ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಂತರ್ಜಾಲ ವಂಚನೆ—ಬಲಿಯಾದೀರಿ ಜೋಕೆ!

ಅಂತರ್ಜಾಲ ವಂಚನೆ—ಬಲಿಯಾದೀರಿ ಜೋಕೆ!

ಅಂತರ್ಜಾಲ ವಂಚನೆ—ಬಲಿಯಾದೀರಿ ಜೋಕೆ!

ಅಮೆರಿಕದ ಫ್ಲಾರಿಡ ಎಂಬಲ್ಲಿನ ವಿಲ್ಯಮ್‌ ಎಂಬ ನಿವೃತ್ತ ಶಿಕ್ಷಕರಿಗೆ ಒಂದು ಇ-ಮೇಲ್‌ ಬಂತು. ಅದನ್ನು ನೋಡಿದಾಗ ತನಗೆ ಅಂತರ್ಜಾಲ ಸಂಪರ್ಕ ಒದಗಿಸುವ ಸಂಸ್ಥೆ ಇದನ್ನು ಕಳುಹಿಸಿದೆ ಎಂದು ನೆನಸಿದರು. ಅಂತರ್ಜಾಲ ಶುಲ್ಕ ಪಡೆಯಲು ಬೇಕಾದ ಮಾಹಿತಿ ಕಳೆದುಹೋಗಿದೆ ಎಂದು ಇ-ಮೇಲಲ್ಲಿ ತಿಳಿಸಲಾಗಿತ್ತು. ಹಾಗಾಗಿ ಅದರೊಟ್ಟಿಗೆ ಲಗತ್ತಿಸಲಾಗಿದ್ದ ಫಾರ್ಮನ್ನು ವಿಲ್ಯಮ್‌ರು ತುಂಬಿಸಿ ಕಳುಹಿಸಿದರು. ಆದರೆ ನಿಜವಾಗಿ ಆ ಮಾಹಿತಿ ಕೇಳಿದವನು ನ್ಯೂಯಾರ್ಕಿನ ಕ್ವೀನ್ಸ್‌ ಎಂಬಲ್ಲಿನ ಒಬ್ಬ ದುಷ್ಕರ್ಮಿ! ವಿಲ್ಯಮ್‌ರ ಕ್ರೆಡಿಟ್‌ ಕಾರ್ಡ್‌ ಸಂಖ್ಯೆ ಬಳಸಿ ಅಂತರ್ಜಾಲದ ಮೂಲಕ ಮರುದಿನವೇ ಒಂದು ಪ್ರಿಂಟರನ್ನು ಖರೀದಿಸಿದ. ಈ ಪ್ರಿಂಟರ್‌ನಿಂದ ಅವನು ನಕಲಿ ಕಾಗದಪತ್ರಗಳನ್ನು ತಯಾರಿಸಿ ಇನ್ನಷ್ಟು ಜನರನ್ನು ಮೋಸಮಾಡಲಿದ್ದ! ವಿಲ್ಯಮ್‌ರಂತೆ ಇನ್ನೂ 1,00,000 ಮಂದಿಗೆ ಆ ಇ-ಮೇಲ್‌ ಹೋಗಿತ್ತು. ಇದಕ್ಕೆ ಪ್ರತಿಕ್ರಿಯೆ ತೋರಿಸಿದ ಸುಮಾರು ನೂರು ಜನರು ಆ ದುಷ್ಕರ್ಮಿ ತೋಡಿದ್ದ ಖೆಡ್ಡಕ್ಕೆ ಬಿದ್ದರೆಂಬುದು ತನಿಖೆಗಾರರ ಆಂಬೋಣ.

ಆಸ್ಟ್ರೇಲಿಯದ ಕ್ವೀನ್ಸ್‌ಲೆಂಡ್‌ನಲ್ಲಿನ 56ರ ಹರೆಯದ ಮಹಿಳೆ, ಕಂಪ್ಯೂಟರ್‌ ಮೂಲಕ ಒಬ್ಬ ವ್ಯಕ್ತಿಯೊಂದಿಗೆ ಪ್ರಣಯ ಆರಂಭಿಸಿದಳು. ಅವನೊಬ್ಬ ಬ್ರಿಟಿಷ್‌ ಇಂಜಿನೀಯರ್‌ ಎಂದುಕೊಂಡಿದ್ದಳು. ಆದರೆ ವಾಸ್ತವದಲ್ಲಿ ಅವನೊಬ್ಬ ಢೋಂಗಿ, ನೈಜೀರಿಯದಲ್ಲಿರುವ 27 ವರ್ಷದ ಯುವಕ ಎಂದು ಗೊತ್ತಾಗುವಷ್ಟರಲ್ಲಿ ಆಕೆಯಿಂದ 47,000 ಡಾಲರುಗಳನ್ನು ಲಪಟಾಯಿಸಿದ್ದ! *

ಈ ರೀತಿಯ ಅಂತರ್ಜಾಲ ವಂಚನೆ ಪ್ರಕರಣಗಳು ಇಂದು ಸರ್ವೇಸಾಮಾನ್ಯ ಎಂಬುದು ವಿಷಾದನೀಯ. ಕನ್‌ಸ್ಯುಮರ್ಸ್‌ ರಿಪೋರ್ಟ್ಸ್‌ (2010) ನಿಯತಕಾಲಿಕೆಯಲ್ಲಿ ಅಂತರ್ಜಾಲ ಕುರಿತ ಲೇಖನವೊಂದು ಹೇಳಿದ್ದು: “ಅಂತರ್ಜಾಲ ಅಪಾಯಗಳು ಗಗನಕ್ಕೇರುತ್ತಿರುವುದನ್ನು ನೋಡಿ ದಿಗಿಲಾಗುತ್ತದೆ. ಇದರಿಂದ ಗ್ರಾಹಕರಿಗೆ ಬಿಲಿಯಗಟ್ಟಲೆ ಡಾಲರುಗಳು ನಷ್ಟವಾಗುತ್ತದೆ. ಕಳೆದ ಒಂದು ವರ್ಷದಿಂದ ವೈರಸ್‌ ದಾಳಿಗಳು ವಿಪರೀತವಾಗಿ ಹೆಚ್ಚುತ್ತಿವೆ. ಅಮೆರಿಕದಲ್ಲಿರುವ ಶೇ. 40ರಷ್ಟು ಮನೆ-ಕಂಪ್ಯೂಟರುಗಳು ಈ ದಾಳಿಗೀಡಾಗಿವೆ. ಕೆಲವೊಂದು ಮನೆಗಳಲ್ಲಂತೂ ಒಂದಕ್ಕಿಂತ ಹೆಚ್ಚು ಬಾರಿ ಹೀಗಾಗಿದೆ.” ಈ ದಾಳಿಗಳ ವಿರುದ್ಧ ನಿಮ್ಮನ್ನೇ ರಕ್ಷಿಸಿಕೊಳ್ಳುವುದು ಹೇಗೆಂದು ಚರ್ಚಿಸುವ ಮೊದಲು ದುಷ್ಕರ್ಮಿಗಳ ಕೆಲವು ಕುತಂತ್ರಗಳೇನೆಂದು ನೋಡೋಣ.

ಅವರೇನು ಮಾಡುತ್ತಾರೆ?

ಅಂತರ್ಜಾಲದಲ್ಲಾಗುವ ಹೆಚ್ಚಿನ ದುರುದ್ದೇಶಭರಿತ ಕೆಲಸಗಳು ಇ-ಮೇಲ್‌ ಮೂಲಕ ನಡೆಯುತ್ತವೆ. ಉದಾಹರಣೆಗೆ, ವಿಲ್ಯಮ್‌ರವರಿಗೆ ಸಿಕ್ಕಿದ ಇ-ಮೇಲನ್ನು ‘ಫಿಶಿಂಗ್‌ ಇ-ಮೇಲ್‌’ ಎಂದು ಕರೆಯಲಾಗುತ್ತದೆ. ಮೀನಿಗೆ ಹಾಕುವ ಗಾಳದಂತೆ ಇದು ಜನರನ್ನು ಮೋಸದ ಜಾಲಕ್ಕೆ ಬೀಳಿಸುತ್ತದೆ. ಅಂತರ್ಜಾಲ ಬಳಕೆದಾರನು ತನ್ನ ಪಾಸ್‌ವರ್ಡ್‌, ಕ್ರೆಡಿಟ್‌ ಕಾರ್ಡ್‌ ನಂಬರ್‌, ಬ್ಯಾಂಕ್‌ ಖಾತೆಯ ಮಾಹಿತಿಯನ್ನು ಒಂದು ಜಾಲತಾಣಕ್ಕೆ ಕಳುಹಿಸುವಂತೆ ಪುಸಲಾಯಿಸುತ್ತಾ ದುಷ್ಕರ್ಮಿಗಳು ಇಂಥ ಇ-ಮೇಲ್‌ ಕಳುಹಿಸುತ್ತಾರೆ. ಅಸಲಿಯೆಂದು ತೋರುವ ಆ ಜಾಲತಾಣ ನಿಜವಾಗಿ ನಕಲಿ ಆಗಿರುತ್ತದೆ. ನಯವಂಚಕರು ನಿಮ್ಮ ಇ-ಮೇಲ್‌ ವಿಳಾಸವನ್ನು ‘ಇ-ಮೇಲ್‌ ಎಕ್ಸ್‌ಟ್ರ್ಯಾಕ್ಟರ್‌’ ಎಂಬ ಕಂಪ್ಯೂಟರ್‌ ಪ್ರೊಗ್ರ್ಯಾಮ್‌ ಬಳಸಿ ಪಡೆಯುತ್ತಾರೆ.

ಕೆಲವು ‘ಫಿಶಿಂಗ್‌ ಇ-ಮೇಲ್‌’ಗಳು ಕೋರುವಂಥ ಮಾಹಿತಿಯನ್ನು ನೀವು ಕಳುಹಿಸದಿದ್ದರೂ ಅವು ತಮ್ಮ ಉದ್ದೇಶವನ್ನು ಸಾಧಿಸುತ್ತವೆ. ಇಂಥ ಒಂದು ಇ-ಮೇಲನ್ನು ತೆರೆದರೆ ಸಾಕು, ಅದು ನಿಮ್ಮ ಕಂಪ್ಯೂಟರಿಗೆ ಗೂಢಚಾರಿ ತಂತ್ರಾಂಶವನ್ನು ಸೇರಿಸುತ್ತದೆ. ಈ ಪ್ರೋಗ್ರ್ಯಾಮ್‌ಗಳು ನೀವು ಕಂಪ್ಯೂಟರ್‌ನಲ್ಲಿ ಮಾಡುವ ಎಲ್ಲ ಕೆಲಸವನ್ನು ದಾಖಲಿಸುತ್ತವೆ. ನೀವು ಯಾವ ಕೀಗಳನ್ನು ಒತ್ತುತ್ತೀರೆಂದೂ ಕೆಲವು ಪ್ರೋಗ್ರ್ಯಾಮ್‌ಗಳು ದಾಖಲೆಯಿಟ್ಟು, ನಿಮ್ಮ ಪಾಸ್‌ವರ್ಡ್‌ ಮತ್ತು ವೈಯಕ್ತಿಕ ಮಾಹಿತಿಯನ್ನು ಕದಿಯುತ್ತವೆ. ಇನ್ನೂ ಕೆಲವು ಪ್ರೋಗ್ರ್ಯಾಮ್‌ಗಳು ನಿಮ್ಮನ್ನು ನೇರವಾಗಿ ದುರುದ್ದೇಶಪೂರಿತ ತಾಣಗಳಿಗೆ ಕೊಂಡೊಯ್ಯುತ್ತವೆ. ಇಷ್ಟೆಲ್ಲ ಅಪಾಯಗಳಿರುವಾಗ ಅಂತರ್ಜಾಲ ವಂಚನೆಗೆ ಬಲಿಯಾಗದಿರಲು ಏನಾದರೂ ಮಾಡಸಾಧ್ಯವೇ?

ನೀವೇನು ಮಾಡಬಹುದು?

ಮೋಸಗಾರರು ‘ಟ್ರೋಜನ್‌ ಹಾರ್ಸ್‌’ಗಳೆಂದು ಕರೆಯಲಾಗುವ ಪ್ರೋಗ್ರ್ಯಾಮ್‌ ಮೂಲಕ ನಿಮ್ಮ ಕಂಪ್ಯೂಟರೊಳಗೆ ನುಸುಳಿ ನಿಮ್ಮೆಲ್ಲ ಖಾಸಗಿ ಮಾಹಿತಿಯನ್ನು ನಿಮಗರಿವಿಲ್ಲದೆ ಕದಿಯುತ್ತಾರೆ. ಫೋರಮ್‌ಗಳು (ಅಂತರ್ಜಾಲದ ಚರ್ಚಾ ವೇದಿಕೆ), ಅಶ್ಲೀಲಚಿತ್ರ ತಾಣಗಳು, ಅಜ್ಞಾತ ಮೂಲದಿಂದ ಬಂದಿರುವ ತಂತ್ರಾಂಶವನ್ನು ನೀಡುವ ಜಾಲತಾಣಗಳು, ಸಾಮಾಜಿಕ ಜಾಲತಾಣಗಳಿಗೆಲ್ಲ ನಯವಂಚಕರು ಭೇಟಿನೀಡಿ ಬೆಲೆಬಾಳುವ ಮಾಹಿತಿ ಪಡೆಯುತ್ತಾರೆ ಮತ್ತು ಗೂಢಚಾರಿ ಪ್ರೋಗ್ರ್ಯಾಮ್‌ಗಳನ್ನು ನೆಡುತ್ತಾರೆ. ಹಾಗಾಗಿ ಸಂಶಯಾಸ್ಪದ ‘ಲಿಂಕ್‌’ಗಳಿರುವ ಇ-ಮೇಲ್‌ಗಳ ಬಗ್ಗೆ ಹುಷಾರಾಗಿರಿ. ನಂಬಲಸಾಧ್ಯವಾದಷ್ಟು ದೊಡ್ಡ ಲಾಭಗಳ ಆಮಿಷವೊಡ್ಡುವ ಇ-ಮೇಲ್‌ಗಳಿಗೆ ಉತ್ತರಕೊಡುವ ಗೋಜಿಗೆ ಹೋಗಲೇಬೇಡಿ.

“ನಿಮ್ಮ ಕಂಪ್ಯೂಟರಿಗೆ ಹಾನಿಯಾಗಲಿದೆ! ತಡೆಯಲು ಇಲ್ಲಿ ಕ್ಲಿಕ್ಕಿಸಿ!” ಅಥವಾ “ಉಚಿತ ಸ್ಕ್ರೀನ್‌ಸೇವರ್‌ಗಾಗಿ ಇಲ್ಲಿ ಕ್ಲಿಕ್ಕಿಸಿ” ಎಂಬಂಥ ಸಂದೇಶಗಳು ನಿಮಗೆ ಬರಬಹುದು. ಕ್ಲಿಕ್ಕಿಸಿದರೆ, ಗೂಢಚಾರಿ ತಂತ್ರಾಂಶಕ್ಕೆ ನೀವು ಚಾಲನೆನೀಡುವ ಸಾಧ್ಯತೆ ಇದೆ.

ನೀವು ಅಂತರ್ಜಾಲ ಬಳಸಿ ಕೆಲಸಕ್ಕಾಗಿ ಹುಡುಕುತ್ತಿರುವಲ್ಲಿಯೂ ಜಾಗ್ರತೆ ವಹಿಸಿ! ಮೋಸಗಾರರು ನಕಲಿ ಆನ್‌ಲೈನ್‌ ತಾಣಗಳನ್ನು ಬಳಸಿ, ‘ನೋಂದಣಿ ಶುಲ್ಕ’ ಮತ್ತು ವೈಯಕ್ತಿಕವಾದ ಹಣಕಾಸಿನ ಮಾಹಿತಿಯನ್ನೂ ಸಂಗ್ರಹಿಸುತ್ತಾರೆ.

ಈಗ ಕಳ್ಳರು ಲೋಕದ ಯಾವುದೋ ಮೂಲೆಯಲ್ಲಿ ಅವಿತುಕೊಂಡು ಕಂಪನಿಗಳ, ಹಣಕಾಸಿನ ಸಂಸ್ಥೆಗಳ ದತ್ತಾಂಶವನ್ನು ಕದಿಯುವುದರಲ್ಲಿ ಕೈಚಳಕ ತೋರಿಸುತ್ತಿದ್ದಾರೆ. 2007ರ ಜನವರಿಯಲ್ಲಿ ದುಷ್ಕರ್ಮಿಗಳು ಅಮೆರಿಕದ ಹಲವಾರು ಕಡೆಗಳಲ್ಲಿ ಮಳಿಗೆಗಳಿರುವ ದೊಡ್ಡ ಕಂಪನಿಯೊಂದರ ಕಂಪ್ಯೂಟರ್‌ ವ್ಯವಸ್ಥೆಯೊಳಗೆ ನುಸುಳಿ, ಲಕ್ಷಗಟ್ಟಲೆ ಗ್ರಾಹಕರ ದಾಖಲೆ, ಕ್ರೆಡಿಟ್‌ ಕಾರ್ಡ್‌ ಮಾಹಿತಿಯನ್ನು ಅಪಹರಿಸಿದರು. ನೈಜೀರಿಯದಲ್ಲಿ ದುಷ್ಕರ್ಮಿಗಳು ಹಲವಾರು ಬ್ಯಾಂಕುಗಳ ದತ್ತಾಂಶವನ್ನು ಕದ್ದು, 15 ಲಕ್ಷ ಮಂದಿಯ ಎಟಿಎಮ್‌ ಕಾರ್ಡ್‌ಗಳಲ್ಲಿರುವ ಸಂಖ್ಯೆಗಳನ್ನು ಸಂಗ್ರಹಿಸಿ, ಅವುಗಳನ್ನು ಬಳಸಿ ಹಣ ತೆಗೆಯುವ ಹುನ್ನಾರದಲಿದ್ದರು. ಈಗಂತೂ ಆನ್‌ಲೈನ್‌ ಕಾಳಸಂತೆಯೂ ಇದೆ! ಇದರಲ್ಲಿ, ದಗಾಕೋರ ಉದ್ಯೋಗಿಗಳು ಮತ್ತು ಹ್ಯಾಕರ್‌ಗಳು ತಾವು ಕದ್ದಿರುವ ಕ್ರೆಡಿಟ್‌ ಕಾರ್ಡ್‌ ಮಾಹಿತಿ ಮತ್ತು ಜನರ ಐ.ಡಿ.ಗೆ ಸಂಬಂಧಪಟ್ಟ ಪೂರ್ಣ ಮಾಹಿತಿಯನ್ನೇ ಮಾರುತ್ತಾರೆ. (g12-E 01)

[ಪಾದಟಿಪ್ಪಣಿ]

^ ಅಂತರ್ಜಾಲ ಡೇಟಿಂಗ್‌ ಬಗ್ಗೆ ಎಚ್ಚರ! ಪತ್ರಿಕೆ (ಇಂಗ್ಲಿಷ್‌) ಎಚ್ಚರಿಸಿದೆ. ಏಪ್ರಿಲ್‌ 22, 2005 ಪುಟ 16-18 ಮತ್ತು ಮೇ 22, 2005 ಪುಟ 12-14ನ್ನು ನೋಡಿ.

[ಪುಟ 11ರಲ್ಲಿರುವ ಚೌಕ]

ಫಿಶಿಂಗ್‌ ಇ-ಮೇಲ್‌: ಅಂತರ್ಜಾಲ ಬಳಕೆದಾರನು ತನ್ನ ಪಾಸ್‌ವರ್ಡ್‌, ಕ್ರೆಡಿಟ್‌ ಕಾರ್ಡ್‌ ನಂಬರ್‌, ಬ್ಯಾಂಕ್‌ ಖಾತೆಯ ಮಾಹಿತಿಯನ್ನು ಅಸಲಿಯೆಂದು ತೋರುವ ನಕಲಿ ವೆಬ್‌ ತಾಣಕ್ಕೆ ಕಳುಹಿಸುವಂತೆ ಪುಸಲಾಯಿಸುವ ಇ-ಮೇಲ್‌

ಗೂಢಚಾರಿ ತಂತ್ರಾಂಶ: ನೀವು ಕಂಪ್ಯೂಟರ್‌ನಲ್ಲಿ ಏನೇನು ಮಾಡುತ್ತೀರೊ ಆ ಎಲ್ಲ ಮಾಹಿತಿಯನ್ನು ಸಂಗ್ರಹಿಸುವ ಪ್ರೋಗ್ರ್ಯಾಮ್‌

ಟ್ರೋಜನ್‌ ಹಾರ್ಸ್‌: ಮೇಲ್ನೋಟಕ್ಕೆ ನಿರಪಾಯಕಾರಿ ಕೆಲಸ ಮಾಡುತ್ತಿರುವಂತೆ ತೋರಿದರೂ ವಾಸ್ತವದಲ್ಲಿ ಕಂಪ್ಯೂಟರ್‌ನಲ್ಲಿರುವ ಸುರಕ್ಷಾ ವ್ಯವಸ್ಥೆಯನ್ನು ಭೇದಿಸಲಿಕ್ಕೆಂದೇ ವಿನ್ಯಾಸಿಸಲಾಗಿರುವ ಪ್ರೋಗ್ರ್ಯಾಮ್‌

[ಪುಟ 12, 13ರಲ್ಲಿರುವ ಚೌಕ/ಚಿತ್ರಗಳು]

ಬಲೆಗೆ ಬೀಳಬೇಡಿ!

ಮೋಸಹೋಗದಿರಲು ಈ ಕ್ರಮ ತೆಗೆದುಕೊಳ್ಳಿ:

1 ನಿಮ್ಮ ಕಂಪ್ಯೂಟರ್‌ ಫೈರ್‌ವಾಲ್‌ (ಸುರಕ್ಷತಾ ತಂತ್ರಾಂಶ) ಯಾವಾಗಲೂ ಚಾಲನೆಯಲ್ಲಿರಲಿ. ಆಪರೇಟಿಂಗ್‌ ಸಿಸ್ಟಮ್‌, ಆ್ಯಪ್ಲಿಕೇಷನ್ಸ್‌ ಮತ್ತು ವೈರಸ್‌ ವಿರೋಧಿ ತಂತ್ರಾಂಶದ ಹೊಸ ಆವೃತ್ತಿಗಳನ್ನು ಆಗಾಗ್ಗೆ ಅಳವಡಿಸಿಕೊಳ್ಳಿ.

2 ನಿಮ್ಮ ಫೈಲ್‌ಗಳನ್ನು ನಿಯಮಿತವಾಗಿ ಬ್ಯಾಕಪ್‌ ಮಾಡಿ. ಪ್ರತಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಿ.

3 ವಿವೇಚನೆ ಬಳಸಿ. ಅಂತರ್ಜಾಲದಲ್ಲಿ ಬರುವ ಎಲ್ಲ ಮಾಹಿತಿಯನ್ನು ಕೂಡಲೇ ನಂಬಬೇಡಿ. ಜ್ಞಾನೋಕ್ತಿ 14:15 ಹೀಗನ್ನುತ್ತದೆ: “ಮೂಢನು ಯಾವ ಮಾತನ್ನಾದರೂ ನಂಬುವನು; ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.”

4 ದುರಾಸೆ ಬೇಡ. (ಲೂಕ 12:15) “ಉಚಿತ” ಕೊಡುಗೆಗಳ ಬಗ್ಗೆ ಇಲ್ಲವೇ ತೀರ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರುತ್ತಿರುವ ಜಾಲತಾಣಗಳ ಬಗ್ಗೆ ಎಚ್ಚರವಿರಲಿ! ಅದು ‘ಫಿಶಿಂಗ್‌ ಗಾಳ’ ಆಗಿರಬಹುದು.

5 ಅಪರಿಚಿತ ಇ-ಮೇಲ್‌, ಮಿಂಚಂಚೆಗಳ ಬಗ್ಗೆ ಹುಷಾರು! ಅವುಗಳಲ್ಲಿ ಲಿಂಕ್‌ಗಳಿದ್ದರೆ ಇಲ್ಲವೆ ಅವು ವೈಯಕ್ತಿಕ ಮಾಹಿತಿಗಾಗಿ ಕೇಳಿಕೊಂಡರೆ (ಉದಾ: ಪಾಸ್‌ವರ್ಡನ್ನು ದೃಢೀಕರಿಸಿ) ವಿಶೇಷ ಎಚ್ಚರ ವಹಿಸಿ.—ಜ್ಞಾನೋಕ್ತಿ 11:15.

6 ಬೇರೆಯವರು ಊಹಿಸಲಾಗದಂಥ ಪಾಸ್‌ವರ್ಡ್‌ಗಳನ್ನು ಬಳಸಿ. ನಿಮ್ಮ ಅಂತರ್ಜಾಲ ಪಾಸ್‌ವರ್ಡ್‌ಗಳನ್ನು ಆಗಾಗ ಬದಲಾಯಿಸುತ್ತಾ ಇರಿ. ಎಲ್ಲ ಖಾತೆಗಳಿಗೆ ಒಂದೇ ಪಾಸ್‌ವರ್ಡ್‌ ಬಳಸಬೇಡಿ.

7 ನಿಮ್ಮ ಕ್ರೆಡಿಟ್‌ ಕಾರ್ಡ್‌ ವಿವರಗಳನ್ನು, ಬ್ಯಾಂಕ್‌ ಮಾಹಿತಿಯನ್ನು ಹೆಸರಾಂತ ಮತ್ತು ವಿಶ್ವಾಸಾರ್ಹ ಜಾಲತಾಣಗಳಿಗೆ ಮಾತ್ರ ಕೊಡಿ.

8 ಜಾಲತಾಣ ವಿಳಾಸಗಳನ್ನು ಸರಿಯಾಗಿ ಟೈಪ್‌ ಮಾಡಿ. ವಿಶೇಷವಾಗಿ ಹಣಕಾಸಿನ ಸಂಸ್ಥೆಯದ್ದಾಗಿದ್ದರೆ ಹೆಚ್ಚು ಜಾಗ್ರತೆ ವಹಿಸಿ. ಕಾಗುಣಿತದಲ್ಲಿ ಒಂದೇ ಒಂದು ಸಣ್ಣ ತಪ್ಪಾದರೂ ಅದು ನಿಮ್ಮನ್ನು ಯಾವುದೊ ದುರುದ್ದೇಶಪೂರಿತ ಜಾಲತಾಣಕ್ಕೆ ಕೊಂಡೊಯ್ಯಬಹುದು.

9 ಗೋಪ್ಯ ಮಾಹಿತಿಯನ್ನು ರಹಸ್ಯಪದಗಳನ್ನು ಬಳಸುವ ಕನೆಕ್ಷನ್‌ಗಳ ಮೂಲಕ ಮಾತ್ರ ಕಳುಹಿಸಿ. ವಿಶೇಷವಾಗಿ ಕ್ರೆಡಿಟ್‌ ಕಾರ್ಡ್‌ ವಿವರಗಳನ್ನು ಕೊಡಬೇಕಾಗಿರುವಾಗ. ನಿಮ್ಮ ಕೆಲಸ ಮುಗಿದ ಕೂಡಲೇ ಆ ಜಾಲತಾಣವನ್ನು ಮುಚ್ಚಿಬಿಡಿ.

10 ಕ್ರೆಡಿಟ್‌ ಕಾರ್ಡ್‌ ಬಳಸಿ ಮಾಡಿದ ಖರ್ಚುಗಳನ್ನೂ ನಿಮ್ಮ ಬ್ಯಾಂಕ್‌ ಸ್ಟೇಟ್‌ಮೆಂಟ್‌ಗಳನ್ನೂ ಆಗಾಗ ಜಾಗ್ರತೆಯಿಂದ ಪರಿಶೀಲಿಸಿ. ನಿಮಗೆ ಗೊತ್ತಿಲ್ಲದ ಯಾವುದೊ ಹಣ ವ್ಯವಹಾರ ನಡೆದಿರುವಂತೆ ತೋರುವಲ್ಲಿ ಕಂಪನಿಯನ್ನು ತಕ್ಷಣ ಸಂಪರ್ಕಿಸಿ.

11 ಸುರಕ್ಷೆಯಿಲ್ಲದ ತಂತಿರಹಿತ (Wi-Fi) ಕನೆಕ್ಷನ್‌ಗಳನ್ನು ಬಳಸುವಾಗ ಜಾಗ್ರತೆ. ಕಳ್ಳರು ಮಾಹಿತಿಯನ್ನು ಕದ್ದು, ದುರುದ್ದೇಶಭರಿತ ಜಾಲತಾಣಗಳ ಬಲೆಗೆ ಬೀಳಿಸಬಲ್ಲರು.

12 “ಈ ಪಾಸ್‌ವರ್ಡ್‌ ನೆನಪಿಡಬೇಕೇ?” ಎಂಬ ಪ್ರಶ್ನೆಗೆ ಇಲ್ಲ ಎಂದು ಕ್ಲಿಕ್ಕಿಸಿ. ಏಕೆಂದರೆ ನೀವು ದಾಖಲಿಸಿಟ್ಟಿರುವ ಪಾಸ್‌ವರ್ಡ್‌ಗಳನ್ನು ಟ್ರೋಜನ್‌ ಪ್ರೋಗ್ರ್ಯಾಮ್‌ಗಳು ಅಪಹರಿಸಬಲ್ಲವು.