ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯುಸೀಬಿಯಸ್‌ “ಚರ್ಚ್‌ ಇತಿಹಾಸದ ಮೂಲಪಿತ”ನಾಗಿದ್ದಾನೊ?

ಯುಸೀಬಿಯಸ್‌ “ಚರ್ಚ್‌ ಇತಿಹಾಸದ ಮೂಲಪಿತ”ನಾಗಿದ್ದಾನೊ?

ಯುಸೀಬಿಯಸ್‌ “ಚರ್ಚ್‌ ಇತಿಹಾಸದ ಮೂಲಪಿತ”ನಾಗಿದ್ದಾನೊ?

ರೋಮನ್‌ ಸಾಮ್ರಾಟ ಕಾನ್‌ಸ್ಟೆಂಟೀನನು ಸಾ.ಶ. 325ರಲ್ಲಿ ಎಲ್ಲಾ ಬಿಷಪರಿಗೆ ನೈಸೀಯದಲ್ಲಿ ಕೂಡಿಬರುವಂತೆ ಕರೆಕೊಟ್ಟನು. ಅವನ ಉದ್ದೇಶ: ದೇವರಿಗೆ ತನ್ನ ಪುತ್ರನೊಂದಿಗಿರುವ ಸಂಬಂಧವೇನು ಎಂಬುದರ ಕುರಿತಾಗಿ ಬಹಳಷ್ಟು ವಾಗ್ವಾದಕ್ಕೊಳಗಾಗಿದ್ದ ವಿವಾದಾಂಶವನ್ನು ಇತ್ಯರ್ಥಗೊಳಿಸುವುದೇ ಆಗಿತ್ತು. ಆ ಸಭೆಗೆ ಹಾಜರಾಗಿದ್ದವರಲ್ಲಿ, ಆ ಯುಗದ ಅತ್ಯಂತ ವಿದ್ಯಾವಂತ ವ್ಯಕ್ತಿಯೆಂದು ಪರಿಗಣಿಸಲಾಗುತ್ತಿದ್ದ ಕೈಸರೈಯದ ಯುಸೀಬಿಯಸನೂ ಇದ್ದನು. ಇವನು ಶಾಸ್ತ್ರಗಳನ್ನು ಬಹಳಷ್ಟು ಶ್ರದ್ಧೆಯಿಂದ ಅಧ್ಯಯನಮಾಡಿದ್ದನು, ಮತ್ತು ಕ್ರೈಸ್ತಧರ್ಮದ ಏಕ ದೇವ ವಾದದ ಸಮರ್ಥಕನಾಗಿದ್ದನು.

ದಿ ಎನ್‌ಸೈಕ್ಲಪೀಡಿಯ ಬ್ರಿಟ್ಯಾನಿಕಾ ತಿಳಿಸುವುದು: ನೈಸೀಯ ಸಭೆಯಲ್ಲಿ “ಕಾನ್‌ಸ್ಟೆಂಟೀನನು ತಾನೇ ಅಧ್ಯಕ್ಷತೆ ವಹಿಸಿ, ಚರ್ಚೆಗಳನ್ನು ಕ್ರಿಯಾತ್ಮಕವಾಗಿ ನಡಿಸುತ್ತಾ, . . . ಮಂಡಲಿಯಿಂದ ಹೊರಡಿಸಲ್ಪಟ್ಟ ಕ್ರೈಸ್ತಧರ್ಮದ ಸೂತ್ರದಲ್ಲಿ ದೇವರಿಗೆ ಕ್ರಿಸ್ತನ ಸಂಬಂಧವನ್ನು ಸೂಚಿಸಿದ ನಿರ್ಣಾಯಕ ಸೂತ್ರವನ್ನು, ಅಂದರೆ ಪುತ್ರನು ‘ತಂದೆಯ ಜೀವದ್ರವ್ಯವೇ ಆಗಿದ್ದಾನೆ’ ಎಂಬದನ್ನು ಸ್ವತಃ ಮುಂದಿಟ್ಟನು. . . . ಚಕ್ರವರ್ತಿಯ ಭೀತಿಯಿಂದ, ಕೇವಲ ಇಬ್ಬರನ್ನು ಬಿಟ್ಟು ಉಳಿದ ಬಿಷಪರು ಆ ಸೂತ್ರಕ್ಕೆ ಸಹಿ ಹಾಕಿದರು. ಇವರಲ್ಲಿ ಅನೇಕರು ತಮ್ಮ ಮನಸ್ಸಿಗೆ ವಿರುದ್ಧವಾಗಿ ಹಾಗೆ ಮಾಡಿದರು.” ಸಹಿ ಹಾಕದಿದ್ದ ಆ ಇಬ್ಬರಲ್ಲಿ ಯುಸೀಬಿಯಸನು ಒಬ್ಬನಾಗಿದ್ದನೊ? ಅವನು ತೆಗೆದುಕೊಂಡ ನಿಲುವಿನಿಂದ ನಾವೇನನ್ನು ಕಲಿಯಬಹುದು? ನಾವು ಯುಸೀಬಿಯಸನ ಹಿನ್ನೆಲೆಯನ್ನು, ಅಂದರೆ ಅವನ ಅರ್ಹತೆಗಳು ಹಾಗೂ ಸಾಧನೆಗಳನ್ನು ನೋಡೋಣ.

ಅವನ ಗಮನಾರ್ಹ ಬರಹಗಳು

ಯುಸೀಬಿಯಸನು ಸಾ.ಶ. 260ರ ಸುಮಾರಿಗೆ ಪ್ಯಾಲೆಸ್ಟೈನಿನಲ್ಲಿ ಜನಿಸಿದ್ದಿರಬಹುದು. ಚಿಕ್ಕ ಪ್ರಾಯದಲ್ಲೇ ಅವನು ಕೈಸರೈಯದಲ್ಲಿದ್ದ ಚರ್ಚಿನ ಮೇಲ್ವಿಚಾರಕನಾಗಿದ್ದ ಪ್ಯಾಂಫಿಲಸನೊಂದಿಗೆ ಜೊತೆಗೂಡಿದನು. ಪ್ಯಾಂಫಿಲಸನ ದೇವತಾಶಾಸ್ತ್ರೀಯ ಶಾಲೆಯನ್ನು ಸೇರಿದ ಯುಸೀಬಿಯಸನು ಒಬ್ಬ ಒಳ್ಳೇ ವಿದ್ಯಾರ್ಥಿಯಾಗಿದ್ದನು. ಅವನು ಪ್ಯಾಂಫಿಲಸನ ವಿಸ್ತಾರವಾದ ಪುಸ್ತಕ ಸಂಗ್ರಹವನ್ನು ಸದುಪಯೋಗಿಸಿಕೊಂಡನು. ಯುಸೀಬಿಯಸನು ತನ್ನ ವ್ಯಾಸಂಗದಲ್ಲಿ, ವಿಶೇಷವಾಗಿ ಬೈಬಲಿನ ಅಧ್ಯಯನದಲ್ಲಿ ತಲ್ಲೀನನಾಗಿದ್ದನು. ಅವನು ಪ್ಯಾಂಫಿಲಸನ ಒಬ್ಬ ಪ್ರಿಯ ಸ್ನೇಹಿತನೂ ಆದನು ಮತ್ತು ತದನಂತರ ತನ್ನನ್ನೇ “ಪ್ಯಾಂಫಿಲಸನ ಮಗನಾದ ಯುಸೀಬಿಯಸನು” ಎಂಬುದಾಗಿ ಕರೆದುಕೊಳ್ಳುತ್ತಿದ್ದನು.

ತನ್ನ ಗುರಿಗಳ ಕುರಿತಾಗಿ ಯುಸೀಬಿಯಸನು ಹೇಳಿದ್ದು: “ಪವಿತ್ರ ಅಪೊಸ್ತಲರ ಪರಂಪರೆ ಹಾಗೂ ನಮ್ಮ ಉದ್ಧಾರಕನ ಸಮಯದಿಂದ ಹಿಡಿದು ನಮ್ಮೀ ದಿನಗಳ ವರೆಗೆ ಕಳೆದಿರುವ ಕಾಲಗಳ ಕುರಿತಾದ ಒಂದು ವೃತ್ತಾಂತವನ್ನು ಬರೆಯುವುದು, ಚರ್ಚಿನ ಇತಿಹಾಸದಲ್ಲಿ ಹೇಗೆ ಅನೇಕ ಹಾಗೂ ಪ್ರಮುಖ ಘಟನೆಗಳು ಸಂಭವಿಸಿವೆ ಎಂಬದನ್ನು ತಿಳಿಸುವುದು, ಮತ್ತು ಹೆಚ್ಚಿನ ಪ್ರಮುಖ ಪ್ಯಾರಿಷ್‌ಗಳ ಚರ್ಚುಗಳಲ್ಲಿ ಪ್ರಭುತ್ವ ನಡೆಸಿರುವ ಮತ್ತು ಅಧ್ಯಕ್ಷತೆ ವಹಿಸಿರುವವರ ಹಾಗೂ ಪ್ರತಿಯೊಂದು ಸಂತತಿಯಲ್ಲಿ ಬಾಯಿಮಾತಿನಿಂದಾಗಲಿ ಲಿಖಿತರೂಪದಲ್ಲಾಗಲಿ ದೈವಿಕ ವಾಕ್ಯವನ್ನು ಘೋಷಿಸಿರುವವರ ಬಗ್ಗೆ ತಿಳಿಸುವುದೇ ನನ್ನ ಉದ್ದೇಶವಾಗಿದೆ.”

ಯುಸೀಬಿಯಸನ ಕ್ರೈಸ್ತ ಚರ್ಚಿನ ಇತಿಹಾಸ (ಇಂಗ್ಲಿಷ್‌) ಎಂಬ ಶೀರ್ಷಿಕೆಯುಳ್ಳ ಉಚ್ಚ ಮಾನ್ಯತೆಯ ಕೃತಿಗಾಗಿ ಅವನನ್ನು ಸ್ಮರಿಸಲಾಗುತ್ತದೆ. ಸುಮಾರು ಸಾ.ಶ. 324ರಲ್ಲಿ ಪ್ರಕಾಶಿಸಲ್ಪಟ್ಟ ಅವನ ಆ ಹತ್ತು ಸಂಪುಟಗಳನ್ನು, ಪ್ರಾಚೀನಕಾಲದಲ್ಲಿ ವಿಶೇಷವಾಗಿ ಮಧ್ಯ ಯುಗಗಳಿಗಿಂತಲೂ ಮುಂಚಿನ ಸಮಯಗಳಲ್ಲಿ ಬರೆಯಲ್ಪಟ್ಟಂಥ ಅತಿ ಪ್ರಮುಖ ಚರ್ಚ್‌ ಇತಿಹಾಸವೆಂದು ಪರಿಗಣಿಸಲಾಗುತ್ತದೆ. ಈ ಸಾಧನೆಯ ಫಲಿತಾಂಶವಾಗಿ, ಯುಸೀಬಿಯಸನು ಚರ್ಚ್‌ ಇತಿಹಾಸದ ಮೂಲಪಿತನಾಗಿ ಪ್ರಸಿದ್ಧನಾದನು.

ಯುಸೀಬಿಯಸನು, ಚರ್ಚಿನ ಇತಿಹಾಸ ಎಂಬ ಕೃತಿಯ ಹೊರತು, ಕ್ರಾನಿಕಲ್‌ (ಇಂಗ್ಲಿಷ್‌) ಎಂಬ ಎರಡು ಸಂಪುಟಗಳನ್ನೂ ಬರೆದನು. ಮೊದಲನೆಯ ಸಂಪುಟವು, ಜಗತ್ತಿನ ಇತಿಹಾಸದ ಒಂದು ಸಾರಾಂಶವಾಗಿತ್ತು. ಅದು ನಾಲ್ಕನೆಯ ಶತಮಾನದಲ್ಲಿ ಲೋಕ ಕಾಲಗಣನಶಾಸ್ತ್ರಕ್ಕಾಗಿ ವಿಚಾರಿಸಲ್ಪಡುತ್ತಿದ್ದ ಪ್ರಮಾಣಗ್ರಂಥವಾಗಿ ಪರಿಣಮಿಸಿತು. ಎರಡನೆಯ ಸಂಪುಟವು, ಐತಿಹಾಸಿಕ ಘಟನೆಗಳ ತಾರೀಖುಗಳನ್ನು ಉಲ್ಲೇಖಿಸಿತು. ಸಮಾಂತರ ಅಂಕಣಗಳನ್ನು ಉಪಯೋಗಿಸುತ್ತಾ ಯುಸೀಬಿಯಸನು, ಭಿನ್ನ ಭಿನ್ನ ರಾಷ್ಟ್ರಗಳ ರಾಜಮನೆತನದ ಪರಂಪರೆಯನ್ನು ತೋರಿಸಿದನು.

ಯುಸೀಬಿಯಸನು ಇನ್ನೂ ಎರಡು ಐತಿಹಾಸಿಕ ಕೃತಿಗಳನ್ನು ಬರೆದನು. ಅವುಗಳ ಶೀರ್ಷಿಕೆ, ಪ್ಯಾಲೆಸ್ಟೈನಿನ ಹುತಾತ್ಮರು (ಇಂಗ್ಲಿಷ್‌) ಮತ್ತು ಕಾನ್‌ಸ್ಟೆಂಟೀನನ ಜೀವನ (ಇಂಗ್ಲಿಷ್‌) ಎಂದಾಗಿತ್ತು. ಮೊದಲನೆಯ ಕೃತಿಯು, ಸಾ.ಶ. 303-10ರ ವರೆಗಿನ ವರ್ಷಗಳನ್ನು ಆವರಿಸುತ್ತಾ, ಆ ಅವಧಿಯ ಹುತಾತ್ಮರ ಬಗ್ಗೆ ಚರ್ಚಿಸುತ್ತದೆ. ಯುಸೀಬಿಯಸನು ಈ ಘಟನೆಗಳ ಪ್ರತ್ಯಕ್ಷಸಾಕ್ಷಿಯಾಗಿದ್ದಿರಬಹುದು. ಎರಡನೆಯ ಕೃತಿಯು, ಸಾ.ಶ. 337ರಲ್ಲಿ ಸಾಮ್ರಾಟ ಕಾನ್‌ಸ್ಟೆಂಟೀನನ ಮರಣದ ನಂತರ ನಾಲ್ಕು ಪುಸ್ತಕಗಳ ಒಂದು ಕಟ್ಟಾಗಿ ಪ್ರಕಾಶಿಸಲ್ಪಟ್ಟು, ಅದರಲ್ಲಿ ಅಮೂಲ್ಯವಾದ ಐತಿಹಾಸಿಕ ವಿವರಗಳಿದ್ದವು. ಆದರೆ ಅದು ನಿಷ್ಕೃಷ್ಟವಾದ ಇತಿಹಾಸವಾಗಿರುವುದರ ಬದಲು ಬಹುಮಟ್ಟಿಗೆ ಹೊಗಳಿಕೆಯ ಬರಹವಾಗಿದೆ.

ಯುಸೀಬಿಯಸನ ಸಮರ್ಥನಾ ಕೃತಿಗಳಲ್ಲಿ, ಒಬ್ಬ ಸಮಕಾಲೀನ ರೋಮನ್‌ ಪ್ರಾಂತಾಧಿಕಾರಿಯಾಗಿದ್ದ ಹೀರಾಕ್ಲೀಸ್‌ಗೆ ಅವನು ಬರೆದಂಥ ಉತ್ತರವೂ ಸೇರಿದೆ. ಹೀರಾಕ್ಲೀಸನು ಕ್ರೈಸ್ತರ ವಿರುದ್ಧವಾಗಿ ಬರೆದಾಗ, ಇದಕ್ಕೆ ಪ್ರತಿಕ್ರಿಯೆಯಲ್ಲಿ ಯುಸೀಬಿಯಸನು ಕ್ರೈಸ್ತರನ್ನು ಸಮರ್ಥಿಸಿ ಬರೆದನು. ಅಷ್ಟುಮಾತ್ರವಲ್ಲದೆ, ಶಾಸ್ತ್ರಗಳ ಕರ್ತೃನು ದೇವರಾಗಿದ್ದಾನೆಂಬುದನ್ನು ಬೆಂಬಲಿಸಲಿಕ್ಕಾಗಿ ಅವನು 35 ಪುಸ್ತಕಗಳನ್ನು ಬರೆದನು. ಈ ರೀತಿಯ ಪುಸ್ತಕಗಳಲ್ಲೇ ಇವು ತುಂಬ ಪ್ರಾಮುಖ್ಯವಾದ ಹಾಗೂ ವಿಸ್ತೃತ ಕೃತಿಗಳಾಗಿ ಪರಿಗಣಿಸಲ್ಪಡುತ್ತವೆ. ಇವುಗಳಲ್ಲಿ ಮೊದಲ 15 ಪುಸ್ತಕಗಳು, ಹೀಬ್ರು ಜನರ ಪವಿತ್ರ ಬರಹಗಳನ್ನು ಕ್ರೈಸ್ತರು ಅಂಗೀಕರಿಸುವ ವಿಷಯವನ್ನು ಸಮರ್ಥಿಸಲು ಪ್ರಯತ್ನಿಸುತ್ತವೆ. ಉಳಿದ 20 ಪುಸ್ತಕಗಳು, ಕ್ರೈಸ್ತರು ಯೆಹೂದಿ ನೀತಿಬೋಧೆಗಳನ್ನು ಮೀರಿ, ಹೊಸ ಮೂಲತತ್ತ್ವಗಳನ್ನೂ ರೂಢಿಗಳನ್ನೂ ಅಂಗೀಕರಿಸುವುದರಿಂದ ಸರಿಯಾದದ್ದನ್ನೇ ಮಾಡುತ್ತಿದ್ದಾರೆಂಬುದಕ್ಕೆ ರುಜುವಾತನ್ನು ಕೊಡುತ್ತವೆ. ಜೊತೆಯಾಗಿ ಈ ಪುಸ್ತಕಗಳು, ಯುಸೀಬಿಯಸನ ತಿಳಿವಳಿಕೆಯ ಮೇರೆಗೆ ಕ್ರೈಸ್ತತ್ವವನ್ನು ಸಮರ್ಥಿಸುವ ವ್ಯಾಪಕ ವಾದವನ್ನು ಮಂಡಿಸುತ್ತವೆ.

ಯುಸೀಬಿಯಸನು ಸುಮಾರು 80 ವರ್ಷಗಳ ವರೆಗೆ ಬದುಕಿದನು (ಸುಮಾರು ಸಾ.ಶ. 260-340). ಅವನು ಪ್ರಾಚೀನಕಾಲದ ಅತ್ಯಂತ ಕುಶಲ ಬರಹಗಾರರಲ್ಲಿ ಒಬ್ಬನಾದನು. ಅವನ ಬರಹಗಳಲ್ಲಿ, ಆರಂಭದ ಮೊದಲ ಮೂರು ಶತಮಾನಗಳಿಂದ ಹಿಡಿದು, ಸಾಮ್ರಾಟ ಕಾನ್‌ಸ್ಟೆಂಟೀನನ ಸಮಯದ ವರೆಗಿನ ಘಟನೆಗಳು ಒಳಗೂಡಿವೆ. ಅವನ ಜೀವನದ ಕೊನೆ ಭಾಗದಲ್ಲಿ, ಒಬ್ಬ ಲೇಖಕನೋಪಾದಿ ಅವನಿಗಿದ್ದ ಕೆಲಸದೊಂದಿಗೆ, ಕೈಸರೈಯದ ಬಿಷಪನೋಪಾದಿ ಅವನಿಗೆ ಅನೇಕ ಚಟುವಟಿಕೆಗಳಿದ್ದವು. ಅವನು ಹೆಚ್ಚಾಗಿ ಒಬ್ಬ ಇತಿಹಾಸಗಾರನೋಪಾದಿ ಪ್ರಸಿದ್ಧನಾಗಿದ್ದರೂ, ಅವನು ತನ್ನ ಧರ್ಮದ ಸಮರ್ಥಕನೂ, ನಕ್ಷೆ ತಯಾರಕನೂ, ಸಾರುವವನೂ, ವಿಮರ್ಶಕನೂ, ವ್ಯಾಖ್ಯಾನ ಬರಹಗಾರನೂ ಆಗಿದ್ದನು.

ಅವನ ಇಮ್ಮಡಿ ಉದ್ದೇಶ

ಇಂಥ ಸರಿಸಾಟಿಯಿಲ್ಲದ ಬೃಹತ್‌ ಯೋಜನೆಗಳಿಗೆ ಯುಸಿಬೀಯಸ್‌ ಕೈಹಾಕಿದ್ದೇಕೆ? ತಾನು ಜೀವಿಸುತ್ತಿರುವ ಸಮಯವು, ಒಂದು ಹೊಸ ಯುಗಕ್ಕೆ ಕಾಲಿರಿಸುವಂಥ, ಪರಿವರ್ತನೆಯ ಸಮಯವೆಂಬುದು ಅವನ ನಂಬಿಕೆಯಾಗಿತ್ತು. ಗತ ತಲೆಮಾರುಗಳಲ್ಲಿ ಮಹಾನ್‌ ಘಟನೆಗಳು ಸಂಭವಿಸಿದ್ದವು, ಮತ್ತು ಮುಂದಿನ ತಲೆಮಾರುಗಳಿಗೆ ಇವುಗಳನ್ನು ತಿಳಿಸಲು ಒಂದು ಲಿಖಿತ ದಾಖಲೆಯ ಅಗತ್ಯವಿದೆಯೆಂದು ಅವನಿಗನಿಸಿತು.

ಯುಸೀಬಿಯಸನಿಗೆ ಇನ್ನೊಂದು ಉದ್ದೇಶವೂ ಇತ್ತು​—ಒಬ್ಬ ಸಮರ್ಥಕನಾಗಿರುವಂಥ ಉದ್ದೇಶ. ಕ್ರೈಸ್ತಧರ್ಮವು ದೈವಿಕ ಮೂಲದ್ದಾಗಿದೆ ಎಂದು ಅವನು ನಂಬುತ್ತಿದ್ದನು. ಆದರೆ ಕೆಲವರು ಈ ವಿಚಾರವನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಯುಸೀಬಿಯಸ್‌ ಬರೆದದ್ದು: “ನವೀನತೆಯನ್ನು ಕಂಡುಕೊಳ್ಳುವ ಆಸೆಯಿಂದಾಗಿ, ಅತಿ ದೊಡ್ಡದಾದ ತಪ್ಪುಗಳನ್ನು ಮಾಡಿರುವ ಮತ್ತು ಜ್ಞಾನವೆಂದು ತಪ್ಪಾಗಿ ಕರೆಯಲಾಗುವಂಥದ್ದನ್ನು ತಾವು ಕಂಡುಕೊಂಡಿದ್ದೇವೆಂದು ಘೋಷಿಸಿ, ಕ್ರಿಸ್ತನ ಮಂದೆಯನ್ನು ಕರುಣೆಯಿಲ್ಲದೆ ಧ್ವಂಸಗೊಳಿಸಿರುವ ಕ್ರೂರ ತೋಳಗಳಂತಿದ್ದ ಜನರ ಹೆಸರುಗಳನ್ನೂ ಸಂಖ್ಯೆಯನ್ನೂ ಸಮಯವನ್ನೂ ಕೊಡುವುದೇ ನನ್ನ ಉದ್ದೇಶವಾಗಿದೆ.”

ಯುಸೀಬಿಯಸನು ತನ್ನನ್ನು ಒಬ್ಬ ಕ್ರೈಸ್ತನಾಗಿ ಪರಿಗಣಿಸಿದನೊ? ಬಹುಶಃ ಹೌದು, ಏಕೆಂದರೆ ಅವನು ಕ್ರಿಸ್ತನನ್ನು ಸೂಚಿಸಿ, “ನಮ್ಮ ಉದ್ಧಾರಕನು” ಎಂದು ಕರೆದನು. ಅವನು ತಿಳಿಸಿದ್ದು: “ನಮ್ಮ ಉದ್ಧಾರಕನ ವಿರುದ್ಧ ಅವರು ಮಾಡಿದ ಸಂಚುಗಳ ಫಲಿತಾಂಶವಾಗಿ, ಇಡೀ ಯೆಹೂದಿ ಜನಾಂಗದ ಮೇಲೆ ಕೂಡಲೇ ಬಂದಂಥ ಆಪತ್ತುಗಳನ್ನು ವರ್ಣಿಸುವುದು, ಅನ್ಯರು ದೈವಿಕ ವಾಕ್ಯವನ್ನು ಆಕ್ರಮಿಸಿರುವ ವಿಧಗಳನ್ನೂ ಸಮಯಗಳನ್ನೂ ದಾಖಲಿಸುವುದು, ಮತ್ತು ವಿವಿಧ ಸಮಯಾವಧಿಗಳಲ್ಲಿ ರಕ್ತ ಹಾಗೂ ಯಾತನೆಗಳ ಎದುರಿನಲ್ಲಿ ದೈವಿಕ ವಾಕ್ಯಕ್ಕಾಗಿ ಹೋರಾಡಿರುವವರ ಸ್ವಭಾವವನ್ನು ಚಿತ್ರಿಸಲು, ಮತ್ತು ನಿಷ್ಠೆಯನ್ನು ತೋರಿಸುವುದರ ಬಗ್ಗೆ ನಮ್ಮೀ ದಿನಗಳಲ್ಲಿ ಮಾಡಲ್ಪಟ್ಟಿರುವ ಬಹಿರಂಗ ಅರಿಕೆಗಳ ಹಾಗೂ ನಮ್ಮ ಉದ್ಧಾರಕನು ಅವರೆಲ್ಲರಿಗಾಗಿ ಕೊಟ್ಟಿರುವ ಕರುಣಾಭರಿತ ಹಾಗೂ ದಯಾಪರ ಸಹಾಯದ ಬಗ್ಗೆ ಬರೆಯುವುದೇ ನನ್ನ ಗುರಿಯಾಗಿದೆ.”

ಅವನ ವಿಸ್ತಾರವಾದ ಸಂಶೋಧನೆ

ಯುಸೀಬಿಯಸನು ವ್ಯಕ್ತಿಗತವಾಗಿ ಓದಿದ ಮತ್ತು ಉಲ್ಲೇಖಿಸಿದಂಥ ಪುಸ್ತಕಗಳ ಸಂಖ್ಯೆಯು ಅಪರಿಮಿತವಾದದ್ದು. ಯುಸೀಬಿಯಸನ ಬರಹಗಳಿಂದಲೇ, ಸಾಮಾನ್ಯ ಶಕದ ಮೊದಲ ಮೂರು ಶತಮಾನಗಳ ಅನೇಕ ಪ್ರಮುಖ ವ್ಯಕ್ತಿಗಳ ಬಗ್ಗೆ ತಿಳಿದುಬರುತ್ತದೆ. ಪ್ರಮುಖ ಚಳುವಳಿಗಳ ಮೇಲೆ ಬೆಳಕನ್ನು ಚೆಲ್ಲುವ ಸಹಾಯಪೂರ್ವಕ ವೃತ್ತಾಂತಗಳು, ಕೇವಲ ಅವನ ಬರಹಗಳಲ್ಲಿ ಮಾತ್ರ ಕಂಡುಬರುತ್ತವೆ. ಇವುಗಳು, ಈಗ ಲಭ್ಯವಿಲ್ಲದಿರುವಂಥ ಜ್ಞಾನದ ಮೂಲಗಳಿಂದ ತೆಗೆಯಲ್ಪಟ್ಟವುಗಳಾಗಿವೆ.

ವಿಷಯವಸ್ತುವನ್ನು ಒಟ್ಟುಗೂಡಿಸುವಾಗ ಯುಸೀಬಿಯಸನು ಶ್ರದ್ಧೆಯುಳ್ಳವನೂ, ಕೂಲಂಕಷನೂ ಆಗಿದ್ದನು. ವಿಶ್ವಾಸಾರ್ಹವಾಗಿದ್ದ ಮತ್ತು ವಿಶ್ವಾಸಾರ್ಹವಾಗಿರದಿದ್ದ ವರದಿಗಳ ನಡುವೆ ವ್ಯತ್ಯಾಸವನ್ನು ತೋರಿಸಲು ಅವನು ತುಂಬ ಜಾಗರೂಕತೆಯಿಂದ ಪ್ರಯತ್ನಿಸಿದನೆಂದು ತೋರುತ್ತದೆ. ಆದರೂ ಅವನ ಕೆಲಸದಲ್ಲಿ ಯಾವುದೇ ದೋಷವಿಲ್ಲ ಎಂದು ಹೇಳಲಾಗುವುದಿಲ್ಲ. ಕೆಲವೊಮ್ಮೆ ಅವನು ಮನುಷ್ಯರ ಬಗ್ಗೆ ಮತ್ತು ಅವರ ಕೃತ್ಯಗಳ ಬಗ್ಗೆ ತಪ್ಪಾದ ವಿವರಣೆ ಕೊಡುತ್ತಾನೆ ಮತ್ತು ಅಪಾರ್ಥವನ್ನೂ ಮಾಡುತ್ತಾನೆ. ಕಾಲಗಣನಶಾಸ್ತ್ರದಲ್ಲಿ ಅವನು ಕೆಲವೊಮ್ಮೆ ನಿಷ್ಕೃಷ್ಟನಾಗಿಲ್ಲ. ತನ್ನ ವಿಷಯವಸ್ತುವನ್ನು ಸುಂದರ ಶೈಲಿಯಲ್ಲಿ ಪ್ರಸ್ತುತಪಡಿಸುವ ಕಲೆಯೂ ಯುಸೀಬಿಯಸನಿಗೆ ಇರಲಿಲ್ಲ. ಆದರೆ ಕುಂದುಕೊರತೆಗಳ ಹೊರತೂ, ಅವನ ಅನೇಕ ಕೃತಿಗಳನ್ನು ಬೆಲೆಕಟ್ಟಲಾಗದಂಥ ನಿಧಿಯೋಪಾದಿ ಪರಿಗಣಿಸಲಾಗುತ್ತದೆ.

ಸತ್ಯವನ್ನು ಪ್ರೀತಿಸುವವನೊ?

ತಂದೆಗೂ ಮಗನಿಗೂ ಏನು ಸಂಬಂಧವೆಂಬ ಇತ್ಯರ್ಥಗೊಂಡಿರದಿದ್ದ ವಿವಾದಾಂಶದ ಕುರಿತಾಗಿ ಯುಸೀಬಿಯಸನು ಚಿಂತಿತನಾಗಿದ್ದನು. ಯುಸೀಬಿಯಸನು ನಂಬುತ್ತಿದ್ದಂತೆ, ತಂದೆಯು ಮಗನಿಗಿಂತಲೂ ಮುಂಚೆ ಅಸ್ತಿತ್ವದಲ್ಲಿದ್ದನೊ? ಇಲ್ಲವೆ ತಂದೆ ಮತ್ತು ಮಗನು ಎಲ್ಲಾ ಸಮಯವೂ ಜೊತೆಯಾಗಿ ಅಸ್ತಿತ್ವದಲ್ಲಿದ್ದರೊ? “ಅವರು ಜೊತೆಯಾಗಿ ಅಸ್ತಿತ್ವದಲ್ಲಿರುವಲ್ಲಿ, ತಂದೆಯು ತಂದೆ, ಮತ್ತು ಮಗನು ಮಗನಾಗಿರುವುದು ಹೇಗೆ?” ಎಂದವನು ಕೇಳಿದನು. ಅವನು ತನ್ನ ನಂಬಿಕೆಯನ್ನು ಶಾಸ್ತ್ರವಚನಗಳನ್ನು ಉಲ್ಲೇಖಿಸುವ ಮೂಲಕವೂ ಬೆಂಬಲಿಸಿದನು. “ತಂದೆಯು ನನಗಿಂತ ದೊಡ್ಡವನು” ಎಂದು ಹೇಳುವ ಯೋಹಾನ 14:28ನ್ನು ಮತ್ತು ಯೇಸು ಒಬ್ಬನೇ ಸತ್ಯ ದೇವರಿಂದ ‘ಕಳುಹಿಸಲ್ಪಟ್ಟವನು’ ಎಂದು ಹೇಳಲ್ಪಟ್ಟಿರುವ ಯೋಹಾನ 17:3ನ್ನು ಉಲ್ಲೇಖಿಸಿದನು. ಕೊಲೊಸ್ಸೆ 1:15 ಮತ್ತು ಯೋಹಾನ 1:1ಕ್ಕೆ ಸೂಚಿಸುತ್ತಾ, ಲೊಗೊಸ್‌ ಇಲ್ಲವೇ ವಾಕ್ಯವು ದೇವರ ಮಗನು, “ದೇವರ ಪ್ರತಿರೂಪ”ನೆಂದು ಯುಸೀಬಿಯಸ್‌ ವಾದಿಸಿದನು.

ಆದರೆ ಆಶ್ಚರ್ಯದ ಸಂಗತಿಯೇನೆಂದರೆ, ನೈಸೀಯ ಸಭೆಯ ಸಮಾಪ್ತಿಯಲ್ಲಿ, ಯುಸೀಬಿಯಸನು ಇದನ್ನು ವಿರೋಧಿಸುವ ಅಭಿಪ್ರಾಯಕ್ಕೆ ತನ್ನ ಬೆಂಬಲವನ್ನು ಕೊಟ್ಟನು. ದೇವರು ಮತ್ತು ಕ್ರಿಸ್ತನು ಸದಾ ಜೊತೆಯಾಗಿ ಅಸ್ತಿತ್ವದಲ್ಲಿರುವ ಸಮಾನರಲ್ಲ ಎಂಬ ತನ್ನ ಶಾಸ್ತ್ರೀಯ ನಿಲುವಿಗೆ ವಿರುದ್ಧವಾಗಿ ಅವನು ಸಾಮ್ರಾಟನ ಮಾತಿಗೆ ತಲೆದೂಗಿದನು.

ಕಲಿಯಬಹುದಾದ ಪಾಠ

ಯುಸೀಬಿಯಸನು ನೈಸೀಯ ಸಭೆಯ ಒತ್ತಡಕ್ಕೆ ಮಣಿದು, ಒಂದು ಅಶಾಸ್ತ್ರೀಯ ಬೋಧನೆಯನ್ನು ಬೆಂಬಲಿಸಿದ್ದೇಕೆ? ಅವನ ಮನಸ್ಸಿನಲ್ಲಿ ಯಾವುದೇ ರಾಜಕೀಯ ಗುರಿಗಳಿದ್ದವೊ? ಮೊದಲಾಗಿ ಅವನು ಸಭೆಗೆ ಹಾಜರಾಗುವ ಅಗತ್ಯವೇನಿತ್ತು? ಎಲ್ಲಾ ಬಿಷಪರಿಗೆ ಕರೆಕಳುಹಿಸಲಾಗಿತ್ತಾದರೂ, ಕೇವಲ ಒಂದಂಶದಷ್ಟು, ಅಂದರೆ 300 ಮಂದಿ ಮಾತ್ರ ಹಾಜರಾದರು. ತನ್ನ ಸಾಮಾಜಿಕ ಸ್ಥಾನಮಾನವನ್ನು ಕಾಪಾಡಿಕೊಳ್ಳುವುದರ ಬಗ್ಗೆ ಯುಸೀಬಿಯಸನು ಚಿಂತಿತನಾಗಿದ್ದನೊ? ಮತ್ತು ಸಾಮ್ರಾಟ ಕಾನ್‌ಸ್ಟೆಂಟೀನನು ಅವನಿಗೆ ಅಷ್ಟೊಂದು ಆದರವನ್ನು ಏಕೆ ತೋರಿಸುತ್ತಿದ್ದನು? ಯುಸೀಬಿಯಸನು ಆ ಸಭೆಯಲ್ಲಿ ಸಾಮ್ರಾಟನ ಬಲಗಡೆಯಲ್ಲಿ ಕುಳಿತುಕೊಂಡಿದ್ದನು.

ತನ್ನ ಹಿಂಬಾಲಕರು ‘ಲೋಕದ ಭಾಗವಾಗಿರಬಾರದು’ ಎಂಬ ಯೇಸುವಿನ ಷರತ್ತನ್ನು ಯುಸೀಬಿಯಸನು ಅಲಕ್ಷಿಸಿದನೆಂಬುದು ಸುವ್ಯಕ್ತ. (ಯೋಹಾನ 17:16; 18:36) “ವ್ಯಭಿಚಾರಿಗಳು ನೀವು; ಇಹಲೋಕಸ್ನೇಹವು ದೇವವೈರವೆಂದು ನಿಮಗೆ ತಿಳಿಯದೋ?” ಎಂದು ಶಿಷ್ಯ ಯಾಕೋಬನು ಕೇಳಿದನು. (ಯಾಕೋಬ 4:4) ಮತ್ತು ಪೌಲನ ಈ ಬುದ್ಧಿವಾದವೂ ಎಷ್ಟು ಸೂಕ್ತವಾಗಿದೆ: “ನೀವು ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ”! (2 ಕೊರಿಂಥ 6:14) ನಾವು “[ತಂದೆಯನ್ನು] ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ಆರಾಧಿ”ಸುವಾಗ, ನಾವು ಈ ಲೋಕದಿಂದ ಪ್ರತ್ಯೇಕರಾಗಿರೋಣ.​—ಯೋಹಾನ 4:24.

[ಪುಟ 31ರಲ್ಲಿರುವ ಚಿತ್ರ]

ನೈಸೀಯದ ಸಭೆಯನ್ನು ತೋರಿಸುವ ಭಿತ್ತಿ ಚಿತ್ರ

[ಕೃಪೆ]

Scala/Art Resource, NY

[ಪುಟ 29ರಲ್ಲಿರುವ ಚಿತ್ರ ಕೃಪೆ]

Courtesy of Special Collections Library, University of Michigan