸತ್ಯಕ್ಕೆ ಪ್ರತಿಕ್ರಿಯಿಸುತ್ತಿದ್ದಂಥ ಆಸಕ್ತ ಜನರ ಸಮೂಹಗಳು ಕೂಡಿಬರಲು ಸಾಕಷ್ಟು ದೊಡ್ಡ ಕಟ್ಟಡಗಳನ್ನು ಕಂಡುಕೊಳ್ಳುವುದೇ ಆಗಿತ್ತು.

ಒಂದು ಭಾಷೆಯು ಒಂದು ಕೆಲಸವನ್ನು ಸಾಧಿಸಲಿಕ್ಕಾಗಿ ಕೇವಲ ಒಂದು ಸಾಧನವಾಗಿದೆ, ಆದರೆ ಅದು ತಾನೇ ಅತಿ ಮಹತ್ವಪೂರ್ಣವಾದದ್ದಲ್ಲ ಎಂಬುದನ್ನು ಅಲ್ಬೇನ್ಯನ್‌ ಭಾಷೆ ಮಾತಾಡಲು ಪ್ರಯಾಸಪಡುತ್ತಿದ್ದ ಪಯನೀಯರರು ಗ್ರಹಿಸಿದರು. ಒಬ್ಬ ಅನುಭವಸ್ಥ ಬೈಬಲ್‌ ಶಿಕ್ಷಕನು ಅವರಿಗೆ ಹೇಳಿದ್ದು: “ಸಹೋದರರಿಗೆ ಹೃತ್ಪೂರ್ವಕವಾದ ಮುಗುಳ್ನಗೆ ಕೊಡಲು ಅಥವಾ ಅಪ್ಪಿಕೊಳ್ಳಲು ವ್ಯಾಕರಣಬದ್ಧವಾದ ರೀತಿಯಲ್ಲಿ ಮಾತಾಡುವ ಆವಶ್ಯಕತೆ ನಮಗಿಲ್ಲ. ಅಲ್ಬೇನಿಯದವರು ನಿಮ್ಮ ಹೃದಯದಿಂದ ಉಕ್ಕುವ ಪ್ರೀತಿಗೆ ಪ್ರತಿಕ್ರಿಯಿಸುತ್ತಾರೆ, ನಿಷ್ಕೃಷ್ಟವಾದ ವ್ಯಾಕರಣಕ್ಕಲ್ಲ. ಚಿಂತೆಮಾಡಬೇಡಿರಿ, ಅವರು ನಿಮ್ಮನ್ನು ಅರ್ಥಮಾಡಿಕೊಳ್ಳುವರು.”

ಮೊದಲ ಭಾಷಾ ವ್ಯಾಸಂಗದ ಬಳಿಕ, ಈ ಪಯನೀಯರರು ಬರಾಟ್‌, ಡ್ಯುರಸ್‌, ಜಿರೊಕಾಸ್ಟರ್‌, ಶ್ಕೋಡರ್‌, ಟಿರಾನೆ, ಮತ್ತು ವ್ಲೋರದಲ್ಲಿ ಕೆಲಸವನ್ನು ಆರಂಭಿಸಿದರು. ಬಲುಬೇಗನೆ ಈ ನಗರಗಳಲ್ಲಿ ಸಭೆಗಳು ತೀವ್ರಗತಿಯಲ್ಲಿ ಬೆಳೆದವು. ಈಗ ಅನಾರೋಗ್ಯದಿಂದಿರುವ ಮತ್ತು 80 ವರ್ಷ ಪ್ರಾಯದವಳಾಗಿರುವ ಆರೆಟೀ ಪೀನ ಆಗ ವ್ಲೋರದಲ್ಲೇ ಇದ್ದಳು. ಅವಳೊಂದಿಗೆ ಸುವಾರ್ತೆ ಸಾರಲು ಇಬ್ಬರು ವಿಶೇಷ ಪಯನೀಯರರನ್ನು ಅಲ್ಲಿಗೆ ಕಳುಹಿಸಲಾಯಿತು. ವಿದೇಶಿಯರು ಅಲ್ಬೇನ್ಯನ್‌ ಭಾಷೆಯನ್ನು ಮಾತಾಡುತ್ತಿರುವುದನ್ನು ಕಂಡು ಜನರು ಚಕಿತರಾದರು: “ಬೇರೆ ಧರ್ಮದ ಗುಂಪುಗಳಿಂದ ಬರುವ ಮಿಷನೆರಿಗಳು ನಾವು ಏನನ್ನಾದರೂ ಕಲಿಯಬೇಕಾದರೆ ಇಂಗ್ಲಿಷ್‌ ಅಥವಾ ಇಟ್ಯಾಲಿಯನ್‌ ಭಾಷೆಯನ್ನು ಕಲಿಯುವಂತೆ ಮಾಡುತ್ತಿದ್ದರು. ನೀವು ನಮ್ಮನ್ನು ನಿಜವಾಗಿ ಪ್ರೀತಿಸುತ್ತೀರಿ ಮತ್ತು ಪ್ರಾಮುಖ್ಯವಾದ ವಿಷಯವನ್ನು ಹೇಳಲು ಬಯಸುತ್ತೀರಿ. ಏಕೆಂದರೆ ನೀವು ನಮ್ಮ ಭಾಷೆಯನ್ನು ಕಲಿತಿದ್ದೀರಿ!” ಆರೆಟೀ 1994ರ ಜನವರಿ ತಿಂಗಳಿನಲ್ಲಿ ತಮ್ಮ ಭೂಜೀವಿತವನ್ನು ಮುಗಿಸಿದಳು. ಅವಳು ತನ್ನ ಜೀವನದ ಕೊನೆ ತಿಂಗಳಿನ ವರೆಗೆ ಸುವಾರ್ತೆ ಸಾರುವುದರಲ್ಲಿ ಸಕ್ರಿಯಳಾಗಿದ್ದಳು. ಅವಳು ಮತ್ತು ಆ ಪಯನೀಯರರು ತೋರಿಸಿದ ಹುರುಪು ಆಶೀರ್ವದಿಸಲ್ಪಟ್ಟಿತು. 1995ರಲ್ಲಿ ವ್ಲೋರದಲ್ಲಿ ಒಂದು ಸಭೆಯು ಪುನಸ್ಸ್ಥಾಪಿಸಲ್ಪಟ್ಟಿತು. ಇಂದು, ಆ ರೇವು ಪಟ್ಟಣದಲ್ಲಿ ಮೂರು ಪ್ರಗತಿಪರ ಸಭೆಗಳು ಸುವಾರ್ತೆ ಸಾರುವುದರಲ್ಲಿ ಕಾರ್ಯಮಗ್ನವಾಗಿವೆ.

ಇಡೀ ದೇಶದಲ್ಲಿ ಜನರು ಆಧ್ಯಾತ್ಮಿಕವಾಗಿ ಹಸಿದಿದ್ದರು ಮತ್ತು ಧಾರ್ಮಿಕ ಪೂರ್ವಗ್ರಹ ತೀರ ಕಡಿಮೆಯಿತ್ತು. ಸಾಕ್ಷಿಗಳಿಂದ ಪಡೆದ ಎಲ್ಲ ರೀತಿಯ ಬೈಬಲಾಧಾರಿತ ಸಾಹಿತ್ಯಗಳನ್ನು ಅವರು ಅತ್ಯಾಸಕ್ತಿಯಿಂದ ಓದಿದರು. ಅನೇಕ ಯುವ ಜನರು ಅಧ್ಯಯನಮಾಡಲು ಪ್ರಾರಂಭಿಸಿದರು ಮತ್ತು ಕೂಡಲೆ ಪ್ರಗತಿಯನ್ನು ಮಾಡಿದರು.

ಇಡೀ ದೇಶದಲ್ಲಿ 90ಕ್ಕಿಂತ ಹೆಚ್ಚು ಸಭೆಗಳು ಮತ್ತು ಗುಂಪುಗಳು “ಕ್ರಿಸ್ತನಂಬಿಕೆಯಲ್ಲಿ ದೃಢವಾಗುತ್ತಾ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚುತ್ತಾ” ಇವೆ. (ಅ. ಕೃತ್ಯಗಳು 16:5) ಅಲ್ಬೇನಿಯದಲ್ಲಿರುವ 3,513 ಸಾಕ್ಷಿಗಳಿಗೆ ಇನ್ನೂ ಬಹಳಷ್ಟು ಕೆಲಸವನ್ನು ಮಾಡಲಿಕ್ಕಿದೆ. 2005ರ ಮಾರ್ಚ್‌ ತಿಂಗಳಿನಲ್ಲಿ ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ 10,144 ಮಂದಿ ಹಾಜರಾದರು. ಸಾರುವ ಕೆಲಸದಲ್ಲಿ ಸತ್ಕಾರಭಾವದ ಆ ಜನರೊಂದಿಗಿನ ಚರ್ಚೆಗಳು 6,000ಕ್ಕಿಂತ ಹೆಚ್ಚು ಬೈಬಲ್‌ ಅಧ್ಯಯನಗಳಿಗೆ ಮುನ್ನಡೆಸಿವೆ. ಸುಸ್ಪಷ್ಟವಾಗಿ, ಇತ್ತೀಚೆಗೆ ಬಿಡುಗಡೆಯಾದ ಅಲ್ಬೇನ್ಯನ್‌ ಭಾಷೆಯಲ್ಲಿನ ನೂತನ ಲೋಕ ಭಾಷಾಂತರದಿಂದ ಸಾವಿರಾರು ಮಂದಿ ಪ್ರಯೋಜನಪಡೆಯುವರು. ನಿಜವಾಗಿಯೂ, ಯೆಹೋವನ ವಾಕ್ಯವು ಆತನಿಗೆ ಸ್ತುತಿಯನ್ನು ತರುತ್ತಾ “ಹದ್ದಿನ ದೇಶ”ದಲ್ಲಿ ಉನ್ನತಕ್ಕೇರುತ್ತಿದೆ.

[ಪಾದಟಿಪ್ಪಣಿಗಳು]

^ ಪ್ಯಾರ. 9 ತಾನಾಸ್‌ ಡ್ಯೂಲೀ ಅವರ ಜೀವನ ಕಥೆಗಾಗಿ, 1968, ಡಿಸೆಂಬರ್‌ 1ರ ಕಾವಲಿನಬುರುಜು (ಇಂಗ್ಲಿಷ್‌) ಅನ್ನು ನೋಡಿರಿ.

^ ಪ್ಯಾರ. 17 ನಾಶೊ ಡೊರಿ ಅವರ ಜೀವನ ಕಥೆಗಾಗಿ, 1996, ಜನವರಿ 1ರ ಕಾವಲಿನಬುರುಜು ಪತ್ರಿಕೆಯನ್ನು ನೋಡಿರಿ.

^ ಪ್ಯಾರ. 19 ಜಾನ್‌ ಮಾರ್ಕ್ಸ್‌ರ ಹೆಂಡತಿಯಾದ ಹೆಲೆನ್‌ ಅವರ ಜೀವನ ಕಥೆಗಾಗಿ, 2002, ಜನವರಿ 1ರ ಕಾವಲಿನಬುರುಜು ಪತ್ರಿಕೆಯನ್ನು ನೋಡಿರಿ.

[ಪುಟ 20ರಲ್ಲಿರುವ ಚೌಕ]

ಕಾಸವೊದಲ್ಲಿ ಕುಲಸಂಬಂಧಿತ ಕಲಹವು ಕರಗಿಹೋಗುತ್ತಿದೆ!

ಇಸವಿ 1990ರ ಕೊನೆಯಲ್ಲಿ, ಪ್ರಾದೇಶಿಕ ವಿವಾದಗಳು ಮತ್ತು ಆಳವಾಗಿ ಬೇರೂರಿರುವ ಕುಲಸಂಬಂಧಿತ ದ್ವೇಷವು ಯುದ್ಧ ಮತ್ತು ಅಂತಾರಾಷ್ಟ್ರೀಯ ಮಧ್ಯಸ್ಥಿಕೆಗೆ ನಡೆಸಿದಾಗ, ಕಾಸವೊ ಮನೆಮಾತಾಯಿತು.

ಬಾಲ್ಕಾನ್‌ನಲ್ಲಿ ಯುದ್ಧ ನಡೆಯುತ್ತಿದ್ದಾಗ, ಅನೇಕ ಸಾಕ್ಷಿಗಳು ನೆರೆಹೊರೆಯ ದೇಶಗಳಿಗೆ ಪಲಾಯನಗೈಯಬೇಕಾಯಿತು. ಯುದ್ಧವು ಕಡಿಮೆಯಾದಾಗ, ಒಂದು ಸಣ್ಣ ಗುಂಪು ಕಾಸವೊಗೆ ಹಿಂದಿರುಗಿತು ಮತ್ತು ಸಾರುವ ಕೆಲಸಕ್ಕೆ ಸಿದ್ಧವಾಯಿತು. 23,50,000 ನಿವಾಸಿಗಳಿರುವ ಕಾಸವೊಗೆ ಸ್ಥಳಾಂತರಿಸಲು ಅಲ್ಬೇನಿಯದ ಮತ್ತು ಇಟಲಿಯ ವಿಶೇಷ ಪಯನೀಯರರು ಮುಂದೆ ಬಂದರು. ಈ ಕ್ಷೇತ್ರದಲ್ಲಿ ಸುಮಾರು 130 ಪ್ರಚಾರಕರನ್ನು ಒಳಗೂಡಿರುವ ನಾಲ್ಕು ಸಭೆಗಳು ಮತ್ತು ಆರು ಸಕ್ರಿಯ ಗುಂಪುಗಳು ಯೆಹೋವನನ್ನು ಸೇವಿಸುತ್ತಿವೆ.

ಇಸವಿ 2003ರ ವಸಂತಕಾಲದಲ್ಲಿ, ಪ್ರೀಷ್‌ಟೀನಾದಲ್ಲಿ ಒಂದು ವಿಶೇಷ ಸಮ್ಮೇಳನ ದಿನವನ್ನು ನಡೆಸಲಾಯಿತು ಮತ್ತು 252 ಮಂದಿ ಹಾಜರಿದ್ದರು. ಇವರಲ್ಲಿ ಅಲ್ಬೇನಿಯನ್‌, ಜರ್ಮನ್‌, ಜಿಪ್ಸಿ, ಇಟ್ಯಾಲಿಯನ್‌ ಮತ್ತು ಸರ್ಬಿಯನ್‌ ಹಿನ್ನೆಲೆಯಿಂದ ಬಂದ ಜನರಿದ್ದರು. ದೀಕ್ಷಾಸ್ನಾನದ ಭಾಷಣದ ಕೊನೆಯಲ್ಲಿ, ಭಾಷಣಕರ್ತನು ಎರಡು ಪ್ರಶ್ನೆಗಳನ್ನು ಕೇಳಿದನು. ಹೌದೆಂದು ಉತ್ತರಿಸಲು ಮೂವರು ಎದ್ದುನಿಂತರು: ಅಲ್ಬೇನಿಯನ್‌ ಕುಲದವನೊಬ್ಬನು, ಜಿಪ್ಸಿಯೊಬ್ಬಳು ಮತ್ತು ಸರ್ಬಿಯದವಳೊಬ್ಬಳು.

ದೀಕ್ಷಾಸ್ನಾನದ ಆ ಮೂವರು ಅಭ್ಯರ್ಥಿಗಳು ಏಕಕಾಲದಲ್ಲಿ ಗಟ್ಟಿಯಾದ ಸ್ವರದಲ್ಲಿ ಹೇಳಿದ “ವಾ!,” “ಡಾ!,” “ಪಾ!” ಎಂಬ ಉತ್ತರವನ್ನು ಸಭಿಕರು ಕೇಳಿಸಿಕೊಂಡು ಭಾರೀ ಚಪ್ಪಾಳೆಗಳನ್ನು ತಟ್ಟಿದರು. ಆ ಮೂವರು ಅಭ್ಯರ್ಥಿಗಳು ಪರಸ್ಪರ ಅಪ್ಪಿಕೊಂಡರು. ತಮ್ಮ ದೇಶವನ್ನು ಬಾಧಿಸಿರುವಂಥ ಆಳವಾಗಿ ಬೇರೂರಿದ ಕುಲಸಂಬಂಧಿತ ಸಮಸ್ಯೆಗಳಿಗೆ ಅವರು ಉತ್ತರವನ್ನು ಕಂಡುಕೊಂಡಿದ್ದಾರೆ.

[ಪುಟ 17ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಮೆಡಿಟರೇನಿಯನ್‌ ಸಮುದ

ಇಟಲಿ

ಅಲ್ಬೇನಿಯ

ಗ್ರೀಸ್‌

[ಪುಟ 18ರಲ್ಲಿರುವ ಚಿತ್ರ]

ಯುವ ಸಾಕ್ಷಿಗಳು ವೃದ್ಧರ ಹುರುಪನ್ನು ಅನುಕರಿಸುತ್ತಾರೆ

[ಪುಟ 18ರಲ್ಲಿರುವ ಚಿತ್ರ]

ಆರೆಟೀ ಪೀನಳು 1928ರಿಂದ ಹಿಡಿದು 1994ರಲ್ಲಿ ತನ್ನ ಮರಣದ ತನಕ ನಂಬಿಗಸ್ತಳಾಗಿ ಸೇವೆಸಲ್ಲಿಸಿದಳು

[ಪುಟ 19ರಲ್ಲಿರುವ ಚಿತ್ರ]

ಭಾಷಾ ಕೋರ್ಸಿಗೆ ಹಾಜರಾದ ವಿದೇಶಿ ಪಯನೀಯರರ ಮೊದಲ ಗುಂಪು

[ಪುಟ 16ರಲ್ಲಿರುವ ಚಿತ್ರ ಕೃಪೆ]

ಹದ್ದು: © Brian K. Wheeler/VIREO