ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತಾಯಿಯೊಬ್ಬಳ ವಿವೇಕಯುತ ಸಲಹೆ

ತಾಯಿಯೊಬ್ಬಳ ವಿವೇಕಯುತ ಸಲಹೆ

ತಾಯಿಯೊಬ್ಬಳ ವಿವೇಕಯುತ ಸಲಹೆ

“ಮಗನೇ, ನಿನ್ನ ತಂದೆಯ ಉಪದೇಶವನ್ನು ಕೇಳು, ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ.”—ಜ್ಞಾನೋಕ್ತಿ 1:8.

ನಮ್ಮ ಹೆತ್ತವರು ಅಂದರೆ ನಮ್ಮ ತಂದೆ ಮತ್ತು ತಾಯಿಯು, ಉತ್ತೇಜನ, ಬೆಂಬಲ ಮತ್ತು ಸಲಹೆಯ ಅತ್ಯಮೂಲ್ಯ ಮೂಲವಾಗಿರಸಾಧ್ಯವಿದೆ. ತನ್ನ ತಾಯಿಯಿಂದ “ತಿದ್ದುಪಡಿಸುವಿಕೆಯ” “ಮಹತ್ವವುಳ್ಳ ಸಂದೇಶವನ್ನು” (NW) ಪಡೆದ ಒಬ್ಬ ಯುವ ಅರಸನಾದ ಲೆಮೂವೇಲನ ಕುರಿತು ಬೈಬಲಿನ ಜ್ಞಾನೋಕ್ತಿ ಪುಸ್ತಕವು ಹೇಳುತ್ತದೆ. ಈ ದೈವೋಕ್ತಿಗಳು ಜ್ಞಾನೋಕ್ತಿ 31ನೇ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಿವೆ. ಈ ತಾಯಿಯ ವಿವೇಕಯುತ ಸಲಹೆಯಿಂದ ನಾವು ಕೂಡ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ.—ಜ್ಞಾನೋಕ್ತಿ 31:1.

ಅರಸನೊಬ್ಬನಿಗೆ ತಕ್ಕ ಸಲಹೆ

ನಮ್ಮ ಆಸಕ್ತಿಯನ್ನು ಕೆರಳಿಸುವಂತಹ ಅನೇಕ ಪ್ರಶ್ನೆಗಳನ್ನು ಕೇಳುವುದರೊಂದಿಗೆ ಲೆಮೂವೇಲನ ತಾಯಿಯು ತನ್ನ ಮಾತುಗಳನ್ನು ಆರಂಭಿಸುತ್ತಾಳೆ: “ಏನು, ಕಂದಾ! ನನ್ನ ಗರ್ಭಪುತ್ರನೇ, ಏನು! ನನ್ನ ಹರಕೆಯ ಮಗುವೇ, ನಾನು ಏನು ಹೇಳಲಿ!” ತನ್ನ ಹೇಳಿಕೆಯನ್ನು ಮೂರು ಬಾರಿ ಪುನರುಚ್ಚರಿಸಿರುವುದು ತಾನೇ, ತನ್ನ ಮಾತುಗಳಿಗೆ ತನ್ನ ಮಗನು ಗಮನವನ್ನು ಕೊಡಬೇಕೆಂಬುದರ ಕುರಿತು ಅವಳಿಗಿದ್ದ ಕಾತುರದ ಚಿಂತೆಯನ್ನು ತೋರಿಸುತ್ತದೆ. (ಜ್ಞಾನೋಕ್ತಿ 31:2) ತನ್ನ ಸಂತಾನದ ಆತ್ಮಿಕ ಹಿತಾಸಕ್ತಿಯ ಕುರಿತು ಅವಳಿಗಿದ್ದ ಚಿಂತೆಯು, ಇಂದಿನ ಕ್ರೈಸ್ತ ಹೆತ್ತವರಿಗೆ ಅತ್ಯುತ್ತಮ ಮಾದರಿಯನ್ನು ಒದಗಿಸುತ್ತದೆ.

ತನ್ನ ಮಗನ ಹಿತಾಸಕ್ತಿಯ ವಿಷಯದ ಕುರಿತು ಚಿಂತಿಸುವ ಒಬ್ಬ ತಾಯಿಗೆ ಅವನು ಸುಖವಿಲಾಸಗಳಲ್ಲಿ ಮತ್ತು ಮದ್ಯ, ಹೆಣ್ಣು ಮತ್ತು ಸಂಗೀತದಲ್ಲಿ ಮುಳುಗಿರುವ ಪಟಿಂಗತನವನ್ನು ಬಿಟ್ಟರೆ ಬೇರೆ ಯಾವ ವಿಷಯವು ಹೆಚ್ಚು ವ್ಯಾಕುಲತೆಯನ್ನು ಉಂಟುಮಾಡಬಲ್ಲದು? ಲೆಮೂವೇಲನ ತಾಯಿಯು ನೇರವಾಗಿ ಮುಖ್ಯವಿಷಯಕ್ಕೆ ಬರುತ್ತಾಳೆ: “ನಿನ್ನ ತ್ರಾಣವನ್ನು ಸ್ತ್ರೀಯರಲ್ಲಿ ಒಪ್ಪಿಸದಿರು.” ಸ್ವೇಚ್ಛಾಚಾರದ ನಡತೆಯು ‘ರಾಜರನ್ನು ವಿನಾಶಕರವಾದ ದಾರಿಗೆ ತಿರುಗಿಸುವುದು’ ಎಂದು ಅವಳು ವಿವರಿಸುತ್ತಾಳೆ.—ಜ್ಞಾನೋಕ್ತಿ 31:3.

ಮಿತಿಮೀರಿ ಕುಡಿಯುವಂತಹ ವಿಷಯವನ್ನು ಸಹ ಅಲಕ್ಷಿಸಬಾರದು. ಅವಳು ಎಚ್ಚರಿಸುವುದು: “ದ್ರಾಕ್ಷಾರಸವನ್ನು ಕುಡಿಯುವದು ರಾಜರಿಗೆ ಯೋಗ್ಯವಲ್ಲ; ಲೆಮೂವೇಲನೇ, ಅದು ರಾಜರಿಗೆ ಯೋಗ್ಯವಲ್ಲ.” ಒಬ್ಬ ರಾಜನು ಯಾವಾಗಲೂ ಕುಡಿದು ಮತ್ತನಾಗಿರುವಲ್ಲಿ, ಸ್ವಸ್ಥವಾದ ಮತ್ತು ಸರಿಯಾದ ನ್ಯಾಯವನ್ನು ಹೇಗೆ ಕೊಟ್ಟಾನು ಮತ್ತು “ಧರ್ಮನಿಯಮಗಳನ್ನು” ಮರೆಯದೆ “ಬಾಧೆಪಡುವವರೆಲ್ಲರ ನ್ಯಾಯವನ್ನು” ಹೇಗೆ ತಾನೇ ತೀರಿಸಾನು?—ಜ್ಞಾನೋಕ್ತಿ 31:4-7.

ಇದಕ್ಕೆ ತದ್ವಿರುದ್ಧವಾಗಿ, ಅರಸನು ಇಂತಹ ದುರ್ಗುಣಗಳಿಂದ ದೂರ ಉಳಿಯುವುದಾದರೆ, ‘ನ್ಯಾಯವಾಗುವಂತೆ ಬಾಯಿ ತೆರೆದು ಧರ್ಮವನ್ನು ನಡಿಸುವನು, ದೀನದರಿದ್ರರಿಗೆ ನ್ಯಾಯವನ್ನು ತೀರಿಸುವನು.’—ಜ್ಞಾನೋಕ್ತಿ 31:8, 9.

ಕ್ರೈಸ್ತ ಯುವಕರು ಇಂದು “ಅರಸ”ರಾಗಿರಲಿಕ್ಕಿಲ್ಲವಾದರೂ, ಲೆಮೂವೇಲನ ತಾಯಿಯ ವಿವೇಕಯುತ ಸಲಹೆಯು ಹಿಂದಿನಷ್ಟೇ ಈಗಲೂ ಸಮಯೋಚಿತವಾಗಿರುತ್ತದೆ. ಅಮಲೌಷಧದ ದುರುಪಯೋಗ, ಹೊಗೆಸೊಪ್ಪಿನ ಸೇವನೆ ಮತ್ತು ಲೈಂಗಿಕ ಅನೈತಿಕತೆಯು ಇಂದಿನ ಯುವ ಜನರ ಮಧ್ಯೆ ಸರ್ವಸಾಮಾನ್ಯವಾಗಿ ಬಿಟ್ಟಿದೆ ಮತ್ತು ಹೆತ್ತವರು ತಮ್ಮ ಮಕ್ಕಳಿಗೆ ‘ಮಹತ್ವವುಳ್ಳ ಸಂದೇಶಗಳನ್ನು’ ಕೊಡುವಾಗ ಕ್ರೈಸ್ತ ಯುವ ಜನರು ಗಮನವಿಟ್ಟು ಕೇಳುವ ಆವಶ್ಯಕತೆಯಿದೆ.

ಗುಣವತಿಯಾದ ಪತ್ನಿ

ಪ್ರಾಪ್ತವಯಸ್ಸನ್ನು ತಲುಪುತ್ತಿರುವ ತಮ್ಮ ಮಕ್ಕಳ ಮದುವೆಯ ಕುರಿತು ಯೋಗ್ಯವಾಗಿಯೇ ತಾಯಂದಿರು ಚಿಂತಿತರಾಗಿರುತ್ತಾರೆ. ಲೆಮೂವೇಲನ ತಾಯಿಯು ಒಬ್ಬ ಆದರ್ಶ ಪತ್ನಿಯ ಗುಣಗಳ ಕಡೆಗೆ ತನ್ನ ಗಮನವನ್ನು ತಿರುಗಿಸುತ್ತಾಳೆ. ಈ ಪ್ರಾಮುಖ್ಯವಾದ ವಿಷಯದ ಮೇಲೆ ಒಬ್ಬ ಸ್ತ್ರೀಯ ದೃಷ್ಟಿಕೋನವನ್ನು ಪರಿಗಣಿಸುವ ಮೂಲಕ, ಯುವಕನೊಬ್ಬನು ಹೇರಳವಾದ ಪ್ರಯೋಜನವನ್ನು ಪಡೆದುಕೊಳ್ಳುವನೆಂಬುದರಲ್ಲಿ ಸಂದೇಹವೇ ಇಲ್ಲ.

ಜ್ಞಾನೋಕ್ತಿ 31 ವಚನ 10ರಲ್ಲಿ, ಗುಣವತಿಯಾದ ಪತ್ನಿಯು ಅಪರೂಪವೂ ಅಮೂಲ್ಯವೂ ಆಗಿರುವ ಹವಳಕ್ಕೆ ಹೋಲಿಸಲ್ಪಡುತ್ತಾಳೆ. ಬೈಬಲ್‌ ಸಮಯಗಳಲ್ಲಿ ಈ ಹವಳವನ್ನು ಹೆಚ್ಚು ಪರಿಶ್ರಮಪಡುವುದರಿಂದಲೇ ಪಡೆದುಕೊಳ್ಳಸಾಧ್ಯವಿತ್ತು. ಅದೇ ರೀತಿಯಲ್ಲಿ, ಗುಣವತಿಯಾದ ಪತ್ನಿಯನ್ನು ಕಂಡುಕೊಳ್ಳುವುದು ಪ್ರಯತ್ನವನ್ನು ಕೇಳಿಕೊಳ್ಳುತ್ತದೆ. ಮದುವೆಯ ಬಂಧದೊಳಗೆ ಮುಂದಾಲೋಚನೆಯಿಲ್ಲದೆ ಧುಮುಕುವ ಬದಲು, ಒಬ್ಬ ಯುವಕನು ಯುವತಿಯನ್ನು ಆಯ್ಕೆಮಾಡಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುವುದು ಉತ್ತಮ. ಹೀಗೆ ತನ್ನ ಅಮೂಲ್ಯವಾಗಿರುವ ಆಯ್ಕೆಯನ್ನು ಅವನು ಬೆಲೆಯುಳ್ಳದ್ದೆಂದೆಣಿಸುವುದು ಹೆಚ್ಚು ಸಂಭವನೀಯ.

ಗುಣವತಿಯಾದ ಪತ್ನಿಯ ಕುರಿತು, ಲೆಮೂವೇಲನಿಗೆ ಹೀಗೆ ಹೇಳಲಾಗಿದೆ: “ಪತಿಹೃದಯವು ಆಕೆಯಲ್ಲಿ ಭರವಸಪಡುವದು.” (ಜ್ಞಾನೋಕ್ತಿ 31 ವಚನ 11) ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಹೆಂಡತಿಯು ಪ್ರತಿಯೊಂದು ವಿಷಯವನ್ನು ತನ್ನ ಅನುಮತಿ ಪಡೆದೇ ಮಾಡಬೇಕೆಂದು ಗಂಡನು ಒತ್ತಾಯಮಾಡಬಾರದು. ನಿಜ, ವಿವಾಹ ಸಂಗಾತಿಗಳು ದುಬಾರಿಯಾದ ವಸ್ತುಗಳ ಖರೀದಿಯನ್ನು ಮಾಡುವಾಗ ಅಥವಾ ತಮ್ಮ ಮಕ್ಕಳ ಪರಿಪಾಲನೆಗೆ ಸಂಬಂಧಿಸಿದ ಮಹತ್ತ್ವದ ನಿರ್ಣಯಗಳನ್ನು ಮಾಡುವ ಮೊದಲು ಒಬ್ಬರನ್ನೊಬ್ಬರು ವಿಚಾರಿಸಬೇಕು. ಈ ಕ್ಷೇತ್ರದಲ್ಲಿ ಸಂವಾದವು ಅವರಿಬ್ಬರ ನಡುವೆ ಒಂದು ನಿಕಟವಾದ ಬಂಧವನ್ನು ಕಟ್ಟಲು ಸಹಾಯಮಾಡುತ್ತದೆ.

ಒಬ್ಬ ಗುಣವತಿಯಾದ ಪತ್ನಿಗೆ ಮಾಡಲು ತುಂಬ ಕೆಲಸಗಳಿರುತ್ತವೆ ಎಂಬುದು ನಿಜ. ಆ ಅಧ್ಯಾಯದ 13ರಿಂದ 27ನೇ ವಚನಗಳು, ಯಾವುದೇ ಸಮಯದಲ್ಲಿ ಜೀವಿಸುತ್ತಿರುವಂತಹ ಹೆಂಡತಿಯರು ತಮ್ಮ ಕುಟುಂಬಗಳ ಪ್ರಯೋಜನಕ್ಕಾಗಿ ಉಪಯೋಗಿಸಸಾಧ್ಯವಿರುವ ಸಲಹೆಗಳನ್ನು ಮತ್ತು ತತ್ವಗಳನ್ನು ಪಟ್ಟಿಮಾಡುತ್ತದೆ. ದೃಷ್ಟಾಂತಕ್ಕೆ, ಬಟ್ಟೆಬರೆಗಳ ಮತ್ತು ಪೀಠೋಪಕರಣಗಳ ಬೆಲೆಯೇರಿರುವಾಗ, ತನ್ನ ಕುಟುಂಬವು ಯೋಗ್ಯವಾದ ಉಡುಗೆಯನ್ನು ಧರಿಸುವಂತೆ ಮತ್ತು ಮನೆಯು ಅಂದವಾಗಿ ಇರುವಂತೆ ಸಹಾಯಮಾಡಲಿಕ್ಕಾಗಿ, ಗುಣವತಿಯಾದ ಒಬ್ಬ ಪತ್ನಿಯು ಕರಕುಶಲತೆಯನ್ನು ಮತ್ತು ಮಿತವಾಗಿ ಹಣವ್ಯಯಮಾಡುವುದನ್ನು ಕಲಿತುಕೊಳ್ಳುತ್ತಾಳೆ. (ಜ್ಞಾನೋಕ್ತಿ 31 ವಚನಗಳು 13, 19, 21, 22) ಕುಟುಂಬದ ಊಟದ ಖರ್ಚನ್ನು ಕಡಿಮೆಗೊಳಿಸಲು, ತನ್ನ ಕೈಲಾದ ಬೆಳೆಯನ್ನು ಅವಳು ಬೆಳೆಸಿ ಜಾಗರೂಕತೆಯಿಂದ ಅಂಗಡಿಯಿಂದ ವಸ್ತುಗಳನ್ನು ಖರೀದಿಸುತ್ತಾಳೆ.—ಜ್ಞಾನೋಕ್ತಿ 31 ವಚನಗಳು 14, 16.

ಸುವ್ಯಕ್ತವಾಗಿಯೇ, ಈ ಸ್ತ್ರೀಯು “ಸೋಮಾರಿತನದ ಅನ್ನವನ್ನು” ತಿನ್ನುವುದಿಲ್ಲ. ಅವಳು ಕಷ್ಟಪಟ್ಟು ದುಡಿಯುತ್ತಾಳೆ ಮತ್ತು ತನ್ನ ಕುಟುಂಬದ ಚಟುವಟಿಕೆಗಳನ್ನು ದಕ್ಷತೆಯಿಂದ ಸಂಘಟಿಸುತ್ತಾಳೆ. (ಜ್ಞಾನೋಕ್ತಿ 31 ವಚನ 27) ಅವಳು ತನ್ನ “ನಡುವಿಗೆ ಬಲವೆಂಬ ಪಟ್ಟಿಯನ್ನು” ಕಟ್ಟಿಕೊಳ್ಳುತ್ತಾಳೆ. ಇದರರ್ಥ, ದೈಹಿಕ ಪರಿಶ್ರಮವನ್ನು ಕೇಳಿಕೊಳ್ಳುವಂತಹ ಕೆಲಸಗಳನ್ನು ಮಾಡಲು ಸಹ ಅವಳು ತಯಾರಾಗಿರುತ್ತಾಳೆ. (ಜ್ಞಾನೋಕ್ತಿ 31 ವಚನ 17) ಸೂರ್ಯೋದಯವಾಗುವುದಕ್ಕಿಂತಲೂ ಮುಂಚೆ ಹಾಸಿಗೆಯಿಂದ ಎದ್ದು ತನ್ನ ದಿನದ ಕೆಲಸವನ್ನು ಅವಳು ಪ್ರಾರಂಭಿಸುತ್ತಾಳೆ ಮತ್ತು ರಾತ್ರಿಯ ವರೆಗೆ ಪರಿಶ್ರಮಪೂರ್ವಕವಾಗಿ ದುಡಿಯುತ್ತಾಳೆ. ಅಂದರೆ, ಅವಳ ಕೆಲಸವನ್ನು ಬೆಳಗಿಸುವ ದೀಪವು ಯಾವಾಗಲೂ ಉರಿಯುತ್ತಿರುತ್ತದೆ ಎಂಬುದೇ ಇದರ ಅರ್ಥ.—ಜ್ಞಾನೋಕ್ತಿ 31 ವಚನಗಳು 15, 18.

ಎಲ್ಲಕ್ಕಿಂತಲೂ ಹೆಚ್ಚಾಗಿ, ಗುಣವತಿಯಾದ ಪತ್ನಿಯು ಒಬ್ಬ ಆತ್ಮಿಕ ಸ್ತ್ರೀಯಾಗಿದ್ದಾಳೆ. ಅವಳು ದೇವರಿಗೆ ಭಯಪಡುತ್ತಾಳೆ ಮತ್ತು ಆಳವಾದ ಗೌರವ ಮತ್ತು ಭಕ್ತಿಪೂರ್ವಕವಾದ ಭಯದಿಂದ ಕೂಡಿದವಳಾಗಿ ಆತನನ್ನು ಆರಾಧಿಸುತ್ತಾಳೆ. (ಜ್ಞಾನೋಕ್ತಿ 31 ವಚನ 30) ತಮ್ಮ ಮಕ್ಕಳೂ ಹಾಗೆ ಮಾಡುವಂತೆ ತರಬೇತುಗೊಳಿಸುವುದರಲ್ಲಿ ತನ್ನ ಗಂಡನಿಗೆ ಅವಳು ಸಹಾಯ ಮಾಡುತ್ತಾಳೆ. ಜ್ಞಾನೋಕ್ತಿ 31 ವಚನ 26 ಹೇಳುವಂತೆ, ಅವಳು “ಜ್ಞಾನ”ದಿಂದ ತನ್ನ ಮಕ್ಕಳಿಗೆ ಉಪದೇಶ ನೀಡುವಳು ಮತ್ತು “ಆಕೆಯ ನಾಲಿಗೆಯು ಬುದ್ಧಿಯನ್ನು ಪ್ರೀತಿಪೂರ್ವಕವಾಗಿ ಹೇಳುವದು.”

ಒಬ್ಬ ಸಮರ್ಥ ಪತಿ

ಒಬ್ಬ ಸಮರ್ಥಳಾದ ಪತ್ನಿಯನ್ನು ಆಕರ್ಷಿಸಲು, ಒಬ್ಬ ಸಮರ್ಥ ಪತಿಯ ಜವಾಬ್ದಾರಿಗಳನ್ನು ಲೆಮೂವೇಲನು ಪೂರೈಸುವ ಆವಶ್ಯಕತೆಯಿತ್ತು. ಲೆಮೂವೇಲನ ತಾಯಿಯು ಇವುಗಳಲ್ಲಿ ಅನೇಕ ವಿಷಯಗಳನ್ನು ಅವನಿಗೆ ಜ್ಞಾಪಕಹುಟ್ಟಿಸುತ್ತಾಳೆ.

ಒಬ್ಬ ಸಮರ್ಥ ಪತಿಯ ಕುರಿತು “ದೇಶದ ಹಿರಿಯ”ರು ಒಳ್ಳೇ ವರದಿಯನ್ನು ಕೊಡುತ್ತಾರೆ. (ಜ್ಞಾನೋಕ್ತಿ 31:23) ಇದರ ಅರ್ಥ ಅವನು ಸಮರ್ಥನು, ಪ್ರಾಮಾಣಿಕನು, ಭರವಸಯೋಗ್ಯನು ಮತ್ತು ದೇವಭಯವುಳ್ಳವನು ಆಗಿರುತ್ತಾನೆ. (ವಿಮೋಚನಕಾಂಡ 18:21; ಧರ್ಮೋಪದೇಶಕಾಂಡ 16:18-20) ಹೀಗಾಗಿ, ಅವನು ನಗರದ ಕಾರ್ಯಾದಿಗಳನ್ನು ನಡೆಸಲು ಪ್ರಮುಖ ವ್ಯಕ್ತಿಗಳು ಕೂಡಿಬರುವ ಸ್ಥಳವಾಗಿರುವ ಆ “ನ್ಯಾಯಸ್ಥಾನದಲ್ಲಿ . . . ಪ್ರಸಿದ್ಧನಾಗಿ” ಇರುತ್ತಾನೆ. ಒಬ್ಬ ದೇವಭಯವುಳ್ಳ ವ್ಯಕ್ತಿಯಾಗಿ ‘ಪ್ರಸಿದ್ಧನಾಗಿ ಕಾಣಲು’ ಅವನು ವಿವೇಚನೆಯುಳ್ಳವನಾಗಿರಬೇಕು ಮತ್ತು ಪ್ರಾಯಶಃ ಜಿಲ್ಲೆ ಅಥವಾ ಪ್ರದೇಶ ಎಂಬ ಅರ್ಥಕೊಡುವ “ದೇಶದ” ಹಿರಿಯರೊಂದಿಗೆ ಹೊಂದಿಕೆಯಲ್ಲಿ ಕಾರ್ಯನಡೆಸಬೇಕು.

ವೈಯಕ್ತಿಕ ಅನುಭವದಿಂದ ಮಾತಾಡುತ್ತಾ, ತನ್ನ ಭಾವೀ ಪತ್ನಿಗೆ ಗಣ್ಯತೆಯನ್ನು ತೋರಿಸುವ ವಿಷಯದಲ್ಲಿನ ಪ್ರಮುಖತೆಯನ್ನು ಲೆಮೂವೇಲನ ತಾಯಿಯು ತನ್ನ ಮಗನಿಗೆ ಜ್ಞಾಪಕಹುಟ್ಟಿಸುತ್ತಾಳೆ. ಭೂಮಿಯ ಮೇಲಿರುವ ಯಾರೊಬ್ಬರೂ ಅವನಿಗೆ ಅಷ್ಟು ಆಪ್ತರಾಗಿರುವುದಿಲ್ಲ. ಇದನ್ನು ಪತಿಯು ಎಲ್ಲರ ಮುಂದೆ ಈ ಕೆಳಗಿನಂತೆ ಒಪ್ಪಿಕೊಳ್ಳುವಾಗ ಅವನ ಮಾತುಗಳಲ್ಲಿರುವ ಆಳವಾದ ಭಾವನೆಯನ್ನು ದಯವಿಟ್ಟು ಗಮನಿಸಿರಿ: “ಬಹುಮಂದಿ ಸ್ತ್ರೀಯರು ಗುಣವತಿಯರಾಗಿ ನಡೆದಿದ್ದಾರೆ, ಅವರೆಲ್ಲರಿಗಿಂತಲೂ ನೀನೇ ಶ್ರೇಷ್ಠಳು.”—ಜ್ಞಾನೋಕ್ತಿ 31:29.

ಲೆಮೂವೇಲನು ತನ್ನ ತಾಯಿಯ ವಿವೇಕಯುತ ಸಲಹೆಯನ್ನು ಗಣ್ಯಮಾಡಿದನೆಂಬುದು ಸ್ಪಷ್ಟ. ಉದಾಹರಣೆಗೆ, ಜ್ಞಾನೋಕ್ತಿ 31 ವಚನ 1ರಲ್ಲಿರುವ ತನ್ನ ತಾಯಿಯ ಮಾತುಗಳನ್ನು ಅವನು ತನ್ನ ಸ್ವಂತ ಮಾತಾಗಿ ಉಲ್ಲೇಖಿಸಿರುವುದನ್ನು ಗಮನಿಸಿರಿ. ಆದುದರಿಂದ, ಅವನು ಆಕೆಯ “ತಿದ್ದುಪಡಿಸುವಿಕೆಯನ್ನು” ಹೃದಯಕ್ಕೆ ತೆಗೆದುಕೊಂಡನು ಮತ್ತು ಅವಳ ಸಲಹೆಯಿಂದ ಪ್ರಯೋಜನ ಹೊಂದಿದನು. ಈ “ಮಹತ್ವವುಳ್ಳ ಸಂದೇಶ”ದಲ್ಲಿರುವ ತತ್ವಗಳನ್ನು ನಮ್ಮ ಜೀವಿತಗಳಲ್ಲಿ ಅನ್ವಯಿಸಿಕೊಳ್ಳುವ ಮೂಲಕ ಇದರಿಂದ ನಾವು ಪ್ರಯೋಜನವನ್ನು ಪಡೆದುಕೊಳ್ಳುವಂತಾಗಲಿ.

[ಪುಟ 31ರಲ್ಲಿರುವ ಚಿತ್ರಗಳು]

ಒಬ್ಬ ಗುಣವತಿಯಾದ ಪತ್ನಿಯು “ಸೋಮಾರಿತನದ ಅನ್ನವನ್ನು” ತಿನ್ನುವುದಿಲ್ಲ