ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಹಡಗುಗಳಲ್ಲಿ ಸಮುದ್ರಕ್ಕೆ ಇಳಿದು ಹೋಗುವವರು”

“ಹಡಗುಗಳಲ್ಲಿ ಸಮುದ್ರಕ್ಕೆ ಇಳಿದು ಹೋಗುವವರು”

“ಹಡಗುಗಳಲ್ಲಿ ಸಮುದ್ರಕ್ಕೆ ಇಳಿದು ಹೋಗುವವರು”

ಒಂದು ಚಂಡಮಾರುತದ ಸಮಯದಲ್ಲಿ ತನ್ನ ಹಡಗನ್ನು ನಡೆಸಲು ಅಚಲ ನಿರ್ಧಾರವುಳ್ಳವನಾಗಿರುವ ಒಬ್ಬ ಚುಕ್ಕಾಣಿಗನ ಒಂದು ಕಂಚಿನ ಪ್ರತಿಮೆಯು, ಯು.ಎಸ್‌.ಎ.ಯ ಮ್ಯಾಸಚೂಸೆಟ್ಸ್‌ನ ಗ್ಲೌಸ್ಟರ್‌ನಲ್ಲಿರುವ ಬಂದರಿನ ಎದುರು ನಿಲ್ಲಿಸಲ್ಪಟ್ಟಿದೆ. ಈ ಪ್ರತಿಮೆಯು, ಸಮುದ್ರದಲ್ಲಿ ಮೃತಪಟ್ಟಿದ್ದಾರೆಂದು ಜ್ಞಾತವಾಗಿರುವ ಗ್ಲೌಸ್ಟರ್‌ನ ಸಾವಿರಾರು ಮಂದಿ ಬೆಸ್ತರ ಸ್ಮರಣಾರ್ಥವಾಗಿದೆ. ಈ ಪ್ರತಿಮೆಯ ಕೆಳಭಾಗದಲ್ಲಿ ಮತ್ತು ಅದರ ಸಮೀಪವಿರುವ ಒಂದು ಫಲಕದಲ್ಲಿ ಕೀರ್ತನೆ 107:​23, 24ರ ಈ ಮಾತುಗಳಿವೆ: “ಹಡಗುಗಳಲ್ಲಿ ಸಮುದ್ರಕ್ಕೆ ಇಳಿದು ಹೋಗುವವರು ಜಲರಾಶಿಯಲ್ಲಿ ವ್ಯಾಪಾರಮಾಡುವರು; ಇವರು ಅಗಾಧ ಜಲದಲ್ಲಿ ಕರ್ತನ ಕೆಲಸಗಳನ್ನೂ ಆತನ ಅದ್ಭುತಗಳನ್ನೂ ನೋಡುತ್ತಾರೆ.”​—⁠ಕಿಂಗ್‌ ಜೇಮ್ಸ್‌ ವರ್ಷನ್‌.

ಅಟ್ಲಾಂಟಿಕ್‌ನ ಮೀನುಗಾರಿಕಾ ಕ್ಷೇತ್ರದಲ್ಲಿ ಕೆಲಸಮಾಡುವುದು ಒಂದು ಅಪಾಯಕರವಾದ ವ್ಯವಹಾರವಾಗಿದೆ. ಈಗ 30,000ದಷ್ಟು ಜನಸಂಖ್ಯೆಯನ್ನು ಹೊಂದಿರುವ ಗ್ಲೌಸ್ಟರ್‌ ಪಟ್ಟಣದ 5,368ರಷ್ಟು ಪುರುಷರು, ಗತ ವರ್ಷಗಳಲ್ಲಿ ಸಮುದ್ರದಲ್ಲಿ ಮೀನುಹಿಡಿಯುತ್ತಿದ್ದಾಗ ತಮ್ಮ ಜೀವಗಳನ್ನು ಕಳೆದುಕೊಂಡರೆಂಬುದು ಜ್ಞಾತ ವಿಷಯವಾಗಿದೆ. ಸ್ಮಾರಕವು ಹೀಗೆ ತಿಳಿಸುತ್ತದೆ: “ಕೆಲವರು ಭಾರೀ ದುರಂತಕರವಾದ ಈಶಾನ್ಯಮಾರುತದ ಭೋರ್ಗರೆಯುವ ಬಿರುಗಾಳಿ ಮತ್ತು ಬೃಹತ್‌ ಅಲೆಗಳಿಗೆ ಅನಿರೀಕ್ಷಿತವಾಗಿ ತುತ್ತಾದರು. ಇನ್ನು ಕೆಲವರು, ಮೀನುಗಾರಿಕಾ ಕ್ಷೇತ್ರಕ್ಕೆ ಅವರನ್ನು ಕರೆದುತಂದಂಥ ಹಡಗಿನಿಂದ ದಾರಿತಪ್ಪಿದ ಚಿಕ್ಕ ಚಪ್ಪಟೆ ತಳದ ದೋಣಿಗಳಲ್ಲಿ ಒಂಟಿಗರಾಗಿ ಸಾವನ್ನಪ್ಪಿದರು. ಕೆಲವು ಹಡಗುಗಳು ಚಂಡಮಾರುತಗಳಲ್ಲಿ ಪರಸ್ಪರ ಡಿಕ್ಕಿಹೊಡೆದು ದುರಂತಮಯವಾಗಿ ಮುಳುಗಿಹೋದವು. ಇನ್ನಿತರ ಹಡಗುಗಳು ಹಡಗುಮಾರ್ಗಗಳಲ್ಲಿ ಆವಿಚಾಲಿತ ನೌಕೆಗಳ ಹೊಡೆತಕ್ಕೆ ಬಲಿಯಾದವು.”

ಈ ಸ್ಮಾರಕವು, ಅನೇಕ ಶತಮಾನಗಳಿಂದಲೂ ಬೆಸ್ತರು ಮಾಡಿರುವ ಕಠಿನ ಪರಿಶ್ರಮ ಹಾಗೂ ಅವರು ಎದುರಿಸಿರುವ ಅಪಾಯಗಳಿಗೆ ಒಂದು ದುಃಖಕರ ಸಾಕ್ಷಿಯಾಗಿ ನಿಂತಿದೆ. ಸಾವನ್ನಪ್ಪಿದ ಗಂಡಂದಿರು, ತಂದೆಯರು, ಸಹೋದರರು ಮತ್ತು ಪುತ್ರರಿಗಾಗಿ ಸುರಿಸಲ್ಪಟ್ಟಿರುವ ಹತಾಶೆಯ ಕಣ್ಣೀರನ್ನು ತುಸು ಊಹಿಸಿಕೊಳ್ಳಿರಿ. ಆದರೆ ಯೆಹೋವ ದೇವರು ವಿಧವೆಯರನ್ನು, ತಬ್ಬಲಿಗಳನ್ನು ಅಥವಾ ಸಮುದ್ರದಲ್ಲಿ ತಮ್ಮ ಜೀವಗಳನ್ನು ಕಳೆದುಕೊಂಡಿರುವವರನ್ನು ಖಂಡಿತ ಮರೆಯುವುದಿಲ್ಲ. ಅಪೊಸ್ತಲ ಯೋಹಾನನು ಈ ಭಾವೀ ಘಟನೆಯ ಕುರಿತು ಸೂಚಿಸಿದನು: “ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು; ಮೃತ್ಯುವೂ ಪಾತಾಳವೂ [“ಹೇಡೀಸ್‌ ಸಹ,” NW] ತಮ್ಮ ವಶದಲ್ಲಿದ್ದ ಸತ್ತವರನ್ನು ಒಪ್ಪಿಸಿದವು.” (ಪ್ರಕಟನೆ 20:13) ಯಾರು ‘ಹಡಗುಗಳಲ್ಲಿ ಸಮುದ್ರಕ್ಕೆ ಇಳಿದು ಹೋದರೋ’ ಅವರು ತಮ್ಮ ಪುನರುತ್ಥಾನದ ಸಮಯದಲ್ಲಿ ಖಂಡಿತವಾಗಿಯೂ ‘ಕರ್ತನ ಕೆಲಸಗಳನ್ನು’ ಕಣ್ಣಾರೆ ನೋಡುವರು.