ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಡತನ ಎಂದಾದರೂ ಕೊನೆಗೊಳ್ಳುವುದೊ?

ಬಡತನ ಎಂದಾದರೂ ಕೊನೆಗೊಳ್ಳುವುದೊ?

ಬಡತನ ಎಂದಾದರೂ ಕೊನೆಗೊಳ್ಳುವುದೊ?

“ಆಮೇಲೆ ತಿರಿಗಿ ದೃಷ್ಟಿಸಿ ಲೋಕದಲ್ಲಿನ ಹಿಂಸೆಗಳನ್ನೆಲ್ಲಾ ನೋಡಿದೆನು; ಆಹಾ, ಹಿಂಸೆಗೊಂಡವರ [“ಪೀಡಿಸಲ್ಪಟ್ಟವರ,” NW] ಕಣ್ಣೀರು ಏನೆಂದು ಹೇಳಲಿ! ಸಂತಯಿಸುವವರು ಯಾರೂ ಇರಲಿಲ್ಲ; ಹಿಂಸಕರಿಗೆ ಬಹು ಬಲ; ಸಂತಯಿಸುವವರೋ ಒಬ್ಬರೂ ಇರಲಿಲ್ಲ” ಎಂದು ಪ್ರಾಚೀನ ಇಸ್ರಾಯೇಲಿನ ವಿವೇಕಿ ರಾಜನಾದ ಸೊಲೊಮೋನನು ಹೇಳಿದನು. (ಪ್ರಸಂಗಿ 4:1) ಸೊಲೊಮೋನನ ಮನಸ್ಸಿನಲ್ಲಿದ್ದಂಥ ಆ ಪೀಡಿಸಲ್ಪಟ್ಟವರಲ್ಲಿ ಹೆಚ್ಚಿನವರು ನಿಸ್ಸಂದೇಹವಾಗಿ ಬಡವರೂ ಆಗಿದ್ದಿರಬೇಕು.

ಬಡತನವನ್ನು ಕೇವಲ ಹಣಕಾಸಿನ ಅಂಕಿಸಂಖ್ಯೆಗಳಿಂದ ಮಾತ್ರ ಅಳೆಯಲಾಗುವುದಿಲ್ಲ. ಜೂನ್‌ 2002ರಲ್ಲಿ ವಿಶ್ವ ಬ್ಯಾಂಕ್‌ ಒದಗಿಸಿದ ದತ್ತಾಂಶಕ್ಕನುಸಾರ, “1998ರಲ್ಲಿ ಲೋಕವ್ಯಾಪಕವಾಗಿ 1.2 ಬಿಲಿಯನ್‌ [120 ಕೋಟಿ] ಜನರು ಒಂದು ದಿನದಲ್ಲಿ 1 ಡಾಲರುಗಿಂತಲೂ ಕಡಿಮೆ ಹಣದಲ್ಲಿ ಬದುಕುತ್ತಿದ್ದರು, . . . ಮತ್ತು 2.8 ಬಿಲಿಯನ್‌ [280 ಕೋಟಿ] ಜನರು 2 ಡಾಲರಿಗಿಂತಲೂ ಕಡಿಮೆ ಹಣದಲ್ಲಿ ಜೀವಿಸುತ್ತಿದ್ದರೆಂದು ಅಂದಾಜುಮಾಡಲಾಗಿದೆ.” ಈ ಅಂಕೆಗಳು ಹಿಂದೆ ಮಾಡಲ್ಪಟ್ಟಿರುವ ಅಂದಾಜುಗಳ ಅಂಕೆಗಳಿಗಿಂತಲೂ ಕಡಿಮೆಯಾಗಿದ್ದರೂ, “ಮಾನವ ಕಷ್ಟಾನುಭವದ ಸಂಬಂಧದಲ್ಲಿ ಅವು ಈಗಲೂ ಉಚ್ಚವಾಗಿವೆ” ಎಂಬುದನ್ನು ಗಮನಿಸಲಾಯಿತು.

ಬಡತನವು ಎಂದಾದರೂ ಕೊನೆಗೊಳ್ಳುವುದೊ? ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ, “ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ” ಎಂದು ಹೇಳಿದನು. (ಯೋಹಾನ 12:8) ಅವನ ಈ ಮಾತುಗಳು, ಬಡತನ ಮತ್ತು ಅದರ ಕಹಿ ಫಲಿತಾಂಶಗಳು ಶಾಶ್ವತವಾಗಿರುವವೆಂದು ಅರ್ಥೈಸುತ್ತವೊ? ಇಲ್ಲ. ತನ್ನ ಹಿಂಬಾಲಕರೆಲ್ಲರೂ ಭೌತಿಕ ರೀತಿಯಲ್ಲಿ ಧನಿಕರಾಗುವರೆಂದು ಯೇಸು ವಾಗ್ದಾನಿಸದಿದ್ದರೂ, ಅವನ ಮಾತುಗಳಿಂದ ಬಡವರಿಗಾಗಿ ಯಾವುದೇ ನಿರೀಕ್ಷೆಯಿಲ್ಲ ಎಂಬ ತೀರ್ಮಾನಕ್ಕೆ ನಾವು ಬರಬಾರದು.

ಮಾನವ ಪ್ರಯತ್ನಗಳು ಮತ್ತು ಬಡತನವನ್ನು ಅಂತ್ಯಗೊಳಿಸಲು ಮಾಡಲ್ಪಟ್ಟಿರುವ ವಾಗ್ದಾನಗಳು ಅನೇಕವೇಳೆ ನೆಲಕಚ್ಚಿವೆಯಾದರೂ, ಜನರು ಬಡವರಾಗಿರದಿರುವ ಸಮಯವು ಹತ್ತಿರವಿದೆಯೆಂದು ದೇವರ ವಾಕ್ಯವಾದ ಬೈಬಲ್‌ ನಮಗೆ ಆಶ್ವಾಸನೆಕೊಡುತ್ತದೆ. ವಾಸ್ತವದಲ್ಲಿ, ಯೇಸು ‘ಬಡವರಿಗೆ ಶುಭವರ್ತಮಾನವನ್ನು ಸಾರಿದನು.’ (ಲೂಕ 4:18) ಈ ಸುವಾರ್ತೆಯಲ್ಲಿ, ಬಡತನವು ನಿರ್ಮೂಲಗೊಳಿಸಲ್ಪಡುವುದು ಎಂಬ ವಾಗ್ದಾನವೂ ಸೇರಿದೆ. ದೇವರ ರಾಜ್ಯವು ಭೂಮಿಯ ಮೇಲೆ ನೀತಿಯ ಪರಿಸ್ಥಿತಿಗಳನ್ನು ತರುವಾಗ ಇದು ಸಂಭವಿಸುವುದು.

ಅದೆಷ್ಟು ಭಿನ್ನವಾದ ಲೋಕವಾಗಿರುವುದು! ಸ್ವರ್ಗೀಯ ರಾಜನಾದ ಯೇಸು ಕ್ರಿಸ್ತನು, “ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು.” ಹೌದು, ಆತನು ‘ಕುಯುಕ್ತಿ ಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು.’​—ಕೀರ್ತನೆ 72:​13, 14.

ಆ ಸಮಯದ ಕುರಿತಾಗಿ, ಮೀಕ 4:4 ಹೇಳುವುದು: “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು; ಸೇನಾಧೀಶ್ವರನಾದ ಯೆಹೋವನ ಬಾಯೇ ಇದನ್ನು ನುಡಿದಿದೆ.” ದೇವರ ರಾಜ್ಯವು, ಮಾನವಜಾತಿಯನ್ನು ಬಾಧಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸಿ, ರೋಗಮರಣಗಳನ್ನೂ ನಿರ್ಮೂಲಮಾಡುವುದು. ದೇವರು “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು.”​—ಯೆಶಾಯ 25:8.

ನೀವು ಈ ವಾಗ್ದಾನಗಳಲ್ಲಿ ಭರವಸೆಯನ್ನಿಡಬಲ್ಲಿರಿ, ಯಾಕೆಂದರೆ ಇವುಗಳು ಸ್ವತಃ ದೇವರ ಪ್ರೇರಣೆಯಿಂದ ಬರೆಯಲ್ಪಟ್ಟವುಗಳಾಗಿವೆ. ಬೈಬಲ್‌ ಪ್ರವಾದನೆಗಳು ಭರವಸಾರ್ಹವಾಗಿವೆ ಎಂಬುದನ್ನು ರುಜುಪಡಿಸುವ ಪುರಾವೆಯನ್ನು ನೀವೇಕೆ ಪರೀಕ್ಷಿಸಿನೋಡಬಾರದು?

[ಪುಟ 32ರಲ್ಲಿರುವ ಚಿತ್ರ ಕೃಪೆ]

FAO photo/M. Marzot