ಕೀರ್ತನೆ 107:1-43

  • ದೇವರ ಅದ್ಭುತಗಳಿಗಾಗಿ ಧನ್ಯವಾದ ಹೇಳಿ

    • ಆತನು ಅವ್ರನ್ನ ಸರಿಯಾದ ದಾರಿಯಲ್ಲಿ ನಡೆಸಿದ (7)

    • ಆತನು ಬಾಯಾರಿದವರನ್ನ ಹಸಿದವರನ್ನ ತೃಪ್ತಿಪಡಿಸಿದ (9)

    • ಆತನು ಅವ್ರನ್ನ ಕತ್ತಲೆಯಿಂದ ಹೊರಗೆ ತಂದ (14)

    • ಆತನು ತನ್ನ ಆಜ್ಞೆಯ ಮೂಲಕ ಅವರನ್ನ ಗುಣಪಡಿಸಿದ (20)

    • ಆತನು ಬಡವರನ್ನ ದಬ್ಬಾಳಿಕೆಯಿಂದ ಕಾಪಾಡಿದ (41)

107  ಯೆಹೋವನಿಗೆ ಧನ್ಯವಾದ ಹೇಳಿ. ಯಾಕಂದ್ರೆ ಆತನು ಒಳ್ಳೆಯವನು.+ ಆತನ ಪ್ರೀತಿ ಶಾಶ್ವತ.+  2  ಯಾರನ್ನ ಯೆಹೋವ ಬಿಡಿಸಿದ್ನೋ,*ಯಾರನ್ನ ಶತ್ರುಗಳ ಕೈಯಿಂದ* ಉಳಿಸಿದ್ನೋ ಅವರು ಹೀಗೇ ಹೇಳಲಿ.+  3  ಪೂರ್ವ ಪಶ್ಚಿಮಗಳಿಂದ,ಉತ್ತರ ದಕ್ಷಿಣಗಳಿಂದ,+ದೇಶದೇಶಗಳಿಂದ ಆತನು ಸೇರಿಸೋ ಜನ್ರೆಲ್ಲಾ ಹೀಗೇ ಹೇಳಲಿ.+  4  ಅವರು ಕಾಡಲ್ಲಿ, ಬಂಜರು ಭೂಮಿಯಲ್ಲಿ ಆಕಡೆ ಈಕಡೆ ಅಲೆದಾಡಿದ್ರು,ಅವರು ವಾಸಿಸೋಕೆ ಒಂದು ಪಟ್ಟಣದ ದಾರಿಯನ್ನೂ ಹುಡುಕೊಳ್ಳೋಕೆ ಅವ್ರಿಂದ ಆಗಲಿಲ್ಲ.  5  ಅವರು ಹಸಿದಿದ್ರು, ಬಾಯಾರಿದ್ರು. ಆಯಾಸದಿಂದ ಸೊರಗಿಹೋಗಿದ್ರು.  6  ಕಷ್ಟಕಾಲದಲ್ಲಿ ಅವರು ಯೆಹೋವನಿಗೆ ಮೊರೆಯಿಡ್ತಾನೇ ಇದ್ರು,+ಅವ್ರ ಹೀನಾಯ ಸ್ಥಿತಿಯಿಂದ ಆತನು ಅವ್ರನ್ನ ಬಿಡಿಸಿದ.+  7  ಆತನು ಅವ್ರನ್ನ ಸರಿಯಾದ ದಾರಿಲಿ ನಡೆಸಿದ,+ಇದ್ರಿಂದ ಅವರು ಪಟ್ಟಣ ಸೇರಿ ವಾಸಮಾಡೋಕೆ ಆಯ್ತು.+  8  ಯೆಹೋವನ ಶಾಶ್ವತ ಪ್ರೀತಿಗಾಗಿ,ಮನುಷ್ಯರಿಗೋಸ್ಕರ ಆತನು ಮಾಡಿದ ಅದ್ಭುತಗಳಿಗಾಗಿ,+ಜನ್ರು ಆತನಿಗೆ ಧನ್ಯವಾದ ಹೇಳಲಿ.+  9  ಯಾಕಂದ್ರೆ ಆತನು ಬಾಯಾರಿದವರಿಗೆ ನೀರು ಕೊಟ್ಟು ತೃಪ್ತಿಪಡಿಸಿದ,ಹಸಿದವರಿಗೆ ಒಳ್ಳೊಳ್ಳೇ ಊಟ ಕೊಟ್ಟು ಖುಷಿಪಡಿಸಿದ.+ 10  ಕೆಲವರು ಕತ್ತಲಲ್ಲಿ ವಾಸಿಸ್ತಿದ್ರು,ಬೇಡಿ ಹಾಕೊಂಡು ಕೈದಿಗಳಾಗಿ ದುಃಖ ಅನುಭವಿಸ್ತಿದ್ರು. 11  ಯಾಕಂದ್ರೆ ಅವರು ದೇವರ ಮಾತಿಗೆ ವಿರುದ್ಧವಾಗಿ ದಂಗೆ ಎದ್ದಿದ್ರು,ಸರ್ವೋನ್ನತನ ಸಲಹೆಯನ್ನ ಕೀಳಾಗಿ ನೋಡಿದ್ರು.+ 12  ಹಾಗಾಗಿ ಅವರು ಕಷ್ಟಗಳನ್ನ ಅನುಭವಿಸೋಕೆ ಆತನು ಬಿಟ್ಟು ಅವ್ರ ಹೃದಯನ ತಗ್ಗಿಸಿದ,+ಅವರು ಎಡವಿದ್ರು, ಅವ್ರಿಗೆ ಸಹಾಯ ಮಾಡೋರು ಯಾರೂ ಇರಲಿಲ್ಲ. 13  ಕಷ್ಟಕಾಲದಲ್ಲಿ ಅವರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಟ್ರು,ಅವ್ರ ಹೀನಾಯ ಸ್ಥಿತಿಯಿಂದ ಆತನು ಅವ್ರನ್ನ ಕಾಪಾಡಿದ. 14  ಆತನು ಅವ್ರನ್ನ ಕತ್ತಲೆಯಿಂದ ಹೊರಗೆ ತಂದ,ಅವ್ರ ಸರಪಳಿಗಳನ್ನ ಕಿತ್ತೆಸೆದ.+ 15  ಯೆಹೋವನ ಶಾಶ್ವತ ಪ್ರೀತಿಗಾಗಿ,+ಮನುಷ್ಯರಿಗೋಸ್ಕರ ಆತನು ಮಾಡಿದ ಅದ್ಭುತಗಳಿಗಾಗಿಜನ್ರು ಆತನಿಗೆ ಧನ್ಯವಾದ ಹೇಳಲಿ. 16  ಯಾಕಂದ್ರೆ ಆತನು ತಾಮ್ರದ ಬಾಗಿಲುಗಳನ್ನ ಮುರಿದುಹಾಕಿದ. ಕಬ್ಬಿಣದ ಕಂಬಿಗಳನ್ನ ತುಂಡುತುಂಡು ಮಾಡಿದ.+ 17  ಮೂರ್ಖರು ಕಷ್ಟ ಅನುಭವಿಸಬೇಕಾಯ್ತು,+ತಮ್ಮ ಅಪರಾಧಗಳಿಂದ, ತಪ್ಪುಗಳಿಂದ ಅವರು ದುಃಖಪಡಬೇಕಾಯ್ತು.+ 18  ಅವ್ರ ಹಸಿವು ಸತ್ತುಹೋಯ್ತು,ಅವರು ಸಾವಿನ ಬಾಗಿಲನ್ನ ತಟ್ಟಿದ್ರು. 19  ಕಷ್ಟಕಾಲದಲ್ಲಿ ಅವರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಡ್ತಾರೆ,ಅವ್ರ ಹೀನಾಯ ಸ್ಥಿತಿಯಿಂದ ಆತನು ಅವ್ರನ್ನ ಕಾಪಾಡ್ತಾನೆ. 20  ಆತನು ತನ್ನ ಆಜ್ಞೆಯಿಂದ ಅವ್ರನ್ನ ವಾಸಿಮಾಡಿದ,+ಅವರು ಸಿಕ್ಕಿಹಾಕೊಂಡಿರೋ ಗುಂಡಿಯಿಂದ ಅವ್ರನ್ನ ರಕ್ಷಿಸಿದ. 21  ಯೆಹೋವನ ಶಾಶ್ವತ ಪ್ರೀತಿಗಾಗಿ,ಮನುಷ್ಯರಿಗೋಸ್ಕರ ಆತನು ಮಾಡಿದ ಅದ್ಭುತಗಳಿಗಾಗಿ,ಜನ್ರು ಆತನಿಗೆ ಧನ್ಯವಾದ ಹೇಳಲಿ. 22  ಅವರು ಕೃತಜ್ಞತಾ ಬಲಿಗಳನ್ನ ಕೊಡಲಿ,+ಸಂತೋಷದಿಂದ ಜೈಕಾರ ಹಾಕ್ತಾ ಆತನ ಕೆಲಸಗಳ ಬಗ್ಗೆ ಹೇಳಲಿ. 23  ಸಮುದ್ರದ ಮೇಲೆ ಹಡಗಲ್ಲಿ ಪ್ರಯಾಣಿಸೋರು,ವಿಶಾಲವಾದ ಸಾಗರವನ್ನ ದಾಟಿ ವ್ಯಾಪಾರ ಮಾಡೋರು,+ 24  ಯೆಹೋವನ ಕೆಲಸಗಳನ್ನ ನೋಡಿದ್ದಾರೆ,ಆಳವಾದ ಸಮುದ್ರದಲ್ಲಿ ಆತನ ಅದ್ಭುತಗಳನ್ನ ಕಂಡಿದ್ದಾರೆ.+ 25  ಆತನು ಕೊಡೋ ಅಪ್ಪಣೆಗೆ ಬಿರುಗಾಳಿ ಹೇಗೆ ಏಳುತ್ತೆ+ ಅಂತ,ಸಮುದ್ರ ತನ್ನ ಅಲೆಗಳನ್ನ ಹೇಗೆ ಎಬ್ಬಿಸುತ್ತೆ ಅಂತ ಅವರು ನೋಡಿದ್ದಾರೆ. 26  ಆ ಅಲೆಗಳು ಅವ್ರನ್ನ ಬಾನೆತ್ತರಕ್ಕೆ ಏರಿಸ್ತವೆ,ಸಮುದ್ರದ ಆಳಕ್ಕೆ ತಳ್ಳಿ ಮುಳುಗಿಸ್ತವೆ,ಬರ್ತಿರೋ ವಿಪತ್ತನ್ನ ನೋಡಿ ಅವ್ರ ಧೈರ್ಯ ಕರಗಿಹೋಗುತ್ತೆ. 27  ಕುಡುಕರ ತರ ಅವರು ಓಲಾಡ್ತಾರೆ, ತೂರಾಡ್ತಾರೆ,ಅವ್ರ ಎಲ್ಲ ಕೌಶಲಗಳು ವ್ಯರ್ಥ ಅಂತ ಸಾಬೀತಾಗುತ್ತೆ.+ 28  ಕಷ್ಟದಲ್ಲಿರೋ ಅವರು ಆಗ ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಡ್ತಾರೆ,+ಅವ್ರ ಹೀನಾಯ ಸ್ಥಿತಿಯಿಂದ ಆತನು ಅವ್ರನ್ನ ಕಾಪಾಡ್ತಾನೆ. 29  ಬಿರುಗಾಳಿಯನ್ನ ಆತನು ನಿಲ್ಲಿಸ್ತಾನೆ,ಸಮುದ್ರದ ಅಲೆಗಳು ಪ್ರಶಾಂತವಾಗ್ತವೆ.+ 30  ಅದನ್ನ ನೋಡಿ ಅವರು ಖುಷಿಪಡ್ತಾರೆ,ಅವರು ಹೋಗಬೇಕು ಅಂತಿರೋ ಬಂದರಿಗೆ ಆತನು ಅವ್ರನ್ನ ಸೇರಿಸ್ತಾನೆ. 31  ಯೆಹೋವನ ಶಾಶ್ವತ ಪ್ರೀತಿಗಾಗಿ,ಮನುಷ್ಯರಿಗೋಸ್ಕರ ಆತನು ಮಾಡಿದ ಅದ್ಭುತಗಳಿಗಾಗಿ,+ಜನ್ರು ಆತನಿಗೆ ಧನ್ಯವಾದ ಹೇಳಲಿ. 32  ಅವರು ಜನ್ರ ಮಧ್ಯ ಆತನನ್ನ ಘನತೆಗೇರಿಸಲಿ,+ಹಿರಿಯರ ಸಭೆಯಲ್ಲಿ ಆತನನ್ನ ಹೊಗಳಲಿ. 33  ಆತನು ನದಿಗಳನ್ನ ಮರುಭೂಮಿಯಾಗಿನೀರಿನ ಬುಗ್ಗೆಗಳನ್ನ ಬತ್ತಿದ ನೆಲವಾಗಿ ಮಾಡ್ತಾನೆ.+ 34  ಫಲವತ್ತಾದ ನೆಲವನ್ನ ಬಂಜರು ಭೂಮಿಯಾಗಿ ಮಾಡ್ತಾನೆ,+ಅದ್ರಲ್ಲಿ ವಾಸಿಸೋ ಕೆಟ್ಟವರಿಂದ ಆತನು ಹೀಗೆ ಮಾಡ್ತಾನೆ. 35  ಆತನು ಮರುಭೂಮಿಯನ್ನ ನೀರಿನ ಕೆರೆಯಾಗಿ,ಬಂಜರು ಭೂಮಿಯನ್ನ ನೀರಿನ ಬುಗ್ಗೆಗಳಾಗಿ ಮಾಡ್ತಾನೆ.+ 36  ಹಸಿದವರು ಅಲ್ಲಿ ವಾಸಿಸೋ ತರ ಆತನು ಮಾಡ್ತಾನೆ,+ವಾಸಿಸೋಕೆ ಸರಿಯಾದ ಪಟ್ಟಣ ಅವ್ರಿಗೆ ಸಿಗೋ ಹಾಗೆ ಆತನು ಮಾಡ್ತಾನೆ.+ 37  ಅವರು ಹೊಲಗಳಲ್ಲಿ ಬೀಜ ಬಿತ್ತುತ್ತಾರೆ, ದ್ರಾಕ್ಷಿತೋಟಗಳನ್ನ ನೆಡ್ತಾರೆ.+ ಅವು ಒಳ್ಳೇ ಹಣ್ಣು ಕೊಡುತ್ತೆ.+ 38  ಆತನು ಅವ್ರನ್ನ ಆಶೀರ್ವದಿಸ್ತಾನೆ ಮತ್ತು ಅವ್ರ ಸಂಖ್ಯೆ ಇನ್ನೂ ಜಾಸ್ತಿ ಆಗುತ್ತೆ,ಅವ್ರ ಪ್ರಾಣಿಗಳ ಸಂಖ್ಯೆ ಕಡಿಮೆಯಾಗೋಕೆ ಆತನು ಬಿಡಲ್ಲ.+ 39  ಆದ್ರೆ ದೌರ್ಜನ್ಯ, ವಿಪತ್ತು ಮತ್ತು ದುಃಖದಿಂದಾಗಿಅವ್ರ ಸಂಖ್ಯೆ ಮತ್ತೆ ಕಮ್ಮಿಯಾಗುತ್ತೆ, ಅವ್ರಿಗೆ ಅವಮಾನ ಆಗುತ್ತೆ. 40  ಪ್ರಧಾನರು ತಲೆತಗ್ಗಿಸೋ ತರ ಮಾಡ್ತಾನೆ,ದಾರಿನೇ ಇಲ್ಲದ ಕಾಡಲ್ಲಿ ಅವರು ಅಲೆದಾಡೋ ತರ ಮಾಡ್ತಾನೆ.+ 41  ಆದ್ರೆ ಆತನು ಬಡವರನ್ನ ದಬ್ಬಾಳಿಕೆಯಿಂದ ಕಾಪಾಡ್ತಾನೆ.*+ ಅವ್ರ ಕುಟುಂಬಗಳ ಸಂಖ್ಯೆ ಕುರಿಗಳ ತರ ಜಾಸ್ತಿಯಾಗುತ್ತೆ. 42  ನೀತಿವಂತರು ಇದನ್ನ ನೋಡಿ ಖುಷಿಪಡ್ತಾರೆ,+ಆದ್ರೆ ಅನೀತಿವಂತರು ತಮ್ಮ ಬಾಯನ್ನ ಮುಚ್ಚಿಕೊಳ್ತಾರೆ.+ 43  ವಿವೇಕಿಗಳೆಲ್ಲ ಈ ವಿಷ್ಯಗಳನ್ನ ಗಮನಿಸ್ತಾರೆ,+ಯೆಹೋವ ಶಾಶ್ವತ ಪ್ರೀತಿಯಿಂದ ಮಾಡಿದ್ದನ್ನೆಲ್ಲ ಸೂಕ್ಷ್ಮವಾಗಿ ನೋಡ್ತಾರೆ.+

ಪಾದಟಿಪ್ಪಣಿ

ಅಥವಾ “ವಾಪಸ್‌ ಕೊಂಡುಕೊಂಡ್ನೋ.”
ಅಥವಾ “ಶಕ್ತಿಯಿಂದ.”
ಅಥವಾ “ಮೇಲೆ ಇಡ್ತಾನೆ.” ಅಂದ್ರೆ, ಕೈಗೆ ಸಿಗದಂತೆ ಮಾಡ್ತಾನೆ.