ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಲಹೆ 3 ಕ್ರಿಯಾಶೀಲರಾಗಿರಿ

ಸಲಹೆ 3 ಕ್ರಿಯಾಶೀಲರಾಗಿರಿ

ಸಲಹೆ 3 ಕ್ರಿಯಾಶೀಲರಾಗಿರಿ

“ವ್ಯಾಯಾಮ ಒಂದು ಮಾತ್ರೆ ಆಗಿರುತ್ತಿದ್ದರೆ ಲೋಕದಲ್ಲೆಲ್ಲ ಡಾಕ್ಟರರು ಅತಿ ಹೆಚ್ಚಾಗಿ ಶಿಫಾರಸ್ಸು ಮಾಡುತ್ತಿದ್ದ ಔಷಧ ಅದೇ ಆಗಿರುತ್ತಿತ್ತು.”—ಎಮೋರಿ ಯೂನಿರ್ವಸಿಟಿ ಸ್ಕೂಲ್‌ ಆಫ್‌ ಮೆಡಿಸಿನ್‌. ಆರೋಗ್ಯಕ್ಕೋಸ್ಕರ ನಾವು ಮಾಡುವ ವಿಷಯಗಳಲ್ಲಿ ವ್ಯಾಯಾಮಕ್ಕಿಂತ ಹೆಚ್ಚು ಪ್ರಯೋಜನ ತರುವಂಥವುಗಳು ಕೇವಲ ಕೆಲವೇ.

ಪರಿಶ್ರಮಪಡಿ. ಕ್ರಿಯಾಶೀಲವಾಗಿರುವುದರಿಂದ ಆನಂದ, ಯೋಚನಾ ಸಾಮರ್ಥ್ಯ, ಶಕ್ತಿ ಹೆಚ್ಚುವುದು ಹಾಗೂ ಹೆಚ್ಚು ಫಲಕಾರಿಯಾಗಿರಲು ಸಾಧ್ಯ. ಅದರೊಂದಿಗೆ ಒಳ್ಳೇ ಪಥ್ಯವಿದ್ದಲ್ಲಿ ದೇಹತೂಕ ನಿಯಂತ್ರಿಸಬಲ್ಲೆವು. ವ್ಯಾಯಾಮ ಪರಿಣಾಮಕಾರಿಯಾಗಿರಲು ಅದು ನೋವುಭರಿತ ಅಥವಾ ಅತಿರೇಕದ್ದು ಆಗಿರಬೇಕಾಗಿಲ್ಲ. ವಾರದಲ್ಲಿ ಅನೇಕ ಬಾರಿ ನಿಯತವಾದ ಮಿತ ವ್ಯಾಯಾಮ ಬಹಳ ಪ್ರಯೋಜನಕರ.

ಜಾಗಿಂಗ್‌, ಬಿರುನಡಿಗೆ, ಸೈಕ್ಲಿಂಗ್‌, ಆಟೋಟಗಳು ಹೃದಯ ಬಡಿತವನ್ನು ಹೆಚ್ಚಿಸಿ ಬೆವರು ಬರಿಸುತ್ತವೆ. ಆಯಾಸವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಇವು ಹೆಚ್ಚಿಸುತ್ತವೆ ಮಾತ್ರವಲ್ಲ ಹೃದಯಾಘಾತ ಮತ್ತು ಲಕ್ವವನ್ನು ತಡೆಗಟ್ಟಬಲ್ಲವು. ಮೇಲೆ ತಿಳಿಸಿದಂಥ ಏರೋಬಿಕ್‌ ವ್ಯಾಯಾಮಗಳೊಂದಿಗೆ ಮಾಡುವ, ಮಿತವಾದ ಭಾರ ಎತ್ತುವ ವ್ಯಾಯಾಮ ಮತ್ತು ಸರಳ ವ್ಯಾಯಾಮ ಎಲುಬುಗಳನ್ನು, ದೇಹದೊಳಗಿನ ಸ್ನಾಯುಗಳನ್ನು, ಕೈಕಾಲುಗಳನ್ನು ಬಲಪಡಿಸಲು ಸಹಾಯಕಾರಿ. ಅಲ್ಲದೆ ಈ ವ್ಯಾಯಾಮಗಳು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲೂ ಸಹಾಯಕಾರಿ. ಇದರಿಂದ ನಿಮ್ಮ ದೇಹತೂಕ ತಾನಾಗಿಯೇ ನಿಯಂತ್ರಣದಲ್ಲಿರುತ್ತದೆ.

ನಡೆಯಿರಿ. ವ್ಯಾಯಾಮ ಎಲ್ಲ ವಯಸ್ಸಿನ ಜನರಿಗೆ ಸಹಾಯಕಾರಿ. ಅದಕ್ಕಾಗಿ ವ್ಯಾಯಾಮ ಶಾಲೆಯನ್ನು ಸೇರಬೇಕಾಗಿಲ್ಲ. ಬೈಕ್‌, ಕಾರ್‌, ಬಸ್‌ ಇಲ್ಲವೆ ಲಿಫ್ಟ್‌ ಅನ್ನು ಬಳಸುವ ಬದಲು ಕಾಲ್ನಡಿಗೆಯ ಮೂಲಕ ಆರಂಭಿಸಿರಿ. ಹೋಗಬೇಕಾದಲ್ಲಿಗೆ ನಡೆದುಕೊಂಡು ಹೋಗಲು ಸಾಧ್ಯವಿರುವಾಗ ವಾಹನಕ್ಕಾಗಿ ಯಾಕೆ ಕಾಯಬೇಕು? ನಡೆದುಕೊಂಡು ಹೋದರೆ ನೀವು ಅಲ್ಲಿಗೆ ಬೇಗನೆ ತಲಪಲೂಬಹುದು. ಹೆತ್ತವರೇ, ನಿಮ್ಮ ಮಕ್ಕಳನ್ನು ಸಾಧ್ಯವಾದಾಗೆಲ್ಲ ಮನೆಯ ಹೊರಗೆ ಆಟೋಟಗಳಲ್ಲಿ ಭಾಗವಹಿಸುವಂತೆ ಉತ್ತೇಜಿಸಿ. ಇಂಥ ಚಟುವಟಿಕೆಗಳು ಅವರನ್ನು ಗಟ್ಟಿಮುಟ್ಟಾಗಿಸುತ್ತವೆ, ಅಲ್ಲದೆ ದೇಹದ ಅಂಗಗಳು ಒಂದಕ್ಕೊಂದು ಸಹಕರಿಸುತ್ತಾ ಸಮರ್ಪಕವಾಗಿ ಕೆಲಸಮಾಡಲು ನೆರವಾಗುತ್ತವೆ. ಆದರೆ ವಿಡಿಯೋ ಗೇಮ್ಸ್‌ನಂಥ ವ್ಯಾಯಾಮವಿಲ್ಲದ ಆಟಗಳಿಂದ ಇದು ಸಾಧ್ಯವಿಲ್ಲ.

ವ್ಯಾಯಾಮ ಆರಂಭಿಸುವಾಗ ನಿಮಗೆಷ್ಟೇ ವಯಸ್ಸಾಗಿರಲಿ ಮಿತ ವ್ಯಾಯಾಮ ಪ್ರಯೋಜನ ತರಬಲ್ಲದು. ನೀವು ಇಳಿವಯಸ್ಸಿನವರಾಗಿದ್ದರೆ ಅಥವಾ ಆರೋಗ್ಯ ಸಮಸ್ಯೆಗಳಿದ್ದು, ವ್ಯಾಯಾಮ ಮಾಡುತ್ತಿಲ್ಲವಾದರೆ ಒಬ್ಬ ಡಾಕ್ಟರನ್ನು ಭೇಟಿಯಾಗಿ ಯಾವ ವ್ಯಾಯಾಮ ಮಾಡಬಹುದೆಂದು ಸಲಹೆ ಕೇಳಿ. ಅದನ್ನು ಬೇಗನೆ ಆರಂಭಿಸಿ! ಸ್ವಲ್ಪ ಸ್ವಲ್ಪವಾಗಿ ಆರಂಭಿಸಿ ಮಿತವಾಗಿ ಮಾಡುವ ವ್ಯಾಯಾಮ ಹೆಚ್ಚು ವಯಸ್ಸಾದವರಿಗೂ ತಮ್ಮ ಸ್ನಾಯು ಮತ್ತು ಎಲುಬಿನ ಬಲವನ್ನು ಹೆಚ್ಚಿಸಲು ಸಹಾಯಮಾಡಬಲ್ಲದು. ವೃದ್ಧರು ಇದ್ದಕ್ಕಿದ್ದ ಹಾಗೆ ಬೀಳುವುದನ್ನು ತಡೆಯಲೂ ಇದು ನೆರವಾಗುತ್ತದೆ.

ಪ್ರಥಮ ಲೇಖನದಲ್ಲಿ ತಿಳಿಸಲಾದ ರುಸ್ತಂಗೆ ನೆರವಾದದ್ದು ವ್ಯಾಯಾಮ. 7 ವರ್ಷಗಳ ಹಿಂದೆ ಆತ ತನ್ನ ಪತ್ನಿಯೊಂದಿಗೆ ವಾರದ 5 ದಿನ ಬೆಳಗ್ಗೆ ಸ್ವಲ್ಪ ಸ್ವಲ್ಪವೇ ಜಾಗಿಂಗ್‌ ಮಾಡಲು ಆರಂಭಿಸಿದ. “ಮೊದಮೊದಲು ನಾವು ಜಾಗಿಂಗ್‌ಗೆ ಹೋಗದಿರಲು ಯಾವುದಾದರೂ ನೆಪಕೊಡುತ್ತಿದ್ದೆವು. ಆದರೆ ನಾವಿಬ್ಬರು ಇದ್ದದ್ದು ನಮಗೆ ಬಿಡದೆ ಜಾಗಿಂಗ್‌ ಮಾಡಲು ಸ್ಫೂರ್ತಿ ಕೊಟ್ಟಿದೆ. ಈಗ ಅದು ಒಳ್ಳೆಯ, ಆನಂದಕರ ಹವ್ಯಾಸವಾಗಿದೆ” ಎನ್ನುತ್ತಾನೆ ರುಸ್ತಂ. (g11-E 03)

[ಪುಟ 6ರಲ್ಲಿರುವ ಚಿತ್ರ]

ವ್ಯಾಯಾಮ ಆಗಬಲ್ಲದು ಆನಂದಕರ